Friday, 19 June 2020

ದಾಹ-ಹಣದ ವ್ಯಾಮೋಹ


                



     ದಾಹ




        ಸುಮತಿಯ ತಂದೆ ಶಿವರಾಯರು " ಮಗಳೇ...ನಾಳಿನ ಕಾರ್ಯಕ್ರಮಕ್ಕೆ   ವನಜ ಅತ್ತೆ  ಮನೆಗೆ  ನೀನು ಹೋಗುವುದು... ಆಯ್ತಾ"ಎಂದು  ಹೇಳಿದಾಗ ಮನಸ್ಸಿಲ್ಲದ ಮನಸ್ಸಿನಿಂದಲೇ "ಅಪ್ಪಾ... ನಾನು ಹೋಗದಿದ್ದರೆ ಆಗದೇ.. ಪ್ರತಿ ಸಾರಿ ಹೋಗುತ್ತೇವೆ. ಈ ಸಲ ಬೇಡ.. ಆಗದೇ.."ಎಂದು ಕೇಳಿದಳು ಸುಮತಿ.. "ಮಗಳೇ ... ನಾನು ನೀನೂ ಹೋಗೋಣ ಎಂದು ಆಲೋಚಿಸಿದ್ದೆ.. ಆದರೇನು ಮಾಡುವುದು ತಾಯಿಯ ತವರಿನಲ್ಲಿ  ನಾಳೆಯೇ ಪಾಲು ಪಂಚಾಯಿತಿಗೆ ಇದೆ. ತಾಯಿಯನ್ನು ಕರೆದುಕೊಂಡು ಹೋಗಲೇಬೇಕು."
"ಅಪ್ಪ ... ತಾಯಿಗೆ ಅಲ್ಲಿಂದ ಪಾಲಿನ ಹಣ ಸಿಗುವುದೇ.?" ಎಂದು ಸುಮತಿ ಕೇಳಿದಾಗ  ದೂರದಲ್ಲಿದ್ದ ತಾಯಿ ಕೇಳಿಸಿಕೊಂಡು ತನ್ನ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಒಳಗೆ ಬಂದು.. "ಮಗಳೇ ನಾನು ತವರಿನ ಪಾಲು ಪಂಚಾತಯತಿಗೆ ಹೋಗುವುದು ಆಸ್ತಿಯಲ್ಲಿ ಪಾಲು ಕೇಳಲು ಅಲ್ಲ. ನನಗೆ ತವರಿನ ಆಸ್ತಿ ,ಹಣ ಯಾವುದೂ ಬೇಡ .ಅಣ್ಣ-ತಮ್ಮಂದಿರ ಪ್ರೀತಿ ವಿಶ್ವಾಸ ಅಷ್ಟೇ ಸಾಕು. ನಿನ್ನಪ್ಪ ದುಡಿದು ತಂದುದರಲ್ಲಿ  ಗಂಜಿಯನ್ನುಂಡು ಸಂತೃಪ್ತಿಯಿಂದ ಬದುಕುತ್ತೇನೆ.ಅಲ್ಲಿ ನಾನು ಸಹಿ ಹಾಕದಿದ್ದರೆ ನನ್ನ ಅಣ್ಣತಮ್ಮಂದಿರಿಗೂ ಪಾಲಿನ ವ್ಯವಹಾರ ಪೂರ್ಣವಾಗುವುದಿಲ್ಲ ಅದಕ್ಕಾಗಿ ಹೋಗುತ್ತಿದ್ದೇನೆ. " ಎಂದು ಮಗಳಿಗೆ ವಿವರವಾಗಿ ತಿಳಿಸಿದರು.ಅಮ್ಮನ ಮಾತುಗಳನ್ನು ಕೇಳಿದ ಸುಮತಿಗೆ ಅಮ್ಮನಲ್ಲಿ ಗೌರವ ಭಾವನೆ ಮೂಡಿತು.



        ಶಿವರಾಯರು ಮತ್ತು ಸೀತಮ್ಮನವರು  ಪುಟ್ಟಭೂಮಿಯಲ್ಲಿ ಕೃಷಿ ಮಾಡುತ್ತಾ ಮಕ್ಕಳಿಬ್ಬರನ್ನು ಓದಿಸುತ್ತಿದ್ದರು.ಕಾಡುಪ್ರಾಣಿಗಳ ಉಪಟಳದಿಂದಾಗಿ ಕೃಷಿಯಲ್ಲಿ ಹೆಚ್ಚಿನ ಲಾಭವಿಲ್ಲದೆ ಇದ್ದರೂ ಶಿವರಾಯರು ಮೈ ಮುರಿದು ತಾವೇ ಸ್ವತಃ ಕೃಷಿ ಮಾಡುತ್ತಿದ್ದುದರಿಂದ ಸ್ವಲ್ಪ ಉಳಿತಾಯವಾಗುತ್ತಿತ್ತು. ಜೊತೆಗೆ  ಸೀತಮ್ಮ ನಾಲ್ಕು ದನಗಳನ್ನು ಸಾಕುತ್ತಾ ಡೈರಿಗೆ ಹಾಲು ಹಾಕುತ್ತಾ ಸ್ವಲ್ಪ ಸಂಪಾದನೆಯನ್ನು ಮಾಡುತ್ತಿದ್ದರು.ಇದು ಮಕ್ಕಳ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅವರ ಶುಲ್ಕವನ್ನು ಭರಿಸಲು ನೆರವಾಗುತ್ತಿತ್ತು. ಇದ್ದುದರಲ್ಲಿ   ಪ್ರೀತಿಯಿಂದ ಬದುಕುತ್ತಿದ್ದ ಸಂಸಾರ ಶಿವರಾಯರು ಮತ್ತು ಸೀತಮ್ಮನವರದು..


        ಸುಮತಿ ಅಪ್ಪನ ಮಾತಿಗೆ ಎದುರಾಡದೆ ವನಜತ್ತೆ ಮನೆಗೆ ಹೊರಟಳು.ಹೊರಡುವಾಗ ಅವಳಿಗೆ ಬಹಳ ಮುಜುಗರವಾಗಿತ್ತು .ಏಕೆಂದರೆ ಅವಳದು ಹಳೆಯದಾದ ಬಣ್ಣ ಮಾಸಿದ ಲಂಗ ರವಿಕೆ . ಎಲ್ಲರಂತೆ ಕಿವಿಗೆ ಚಿನ್ನದ ಬೆಂಡೋಲೆಯಿಲ್ಲ.ಅಪ್ಪ ಜಾತ್ರೆಯಿಂದ ತೆಗೆದುಕೊಟ್ಟ ಮುತ್ತಿನ ಬೆಂಡೋಲೆ.ಕುತ್ತಿಗೆಗೆ ಹತ್ತು ರೂಪಾಯಿಯ ಮಣಿಸರ. ಅಲ್ಲಿ ಯಾರೂ  ಬಣ್ಣ ಮಾಸಿದ ಬಟ್ಟೆಯನ್ನು ಹಾಕಿಕೊಂಡು ಬರುವುದಿಲ್ಲ ,ಜಾತ್ರೆ ಸಂತೆಯ ಬೆಂಡೋಲೆ, ಸರವನ್ನು ತೊಡುವವರಿಲ್ಲ..ಎಲ್ಲರೂ ಬೆಲೆಬಾಳುವ ದಿರಿಸುಗಳನ್ನು ಆಭರಣಗಳನ್ನು ತೊಡುವವರೇ.. ಎಂದು ಕಣ್ಣಂಚಿನಲ್ಲಿ ನೀರು ತುಂಬಿತ್ತು .ಆದರೂ ಕಷ್ಟದಲ್ಲಿ  ಬದುಕುತ್ತಿದ್ದ ಅಪ್ಪ ಅಮ್ಮನಲ್ಲಿ ತೋಡಿಕೊಂಡು ಅವರನ್ನು ನೋಯಿಸುವ ಮನಸ್ಸಿರಲಿಲ್ಲ. ಸುಮತಿ ಅತ್ತೆಯ ಮನೆಗೆ ತಲುಪಿದಳು .



      ಅಲ್ಲಿ ಆಗಲೇ ದೊಡ್ಡದಾದ ಅವರ ಮನೆಯನ್ನು ಬಹಳ ಅಂದವಾಗಿ ಸಿಂಗರಿಸಿದ್ದರು. ಮನೆಯ ಮುಂದೆ ಆಗಾಗ ಸಿರಿವಂತಿಕೆಯ ದ್ಯೋತಕವಾದ ಐಷಾರಾಮಿ ಬಿಳಿ ಕಾರುಗಳು ಬಂದು ನಿಲ್ಲುತ್ತಿದ್ದವು. ಅವುಗಳಿಂದ ಲಲನಾ ಮಣಿಯರು, ಮಕ್ಕಳು ಅಂದ ಚಂದದ ದಿರಿಸುಗಳನ್ನು ಹಾಕಿ ಬರುವಾಗ ಅವಳ ಮನವು ತನಗೂ ಹೀಗೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಶಾಭಾವ ಮೂಡಿಮರೆಯಾಗುತ್ತಿತ್ತು.ಅಮ್ಮ ತವರಿನ ಪಾಲಿನಲ್ಲಿ ಸ್ವಲ್ಪ ಹಣ ಪಡೆದರೆ ನನಗೂ ,ತಂಗಿಗೂ ಇಂತಹದೊಂದು ಪ್ರತಿ ಬಟ್ಟೆ,ಚಿನ್ನದ ಬೆಂಡೋಲೆಯಾದರೂ ಮಾಡಿಸಬಹುದಿತ್ತು ಎಂದು ಅವಳ ಆಲೋಚನೆಗಳು ಸಾಗುತ್ತಲೇಯಿದ್ದವು.


          ಸುಮತಿಯಲ್ಲಿ ಆಕೆಯ ವನಜತ್ತೆ " ಆ ಕೆಲಸ ಮಾಡು.. ಈ ಕೆಲಸ ಮಾಡು.." ಎಂದು ಹೇಳುತ್ತಲೇ ಇದ್ದರು .ಆತ್ತೆ ಹೇಳಿದ್ದನ್ನು ಚಾಚೂ ತಪ್ಪದೆ ನಾಜೂಕಾಗಿ ಮಾಡುತ್ತಿದ್ದಳು ಸುಮತಿ.ಅತ್ತೆಯ ಮಕ್ಕಳೆಲ್ಲ ತಮ್ಮ ಸಿರಿವಂತ ನೆಂಟರೊಂದಿಗೆ ಹರಟುತ್ತಿದ್ದರು. ಬಡ ಮಾವನ ಮಗಳು ಸುಮತಿ ಅವರಿಗೆ ಇಷ್ಟವಾದಂತಿರಲಿಲ್ಲ.ವನಜ ಬಡವರ ಮನೆಯಲ್ಲಿ ಬೆಳೆದರೂ ಅವಳ ಅಂದಚಂದಕ್ಕೆ ಮಾರುಹೋಗಿ ಸಿರಿವಂತರು ಹೆಣ್ಣುಕೇಳಿಕೊಂಡು ಬಂದಿದ್ದರು.ವನಜ ಶ್ರೀಮಂತರ ಸೊಸೆಯಾದ ಮೇಲೆ ತವರಿನವರೆಂದರೆ ಅಸಡ್ಡೆಯಿಂದ ಕಾಣತೊಡಗಿದಳು.


          ವನಜತ್ತೆಯ ನಾದಿನಿ ಮಾಲತಿಯ ಕುಟುಂಬ ಆಗಮಿಸಿತು ..ಬಹಳ ಸಿರಿವಂತ ಕುಟುಂಬ. ಧಾರಾಳವಾಗಿ ಮೂರು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿ, ಸರಕಾರಿ ನೌಕರಿ...ಎಲ್ಲವೂ ಇರುವ ಜಮೀನ್ದಾರಿ ಕುಟುಂಬ ಅವರದು. ಅವರು ಬರುತ್ತಿದ್ದಂತೆ ವನಜತ್ತೆ ಬಾಯ್ತುಂಬಾ ಮಾತನಾಡುತ್ತಾ ಪ್ರೀತಿಯಿಂದ ಸ್ವಾಗತಿಸಿ ಉಪಚರಿಸಿದರು.ಸುಮತಿಗೆ ಒಳಗೆ ರೂಮಿನಲ್ಲಿ
ಕೈಗೆ ಕೆಲಸ ನೀಡಿದರು.


         ಕಾರ್ಯಕ್ರಮದಲ್ಲಿ  ಎಲ್ಲ ವಿಷಯಕ್ಕೂ ನಾದಿನಿಯನ್ನು ಬಹಳ ಗೌರವಿಸುತ್ತಿದ್ದರು. ವನಜತ್ತೆಯ ಕಣ್ಣಿಗೆ ಸಿರಿವಂತರೇ ಕಾಣುತ್ತಿದ್ದರು ವಿನಹ ಅವರ ತವರಿನಿಂದ ಬಂದ ಬಡ ಕುವರಿ ಕಾಣಿಸುತ್ತಿರಲಿಲ್ಲ. ಸುಮತಿ ತನ್ನ ಮನೋವೇದನೆಯನ್ನು ಯಾರಿಗೂ ಹೇಳದೆ ತನ್ನ ಪಾಡಿಗೆ ತಾನು ಮೂಲೆಯಲ್ಲಿದ್ದರು.. ತಾನು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಹೇಗಾದರೂ ಸಂಪಾದನೆ ಮಾಡಿ ಅಪ್ಪ-ಅಮ್ಮನ ಕಷ್ಟವನ್ನು ಕೊನೆಗಾಣಿಸಬೇಕು ,ತಾನೂ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಳು.


          ಸುಮತಿ ಕೆಲಸ ಮುಗಿಸಿ ರೂಮಿನಿಂದ ಹೊರಬಂದು ಹಾಲ್ ನಲ್ಲಿ ಕುಳಿತಳು. ಆಕೆಯ ಮುಂದೆ ಮಾಲತಿ ಬಂದು ಕುಳಿತರು. ವನಜತ್ತೆಯ ಗಂಡ ಮಾವನೂ ಬಂದು ಕುಳಿತರು.. ಅಣ್ಣ ತಂಗಿ ಇಬ್ಬರೂ ಮಾತನಾಡುವುದಕ್ಕೆ ಆರಂಭಿಸಿದರು... ಮಾತನಾಡುತ್ತಾ ಕೌಟುಂಬಿಕ ಸುದ್ದಿಗಳೆಲ್ಲ ಬಂದವು.ಇತ್ತೀಚೆಗೆ ಊರಿನಲ್ಲಿದ್ದ ತಮ್ಮ ಹಿರಿಯರಿಂದ ಬಂದಂತಹ ಬೆಲೆಬಾಳುವ ಆಸ್ತಿಯ ಪಾಲಾಗಿತ್ತು. ಅದರಲ್ಲಿ ಹೆಣ್ಣು ಮಗಳಾದ ಮಾಲತಿಗೆ ಹತ್ತುಲಕ್ಷವನ್ನು ಕೊಡುವುದು ಆಗಿ ನಿರ್ಧರಿಸಿದ್ದರು ಎಂದು ಅವರ  ಮಾತುಕತೆ ನಡೆಯುತ್ತಿತ್ತು.."ಅಣ್ಣ ....ನನಗೆ ತವರಿನಿಂದ ಪಾಲಿನಲ್ಲಿ ಅಷ್ಟಾದರೂ ದೊರೆತಿರುವುದು ಬಹಳ ಒಳ್ಳೆಯದು.."ಎಂದರು ಮಾಲತಿ.
"ಓಹ್... ಅದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.."ಎಂದರು ಮಾವ.
ಮಾಲತಿ ಮುಂದುವರೆಸುತ್ತಾ "ನನ್ನ ಅತ್ತೆಗೆ ಅವರ ತವರಿನಿಂದ ಅಡಿಕೆ ತೋಟದ ಪಾಲಿನಲ್ಲಿ ಪ್ರತಿ ವರ್ಷ  ಅಡಿಕೆ ಮಾರಿದ ಹಣ ಬರುತ್ತಿದೆ. ಇನ್ನು ಮೈದುನನ ಹೆಂಡತಿಗೆ ಆಕೆಗೂ ತವರಿನಿಂದ 10 ಲಕ್ಷ ಕೊಟ್ಟಿದ್ದಾರೆ...  ನನಗೆ ತವರಿನಿಂದ ಏನೂ  ಸಿಗದಿದ್ದರೆ ನಾನು ಅವರ ದೃಷ್ಟಿಯಲ್ಲಿ ಬಹಳ ಸಣ್ಣವಳಾಗಿಬಿಡುತ್ತೇನೆ. ಈಗ ಹತ್ತು ಲಕ್ಷವಾದರೂ ಕೊಟ್ಟದ್ದು ನನಗೆ ಬಹಳ ಖುಷಿಯಾಯಿತು.... ಇಲ್ಲದಿದ್ದರೆ ಅವರೆದುರು ತಲೆತಗ್ಗಿಸಬೇಕಾಗುತ್ತಿತ್ತು."ಎಂದು ಹೇಳುತ್ತಿದ್ದಳು..
ಮಾವ "ತಂಗಿ ...ನಿನಗೆ ಸಲ್ಲಬೇಕಾದದ್ದು ಅಣ್ಣ ಕೊಟ್ಟಿದ್ದಾರೆ..ಇನ್ನು ಸ್ವಲ್ಪ ಕೊಡಬಹುದಿತ್ತು.. ನನಗೂ ಸ್ವಲ್ಪ ಕಡಿಮೆ ಆಯಿತು ಪಾಲಿನಲ್ಲಿ ಸಿಕ್ಕಿದ ಹಣ... " ಎಂದು ಅವರ ಆಸ್ತಿ ಪಾಲಿನ ಸುದ್ದಿ ಮಾತನಾಡುತ್ತಿದ್ದರು.


        ಇದನ್ನೆಲ್ಲ ಕೇಳಿದ ಸುಮತಿಗೆ ತನ್ನ ತಾಯಿಯನ್ನು ನೆನೆದು ಹೋಯಿತು.. ತಾನೆಷ್ಟು ಕಷ್ಟದಲ್ಲಿ ಬೆಂದರೂ ಸಹ ತನ್ನ ತವರಿನಿಂದ ಏನನ್ನೂ ಬೇಡದ ಮಮತಾಮಯಿ, ಸ್ವಾಭಿಮಾನಿ ಆಕೆ,ಅಪ್ಪನ ಜೊತೆ ಕೆಲಸಕಾರ್ಯಗಳಲ್ಲಿ ಹೆಗಲು ನೀಡಿ ಬೆವರುಸುರಿಸಿ  ದುಡಿದು ಉಣಬಡಿಸುವಾಕೆ..ಆದರೆ ಇವರೆಲ್ಲ ಕೂತು ತಿಂದರೂ ಕರಗದಷ್ಟು ಧನಕನಕಗಳಿದ್ದರೂ ತವರಿನ ಪಾಲಿನಲ್ಲಿ ಎಷ್ಟು ಬರುತ್ತದೆ ..? ಎಂದು ಲೆಕ್ಕ ಹಾಕಿ ಅದನ್ನೇ ತಮ್ಮ ಗೌರವ ಎಂದುಕೊಳ್ಳುತ್ತಿದ್ದಾರೆ.. ನನ್ನ ತಾಯಿಯ ಎದುರಿನಲ್ಲಿ ಇವರೆಲ್ಲ ಎಷ್ಟು ಕುಬ್ಜರು...!
ಶ್ರೀಮಂತಿಕೆಯ ಹೆಸರಿನಲ್ಲಿ ತವರಿನ ಪ್ರೀತಿ ,ಮಮತೆ ಅನ್ನೋದನ್ನೇ ಮರೆತು ತವರೆಂದರೆ ಹಣಪಡೆವ ತಾಣ ಎಂದು ತಿಳಿದುಕೊಂಡಿರುತ್ತಾರೆ. ಸಿರಿವಂತರ ಈ ಹಣದ ದಾಹವನ್ನು ಕಂಡು 'ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ' ಎಂಬ ನುಡಿಗಟ್ಟು ಇಂತಹವರನ್ನು ನೋಡಿಯೇ ಹುಟ್ಟಿರಬೇಕು ಎಂದುಕೊಂಡಳು...


✍️... ಅನಿತಾ ಜಿ.ಕೆ.ಭಟ್.
20-06-2020.
     


2 comments: