Tuesday, 16 June 2020

ಹೂವಿನ ಗಿಡಗಳ ಆಯ್ಕೆ ನನ್ನಿಂದಾಗದು ...ಅದಕ್ಕೆ ಹೆಣ್ಣುಮಕ್ಕಳೇ ಸರಿ..


ಹೂವಿನ ಗಿಡದ ಆಯ್ಕೆ ನನ್ನಿಂದಾಗದು.. ಅದಕ್ಕೆ ಹೆಣ್ಣುಮಕ್ಕಳೇ ಸರಿ..


   ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇಂತಹ ಮಾತು ಕೇಳಿಬರುತ್ತದೆ.ನಮ್ಮಲ್ಲೂ  ಕೂಡ. ಹೆಣ್ಣುಮಕ್ಕಳಿಗೆ ಹೂವಿನಗಿಡಗಳು ಎಂದರೆ ಪಂಚಪ್ರಾಣ. ನನಗೂ ಕೂಡ ಹೂವಿನ ಗಿಡಗಳೆಂದರೆ ಬಲು ಇಷ್ಟ ಅದರಲ್ಲೂ ಜರ್ಬೆರಾ,ಕಸಿಗುಲಾಬಿ, ಸೇವಂತಿಗೆ ಅತ್ಯಂತ ಪ್ರಿಯ. ಪ್ರತಿವರ್ಷ ಮಳೆಗಾಲ ಬಂದಾಗ ಒಂದು ಸಲ ಹೂವಿನ ನರ್ಸರಿಗೆ ಭೇಟಿಕೊಡುವ ಅಭ್ಯಾಸ. ಆದರೆ ಈ ವರ್ಷ ಕೊರೋನಾದಿಂದಾಗಿ ಸ್ವಲ್ಪ ತಡೆ ಬಿದ್ದಿದೆ.



     ಅಂಗಳದ ಬದಿಯಲ್ಲಿ ಒಂದಾದರೂ ಕಸಿ ಗುಲಾಬಿ ಗಿಡ ಇರಬೇಕೆಂದು ನನ್ನ ಹಂಬಲ. ಎಲ್ಲಾದರೂ ಹೊರಗಡೆ ಹೋಗುವಾಗ, ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೆ ಜಡೆಗೊಂದು‌ ಹೂ ಮುಡಿಯುವ ಅಭ್ಯಾಸವಿರುವ ನನಗೆ  ಬಟನ್ ರೋಸ್  ಆಪ್ತ. ಊರ ಗುಲಾಬಿ ಗಿಡಗಳು ಇದ್ದರೂ ಅದರಲ್ಲಿರುವ ಹೂವುಗಳು ಒಂದು ದಿನ ಅಥವಾ ಎರಡು ದಿನ ಮುಡಿಯಲು ಯೋಗ್ಯ. ನಂತರ ಎಸಳು ಉದುರಿಸಿಕೊಳ್ಳುತ್ತವೆ.ಕಸಿ ಗುಲಾಬಿ ಹಾಗಲ್ಲ... ಐದಾರು ದಿನ ಎಸಳುಗಳು ಗಟ್ಟಿಯಾಗಿ ನಿಲ್ಲುತ್ತವೆ. ಹೀಗಾಗಿ ಕಸಿ ಗುಲಾಬಿಯ ಮೇಲೆ ಚೂರು ಹೆಚ್ಚು ವ್ಯಾಮೋಹ.



      ಕೇಸರಿ ಹಳದಿ ಮಿಶ್ರಿತ ಗುಲಾಬಿ ಹೂವಿನ ಗಿಡವೊಂದಿತ್ತು . ಆದರೆ ಅದು ಎರಡು ಮೂರು ವರ್ಷಗಳ ನಂತರ ಈಗ ಸತ್ತುಹೋಯಿತು.ಈಗ ಹೋಗಿ ತರೋಣವೆಂದರೆ ಕೋವಿಡ್'ನಿಂದಾಗಿ ಮನೆಯಿಂದ ಮಕ್ಕಳನ್ನು ಕರೆದುಕೊಂಡು ಪತಿಯೊಂದಿಗೆ ಹೊರಗೆ ಹೋಗಲು ಧೈರ್ಯ ಇಲ್ಲ.ಆದ್ದರಿಂದ ಜೂನ್ ತಿಂಗಳ ಆರಂಭವಾಗುತ್ತಿದ್ದಂತೆಯೇ "ನನಗೊಂದು ಕಸಿ ಗುಲಾಬಿ ಗಿಡ ತಂದುಕೊಡಿ" ಎಂದು ಪತಿಗೆ ಹೇಳಿದೆ.







     "ಹೂವಿನ ಹೂವಿನ ಗಿಡದ ಆಯ್ಕೆ ನನ್ನಿಂದಾಗದು. ಸೀರೆ ಆಯ್ಕೆಗೆ ,ಹೂವಿನ ಗಿಡದ ಆಯ್ಕೆಯ ಹೆಣ್ಣು ಮಕ್ಕಳೇ ಸರಿ. ನಮಗೆ ಅದರ ಬಣ್ಣ, ಎಸಳುಗಳ ಗಾತ್ರ, ಅದು-ಇದು ನನಗೆ ಗೊತ್ತೇ ಆಗುವುದಿಲ್ಲ..."ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಪತಿರಾಯರು. "ನಿಮಗೆ ಚಂದ ಕಂಡದ್ದನ್ನು ತನ್ನಿ.. ಸಾಕು ಈ ವರ್ಷ".ಎಂದು ಗಿಡ ತರುವ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಿಬಿಟ್ಟೆ. ನರ್ಸರಿಗೆ ಭೇಟಿ ಕೊಟ್ಟರು. ಅಲ್ಲಿ ಹೋದಾಗ ತಿಳಿಯಿತು ಬೆಂಗಳೂರು ಹಾಗೂ ಚೆನ್ನೈನಿಂದ ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಬರುತ್ತಿದ್ದ ಗಿಡಗಳು ಲಾಕ್ ಡೌನ್ ನಿಂದಾಗಿ ಇನ್ನೂ ಬಂದಿಲ್ಲ.. ಎಂದು... "ಸರಿ "ಎಂದು ನಾನಲ್ಲೇ ಮರೆತುಬಿಟ್ಟಿದ್ದೆ.


      ನಿನ್ನೆ ಸಂಜೆ ಇದ್ದಕ್ಕಿದ್ದಂತೆಯೇ ಎರಡು ಗುಲಾಬಿ ಹೂವಿನ ಗಿಡಗಳನ್ನು ತಂದಿದ್ದರು..  ಒಂದಂತೂ ಬಹಳ ಅಪರೂಪದ ಬಣ್ಣ, ಇನ್ನೊಂದು ನನ್ನಿಷ್ಟದ ಬಣ್ಣ.. ನನಗಂತೂ ಬಹಳ ಹಿಡಿಸಿತು." ನನಗೆ ಆಯ್ಕೆಮಾಡಲು ತಿಳಿಯಲ್ಲ" ಎಂದು ಹೇಳುತ್ತಾ ಒಳ್ಳೆಯ ಸೆಲೆಕ್ಷನ್ ಮಾಡಿದ್ದಾರೆ.. ಗಿಡಗಳನ್ನು ಬಹಳ ಜೋಪಾನವಾಗಿ ನೆಡಲು ಸಹಕರಿಸಿದರು.


      ದೊಡ್ಡಗಾತ್ರದ ಗುಲಾಬಿ ಹೂವಿನಿಂದ  ಬಟನ್ ರೋಸ್ ಗಿಡಗಳ ಪೋಷಣೆ ಸುಲಭ.ಗಿಡದ ತುಂಬಾ ಚಿಗುರುಗಳು ಕಾಣಿಸಿಕೊಂಡು ಗೊಂಚಲಾಗಿ ಹೂಗಳನ್ನು ಕೊಡುತ್ತವೆ.ವರ್ಷವಿಡೀ ಹೂವಿನಿಂದ ಕಂಗೊಳಿಸುತ್ತವೆ.ಹೂಗಳ ಗಾತ್ರ ಸಣ್ಣದಾಗಿದ್ದರೂ ಆಕರ್ಷಕ ವಾಗಿರುತ್ತವೆ.ಮುಡಿದುಕೊಳ್ಳಲು ಹದಾ.


      ಅಂಗಳದ ಮುಂದೆ ಹೂವರಳಿದರೆ ಅತ್ತಿತ್ತ ಸಾಗುವಾಗ, ಗಿಡಗಳಿಗೆ ನೀರುಣಿಸುವಾಗ ನನ್ನ ಕಣ್ಣುಗಳು ಅದನ್ನೇ ಹಿಂಬಾಲಿಸುತ್ತವೆ. ಮನಸಿಗೂ ಆನಂದ.ಹೂವಿನ ಸೌಂದರ್ಯವನ್ನು ವೀಕ್ಷಿಸಲು ಅಂಗಳಕ್ಕೆ ದೃಷ್ಟಿ ಹಾಯಿಸುವುದೂ ಇದೆ.ಕಸಿ ಗುಲಾಬಿ ಪ್ರಿಯರಿಗೆ ನಾಟಿ ಮಾಡಲು ಬಟನ್ ರೋಸ್ ಒಳ್ಳೆಯ ಆಯ್ಕೆ.ನಮ್ಮ ಕರಾವಳಿಯ ವಾತಾವರಣಕ್ಕೆ ಸೂಕ್ತ.ತರತರದ ಹೂವಿನ ಗಿಡಗಳು ನರ್ಸರಿಗೆ ಬಂದಿವೆ. ಕೊಳ್ಳುವವರಿಗೆ ,ನೆಡುವವರಿಗೆ ಈ ಸಮಯ ಸೂಕ್ತವಾಗಿದೆ.



✍️... ಅನಿತಾ ಜಿ.ಕೆ.ಭಟ್.
17-06-2020.

2 comments:

  1. ಮಳೆಗಾಲ ಸುರು.. ಹೂವಿನ ಗಿಡ ನೆಡಲು ಒಳ್ಳೆ ಸಮಯ... 👌🏻👌🏻👌🏻

    ReplyDelete
    Replies
    1. ಹೌದು.ಈಗ ಗಿಡ ನೆಡಲು ಒಳ್ಳೆಯ ಸಮಯ.

      Delete