Wednesday, 24 June 2020

ಜೀವನ ಮೈತ್ರಿ ಭಾಗ ೯೪(94)



ಜೀವನ ಮೈತ್ರಿ ಭಾಗ ೯೪


          ಅಮ್ಮ ತಮ್ಮ ಒಂದು ವಾರ ಇದ್ದು ಹೊರಟು ನಿಂತಾಗ ಮೈತ್ರಿಗೆ ಬಹಳ ದುಃಖವಾಯಿತು. ಅಮ್ಮನಿದ್ದಾಗ ಅವಳಿಗೆ ಮನೆಯ ಕೆಲಸಗಳೆಲ್ಲ ಬಹಳ ಸಲೀಸಾಗಿತ್ತು. "ಶನಿವಾರ-ಭಾನುವಾರ ಬಿಡುವು ಮಾಡಿಕೊಂಡು ಮನೆ ಕಡೆ ಬನ್ನಿ "ಎಂದು ಹೇಳಿ ಮಂಗಳಮ್ಮ ಮಗಳ ಮನೆಯಿಂದ ತೆರಳಿದರು. ಮೈತ್ರಿ, ಕಿಶನ್ ಇಬ್ಬರೂ ಬಸ್ಸು ಹತ್ತಿಸಿ ಬಾಯ್ ಬಾಯ್ ಹೇಳಿದರು.


    ಅಮ್ಮ ಹೋಗಿ ಕೆಲವೇ ದಿನಗಳಲ್ಲಿ ಮುಟ್ಟಾದ ಅವಳಿಗೆ ನಿಶ್ಶಕ್ತಿ ,ಸೊಂಟನೋವು  ಬಹಳವಾಗಿ ಕಾಡುತ್ತಿತ್ತು. ಮೊದಲಬಾರಿ ಪತಿಯ ಮನೆಯಲ್ಲಿ ಮುಟ್ಟಾದಾಗ ದೂರ ಕುಳಿತುಕೊಂಡು ಬೇಜಾರಾಗಿದ್ದರೆ, ಅವಳಿಗೆ ಈಗ ಮೂರು ದಿನದ ಮಟ್ಟಿಗೆ ಮನೆಕೆಲಸದಲ್ಲಿ ಬಿಡುವು ಸಿಕ್ಕರೆ ಸಾಕಪ್ಪ ..ಎನಿಸುತ್ತಿತ್ತು. ಕಿಶನ್ ಎಲ್ಲದರಲ್ಲೂ ಮೈತ್ರಿಗೆ ಸಹಕರಿಸುತ್ತಿದ್ದರೂ ಅವಳ ತಿಂಗಳ ಮುಟ್ಟಿನ ನೋವನ್ನು ಅವಳೇ ಅನುಭವಿಸಬೇಕು.ಎಷ್ಟು ಬಾರಿ 'ನನಗೆ ಈ  ಟ್ರೈನಿಂಗ್, ಉದ್ಯೋಗ ಬೇಡವಾಗಿತ್ತು ' ಅಂದುಕೊಂಡಳು.ಟ್ರೈನಿಂಗಿಗೆ ಹಾಜರಾಗಿ ಎಲ್ಲರೊಂದಿಗೆ ಬೆರೆತಾಗ ಅದೇ ಖುಷಿ ಎನಿಸುತ್ತಿತ್ತು. ದೈಹಿಕ ಯಾತನೆ,ಆಯಾಸವೆಲ್ಲ ಮರೆತೇ ಹೋಗುತ್ತಿತ್ತು.


                *********


      ಬಾರಂತಡ್ಕದ ಬಂಗಾರಣ್ಣನ ಮನೆ ಕಳೆಗುಂದಿದೆ.  ಮಗ ಸೊಸೆ ಮನೆಯಿಂದ ದೂರವಾಗಿ ಎರಡು ತಿಂಗಳು ಕಳೆದರೂ ವಾಪಸ್ಸಾಗಿರಲಿಲ್ಲ. ಬಂಗಾರಣ್ಣನಿಗೆ ಅವರನ್ನು ವಾಪಸ್  ಕರೆಸಿಕೊಳ್ಳುವ ಮನಸ್ಸೂ ಇರಲಿಲ್ಲ. ಸುಮ ಮಾತ್ರ ಹಗಲು-ರಾತ್ರಿ ಮಗನದೇ ಕನವರಿಕೆಯಲ್ಲಿ ಕೊರಗಿ ಕೊರಗಿ ಸಣ್ಣಗಾಗಿದ್ದರು.ಮೊದಲೆಲ್ಲಾ ಊರಲ್ಲಿದ್ದ ಮದುವೆ-ಮುಂಜಿ ಪೂಜೆಗಳಲ್ಲಿ ತಪ್ಪದೆ ಹಾಜರಾಗುತ್ತಿದ್ದರು. ಈಗ ಜನರೊಡನೆ ಬೆರೆಯಲು ಹಿಂಜರಿಕೆ ಕಾಡುತ್ತಿದೆ. ಎಲ್ಲರೂ ಕೇಶವನ ಬಗ್ಗೆ ಕೇಳುವವರೇ. ಅವರಿಗೆಲ್ಲ ಏನು ಉತ್ತರಿಸಲಿ ಎಂದು ಯೋಚಿಸುತ್ತಾ ಅವರ ಕಂಠ ಬಿಗಿಯುತ್ತಿತ್ತು.ಹೆತ್ತ ಕರುಳಿನ ಸಂಕಟವನ್ನರಿತು ನಾವು ವರ್ತಿಸಬೇಕು,ನೋವಿನ ವಿಷಯವನ್ನು ಮತ್ತೆ ಕೆದಕಬಾರದು ಎಂಬ ವಿವೇಚನೆ ಎಲ್ಲರಿಗೂ ಇಲ್ಲವಲ್ಲ...!!

       ಇತ್ತೀಚಿನ ದಿನಗಳಲ್ಲಂತೂ ಸುಮಾಗೆ ರಾತ್ರಿ ಸ್ವಲ್ಪವೂ ನಿದ್ದೆ ಬರುತ್ತಿರಲಿಲ್ಲ. ಮಗ ಕೇಳಿದಂತೆ ಅವನಿಗೆ ಬೇಕಾದ ಅಗತ್ಯ ಸರ್ಟಿಫಿಕೇಟ್, ಬ್ಯಾಂಕ್  ಸೇವಿಂಗ್  ರೆಕಾರ್ಡ್ ಎಲ್ಲವನ್ನೂ ಬಹಳ ಮುತುವರ್ಜಿಯಿಂದ ಅಮ್ಮ ಕಳುಹಿಸಿದ್ದರು. ಮಗನಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾಳಜಿ ಅವರಲ್ಲಿತ್ತು.  ಅಷ್ಟು ಮಾಡಿಯೂ ಸಹ ಇತ್ತೀಚೆಗೆ ಒಂದು ತಿಂಗಳಿನಿಂದ ಆತನ ಕರೆ ಬಂದೇ ಇಲ್ಲ. ಅಮ್ಮನೇ ಸ್ವತಃ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸುತ್ತಿಲ್ಲ. ಇದನ್ನೆಲ್ಲಾ ಯಾರ ಬಳಿ ಹೇಳಿಕೊಳ್ಳಲಿ ಎಂದು  ಕೇಶವನ ತಾಯಿ ಸಂಕಟಪಡುತ್ತಿದ್ದರು.




        *********

       ಶೇಷಣ್ಣ ಮಾತ್ರ ತನಗೆ ಸಿಕ್ಕಿದ ಕಮಿಷನ್'ನಿಂದ ಬಹಳ ಸಂತಸಗೊಂಡು, ಬಹಳ ಮುತುವರ್ಜಿಯಿಂದ ಇನ್ನೂ ಹಲವರಿಗೆ ಸಂಬಂಧ ಕುದುರಿಸುವ ಪ್ರಯತ್ನ ನಡೆಸಿದ್ದ . ಅವನಿಗೆ ಶ್ರೀಮಂತ ಕುಳಗಳು ಎಂದರೆ ಭಾರಿ ಅಚ್ಚುಮೆಚ್ಚು. ಈ ಬಾರಿ  ಅವನ ಬೇಟೆ ಶಶಿಯ ಮಗ ಮುರಳಿ. ವೆಂಕಟ್ ಯಾವುದೋ ಯಕ್ಷಗಾನ ಕಾರ್ಯಕ್ರಮದಲ್ಲಿ ಕಂಡಾಗ ತನ್ನ ಅಣ್ಣನ ಮದುವೆ ವಿಚಾರ ಪ್ರಸ್ತಾಪಿಸಿದ. ಈಗ ಶೇಷಣ್ಣನ ಲಿಸ್ಟಿನಲ್ಲಿ ಇದ್ದ ವರಗಳ ಬಗ್ಗೆ ಪೈಕಿ ಮುರಲಿ ಈಗ ಹೆಚ್ಚು ಡಿಮಾಂಡ್ ಇರುವಂತಹ ವರನಾಗಿದ್ದ.'ಇದು ನನ್ನ ಕೈ ತಪ್ಪಿ ಹೋಗಬಾರದು ' ಎಂಬ ಅವನ ಆಸೆಯಂತೆ ಪ್ರತಿವಾರ ಶಶಿಗೆ ಮತ್ತು ಶಂಕರ ರಾಯರಿಗೆ ಫೋನ್ ಮಾಡಿ ಅಲ್ಲೊಬ್ಬಳು ಹುಡುಗಿಯಿದ್ದಾಳೆ, ಇಲ್ಲೊಬ್ಬಳು ಇದ್ದಾಳೆ ಎಂದು ಹೇಳುತ್ತಲೇ ಇದ್ದ.


     ಶಶಿಯ ಕಂಡಿಶನ್ ಲಿಸ್ಟ್ ಸ್ವಲ್ಪ ಉದ್ದವಿತ್ತು. ಅದಕ್ಕೆ ತಕ್ಕಂತೆ ಹುಡುಗಿ ಹುಡುಕುವುದು ಸವಾಲಿನ ಕೆಲಸ ಎಂದು ಅರಿತ ಶೇಷಣ್ಣ ಒಂದು ಉಪಾಯ ಹೆಣೆದ. ಮೊದಲು ಲಿಸ್ಟಿನಲ್ಲಿದ್ದ ವಿಷಯಗಳನ್ನು ಕಂಠಪಾಠ ಮಾಡಿಕೊಂಡು. ..ನಂತರ ಅವನು ಹೇಳುತ್ತಿದ್ದ ಹುಡುಗಿಯರಿಗೆಲ್ಲ ಆ ಲಕ್ಷಣಗಳಲ್ಲಿ ಕೆಲವನ್ನು ಸೇರಿಸಿ ಹೇಳುತ್ತಿದ್ದ..
'ಏನಾದರೂ ಆಗಲಿ ನನ್ನ ಜೇಬು ತುಂಬಿದರೆ  ಸಾಕು' ಎಂಬುದು ಅವನ ಆಶಯ.


        ಬೆಂಗಳೂರಿನಲ್ಲಿದ್ದ ಒಬ್ಬ ಇಂಜಿನಿಯರ್ ಕೂಸಿನ ವಿಷಯ ಶೇಷಣ್ಣನಿಗೆ ತಿಳಿದದ್ದೇ ತಡ.. ಶಂಕರ ರಾಯರಿಗೆ ಸುದ್ದಿ ಮುಟ್ಟಿಸಿದ. ಬಹಳ ವೇಗವಾಗಿ ಜಾತಕ ಪಟವನ್ನು ಕೂಡ ಕಳುಹಿಸುವ ವ್ಯವಸ್ಥೆ ಮಾಡಿದ. ಶಂಕರ ರಾಯರಿಗಿಂತಲೂ ಶಶಿ ತರಾತುರಿಯಲ್ಲಿದ್ದರು. ಜಾತಕ ಕೈಗೆ ಸಿಕ್ಕಿದಾಗ ಫೋಟೋದಲ್ಲಿದ್ದ ಹುಡುಗಿ ಬಹಳ ಲಕ್ಷಣವಾಗಿದ್ದಳು. ಶ್ರೀಮಂತ ಕುಳ ಎಂದು ಶೇಷಣ್ಣ ಹೇಳಿದ್ದಾರೆ. ಒಳ್ಳೆಯ ವಿದ್ಯಾವಂತೆ  ಕೂಡ. ಮತ್ತೆ ಯಾಕೆ ತಡ ಇವತ್ತು ಹೋಗಿ ಜಾತಕ ತೋರಿಸಿಕೊಂಡು ಬನ್ನಿ ಎಂದು ದುಂಬಾಲು ಬಿದ್ದರು.

       ಜಾತಕ ತೋರಿಸಲು ಮನೆಯಿಂದಲೇ ನಕ್ಷತ್ರ ಜಾತಕ ಕುಂಡಲಿ  ಹೇಳಿದರು ಶಂಕರರಾಯರು. ಅರ್ಧಗಂಟೆಯಲ್ಲಿ ಸಾಧಾರಣವಾಗಿ ಹೊಂದಾಣಿಕೆಯಿದೆ ಎಂದು ಉತ್ತರ ಬಂದಿತ್ತು. ಶಶಿ ಖುಷಿಯಿಂದ ಹುಚ್ಚೆದ್ದು ಕುಣಿದಂತೆ ಮಾಡುತ್ತಿದ್ದಳು. ಮಾತುಕತೆ ಮುಂದುವರಿದು ಎರಡೇ ದಿನದಲ್ಲಿ ಬೆಂಗಳೂರಿಗೆ ಹೋಗುವ ಸಿದ್ಧತೆಯಲ್ಲಿದ್ದರು. ಶಾಸ್ತ್ರೀ ನಿವಾಸಕ್ಕೆ ಕರೆ ಮಾಡಿ ವಿಷಯ ತಿಳಿಸಿ ಸೋದರಮಾವ ಬರಬೇಕೆಂದು ಕೋರಿಕೊಂಡರು. ಬೆಂಗಳೂರಿನಲ್ಲಿದ್ದ ಶಂಕರ ಶಾಸ್ತ್ರಿಗಳಿಗೆ ಫೋನ್ ಮಾಡಿ "ನಿಮಗೆ ಹೇಗೆ ಹೇಗಾದರೂ ಸಮೀಪವೇ. ಒಂದು ಘಳಿಗೆ ಬರಲೇಬೇಕು" ಒತ್ತಾಯಿಸಿದರು.


        ಭಾಸ್ಕರ ಶಾಸ್ತ್ರಿಗಳು ಅಕ್ಕನ ಮಾತುಗಳಿಗೆ ಹೂಂಗುಟ್ಟಿದರೂ ಅವರಿಗೆ ಹೋಗುವ ಆಸಕ್ತಿ ಇರಲಿಲ್ಲ. ಮಂಗಳಮ್ಮ ಒತ್ತಾಯ ಮಾಡುವ ಗೋಜಿಗೂ ಹೋಗಲಿಲ್ಲ. ಮಹಾಲಕ್ಷ್ಮಿ ಅಮ್ಮ ಮಾತ್ರ ಆಗಾಗ ಮಗನಿಗೆ ಹೇಳುತ್ತಲೇ ಇದ್ದರು "ಸೋದರಮಾವನಾಗಿ ನೀನು ಹೋಗಬೇಕಾದದ್ದು ಕರ್ತವ್ಯ" ಎಂದು.ತನ್ನ ಎಲ್ಲ ಕರ್ತವ್ಯಗಳನ್ನು ಪಾಲಿಸುವುದರಲ್ಲಿ ಎಂದೂ ತಪ್ಪದ ಭಾಸ್ಕರ ಶಾಸ್ತ್ರಿಗಳು ಶಶಿ ಅಕ್ಕನ ಮನೆಯ ವಿಚಾರದಲ್ಲಿ ಮಾತ್ರ  ನಿರುತ್ಸಾಹಿ ಯಾಗಿದ್ದರು. ಅದಕ್ಕೆ ಕಾರಣ ಕಣ್ಮುಂದೆ ಇದ್ದಂತೆ ಭಾಸವಾಗುತ್ತಿತ್ತು. ಶಂಕರ ಶಾಸ್ತ್ರಿಗಳು ಹೋಗುವ ಬಯಕೆ ವ್ಯಕ್ತಪಡಿಸಿದಾಗ ಗಾಯತ್ರಿ.. "ಅಲ್ಲ ರೀ ..ನಿಮಗೆ ಏನು ಅತೀ ಅಗತ್ಯ... ಮೊನ್ನೆ ತಾನೇ ನಮ್ಮ ಮನೆಯ ಮದುವೆಯಲ್ಲಿ ಶಶಿಯತ್ತಿಗೆ ಹೇಗೆ ನಡೆದುಕೊಂಡಿದ್ದರು ನೋಡಿದ್ದೀರಲ್ಲ..ಮರೆತೇ ಬಿಟ್ಟಿರಾ..?"

"ಆದರೆ ಮುರಳಿ ಹಾಗಲ್ಲ ಕಣೆ ..ಒಳ್ಳೆಯ ಹುಡುಗ."

      "ಮುರಳಿ ಒಳ್ಳೆಯವನೇ.. ಶಂಕರ ಭಾವನೂ ಒಳ್ಳೆಯವರೇ. ಆದರೆ ಕೆಟ್ಟಬುದ್ದಿಯ ಶಶಿ ಅತ್ತಿಗೆಗೆ ಸ್ವಲ್ಪ ತಿದ್ದಿಕೊಳ್ಳುವ ಮನಸ್ಸಾದರೂ ಬರಲಿ. ದುರ್ಗುಣಗಳನ್ನು ನಾವು ತಲೆಗೆ ಹಾಕಿಕೊಳ್ಳದೆ ಸಹಿಸುತ್ತೇವೆ ಎಂದಾದರೆ ಮತ್ತಷ್ಟು ಅದೇ ಬುದ್ಧಿಯನ್ನು ಮುಂದುವರಿಸುತ್ತಾರೆ.. ಕೆಲವೇ ವರ್ಷದಲ್ಲಿ ನಮ್ಮ ಮಗಳಿಗೆ ಮದುವೆ ಮಾಡುವ ಸಂದರ್ಭ ಬರಲಿದೆ ನೆನಪಿರಲಿ.."

      ಶಂಕರ ಶಾಸ್ತ್ರಿಗಳು ಮಡದಿಯ ಮಾತನ್ನು ಮೀರಿ ಹೋಗುವ ಉತ್ಸಾಹ ತೋರಲಿಲ್ಲ.  ಮುರಳಿಗೆ ಕೂಸು ನೋಡುವ ಶಾಸ್ತ್ರ ಸೋದರಮಾವನ ಅನುಪಸ್ಥಿತಿಯಲ್ಲಿ ನಡೆಯಿತು.ಮುರಲಿ ,ಶಶಿ,ಶಂಕರರಾಯರು,ಬೆಂಗಳೂರಿನಲ್ಲಿರುವ ಶಶಿಯ ಗೆಳತಿ ಮತ್ತು ಶೇಷಣ್ಣ ಇಷ್ಟೇ ಜನ ಹೋಗಿದ್ದರು.ಹುಡುಗಿ ಇಂಜಿನಿಯರಿಂಗ್ ಓದಿ ಮುರಲಿಯಷ್ಟೇ ಸಂಪಾದಿಸುವ ಉದ್ಯೋಗದಲ್ಲಿದ್ದಳು."ಉದ್ಯೋಗ ಬಿಡುವ ಯೋಚನೆ ನನಗಿಲ್ಲ" ಎಂದಳು.

"ನಮಗೂ ಅಂತಹ  ಬೇಡಿಕೆಯೇನಿಲ್ಲ.ನಿನ್ನಿಷ್ಟದಂತೆ ಇರಬಹುದು."ಎಂದರು.

"ಹಳ್ಳಿಯೆಂದರೆ ನನಗಿಷ್ಟ.ಆದರೆ ದನದ ಹಾಲು ಕರೆಯಲು , ಸೆಗಣಿ ಬಾಚಲು ನನ್ನಿಂದಾಗದು ಎಂದು ಮೊದಲೇ ಹೇಳುತ್ತೇನೆ "ಎಂದಳು..

ಶಶಿ ನಗುನಗುತ್ತಾ..."ಆಗಲಮ್ಮ..ನಾವೇನೂ ಸೊಸೆಯನ್ನು ಮನೆಚಾಕರಿ ಕೆಲಸಕ್ಕೆಂದು ಕರೆಸಿಕೊಳ್ಳುತ್ತಿಲ್ಲ "ಎಂದರು..

"ನಾವು ಬೆಂಗಳೂರಿನಲ್ಲೇ ಸೆಟ್ಲ್ ಆಗುವುದಾದರೆ ಮಾತ್ರ ಮುಂದುವರಿಯುವುದು. ." ಎಂದಳು..

"ಹಾಗೆಯೇ ಮಾಡೋಣ.. ಹಳ್ಳಿಗಳಲ್ಲಿ ಇಲ್ಲಿನಷ್ಟು ಸಂಪಾದನೆಯಿಲ್ಲ .. ದುಡಿಮೆಗೆ  ಜನ ಸಿಗುತ್ತಿಲ್ಲ..ಆದರೆ ಪರಿಸರ ಶುದ್ಧವಾಗಿದೆ.ತಾಜಾ ತರಕಾರಿ,ಹಣ್ಣು ಹಂಪಲುಗಳು ದೊರೆಯುತ್ತವೆ.. ನಾವು ಹಳ್ಳಿಯಲ್ಲೇ ಉಳಿಯುತ್ತೇವೆ.ಮಗನ ಕುಟುಂಬ ಬೇಕಾದಾಗ ಬಂದು ಹೋಗುತ್ತಿರಲಿ".ಎಂದರು..

ಎಲ್ಲಾ ಕಂಡೀಷನ್ ಗಳಿಗೆ ಮರಲಿಯ ಕಡೆಯವರು ಒಪ್ಪಿದ ನಂತರ ಹುಡುಗಿ ಮಹತಿಯ ತಂದೆ ತಾಯಿ "ನಾವು ನಾಳೆ ಉತ್ತರಿಸುತ್ತೇವೆ "ಎಂದರು.

    ಮಹತಿಯ ತಂದೆ ಸತ್ಯ ನಾರಾಯಣ ರಾಯರು ಬಿಸ್ನೆಸ್ ಮ್ಯಾನ್..ತಾಯಿ ಸ್ವರ್ಣ ಗೃಹಿಣಿ.ತಮ್ಮದೇ ಆದ ಫ್ಯಾಕ್ಟರಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.ನಗರದಲ್ಲಿ ದೊಡ್ಡ ಬಂಗಲೆಯಂತಹ ಮನೆ,ಹೊರವಲಯದಲ್ಲಿ ವಿಶಾಲವಾದ ಎಸ್ಟೇಟ್ ಎಲ್ಲವೂ ಇತ್ತು.ಆದರೆ ಮಗಳ ಜಾತಕ ಎಲ್ಲಿಗೆ ಕಳುಹಿಸಿದರೂ ವಾಪಸ್ ಬರುವುದು ಏಕೆಂದು ತಿಳಿಯುತ್ತಿರಲಿಲ್ಲ.ನಾನಾ ಜ್ಯೋತಿಷಿಗಳಲ್ಲಿ ತೋರಿಸಿ ಹೋಮ ಹವನಗಳನ್ನೆಲ್ಲ ಮಾಡಿಸಿದ್ದರು.. ನಂತರ ಇದೇ ಮೊದಲ ಬಾರಿಗೆ ಜಾತಕ ಹೊಂದಾಣಿಕೆಯಾಗಿ ಹುಡುಗನ ಕಡೆಯವರು ಆಗಮಿಸಿದ್ದರು..


ಮನೆಗೆ ಹಿಂದಿರುಗಿದ ದಿನವೇ" ನಮಗೆ ಹುಡುಗ ಓಕೆ "ಎಂಬ ಉತ್ತರ ಸತ್ಯನಾರಾಯಣ ರಾಯರು ಹೇಳಿದ್ದನ್ನು ತಲುಪಿಸಿದ್ದರು ಶೇಷಣ್ಣ.ಮನೆಯವರಿಗೆ ಆನಂದವಾಗಿತ್ತು.

      ತವರಿನಿಂದ ಯಾರೂ ಆಗಮಿಸದೇ
ಇದ್ದುದಕ್ಕೆ ಕೇರ್ ಮಾಡದ ಶಶಿ "ನೀವು ಬರದಿದ್ದರೆ ಏನಂತೆ..?  ನಮಗೆ ಒಳ್ಳೆಯ ಸಂಬಂಧವೇ ದೊರೆತಿದೆ" ಎಂದು ತಮ್ಮ ಎದೆ ತಟ್ಟಿಕೊಂಡರು. ತವರಿನವರಿಗೆ ,ಶಂಕರರಾಯರ ಅಣ್ಣ,ತಂಗಿಯರಿಗೆ ತಿಳಿಸುವ ಗೋಜಿಗೇಹೋಗದೆ ಮಾಣಿಮನೆ ನೋಡುವ ಶಾಸ್ತ್ರವೂ ತರಾತುರಿಯಲ್ಲಿ ಮುಗಿಯಿತು.
ಶಶಿ ಅಮ್ಮನಿಗೆ ಫೋನ್ ಮಾಡಿ ಭಾವಿ ಸೊಸೆಯನ್ನು ಹಾಡಿಹೊಗಳಿದರು. ಶಶಿಯತ್ತಿಗೆಯ ಬುದ್ಧಿ ತಿಳಿದಿದ್ದ ಮಂಗಳಮ್ಮ   'ಮುಂದೆಯೂ ಇದೇ ಭಾವನೆಯನ್ನು ಉಳಿಸಿಕೊಂಡರೆ ಒಳ್ಳೆಯದು' ಎಂದು ಭಾವಿಸಿದರು.


ಮುಂದುವರಿಯುವುದು ...


✍️...ಅನಿತಾ ಜಿ.ಕೆ.ಭಟ್ .
24-06-2020.


2 comments: