ಜೀವನ ಮೈತ್ರಿ ಭಾಗ ೯೫
ಮೈತ್ರಿ ಟ್ರೈನಿಂಗ್ ಮುಗಿದು ಉದ್ಯೋಗಕ್ಕೆ ಸೆಲೆಕ್ಟ್ ಆದಳು.ಮನೆಯವರಲ್ಲಿ ಹೇಳಿ ಆಶೀರ್ವಾದವನ್ನು ಪಡೆದುಕೊಂಡಳು.ತಮ್ಮನಲ್ಲಿ "ನನಗಿನ್ನು ಪ್ರತೀ ತಿಂಗಳು ಸಂಬಳ ಬರುತ್ತೆ "ಅಂತ ಕೊಚ್ಚಿಕೊಂಡಳು.."ನನ್ನ ಮುದ್ದಿನ ಅಕ್ಕ.. ಇನ್ನು ನಂಗೆ ಆಗಾಗ ಗಿಫ್ಟ್, ದುಡ್ಡು ಕೊಡ್ತಾನೇ ಇರ್ತಾಳೆ.." ಅಂತ ತಾನೂ ಬಿಡದೇ ರೇಗಿಸಿದ..
ನೆರೆಮನೆಯ ಶೈನಿಗೆ ಸಿಹಿ ಹಂಚಿದ್ದೂ ಆಯಿತು.ಅಷ್ಟು ದೂರ ಹೋಗೋದು, ತಡವಾಗಿ ಮನೆಗೆ ವಾಪಾಸಾಗುವುದು ಕಷ್ಟ ಅಲ್ವಾ ..!! ಅಂತ ಅವಳ ಬಾಯಿಯಿಂದ ಹೇಳಿಸಿಕೊಂಡೂ ಮುಖ ಸಣ್ಣ ಮಾಡಿದ್ದೂ ಆಯಿತು.ಅದನ್ನು ಕೇಳಿಸಿಕೊಂಡ ಕಿಶನ್ "ಇನ್ನೊಬ್ಬರು ಸಾವಿರ ಮಾತು ಹೇಳಬಹುದು.ಎಲ್ಲವನ್ನೂ ತಲೆಗೆ ತೆಗೆದುಕೊಳ್ಳಬಾರದು.ನಮಗೆ ಏನು ಬೇಕು, ಯಾವುದು ಬೇಡ ಎಂಬ ನಿರ್ಧಾರವನ್ನು ನಾವೇ ತೆಗೆದುಕೊಳ್ಳಬೇಕು.ಇನ್ನೊಬ್ಬರು ನಮ್ಮ ಒಳಿತಿಗಾಗಿ ಹೇಳುತ್ತಾರೋ ..ಅವರೊಳಗಿನ ಹುಳುಕಿಗಾಗಿ ಹೇಳುತ್ತಾರೋ.. ಅವರಿಗೇ ಗೊತ್ತು.ನಮ್ಮ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆಯವರು ಹೇಳಿದ್ದಕ್ಕೆಲ್ಲಾ ಪ್ರಾಶಸ್ತ್ಯ ಕೊಡಬೇಡ."ಎಂದು ಮಡದಿಗೆ ಬೋಧಿಸಿದ.
ಮೈತ್ರಿಗೀಗ ಪತಿಯೊಂದಿಗೆ ದಿನವೂ ಬೆಳ್ಳಂಬೆಳಗ್ಗೆ ಆಫೀಸಿಗೆ ಓಡುವ ತರಾತುರಿ.ಮನೆಗೆ ಬಂದಾಗ ಕೆಲಸಗಳು ಕೈಬೀಸಿ ಕರೆಯುತ್ತಿರುತ್ತವೆ. ಅದೆಲ್ಲದರ ಮಧ್ಯೆ ಒಮ್ಮೆ ಊರಿಗೆ ಹೋಗಲೇಬೇಕು ಎಂಬ ಹಪಹಪಿ.ಕಿಶನ್ ಗೂ ಅಪ್ಪ ಅಮ್ಮನ ನೋಡಬೇಕೆಂಬ ಬಯಕೆಯಾಯಿತು. ಸೋಮವಾರ ಮಂಗಳವಾರ ರಜೆ ಹಾಕಿ ಒಂದು ಶುಕ್ರವಾರ ರಾತ್ರಿ ಊರಿಗೆ ಹೊರಟರು. ಶನಿವಾರ ಬೆಳ್ಳಂಬೆಳಗ್ಗೆ ಕಿಶನ್ ಮನೆ ಕುಂಪೆಯ 'ಶಂಕರ ನಿಲಯ'ಕ್ಕೆ ಆಗಮಿಸಿದರು..ಮಳೆ ತುಂತುರು ಹನಿ ಬೀಳಲಾರಂಭಿಸಿತು.ಬಿಸಿಲಿನ ಬೇಗೆಗೆ ಕಾದ ಕಾವಲಿಯಂತಾದ ಭೂಮಿಗೆ ವರುಣನ ಕೃಪೆಯಿಂದ ಪನ್ನೀರ ಸಿಂಚನವಾಯಿತು. ಮಳೆಯ ಸಿಂಚನಕ್ಕೆ ಪುಳಕಗೊಂಡ ಭೂದೇವಿಯ ಮಡಿಲಿನಿಂದ ಹೊರಹೊಮ್ಮುವ ಮಣ್ಣಿನ ಸುವಾಸನೆಯನ್ನು ಆಘ್ರಾಣಿಸಿದಳು ಮೈತ್ರಿ..ಕಾರಿನಿಂದಿಳಿದವಳು ಮೇಲ್ಮುಖವಾಗಿ ನೋಡಿ ಪುಟ್ಟ ಮಕ್ಕಳಂತೆ ನಾಲಿಗೆಯನ್ನು ಮಳೆಹನಿಗೊಡ್ಡಿ ಸಂಭ್ರಮಿಸಿದಳು. ಅವಳೊಳಗಿನ ಮುಗ್ಧ ಮನಸ್ಸಿಗೆ ತಲೆದೂಗಿದ ಪತಿ ತಾನೂ ಅವಳ ಜೊತೆ ಮಳೆಹನಿಯನ್ನು ನಾಲಿಗೆಯಲ್ಲಿ ಹಿಡಿದು ಖುಷಿ ಅನುಭವಿಸಿದ.ಜೀವನದಲ್ಲಿ ಇಂತಹ ಸಣ್ಣಪುಟ್ಟ ಸಂತಸವನ್ನೂ ಅನುಭವಿಸಬಹುದೆಂದು ಮಡದಿಯನ್ನು ನೋಡಿ ಕಲಿತ.ಕಾರಿನಿಂದ ಬ್ಯಾಗ್ ಕೆಳಗಿಡುತ್ತಿದ್ದಂತೆ ಅಂಗಳದಂಚಿನ ಮರದಿಂದ ಹಲಸಿನ ಹಣ್ಣಿನ ಪರಿಮಳ ಅವಳ ನಾಸಿಕಕ್ಕೆ ಬಡಿಯಿತು.ಸಂಪಿಗೆಯ ಹೂಗಳು,ಉದಯ ಮಲ್ಲಿಗೆ ಅರಳಲಾರಂಭಿಸಿ ಸುವಾಸನೆಯನ್ನು ಹರಡಿದವು.ಕಂಪನ್ನು ದೀರ್ಘ ಉಸಿರಿನಲ್ಲಿ ಒಳಗೆಳೆದುಕೊಂಡಳು ಮೈತ್ರಿ.
ಮಮತಮ್ಮ ಗಣೇಶ ಶರ್ಮರಿಗೆ ಬಹಳ ದಿನಗಳ ನಂತರ ಮಗ ಸೊಸೆಯನ್ನು ನೋಡಿದ ಸಂಭ್ರಮ. ಇವರಿಗೂ ಅಷ್ಟೇ...ಗಡಿಬಿಡಿಯ ಬದುಕಿನಲ್ಲಿ ನಾಲ್ಕು ದಿನದ ಬ್ರೇಕ್ ಬಹಳ ಖುಷಿಯಾಯ್ತು. ಕಿಶನ್ ಮೈತ್ರಿ ಮನೆಯವರಿಗೆಂದು ಉಡುಗೊರೆಗಳನ್ನು ತಂದಿದ್ದರು.ಕೊಟ್ಟಾಗ "ನಮಗೆ ಇದೆಲ್ಲ ಯಾಕೆ ಮಕ್ಕಳೇ "ಅಂದರು ಇಬ್ಬರೂ..
ಮೈತ್ರಿ ತನ್ನ ಟ್ರೈನಿಂಗ್ ವಿಷಯವನ್ನೆಲ್ಲ ಅತ್ತೆಯಲ್ಲಿ ಹಂಚಿಕೊಂಡಳು. ಅವರಿಗೆ ಸೊಸೆಯ ಮಾತುಗಳು ಕೇಳಲು ಬಹಳ ಆಸಕ್ತಿದಾಯಕವಾಗಿದ್ದವು.
ವಿಧವಿಧವಾದ ಅಡುಗೆಗಳನ್ನು ಮಾಡಿದರು.ಹಲಸಿನ ಕಾಯಿ ದೋಸೆ,ಹಪ್ಪಳ,ಚಿಪ್ಸ್,ಪಲ್ಯ,ಹಲಸಿನ ಹಣ್ಣಿನ ಸಿಹಿಕಡುಬು,ಗೆಣಸಾಲೆ , ಮಾವಿನ ಹಣ್ಣಿನ ಸಾಸಿವೆ, ರಸಾಯನ .. ಎಲ್ಲವನ್ನು "ನಿಮಗೆ ಬೆಂಗಳೂರಿನಲ್ಲಿ ಇದೆಲ್ಲ ಸಿಗಲಾರದು "ಎಂದು ಮಮತ ಮಾಡಿಕೊಟ್ಟರು..ಈ ಸಾರಿ ಮೈತ್ರಿ ಎಲ್ಲಾ ಅಡುಗೆಗಳನ್ನು ಹೇಗೆ ಮಾಡುವುದು ಎಂದು ಅತ್ತೆಯಲ್ಲಿ ಕೇಳಿ ನೋಟ್ ಮಾಡಿಕೊಳ್ಳುತ್ತಿದ್ದಳು. ಭಾನುವಾರ ಮೇದಿನಿ ಚಾಂದಿನಿ ಅವರ ಕುಟುಂಬವು ಆಗಮಿಸಿ ಆಗಮಿಸಿ ಅಣ್ಣ ಅತ್ತಿಗೆಯೊಂದಿಗೆ ಸಂಭ್ರಮಿಸಿತು. ಎರಡು ದಿನಗಳಲ್ಲಿ ಕಿಶನ್ ತಂದೆಯೊಂದಿಗೆ ತೋಟ ,ಗದ್ದೆ, ಗುಡ್ಡೆ ಎಲ್ಲಾ ಸುತ್ತಿ ಕೃಷಿ ಕಾರ್ಯಗಳಲ್ಲಿ ಕೈಜೋಡಿಸಿದ. ಮುಂದೆ ಹಾಗೆ ಮಾಡೋಣ ಹೀಗೆ ಮಾಡೋಣ ಎಂದು ಅಪ್ಪ-ಮಗ ಇಬ್ಬರೂ ಚರ್ಚಿಸುತ್ತಿದ್ದರು.
ಮೈತ್ರಿ ಮನೆಯೊಳಗಿದ್ದು ಅತ್ತೆಗೆ ಮನೆ ಕೆಲಸಕ್ಕೆ ಸಹಕರಿಸುತ್ತಿದ್ದಳು. ಅತ್ತೆ ಹವ್ಯಕರ ಶೈಲಿಯ ಹಲವಾರು ತಿಂಡಿಗಳನ್ನು ಹೇಗೆ ಮಾಡುವುದು ಎಂದು ವಿವರಿಸಿದರು. ಫ್ಲಾಟಿನ ಬದುಕಿನ ಬಗ್ಗೆ ತಮಗೆ ಇದ್ದ ಕುತೂಹಲಕ್ಕೆ ಸೊಸೆಯ ಉತ್ತರ ಸಮಾಧಾನ ನೀಡಿತ್ತು. ಅವರ ಮನದೊಳಗೆ 'ನಾನು ಒಮ್ಮೆ ಬೆಂಗಳೂರಿಗೆ ಬರಬೇಕಿತ್ತು 'ಎಂಬ ಇಂಗಿತವನ್ನು ಗಮನಿಸಿದಳು.
"ಈ ಸಾರಿ ಹೋಗುವಾಗ ನೀವೂ ಬನ್ನಿ ಅತ್ತೆ" ಎಂದು ಅವರನ್ನು ಕರೆದಳು.
"ನಾನು ಬಂದರೆ ಇಲ್ಲಿ ಮಾವನಿಗೆ ಮನೆ, ದನದ ಕೊಟ್ಟಿಗೆ ಕೆಲಸ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ "ಎಂದು ಮಮತಾ ಜಾರಿಕೊಂಡರು.
ಇವರು ಬಂದ ಸಂಗತಿ ಗೊತ್ತಾಗಿ ತಾನೂ ಮಾತನಾಡಿಸಿ ಬರಬೇಕೆಂದಿದ್ದ ನೆರೆಮನೆಯ ಕೆಲಸದ ಹೆಣ್ಣು ಲಚ್ಚಿಮಿ ಕಳೆದ ಸಲದ ಎಚ್ಚರಿಕೆಯನ್ನು ನೆನೆದು ಸುಮ್ಮನಾದಳು.
ಮದುಮಗಳು ಮೊದಲಿಗಿಂತ ದಪ್ಪ ಆಗಿದ್ದಾಳಾ,ಕೆಲಸ ಮಾಡುತ್ತಾಳಾ , ಮನೆಯಲ್ಲಿ ದುಬಾರಿ ಬಟ್ಟೆ ಧರಿಸುತ್ತಾಳಾ ಎಂಬೆಲ್ಲ ಅವಳ ಕೂತೂಹಲ ಮಣ್ಣಾಯಿತು.
ಸೋಮವಾರದಂದು ತವರು ಮನೆಗೆ ಹೋಗುವ ಸಂಭ್ರಮದಲ್ಲಿ ಇದ್ದಳು ಮೈತ್ರಿ. ಬೆಂಗಳೂರಿಂದ ಬರುವಾಗ ಮನೆಯವರಿಗೆ ತಂದಿದ್ದ ವಸ್ತುಗಳನ್ನು ತೆಗೆದುಕೊಂಡು ಬೆಳ್ಳಂಬೆಳಗ್ಗೆ ಹೊರಟರು. ಮನೆ ತಲುಪುತ್ತಿದ್ದಂತೆ ಅಜ್ಜ ಹೊರಗಿನ ಜಗಲಿಯಲ್ಲಿ ಕಾದುಕುಳಿತಿದ್ದರು. ನಗುನಗುತ್ತಾ ಬರಮಾಡಿಕೊಂಡ ಅಜ್ಜನ ಮುಖದಲ್ಲಿ ಪುಳ್ಳಿಯಲ್ಲಿ ಮಾತನಾಡದೆ ಎಷ್ಟು ಸಮಯವಾಯಿತು ಕಾತರವಿತ್ತು. ಅಜ್ಜಿ ಹೊರಗೆ ಬಂದವರೆ ".ಪುಳ್ಳೀ..ಕಂಪ್ಯೂಟರ್ ನೋಡಿ ನಿನ್ನ ಕಣ್ಣಸುತ್ತ ಕಪ್ಪಾಗಿದೆಯಲ್ಲ" ಎಂದು ರಾಗ ಎಳೆದಾಗ..
"ಅಡ್ಡಿಯಿಲ್ಲ ಅಜ್ಜಿ.. ಕನ್ನಡಕ ಹಾಕಿಕೊಳ್ಳದಿದ್ದರೂ ಇಂತಹ ಸೂಕ್ಷ್ಮಗಳನ್ನು ಗುರುತಿಸುತ್ತಾರೆ. "ಅಂದುಕೊಂಡು ನಕ್ಕಳು. ಮಂಗಳಮ್ಮನಿಗೆ ಮಗಳು ಅಳಿಯನಿಗೆ ಬೇಕು ಬೇಕಾದಂತೆ ಅಡುಗೆ ಮಾಡುವ ಸಂಭ್ರಮ. ಮಗಳು ಬರುವ ಮುನ್ನವೇ ಅವಳಿಗೆ ಏನು ತಿನ್ನಬೇಕು ಆಸೆಯಾಗಿದೆ ಕೇಳಿಕೊಂಡು ತಯಾರುಮಾಡುವ ಆಲೋಚನೆಯಲ್ಲಿದ್ದರು. ಉದ್ದಿನ ಚಕ್ಕುಲಿ,ಖಾರಕಡ್ಡಿ,ಉಂಡಲ ಕಾಳು, ಬಾಳೆಹಣ್ಣಿನ ಹಲ್ವಾ ಮಾಡಿಟ್ಟಿದ್ದರು. ಮಹೇಶ ಅಕ್ಕನಿಗೆ.." ನಿಮ್ಮ ಹೆಸರಿನಲ್ಲಿ ನಮಗೂ ರುಚಿಕರ ಅಡುಗೆ ಸೌಭಾಗ್ಯ.. ಹೀಗೆ ಆಗಾಗ ಬರುತ್ತಿರಿ ಅಕ್ಕ..." ಎಂದು ಅಕ್ಕನಿಗೆ ಕಿಚಾಯಿಸಿದ.
ಅಪ್ಪ ಭಾಸ್ಕರ ಶಾಸ್ತ್ರಿಗಳು ಮಗಳ ಉದ್ಯೋಗ ,ಪೇ ಸ್ಕೇಲ್ ,ಸಹೋದ್ಯೋಗಿಗಳ ಬಗ್ಗೆ ವಿಚಾರಿಸಿಕೊಂಡರು.ಅಳಿಯನಲ್ಲಿ ಮಹೇಶನ ಮುಂದಿನ ವಿದ್ಯಾಭ್ಯಾಸಕ್ಕೆ ಸಲಹೆಗಳನ್ನು ಕೇಳಿದರು.ನಾನಾ ಕೋರ್ಸ್ ಗಳ, ಫೀಸ್, ಕಾಲೇಜು,ಹಾಸ್ಟೆಲ್... ಬಗ್ಗೆ ಚರ್ಚಿಸಿದರು.ಮಂಗಳವಾರ ಬೆಳಗ್ಗೆ ಭಾಸ್ಕರ ಶಾಸ್ತ್ರಿಗಳು,ಮಂಗಳಮ್ಮ, ಕಿಶನ್ ಮೈತ್ರಿ ಮಹೇಶ್ ಎಲ್ಲರೂ ಗ್ರಾಮ ದೇವಿ ಶ್ರೀ ರಾಜರಾಜೇಶ್ವರಿಯ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಅಲ್ಲಿಂದ ಹೊರಬರುತ್ತಿದ್ದಂತೆ ಬಿಳಿ ಬಣ್ಣದ ಗೋವಿನ ಕೆಚ್ಚಲಿನಿಂದ ಅದರ ಪುಟ್ಟ ಬಿಳಿ ಕಪ್ಪು ಬಣ್ಣದ ಕರು ಹಾಲುಕುಡಿಯುತ್ತಿತ್ತು.
ದೇವಳದ ಸಮೀಪದಲ್ಲಿದ್ದ ಮನೆಯವರು ತಮ್ಮ
ದನದ ಹಾಲು ಹಿಂಡಿ ಮೇಯಲು ಬಿಟ್ಟಿದ್ದರು.ಮಂಗಳಮ್ಮ ಮಗಳು ಅಳಿಯನಲ್ಲಿ ತಮ್ಮ ಕೈಯಲ್ಲಿದ್ದ ಬಾಳೆಹಣ್ಣುಗಳನ್ನು ಕೊಟ್ಟು "ಗೋವಿಗೆ ತಿನಿಸಿ"ಎಂದರು.ಇಬ್ಬರೂ ಬಾಳೆಹಣ್ಣುಗಳನ್ನು ಗೋವಿಗೂ ಕರುವಿಗೂ ತಿನಿಸಿ ಅವುಗಳ ಮೈದಡವಿದರು.ಮನೆಗೆ ಬಂದಾಗ ಬೇಯಲು ಇಟ್ಟು ಹೋಗಿದ್ದ ಇಡ್ಲಿ ಬೆಂದಿತ್ತು.ಮಂಗಳಮ್ಮ ತೆಂಗಿನಕಾಯಿ ತುರಿದು,ಬಾಳೆಹಣ್ಣು ತುಂಡುಗಳನ್ನಾಗಿ ಮಾಡಿಟ್ಟು ಹೋಗಿದ್ದರು.ಅಜ್ಜಿ ಮೆಂತೆ ಕೊದಿಲು, ಬಾಳೆಹಣ್ಣಿನ ರಸಾಯನ ಸಿದ್ಧಪಡಿಸಿದ್ದರು.ಅಜ್ಜಿ,ಮಂಗಳಮ್ಮ ಬಡಿಸಿದರು.ಎಲ್ಲರೂ ಸವಿದರು.
ಮಧ್ಯಾಹ್ನ ವಿಶೇಷವಾಗಿ ಅತಿರಸ ತಯಾರಿಸಿದ್ದರು ಅಜ್ಜಿ.ಮಂಗಳಮ್ಮ ಬೆಳೆದ ಹಲಸಿನ ಕಾಯಿಯ ಪಲ್ಯ,ದೀಗುಜ್ಜೆ ಸಾಂಬಾರ್,
ಹಲಸಿನ ಹಣ್ಣಿನ ಪಾಯಸ ತಯಾರಿಸಿದ್ದರೆ ಮಹೇಶ್ ಅಕ್ಕ ಭಾವನಿಗೆಂದು ಮಾವಿನ ಹಣ್ಣಿನ ಐಸ್ ಕ್ರೀಮ್ ತಯಾರಿಸಿದ್ದ.ಮೈತ್ರಿಯೂ ಸಹಕರಿಸಿದಳು..ಅಜ್ಜ ಕಿಶನ್ ಬಳಿ ಕುಳಿತು ಯೋಗಕ್ಷೇಮ ವಿಚಾರಿಸಿ ಕೊಂಡರು.ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲ ಬಹಳವಿತ್ತು ಅವರಿಗೆ.
ಸಂಜೆ ಅಲ್ಲಿಂದ ಹೊರಟು ಕಿಶನ್ ಮನೆ ಕುಂಪೆ ಶಂಕರ ನಿಲಯಕ್ಕೆ ತಲುಪಿದರು. ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿದ್ದರು.. ಈ ಬಾರಿ ಮಮತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು.
*******
ಕೇಶವ ಅತ್ತೆ ಮಾವನಲ್ಲಿ ಜಗಳ ಮಾಡಿಕೊಂಡು ಬಂದವನು ಗೆಳೆಯರ ಸಹಾಯ ಪಡೆದು ಪತ್ನಿಯೊಂದಿಗೆ ಬದುಕುತ್ತಿದ್ದ. ಗೆಳೆಯರ ಮನೆಯಲ್ಲಿ ಒಂದು ರೂಮನ್ನು ತಾನು ಪಡೆದುಕೊಂಡು ಪುಟ್ಟ ಸ್ಟವ್ ಇಟ್ಟುಕೊಂಡು ಅಡುಗೆ ಮಾಡುತ್ತಿದ್ದರು. ತಮ್ಮದೇ ಆದ ಬಾಡಿಗೆ ಮನೆ ಮಾಡಿಕೊಳ್ಳಲು ಒಂದು ತಿಂಗಳು ಕಳೆಯಲಿ.. ಕೈಯಲ್ಲಿ ಸ್ವಲ್ಪ ಸಂಪಾದನೆ ಆಗಲಿ ಎಂದು ಕಾಯುತ್ತಿದ್ದರು. ವಿಶಾಲವಾದ ಮನೆಯಲ್ಲಿ ಬೆಳೆದ ಸೌಜನ್ಯಳಿಗೆ ಇದು ಬಹಳ ಕಿರಿಕಿರಿ ಅನಿಸುತ್ತಿತ್ತು. ಆಕೆಯ ಕಿರಿಕಿರಿಯನ್ನು ಗಮನಿಸಿದರೂ ಕೇಶವನಿಗೆ ಇದಲ್ಲದೆ ಬೇರೆ ದಾರಿ ಇರಲಿಲ್ಲ. ಸೌಜನ್ಯ ಭರತನಾಟ್ಯ ಪ್ರೋಗ್ರಾಮ್, ಹಾಡುಗಾರಿಕೆಯ ಅವಕಾಶ ಇದೆ ಎಂದು ಗೊತ್ತಾದರೆ ಸೀದಾ ಹೊರಟು ಬಿಡುತ್ತಿದ್ದಳು. ಅಷ್ಟಾದರೂ ಸಂಪಾದನೆ ಆಗಲಿ ಎಂದು. ಎಲ್ಲದಕ್ಕೂ ಪತಿಯ ಅಲ್ಪಸ್ವಲ್ಪ ಸಂಪಾದನೆ ಎಲ್ಲಿ ಸಾಕಾಗುತ್ತದೆ...? ಎಂಬುದು ಅವಳ ವಾದ.ಸಂಪೂರ್ಣವಾಗಿ ನಿರಾಕರಿಸಲು ಕೇಶವನಿಗೂ ಮನಸ್ಸಾಗಲಿಲ್ಲ. ತಡರಾತ್ರಿ ಅವಳನ್ನು ವಾಪಾಸ್ ಕರೆದುಕೊಂಡು ಬರಲು ಕೇಶವ ತನ್ನ ಗೆಳೆಯರ ಬೈಕನ್ನು ಎರವಲು ಪಡೆಯುತ್ತಿದ್ದ.
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
26-06-2020.
ಮೈತ್ರಿಗೆ ಕೆಲಸ ಸಿಕ್ಕಿತು...👏👏
ReplyDeleteಸ್ವಂತ ಕಾಲಮೇಲೆ ನಿಂತ ಖುಷಿ...
Deleteಧನ್ಯವಾದಗಳು 💐🙏