ಜೀವನ ಮೈತ್ರಿ ಭಾಗ ೯೬
ಮಮತಮ್ಮ ಬೆಂಗಳೂರಿನ ಮಗನ ಮನೆಗೆ ಬಂದು ಬಹಳ ಖುಷಿಯಾದರು.ಹಳ್ಳಿಯಂತೆ ಮಣ್ಣನ್ನು ಮೆಟ್ಟಬೇಕು ಅಂತಿಲ್ಲ, ಅಲ್ಲಿ ಇಲ್ಲಿ ಹುಳು ಹುಪ್ಪಟೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಅಂದವಾದ ನಯವಾದ ಗ್ರಾನೈಟ್ ನೆಲ. ಗುಡಿಸಿ ಒರೆಸುವುದು ಬಹಳ ಸುಲಭ. ಸಾರಣೆಯ ನೆಲದಷ್ಟು ಒರಟಾಗಿ ಇಲ್ಲದಿದ್ದುದರಿಂದ ಅತ್ತಿಂದಿತ್ತ ಓಡಾಡುವಾಗ ಬಹಳ ಜಾಗರೂಕರಾಗಿರಬೇಕು.ಬಾಲ್ಕನಿಯಲ್ಲಿ ನಿಂತರೆ ವಿಶಾಲವಾಗಿ ಸುತ್ತಮುತ್ತಲಿನ ಪ್ರದೇಶಗಳು ಎಲ್ಲವೂ ಕಾಣಿಸುತ್ತವೆ.ಸಂಜೆಯಾದರೆ ಹಲವಾರು ಜನ ವಾಕಿಂಗ್ ಮಾಡುವುದು, ಮಕ್ಕಳು ಆಟವಾಡುವುದು ಎಲ್ಲಾ ನೋಡಲು ಮಮತಮ್ಮನಿಗೆ ಬಹಳ ಹಿತವಾಗಿತ್ತು.
ಅಡುಗೆಮನೆ ಉಸ್ತುವಾರಿಯನ್ನು ಮಮತಮ್ಮ ನಿರ್ವಹಿಸಿದರು. ಮಗ-ಸೊಸೆಗೆ ಇಷ್ಟವಾಗುವ ತಿಂಡಿಗಳನ್ನು ಮಾಡಿದರು. "ನಾನು ಆಫೀಸಿನಿಂದ ಬಂದ ಮೇಲೆ ಮಾಡುತ್ತೇನೆ ಅತ್ತೆ" ಎಂದು ಹೇಳಿ ಮೈತ್ರಿ ಬೆಳಗ್ಗೆ ಹೊರಡುತ್ತಿದ್ದಳು."ನಾನು ಮಾಡಿದರೆ ಏನು..? ನಿನಗೂ ಸ್ವಲ್ಪ ಉಪಕಾರ " ಎಂದು ನಯವಾಗಿಯೇ ಸೊಸೆಗೆ ಹೇಳಿ ತಾನೇ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನೆರೆಮನೆಯ ಶೈನಿ ಒಂದು ದಿನ ಸಂಜೆ ಇವರನ್ನು ನೋಡಿ ಮಾತಿಗೆಳೆದಳು.ಮಾತನಾಡುತ್ತಾ ಆತ್ಮೀಯರಾದರು ಇಬ್ಬರೂ." ನಿಮ್ಮ ಸೊಸೆಗೆ ಏನು ಕೊಬ್ಬು .. ಆಕೆ ಎಲ್ಲಾ ಕೆಲಸವನ್ನು ಗಂಡನಲ್ಲಿ ಮಾಡಿಸುತ್ತಾಳೆ. ಕೈತುಂಬಾ ಸಂಬಳ ಬರುತ್ತೆ ಎಂದು ಅಹಂಕಾರ ಅವಳಿಗೆ. "ಎಂದು ಅತ್ತೆಯ ಕಿವಿತುಂಬಿಸಿದಳು.
"ಇಲ್ಲ.. ಹಾಗೇನಿಲ್ಲ ..ಅವಳು ಬಹಳಷ್ಟು ಕೆಲಸಗಳನ್ನು ಮಾಡ್ತಾಳೆ.ಅಚ್ಚುಕಟ್ಟಾಗಿ ಕೆಲಸ ಮಾಡುವ ಕಲೆ ಆಕೆಗೆ ಒಲಿದಿದೆ.." ಎಂದು ಹೇಳಿ ಆಕೆಯ ಬಾಯಿಮುಚ್ಚಿಸಿ "ನನಗೀಗ ಸ್ವಲ್ಪ ಕೆಲಸವಿದೆ "ಎಂದು ಒಳಗೆ ಬಂದರು.
ಸಂಜೆ ಬಂದು ಮಗನಲ್ಲಿ ವಿಷಯ ಹೇಳಿಕೊಂಡಾಗ ಮಗನು "ಆಕೆಯ ಬಗ್ಗೆ ಎಚ್ಚರದಿಂದಿರಬೇಕಾಗಿದೆ.ಆಕೆ ಮೈತ್ರಿಯ ತಲೆಯು ಹಾಳು ಮಾಡಿಬಿಡುತ್ತಾಳೆ" ಎಂದ.
"ಇನ್ನೊಬ್ಬರ ಮಾತನ್ನು ಕೇಳಿದರೆ ಕಷ್ಟ."
"ಹೌದಮ್ಮ.. ನಾನು ಮೈತ್ರಿಗೆ ಅದನ್ನೇ ಹೇಳುತ್ತಿದ್ದೇನೆ."
"ನೋಡಿ ಯಾರು ಏನೇ ಅನ್ನಲಿ .. ನಾನು ಹೊರಗೆ ದುಡಿಯುವುದು ಬೇಡ ಅನ್ನಲ್ಲ.. ಆದರೆ ಮಗು ಮಾತ್ರ ಈಗ ಬೇಡ ಎನ್ನುವ ನಿರ್ಧಾರ ಮಾಡಬೇಡಿ.."
ಅಮ್ಮನ ಮಾತನ್ನು ಕೇಳಿ ನಸುನಕ್ಕು ತಲೆಯಲ್ಲಾಡಿಸಿದ ಕಿಶನ್
ಅಮ್ಮ ಮುಂದುವರೆಸುತ್ತಾ "ವಿದ್ಯಾಭ್ಯಾಸ, ಮದುವೆ, ಸಂತಾನ- ಇವೆಲ್ಲ ಯಾವಾಗ ಆಗಬೇಕೋ, ಆಗಲೇ ಆದರೆ ಚಂದ. ಮುಂದೆ ಹಾಕುತ್ತಾ ಹೋದರೆ ನಮಗೆ ಬೇಕೆಂದಾಗ ಅವುಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ.ಆದ್ದರಿಂದ ಈ ವಿಚಾರದಲ್ಲಿ ಮಾತ್ರ ಉದ್ಯೋಗದ ನೆಪ ಹಿಡಿದು ಮುಂದೆ ಹಾಕಬೇಡಿ."
ಎಂದಾಗ ಮೈತ್ರಿಯೂ ಅಲ್ಲಿಗೆ ಆಗಮಿಸಿದಳು. ಅವಳ ಕಣ್ಣಲ್ಲಿ ಕಣ್ಣಿಟ್ಟು ನಕ್ಕ ಕಿಶನ್ "ಏನು.. ಗೊತ್ತಾಯ್ತಾ ?"ಅಂದ.
"ನನಗೇನು ಗೊತ್ತು ..ನೀವಿಬ್ರು ಏನು ಮಾತಾಡಿದ್ದು ಅಂತ.."ಎಂದು ಕಣ್ಣು ಮಿಟುಕಿಸಿದಳು.
"ಅದೇ ..ಆದಷ್ಟು ಬೇಗ ಮುಂದಿನ ಪ್ಲಾನ್ ಮಾಡಬೇಕಂತೆ." ಎಂದ ಆಕೆಯ ಹೆಗಲ ಮೇಲೆ ಕೈಯ್ಯಿರಿಸಿ ಅವಳ ಮೊಗವನ್ನು ದಿಟ್ಟಿಸುತ್ತಾ..
"ಈಗಲೇನಾ ..ಇಷ್ಟು ಬೇಗ.ಸ್ವಲ್ಪ ಸಮಯ ನಾನು ದುಡಿದು ಒಂದು ಚೂರು ಕೈಯಲ್ಲಿ ದುಡ್ಡು ಮಾಡಿಕೊಳ್ಳಬೇಕು."ಎನ್ನುತ್ತಾ ಕಣ್ಣರಳಿಸಿದಳು.
"ದುಡ್ಡು ಆಮೇಲಾದರೂ ಆಗುತ್ತೆ ..ಆದರೆ ಇದೆಲ್ಲಾ ಸಮಯ ಮೀರಿದರೆ ಮತ್ತೆ ಕಷ್ಟ. ನನಗೆ ಆದಷ್ಟು ಬೇಗ ಅಜ್ಜಿಯ ಪಟ್ಟ ಕೊಟ್ಟುಬಿಡಿ..."
ಎಂದಾಗ ಮೈತ್ರಿಯ ಮುಖ ಕೆಂಪೇರಿತ್ತು .ರಂಗೇರಿದ ಗುಳಿಕೆನ್ನೆಯ ಚೆಲುವೆಯನ್ನು ನೋಡಿ ಸಂತಸ ಪಟ್ಟ ಕಿಶನ್...
*******
ಕೇಶವನಿಗೆ ಅಪ್ಪ ಅಮ್ಮನ ನೆನಪು ಬಂದು ಆಗಾಗ ಕಣ್ಣಂಚು ಒದ್ದೆಯಾಗುತ್ತಿತ್ತು. ಆದರೆ ಈ ಪರಿಸ್ಥಿತಿಯಲ್ಲಿ ಅಪ್ಪ ಅಮ್ಮನಲ್ಲಿ ಮಾತನಾಡಲು ಮುಜುಗರಪಡುತ್ತಿದ್ದ. ಮಾತನಾಡಿದರೆ ತನ್ನ ಸ್ಥಿತಿಗತಿಯನ್ನು ಹೇಳದೆ ಅಡಗಿಸಿಡಲು ಸಾಧ್ಯವಿಲ್ಲ. ಅಮ್ಮನಂತೂ ಕೇಳಿಯೇ ಕೇಳುತ್ತಾರೆ. ಆಗ ನಾನು ಕೂಡ ಭಾವುಕನಾಗಬಹುದು ಎಂದು ಯೋಚಿಸುತ್ತಿದ್ದ..ಒಂದು ತಿಂಗಳಲ್ಲಿ ನಮ್ಮದೇ ಆದ ಪುಟ್ಟ ಬಾಡಿಗೆ ಮನೆ ಮಾಡಿಕೊಂಡು,ನಂತರ ನಾನೇ ಕರೆ ಮಾಡುತ್ತೇನೆ ಎಂದು ನಿರ್ಧರಿಸಿದ..
ಕೇಶವನಿಗೆ ಎರಡನೇ ತಿಂಗಳ ಸಂಬಳ ಬಂದಿತ್ತು. ಕೆಲವೇ ಸಾವಿರ ಸಂಬಳವನ್ನು ಮತ್ತೂ ಮತ್ತೂ ಎಣಿಸಿ ಕಣ್ಣಿಗೊತ್ತಿಕೊಂಡನು. ಸೌಜನ್ಯ ತಾನು ದುಡಿದ ಕೆಲವು ಸಾವಿರವನ್ನು ಅವನ ಜೇಬಿನಲ್ಲಿಟ್ಟಳು. ಮೊದಲು ತಿಂಗಳಿಗೆ ಇಷ್ಟು ಹಣವನ್ನು ತನ್ನ ಮೇಕಪ್ , ಡ್ರೆಸ್ ಎಂದು ವಿನಿಯೋಗಿಸುತ್ತಿದ್ದವಳು ಈಗ ಉಳಿತಾಯದ ಪಾಠವನ್ನು ಕಲಿತಿದ್ದಾಳೆ. ಜೀವನವೇ ಕಲಿಸಿದೆ ಅಂದರೆ ತಪ್ಪಾಗಲಾರದು.ಇಬ್ಬರು ಸೇರಿ ಬಾಡಿಗೆ ಮನೆ ಹುಡುಕಾಟದಲ್ಲಿ ತೊಡಗಿದರು.
ಅದೊಂದು ಪುಟ್ಟದಾದ ಓಣಿ.ಓಣಿಯ ಇಕ್ಕೆಲಗಳಲ್ಲಿ ಹಳೆಯದಾದ ಮನೆಗಳು. ಕಾಂಪೌಂಡ್ ರಕ್ಷಣೆ ಇಲ್ಲದ ಸಾಲು ಮನೆಗಳು.ಅತ್ತಿತ್ತ ಓಡಾಡುವ ಮಂದಿ.ಓಣಿಯೇ ಮಕ್ಕಳ ಆಟದ ಮೈದಾನ..ಒಂದು ಸಾಧಾರಣವಾದ ,ಹಳೆಯ ತಾರಸಿಮನೆ. ಒಂದು ಸಣ್ಣ ಹಾಲ್ , ಒಂದು ಬೆಡ್ ರೂಮ್,ಗೂಡಿನಂತಿರುವ ಅಡುಗೆ ಕೋಣೆ, ವಾಶ್ ರೂಮ್. ಅದಕ್ಕೆ 5000 ರೂಪಾಯಿ ಬಾಡಿಗೆ ಕೊಟ್ಟು ಕೇಶವ ಸೌಜನ್ಯ ವಾಸಿಸಲು ನಿರ್ಧರಿಸಿದರು . ಇಂತಹ ಓಣಿಯೆಂದರೆ ಅಸಹ್ಯ ಪಡುತ್ತಿದ್ದ ಸೌಜನ್ಯಳಿಗೆ ಈಗ ಅನಿವಾರ್ಯವಾಗಿತ್ತು. ಕೇಶವನ ಅಮ್ಮ ಕೊಟ್ಟ ದುಡ್ಡು ಉಪಯೋಗಕ್ಕೆ ಬಂತು.
ಒಂದು ಭಾನುವಾರ ಇಬ್ಬರು ಸೇರಿ ಆ ಮನೆಯನ್ನೆಲ್ಲ ಸ್ವಚ್ಛಗೊಳಿಸಿದರು. ಬರೀ ಧೂಳು ಕಸವೇ ತುಂಬಿದ ಮನೆಯನ್ನು ಸ್ವಚ್ಛಗೊಳಿಸಲು ಒಂದು ದಿನ ಬೇಕಾಯಿತು. ಒಂದು ಶುಭ ಮುಹೂರ್ತದಲ್ಲಿ ಹಾಲುಕ್ಕಿಸಿ ಮನೆಯೊಳಗೆ ಪ್ರವೇಶಿಸಿದರು . ಮಡದಿಯ ಮುಖವನ್ನು ನೋಡುತ್ತಾ "ಕಷ್ಟಪಟ್ಟು ದುಡಿದು ಬಾಡಿಗೆ ಮನೆ ಮಾಡಿಕೊಂಡೆವು.ಹೀಗೇ ಮುಂದೆ ಒಂದೊಂದೇ ಸೌಕರ್ಯಗಳನ್ನು ಮಾಡಿಕೊಳ್ಳೋಣ "ಎಂದು ಹೇಳಿ ಮಡದಿಯ ಮೇಲೆ ಪ್ರೀತಿಯ ಮಳೆಗೆರೆದ.ಗೆಳೆಯನ ಮನೆಯಲ್ಲಿ ಒಂದು ರೂಮಿನಲ್ಲಿ ಇಕ್ಕಟ್ಟಿನಲ್ಲಿ ಬದುಕುತ್ತಿದ್ದವರು ಇಂದು ಸ್ವಚ್ಛಂದವಾಗಿ ಹಾರಾಡುವ ನಲ್ಮೆಯ ಜೋಡಿ ಪಕ್ಷಿಗಳಂತಾದರು.
ಅದೇ ದಿನ ಸಂಜೆ ಕೇಶವ ಅಮ್ಮನಿಗೆ ಕರೆ ಮಾಡಿದ. ಮಗನ ಒಂದು ಕರೆಗಾಗಿ ... ಅಮ್ಮಾ ಎಂಬ ಸವಿನುಡಿಗಾಗಿ.... ಕಾದು ಕಾದು ರೋಸಿಹೋಗಿದ್ದ ಸುಮಾ ಮಗನ ದನಿ ಕೇಳಿ ...ಮಾತಿಗಿಂತ ಅತ್ತದ್ದೇ ಹೆಚ್ಚು.
ಬೆಂಗಳೂರಿನ ಬದುಕಿನಲ್ಲಿ ಒಂದೊಂದೇ ಭದ್ರವಾದ ಹೆಜ್ಜೆಯಿಡುತ್ತಾ ಸಾಗುತ್ತಿದ್ದ ಕೇಶವ ಸೌಜನ್ಯ ಇದ್ದುದರಲ್ಲಿ ಸಂತೃಪ್ತಿಯಿಂದ ಬದುಕಲು ಕಲಿತರು.ಇಬ್ಬರ ಅನ್ಯೋನ್ಯವಾದ ಪ್ರೇಮದ ನಡುವೆ ಸೌಕರ್ಯಗಳ ಕೊರತೆ ಅಡ್ಡಿಯಾಗಲಿಲ್ಲ.
*******
ಶಶಿ ಮತ್ತು ಶಂಕರ ರಾಯರು ಮಗ ಮುರಳಿಯ ಮದುವೆ ವಿಚಾರದಲ್ಲಿ ನಿರತರಾಗಿದ್ದರು. ಮುರಳಿಗೆ ತನ್ನ ಮದುವೆಯಾಗುವ ಹುಡುಗಿ ತನಗೆ ಸರಿಸಮವಾದ ಉದ್ಯೋಗ ಹೊಂದಿದ್ದಾಳೆ ಎಂಬುದು ಬಹಳ ಖುಷಿಯ ವಿಚಾರವಾಗಿತ್ತು
. ನಿಶ್ಚಿತಾರ್ಥ ಮಹತಿಯ ಮನೆಯಲ್ಲೇ ನಡೆಯುವುದೆಂದು ನಿಶ್ಚಯವಾಯಿತು.ಶಶಿ ಹಾಗೂ ಶಂಕರ ರಾಯರು ತಮ್ಮ ಕಡೆಯಿಂದ ಕರೆದುಕೊಂಡು ಹೋಗುವ ನೆಂಟರಿಗೆಲ್ಲಾ ಕರೆ ಮಾಡಿ ವಿಷಯ ತಿಳಿಸಿದರು.ಶಾಸ್ತ್ರಿ ನಿವಾಸದಿಂದ ಒಬ್ಬರನ್ನು ಬನ್ನಿ ಎಂದಿದ್ದರು. ಆದರೆ ಭಾಸ್ಕರ್ ಶಾಸ್ತ್ರಿಗಳು ಮಾತ್ರ ಉದಾಸೀನ ಮಾಡಿದರು.ಮಹಾಲಕ್ಷ್ಮಿಅಮ್ಮನಿಗೆ ತಾನಾದರೂ ಹೋಗಬೇಕು ಎಂಬ ಆಸೆ.ಗಂಡ ಮಗ ಒಪ್ಪಿಗೆಯಿತ್ತರು. ಶಶಿಯಲ್ಲಿ ಹೇಳಿಯೂ ಆಯ್ತು. ಮಹಾಲಕ್ಷ್ಮಿ ಅಮ್ಮ ಹೋಗುವುದೆಂದು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು.ಇನ್ನು ಎರಡು ದಿನ ಇರುವಾಗ ಶಶಿ ಕರೆಮಾಡಿ "ವಾಹನದಲ್ಲಿ ಜನ ಭರ್ತಿಯಾಗಿದೆ ,ಸೀಟು ಉಳಿದಿಲ್ಲ ,ಅಮ್ಮ ನೀನು ಮದುವೆಗೆ ಬಾ.." ಎಂದಾಗ ಅಮ್ಮನಿಗೆ ಬಹಳ ದುಃಖವಾಯಿತು.ನನಗೆ ಒಬ್ಬಳಿಗೆ ಒಂದು ಸೀಟು ಇಲ್ಲವೇ ..? ಎಂದು ಮನದಲ್ಲಿ ಕೊರಗಿ ಕಣ್ತುಂಬಿಕೊಂಡರು.
ಸೀದಾ ಒಳಗೆ ಹೋಗಿ ಅಡುಗೆಮನೆಯಲ್ಲಿದ್ದ ಸೊಸೆ ಮಂಗಳಮ್ಮನಲ್ಲಿ ವಿಷಯ ಹೇಳಿ ಕಣ್ಣಂಚಿನಿಂದ ನೀರು ಒರೆಸಿದರು. "ಏನು ಮಾಡೋದು ಅತ್ತೆ .ಅವರ ಮನೆಯ ವಿಷಯದಲ್ಲಿ ಅವರು ನಿರ್ಧರಿಸಿದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಬೇಸರಿಸಬೇಡಿ ಮದುವೆಗೆ ಹೋಗೋಣ." ಎಂದು ಅತ್ತೆಯನ್ನು ಸಮಾಧಾನ ಮಾಡಿದರು. ಸಂಜೆ ಬೆಂಗಳೂರಿನಿಂದ ಗಾಯತ್ರಿ ಕರೆ ಮಾಡಿದಾಗ ಅವಳ ಬಳಿ ತಿಳಿಸಿದರು."ಹೋಗಲಿ ಬಿಡಿ ಅತ್ತೆ.. ನೀವು ಅವರ ನಡೆ-ನುಡಿಗೆ ತಲೆಕೆಡಿಸಿಕೊಳ್ಳಬೇಡಿ .ಹೇಗೂ ಬೆಂಗಳೂರಿಗೆ ಹೊರಡುವ ತಯಾರಿ ಮಾಡಿದ್ದೀರಲ್ಲ ...ಭಾನುವಾರ ಮಹೇಶನೊಂದಿಗೆ ಬಂದುಬಿಡಿ. ನಮ್ಮಲ್ಲಿ ಕೆಲವು ದಿನ ಇದ್ದು ,ನಂತರ ಮೈತ್ರಿಯ ಮನೆಗೆ ಭೇಟಿ ನೀಡಿ , ಸಾವಕಾಶವಾಗಿ ಊರಿಗೆ ಹೋಗಬಹುದು. "ಎಂದಾಗ ಮಹಾಲಕ್ಷ್ಮಿ ಅಮ್ಮನಲ್ಲಿ ಮತ್ತೊಮ್ಮೆ ಬೆಂಗಳೂರಿಗೆ ಹೋಗುವ ಆಸೆ ಚಿಗುರಿತು. ಸಂಜೆ ಶಾಲೆಯಿಂದ ಮಗ ಬಂದೊಡನೆ ಎಲ್ಲವನ್ನು ತಿಳಿಸಿದರು ಅಮ್ಮ. ಆಯಾಸಗೊಂಡು ಶಾಲೆಯಿಂದ ಹಿಂದಿರುಗಿದ್ದ ಶಾಸ್ತ್ರಿಗಳಿಗೆ ಕೋಪ ನೆತ್ತಿಗೇರಿತು. "ಎಂತಹ ಬುದ್ಧಿ ಶಶಿಯಕ್ಕನದು.. ಅಮ್ಮನನ್ನು ಕರೆದೊಯ್ಯುತ್ತೇನೆ ಎಂದು ಒಪ್ಪಿ, ನಂತರ ಏಕಾಏಕಿ ಸಾಧ್ಯವಿಲ್ಲ ಎನ್ನುವುದೇ..?" ಎಂದು ಶಶಿಯ ಮೇಲೆ ಹರಿಹಾಯ್ದರು.
ಮಗ ಸಮಾಧಾನಗೊಂಡ ಮೇಲೆ ಮಹಾಲಕ್ಷ್ಮಿ ಅಮ್ಮ ಗಾಯತ್ರಿ ಹೇಳಿದ ವಿಚಾರವನ್ನು ಮಗನು ಮುಂದಿಟ್ಟರು.ಭಾಸ್ಕರ ಶಾಸ್ತ್ರಿಗಳು "ನನ್ನದೇನು ಅಭ್ಯಂತರವಿಲ್ಲ" ಎಂದರು. ಶ್ಯಾಮಶಾಸ್ತ್ರಿಗಳು "ಈಗ ಶಂಕರನ ಮನೆಗೆ ಹೋಗುವುದು ಅಷ್ಟು ಅನಿವಾರ್ಯವೇ..?" ಎಂದು ಪ್ರಶ್ನಿಸಿದರು. ಅವರಿಗೆ ಮಡದಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತಹ ಭಾವನೆ.ಆಗಾಗ ಬೇಕಾದಂತೆ ಕಾಫಿ ಚಹಾ ತಿಂಡಿ ಕೊಡುತ್ತಿದ್ದ ಮಡದಿ ಜೊತೆಯಲ್ಲಿ ಇಲ್ಲದಿದ್ದರೆ ಅಸಮಾಧಾನ. ಇನ್ನೊಮ್ಮೆ ನಾವಿಬ್ಬರೂ ಜೊತೆಯಾಗಿ ಬೆಂಗಳೂರಿಗೆ ಹೋಗೋಣ ಎಂದು ಪುಸಲಾಯಿಸಿದರು.ಆದರೆ ಮಗನ ಒಪ್ಪಿಗೆ ದೊರೆತ ಕಾರಣ ಮಹಾಲಕ್ಷ್ಮಿ ಅಮ್ಮ ಭಾನುವಾರ ಬೆಂಗಳೂರಿಗೆ ಹೋಗಲು ಸಿದ್ಧರಾದರು.
ಮುಂದುವರೆಯುವುದು...
✍️.. ಅನಿತಾ ಜಿ.ಕೆ .ಭಟ್ .
29-06 -2020.
Thumba chennagi moodi baruttide... Heegeye muduvariyaliii
ReplyDeleteಧನ್ಯವಾದಗಳು 💐🙏
Delete