Tuesday, 2 June 2020

ಮಾವಿನಹಣ್ಣಿನ ಪಾಯಸ,ಚಂಡ್ರುಳಿ, ಸಾಂಬಾರ್,ರಸಾಯನ, ಪುಡ್ಡಿಂಗ್



      ಕಾಡು ಮಾವಿನ ಹಣ್ಣನ್ನು ಸವಿದವರಿಗೇ ಗೊತ್ತು ಅದರ ರುಚಿಯ ಗಮ್ಮತ್ತು.ಹುಳಿಯ ಜೊತೆಗೆ ಸಿಹಿ ಬೆರೆತು ನಾಲಿಗೆಯಲ್ಲಿ ನೀರೂರಿಸುವ ತಾಕತ್ತು ಕಾಡು ಮಾವಿನ ಹಣ್ಣಿಗಿದೆ.ಮಾವಿನ ಹಣ್ಣು ತುಂಬ ಬೀಳುವ ಸಮಯದಲ್ಲಿ ಪುಟ್ಟ ಮಕ್ಕಳಂತೂ ಮರದಡಿಯಲ್ಲಿ  ಹಣ್ಣಿಗಾಗಿ ಕಾದು ಕೂರುತ್ತಾರೆ.ಹಣ್ಣು ಬೀಳಿಸುವ ಆಸೆಗೆ ಮರಕ್ಕೆ ಕಲ್ಲೆಸೆದು ಆಟವಾಡಿದ ಬಾಲ್ಯದ ದಿನಗಳು ಮರೆಯಲು ಸಾಧ್ಯವೇ..ಇಲ್ಲವೇ ಇಲ್ಲ..ಅಂತಹ ಕಾಡು ಮಾವಿನ ಹಣ್ಣಿನ ಕೆಲವು ಸವಿರುಚಿಯನ್ನು ನೋಡೋಣ.

ಮಾವಿನ ಹಣ್ಣಿನ ಪಾಯಸ:-


     ಹುಳಿ ಸಿಹಿ ರುಚಿಯಿರುವ ಕಾಟು ಮಾವಿನ ಹಣ್ಣಿನ ಪಾಯಸ ಮಾಡಿದರೆ ಹೇಗೆ ಎಂದು ಆಲೋಚನೆ ಬಂದಿದ್ದೇ ತಡ ಮಾಡೇಬಿಡೋಣ ಎಂದು ಆರಂಭಿಸಿದೆ..ಪಾಯಸ ಬಲು ರುಚಿಯಾಗಿತ್ತು.ಹೇಗೆ ಮಾಡಿದೆ ಅಂತ ನೀವೂ ನೋಡ್ಕೊಳ್ಳಿ..


ಬೇಕಾಗುವ ಸಾಮಾಗ್ರಿಗಳು:-

ಎಂಟು ಕಾಟುಮಾವಿನ ಹಣ್ಣು,
ಎರಡು ಕಪ್ ಹಸಿತೆಂಗಿನಕಾಯಿ ತುರಿ,
ಎರಡು ಕಪ್ ಬೆಲ್ಲ,
ಏಲಕ್ಕಿ,
ಎರಡು ಚಮಚ ಅಕ್ಕಿಹಿಟ್ಟು.

ಮಾಡುವ ವಿಧಾನ :-

      ಮೊದಲು ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಕಿವುಚಿಕೊಳ್ಳಿ. ತಿರುಳು ಗಟ್ಟಿಯಾಗಿದ್ದರೆ ಎರಡೂ ಬದಿ ತುಂಡುಮಾಡಿ ಮಿಕ್ಸಿಯಲ್ಲಿ ರುಬ್ಬಿ ಹಾಕಿ.ತೆಂಗಿನತುರಿಯನ್ನು ನುಣ್ಣಗೆ ರುಬ್ಬಿ ದಪ್ಪ ಹಾಲು ಸೋಸಿಟ್ಟುಕೊಳ್ಳಿ.ಎರಡನೇ ಸಲದ ಹಾಲಿನಲ್ಲಿ ಮಾವಿನ ಹಣ್ಣನ ಮಿಶ್ರಣವನ್ನು ಬೇಯಿಸಿಕೊಳ್ಳಿ..ಬೆಲ್ಲ ಹಾಕಿ.ಬೆಲ್ಲ ಕರಗಿದಾಗ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ತಿರುವಿ.ಕುದಿಯಲು ಆರಂಭವಾದಾಗ ದಪ್ಪ ಕಾಯಿಹಾಲು ಸೇರಿಸಿ. ಪಾಯಸ ಕುದಿಯುತ್ತಿದ್ದಂತೆ ಸ್ಟವ್ ಆರಿಸಿ ಏಲಕ್ಕಿ ಪುಡಿ ಬೆರೆಸಿ.. ಬಿಸಿ ಬಿಸಿ ಮಾವಿನ ಹಣ್ಣಿನ ಪಾಯಸ ಮನೆಮಂದಿಯೊಂದಿಗೆ ಸವಿಯಿರಿ..



ಮಾವಿನಹಣ್ಣಿನ ಚಂಡ್ರುಳಿ:-



ಇದು ಬಹಳ ಹಿಂದಿನಿಂದಲೇ ಬಂದಂತಹ ಅಡುಗೆ.ಕಾಡುಮಾವಿನ ಹಣ್ಣು ತುಂಬಾ ಬೀಳುವಾಗ ಮಾಡುವಂತಹ ಪದಾರ್ಥ.

ಬೇಕಾಗುವ ಸಾಮಗ್ರಿಗಳು:-

ಕಾಡು ಮಾವಿನಹಣ್ಣು , ಉಪ್ಪು, ಬೆಲ್ಲ ಮೆಣಸಿನಪುಡಿ, ಒಗ್ಗರಣೆಯ ಸಾಮಗ್ರಿಗಳು.

ಮಾಡುವ ವಿಧಾನ:-

ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಗೊರಟಿನಿಂದ ರಸವನ್ನು ಹಿಂಡಿ ಕೊಳ್ಳುವುದು.ಗೊರಟು ಮತ್ತು ಸಿಪ್ಪೆಯನ್ನು ಒಮ್ಮೆ ಸ್ವಲ್ಪ ನೀರು ಹಾಕಿ ಕಿವುಚಿ.ಕಿವುಚಿದ ನೀರನ್ನು ಎಷ್ಟು ಬೇಕೋ ಅಷ್ಟು ಸೇರಿಸಿ.ಇದು ಸ್ವಲ್ಪ ಗಟ್ಟಿಯಾಗಿರಬೇಕು.ತುಂಬಾ ನೀರಾಗಿ ಮಾಡಿಕೊಳ್ಳುವುದಲ್ಲ.ನಂತರ ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ,ಮೆಣಸಿನಪುಡಿ ಹಾಕಿ ಕುದಿಸಿ.ಖಾರಕ್ಕೆ ಬೇಕಾದರೆ ಹಸಿಮೆಣಸನ್ನು ಬಳಸಬಹುದು.ಇಂಗಿನ ಒಗ್ಗರಣೆ ನೀಡಿ.ಮಾವಿನಹಣ್ಣಿನ  ಚಂಡ್ರುಳಿ ಸಿದ್ಧ.ಕುಚ್ಚಿಲಕ್ಕಿ ಗಂಜಿ ಜೊತೆಗೆ ಸೂಪರ್.. ‌ದೋಸೆ ಚಪಾತಿಗೂ ಸೇರಿಸಿ ತಿನ್ನಬಹುದು..



ಮಾವಿನ ಹಣ್ಣಿನ ಸಾಂಬಾರ್:-


ಬೇಕಾಗುವ ಸಾಮಗ್ರಿಗಳು:-


ಮಾವಿನ ಹಣ್ಣು ಎಂಟು,ಅರ್ಧ ತೆಂಗಿನ ಕಾಯಿಯ ತುರಿ, ಉಪ್ಪು, ಬೆಲ್ಲ ,3 ಕೆಂಪು ಮೆಣಸು , ಒಂದು ಚಮಚ ಉದ್ದಿನ ಬೇಳೆ,2 ಚಮಚ ಕೊತ್ತಂಬರಿ ಬೀಜ, ಕಾಲು ಚಮಚ ಮೆಂತೆ, ಇಂಗು, ಒಗ್ಗರಣೆಯ ಸಾಮಗ್ರಿಗಳು.


ಮಾಡುವ ವಿಧಾನ:-


ಮಾವಿನ ಹಣ್ಣಿನ ಸಿಪ್ಪೆ ಸುಲಿದು, ಸಿಪ್ಪೆಯನ್ನು ನೀರಿನಲ್ಲಿ ಕಿವುಚಿ , ಮಾವಿನ ಹಣ್ಣಿನೊಂದಿಗೆ ಪಾತ್ರೆಯಲ್ಲಿ ಕುದಿಸಿ. ಉಪ್ಪು ಬೆಲ್ಲ ಸೇರಿಸಿ. ಮಸಾಲೆಗೆ ಕೊತ್ತಂಬರಿ ಬೀಜ, ಉದ್ದಿನ ಬೇಳೆ, ಕೆಂಪು ಮೆಣಸು, ಇಂಗು, ಎಣ್ಣೆ ಹಾಕಿ ಕೆಂಪಗೆ ಹುರಿದು, ತೆಂಗಿನ ತುರಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ. ಈ ಮಸಾಲೆಯನ್ನು ಬೆಂದ ಮಾವಿನ ಹಣ್ಣಿನೊಂದಿಗೆ ಸೇರಿಸಿ, ಕುದಿಸಿ, ಒಗ್ಗರಣೆ ಕೊಡಿ.. ಬಿಸಿ ಬಿಸಿ ಮಾವಿನ ಹಣ್ಣಿನ ಸಾಂಬಾರು ಅನ್ನದ ಜತೆ ಸವಿಯಿರಿ.


ಮಾವಿನ ಹಣ್ಣಿನ ರಸಾಯನ:-


   ಮಾವಿನಹಣ್ಣಿನ ತಿರುಳನ್ನು ತುಂಡುಗಳನ್ನಾಗಿ ಮಾಡಿ ರಸಾಯನ ತಯಾರಿಸುವುದು ಒಂದು ವಿಧಾನವಾದರೆ ,ಇದು ತಿರುಳನ್ನು ಕಡೆದು ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು:-

ಮಾವಿನ ಹಣ್ಣಿನ ರಸ ಎರಡು ಕಪ್,ಅರ್ಧ ಕಪ್ ಬೆಲ್ಲ ಅರ್ಧ ಕಪ್ ಸಕ್ಕರೆ,ಏಲಕ್ಕಿ ಪುಡಿ, ಎಳ್ಳು, ತೆಂಗಿನಕಾಯಿ ಹಾಲು ಎರಡು ಕಪ್, ಐಸ್ಕ್ರೀಮ್ ಮಿಕ್ಸ್ ಪೌಡರ್.

ಮಾಡುವ ವಿಧಾನ:-

ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ತಿರುಳನ್ನು ತುಂಡು ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.ಈ ಮಿಶ್ರಣಕ್ಕೆ ತೆಂಗಿನಕಾಯಿ ಹಾಲು ಮತ್ತು ಬೆಲ್ಲ ,ಸಕ್ಕರೆ ,ಏಲಕ್ಕಿ ಪುಡಿ ಸೇರಿಸಿ.ಸ್ವಲ್ಪ ಐಸ್ಕ್ರೀಮ್ ಮಿಕ್ಸ್ ಸೇರಿಸಿ.ಹಾಗೆಯೇ ಸರ್ವ್ ಮಾಡಬಹುದು ಅಥವಾ ಕೂಲ್ ಮಾಡಿ ಸರ್ವ್ ಮಾಡಿ.

ಮಾವಿನ ಹಣ್ಣಿನ ಪುಡ್ಡಿಂಗ್/ಕೇಸರಿಬಾತ್


        ಪೈನಾಪಲ್ ಪುಡ್ಡಿಂಗ್ ಮಾಡಿದ ರೀತಿಯಲ್ಲಿಯೇ ಮಾವಿನ ಹಣ್ಣಿನ ಪುಡ್ಡಿಂಗ್/ ಕೇಸರಿಬಾತ್ ಮಾಡಿದರೆ ಹೇಗಿರಬಹುದು ಅಂತ ಒಂದು ಯೋಚನೆ ಬಂದಿದ್ದೇ ತಡ ಕಾರ್ಯರೂಪಕ್ಕೆ ತಂದೆ.ನಾನು ಮಾಡಿದ್ದು ಹೀಗೆ..

ಬೇಕಾಗುವ ಸಾಮಗ್ರಿಗಳು:-
ಅರ್ಧ ಕಪ್ ಮಾವಿನಹಣ್ಣಿನ ತುಂಡುಗಳು, ಒಂದು ಕಪ್ ಬನ್ಸಿ ರವೆ/ಸಜ್ಜಿಗೆ, ಒಂದು ಕಪ್ ಸಕ್ಕರೆ, ಅರ್ಧ ಕಪ್ ತುಪ್ಪ,ಏಲಕ್ಕಿ ಪುಡಿ, ಗೋಡಂಬಿ ದ್ರಾಕ್ಷಿ,

ಮಾಡುವ ವಿಧಾನ:-
        ಮಾವಿನಹಣ್ಣಿನ ತುಂಡುಗಳನ್ನು ಮಿಕ್ಸಿಯಲ್ಲಿ ಒಮ್ಮೆ ಗರ್ರ್ ಮಾಡಿಕೊಳ್ಳಬೇಕು.ಬಾಣಲೆಗೆ ತುಪ್ಪ ಎರಡು ಚಮಚ ಹಾಕಿ ಸಜ್ಜಿಗೆಯನ್ನು ಕೆಂಪಗಾಗುವಷ್ಟು ಹುರಿಯಿರಿ.ಒಂದು ಕಪ್ ಸಜ್ಜಿಗೆಗೆ ಎರಡೂವರೆ ಕಪ್ ನೀರು ಸೇರಿಸಿ.ರುಬ್ಬಿದ ಮಾವಿನಹಣ್ಣನ್ನು ಸೇರಿಸಿ.ಬೆಂದ ನಂತರ ತುಪ್ಪ, ಸಕ್ಕರೆ ಹಾಕಿ ಕಾಯಿಸಿ,ಬಣ್ಣಕ್ಕೆ ಬೇಕಾದಲ್ಲಿ ಕೇಸರಿದಳಗಳನ್ನು ಒಂದು ಗಂಟೆ ಮೊದಲು ಬಿಸಿ ಹಾಲಿನಲ್ಲಿ ನೆನೆಸಿ ಸೇರಿಸಬಹುದು.ನಾನು ಬಣ್ಣಕ್ಕೆ ಚಿಟಿಕೆ ಅರಶಿನ ಪುಡಿ ಸೇರಿಸಿದೆ.ಪಾಕ ಪುಡ್ಡಿಂಗ್ ನ ಹದಕ್ಕೆ ಬಂದಾಗ ಸ್ಟವ್ ಆರಿಸಿ,ಏಲಕ್ಕಿ ಪುಡಿ ಬೆರೆಸಿ , ಗೋಡಂಬಿ ದ್ರಾಕ್ಷಿ ಯೊಂದಿಗೆ ಅಲಂಕರಿಸಿ ಸರ್ವ್ ಮಾಡಿ.
  
    ರುಚಿಕರವಾದ ಕಾಡು ಮಾವಿನ ಹಣ್ಣಿನ ಬಗೆಬಗೆಯ ಪಾಕಗಳನ್ನು ತಯಾರಿಸಿ ಸವಿಯಿರಿ.ಕಸಿ ಮಾವಿನ ಹಣ್ಣಿನಲ್ಲೂ ಇದೇ ಪಾಕಗಳನ್ನು ಮಾಡಲು ಪ್ರಯತ್ನಿಸಬಹುದು.



✍️... ಅನಿತಾ ಜಿ.ಕೆ.ಭಟ್.
02-06-2020.



2 comments:

  1. ಎಲ್ಲವೂ ಒಂದಕ್ಕಿಂತ ಒಂದು ರುಚಿ....

    ReplyDelete