ಒಂದೇ ಸಮನೆ ಅಂಬಾ ಎನ್ನುತ್ತಿರುವ ಕರುವಿಗೆ ಒಂದು ಹಿಡಿ ಬೈಹುಲ್ಲನ್ನು ಹಾಕಿ ಬೆನ್ನು ನೇವರಿಸಿ,"ಇರು... ಗೌರಿ.. ಸ್ವಲ್ಪ ಮಳೆ ಕಡಿಮೆಯಾಗಲಿ. ಮತ್ತೆ ಹಸಿ ಹುಲ್ಲು ತಂದು ಹಾಕುತ್ತೇನೆ. ಈಗ ಇದನ್ನು ತಿಂದು ಸಮಾಧಾನದಿಂದ ಮಲಗಿಕೋ.." ಎನ್ನುತ್ತಾ ದನದ ಕೊಟ್ಟಿಗೆಯಿಂದ ಹೊರಗಡೆ ಬರುವಾಗಲೇ ಕರು ಬೈಹುಲ್ಲನ್ನು ಮೂತಿಯಿಂದ ಕೆಳಗೆ ತಳ್ಳಿತ್ತು."ನೀನು ಹೀಗೇ ಏಕೆ ಹಠ ಮಾಡುತ್ತಿ..ನಂಗೂ ಈ ಮಳೆಗೆ ಹುಲ್ಲು ತರುವುದೆಷ್ಟು ಕಷ್ಟ..ನಿಂಗೇನು ಗೊತ್ತು.." ಎನ್ನುತ್ತಾ ಅಂಗಳಕ್ಕೆ ಬಂದು ಈಗ ಮಳೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟಳು.
ಬಿಸಿ ಬಿಸಿ ಕಾಫಿ ಕುಡಿದು ಹುಲ್ಲು ತರಲು ಹೋಗಲೇಬೇಕು..ಪಾಪ ಬಾಯಿ ಬಾರದ ಹಸು, ಕರು. ಅವುಗಳಿಗೂ ಬೇಜಾರಾಗಿರುತ್ತೆ ಮೂರು ದಿನದಿಂದ ಒಣಗಿದ ಬೈಹುಲ್ಲನ್ನೇ ತಿಂದು. ಸತತ ಮಳೆಯಿಂದಾಗಿ ಹೊರಗೆ ಹೋಗಲು ಆಗಿಲ್ಲ ರಮೆಗೆ. ಕಾಫಿಯೊಂದಿಗೆ ರಸ್ಕ್ ತಿನ್ನೋಣವೆಂದು ಕರಡಿಗೆ ತೆಗೆದರೆ ಮಿನ್ನಿಪುಚ್ಚೆ ಹಾಜರು. ಮಿಯಾಂವ್ ಎನ್ನುತ್ತಾ ರಮೆಯ ಕಾಲಿಗೇ ಸುತ್ತತೊಡಗಿತು. ರಮೆ ರಸ್ಕ್ ತಿನ್ನುವಾಗ ಮಿನ್ನಿ ಎಲ್ಲಿದ್ದರೂ ಓಡಿ ಬಂದು ತನಗೂ ಪಾಲು ಕೇಳುತ್ತಿತ್ತು..ಧಾರಾಕಾರವಾಗಿ ಸುರಿವ ಮಳೆಗೆ ಹೊರಗೆ ಹೋಗಲಾಗದ ಅವಳ ಮನದಲ್ಲೂ ನೆನಪುಗಳ ಸುರಿಮಳೆ. ಒಮ್ಮೊಮ್ಮೆ ಜೋರಾಗಿ, ಮಗದೊಮ್ಮೆ ತುಂತುರು ಹನಿಯಂತೆ ಹಿತವಾಗಿ, ಮತ್ತೊಮ್ಮೆ ಬಿರುಗಾಳಿಗಿಂತಲೂ ಬಿರುಸಾಗಿ.. ಮಳೆ ಹೇಗಿದ್ದರೂ ತನ್ನ ಜೊತೆಗಿರುವ ಎಲ್ಲರನ್ನೂ ತೋಯಿಸುತ್ತವೆ. ಆದರೆ ನೆನಪುಗಳ ಮಳೆಯಲ್ಲಿ ತೋಯುವವಳು ತಾನೊಬ್ಬಳೇ..
ರಾಮಚಂದ್ರ ರಾಯರು ಮತ್ತು ಸಾವಿತ್ರಮ್ಮನ ಮೊದಲ ಮಗಳೇ ರಮೆ.. ಪೂರ್ಣಹೆಸರು ಮನೋರಮೆ. ನಂತರ ಸಾಲಾಗಿ ನಾಲ್ಕು ಹೆಣ್ಣು, ಮೂರು ಗುಂಡು ಮಕ್ಕಳು. ಏಳನೇ ತರಗತಿ ಮುಗಿಯುತ್ತಲೇ "ಇನ್ನು ಓದಿದ್ದು ಸಾಕು.. ಮನೆಕೆಲಸ ಮಾಡುವುದು ಕಲಿತುಕೋ" ಎಂದು ಓದು ಬಿಡಿಸಿದರು ರಾಮಚಂದ್ರ ರಾಯರು. ತಮ್ಮ ತಂಗಿಯರಿಗೆ ಹೆಚ್ಚು ಓದಲು ಅವಕಾಶ ದೊರೆತಿದ್ದರೂ ಎಂದೂ ಹಲುಬಿದವಳಲ್ಲ ರಮೆ. ಅವರಿಗೆ ಬೇಕಾದ ಸಹಾಯ ಮಾಡಿಕೊಟ್ಟು ಓದಲು ಬೆಂಬಲ ನಿಡುತ್ತಿದಳು.
ಹದಿನೆಂಟು ತುಂಬುತ್ತಲೇ "ಇನ್ನು ಜಾತಕ ಹೊರಗೆ ಹಾಕೋಣ" ಎಂದ ತಂದೆಯ ಮಾತಿಗೆ ಒಪ್ಪಿಗೆ ಸೂಚಿಸಿದಳು ಹೆತ್ತವರು ಹಾಕಿದ ಗೆರೆಯನ್ನು ದಾಟದ ವಿಧೇಯ ಮಗಳು ರಮೆ. ನೂರಾರು ಕಡೆ ಜಾತಕ ಕೊಟ್ಟರೂ ಒಂದೂ ಮುಂದುವರಿಯಲಿಲ್ಲ. ಹೆಸರು ಮನೋರಮೆಯಾದರೂ ತನ್ನ ಪಾಲಿನ ಮುದ್ದಣ ಇನ್ನೂ ಬರಲಿಲ್ಲವೇಕೆ? ಎಂದು ಕಾತರಿಸುತ್ತಿದ್ದಳು.ಜೋಯಿಸರಲ್ಲಿ ಜಾತಕ ತೋರಿಸಿದಾಗ ಅವರು ಹೇಳಿದ ಮಾತುಗಳನ್ನು ಕೇಳಿ ಅವಳು ಬಿಕ್ಕಿ ಬಿಕ್ಕಿ ಅತ್ತಿದ್ದಳು. ಅತ್ತಿದ್ದು ವಾರಗಟ್ಟಲೇ.. ಆ ಸಮಯದಿಂದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕಿದವಳು.
ಒಡಹುಟ್ಟಿದವರು ಮದುವೆಯಾಗಿ ತಮ್ಮದೇ ಸಂಸಾರ ಹೂಡಿದರೂ ಅವರೆಡೆಗೆ ದೃಷ್ಟಿ ಹಾಯಿಸದೆ ನಿರ್ಲಿಪ್ತತೆಯಿಂದ ಬದುಕಿದವಳು.ಮಗಳೋ ಸೊಸೆಯೋ ಆಗಮಿಸಿದಾಗ ರಮೆ ಬೆಳೆಸಿದ ಗುಲಾಬಿಯೋ, ಮಲ್ಲಿಗೆಯೋ ಮುಡಿಸಿ, "ಈಗ ತುಂಬಾ ಆಗುತ್ತೆ ಹೂವು.. ನೀವು ಇಲ್ಲೇ ಇದ್ದಿದ್ದರೆ ದಿನವೂ ಮುಡಿಯಬಹುದಿತ್ತು" ಎಂದು ರಾಗವೆಳೆಯುತ್ತಿದರು ಸಾವಿತ್ರಮ್ಮ. ಮಗನಿಗೆ ಆ ತರಕಾರಿ ಪ್ರೀತಿ, ಮೊಮ್ಮಗಳಿಗೆ ಇದು ಪ್ರೀತಿ ಎನ್ನುತ್ತಾ ತರಕಾರಿಗಳನ್ನು ಕೈಚೀಲಗಳಿಗೆ ತುಂಬಿ ಕೊಡುತ್ತಿದ್ದರು. ಅವರೆಲ್ಲರೂ ತೆರಳಿದ ಬಳಿಕ ಅದೆಲ್ಲವನ್ನೂ ತನ್ನ ಹಸುಗೂಸಿನಂತೆ ಪಾಲಿಸಿ ಪೋಷಿಸುವ ರಮೆಯನ್ನು "ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳುವುದೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ" ಎಂದು ಕಣ್ಣುಕೆಕ್ಕರಿಸಿದರೆ ರಮೆ ಕಿವುಡಿಯಂತೆ ತನ್ನ ಕಾರ್ಯಕ್ಕೆ ತೆರಳುತ್ತಿದ್ದಳು.ವಯಸ್ಸಾದ ಹೆತ್ತಬ್ಬೆಯ ಒಡಲ ಸಂಕಟದ ಮಾತು ಇದು ಎಂದು ತನ್ನನ್ನು ತಾನೇ ಸಂತೈಸಿ ಮರೆತು ಬಿಡುತ್ತಿದ್ದಳು. ಯೌವ್ವನದ ಬಯಕೆಗಳನ್ನು ತೋರಗೊಡದೆ ತನ್ನೊಳಗೆ ಅದುಮಿಟ್ಟುಕೊಂಡಿದ್ದಳು.
ತಂದೆ ತಾಯಿ ಅಗಲಿದ ನಂತರ ಒಡಹುಟ್ಟಿದವರು "ಒಂದೊಂದು ತಿಂಗಳಿಗೆ ನಮ್ಮಲ್ಲಿಗೆ ಬಂದು ಇರು" ಎಂದು ಕರೆದರು. ಹೋದವಳಿಗೆ ಒಂದು ವಾರವಾದಾಗಲೇ ತನ್ನಿಂದಾಗಿ ಅವರ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತಿದೆ ಎಂದು ಅರಿತುಕೊಂಡು ಬೇಗನೆ ತನ್ನ ಗೂಡಿಗೆ ಮರಳಿದಳು.ಅಂದು ಮನೆತುಂಬಾ ಜನರಿದ್ದ ಮನೆ ಇಂದು ಬೀಕೋ ಎನ್ನುತ್ತಿದೆ. ಗತವೈಭವದ ಪಳೆಯುಳಿಕೆಯಂತೆ ಭಾಸವಾಗುತ್ತಿದೆ. ವಿಶಾಲವಾದ ಚಾವಡಿಯ ಹಲಸಿನಮರದ ಬಾಜಿರಕಂಬಗಳು ಚಹಾಪುಡಿಯಂತಹ ಹುಡಿಯುದುರಿಸಿ ತಮಗೂ ವಯಸ್ಸಾಯಿತು, ಆರೋಗ್ಯ ಹದಗೆಡುತ್ತಿದೆ ಎಂದು ಸಾರುತ್ತಿವೆ. ಮಳೆಬಂದಾಗ ಸೋರುವ ಮಾಡು ಮನೆಯಲ್ಲಿ ಅಲ್ಲಲ್ಲಿ ಪುಟ್ಟ ಪಾತ್ರೆಗಳನ್ನಿರಿಸಿ ನೀರು ಸಂಗ್ರಹಿಸಬೇಕಾದ ಪರಿಸ್ಥಿತಿ ತಂದೊಡ್ಡಿವೆ. ಆದರೂ ಅವೆಲ್ಲವನ್ನೂ ಬಲು ಅಚ್ಚುಕಟ್ಟಿನಿಂದ ನಿಭಾಯಿಸುವವಳು ರಮೆ. ಹತ್ತಾರು ಜಾನುವಾರುಗಳಿದ್ದ ದನದ ಕೊಟ್ಟಿಗೆ ಇಂದು ಒಂದು ದನ ಕರುವಿಗೆ ಸೀಮಿತವಾಗಿದೆ.. ಆದರೆ ಹಸಿರು....? ಮನೆಯಂಗಳದ ಸುತ್ತ ಮುತ್ತ ಹೂವಿನ ಗಿಡಗಳು ಮೊದಲಿಗಿಂತಲೂ ಸುಂದರವಾಗಿ ನಳನಳಿಸುತ್ತಿವೆ. ತಾಜಾ ಹಣ್ಣುತರಕಾರಿಗಳು ಗಿಡಮರಗಳಲ್ಲಿ ತೂಗಿ, ರಮೆಗೆ ಆದಾಯವನ್ನು ತಂದುಕೊಡುತ್ತಿವೆ. ಅಡಿಕೆ, ತೆಂಗು, ಬಾಳೆಯ ತೋಟವು ಫಲಭರಿತವಾಗಿವೆ.. ಇದೆಲ್ಲ ರಮೆಯ ಮೌನಸಾಧನೆ. ರಮೆ, ದನ, ಕರು, ನಾಯಿ ಮತ್ತು ಬೆಕ್ಕು.. ಇವಿಷ್ಟೇ ಈ ಮನೆಯ ಸದಸ್ಯರು. ಯಾರದೂ ಚುಚ್ಚುಮಾತಿಲ್ಲ. ಮೆಚ್ಚುವ ನಡೆಯಿಲ್ಲ.
ಕೊನೆಯ ತಮ್ಮ ಸುರೇಶ ತನ್ನ ಕಂಪೆನಿಯ ಕೆಲಸದ ನಿಮಿತ್ತ ಅಮೇರಿಕಾದಿಂದ ಭಾರತಕ್ಕೆ ಬರುತ್ತೇನೆ ಎಂದಿದ್ದ. ಜೊತೆಗೆ ಮಡದಿ ಮಕ್ಕಳನ್ನೂ ಕರೆದುಕೊಂಡು ಬಾ ಎನ್ನಲು ರಮೆ ಮರೆಯಲಿಲ್ಲ. ಎಲ್ಲರೂ ಬಂದರು. ಮಾವನ ಮನೆಯಲ್ಲಿ ಉಳಿದುಕೊಂಡ ಸುರೇಶ ಒಂದೆರಡು ಗಂಟೆಗಳಿಗೆ ತನ್ನ ಮನೆಗೆ ಭೇಟಿನೀಡಿದ. "ಅಕ್ಕಾ.. ನೀನು ಎಷ್ಟು ದಿನಾಂತ ಒಬ್ಬಳೇ ಇರುತ್ತೀಯ ಇಲ್ಲಿ.. ವಯಸ್ಸಾಗುತ್ತಾ ನಿನಗೂ ಕೆಲಸ ಮಾಡಲು ಕಷ್ಟ.. ಅದಕ್ಕೇ ನಾವೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈ ಆಸ್ತಿಯನ್ನು ಮಾರೋಣ..ಬಂದ ದುಡ್ಡನ್ನು ಹಂಚಿಕೊಳ್ಳೋಣ.. ನಿನಗೆ ಬಂದ ದುಡ್ಡಲ್ಲಿ ನೀನು ಯಾವುದಾದರೂ ಅನಾಥಾಶ್ರಮದಲ್ಲಿ ಯಾವುದೇ ಜಂಜಾಟವಿಲ್ಲದೇ ಸುಖವಾಗಿರು" ಹೊರಡುವಾಗ ಹೇಳಿದ ಮಾತು ಅವಳ ಗಂಟಲುಬ್ಬುವಂತೆ ಮಾಡಿತು. ಇವನಿಗೇ ನಾನು ಅ ಆ ಇ ಈ ಬರೆಯಲು ಕಲಿಸಿ, ಹಾಲು, ತುಪ್ಪ ಮಾರಿದ ದುಡ್ಡನ್ನು ಜೋಪಾನವಾಗಿ ತೆಗೆದಿರಿಸಿ ಕಾಲೇಜು ಫೀಸು ಕಟ್ಟಿದ್ದು.. ಎಂದು ಯೋಚಿಸಿ ಕಣ್ಣಾಲಿಗಳು ತುಂಬಿ ಬಂದವು.
"ಇಲ್ಲ. ನಾನು ಒಬ್ಬಂಟಿಯಲ್ಲ. ದನ, ಕರು, ಬೆಕ್ಕು, ನಾಯಿ, ಹಸಿರು ಸಸ್ಯರಾಶಿ ಎಲ್ಲವೂ ನನ್ನ ಜೊತೆಗಿವೆ. ನನ್ನಲ್ಲಿ ಮಾತನಾಡುತ್ತಿವೆ. ಅವುಗಳ ಮೂಕಭಾಷೆ ನನಗೆ ತಿಳಿಯುತ್ತದೆ. ನಾನು ಮನೆಯನ್ನು ದುರ್ಗತಿಗೆ ತಳ್ಳುವಂತಹ ಗ್ರಹಗತಿಯನ್ನು ಹೊಂದಿದವಳು ಎಂದು ಜೋಯಿಸರು ಹೇಳಿದ್ದನ್ನು ಸುಳ್ಳುಮಾಡಿ ಇಂದು ಯಾರ ಆಸರೆಯೂ ಇಲ್ಲದೆ ಭೂಮಿತಾಯಿ ನಳನಳಿಸಿ ಹಸಿರಾಗಿ ಬೆಳಗುವಂತೆ ಮಾಡಿದ್ದೇನೆ. ಈ ಭೂಮಿ ಈ ಪರಿಸರ ಸುಭಿಕ್ಷವಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಈ ಭೂಮಿ ನನಗಾಸರೆ ನೀಡೀತು"ಎಂದುತ್ತರಿಸಿ ಗದ್ಗದಿತಳಾದಳು. "ನೀನು ಯಾರು ಹೇಳಿದರೂ ಕೇಳುವವಳಲ್ಲ. ಹಠಮಾರಿ.. ನನಗೆ ಗೊತ್ತು" ಎನ್ನುತ್ತಾ ಸುರೇಶ ಹೊರಟು ನಿಂತ.ಅವನು ಹೋದ ಮೇಲೆ ಅದೆಷ್ಟು ಹೊತ್ತು ಗತಬದುಕಿನ ಮೆಲುಕಿನಲ್ಲಿ ಮೈಮರೆತಿದ್ದಳೋ..! ಅವಳಿಗೆ ಎಚ್ಚರವಾದದ್ದು ಕರು ಅಂಬಾ.. ಅಂದಾಗ.
ಇವತ್ತು ಸುರೇಶ, ಇನ್ನೊಂದು ದಿನ ದೊಡ್ಡ ತಮ್ಮ ಸದಾಶಿವ, ಮತ್ತೊಂದು ದಿನ ದಿನಕರ, ಆಗಾಗ ತಂಗಿಯಂದಿರಿಂದ ಈ ಮಾತು ಕೇಳುತ್ತಲೇ ಇರಬೇಕಾದೀತು ಕೊನೆಯ ತನಕವೂ ಎಂಬುದು ಖಚಿತವಾಗಿತ್ತು..
ಮಳೆ ಕೊಂಚ ಬಿಡುವು ಪಡೆದುಕೊಳ್ಳುವ ಲಕ್ಷಣ ಕಂಡಿತು. ಕತ್ತಿ ಹಿಡಿದು ಹೊರಟವಳನ್ನು ಕಂಡು ಅಂಬಾ ಎಂದ ಕರುವಿನಲ್ಲಿ "ಈಗ ಹುಲ್ಲು ತಂದು ಹಾಕುವೆ" ಪ್ರೀತಿಯಿಂದ ತಲೆನೇವರಿಸಿ ಹೇಳಿ ಹೊರಟಳು.
✍️... ಅನಿತಾ ಜಿ.ಕೆ.ಭಟ್.
03-08-2021.
Momspresso Kannadaದ 'ಅಂತ್ಯವಿಲ್ಲದ ಕಥೆ' ಎಂಬ ವಾರದ ಬ್ಲಾಗ್ ಸವಾಲಿಗಾಗಿ ಬರೆದಿರುವ ಕಥೆ.
No comments:
Post a Comment