ನಮ್ಮನೆ ದೋಸೆಯಲ್ಲಿ ತೂತೇ ಇಲ್ಲ ಕಣ್ರೀ..
ಅದು ಆಧುನಿಕವಾಗಿ ನಿರ್ಮಿಸಲಾದ ವಠಾರ. ಏಳೆಂಟು ಆರ್ ಸಿ ಸಿ ಮನೆಗಳು ಎರಡು ಸಾಲುಗಳಲ್ಲಿ ಎದುರುಬದುರಾಗಿ ಕಟ್ಟಲ್ಪಟ್ಟಿದ್ದವು. ಮಧ್ಯದಲ್ಲಿ ಖಾಲಿ ಸೈಟುಗಳಿದ್ದು ತೀರಾ ಕಾಂಕ್ರೀಟ್ ಕಾಡು ಎಂಬ ಭಾವನೆ ಮೂಡದಂತೆ ಹಸಿರು ಹೊತ್ತು ನಿಂತಿದ್ದವು. ಮರಗಿಡಗಳು ತಾನಾಗಿಯೇ ಹುಟ್ಟಿದವು, ನೆಟ್ಟು ಬೆಳೆಸಿದವು ಎಲ್ಲವೂ ಫಲ, ನೆರಳು ನೀಡುತ್ತಾ ಪಟ್ಟಣದ ನಡುವೆ ಹಳ್ಳಿಯ ತಂಪಿನ ವಾತಾವರಣವನ್ನು ಸೃಷ್ಟಿಸಿದ್ದವು. ಆ ವಠಾರದ ಮೊದಲ ಮನೆ ಮುಕುಂದ ರಾಯರದು. ಅವರ ಪತ್ನಿ ಮಾಧವಿ. ಒಬ್ಬನೇ ಮಗ ಮಿಹಿರ. ಪತಿ ಪತ್ನಿ ಇಬ್ಬರೂ ದುಡಿಯುತ್ತಿದ್ದು ಮಗನನ್ನು ಬಹಳ ಮುದ್ದಿನಿಂದ ಸಲಹಿದ್ದರು. ವಠಾರಕ್ಕೇ ದೊಡ್ಡ ಸೈಟ್, ದೊಡ್ಡ ಮನೆ ಅವರದ್ದು ಎಂಬ ಹೆಮ್ಮೆ ಅವರಿಗೆ.
ನೆರೆಹೊರೆಯ ಮನೆಗಳಲ್ಲಿ ಸುರೇಶ್ ನಯನಾ, ವೇದಾಂತ್ ಗಾಯತ್ರಿ ವಾಸಿಸುತ್ತಿದ್ದರು. ಕೊನೆಯ ಮನೆ ಕೆಲವು ತಿಂಗಳುಗಳಿಂದ ಖಾಲಿ ಇದ್ದು ಇಪ್ಪತ್ತು ದಿನದ ಹಿಂದೆ ಯುವ ದಂಪತಿ ಆಕಾಶ್ ಚಿತ್ರಾ ಎರಡು ವರ್ಷದ ಮಗುವಿನೊಂದಿಗೆ ವಾಸಿಸಲಾರಂಭಿಸಿದ್ದರು. ಪ್ರತಿದಿನ ಸಂಜೆ ವಠಾರದ ಮಕ್ಕಳೆಲ್ಲ ಸೇರಿ ಆಡುತ್ತಿದ್ದರು. ಹೀಗೆ ಆಡುವ ಮಕ್ಕಳನ್ನು ಹೆಚ್ಚಾಗಿ ಮಾಧವಿ ತಮ್ಮ ಕಂಪೌಂಡಿನೊಳಗೆ ಕರೆಯುತ್ತಿದ್ದಳು. ತಮ್ಮ ಒಬ್ಬನೇ ಮಗನಿಗೆ ಆಟಕ್ಕೆ ಜತೆಯಾದರೂ ಆದೀತೆಂದು. ಒಂಟಿಯಾಗಿ ಬೆಳೆದ ಮಿಹಿರನಿಗೂ ಒಮ್ಮೊಮ್ಮೆ ಆಡಲು ಯಾರಿಲ್ಲವೆಂದು ಬೇಸರವೆನಿಸಿದಾಗ ಅಕ್ಕಪಕ್ಕದ ಮಕ್ಕಳನ್ನೆಲ್ಲ ಯಾವ ಹೊತ್ತಿಗಾದರೂ ಸರಿ ಮನೆಗೆ ಕರೆಯುತ್ತಿದ್ದ.
ಅಂದು ಮಾತ್ರ ಮಿಹಿರನೊಂದಿಗೆ ಆಟವಾಡಲು ಯಾವ ಮಕ್ಕಳೂ ಇರಲಿಲ್ಲ. "ಅಮ್ಮಾ ಅಮ್ಮಾ.. ಆ ಕೊನೆಯ ಮನೆಯಲ್ಲಿರುವ ಪಾಪು ಜೊತೆ ಆಡಲಾ..?" ಕೇಳಿದ.
"ಪರಿಚಯವಿಲ್ಲದವರ ಮನೆಗೆ ಹೋಗಿ ಕರೆಯುವುದು ಹೇಗೆ?" ಎಂದಳು ಅಮ್ಮ ಮಾಧವಿ..
"ಬೇಡ ಕರೆಯಲ್ಲ.. ನಾನಲ್ಲಿಯೇ ಆಡುತ್ತೇನೆ" ಎಂದು ಅಮ್ಮನ ಉತ್ತರಕ್ಕೂ ಕಾಯದೆ ಓಡಿದ ಮಿಹಿರ.
ಕಾಲಿಂಗ್ ಬೆಲ್ ಸದ್ದಾದಾಗ ಯಾರೆಂದು ಕಿಟಕಿಯಿಂದ ನೋಡಿದಳು ಚಿತ್ರಾ. ಓಹೋ ಆ ಮೊದಲ ಮನೆಯ ಹುಡುಗನಂತೆ ತೋರುತ್ತಿದೆ
ಎಂದುಕೊಳ್ಳುತ್ತಾ ಬಾಗಿಲು ತೆಗೆದಾಗ ಒಂದೇ ಉಸಿರಿನಲ್ಲಿ.. "ಆಂಟಿ ಆಂಟಿ.. ನಾನು ನಿಮ್ಮ ಪಾಪುವಿನ ಜೊತೆ ಆಟವಾಡಲಾ?" ಎಂದ..
"ಹೂಂ.. ಆಗಬಹುದು.. ಅದಕ್ಕೇನಂತೆ..ಆಡು" ಒಪ್ಪಿದಳು ಚಿತ್ರಾ. ಸ್ವಲ್ಪ ಹೊತ್ತಿನ ಬಳಿಕ ಅವನಮ್ಮ ಹೊರಗಿನಿಂದ ಕರೆಯಲಾರಂಭಿಸಿದರು.
"ಮಿಹಿರ್ ಆಟವಾಡಿದ್ದು ಸಾಕು ಬಾ.."
"ನನಗೆ ಆಟವಾಡಿ ಆಗಿಲ್ಲ" ಎಂಬುದು ಅವನ ಉತ್ತರ.
ಪದೇ ಪದೇ ಅಮ್ಮ ಕರೆದಾಗ "ಆಂಟಿ ಇವನನ್ನು ನಮ್ಮನೆಗೆ ಕರೆದುಕೊಂಡು ಹೋಗಲಾ.. ಅಮ್ಮ ಕರೀತಾರೆ.. ಇನ್ನು ಅಲ್ಲಿ ಆಡ್ತೀವಿ" ಎಂದ..
" ಆಯ್ತು.. ನಾನೂ ಬರ್ತೀನಿ.. ಭಾರೀ ತುಂಟ ಇವನು.." ಎಂದು ಚಿತ್ರ ತಾನೂ ಹಿಂಬಾಲಿಸಿದಳು.
ಮಕ್ಕಳು ಮನೆಯ ಒಳಗೂ ಹೊರಗೂ ಆಟವಾಡಿದರು. ಚಿತ್ರಾ ಹೊರಗೆ ನಿಂತಿದ್ದಳು. ಚಿತ್ರಾ ನೆರೆಹೊರೆಯ ಹೆಂಗಸರಿಗೆ ಸರಿಯಾಗಿ ಕಾಣಸಿಕ್ಕಿದ್ದು ಆಗಲೇ. ಆಚೆ ಮನೆ ನಯನಾ ಕೂಡ ಏನೋ ನೆಪ ಹೇಳಿ ಬಂದಳು. ಈಚೆ ಮನೆ ಗಾಯತ್ರಿ ವಾಕಿಂಗ್ ಎಂದು ಆಚೆಯಿಂದೀಚೆ ವೇಗವಾಗಿ ನಡೆಯುತ್ತಿದ್ದವಳು ವಾಕಿಂಗ್ ನಿಲ್ಲಿಸಿ ಸೇರಿಕೊಂಡಳು. ವಠಾರದ ಹೆಂಗಸರೆಲ್ಲ ಸೇರಿದರೆ ಕೇಳಬೇಕೇ.. ಮಾತುಕತೆ.. ಹರಟೆ..
"ಮಾಧವಿ.. ನೀವು ನಿನ್ನೆ ಸಂಜೆ ಎಲ್ಲಿಗೆ ಹೋಗಿದ್ದಿರಿ..?"
"ನಿನ್ನೆ ಸಂಡೆ ಅಲ್ವಾ ಗಾಯತ್ರಿ.. ಮನೆಯಲ್ಲಿ ಕೂತುಕೊಳ್ಳಲು ಬೋರ್ ಅದಕ್ಕೇ ಸಂಜೆ ಸಿಟಿ ರೌಂಡ್ಸ್.."
"ಅಂದ್ರೆ ಹೋಟೇಲ್, ಐಸ್ ಕ್ರೀಮ್ ಪಾರ್ಲರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿರಬಹುದು.."
ಎಂದು ಕಣ್ಣರಳಿಸುತ್ತಾ ನುಡಿದಳು ನಯನಾ.
"ಹೂಂ.. ಮಗ ಹಠ ಹಿಡಿದ.. ಹೋಟೇಲ್ ರೂಪಾ ಕಂಫರ್ಟ್ಸ್ ಗೆ ಹೋಗಬೇಕೆಂದು.. ಹಾಗೆ.."
"ಹೂಂ.. ಗೊತ್ತಿತ್ತು.. ನಂಗೆ.. ಬ್ಯಾಟಿಂಗ್ ಮಾಡೋಕೇ ಹೋಗಿದ್ದೂಂತ.. ಹೌದು ಏನೇನ್ ಸ್ಪೆಷಲ್ ಅಲ್ಲಿ..?" ಕೇಳಿದಳು ಗಾಯತ್ರಿ..
"ಮಸಾಲಾ ದೋಸೆ, ಮತ್ತೇನೋ ನಾರ್ತ್ ಇಂಡಿಯನ್ ಡಿಶ್ ಆರ್ಡರ್ ಮಾಡಿದ್ರಪ್ಪಾ.. ಎಲ್ಲಾ ಅಪ್ಪ ಮಗಂದು ಕಾರುಬಾರು..ನಂದೇನಿಲ್ಲ.. ಸುಮ್ಮನೆ.. ಸ್ವಲ್ಪ ಟೇಸ್ಟ್ ನೋಡೋದಷ್ಟೇ.. ಎಂದು ನಕ್ಕಳು ಮಾಧವಿ.
"ಕಳೆದ ವಾರ ಹೋಟೇಲ್ ಏಶಿಯನ್ ಥ್ರಿಲ್ ಗೆ ಹೋಗಿದ್ದಿರಂತೆ ಅಲ್ವಾ.. ನಿಮ್ಮ ಮಗ ಮಿಹಿರ ಹೇಳಿದ್ದು ಕೇಳಿ ನಮ್ಮ ಮಗನೂ ಹೋಗಬೇಕೆಂದು ಹಠ ಹಿಡಿದಿದ್ದ. ಸೋ ಮುಂದಿನವಾರ ಹೋಗಬೇಕೂಂತ ಇದೀವಿ.." ಎಂದಳು ಗಾಯತ್ರಿ..
"ಹೂಂ.. ಹೋಗಿ ಹೋಗಿ.. ಸೂಪರ್ ಆಗಿರುತ್ತದೆ ಐಟಂಸ್ ಎಲ್ಲಾ.. ಭರ್ಜರಿ ಭೋಜನ ಮಾಡಿ ಬನ್ನಿ.." ನಗುನಗುತ್ತಾ ನುಡಿದಳು ಮಾಧವಿ.
ನಯನಾಳ ಮುಖ ಸ್ವಲ್ಪ ಬಾಡಿತ್ತು. ಚಿತ್ರಾ ಅವರ ಮಾತಿನಲ್ಲಿ ಗಮನವಿಲ್ಲದಂತೆ ತನ್ನ ಮಗನತ್ತಲೆ ನೋಡುತ್ತಿದ್ದಳು..
"ಅಲ್ಲ ನಿಮ್ಮ ಹೆಸರೇನು?" ಪ್ರಶ್ನೆಸಿದರು ಗಾಯತ್ರಿ ಚಿತ್ರಾಳತ್ತ ತಿರುಗಿ..
"ನನ್ನ ಹೆಸರು ಚಿತ್ರಾ.." ಎಂದಳು ಚುಟುಕಾಗಿ.
"ಹಾಂ.. ಚೆನ್ನಾಗಿದೆ ಹೆಸರು.. ಯಾವೂರು..?"
"ಚಿತ್ತೂರು.."
"ಅಲ್ಲಾ ನೀವು ಸಂಡೇ ಎಲ್ಲಿಗೂ ಹೋಗೋದಿಲ್ವಾ..? ಎರಡು ವಾರದಿಂದ ಗಮನಿಸುತ್ತಿದ್ದೇನೆ. ಸಂಡೇ ಮನೆಯಲ್ಲಿಯೇ ಇರುತ್ತೀರಿ.." ಮಾಧವಿ ಪ್ರಶ್ನಿಸಿದಳು.
"ಅಗತ್ಯವಿದ್ದರೆ ಹೋಗುತ್ತೇವೆ. ಇಲ್ಲದಿದ್ದರೆ ವಾರವಿಡೀ ದುಡಿವ ಪತಿಗೆ ಆ ದಿನ ವಿಶ್ರಾಂತಿ. ಕುಟುಂಬದ ಜೊತೆ ಸಮಯಕಳೆಯುತ್ತಾ ಮನೆಯಲ್ಲಿಯೇ ಇರುತ್ತೇವೆ."
"ನೀವು ಹೋಟೇಲಿಗಾದ್ರೂ ಹೋಗೋದಿಲ್ವಾ ಸಂಡೇ..!!??" ಕಣ್ಣರಳಿಸಿ ಆಶ್ಚರ್ಯದಿಂದ ಪ್ರಶ್ನಿಸಿದಳು ಮಾಧವಿ..
"ಇಲ್ಲ..."
"ಆಗಾಗ ಪಿಕ್ನಿಕ್.. ಅಥವಾ ವರ್ಷಕ್ಕೊಮ್ಮೆ ಟೂರ್???"
"ಹೋಗೋದಿಲ್ಲ.."
"ಎಂತಾ ಕಂಜೂಸ್ ಮಾರಾಯರೇ ನೀವು.. ಅಲ್ಲ ಅಷ್ಟು ದುಡ್ಡು ಕಟ್ಟಿಟ್ಟು ಏನು ಮಾಡಲಿಕ್ಕುಂಟು.. ಹೋಗುವಾಗ ಗಂಟುಮೂಟೆ ಕಟ್ಟಿ ಒಯ್ಯಲಿಕ್ಕಿಲ್ಲವಲ್ಲ.. ಇರುವಷ್ಟು ದಿನ ಮಜಾವಾಗಿ ಕಳೆಯಬೇಕು.. " ಮಾಧವಿ ಹೇಳುತ್ತಲೇ ಇದ್ದಳು.
ಮಾತನ್ನು ಅರ್ಧಕ್ಕೆ ತಡೆದು "ನಮಗೆ ಬೇಕಾದ ತಿಂಡಿ ತಿನಿಸನ್ನು ಮನೆಯಲ್ಲಿ ಶುಚಿರುಚಿಯಾಗಿ ತಯಾರಿಸಿಕೊಳ್ಳುತ್ತೇವೆ. ಹೊರಗಡೆ ಹೋಗುವುದಿದ್ದರೆ ಮನೆಯಲ್ಲಿ ಆಹಾರ ಸೇವಿಸಿಯೇ ತೆರಳುತ್ತೇವೆ. ಅಗತ್ಯವಿದ್ದರೆ ಮಾತ್ರ ಹಿತಮಿತವಾಗಿ ಹೋಟೇಲೂಟ. ಆಗಾಗ ನಮ್ಮ ಊರುಗಳಿಗೆ ತೆರಳುತ್ತೇವೆ. ತವರೂರು, ಪತಿಯ ಮನೆ ಎರಡೂ ಹಳ್ಳಿಯಲ್ಲಿ. ಅಲ್ಲಿಗೆ ಹೋದಾಗ ತೋಟ-ಗುಡ್ಡ ಕೆರೆ-ತೊರೆ ದರ್ಶನವಾಗುತ್ತದೆ.
ಪ್ರಶಾಂತ ವಾತಾವರಣ ಮನಸಿಗೆ ತುಂಬಾ ಹಿತವಾಗುತ್ತದೆ. ಇದಕ್ಕಿಂತ ಹೆಚ್ಚಿನ ಸಂತಸವನ್ನರಸಿ ಟೂರ್ ಎಂದು ಹೋಗುವುದಿಲ್ಲ." ಎಂದುತ್ತರಿಸಿ ನಿಲ್ಲಿಸಿದಳು ಚಿತ್ರಾ.
"ಚಿತ್ರಾ.. ನಿಮ್ಮೂರು ಚಿತ್ತೂರಿಗೆ ಹೋಗುವಾಗ ದಾರಿ ಮಧ್ಯೆಯಾದರೂ ಹೋಟೇಲಿಗೆ ಭೇಟಿ ಕೊಡೋದಿಲ್ವಾ..?" ಮತ್ತೆ ಅಂತಹದೇ ಪ್ರಶ್ನೆ ಎಸೆದಿದ್ದಳು ಮಾಧವಿ.
"ಅಪರೂಪ.. ಮಗನಿಗೆ ಅಗತ್ಯವಿರುವ ಆಹಾರ ನಾನೇ ಮಾಡಿ ತೆಗೆದುಕೊಂಡು ಹೋಗುತ್ತೇನೆ. ಒಂದೂವರೆ ಗಂಟೆಯಲ್ಲಿ ತಲುಪುತ್ತೇವೆ.."
"ಆದರೂ.. ಹೋಟೇಲಿಗೆ ಹೋಗುವುದೆಂದರೆ ಮಜಾವೇ ಬೇರೆ.. ನಾವು ಚಿತ್ತೂರು ಕಡೆ ಫಂಕ್ಷನ್‌ಗೆ ಹೋಗುವುದಿದ್ದರೆ ಮಧ್ಯೆ 'ಬಿಟಿ ಚಹಾ' ಅಂತೂ ಮಿಸ್ ಮಾಡೋದೇ ಇಲ್ಲ. ಫಂಕ್ಷನ್‌ನಲ್ಲಿ ಊಟ ಮಾಡಿದರೂ ಬರುವಾಗ 'ಗಿರಿಪ್ರಸಾದ್' ಹೋಟೇಲಿಗೆ ಹೋಗದಿದ್ರೆ ಹೇಗೆ..? ತುಂಬಾ ಕುರೆ ಮಾಡೋದು ಒಳ್ಳೆಯದಲ್ಲ."
"ಮನೆಯಡುಗೆ ಆರೋಗ್ಯಕ್ಕೆ ಹಿತ. ಆಗಾಗ ಬಾಯಿ ಚಪಲಕ್ಕಾಗಿ ಹೋಟೇಲ್ ಭೋಜನ ಮಾಡುವುದು
ಅನಾರೋಗ್ಯವನ್ನು ನಾವೇ ಆಹ್ವಾನಿಸಿದಂತೆ. ಮತ್ತೆ ಅವರವರ ಬದುಕಿನ ಶೈಲಿ ಅವರಿಚ್ಛೆಯಂತೆ" ಎಂದಳು ಚಿತ್ರಾ..
"ನಾವು ಪ್ರತೀ ಸಂಡೆ ಎಲ್ಲಾದರೂ ಹೋಗೇ ಹೋಗ್ತೀವಿ.. ವರ್ಷಕ್ಕೊಮ್ಮೆ ನಾರ್ತ್ ಇಂಡಿಯಾ ಟೂರ್ ಹೋದಾಗ ತುಂಬಾ ಹೊಸ ಆಚಾರ ವಿಚಾರಗಳನ್ನು ಕಲಿಯುತ್ತೇವೆ. ಸೌತ್ ಇಂಡಿಯಾ ಎಲ್ಲ ಕಡೆ ಮೊದಲೇ ಸುತ್ತಾಡಿ ಆಗಿದೆ. ಮಗ ಮಿಹಿರ ಚಿಕ್ಕವನಿದ್ದಾಗ ಸೌತ್ ಇಂಡಿಯಾ ಟೂರ್.. ಈಗ ಮಗ ದೊಡ್ಡವನಾದ ಮೇಲೆ ನಾರ್ತ್ ಇಂಡಿಯಾ ಟೂರ್.. ತುಂಬಾ ಖುಷಿಯಾಗುತ್ತದೆ. ಜೀವನವನ್ನು ಎಂಜಾಯ್ ಮಾಡಬೇಕು.." ಮಾತನಾಡುತ್ತಲೇ ಇದ್ದಳು ಮಾಧವಿ.
ಚಿತ್ರಾಳ ತಲೆಯಲ್ಲಿ ಚಿಂತನ ಮಂಥನ ಶುರುವಾಗಿತ್ತು. ನಯನಾಳ ಮುಖವೂ ಸ್ವಲ್ಪ ಇರುಸುಮುರುಸಾದಂತೆ ತೋರಿತು.
" ಹೋಟೇಲ್‌ನಲ್ಲಿ ತಿಂದರೆ, ಟೂರ್ ಹೋದರೆ ಮಾತ್ರ ಜೀವನ ಸಾರ್ಥಕ ಆಗೋದಾ? ಬದುಕಿನಲ್ಲಿ ಮಹತ್ವ ಕೊಡಬೇಕಾದ, ಸಾಧಿಸಬೇಕಾದ ಅದೆಷ್ಟೋ ವಿಷಯಗಳಿವೆ" ಎಂದಳು ನಯನಾ. "ಹಾಗೇನೂ ಅಲ್ಲ. ಆದರೂ ಎಂಜಾಯ್ ಈಗ ಮಾಡದಿದ್ದರೆ ಮತ್ತೆ ಯಾವಾಗ ಮಾಡುವುದು?" ಎಂದಳು ಮಾಧವಿ.
ಜೀವನದಲ್ಲಿ ಒಂದು ಘಳಿಗೆಯಲ್ಲಿ ನಡೆದ ವಾಹನ ಅಪಘಾತ ಸುರೇಶ್‌ನಯನಾರ ಕೌಟುಂಬಿಕ ಬದುಕನ್ನೇ ಬುಡಮೇಲಾಗಿಸಿತ್ತು. ಬದುಕಿ ಉಳಿದದ್ದೇ ಮಕ್ಕಳ ಪುಣ್ಯ ಎಂದು ನಂಬಿದ್ದರು. ಕೈ ಹಿಡಿದಿದ್ದ ಬಿಸ್ನೆಸ್ ನೆಲಕಚ್ಚಿತ್ತು. ವರುಷ ಒಂದಾದಾಗ ಸ್ವಲ್ಪ ಚೇತರಿಸಿಕೊಂಡು ಸಣ್ಣ ಉದ್ಯೋಗವೊಂದನ್ನು ಹಿಡಿದು ಕಷ್ಟದಲ್ಲಿ ಸಂಸಾರ ನಡೆಸುತ್ತಿದ್ದರು. ತಿಂಗಳ ಕೊನೆಗೆ ಕೈಬರಿದಾಗುವುದು ಸಾಮಾನ್ಯ ಆಗಿಹೋಗಿತ್ತು. ಮಕ್ಕಳ ವಿದ್ಯಾಭ್ಯಾಸ ಸಾಲದ ಮೂಲಕವೇ ನಡೆಯುತ್ತಿತ್ತು. ಜೀವನದ ಸಿಹಿಕಹಿಗಳನ್ನು ಅನುಭವಿಸಿದ್ದಳು ನಯನಾ.
ಮಾಧವಿ ತನ್ನದೇ ಧಾಟಿಯಲ್ಲಿ ತನ್ನ ಮಾತುಗಳನ್ನು ಸಮರ್ಥಿಸಿಕೊಂಡಳು. ನಮ್ಮ ಮನೆಯ ದೋಸೆಯಲ್ಲಿ ತೂತೇ ಇಲ್ಲ ಕಣ್ರೀ.. ನಿಮ್ಮೆಲ್ಲರ ಮನೆಯ ದೋಸೆಯಲ್ಲಿ ತೂತುಗಳೇ ಹೆಚ್ಚು.. ಎಂಬಂತಿತ್ತು ಅವಳ ವಾದ.. ವಾರವಿಡೀ ಇಬ್ಬರೂ ಹೊರಗಡೆ ದುಡಿದು ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡಿದರೆ, ಮನಬಂದಂತೆ ತಿರುಗಿದರೆ ಅದೇ ಖುಷಿ ಅವರಿಗೆ. ಅದು ಅವರ ಜೀವನಶೈಲಿ ಆಗಿತ್ತು.
ಹಾಗೆಂದು ಎಲ್ಲರೂ ಅದನ್ನೇ ಆದರ್ಶವಾಗಿ ಇಟ್ಟುಕೊಂಡು ಬದುಕಲಾಗದು. ಅವರವರ ಧ್ಯೇಯೋದ್ದೇಶ ಅವರವರಿಗೆ ಹೆಚ್ಚು ಎನ್ನುವುದು ನಯನಾಳ ವಾದ.
ಚಿತ್ರಾ ಸುಮ್ಮನಿದ್ದು ಕೇಳಿಸಿಕೊಳ್ಳುತ್ತಾ ಇದ್ದಳು. ಎಳವೆಯಿಂದಲೂ ಹಣವೆಂದರೆ ದೇವರೆಂದೇ, ಲಕ್ಷ್ಮಿ ಎಂದೇ ಪೂಜಿಸಲು ಹಿರಿಯರು ಕಲಿಸಿದ್ದರು. ಅಗತ್ಯವಿದಷ್ಟೇ ಖರ್ಚು ಮಾಡಬೇಕು. ಹನಿಗೂಡಿ ಹಳ್ಳವೆಂಬ ಮಾತಿನಂತೆ ಒಂದೊಂದು ರೂಪಾಯಿಯೂ ಮೌಲ್ಯಯುತವಾದದ್ದು. ಆಪತ್ಕಾಲಕ್ಕೆ ಕೂಡಿಟ್ಟ ದುಡ್ಡು ನೆರವಿಗೆ ಬರುವುದು. ಮೋಜು ಮಸ್ತಿಯೆಂದು ಹಣವನ್ನು ನೀರಿನಂತೆ ಖರ್ಚು ಮಾಡಬಾರದು ಎಂಬುದು ಅವಳ ನಿಲುವು. ಹಾಗೆಂದು ತನ್ನ ನಿಲುವನ್ನು ಇನ್ನೊಬ್ಬರ ಮೇಲೆ ಹೇರಲು ಹೋಗುವುದು ಸರಿಯಲ್ಲ ಎಂದು ಸುಮ್ಮನಿದ್ದಳು.
ನಯನಾ ಗಾಯತ್ರಿ ನಿಂತು ಮಾತನಾಡಿ ಕಾಲು ನೋಯುತ್ತೆ ನಾವು ಮನೆಗೆ ಹೋಗುತ್ತೇವೆ ಅಂದಾಗ, "ಅಯ್ಯೋ ಒಳಗೆ ಕರೆಯಲು ಮರೆತೆ.. ಬನ್ನಿ ಬನ್ನಿ ಒಳಗೆ.." ಅಂದಳು ಮಾಧವಿ.
ಚಾವಡಿಯಲ್ಲಿ ಸೋಫಾದಲ್ಲಿ ಕುಳಿತು ಮಾತನಾಡಲಾರಂಭಿಸಿದರು. "ಸೆಖೆ ವಿಪರೀತ ಇದೆ ಮಾಧವಿ.. ಸ್ವಲ್ಪ ಫ್ಯಾನ್ ಹಾಕು ಕಣೇ.." ಎಂದಳು ಗಾಯತ್ರಿ..
"ಹಾಂ.. ಫ್ಯಾ..ನಾ.. ಆ ಕಡೆಯದ್ದೆರಡು, ಈ ಕಡೆಯದ್ದೆರಡು ಕಿಟಕಿಯ ಬಾಗಿಲುಗಳು ತೆರೆದೇ ಇವೆ. ಎಷ್ಟು ಚೆನ್ನಾಗಿ ಗಾಳಿ ಬೀಸುತ್ತಿದೆ. ಬೇಕಾದರೆ ಇನ್ನೂ ಹಾಕಿರುವ ಒಂದೊಂದು ಕಿಟಕಿ ಬಾಗಿಲನ್ನೂ ತೆಗೆಯುತ್ತೇನೆ" ಎಂದು ಹೇಳುತ್ತಾ ಎರಡೂ ಕಡೆಯ ಕಿಟಕಿಯ ಎಲ್ಲಾ ಬಾಗಿಲುಗಳನ್ನು ತೆರೆದರು. ಅವಳ ಪ್ರಕಾರ ತಂಗಾಳಿ ಬೀಸುತ್ತಿತ್ತು. ನಯನಾ, ಗಾಯತ್ರಿ ಮತ್ತು ಚಿತ್ರಾರ ಮೈಯಿಂದ ಬೆವರು ನೀರಿಳಿಯುತ್ತಿತ್ತು. ಗಾಯತ್ರಿ ತಾರಸಿಯತ್ತ ಕಣ್ಣು ಹಾಯಿಸಿದಳು.
"ಗಾಯತ್ರಿ.. ಫ್ಯಾನ್ ಇದೆ ನಮ್ಮಲ್ಲಿ. ಆದರೆ ನಾವು ಬಳಸುವುದು ಕಡಿಮೆ. ಸುಮ್ಮನೆ ಯಾಕಲ್ವಾ ಕರೆಂಟ್ ಖರ್ಚು ಮಾಡೋದು. ಇಡೀ ದೇಶಕ್ಕೇ ಆಗಬೇಕಲ್ವಾ ಕರೆಂಟ್.."
ನಯನಾ ಚಿತ್ರಾ ಮುಖ ಮುಖ ನೋಡಿಕೊಂಡರು. ಚಿತ್ರಾಳ ಮಗ ಬಂದು "ಅಮ್ಮಾ.. ಸೆಖೆ.. ಬಾಯಾರಿಕೆ ಆಗ್ತಿದೆ.. ಕೋಲ್ಡ್ ವಾಟರ್ ಬೇಕು" ಅಂದ. "ಕೊಡ್ತೀನಿ.." ಅಂದ ಮಾಧವಿ ಒಳಹೋದಂತೆ ಎಲ್ಲರೂ ಹಿಂಬಾಲಿಸಿದರು. 'ಅರೆ.. ಕರೆಂಟ್ ಹೋಯ್ತಾ.. ಫ್ರಿಡ್ಜ್ ನ ಸ್ಟೆಬಿಲೈಸರಿನಲ್ಲಿ ಲೈಟ್ ಕಾಣುತ್ತಿಲ್ಲ." ಎಂದಳು ನಯನಾ..
"ಅದು ನಾನು ಆಫ್ ಮಾಡಿದೆ ಈಗಷ್ಟೇ. ಫ್ರಿಡ್ಜ್ ಕೂಲಿಂಗ್ ಇದ್ದರೆ ಸಾಕಲ್ವಾ..?"
"ಫ್ರಿಡ್ಜ್ ಆಫ್ ಮಾಡಿಯೇ ಇಡುವುದಾದರೆ ಬೇಗ ಕೆಡುತ್ತೆ ಮಾಧವಿ" ಎಂದಳು ನಯನಾ.
"ಏನಾಗಲ್ಲ.. ನಾವು ಆರೇ ಗಂಟೆ ಆನ್ ಇಡೋದು. ಬೆಳಗ್ಗೆ ಆನ್ ಮಾಡೋದು. ಡ್ಯೂಟಿಗೆ ಹೋಗುವಾಗ ಆಫ್. ಪುನಃ ಬಂದು ಆನ್ ಮಾಡುವುದು ತಂಪಾದ ನಂತರ ಆಫ್.. ರಾತ್ರಿ ದೋಸೆ ಹಿಟ್ಟು ಇಟ್ಟು ಆನ್ ಮಾಡಿ ಎರಡು ಗಂಟೆಯಲ್ಲಿ ಪುನಃ ಆಫ್‌ಮಾಡುವುದು "
ಎನ್ನುತ್ತಾ ನೀರು ಕೊಟ್ಟಳು.
"ತಂಪಿಲ್ಲಮ್ಮಾ ತುಂಬಾ.."
"ಬೇಕಾದರೆ ಕುಡಿ, ಇಲ್ಲದಿದ್ದರೆ ಮನೆಗೆ ಹೋಗೋಣ ನಡೆ" ಎಂದಳು ಚಿತ್ರಾ ತನ್ನ ಮಗನಲ್ಲಿ.. ಮಾತಾಡದೆ ಕುಡಿದು ಲೋಟವನಿಟ್ಟು ತೆರಳಿದ ಮಿಹಿರನೊಡನೆ ಆಡಲು.
ಕತ್ತಲಾಗುತ್ತ ಬಂತು. ಮಗು ಹೊರಡುತ್ತಲೇ ಇಲ್ಲ. ಹೆಂಗಸರ ಮಾತೂ ನಿಲ್ಲುತ್ತಿಲ್ಲ. "ಏ.. ಏ.. ನಾನು ಸೀರಿಯಲ್ ನೋಡೋ ಟೈಂ.. ಹೊರಡುತ್ತೇನೆ" ಎಂದಳು ನಯನಾ..
"ಟಿವಿ ಹಾಕೋಣ.. ಅದನ್ನು ನಾನೂ ನೋಡುತ್ತೇನೆ" ಎಂದು ಟಿವಿ ಆನ್ ಮಾಡಿದಳು ಮಾಧವಿ.
"ಸ್ವಲ್ಪ ಲೈಟ್ ಹಾಕು ಮಾಧವಿ.. ಈ ಟಿವಿಯ ಲೈಟ್ ಕಣ್ಣಿಗೆ ಬಡೀತಿದೆ.. " ಎಂದಳು ಗಾಯತ್ರಿ.
"ಟಿವಿ ನೋಡಲು ಲೈಟ್ ಟಿವಿಯಲ್ಲೇ ಇದೆ.. ಬೇರೆ ಲೈಟ್ ಯಾಕೆ.? ನಾವು ರಾತ್ರಿ ಮನೆಯ ಮಧ್ಯದ ಡೈನಿಂಗ್ ಏರಿಯಾದಲ್ಲಿ ಮಾತ್ರ ಒಂದು ಟ್ಯೂಬ್ ಲೈಟ್ ಆನ್ ಮಾಡುವುದು. ಮತ್ತೆ ಯಾವ ರೂಮಲ್ಲೂ ಆನ್ ಮಾಡುವುದಿಲ್ಲ ಅದೇ ಬೆಳಕು ಸಾಕಾಗುತ್ತದೆ."
"ಮಿಹಿರ ಹೋಂವರ್ಕ್ ಮಾಡುವಲ್ಲಿ ಕೂಡಾ ಲೈಟ್ ಹಾಕಲ್ವಾ..?" ನಯನಾ ಪ್ರಶ್ನಿಸಿದಳು.
"ಅವನನ್ನು ಟ್ಯೂಬ್ ಲೈಟ್ ಇರುವ ಡೈನಿಂಗ್ ಏರಿಯಾದಲ್ಲಿ ಓದೋಕೆ ಕೂರಿಸ್ತೀನಿ. ನಮ್ಮ ಊಟಾನೂ ಅಲ್ಲಿಯೇ. ಟಾಯ್ಲೆಟ್ ಬಾತ್ ರೂಮ್‌ನಲ್ಲಿ ಮಾತ್ರ ಬೇಕಾದಾಗ ಲೈಟ್ ಹಾಕ್ಕೊಳ್ತೀವಿ.." ಸಮಜಾಯಿಸುತ್ತಾ ಹೇಳಿದಳು ಮಾಧವಿ.
"ಹೌದಾ.."ಎನ್ನುತ್ತಾ ಎಲ್ಲರೂ ಆಶ್ಚರ್ಯಪಟ್ಟರು.
"ಸರಿ ನಾವಿನ್ನು ಹೊರಡೋಣ.. ನಮಗೆ ಸ್ನಾನ ಆಗಬೇಕು ಪುಟ್ಟಾ.. ಮಿಹಿರನಿಗೂ ಫ್ರೆಶ್ ಆಗಬೇಕಷ್ಟೇ. ಶಾಲೆಯಿಂದ ಬಂದು ಸೀದಾ ಆಡಲು ಬಂದಿದ್ದಾನೆ" ಎಂದಳು ಚಿತ್ರಾ..
"ಅರೆ.. ರಾತ್ರಿ ಪುನಃ ಸ್ನಾನ.. ಇಲ್ಲಪ್ಪಾ.. ಬೆಳಗ್ಗೆ ಸ್ನಾನ ಮಾಡಿದರೆ ಮುಗೀತು.. ಮತ್ತೆ ಬೇಕಿದ್ದರೆ ಕೈಕಾಲು ಮುಖ ತೊಳೆಯುವುದಷ್ಟೇ.. ಸುಮ್ಮನೆ ನೀರು ಖರ್ಚು.. ಕಾರ್ಪೊರೇಷನ್ ನೀರು ಇಡೀ ನಗರಕ್ಕೆ ಆಗಬೇಡವಾ..? "
ಚಿತ್ರಾಳಿಗೆ ನಗು ಬಂದರೂ ಕಷ್ಟಪಟ್ಟು ತಡೆದುಕೊಂಡಳು. ನಯನಾ ಗಾಯತ್ರಿ ಮುಖಮುಖ ನೋಡಿಕೊಂಡರು.
ಗಾಯತ್ರಿ ಮತ್ತು ನಯನಾ ತಮ್ಮ ಮನೆಗೆ ಹೊರಟರು.. ಚಿತ್ರಾ ಮಗನನ್ನು ಕರೆದುಕೊಂಡು ಹೊರಟಳು. ಎಲ್ಲರ ಮನೆಯ ದೋಸೆಯಲ್ಲೂ ತೂತು ಹುಡುಕಿ, ತನ್ನ ಮನೆಯ ದೋಸೆಯಲ್ಲಿ ಮಾತ್ರ ತೂತೇ ಇಲ್ಲ. ಭಾರೀ ಚಂದವಿದೆ.. ಎಂದು ವಾದಿಸುತ್ತಿದ್ದವರ ಮನೆಯ ದೋಸೆಯೂ ತೂತೇ, ಅಷ್ಟೇ ಏಕೆ..? ಕಾವಲಿಯೇ ತೂತು!! ಎಂಬುದು ಅವರೆಲ್ಲರಿಗೂ ಮನದಟ್ಟಾಗಿತ್ತು.
✍️... ಅನಿತಾ ಜಿ.ಕೆ.ಭಟ್.
17-01-2022.
#ಮಾಮ್ಸ್‌ಪ್ರೆಸೊ ಕನ್ನಡದ ದಿನಕ್ಕೊಂದು ಬ್ಲಾಗ್ ಬರಹ. ಉತ್ತಮ ಬರಹವೆಂದು ಆಯ್ಕೆಯಾಗಿದೆ. ವಿಷಯ- ಎಲ್ಲರ ಮನೆಯ ದೋಸೆಯೂ...