Tuesday, 2 June 2020

ಪಾರಂಪರಿಕ ಮಾಂಬಳಕ್ಕೆ ಹೊಸ ರೂಪ





ಪಾರಂಪರಿಕ ಮಾಂಬಳಕ್ಕೆ ಹೊಸ ರೂಪ


        ಕರಾವಳಿಯ ಭಾಗದಲ್ಲಿ ಬೇಸಿಗೆ ಬಂತೆಂದರೆ ಕಾಡುಮಾವಿನ ಹಣ್ಣುಗಳ ಸುಗ್ಗಿ.ಸ್ವಲ್ಪ ಹುಳಿ ಮತ್ತು ಸಿಹಿ ರುಚಿ ಇರುವ ಕಾಡು ಮಾವಿನ ಹಣ್ಣುಗಳು ಗೊಜ್ಜು, ಸಾಸಿವೆ,ಚಂಡ್ರುಳಿ ,ಸಾರು ಹೀಗೆ ಹಲವಾರು ಪಾಕವೈವಿಧ್ಯಗಳಲ್ಲಿ ಜನರ ನಾಲಿಗೆಯನ್ನು ತಣಿಸುತ್ತವೆ.ವರ್ಷದಲ್ಲಿ ಒಮ್ಮೆ ಸಿಗುವ ಇಂತಹ ರುಚಿಕಟ್ಟಾದ ಹಣ್ಣನ್ನು ವರ್ಷವಿಡೀ ಸವಿಯಬೇಕೆಂಬ ಬಳಕೆಯಾಗುವುದು ಸಹಜ.
ಹಣ್ಣುಗಳ ರಸವನ್ನು ಸಂಗ್ರಹಿಸಿ ಒಣಗಿಸಿದ ರೂಪವೇ ಮಾಂಬಳ.



       ಮಾವಿನ ಹಣ್ಣುಗಳನ್ನು ತೊಳೆದು ತೊಟ್ಟು ತೆಗೆದು ಸಿಪ್ಪೆಯನ್ನು ತೆಗೆದು ರಸ ಹಿಂಡಿಕೊಂಡು ಅದನ್ನು ದೊಡ್ಡ ಬಟ್ಟಲಿನಲ್ಲಿ ಹಾಕಿ ಬಿಸಿಲಿಗಿಡಬೇಕು.ರಸ ತುಂಬಾ ಇದ್ದರೆ ಅದಕ್ಕೆ ತಕ್ಕಂತೆ ಬಟ್ಟಲುಗಳ ಸಂಖ್ಯೆ ಹೆಚ್ಚಿಸಿ.ದಿನವೂ ಅದರ ಮೇಲೆ ತೆಳ್ಳನೆಯ ಪದರವಾಗಿ ರಸವನ್ನು ಹರಡುತ್ತಾ ಬಿಸಿಲಿನಲ್ಲಿ ಒಣಗಿಸಿ.ಧೂಳು ಇರುವ ಸ್ಥಳವಾದರೆ ತೆಳ್ಳಗಿನ ಬಟ್ಟೆಯನ್ನು ಮುಚ್ಚಿಕೊಳ್ಳಬಹುದು.ಪೂರ್ತಿ ತೇವಾಂಶ ಆರಿದಾಗ ಬಟ್ಟಲಿನಿಂದ ಮಾಂಬಳ ಎದ್ದು ಬರುತ್ತದೆ.ಪ್ಲಾಸ್ಟಿಕ್ ಕವರಿನಿಂದ ಸುತ್ತಿ ಶೇಖರಿಸಿಟ್ಟರೆ ಒಂದು ವರುಷದವರೆಗೆ ಹಾಳಾಗುವುದಿಲ್ಲ.




      ಹಿಂದೆ ಮಾವಿನ ಹಣ್ಣಿನ ರಸವನ್ನು ಬಟ್ಟೆಯಲ್ಲಿ ಹರಡಿ ಒಣಗಿಸುವ ಪದ್ಧತಿಯಿತ್ತು.ಅದು ಪೂರ್ಣ ಒಣಗುವವರೆಗೆ ಅದನ್ನು ಒಳಗೆ ಹೊರಗೆ ಒಯ್ಯುವುದು ಪ್ರಯಾಸದ ಕೆಲಸ.ಬಟ್ಟಲಿನಲ್ಲಾದರೆ ಸಂಜೆ ಮನೆಯ ಒಳಗೊಯ್ಯಲು ಮತ್ತು ಶೇಖರಿಸಿಡಲು ಸುಲಭ.


     ಇದನ್ನು ಸಣ್ಣದಾಗಿ ತುಂಡು ಮಾಡಿ ಮಕ್ಕಳಿಗೆ ಕೊಟ್ಟರೆ ಚಾಕಲೇಟಿನಂತೆ ಇಷ್ಟಪಟ್ಟು ತಿನ್ನುತ್ತಾರೆ.ಮಕ್ಕಳ ಸ್ನ್ಯಾಕ್ಸ್ ಬಾಕ್ಸ್ ನಲ್ಲಿ ಒಂದೆರಡು ಪೀಸ್ ಹಾಕಿದರೆ ಹಸಿವೆಯಿಲ್ಲ ಅನ್ನುವ ಮಕ್ಕಳಿಗೆ ಚೆನ್ನಾಗಿ ಹಸಿವೆಯಾಗುತ್ತದೆ.ಮಾಂಬಳದ ತುಂಡನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ ನಂತರ ಗೊಜ್ಜು, ಸಾಸಿವೆಯನ್ನು ವರ್ಷವಿಡೀ ಮಾಡಬಹುದು..ಬಾಯಿ ನೀರೂರಿಸುವ ಮಾಂಬಳದ ಅಡುಗೆ ಕ್ಷಣಮಾತ್ರದಲ್ಲಿ ಸಿದ್ಧವಾಗುತ್ತದೆ.




✍️... ಅನಿತಾ ಜಿ.ಕೆ.ಭಟ್.
02-06-2020.


2 comments: