ಕಲೆಯ ತಾಣ
ಕವಿಮನಸ ಗೆದ್ದಿರುವ ಬಳಗವಿದುಕಾಣಿ
ಸವಿಗಾನದಿಂಚರವು ಕೇಳುತಿಹುದಿಲ್ಲಿ||ಪ||
ಅಕ್ಕಂದಿರಣ್ಣಂದಿರು ಹಿರಿಕಿರಿಯರೊಡಗೂಡಿ
ಭಜಿಸುತಿರೆ ಸುರಲೋಕ ಬಂದಿಳಿವುದಿಲ್ಲಿ||ಅ.ಪ.||
ಚಿಗುರೊಡೆದ ಬಾಲಪ್ರತಿಭೆಗಳ ಪೋಷಿಸಿ
ಹರಸಿ ಹಾರೈಸುವರು ತುಂಬುಮನದಿ
ಹಲವು ಕಲೆಗಳು ಮಿನುಗುತಿರೆ ಮೇಳೈಸಿ
ನಲಿಯುತಿದೆ ಮನವು ಮುದದಿ||೧||
ಮನೆಯೆಂಬ ಸೆರೆಮನೆಲಿ ನರಳುತಿಹ ಮೆಲ್ಲುಸಿರು
ಅರಳುತಿದೆ ಪ್ರೇರಣೆಯ ಬೆಳಕಿನಲ್ಲಿ
ಎಂದೋ ಕಾಡಿದ ಭಾವ ಮುಸುಕಮರೆಯನು ತೊರೆದು
ಮೆರೆಯುತಿದೆ ಅಭಿಮಾನದ ಹೊಳಹಿನಲ್ಲಿ||೨||
ಹಾಡಹಾರವ ಮಾಡಿ ವಾದ್ಯನಾದವಗೈದು
ಅರ್ಚಿಸುವ ಸರಸ್ವತೀ ಸನ್ನಿಧಾನ
ಮೆಚ್ಚಿಬರುತಿಹ ಜನರ ಕರೆದು ಬಾಗಿಲಿನೊಳಗೆ
ಸಂತಸವಬಡಿಸುವ ಕಲೆಯತಾಣ||೩||
ಸೇವೆಯಲಿ ಸಂತೃಪ್ತಿಪಡುತಿರುವ ಗಡಣದ
ಸಾರಥ್ಯವಿಹುದು ತೆರೆಮರೆಯಲಿ
ದೇಶಭಾಷೆಯ ಗಡಿಮೀರಿ ಅನುದಿನವು ಸಂಗೀತದಾಲಾಪದ ತೊರೆಹರಿಯಲಿ||೪||
✍️.. ಅನಿತಾ ಜಿ.ಕೆ.ಭಟ್.
#ಕಲಾಚಾವಡಿಯ ಮೊದಲ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಬರೆದ ಹಾಡು.
No comments:
Post a Comment