ಜೀವನ ಮೈತ್ರಿ ಭಾಗ ೯೩
ಮೈತ್ರಿಗೆ ನಿದ್ದೆ ಸುಳಿಯುತ್ತಲೇ ಕಿಶನ್ ಫ್ಲಾಟಿನ ಕಡೆಗೆ ಆಗಮಿಸಿದ.ರಸ್ತೆಯಲ್ಲಿ ಬರುತ್ತಿದ್ದಾಗಲೇ ಮನೆಯತ್ತ ಕಣ್ಣುಹಾಯಿಸಿದವನಿಗೆ ಮನೆಯೊಳಗೆ ಮಂದಬೆಳಕು ಕಾಣಿಸಿದಾಗ 'ನನ್ನ ಮುದ್ಗೊಂಬೆ ಮಲಗಿರಬೇಕು ..ಛೇ.. ಎಷ್ಟು ಲೇಟಾಗಿಹೋಯ್ತು..'ಎಂದುಕೊಂಡ.ಲಿಫ್ಟ್ ಬರಲು ಇನ್ನೂ ಐದು ನಿಮಿಷ ಕಾಯಬೇಕು ಎಂದು ಸೀದಾ ಮೆಟ್ಟಿಲೇರುತ್ತಾ ಹೊರಟ.ಮನೆಯ ಬಾಗಿಲಿನ ಮುಂದೆ ನಿಂತಾಗ ಲಿಫ್ಟ್ ನಿಂದ ಪಕ್ಕದ ಮನೆಯವರು ಬಂದದ್ದನ್ನು ಕಂಡು ನಂಗೂ ಕಾಯಬಹುದಿತ್ತು ಎಂದುಕೊಂಡ.ಕಾಲಿಂಗ್ ಬೆಲ್ ಮಾಡಿದಾಗ.. ಮೈತ್ರಿ ಎಚ್ಚರಗೊಂಡು ನಿದ್ದೆಯ ಜೊಂಪಿನಲ್ಲಿ ಬಾಗಿಲು ತೆರೆದಳು.ಕಿಶನ್ ಬಾಗಿಲನ್ನು ಹಾಕಿದ. ಅಷ್ಟೇ..ಮಾತಿಲ್ಲ..ಮೌನ...ಕಣ್ಣಲ್ಲೇ ಸಂಭಾಷಣೆ...ಆಲಿಂಗನದಲ್ಲೇ ಉಪಚಾರ..ನಿದ್ದೆಯ ಜೊಂಪಿನಲ್ಲಿದ್ದವಳಿಗೆ ಪ್ರೀತಿಯಿಂದ ಕಚಗುಳಿಯಿಟ್ಟ.ಅವನ ಪ್ರೇಮದ ಹಸಿವನ್ನು ಮೊದಲು ತಣಿಸಲು ಸಂಪೂರ್ಣವಾಗಿ ತಲೆಬಾಗಿದಳು ಮೈತ್ರಿ...ಬರದ ಹೊಲಕೆ ವರ್ಷಧಾರೆಯು ತಂಪುಣಿಸಿದಂತೆ ಪರಸ್ಪರ ಅನುರಾಗದ ಸಿಂಚನ ಇಬ್ಬರನ್ನು ತಣ್ಣಗಾಗಿಸಿತು.ಅರ್ಥಪೂರ್ಣ ಸಾಂಗತ್ಯದಲ್ಲಿ ಒಲವಿನ ಗೀತೆ ಹಾಡಿದರು ಕಿಶನ್ ಮೈತ್ರಿ.
*******
ಹೀಗೆ ದಿನಗಳುರುಳಿದವು.ಅವರ ಸರಸಮಯ ದಾಂಪತ್ಯಕ್ಕೆ ತಿಂಗಳು ತುಂಬಿತು..ಮೈತ್ರಿ ನೆರೆಹೊರೆಯ ಹೆಣ್ಣು ಮಕ್ಕಳ ಸ್ನೇಹ ಸಂಪಾದಿಸಿದಳು.ಹಗಲು ಒಬ್ಬಳೇ ಕುಳಿತು ಉದಾಸೀನ ಆದಾಗ ಸಮಯ ಕಳೆಯಲು ಹರಟೆಗೆ ಜತೆಯಾಗುತ್ತಿದ್ದರು.ಒಂದು ದಿನ ಶೈನಿ ಎನ್ನುವ ಮಹಿಳೆ "ನೀವು ಇಂಜಿನಿಯರಿಂಗ್ ಓದಿ ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳುವುದಾ.. ಜಾಬ್ ಮಾಡಿ..ನಿಮ್ಮದೇ ಅಂತ ಸ್ವಲ್ಪ ದುಡ್ಡು ಕೈಲಿದ್ದರೆ ಮುಂದೆ ನಿಮಗೇ ಒಳ್ಳೆಯದು."ಎಂದು ತಲೆಯೊಳಗೆ ಸಣ್ಣ ಹುಳ ಬಿಟ್ಟಳು.ಮೈತ್ರಿಗೂ ಸರಿಯೆನಿಸಿತು.ಮುಂದುವರಿಸುತ್ತಾ "ನನ್ನ ಆಫೀಸಲ್ಲೇ ಕೆಲಸ ಇದೆ..ಮನೆಗೆ ಹತ್ತಿರವೂ ಆಗುತ್ತೆ.. "ಎಂದಾಗ ಮೈತ್ರಿ ಖುಷಿಯಿಂದ "ನೋಡೋಣ "ಎಂದಳು.. ಮನಸು ಕೈತುಂಬಾ ದುಡ್ಡೆಣಿಸುವ ಕನಸು ಕಂಡಿತ್ತು.
ಸಂಜೆ ಕಿಶನ್ ಆಫೀಸಿನಿಂದ ಹಿಂತಿರುಗಿದಾಗ ಅವನ ಮೂಡ್ ಚೆನ್ನಾಗಿದ್ದಾಗ ಹೇಳಿ ಒಪ್ಪಿಸಬೇಕು ಎಂದು ನಿರ್ಧರಿಸಿದಳು.. ಅದರಂತೆ ಕಿಶನ್ ಮುಂದೆ ಬೇಡಿಕೆ ಸಲ್ಲಿಸಿದಳು. ಇದುವರೆಗೆ ಕೇಳದ ಹೊಸ ಬೇಡಿಕೆ ಕಂಡು ಅವನಿಗೂ ಸ್ವಲ್ಪ ಅಚ್ಚರಿಯಾಯಿತು. ಮಡದಿಯ ಬಳಿ ಸಮಾಧಾನಚಿತ್ತದಿಂದ "ನಾನು ದುಡಿದು ತಂದರೆ ಸಾಲದೇ..ನೀನು ಮನೆಯಲ್ಲಿದ್ದುಕೊಂಡು ಶುಚಿರುಚಿಯಾದ ಅಡುಗೆ ಮಾಡುತ್ತಾ,ಮನೆ ನಿಭಾಯಿಸುತ್ತಾ ಇದ್ದರೆ ನನಗೂ ಅನುಕೂಲ..ನಮ್ಮ ಮನಸ್ಸಿಗೂ ನೆಮ್ಮದಿ.ನನ್ನ ದುಡಿಮೆ ನಮ್ಮ ಕುಟುಂಬಕ್ಕೆ ಸಾಕು.." ಎಂದ.
"ಹಾಗಲ್ಲ ಈಗ ದುಡಿಯದಿದ್ದರೆ ಮತ್ತೆ ಯಾವಾಗ ಹೆಣ್ಣಿಗೆ ದುಡಿದು ಸಂಪಾದಿಸುವ ಅವಕಾಶ ಸಿಗುವುದು..? ಮುಂದೆ ಅವಕಾಶಗಳು ಬಹಳ ಕಡಿಮೆ. ಮಕ್ಕಳಾದ ಮೇಲೆ ಮಗುವಿನ ಲಾಲನೆ ಪಾಲನೆಗೆ ಅವಳ ಬದುಕು ಮೀಸಲಾಗುತ್ತದೆ. ಈಗಲಾದರೂ ದುಡಿಯಬೇಕೆಂಬ, ನನ್ನ ಕಾಲ ಮೇಲೆ ನಿಲ್ಲಬೇಕೆಂಬ ಆಸೆಯನ್ನು ಈಡೇರಿಸಿ ಕೊಳ್ಳುತ್ತೇನೆ."
"ನಾನು ಬೇಡವೆನ್ನುತ್ತಿಲ್ಲ .ಆದರೆ ಉದ್ಯೋಗ ಮನೆ ಎರಡನ್ನು ನಿಭಾಯಿಸುವುದು ಸ್ವಲ್ಪ ಸವಾಲಿನ ಕೆಲಸ."
"ಸವಾಲು ತೆಗೆದುಕೊಂಡು ಮುನ್ನುಗ್ಗಬೇಕೆಂದು ಇದ್ದೇನೆ."
"ಸರಿ ನಿನ್ನ ಆಸೆಯಂತೆ ಆಗಲಿ ..ನಾನು ನಿನ್ನ ಆಸೆಗೆ ತಣ್ಣೀರು ಎರಚುವುದಿಲ್ಲ.."
ಗಂಡನ ಒಪ್ಪಿಗೆ ದೊರೆತಾಗ ಮೈತ್ರಿಯ ಮುಖದಲ್ಲಿ ಆನಂದದ ಎಳೆಯೊಂದನ್ನು ಗಮನಿಸಿದ ಕಿಶನ್.ಮನೆಯಲ್ಲಿ ಏನು ಹೇಳುತ್ತಾರೋ ,ಶಾಸ್ತ್ರಿ ಕುಟುಂಬದಲ್ಲಿ ಇದುವರೆಗೆ ಯಾರೂ ಮಕ್ಕಳು ಉದ್ಯೋಗಕ್ಕೆ ಹೋದದ್ದಿಲ್ಲ .ಇವಳನ್ನು ಕಳುಹಿಸಿದರೆ ನನಗೆ ಮಾವ ಅತ್ತೆ ಏನಾದರೂ ಅಂದರೆ..?ಹೀಗೇ ಒಂದಲ್ಲ.. ಹಲವಾರು ಯೋಚನೆಗಳು ತಲೆಯಲ್ಲಿ ಸುಳಿದವು. ಆದರೂ ಮಡದಿಗೆ ಬೇಸರವಾಗಬಾರದೆಂದು ಆಕೆಯಲ್ಲಿ ಬಯೋಡೇಟಾ ತಯಾರಿಸಿಡು ಎಂದ.
ಮರುದಿನ ಆಫೀಸಿನಲ್ಲಿ ತನ್ನ ಬಾಸ್ ಗೆ ಅಹವಾಲು ಸಲ್ಲಿಸಿದ. ನನ್ನ ಮಡದಿ ಎಂಜಿನಿಯರಿಂಗ್ ಪದವೀಧರೆ. ಎಲ್ಲಾದರೂ ಅವಕಾಶ ಇದ್ದರೆ ತಿಳಿಸಿ. ಬಾಸ್ ಗೆ ಕಿಶನ್ ಮೇಲೆ ಸದ್ಭಾವನೆಯಿದೆ. ಒಳ್ಳೆಯ ವ್ಯಕ್ತಿ.. ಕೆಲಸವನ್ನು ಸಮಯಕ್ಕೆ ಸರಿಯಾಗಿ ಚಾಚೂ ತಪ್ಪದೇ ಮುಗಿಸಿಕೊಡುವವ ಕಿಶನ್ ಎಂದು. ಹಾಗಾಗಿ ಆತ ಕೇಳಿದಾಗ "ನೋಡೋಣ .."ಎಂದು ಉತ್ತರಿಸಿದರು. ಕೆಲವೇ ತಿಂಗಳಲ್ಲಿ ಆತನ ಟೀಮಿನಿಂದ ಈಗಷ್ಟೇ ಸೇರಿದ ಯುವತಿ ಮದುವೆಯಾಗಿ ತೆರಳುವ ಕಾರಣ ಆಕೆಯ ಸ್ಥಾನ ಖಾಲಿಯಾಗುತ್ತದೆ. ಅಲ್ಲಿಗೆ ನೇಮಿಸಿದರೆ ಹೇಗೆ ಎಂಬ ಯೋಚನೆ. ಯೋಚನೆ ಬಂದಾಗಲೇ ಬೆಲ್ ಮಾಡಿ ಕಿಶನ್ ನನ್ನು ಚೇಂಬರಿಗೆ ಕರೆಸಿಕೊಂಡರು."ಇನ್ನು ಎರಡು ಮೂರು ತಿಂಗಳಿನಲ್ಲಿ ಒಂದು ಪೋಸ್ಟ್ ಖಾಲಿಯಾಗಲಿರುವುದು .ಅದಕ್ಕೆ ನಿಮ್ಮ ಮಡದಿಯನ್ನು ಸೇರಿಸಿಕೊಳ್ಳಬಹುದು. ಆದರೆ ಅದಕ್ಕೂ ಮುನ್ನ ಟ್ರೈನಿಂಗ್ ಪಡೆದುಕೊಳ್ಳಬೇಕು.ನಾಳೆಯಿಂದಲೇ ಟ್ರೈನಿಂಗ್ ಗೆ ಹಾಜರಾಗಬೇಕು.. "
"ಸರಿ ಸರ್.."ಎಂದ ಕಿಶನ್..
"ಹ್ಞಾಂ..ವಿಷಯ ಗೌಪ್ಯವಾಗಿರಲಿ..ಈಗ ಒಂದು ಹೊಸ ಬ್ಯಾಚ್ ಆರಂಭವಾಗುತ್ತಿದೆ.ಬಹುತೇಕ ಕ್ಯಾಂಪಸ್ ಸೆಲೆಕ್ಷನ್ ಆದವರೇ ಇರುವುದು.ಅವರ ಜತೆ ನಿಮ್ಮ ಮಡದಿಯನ್ನು ಸೇರಿಸಿಕೊಳ್ಳೋಣ."
ಒಪ್ಪಿದ ಕಿಶನ್..ಮನೆಗೆ ಬಂದು ವಿಷಯ ತಿಳಿಸಿದಾಗ "ನಿಮ್ಮ ಕಂಪೆನಿಯಲ್ಲಾ "..ರಾಗ ಎಳೆದಳು ಮೈತ್ರಿ..
"ಹೌದು.. ಏನು ಈ ರೀತಿ ಕೇಳುತ್ತಿದ್ದೀಯಾ."
"ಅಲ್ಲ ದೊಡ್ಡ ಕಂಪೆನಿ.. ಕೈತುಂಬಾ ಕೆಲಸ.."
ಆವಳ ಮನಸಿನಲ್ಲಿ ಶೈನಿ ಹೇಳಿದ ಮನೆ ಹತ್ತಿರ ಕೆಲಸ ಎಂಬ ಮಾತೇ ಕೊರೆಯುತ್ತಿತ್ತು.
"ಕೆಲಸಕ್ಕೆ ಸೇರಬೇಕೆಂದವಳು ನೀನೇ.ಇವತ್ತು ನಿನಗೋಸ್ಕರ ಬಾಸ್ ನ ಕೇಳಿದೆ.ಅವಕಾಶ ದೊರೆತಾಗ ಹೀಗೆ ಅಂದರೆ ಹೇಗೆ..?"ಎಂದ ಗಂಭೀರವಾಗಿ..
"ಆಯ್ತು..ನಾಳೇನೇ ಬರಲು ರೆಡಿ "ಎಂದು ಬಾಯಿ ಮಾತಿನಲ್ಲಿ ಹೇಳಿದರೂ ಒಳಗೆ ಅಳುಕಿತ್ತು.ಬೆಳಗ್ಗೆ ಏಳೂವರೆಗೆ ಮನೆ ಬಿಟ್ಟರೆ ವಾಪಾಸಾಗುವಾಗ ಗಂಟೆ ಏಳಾಗುತ್ತದೆ.ಮತ್ತೆ ಮನೆ ನಿಭಾಯಿಸಬೇಕು.. ಉಫ್.. ಕಷ್ಟವಿದೆ.. ಆದರೂ ನೋಡೋಣ.. ಎಂದು ವಾರಕ್ಕೆ ಬೇಕಾದ ಡ್ರೆಸ್ ತೆಗೆದಿಟ್ಟು ಇಸ್ತ್ರಿ ಹಾಕಿದಳು.
ಬೆಳಗ್ಗೆ ನಾಲ್ಕಕ್ಕೆ ಅಲಾರಾಂ ಇಟ್ಟು ಮನೆಕೆಲಸ ಎಲ್ಲವನ್ನೂ ಮಾಡಿ ಏಳೂವರೆಗೆ ಹೊರಟಾಗ ಮೈಬೆವರಿತ್ತು..ಶರೀರ ಆಯಾಸವಾಗಿತ್ತು.ಆಕೆಯನ್ನು ಟ್ರೈನಿಂಗ್ ಸ್ಥಳಕ್ಕೆ ಬಿಟ್ಟು ತನ್ನ ಆಫೀಸ್ ಕಟ್ಟಡತ್ತ ಬೈಕ್ ಚಲಾಯಿಸಿದ ಕಿಶನ್.. ಎಲ್ಲರೂ ಅವರವರ ಕಾಲೇಜು ಸಹಪಾಠಿ ಗಳೊಂದಿಗೆ ಹರಟುತ್ತಿದ್ದರೆ ಮೈತ್ರಿ ಏಕಾಂಗಿ.ಆಕೆಯ ಕಾಲೇಜಿನವರು ಯಾರೂ ಇರಲಿಲ್ಲ.ಟ್ರೈನಿಂಗ್ ಸೆಷನ್ ಆರಂಭವಾಗುತ್ತಿದ್ದಂತೆ ಅವಳ ಆತಂಕ ತುಸು ಕಡಿಮೆಯಾಯಿತು.ಮನಸು ಅವರು ಹೇಳಿಕೊಡುತ್ತಿದ್ದ ವಿಷಯಗಳತ್ತ ಹೊರಳಿತು.ಹೀಗೆ ಮೈತ್ರಿ ಟ್ರೈನಿಂಗ್ ಗೆ, ಕಿಶನ್ ಆಫೀಸಿಗೆ ಹೋಗುತ್ತಾ ಮೂರು ತಿಂಗಳುಗಳು ಕಳೆದವು.
ಮನೆಯಿಂದ ಒತ್ತಡಗಳು ಬರಲಾರಂಭಿಸಿದವು.'ಊರಿಗೆ ಯಾವಾಗ ಬರುತ್ತೀರಿ 'ಎಂದು.. ಮೈತ್ರಿಯ ಟ್ರೈನಿಂಗ್ ಮುಗಿದ ಬಳಿಕ ಬರುತ್ತೇವೆಂದರೂ ಅವರಿಗೆ ಮಕ್ಕಳನ್ನು ನೋಡುವ ಬಯಕೆ.. ಕಿಶನ್ ಮತ್ತು ಮೈತ್ರಿ ಇಬ್ಬರ ಹೆತ್ತವರಿಗೂ .. ಮಹೇಶ್ "ಅಮ್ಮ.. ಅಕ್ಕನಿಗೆ ಸಮಯವಿಲ್ಲದಿದ್ದರೆ ನಾವೇ ಹೋಗಿ ಮಾತನಾಡಿ ಬರೋಣ" ಎನ್ನುತ್ತಿದ್ದ..ಮಂಗಳಮ್ಮನಿಗೂ ಅದೇ ಆಸೆ.. ಭಾಸ್ಕರ್ ಶಾಸ್ತ್ರಿಗಳು ಒಪ್ಪಿಗೆ ನೀಡಿದರು.ಮಹೇಶನಿಗೂ ಪರೀಕ್ಷೆ ಮುಗಿದ ರಜೆಯಿತ್ತು.ಅಮ್ಮ ಮಗ ಬೆಂಗಳೂರಿಗೆ ಪಯಣ ಬೆಳೆಸಿದರು..
ಅವರು ಬರುವ ಖುಷಿ.. ಮನೆಯನ್ನು ಒಪ್ಪ ಓರಣವಾಗಿ ಇಡುವುದು ಕಷ್ಟ ..ಹೇಗೋ ಗಂಡನ ಸಹಾಯ ಪಡೆದು ಮನೆಯ ಮೂಲೆ ಮೂಲೆಗಳಲ್ಲಿ ಸ್ವಚ್ಛಗೊಳಿಸಿದಳು.ತರಕಾರಿ ಒಂದು ವಾರಕ್ಕೆ ತಕ್ಕ ತಂದು ತೊಳೆದು ಒಣಗಿಸಿ ಜೋಡಿಸಿಟ್ಟಳು.. ಅಷ್ಟೆಲ್ಲ ಮಾಡುವಾಗ ಅವಳಿಗಂತೂ ಸೊಂಟಸೋಪಾನವಾಗಿತ್ತು.. ಆಫೀಸಿನಲ್ಲಿಯೇ ಕುಳಿತು ಕುಳಿತು ಸಾಕಾಗುತ್ತಿತ್ತು..
ಬಸ್ಸಿನಿಂದಿಳಿಯುವಲ್ಲಿಗೆ ಹೋಗಿ ಕಿಶನ್ ಅತ್ತೆ ಮತ್ತು ಭಾವನನ್ನು ಮನೆಗೆ ಕರೆದುಕೊಂಡು ಬಂದ.ಅಮ್ಮ ತಮ್ಮನನ್ನು ಕಂಡಾಗ ಅವಳಿಗೆ ..ತಬ್ಬಿ ಬಿಡುವಷ್ಟು ಆನಂದ..ಅಮ್ಮನಿಗೂ ಹಾಗೇ ..ತಮ್ಮ ಅಕ್ಕನನ್ನು ಛೇಡಿಸುವುದನ್ನು ಕಡಿಮೆ ಮಾಡಲಿಲ್ಲ.. ಅಕ್ಕ ಬೆಂಗಳೂರು ಶೈಲಿಯ ಪುಟ್ಟ ಲೋಟದಲ್ಲಿ ತಮ್ಮನಿಗೆ ಕಾಫಿ ನೀಡಿದಾಗ "ಓಹೋ.. ನಾನು ನಿನ್ನ ಪುಟ್ಟ ತಮ್ಮ ಅಂತ ಪುಟಾಣಿ ಲೋಟದಲ್ಲಿ ಕೊಟ್ಟಿದೀಯಾ.."
ಅಂದಾಗ ನಗುತ್ತಾ ಅವನಿಗೆ ಅದರ ಹಿಂದಿನ ಘಟನೆಯನ್ನು ವಿವರಿಸಿದಳು.ಅಮ್ಮನಲ್ಲಿ ಎಷ್ಟು ಮಾತನಾಡಿದರೂ ಮುಗಿಯುತ್ತಿರಲಿಲ್ಲ ಮೈತ್ರಿಗೆ."ಅಕ್ಕಾ ನೀವಿಬ್ಬರು ಕಾಲರ್ ಮೈಕ್ ಹಾಕಿಕೊಳ್ಳಿ..ಕೆಲಸ ಮಾಡುತ್ತಾ ಬೇರೆ ಬೇರೆ ರೂಮಿನಲ್ಲಿದ್ದಾಗಲೂ ನಿರಾಂತಕವಾಗಿ ಪಟ್ಟಾಂಗ ಹೊಡೆಯಬಹುದು.."ಎಂದಾಗ..
ಕಿಶನ್ ಗೆ ನಗೆ ತಡೆಯಲಾಗಲಿಲ್ಲ.ಕಿಶನ್ ಗೆ ಸ್ವಲ್ಪ ಕಪ್ಪಗಾದ ಚಪಾತಿ ಬಡಿಸಿ ತಮ್ಮನಿಗೆ ಹದವಾಗಿ ಬೆಂದ ಚಪಾತಿ ಬಡಿಸಿದಾಗ ಕಿಶನ್ ಕೂಡ ಬಿಡದೆ "ನೋಡು ಅಕ್ಕನಿಗೆ ಗಂಡನಿಗಿಂತ ತಮ್ಮನೆಂದರೆ ಪಂಚಪ್ರಾಣ.."ಎಂದು ರೇಗಿಸಿದ.
ವಾರಾಂತ್ಯದಲ್ಲಿ ಅಮ್ಮ, ತಮ್ಮನನ್ನು ಸುತ್ತಾಡಲು ಕರೆದೊಯ್ದರು.ಶಾಪಿಂಗ್ ಮಾಡಿಸಿದರು.
ಒಂದು ವಾರ ಅಮ್ಮನಿದ್ದುದು ಅವಳಿಗೆ ಅಡುಗೆ ಕೇಲಸದಿಂದ ಮುಕ್ತಿ ಸಿಕ್ಕಿತು.ಸ್ವಲ್ಪ ನಿರಾಳವೆನಿಸಿತು.ರುಚಿಯಾದ ಅಡುಗೆ ಅಮ್ಮನೇ ಮಾಡಿ ಬಡಿಸಿದರು.ಸಾಂಬಾರು ಪುಡಿ,ಸಾರಿನ ಪುಡಿ ,ರಸಂ ಪುಡಿ ಪುಳಿಯೋಗರೆ, ಪುಲಾವ್ ಪುಡಿಗಳನ್ನು ಮಾಡಿಟ್ಟರು.
ಒಂದು ದಿನ ಅಮ್ಮ ಮಗಳನ್ನು ತರಾಟೆಗೆ ತೆಗೆದುಕೊಂಡರು."ನಿನಗೆ ಉದ್ಯೋಗ ಅನಿವಾರ್ಯವಾಗಿತ್ತಾ..?"
"ಈಗ ಸ್ವಲ್ಪ ಸಮಯ ದುಡಿದರೆ ಬಂತು.. ಮತ್ತೆ ಹೆಣ್ಣುಮಕ್ಕಳಿಗೆ ದುಡಿಯಲು ಕಷ್ಟವಾಗುತ್ತೆ.."
"ಸಂಜೆ ಬರುವಾಗಲೇ ಸೊಂಟ ನೋವು ಅನ್ನುತ್ತೀಯಾ.. ಬೆಳಗ್ಗೆ ಏಳುವಾಗಲೇ ಗ್ಯಾಸ್ಟ್ರಿಕ್ ಅನ್ನುತ್ತೀಯಾ.. ಅರ್ಧಂಬರ್ಧ ತಿಂಡಿ ತಿಂದು ಉದ್ಯೋಗಕ್ಕೆ ಓಡುವುದನ್ನು ನಾನು ಬಂದಾಗಿನಿಂದ ಕಾಣುತ್ತಿದ್ದೇನೆ.. ಹೀಗೆ ಮಾಡಿದರೆ ಇಬ್ಬರ ಆರೋಗ್ಯ ವೂ ಹದಗೆಟ್ಟೀತು.."ಎಂದಾಗ ಮೈತ್ರಿ ಸುಮ್ಮನಿದ್ದಳು.ಅಮ್ಮ ಹೇಳುವುದರಲ್ಲೂ ಹುರುಳಿದೆ ಎನಿಸಿತ್ತು ಅವಳಿಗೆ..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
22-06-2020.
👌🏻👌🏻
ReplyDelete💐🙏
Delete