"ಆಸರೆ" ಇದು ಕಾಲ್ಪನಿಕ ಕಥೆ. ಯಾರ ಜೀವನಕ್ಕಾದರೂ ಹೋಲಿಕೆಯಾಗುತ್ತಿದ್ದರೆ ಅದು ಕಾಕತಾಳೀಯ ಮಾತ್ರ.
🌴 ಆಸರೆ🌴
""""""""""""""""""
ಅಂದು ಕೃಷ್ಣ ರಾಯರಿಗೂ ರಾಧಮ್ಮನಿಗೂ ಸಂತಸದ ದಿನ. ಬೇಸಗೆ ರಜೆಗೆಂದು ಮಗ ಸೊಸೆ ಮೊಮ್ಮಕ್ಕಳು ಊರಿಗೆ ಬಂದಿದ್ದಾರೆ. ಹಳ್ಳಿಯ ಸೊಗಡಿನ ಅಡುಗೆ ತಯಾರಿಯ ಸಂಭ್ರಮವೋ ಸಂಭ್ರಮ. ಹಲಸಿನ ಹಣ್ಣು, ಮಾವಿನ ಹಣ್ಣು ತಿಂದು ಖುಷಿಪಟ್ಟ ಮೊಮ್ಮಕ್ಕಳು ನಾವು ರಜೆಯಿಡೀ ಇಲ್ಲೇ ಕಳೆಯುವುದಾಗಿ ಹೇಳಿದರು.
ರಾಯರು ಮಗ ಮತ್ತು ಮೊಮ್ಮಕ್ಕಳೊಡನೆ ತೋಟದತ್ತ ಸಂಜೆ ತೆರಳಿದರು. ಮೊಮ್ಮಕ್ಕಳು ಅಲ್ಲೇ ಕಂಡ ಮಾವಿನ ಹಣ್ಣುಗಳನ್ನು ಹೆಕ್ಕಲು, ಮರಕ್ಕೆ ಕಲ್ಲುಹೊಡೆಯಲು ಶುರುಮಾಡಿದರು. ತಂದೆ, ಮಗ ಇಬ್ಬರೂ ತೋಟದಲ್ಲಿ ಮಾತನಾಡುತ್ತಾ ಕುಳಿತರು.
"ನೋಡು ಮಗಾ.. ಕಳೆದ ಮುಂಗಾರಿಗೆ ಈ ಭಾಗಕ್ಕೆ ಸಿಡಿಲು ಬಡಿದು ಹಲವು ಅಡಿಕೆ ತೆಂಗು ಮರಗಳು ಸತ್ತವು. ಮತ್ತೆ ಕೆಲವು ಗಾಳಿಯ ಅಬ್ಬರಕ್ಕೆ ಮುರಿದವು. ಫಸಲು ಚೆನ್ನಾಗಿ ಬಂದರೂ ತೆಂಗಿಗೆ ಮಂಗನ ಉಪದ್ರ ವಿಪರೀತ. ಮನೆ ಖರ್ಚಿಗೆ, ಗಾಣದಲ್ಲಿ ಎಣ್ಣೆ ತೆಗೆಯುವಷ್ಟು ತೆಂಗಿನಕಾಯಿಯನ್ನು ಮಂಗಗಳು ಉಳಿಸುವುದೇ ನಮ್ಮ ಭಾಗ್ಯ. ಇನ್ನು ಕಾಡುಹಂದಿ, ನವಿಲುಗಳು ಭತ್ತದ ಗದ್ದೆಗೆ ದಾಳಿಯಿಟ್ಟರೆ ನಮಗೆ ಸಿಗುವುದು ಚೂರುಪಾರು ಅಷ್ಟೇ. ವೈಭವದ ಕೃಷಿಯ ಕಥೆ. ಇಂದಿನ ವ್ಯಥೆ" ಎಂದು ಅಳಲು ತೋಡಿಕೊಂಡರು.
"ಅಪ್ಪಾ... ಅದಕೆಲ್ಲ ತಲೆಕೆಡಿಸಿಕೊಳ್ಳುವುದರ ಬದಲು ಈ ಭೂಮಿಯನ್ನು ಮಾರೋಣ. ಕೋಟಿಗಟ್ಟಲೆ ದುಡ್ಡು ಬರುತ್ತದೆ. ಆ ದುಡ್ಡಲ್ಲಿ ನಗರದಲ್ಲಿ ನಾಲ್ಕಾರು ಮನೆ ಕಟ್ಟಿ ಬಾಡಿಗೆಗೆ ಕೊಡೋಣ. ನೀವು ನನ್ನ ಜೊತೆ ಬೆಂಗಳೂರಿಗೆ ಬಂದುಬಿಡಿ.
ಕೃಷಿಯಲ್ಲಿ ಎಷ್ಟು ದಿನ ಒದ್ದಾಡುವುದು ಸುಮ್ಮನೆ" ಎಂದು ಸುಧೀರ್ ತಂದೆಗೆ ಹೇಳಿದ.
ರಾಯರು ಸಮ್ಮತಿಸಲಿಲ್ಲ. ಹಿರಿಯರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ಮಾರುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ.
ಕೆಲವು ವರ್ಷಗಳ ನಂತರ ಸುಧೀರ್ ಕೆಲಸ ಮಾಡುತ್ತಿದ್ದ ಕಂಪೆನಿ ಆರ್ಥಿಕ ಕುಸಿತದಿಂದಾಗಿ ನೆಲಕಚ್ಚಿತು. ಕೆಲಸ ಕಳೆದುಕೊಂಡನು. ಬೇರೆ ಕಡೆ ಪ್ರಯತ್ನಿಸಿದನು. ಆರು ತಿಂಗಳಿನಿಂದ ಎಷ್ಟೇ ಪ್ರಯತ್ನಪಟ್ಟರೂ ಬೇರೆ ಉದ್ಯೋಗ ದೊರಕಲಿಲ್ಲ. ಕಂಗೆಟ್ಟುಹೋಯಿತು. ಬದುಕಿನ ಮುಂದಿನ ದಾರಿ ಯೋಚಿಸಬೇಕಾಯಿತು.
ಮನೆ ಸಾಲದ ಕಂತು ಕಟ್ಟಲಾಗದೆ ಬೆಟ್ಟದಂತೆ ಬೆಳೆಯಿತು. ನಿರ್ವಾಹವಿಲ್ಲದೆ ತಂದೆಗೆ ವಿಷಯ ತಿಳಿಸಿದ ಸುಧೀರ್.
"ಏನೂ ಚಿಂತಿಸಬೇಡ. ನಮ್ಮ ಹಿರಿಯರ ಭೂಮಿಯಿದೆ ನಮ್ಮನ್ನು ಪೊರೆಯಲು. ಇನ್ನು ಆ ಕಂಪೆನಿ ಈ ಕಂಪೆನಿ ಎಂದು ವಿದೇಶೀಯ ಕಂಪೆನಿಗಳ ಮುಂದೆ ಕೈ ಚಾಚಬೇಡ. ನಮ್ಮದೇ ಭೂಮಿಯಲ್ಲಿ ದುಡಿದು ಸುತ್ತಮುತ್ತಲಿನ ನಾಲ್ಕಾರು ಕುಟುಂಬಗಳಿಗೆ ಕೆಲಸ ಕೊಟ್ಟು ಸ್ವಂತ ಕಾಲ ಮೇಲೆ ನಿಲ್ಲುವಿಯಂತೆ. ಆದಷ್ಟು ಬೇಗ ಬಾ" ಎಂದು ಕೃಷ್ಣ ರಾಯರು ಮಗನಿಗೆ ಹೇಳಿದರು.
ಸುಧೀರ್ ಗೆ ತಂದೆಯ ನುಡಿ ಹಿತವೆನಿಸಿತು. ಭರವಸೆಯನ್ನು ಮೂಡಿಸಿತು. ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಬಾಡಿಗೆಗೆ ಕೊಟ್ಟು ತನ್ನೂರಿನತ್ತ ಪ್ರಯಾಣ ಬೆಳೆಸಿದರು. ಸಿಕ್ಕ ಬಾಡಿಗೆಯಲ್ಲಿ ಸಾಲದ ಕಂತು ಕಟ್ಟಿ ತನ್ನ ಜಮೀನಿನಲ್ಲಿ ಶ್ರಮವಹಿಸಿ ದುಡಿಯುತ್ತಿದ್ದಾನೆ ಸುಧೀ.
ತಂತ್ರಜ್ಞಾನ ವನ್ನು ಕೃಷಿಯಲ್ಲಿ ಬಳಸಿಕೊಂಡು ತನ್ನ ಭೂಮಿಯ ಫಸಲಿಗೆ ತಾನೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾನೆ. ಅಲ್ಲದೆ ಸುತ್ತಲಿನ ಹಳ್ಳಿಯ ರೈತರಿಗೆ ಮಾರುಕಟ್ಟೆಯ ತಂತ್ರಜ್ಞಾನ, ಯಾವ ಸಮಯಕ್ಕೆ ಯಾವ ಬೆಳೆ ಹೇಗೆ ಬೆಳೆಯಬಹುದು ಎಂಬ ಮಾಹಿತಿಯನ್ನು ಕೂಡ ಕೊಡುತ್ತಿದ್ದಾನೆ. ಹಲವಾರು ಕೃಷಿ ತಜ್ಞರನ್ನು ತನ್ನೂರಿಗೆ ಕರೆಸಿಕೊಂಡು ರೈತರ ಜೊತೆ ಕೃಷಿ ಸಂವಾದ ಏರ್ಪಡಿಸುತ್ತಿದ್ದಾನೆ.
ಒಂದು ದಿನ ತೋಟದಲ್ಲಿ ಅಡ್ಡಾಡುತ್ತಿದ್ದಾಗ ರಾಯರು ಮಗನನ್ನು ಅಲ್ಲೇ ಬಂಡೆಯ ಮೇಲೆ ಕೂರಿಸಿಕೊಂಡು ಹೇಳಿದರು "ನೀನು ಎಲ್ಲಿ ಬೆಂಗಳೂರಿನಲ್ಲಿ ನೆಲೆಯಾಗಿ ಬಿಡುತ್ತೀಯೋ... ಭೂಮಿ ತಾಯಿಯನ್ನು ಚಿಲ್ಲರೆ ಕಾಸಿಗೆ ಮಾರಿಬಿಡುತ್ತೀಯೋ ಎಂಬ ಆತಂಕ ನನಗಿತ್ತು. ಪಟ್ಟಣದ ಬದುಕು ಪಾಠ ಕಲಿಸಿತು. ಮತ್ತೆ ಹಿರಿಯರ ಹಸಿರ ಸಿರಿಯನ್ನು ಬೆಳಗಿಸುತ್ತಿದ್ದೀಯ. ನನಗೀಗ ಬಲು ಸಂತೃಪ್ತಿ ಆಗಿದೆ. ಇದೇ... ಇದೇ... ಭೂಮಿ ನಮಗೆ ಕಷ್ಟದಲ್ಲಿ ಆಶ್ರಯ ಕೊಟ್ಟದ್ದು.. ತುತ್ತು ಅನ್ನ ಕೊಟ್ಟದ್ದು... ಮರೆಯಬೇಡ.." ಎಂದಾಗ ಇಬ್ಬರ ಕಣ್ಣಿಂದಲೂ ನೀರ ಹನಿ ಭೂಮಿತಾಯಿಯ ಒಡಲಿಗೆ ಉದುರಿತು.
✍️... ಅನಿತಾ ಜಿ.ಕೆ.ಭಟ್.
24-12-2019.
ವೇದಿಕೆ: ಕಥಾ ಕವನಗಳ ಸಂಕಲನ
ದತ್ತಸಾಲು: ಅಪ್ಪ ಮಗ ಇಬ್ಬರೂ ತೋಟದಲ್ಲಿ ಕುಳಿತು ಮಾತನಾಡುತ್ತಿದ್ದಾರೆ.