Saturday, 27 June 2020

ಸೋಂಕಿನ ಕಾಲದಲ್ಲಿ ಅಮ್ಮನೆಂಬ ಶಿಕ್ಷಕಿ ರಕ್ಷಕಿ

ಸಾಮೂಹಿಕ ಸೋಂಕಿನ ಕಾಲದಲ್ಲಿ ಅಮ್ಮನೆಂಬ ಶಿಕ್ಷಕಿ,ರಕ್ಷಕಿ



     "ನಿಮ್ಮ ಮಕ್ಕಳಿಗೆ ಆನ್ಲೈನ್ ಪಾಠ ಶುರುವಾಯಿತಾ ? " ಇದು ಶಾಲಾಮಕ್ಕಳ ಪೋಷಕರು ಒಬ್ಬರಿಗೊಬ್ಬರು ಸಿಕ್ಕಾಗ ಮೊದಲು ಕೇಳುವ ಪ್ರಶ್ನೆ.ಮಕ್ಕಳ  ಶಿಕ್ಷಣವೆಂಬುದು ಓದು ಬರಹದ ಚೌಕಟ್ಟಿನ ಕೋಣೆಯೊಳಗಿದ್ದು , ಹೊರಜಗತ್ತಿಗೆ ತೋರುವ ಅಂಕಗಳಿಕೆಯೇ ಬಾಗಿಲಾಗಿಬಿಟ್ಟಿದೆ.ಚೌಕಟ್ಟಿನೊಳಗಿನ ಜ್ಞಾನಕ್ಕೆ ಮಹತ್ವ ನೀಡದೆ ಬಾಗಿಲಲ್ಲಿ ನೇತಾಡಿಸಿರುವ ಅಂಕಪಟ್ಟಿಗೆ ಪ್ರಾಧಾನ್ಯತೆ.ಇದನ್ನೆಲ್ಲಾ ಬುಡಮೇಲು ಮಾಡಲು ಸಾಧ್ಯವಿಲ್ಲದಿದ್ದರೂ, ಬಲವಾಗಿ ಅಲುಗಾಡಿಸಿಬಿಟ್ಟಿದೆ ಕೊರೋನಾ ಕೊವಿಡ್ ಮಹಾಮಾರಿ.


       "ಮನೆಯೆ ಮೊದಲ ಪಾಠಶಾಲೆ ..ಜನನಿ ತಾನೇ ಮೊದಲ ಗುರುವು" ಎನ್ನುವ ಸಾಲುಗಳಿಗೆ ಬೆಲೆ ನೀಡಲು ಇದು ಸಕಾಲ.ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತಹ ಶಿಕ್ಷಣವನ್ನು ನೀಡುವ ಕೆಲಸವೀಗ ಅಮ್ಮನ ಹೆಗಲ ಮೇಲಿದೆ. ಅಂಕಗಳಿಕೆಯ ಅಳತೆಗೋಲಿಗೆ ಸಿಗದಂತಹ ಸುರಕ್ಷತೆ,ಸ್ವಚ್ಛತೆ,ಉಳಿತಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ,ಕೆಮ್ಮುವಾಗ ಸೀನುವಾಗ ಟಿಶ್ಯೂ ಪೇಪರ್ ಬಳಸಿ ಜಾಗರೂಕತೆಯಿಂದ ಕಸದ ಬುಟ್ಟಿಗೆ ಹಾಕುವುದು, ಮಾಸ್ಕ್ ಸರಿಯಾದ ಕ್ರಮದಲ್ಲಿ ಧರಿಸುವುದು,ಆಗಾಗ ಕೈ ತೊಳೆದುಕೊಳ್ಳುವುದನ್ನು ಅಮ್ಮ, ಪೋಷಕರು ಮಕ್ಕಳಿಗೆ ಕಲಿಸಬೇಕಿದೆ . ಎಲ್ಲದಕ್ಕೂ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆರಳು ತೋರುವಂತಿಲ್ಲ.ನಮ್ಮ ಕುಟುಂಬಕ್ಕೆ ನಾವೇ ಆರೋಗ್ಯ ರಕ್ಷಕ ಸಿಬ್ಬಂದಿ.ನಮ್ಮ ಮಕ್ಕಳಿಗೆ ನಾವೇ ಶಿಕ್ಷಕಿಯರು.

   
         ರಜಾ ದಿನಗಳ ಸಮಯ ಹಿಂದೆಂದಿಗಿಂತಲೂ ಅಧಿಕವಾಗಿ ಮುಂದುವರಿಯುತ್ತಿದೆ.. ಮುಂದಿನದೂ ಖಚಿತವಿಲ್ಲ.ಅಂದಾಗ ಮಕ್ಕಳು ಮನೆಯಲ್ಲಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡಬೇಕಾಗುತ್ತದೆ.ಸದಾ ಆನ್ಲೈನ್ ಮನರಂಜನೆ ಪುಟ್ಟ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಎಳೆಯ ಮಕ್ಕಳಿಗೆ ಆನ್ಲೈನ್ ಪಾಠ ಬೇಡವೆಂದು ಸರ್ಕಾರವೇ ನಿರ್ಧರಿಸಿದೆ.ಹಿಂದಿನ ತರಗತಿಯನ್ನು ಪರೀಕ್ಷೆ ಬರೆಯದೆ ಉತ್ತೀರ್ಣರಾದ ಮಕ್ಕಳಿಗೆ ಮುಂದಿನ ವರ್ಷ ದ ಪಠ್ಯದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಲು ಅಮ್ಮನೇ ಶಿಕ್ಷಕಿಯಾಗಬೇಕು.ಇದೀಗ ಆನ್ಲೈನ್ ನಲ್ಲಿ ಪಠ್ಯ ಪುಸ್ತಕಗಳು ಲಭ್ಯವಾಗುತ್ತಿವೆ. ಡೌನ್ಲೋಡ್ ಮಾಡಿ ಪ್ರಿಂಟ್ ಹಾಕಿಕೊಂಡು ನಿಗದಿತ ವೇಳಾಪಟ್ಟಿಯನ್ನು  ತಯಾರಿಸಿ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು.ಮಧ್ಯೆ ಬ್ರೇಕ್, ಡ್ರಾಯಿಂಗ್ , ಪೈಂಟಿಂಗ್, ಕ್ರಾಫ್ಟ್ ನಂತಹ ಚಟುವಟಿಕೆಗಳೂ ಇರಲಿ.ಅಂತರ್ಜಾಲ, ಟಿವಿಯ ಕಾರ್ಯಕ್ರಮಗಳಲ್ಲಿ ಮುಳುಗಿದ ಮಕ್ಕಳಿಗೆ ಬದಲಾವಣೆ.ಅಮ್ಮಂದಿರಿಗೆ ಹಲವು ವರ್ಷಗಳಿಂದ ಬಳಸದೇ ಮರೆತು ಬಿಟ್ಟಿದ್ದ ತಮ್ಮ ಜ್ಞಾನವನ್ನು ಮತ್ತೆ ಒರೆಗೆ ಹಚ್ಚುವ ಸುಸಂದರ್ಭ.


       ಇಲ್ಲಿ ಸಿಲೆಬಸ್ ಎನ್ನುವುದು ಜ್ಞಾನಾರ್ಜನೆಗೆ ಮಾತ್ರ ಸೀಮಿತ.ಶಾಲೆ ಆರಂಭವಾದಾಗ ಇದೇ ಸಿಲೆಬಸ್ ಇರುವುದೋ ಅಥವಾ ಬೇರೆಯೋ..ಆ ಶಾಲೆಯ ಪಠ್ಯ ಬೇರೆ..ಈ ಶಾಲೆಯ ಟೆಕ್ಸ್ಟ್ ಬುಕ್ ಬೇರೆ ಎಂಬ ಗೊಂದಲಗಳನ್ನೆಲ್ಲ ಬದಿಗಿರಿಸಿ ..ದುಂಡಾಗಿ ಚೊಕ್ಕವಾಗಿ ಬರೆಯಲು,ತಪ್ಪಿಲ್ಲದಂತೆ ಓದಲು , ಓದಿದ್ದನ್ನು ತಾವೇ ಅರ್ಥೈಸಿಕೊಳ್ಳಲು ಅವಕಾಶ ನೀಡಿ.ಸಂಶಯ ಬಂದಲ್ಲಿ ನಿವಾರಿಸುವ ಹೊಣೆ ಹೊತ್ತುಕೊಳ್ಳಿ.ಮಕ್ಕಳಿಗೆ ಇಂದು ಸ್ವಯಂಕಲಿಕೆ ಎಂಬುದೊಂದು ವಿಧಾನವೇ ಮರೆಯುವಂತಿದೆ.ಕೇವಲ ಹೇಳಿಕೊಟ್ಟದ್ದನ್ನು ಬಡಬಡಿಸುವ ಅಭ್ಯಾಸ ರೂಢಿಯಾಗುತ್ತಿದೆ. ಅಮ್ಮ ನೀಡುವ ಶಿಕ್ಷಣ ಇದಕ್ಕಿಂತ ಭಿನ್ನವಾಗಿರಲಿ.


      ದೈನಂದಿನ ಖರ್ಚುವೆಚ್ಚಗಳ ಲೆಕ್ಕಾಚಾರ ಮಕ್ಕಳ ಕೂಡು ,ಕಳೆ ,ಗುಣಾಕಾರ ,ಭಾಗಾಕಾರದ ಲೆಕ್ಕಗಳಾಗಲಿ.ಪರಿಸರ ಅಧ್ಯಯನದಲ್ಲಿ ಬರುವಂತಹ ವಿಷಯಗಳನ್ನು ಮನೆಯ ಸುತ್ತಮುತ್ತ ಗಮನಿಸುವ,ಅರಿಯುವ ತಂತ್ರವನ್ನು ಅನುಸರಿಸಿ.ಉದಾಹರಣೆಗೆ ಎರೆಹುಳುಗಳ ಬಗ್ಗೆ ಪಠ್ಯದಲ್ಲಿದ್ದರೆ ಗಿಡಗಳ ಬುಡದಲ್ಲಿ ಇರುವ ಎರೆಹುಳನ್ನು ಅವರೇ ಹುಡುಕಲಿ. ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ವ್ಯತ್ಯಾಸವನ್ನು ಎರಡು ಗಿಡಗಳಿಗೆ ಈ ರೀತಿ ಗೊಬ್ಬರವನ್ನು ನೀಡಿ ತಿಳಿದುಕೊಳ್ಳಲಿ.


       ತಾಯಿ ಮತ್ತು ಮಕ್ಕಳ ನಡುವಿನ ಸಂಭಾಷಣೆ,ಸಂವಹನಕ್ಕೆ ಈಗ ಬೇಕಾದಷ್ಟು ಸಮಯವಿದೆ.ಮೊದಲಿನಂತೆ ಬೆಳಿಗ್ಗೆ ಬೇಗ ಏಳು, ಗಡಿಬಿಡಿಯಲ್ಲಿ ತಿಂಡಿ ತಿಂದು ಹೊರಡು,ಬಂದ ಮೇಲೆ ಹೋಂ ವರ್ಕ್, ಪ್ರಾಜೆಕ್ಟ್ ಮಾಡು ಎಂಬ ಯಾವುದೇ ಒತ್ತಡವಿಲ್ಲ.ಅಮ್ಮ ತಾನು ಬೆಳೆದ ರೀತಿ,ತನ್ನ ಶಾಲಾ ಜೀವನ,ಹಿರಿಯರಿಂದ ಕಲಿತ ಜೀವನ ಪಾಠ,ಎದುರಿಸಿದ ಸವಾಲುಗಳನ್ನು ಮಗುವಿನೊಂದಿಗೆ ಹಂಚಿಕೊಳ್ಳಬೇಕು.ಮಕ್ಕಳಿಗೆ ಕಷ್ಟವೇನೆಂದೇ ತಿಳಿಸದೇ ಬೆಳೆಸುವುದಕ್ಕಿಂತ ಕಷ್ಟವಿದ್ದರೂ ಧೈರ್ಯದಿಂದ ಮುನ್ನುಗ್ಗುವ ಛಲವನ್ನು ಬೆಳೆಸುವುದು ಮುಖ್ಯ.



   ಉಣ್ಣುವ ಪ್ರತಿಯೊಂದು ಅಗುಳು ಅನ್ನದ ಮಹತ್ವವನ್ನು ತಿಳಿಸಿ ಅದನ್ನು ಬೆಳೆಯುವ ರೈತರ ಶ್ರಮ,ಪಡಿಪಾಟಲು ಕಣ್ಣಿಗೆ ಕಟ್ಟುವಂತೆ ವಿವರಿಸಿ..ಇಂದಿನ ಮಕ್ಕಳಿಗೆ ಎಲ್ಲವನ್ನೂ ಚಿತ್ರದ ಮೂಲಕ ನೋಡಿ ಕಲ್ಪನಾಶಕ್ತಿ, ಗ್ರಹಿಸುವ ಶಕ್ತಿ ಸಾಮರ್ಥ್ಯ ಎಲ್ಲೋ ಅಡಗಿಬಿಟ್ಟಿದ್ದೆ.ಮತ್ತೆ ಜಾಗೃತವಾಗಲಿ...ನಮ್ಮ ಮಾತುಗಳನ್ನು ಕೇಳುತ್ತಾ ಹೋದಂತೆ ಕಲ್ಪಿಸಿಕೊಳ್ಳುವ ಅಭ್ಯಾಸ ಬೆಳೆಯಬೇಕು..ಅದು ಹೇಗೆ?..ಇದು ಏಕೆ ?ಎಂದು ಪ್ರಶ್ನಿಸಿ ಉತ್ತರ ಪಡೆದುಕೊಳ್ಳುವ ಚಾಕಚಕ್ಯತೆ ಮುಂದುವರಿಯಲಿ.


   ಸಾರ್ವತ್ರಿಕ ಸೋಂಕಿನ ಕಾರಣದಿಂದ ಮಕ್ಕಳಿಗೆ ದೈಹಿಕ ಸ್ವಚ್ಛತೆಯ ಅಗತ್ಯವನ್ನು ಈಗ ಹೇಳಲೇಬೇಕಾದ ಮತ್ತು ಶಿಸ್ತು ಬದ್ಧವಾಗಿ ರೂಢಿಸಬೇಕಾದ ಸಮಯ.."ಅಮ್ಮಾ ..ಈ ವೈರಸ್ ಎಷ್ಟು ಸಮಯ ಇರುತ್ತೆ.?.ಸೋಂಕು ಹೇಗೆ ಬರುತ್ತೆ?..ನನಗೂ ಬಂದರೆ ಏನು ಮಾಡಲಿ ? "ಎಂಬೆಲ್ಲ ಪ್ರಶ್ನೆಗಳಿಗೆ ...ಮೊದಲು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ನೀಡಿ..ನಂತರ ನಿಮ್ಮದೇ ರೀತಿಯಲ್ಲಿ ವಿವರಿಸಿ.ಆಗ ತಾನು ಓದಿ ತಿಳಿದ ವಿಚಾರ ಮತ್ತು ಸುತ್ತಮುತ್ತಲಿನ ಈಗ ನಡೆಯುತ್ತಿರುವ ಸೋಂಕು ಹರಡುವಿಕೆಯನ್ನು ತನ್ನದೇ ಆದ ರೀತಿಯಲ್ಲಿ ಮಗು ಅರ್ಥೈಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತದೆ.


      ನಮ್ಮ ಅಭಿಪ್ರಾಯಗಳನ್ನು ಮಕ್ಕಳ ಮೇಲೆ ಹೇರದೆ ಪ್ರತಿಯೊಂದು ವಿಷಯದಲ್ಲೂ ಅವರದೇ ಆದ ನಿಲುವುಗಳನ್ನು ಹೊಂದುವಂತೆ ಮಾಡುವುದು ಅಮ್ಮನೆಂಬ ಶಿಕ್ಷಕಿಯ ಕೈಯಲ್ಲಿದೆ.ಅವಸರವಿಲ್ಲದ ಕಲಿಕೆ ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುತ್ತದೆ.ಮಕ್ಕಳ ಬೆಳವಣಿಗೆ, ಶಿಸ್ತು ಬದ್ಧವಾದ ನಡವಳಿಕೆಗೆ ಅಮ್ಮನ ಮಾರ್ಗದರ್ಶನ ಅತೀ ಅಗತ್ಯವಾಗಿದೆ.


     
✍️... ಅನಿತಾ ಜಿ.ಕೆ.ಭಟ್.
28-06-2020.




   
   

2 comments:

  1. ಹೌದು.. 2 ಜವಾಬ್ದಾರಿ...

    ReplyDelete
    Replies
    1. ಜವಾಬ್ದಾರಿ ಯೂ ಹೌದು..ಈಗಿನ ಅಗತ್ಯವೂ ಹೌದು.. ಧನ್ಯವಾದಗಳು 💐🙏

      Delete