ಓ ವಿಧಿಯೇ ನೀನೆಷ್ಟು ಕ್ರೂರಿ..
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸಾವನ್ನು ತನ್ನ ಮಗ್ಗುಲಲ್ಲೇ ಇಟ್ಟುಕೊಂಡು ಬದುಕುತ್ತದೆ.ಸಾವು ಖಚಿತ ಎಂದು ಗೊತ್ತಿದ್ದರೂ ಬದುಕಿನಲ್ಲಿ ಆಸೆ-ಆಕಾಂಕ್ಷೆ, ನಿರೀಕ್ಷೆ, ಆಶಾವಾದದಿಂದ ಪ್ರತಿಯೊಂದು ಜೀವಿಯೂ ತನ್ನದೇ ಆದ ರೀತಿಯಲ್ಲಿ ಬದುಕುತ್ತದೆ. ತನ್ನ ಬದುಕಿಗೊಂದು ಅರ್ಥವನ್ನೂ, ಗುರುತಿಸುವಿಕೆಯನ್ನೂ ತಾನೇ ತಂದುಕೊಳ್ಳುತ್ತದೆ. ಭೂಮಿಗೆ ಕರೆತಂದ ವಿಧಾತನಿಗೆ ಮತ್ತೆ ವಾಪಸ್ ಕರೆಸಿಕೊಳ್ಳುವ ಹಕ್ಕೂ ಇದೆ. ಆದರೆ ಆ ವಿಧಾತ ಮಾತ್ರ 'ಕರುಣೆ' ಎಂಬ ಮೂರಕ್ಷರವನ್ನು ಪರಿಗಣಿಸುವುದೇ ಇಲ್ಲ. ಅದಕ್ಕಾಗಿ ಕೆಲವೊಂದು ಸಾವು ಕೂಡ ನಮ್ಮಲ್ಲಿ ಉದ್ಗಾರವನ್ನು ಉಂಟುಮಾಡುತ್ತದೆ ಓ ವಿಧಿಯೇ ನೀನೆಷ್ಟು ಕ್ರೂರಿ...!!
ಹೆಣ್ಣೊಬ್ಬಳು ಗರ್ಭಿಣಿಯಾದಾಗ ಆ ಸಂತಸವನ್ನು ಮೊದಲು ಹಂಚಿಕೊಳ್ಳುವುದೇ ತನ್ನ ಪತಿಯಲ್ಲಿ. ಪತಿಯ ಮುಖದಲ್ಲಿನ ಆನಂದವನ್ನು ಕಂಡು ತಾನೂ ಖುಶಿಪಡುತ್ತಾ, ಅವನ ಪ್ರೀತಿಯಲ್ಲಿ ಮುಳುಗೇಳುತ್ತಾ ಸಂಭ್ರಮಿಸಿ, ಮುಂದೆ ಭೂಮಿಗೆ ಅವತರಿಸಿರುವ ತನ್ನ ಮುದ್ದು ಕಂದನ ಬಗ್ಗೆ ಕನಸುಗಳನ್ನು ಕಣ್ತುಂಬಿಸಿಕೊಳ್ಳುತ್ತಾಳೆ. ಸದಾ ತನ್ನ ಸನಿಹ ಇನಿಯನ ಇರುವಿಕೆಯನ್ನು ಬಯಸುತ್ತಾಳೆ.ಪತಿಯಾದವನೂ ಅಷ್ಟೇ.. ಉದರದಲ್ಲಿ ಬೆಳೆಯುತ್ತಿರುವ ಮುದ್ದು ಮಗುವನ್ನು ಯಾವಾಗ ನೋಡುತ್ತೇನೋ ಎಂದು ಕಾತರಿಸುತ್ತಾ ,ಹಂಬಲಿಸುತ್ತಾ ,ಮಡದಿಯ ಶಾರೀರಿಕವಾದ ಬಳಲಿಕೆಗೆ ಸಾಂತ್ವನ ಹೇಳುತ್ತಿರುತ್ತಾನೆ.ಗರ್ಭಿಣಿ ಸ್ತ್ರೀಗೆ ಮನೆಯ ಹಿರಿಯರ ಆರೈಕೆ ಎಷ್ಟು ಮುಖ್ಯವೋ.. ಅಷ್ಟೇ ಮುಖ್ಯ ಪತಿಯ ಅಕ್ಕರೆಯ ,ಕಾಳಜಿಯ ಪ್ರೇಮಪೂರ್ವಕ ನುಡಿಗಳು. ನೋವಿನಲ್ಲೂ ಸಿಹಿ ಅರಳಿಸುವ ಅನುರಾಗ ಬಂಧನ. ಆದರೆ ಇಂತಹ ಸುಖದಲ್ಲಿ ಮೈಮರೆಯುತ್ತಿದ್ದ ಕಟ್ಟುಮಸ್ತಾದ ಯುವಕನನ್ನು ಕರೆಸಿಕೊಂಡ ಓ ವಿಧಿಯೇ ನೀನೆಷ್ಟು ಕ್ರೂರಿ...!!
ತಂದೆ ತಾಯಿಯ ಪ್ರೀತಿಯ ಮಗನಾಗಿ, ಸಹೋದರರಿಗೆ ಬೆಂಬಲವನ್ನು ನೀಡುವ ಅಣ್ಣನಾಗಿ, ಮಡದಿಯನ್ನು ಪ್ರೀತಿಯಿಂದ ಆದರಿಸುತ್ತಿದ್ದ ಪತಿಯಾಗಿ,ಮನೆಮಂದಿಯ ಜೊತೆಗೆಲ್ಲ ಖುಷಿ ಖುಷಿಯಿಂದ ಬೆರೆಯುತ್ತಿರುವ ಸರಳ ಸ್ವಭಾವದ ವ್ಯಕ್ತಿಯಾಗಿ, ಸೋದರಮಾವನ ಮಾತನ್ನು ಎಂದು ಮೀರದೆ ಗೌರವಿಸುತ್ತಿರುವುದು ಅಳಿಯನಾಗಿ, ಹೆಣ್ಣು ಕೊಟ್ಟ ಅತ್ತೆ ಮಾವ ತಮ್ಮ ಮಗನಂತೆಯೇ ಪ್ರೀತಿಸುವ ಅಳಿಯನಾಗಿದ್ದ , ಕನ್ನಡ ಚಿತ್ರಪ್ರೇಮಿಗಳ ಮನಗೆದ್ದ ಕನ್ನಡದ ಯುವ ನಟ ಚಿರಂಜೀವಿ ಸರ್ಜಾ ಅವರನ್ನು ಕೇವಲ 39 ವರ್ಷದಲ್ಲಿಯೇ ನಿನ್ನ ಬಳಿಗೆ ಕರೆಸಿಕೊಂಡ ಓ ವಿಧಿಯೇ ನೀನೆಷ್ಟು ಕ್ರೂರಿ...!!
ವಾಯುಪುತ್ರನಾಗಿ ತೆರೆಯಮೇಲೆ ಚಿತ್ರರಸಿಕರನ್ನು ರಂಜಿಸಿ ,ವರದನಾಯಕನಾಗಿ ಮೆರೆದು, ದಂಡಂ ದಶಗುಣಂನಂತಹ ಹಲವಾರು ಚಿತ್ರಗಳಲ್ಲಿ ನಟಿಸಿ, ಪ್ರೇಕ್ಷಕರನ್ನು ರಂಜಿಸಿದರು.ಹಲವಾರು ವರ್ಷಗಳಿಂದ ನಟಿ ಮೇಘನಾ ಅವರನ್ನು ಪ್ರೀತಿಸಿ ಕೇವಲ ಎರಡು ವರ್ಷಗಳ ಹಿಂದೆ ಅವರನ್ನು ಅದ್ದೂರಿಯಾಗಿ ವಿವಾಹವಾದರು. ತಮ್ಮ ಪ್ರೀತಿ, ದಾಂಪತ್ಯಕ್ಕೆ ಸಾಕ್ಷಿಯಾಗಿ ಒಡಲಲ್ಲಿ ಕುಡಿಯೊಂದು ಮೂಡಿದ ಈ ಸಂದರ್ಭದಲ್ಲಿ ತನ್ನ ಮಗು ಮುದ್ದಾದ ಪಾದವನ್ನು ಭೂಮಿಗೂರುವ ಮುನ್ನವೇ ,ಮಗುವನ್ನು ನೋಡಿ ಸಂಭ್ರಮಿಸಬೇಕಾದ ಅಪ್ಪನನ್ನು ಕರೆದೊಯ್ದ ಓ ವಿಧಿಯೇ ನೀನೆಷ್ಟು ಕ್ರೂರಿ...!!
ಕನಸುಗಳನ್ನು ಕಂಡು ನನಸಾಗಿಸಬೇಕೆಂದು ಪಣತೊಟ್ಟಿದ್ದ, ಸದಾ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದ , ಸಹೋದರನ ಯಶಸ್ಸಿನಲ್ಲಿ ತಾನು ಬೆಂಬಲವಾಗಿ ನಿಲ್ಲುತ್ತಿದ್ದ, ಆರೋಗ್ಯದಿಂದಿದ್ದು ಸದಾ ಫಿಟ್ ನೆಸ್ ಕಾಯ್ದುಕೊಂಡಿದ್ದ ಯುವಕನಿಗೆ ಒಂದು ಚೂರು ಮುನ್ಸೂಚನೆ ಇಲ್ಲದೆ ದಿಢೀರನೆ ಹೃದಯ ಸ್ತಂಭನ ಉಂಟಾದಾಗ ಎಲ್ಲರಿಗೂ ಅನಿರೀಕ್ಷಿತ ಆಘಾತ.ಗರ್ಭದಲ್ಲಿ ಪುಟ್ಟ ಮಗುವನ್ನು ಹೊತ್ತುಕೊಂಡಿರುವ ಮೇಘನಾಗೆ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲದ ಶಾಕ್.ಮುದ್ದು ಮಗುವಿಗೆ ತಾನು ಕಣ್ಣು ಬಿಡುವ ಮುನ್ನವೇ ಕಣ್ಣುಮುಚ್ಚಿದ ತಂದೆಯ ಅಗಲಿಕೆಯ ನೋವು ಕೊಟ್ಟ ಓ ವಿಧಿಯೇ ನೀನೇಕಿಷ್ಟು ಕ್ರೂರಿ...??
ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡುವ,ಉದರದಲ್ಲಿರುವ ಎಳೆಯ ಕುಡಿಯನ್ನು ಏನು ತೊಂದರೆಯಾಗದಂತೆ ಭೂಮಿಗೆ ತಲುಪಿಸುವ ಜವಾಬ್ದಾರಿಯೂ ಅದೇ ವಿಧಿಯ ಕೈಯಲ್ಲಿದೆ .. ಇಂದು ಕಣ್ಣೆದುರು ಇದ್ದವರು ನಾಳೆ ಇರುತ್ತಾರೋ ಇಲ್ಲವೋ.. ಎಲ್ಲಾ ಆ ದೇವರ ಆಟ.. ಬಲ್ಲವರ್ಯಾರು..?
ಇದ್ದಷ್ಟು ದಿನ ಒಳ್ಳೆಯವರಾಗಿದ್ದು, ಹೋದ ಮೇಲೆ ಒಳ್ಳೆಯ ಮಾತುಗಳನ್ನು ಆಡುವಂತೆ,ನಮ್ಮ ಕಾರ್ಯಗಳು ನೆನಪಿನಲ್ಲಿ ಉಳಿಯುವಂತೆ ಸತ್ಕರ್ಮಗಳನ್ನು ಮಾಡುತ್ತಾ ಬದುಕುವ ಮನಸ್ಸು ಮಾಡಬೇಕು.ಭೂಮಿ ಮೇಲೆ ಇದ್ದಷ್ಟು ದಿನ ತನ್ನ ಕುಟುಂಬ, ಸಮಾಜವನ್ನು ,ಪ್ರಕೃತಿಯನ್ನು ಪ್ರೀತಿಸುತ್ತಾ ಬಾಳುವುದೊಂದೇ ನಮ್ಮ ಹಣೆಯಲ್ಲಿ ಬರೆದಿರುವುದು ಎಂದು ತಿಳಿದುಕೊಳ್ಳಬೇಕು. ಆ ವಿಧಿಯ ಮುಂದೆ ನಾವೆಲ್ಲ ಚಿಕ್ಕವರು.. ತೃಣ ಸಮಾನ. ನಾವು ದೇವ ನಡೆಸುವ ಬೊಂಬೆಗಳು ಮಾತ್ರ. ಇದೇ ಈ ಜೀವ ಜಗತ್ತಿನ ಲೀಲೆ...!!
😟😟😟
ReplyDelete😥🙏
Delete