Friday, 13 August 2021

ನಾಗರಪಂಚಮಿ ಹಬ್ಬ

 


#ನಾಗರಪಂಚಮಿ ಹಬ್ಬ

ಬಂದಿದೆ ಈ ದಿನ ಪಂಚಮಿಹಬ್ಬ
ಎಲ್ಲರೂ ಒಂದುಗೂಡೋಣ
ನಾಗದೇವನಿಗೆ ಭಕ್ತಿಲಿ ನಮಿಸಿ
ಹಾಲಭಿಷೇಕವ ಮಾಡೋಣ||೧||

ಕ್ಷೀರವು ಬಿಂದಿಗೆ ಎಳನೀರಿರಲಿ
ಕೇದಿಗೆ ಸಂಪಿಗೆ ಸಿಂಗಾರ ಪುಷ್ಪಗಳು
ಅರಸಿನ ಗಂಧ ಹಣ್ಣುಕಾಯಿ
ದೀಪ ಧೂಪ ಮಂಗಳವಾದ್ಯಗಳು||೨||

ಅರಸಿನೆಲೆ ಕಡುಬು ತಂಬಿಟ್ಟುಂಡೆ
ವಿಧವಿಧ ನೈವೇದ್ಯ ವಾಸುಕಿಗೆ
ಅರಿಯದ ತಪ್ಪನು ಮನ್ನಿಸೆ ಬೇಡುವ
ಒಡೆಯನು ನಾಗನು ಈ ಧರೆಗೆ||೩||

ಶ್ರಾವಣ ಶುಕ್ಲ ಪಂಚಮಿ ದಿನದಲಿ
ನಾಡಿಗೆ ಉಲ್ಲಾಸ ಸಡಗರವು
ಮಿಂದು ಮಡಿಯಲಿ ಸಕಲಭಾಗ್ಯವ
ಬೇಡಲು ಪೂರ್ಣ ಅನುಗ್ರಹವು||೪||

ಪಿತನನು ಕೊಂದ ನಾಗನಕುಲವ
ನಾಶಗೈಯುವೆನೆಂಬ ಶಪಥದಲಿ
ಯಜ್ಞದಿ ನಿರತ ರಾಜನ ಕಂಡು
ಋಷಿಯದೋ ಮಣಿಸಿದ ಕುಶಲದಲಿ||೫||

ಯಜ್ಞವು ನಿಂತಿಹ ಪುಣ್ಯದ ದಿನವದು
ಒಡಹುಟ್ಟು ಬಾಂಧವ್ಯದ ದ್ಯೋತಕವು
ತವರಿನ ಕುಲವದು ಬೆಳಗುತಲಿರಲು
ಅಣ್ಣತಂಗಿಯ ಪೂಜೆಯ ಸತ್ಫಲವು||೬||

ಆಭರಣವು ಹರನಿಗೆ ಶಯನಕೆ ಹರಿಗೆ
ಒದಗಿದ ಶೇಷಗೆ ಕರಮುಗಿದು
ಸೊಬಗಿನ ಹಚ್ಚ ಹಸುರಿನ ಬನದಲಿ
ಧನ್ಯರಾಗುವ ತನಿಯೆರೆದು||೭||

✍️... ಅನಿತಾ ಜಿ.ಕೆ.ಭಟ್.
13-08-2021. ಚಿತ್ರ ಕೃಪೆ: ಅಂತರ್ಜಾಲ.




2 comments: