Friday, 25 February 2022

ಜೀವನ್ಮುಖಿ #ಒಂದು ಸಣ್ಣ ಪ್ರಶಂಸೆ

       



   ಜೀವನದ ಪ್ರತಿಯೊಂದು ಖುಷಿಯ ಘಳಿಗೆಗಳನ್ನು ಮೆಲುಕು ಹಾಕುವಂತಾಗಬೇಕು. ಎಂದೋ ಮರು ನೆನಪಿಸಿ ಮತ್ತದೇ ಖುಷಿಯ ಉಯ್ಯಾಲೆಯಲ್ಲಿ ಕುಳಿತು ತೂಗಬೇಕು ಎಂಬುದು ಸಾಕ್ಷಿಯ ಆಸೆ. ಅದಕ್ಕಾಗಿ ಆಕೆ ಹೆಚ್ಚು ಅವಲಂಬಿಸಿದ್ದು ನೆಚ್ಚಿಕೊಂಡದ್ದು ಸಾಮಾಜಿಕ ಜಾಲತಾಣವನ್ನು. ಪ್ರತಿದಿನದ ಅವಳ ಚಟುವಟಿಕೆಗಳನ್ನು ಹಂಚಿಕೊಂಡರೆ ಅವಳಿಗೆ ಸಮಾಧಾನ. ಆ ದಿನ ಎಲ್ಲಿಗಾದರೂ ಸಮಾರಂಭಕ್ಕೆ ಹೋದರೆ ನಾಲ್ಕಾರು ಫೊಟೋಗಳನ್ನು ಫೇಸ್ಬುಕ್, ವಾಟ್ಸಪ್ ಸ್ಟೇಟಸ್ ಗಳಲ್ಲಿ ಅಪ್ಲೋಡ್ ಮಾಡುವುದು, ಅಡುಗೆಗಳ ಫೊಟೋ ಹಂಚಿಕೊಳ್ಳುವುದು ಅವಳ ಜಾಯಮಾನ. ಸಮಾನಮನಸ್ಕ ಸ್ನೇಹಿತರ ಪರಸ್ಪರ ಪ್ರೋತ್ಸಾಹ ಅವಳಿಗೆ ಜೀವನದಲ್ಲಿ ಹೊಸ ಹುರುಪನ್ನು ತಂದುಕೊಟ್ಟಿತ್ತು.

      ಹೊಸ ಹೊಸ ಸ್ನೇಹಿತ ಸ್ನೇಹಿತೆಯರು ದೊರೆತು ಅವಳ ಆಪ್ತ ಪ್ರಪಂಚವೇ ಹಿರಿದಾದಂತಾಯಿತು.
ಮುಖ ಮಾತ್ರ ಕಾಣುವ ಪರದೆ ಬಲು ಸುಂದರ. ಮುಖಾಮುಖಿಯಾಗುವಾಗ ಸಮಾಜದಲ್ಲಿನ ಓರೆಕೋರೆಗಳೆಲ್ಲ ಎದ್ದುಕಾಣುವಂತೆ ಇಲ್ಲಿ  ಕಾಣುವುದು ತೀರಾ ಅಲ್ಪ. ಸಾಕ್ಷಿಯ ಆಸಕ್ತಿಗಳೂ ವಿಶಾಲವಾಗುತ್ತಾ ಹೋದವು. ಅದಕ್ಕೆ ತಕ್ಕಂತೆ ಪ್ರೋತ್ಸಾಹದ ಹೊಳೆಯೇ ಹರಿದಾಗ ಆ ಪ್ರತಿಭೆ ಮಿಂಚುವುದರಲ್ಲಿ ಎರಡು ಮಾತಿಲ್ಲ.

     ವಿವಿಧ ಭಂಗಿಗಳಲ್ಲಿ ಫೊಟೋ ಹಂಚಿಕೊಳ್ಳುವ ಸಾಕ್ಷಿಯ ಸೌಂದರ್ಯಕ್ಕೆ ಜನ ತಲೆದೂಗಿದರು. ಉಡುಪುಗಳನ್ನು ತೊಟ್ಟುಕೊಳ್ಳುವಲ್ಲಿ ಅವಳ ಕುಶಲತೆಯೂ ಎಲ್ಲರ ಗಮನಸೆಳೆಯಿತು. ನಾನಾ ಮುಖಭಾವದಲ್ಲಿ ಅತ್ಯಂತ ಸುಂದರ ಭಂಗಿಯಲ್ಲಿ ಫೊಟೋ ಕ್ಲಿಕ್ ಮಾಡಲು ಬಹಳ ಬೇಗನೇ ಕಲಿತುಕೊಂಡಳು. ಸಾಂಪ್ರದಾಯಿಕ ಉಡುಪುಗಳಲ್ಲೇ ಆಗಲಿ ಫ್ಯಾಷನ್ ಉಡುಪುಗಳಲ್ಲೇ ಆಗಲಿ ಅವಳ ಕಲಾತ್ಮಕ ಭಂಗಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿತ್ತು.

        ಆರಂಭದಲ್ಲಿ ಮನೆಯವರೆಲ್ಲರ ಪ್ರೋತ್ಸಾಹ ಚೆನ್ನಾಗಿತ್ತು. ದಿನಗಳೆದಂತೆ ಆಕೆಗೆ ತನ್ನ ಕುಟುಂಬಕ್ಕಿಂತ ಜಾಲತಾಣದ ಸೆಳೆತವೇ ಹೆಚ್ಚಾಯಿತು. ಮನೆಯವರ ನೇರ ನುಡಿಗಿಂತ ಬಣ್ಣದ ಮಾತುಗಳು ಹಿತವಾಯಿತು. ತನ್ನ ಬಗ್ಗೆ ಹಿಂದಿದ್ದ ಅಭಿಮಾನ ಮುಂದೆ ಹೆಚ್ಚುತ್ತಲೇ ಹೋಯಿತು. ಆತ್ಮವಿಶ್ವಾಸದ ಹೆಜ್ಜೆಗಳನ್ನಿರಿಸಿದಳು.
ತನಗೆ ಸಾಟಿ ಯಾರಿಲ್ಲ ಎಂಬ ಸಣ್ಣದೊಂದು ಭಾವ ಅವಳಿಗರಿವಿಲ್ಲದೆಯೇ ಮನಸಿನೊಳಗೆ ಹೊಕ್ಕು ಬಿಟ್ಟಿತು.

       ಫೊಟೋ ಶೂಟ್ ಮಾಡುವುದಷ್ಟೇ ಅಲ್ಲ ಫೊಟೋದ ಹಿನ್ನೆಲೆಯ ಬಗ್ಗೆಯೂ ಗಮನಹರಿಸ ತೊಡಗಿದಳು. ವಿವಿಧ ವಿನ್ಯಾಸದ ಹಿನ್ನೆಲೆಗಾಗಿ ಖರ್ಚುವೆಚ್ಚಗಳೂ ಮಾಡಬೇಕಾಗಿ ಬಂತು. ಪತಿ ತನಗೆ ಆರ್ಥಿಕವಾಗಿ ಕಷ್ಟವಾದರೂ ಮಡದಿಯ ಆಸೆಯನ್ನು ಈಡೇರಿಸಲು ಕೈ ಜೋಡಿಸಿದರು. ಸಾಕ್ಷಿ ಸಾಮಾಜಿಕ ಜಾಲತಾಣ ತನಗೆ ಹೊಸಬಗೆಯ ಅವಕಾಶವೊಂದನ್ನು ಕೊಟ್ಟಿದೆ ಎಂದು ಸಂಭ್ರಮಿಸಿದಳು. ಅವಳ ಫೊಟೋಗಳನ್ನು ಕೊಳ್ಳಲು ಗ್ರಾಹಕರೂ ಮುಂದೆ ಬಂದರು. ಹಲವು ಕವಿಗಳಿಗೆ ಹಾಡುಗಳಿಗೆ ಸ್ಫೂರ್ತಿಯಾದಳು. ಕೆಲವು ವೇದಿಕೆಗಳು ಇಂತಹ ಭಂಗಿಯಲ್ಲೊಂದು ಫೊಟೋ ಶೂಟ್ ಮಾಡಿ ಕಳುಹಿಸಿಕೊಡಿ ಎಂದು ಬೇಡಿಕೆಯಿಟ್ಟು ಶುಲ್ಕವನ್ನು ಪಾವತಿಸಿದವು.

     ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸತೊಡಗಿದಳು. ಯಾರಾದರೂ "ಈ ಫೊಟೋ ಚೆನ್ನಾಗಿ ಬಂದಿಲ್ಲ ಮೇಡಂ.. ಇನ್ನೊಂದು ಚೂರು ಬೇರೆ  ಭಂಗಿಯಲ್ಲಿ ಇರಲಿ" ಎಂದರೆ ತಕ್ಷಣ ಅವರ ಬೇಡಿಕೆಗೆ ಸ್ಪಂದಿಸಿ ಫೊಟೋ ಶೂಟ್ ಮಾಡಿ ಕಳುಹಿಸಿ ತನ್ನ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದಳು.

     ಹವ್ಯಾಸವು ಉದ್ಯಮದ ರೂಪ ಪಡೆಯಲಾರಂಭಿಸಿತು. ಗ್ರಾಹಕರ ಸೇವೆಯೇ ತನ್ನ ಸಂತೃಪ್ತಿ ಎಂಬಂತೆ ಫೋಟೋ ಶೂಟ್ ಮಾಡುವುದರಲ್ಲೇ ತೊಡಗಿಕೊಂಡಳು. ಅವಳ ಯಶಸ್ಸನ್ನು ಕಂಡ ಹಲವು ಮಂದಿ ಇದೇ ದಾರಿಯನ್ನು ಹಿಡಿದರು. ಎಲ್ಲವೂ ಹೊಸಮುಖಗಳು. ಹಲವು ಕಲಾತ್ಮಕತೆ. ವಿಭಿನ್ನವಾದ ನೈಪುಣ್ಯತೆ. ಸಹಜ ಸೌಂದರ್ಯ... ಇತ್ಯಾದಿ  ಅಂಶಗಳು ಜನರನ್ನು ಆಕರ್ಷಿಸಿದವು.

       ಸಾಕ್ಷಿಯ ಫೋಟೋಗಳನ್ನು ನೋಡಿ ಆಸ್ವಾದಿಸುತ್ತಿದ್ದವರು ಪ್ರೋತ್ಸಾಹಿಸುತ್ತಿದ್ದವರು ಈಗ ಹೊಸ ಮುಖಗಳತ್ತ ವಾಲಿದರು. ಸಾಕ್ಷಿಯ ಫೋಟೋಗಾಗಿ ಕಾಯುತ್ತಿದ್ದವರು, ಈಗ ಹೊಸ ಮುಖಗಳ ಚೆಲುವನ್ನು ಕಣ್ತುಂಬಿಸಿಕೊಳ್ಳಲು ಕಾದು ಕುಳಿತರು. ವಿಪರೀತ ಬೋಲ್ಡ್ ಭಂಗಿಯ ಫೊಟೋಗಳನ್ನು ಸೆರೆಹಿಡಿಯಲು ಆಸಕ್ತಿಯಿಲ್ಲದ ಸಾಕ್ಷಿ ಸ್ವಲ್ಪ ಹಿಂದೆ ಬಿದ್ದಳು. ಬೋಲ್ಡ್ ಆಗಿರುವಂತಹ, ರಸಿಕರನ್ನು ರಂಜಿಸುವಂತೆ ಹೊಸಮುಖಗಳಿಗೆ ತನ್ನೆದುರೇ ಬಹಳಷ್ಟು ಬೇಡಿಕೆ ಸಿಕ್ಕಾಗ ಅವಳಿಗೆ ಉತ್ಸಾಹ ಕುಂದಿತು.

     ಆದರೆ ಹವ್ಯಾಸವನ್ನು ನಿಲ್ಲಿಸಲು ಮಾತ್ರ ಮನಸ್ಸು ಬರುತ್ತಿಲ್ಲ, ಏಕೆಂದರೆ ಅಂತಹ ಪ್ರತಿಭೆಯೂ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು ಮತ್ತು ಅದು ಈಗ ಅವಳಿಗೆ ಪ್ರಪಂಚವೇ ಆಗಿತ್ತು. ಇನ್ನು ಯಾವ ನಿಟ್ಟಿನಲ್ಲಿ ಹೊಸತನವನ್ನು ಪ್ರಯತ್ನಿಸಬಹುದು ಎಂದು ಆಲೋಚಿಸುತ್ತಾ ಹಲವು ಪ್ರಯೋಗಗಳಿಗೆ ತನ್ನನ್ನೇ ತಾನು ನೋಡಿಕೊಂಡಳು. ಆದರೆ ಹೊಸ ಪ್ರಯೋಗಗಳು ತನ್ನ ನಿರೀಕ್ಷೆಯಂತೆಯೇ ಮುಂದೆ ಸಾಗದೆ ನೆಲಕಚ್ಚಿದವು.

       ಅವಳಿಗೆ ಒಂದು ರೀತಿಯ ವೇದನೆ ಆರಂಭವಾಯಿತು. ಒಮ್ಮೆಲೆ ಬಂದ ಪ್ರೋತ್ಸಾಹದ ಸುರಿಮಳೆ ಈಗ ಇಳಿಮುಖವಾದಾಗ ಸಣ್ಣದೊಂದು ಜಿಗುಪ್ಸೆ ತನ್ನ ಕಾಡುತ್ತಿತ್ತು. ತಾನು ಸೋತೆನೇ?  ತನಗೂ ಮುಂದೆ ಬರುವ ಶಕ್ತಿ ಇಲ್ಲವೇ? ಎಲ್ಲವನ್ನೂ ಕಳೆದುಕೊಂಡೆ ಎಂಬುದೆಲ್ಲ ಮನಸ್ಸಲ್ಲಿ ಸುಳಿಯಲಾರಂಭಿಸಿತು. ಆಗ ಸಾಕ್ಷಿಯ ಮಂಕುತನವನ್ನು ಅರ್ಥಮಾಡಿಕೊಳ್ಳಲು  ಜಾಲತಾಣದ ಯಾವ ಮಂದಿಯೂ ಇರಲಿಲ್ಲ.

      ಹೊಸ ಆಶಾಕಿರಣವಾಗಿದ್ದ ಸಾಮಾಜಿಕ ಜಾಲತಾಣ ಆಕೆಯ ಮನಸ್ಸು ಕೆಡಿಸಿತ್ತು. ಈ ಕ್ಯಾಮೆರಾ ಮುಂದಿನ ಬದುಕು ಇಷ್ಟೇ ಎಂದುಕೊಂಡಳು. ಇಲ್ಲ ಇನ್ನು ಕೆಲವು ಸಮಯದವರೆಗೆ ಏನನ್ನು ಮಾಡುವುದಿಲ್ಲ. ಆಮೇಲೆ ನೋಡೋಣ ಎಂದು ಹಿಂದೆ ಸರಿದಳು. ಸಾಕ್ಷಿಯು ಸದಾ ಅಸಹನೆ ಅತ್ಯಂತ ಉದ್ವೇಗದಿಂದ ಬಳಲುತ್ತಿರುವುದು ನೋಡಿ ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡವರು ಕುಟುಂಬದವರು. ಪ್ರೀತಿಯಿಂದ ಆಕೆಯ ಜೊತೆ ನಿಂತರು. ಸಾಕ್ಷಿ ಕೆಲವು ದಿನಗಳ ಬಳಿಕ ಮತ್ತೆ ಫೊಟೋ ಅಪ್ಲೋಡ್ ಮಾಡಲಾರಂಭಿಸಿದಳು. ಆದರೆ ಬೇಡಿಕೆ ಮೊದಲಿನಂತಿಲ್ಲ. ಯಾರೂ ಅತಿಯಾಗಿ ಹೊಗಳುತ್ತಿಲ್ಲ. ಫೊಟೋ ನೋಡುವ ಕುತೂಹಲವೂ ಇಲ್ಲ. ಒಂದು ಸಣ್ಣ ಪ್ರಶಂಸೆಯೂ ಇಲ್ಲ. ಅವಳ ಅಸಹಾಯಕತೆಗೆ ಕೊನೆಯಿಲ್ಲ.

                    *****
         
         ಅಂದು ಕೂಡ ಮಂಕಾಗಿ ಬಿದ್ದುಕೊಂಡಿದ್ದವಳಲ್ಲಿ ತನ್ನ ಬದುಕು ಮುಳುಗಿ ಹೋಯಿತು ಎಂಬ ಭಾವ ಅಲೆಅಲೆಯಾಗಿ ಸುತ್ತಿ ಬರತ್ತಿತ್ತು. ಏಳಲು ಉತ್ಸಾಹವಿಲ್ಲ. ಎಲ್ಲವೂ ಅಯೋಮಯ.
"ಸಾಕ್ಷಿ.." ಎಂಬ ಪತಿಯ ಕರೆಗೆ ಓಗೊಟ್ಟು ಕೋಣೆಯಿಂದ ಬಂದಳು.
"ಬೇಗ ಬೇಗ ರೆಡಿಯಾಗಿ ಬಾ.."
ಎಂದಾಗ ಪ್ರಶ್ನಿಸುವ ಮನಸ್ಸಾಗದೆ ಹೊರಟು ನಿಂತಳು. ಎಲ್ಲಿಗೆ ಏನು ಎಂದು ವಿಚಾರಿಸುವ ಗೋಜಿಗೆ ಹೋಗಲಿಲ್ಲ. ಮನದೊಳಗೆ ಮಾತ್ರ ಆಲೋಚನೆಗಳ ಮಹಾಪೂರವೇ ಹರಿಯುತ್ತಿತ್ತು.

     ತುಂಬು ಸಂಭ್ರಮದಿಂದ ಕೂಡಿದ್ದ ಆ ವಾತಾವರಣ ಹೊಸದಾಗಿತ್ತು. ಗಾಳಿಗೆ ತೂಗುತ್ತಿದ್ದ ಮರಗಳು ಒಣಗಿದ ಎಲೆಗಳನ್ನು ಉದುರಿಸುತ್ತಿದ್ದವು. ಹಕ್ಕಿಗಳು ಉಲಿಯುತ್ತಿದ್ದವು.
ಒಳಗೆ ಸಾಗುತ್ತಿದ್ದಂತೆ ಮಿಸೆಸ್ ಸಾಕ್ಷಿ ಅವರಿಗೆ ನಮ್ಮ ಕಾರ್ಯಕ್ರಮಕ್ಕೆ ಸುಸ್ವಾಗತವನ್ನು ಕೋರುತ್ತಿದ್ದೇವೆ ಎಂಬ ಉದ್ಘೋಷ ಕೇಳಿಬಂತು.
ಚಪ್ಪಾಳೆಯ ಸದ್ದು ಕಿವಿಗಪ್ಪಳಿಸಿದವು. ಅತ್ಯಂತ ಗೌರವದಿಂದ ಬರಮಾಡಿಕೊಂಡು ದೀಪಬೆಳಗಿಸಿ ಉದ್ಘಾಟಿಸಲು ಕೋರಿಕೊಂಡರು. ಸುತ್ತಲೂ ನೆರೆದಿದ್ದ ವಿಶೇಷ ಚೇತನ ಮಕ್ಕಳೆಲ್ಲರೂ ನಗುತ್ತಾ ಹಚ್ಚುವೆವು ಸಂತಸದ ದೀಪ.. ಬಾಳನ್ನು ಬೆಳಗುವ ದೀಪ.. ಎಂದು ಹಾಡಿನ ಮೂಲಕ ಚಾಲನೆ ನೀಡಿದರು.

       ವಿಶೇಷ ಚೇತನ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದುವರಿದು, ಮಿಸೆಸ್ ಸಾಕ್ಷಿಯವರ ಪರಿಚಯ ಮಾಡಿಕೊಟ್ಟರು. ಅವರು ಹೇಳುತ್ತಿದ್ದ ಒಂದೊಂದು ಪದವೂ ಅವಳಿಗೆ ಅಪ್ಯಾಯಮಾನವಾಗಿದ್ದು, ಸಾಧನೆ ಮಾಡಬೇಕಾದರೆ ಬೇರೇನೂ ಬೇಡ ಮನಸ್ಸಿದ್ದರೆ ಸಾಕು ಎಂಬ ಮಾತು ಬಹಳ ಮನಮುಟ್ಟಿತು.  ಇಂದಿನಿಂದ ನನ್ನ ಫೊಟೋ ತೆಗೆದುಕೊಂಡು ನಾನು ವಿಜ್ರಂಭಿಸುವುದರ ಬದಲು ಇಂತಹ ಮಕ್ಕಳ ಬದುಕು ಮುಂದೆ ಹಲವರಿಗೆ ಪ್ರೇರಣೆಯಾಗುವಂತೆ, ಇವರ ಫೊಟೋಗಳೆಲ್ಲ ಸಾಧನೆಯೊಂದಿಗೆ ರಾರಾಜಿಸುವಂತೆ ಮಾಡಬೇಕು ಎಂದು ನಿರ್ಧರಿಸಿದಳು. ಕಾರ್ಯಕ್ರಮದಿಂದ ಹೊರಡುವಾಗ ಅವಳ ಮನದಲ್ಲಿ ಮೂಡಿದ್ದ ಗೆಲುವು, ಅವಳ ನಿರ್ಧಾರ ಪತಿಯ ಹೃದಯ ತುಂಬುವಂತೆ ಮಾಡಿತು.

✍️... ಅನಿತಾ ಜಿ.ಕೆ.ಭಟ್.
17-02-2022.

#ಪ್ರತಿಲಿಪಿ ಕನ್ನಡ ದೈನಿಕ ವಿಷಯಾಧಾರಿತ ಕಥೆ
#ವಿಷಯ- ಒಂದು ಸಣ್ಣ ಪ್ರಶಂಸೆ



No comments:

Post a Comment