#ಹೃದಯದಿಂದರಳಿದ ಸೌಂದರ್ಯ
ಶಾಂತಲಾ ಹೊರಡುವ ಗಡಿಬಿಡಿಯಲ್ಲಿದ್ದ ಕಾರಣ ಸೊಸೆ ಮಾನ್ವಿಯನ್ನು ಅಷ್ಟಾಗಿ ಗಮನಿಸಿರಲಿಲ್ಲ. ಶಾಂತಲಾಳಿಗಿಂತ ಮೊದಲೇ ಹೊರಟಾಗಿದ್ದ ಅವಳನ್ನು ದೀಪು ತನ್ನ ಹೊಸ ಬೈಕಿನಲ್ಲಿ ಕುಳ್ಳಿರಿಸಿ ರೊಂಯ್ಯನೆ ಕರೆದೊಯ್ದಿದ್ದ. ಹೊರಡುವಾಗ "ಅಮ್ಮಾ.. ನೀನು ಹೊರಟು ನಿಲ್ಲು.. ಇವಳನ್ನು ಬಿಟ್ಟು ಬರುತ್ತೇನೆ" ಎಂದಿದ್ದ.
ಶಾಂತಲಾ ಹೊರಟದ್ದು ಮನೆಯ ಒಳಭಾಗದಲ್ಲಿದ್ದ ಒಂದು ಕೋಣೆಯಲ್ಲಿ. ಅದು ಬರೀ ಕತ್ತಲೆ ಕೋಣೆ. ಹಳೆಯ ಹಂಚಿನ ದೊಡ್ಡದಾದ ಮನೆ. ಮಸುಕು ಮಸುಕಾದ ಬೆಳಕಿನ ಕೋಣೆಗಳು. ಟಾರ್ಚ್ ಇಲ್ಲದಿದ್ದರೆ ಬರಿಕಣ್ಣಿಗೆ ಸುಲಭವಾಗಿ ಏನೂ ಕಾಣಿಸುವುದಿಲ್ಲ. ಬಾಗಿಲಿನ ಸಮೀಪ ಅಲ್ಪಸ್ವಲ್ಪ ಬೆಳಕು ಪ್ರತಿಫಲನವಾಗಿ ಮಬ್ಬು ಬೆಳಕು ಕೋಣೆಯೊಳಗೆ ಹರಡಿದೆ. ಅಂತಹ ಕೋಣೆಯಲ್ಲಿ ಮೂಲೆಮೂಲೆಯಲ್ಲಿ ಏನೇನು ಇರುವುದು ಎಂದು ಶಾಂತಲಾಳಿಗಷ್ಟೇ ತಿಳಿದಿರುವುದು. ಮತ್ತು ಬೇಕಾದ್ದನ್ನು ಒಂದು ಅಂದಾಜಿನಲ್ಲೇ ಕೈ ಹಾಕಿ ಹುಡುಕಿ ತೆಗೆಯಲು ಸಾಧ್ಯವಾಗುವುದು. ಅಲ್ಲಿಯೇ ಮೂಲೆಯಲ್ಲಿದ್ದ ಕಪಾಟಿನಿಂದ ತನ್ನ ಸೀರೆ ರವಿಕೆಯನ್ನು ತೆಗೆದುಕೊಂಡು ಉಟ್ಟು ಹೊರಗೆ ಬಂದು ನಿಂತಿದ್ದಳು.
ಸೀರೆ ಒಂದು ಉಟ್ಟಾಯ್ತು. ಮುಖಕ್ಕೆ ಪೌಡರ್ ಹಚ್ಚಿ ಆಗಿಲ್ಲ. ಕ್ರೀಂ ಎಲ್ಲಾ ಹಚ್ಚುವ ಅಭ್ಯಾಸ ಇಲ್ಲ. ನನಗೂ ವಯಸ್ಸಾಗಿದೆ. ಸೀರೆಯ ನೆರಿಗೆ ಮಾಡಿದ್ದು ಸಾಮಾನ್ಯವಾಗಿ ಆಗಿದೆ.. ಸಾಕು.. ಸೆರಗು ಅಷ್ಟೇನೂ ಸರಿ ಬಂದಿಲ್ಲ. ಆದರೂ ಇದಕ್ಕಿಂತ ಚೆನ್ನಾಗಿ ಹಾಕಲು ನನಗೂ ತಿಳಿಯುವುದಿಲ್ಲ. ಇನ್ನೆಷ್ಟು ಬೇಕು ಈ ವಯಸ್ಸಿನಲ್ಲಿ.. ಸಾಕಲ್ಲವೇ? ಎಂದು ಯೋಚಿಸುತ್ತಾ ಅಂಗಳದಲ್ಲಿದ್ದ ಗುಲಾಬಿ ಗಿಡದಿಂದ ಎರಡು ಗುಲಾಬಿ ಹೂಗಳನ್ನು ಕೊಯ್ದು ತಂದಳು. "ನಾನು ಸೊಸೆಗೆ ಹೂ ಕೊಟ್ಟಿಲ್ಲ" ಎನ್ನುತ್ತಾ ಒಂದನ್ನು ತಾನು ಮುಡಿದು ಇನ್ನೊಂದನ್ನು ಸೊಸೆಗೆಂದು ಕೈಯಲ್ಲಿ ಹಿಡಿದುಕೊಂಡಳು.
ಆಗಲೇ ಬೈಕ್ ಬಂದ ಸದ್ದು ಕೇಳಿತು. "ಅಮ್ಮಾ.. ಹೊರಟಾಯಿತಾ..?" ಎಂದ ಮಗ. ಬೈಕ್ ಏರಿ ಹೆದರಿ ಹೆದರಿ ಕುಳಿತ ಅಮ್ಮನ ಕೈಯಲ್ಲಿದ್ದ ಹೂಗಳನ್ನು ಕಂಡು "ಅವಳೆಲ್ಲಿ ಮುಡಿತಾಳೆ ಗುಲಾಬಿಯನ್ನು.. ಸುಮ್ಮನೆ ನೀನು ಮುಡ್ಕೋ.. ಆಮೇಲೆ ಗಟ್ಟಿ ಹಿಡ್ಕೋ ಅಮ್ಮಾ.." ಎಂದ ಮಗರಾಯನಲ್ಲಿ.. "ಹಾಗೆಲ್ಲ ಹೇಳಬಾರದು ಕಣೋ.. ಹೆಣ್ಣುಮಕ್ಕಳು ಹೂ ಮುಡಿಯಬೇಕು" ಎಂದು ಜೋಪಾನವಾಗಿ ಕೈಯಲ್ಲಿ ಹಿಡಿದುಕೊಂಡರು.
ಅದು ಶ್ರೀ ದುರ್ಗಾ ಕಲ್ಯಾಣ ಮಂಟಪ. ಆ ಊರಿನಲ್ಲಿ ಮದುವೆ ನಡೆಯುವುದು ಹೆಚ್ಚಾಗಿ ಅದೇ ಕಲ್ಯಾಣ ಮಂಟಪದಲ್ಲಿ. ಮಾರ್ಗದ ಹತ್ತಿರವಿದ್ದು ಬಸ್ಸಿನಲ್ಲಿ ಬರುವರಿಗೆ ಹೋಗುವವರಿಗೆ ಅತ್ಯಂತ ಔಚಿತ್ಯಪೂರ್ಣವಾದ ಜಾಗದಲ್ಲಿದೆ. ಶಾಂತಲಾ ಮಗನೊಂದಿಗೆ ಕೈ ಕಾಲು ತೊಳೆದು ಒಳಗೆ ಪ್ರವೇಶಿಸುತ್ತಿದ್ದಂತೆಯೇ... ಅಲ್ಲಿ ಹಾಲಿನ ಒಂದು ಬದಿಯಲ್ಲಿ ಹಾಕಲಾಗಿದ್ದ ನಿಲುಗನ್ನಡಿಯಲ್ಲಿ ತನ್ನ ಚೆಲುವನ್ನು ದಿಟ್ಟಿಸುತ್ತಿದ್ದ ಸೊಸೆ ಮಾನ್ವಿ ಕಂಡಳು. ಅತ್ತೆಯನ್ನು ಕಾಣುತ್ತಲೇ ಕನ್ನಡಿಯ ನೇರದಿಂದ ಈಚೆ ಬಂದು ತನ್ನ ತಲೆಕೂದಲನ್ನು ಒಮ್ಮೆ ತನ್ನೆರಡು ಬೆರಳುಗಳಲ್ಲಿ ಹರವಿಕೊಂಡಳು. ಶಾಂತಲಾ ಅದನ್ನು ನೋಡುತ್ತಲೇ 'ಇವಳೇಕೆ ಹೀಗೆ ಕೂದಲು ಬಿಟ್ಟು ಬಿಟ್ಟಿದ್ದಾಳೆ. ಒಂದು ಹೇರ್ ಬ್ಯಾಂಡ್ ಆದರೂ ಹಾಕಿಕೊಳ್ಳಬಾರದಾ?' ಎಂದುಕೊಂಡರು.. ಶಾಂತಲಾ ಮಾನ್ವಿಯ ಹತ್ತಿರ ಬಂದು "ನೋಡು ಮಾನ್ವಿ.. ನಾನು ನಿನಗೆಂದು ಗುಲಾಬಿಯ ಹೂವನ್ನು ತಂದಿದ್ದೇನೆ. ಮೊದಲು ಕೂದಲನ್ನು ಒಂದು ಕ್ಲಿಪ್ ಹಾಕಿ ಹಾರದಂತೆ ಮಾಡು. ನಂತರ ಅದರ ಮೇಲೊಂದು ನಸು ಕೆಂಪುಹಳದಿ ಮಿಶ್ರಿತಬಣ್ಣದ ಗುಲಾಬಿ ಮುಡಿದುಕೋ.. ಎಷ್ಟು ಚೆಂದ ಕಾಣುತ್ತದೆ... ಗೊತ್ತಾ..?" ಎಂದರು.
"ಅತ್ತೆ ಕೂದಲು ಹೀಗೆ ಹಾರಾಡುತ್ತಿದ್ದರೇನೇ ಚಂದ. ಸಾರಿ ಉಟ್ಟಾಗ ಕೂದಲನ್ನು ಬಿಗಿದು ಕಟ್ಟಿದರೆ ನನಗೆ ಏನು ಚಂದ ಕಾಣಲ್ಲಪ್ಪ. ನಾನು ಹೀಗೇ ಬಿಡುತ್ತೇನೆ. ನನಗೆ ಗುಲಾಬಿ ಹೂವು ಎಲ್ಲಾ ಮುಡಿಯಲು ಇಷ್ಟವೇ ಇಲ್ಲ. ಮಲ್ಲಿಗೆ ಹೂವಾದರೆ ಮಾತ್ರ ಒಂದು ತುಂಡು ಮುಡಿಯ ಬಲ್ಲೆ.." ಎಂದು ಹೇಳಿದಾಗ ಶಾಂತಲಾ ಮುಖ ಸಪ್ಪೆ ಮಾಡಿಕೊಂಡು ಆಚೆ ಹೋದರು. ಈಗಿನ ಹೆಣ್ಣುಮಕ್ಕಳೇ ಇಷ್ಟೇ. ಹೆಚ್ಚು ಹೇಳಿ ನಾನು ನನ್ನ ನಾಲಿಗೆಯನ್ನು ಕೆಡಿಸಿಕೊಳ್ಳಲಾರೆ. ಎಂದುಕೊಂಡರು.
ಶಾಂತಲಾ ತನ್ನ ಬಂಧು ವರ್ಗದವರಲ್ಲೆಲ್ಲ ಮಾತನಾಡುತ್ತಾ ಇದ್ದರು. ಅಪರೂಪಕ್ಕೆ ಕಂಡ ಗೆಳತಿಯರು ಸಂಬಂಧಿಕರನ್ನು ಮಾತನಾಡಿಸುವುದು ಎಂದರೆ ಶಾಂತಲಾ ಎಲ್ಲಿಲ್ಲದ ಉತ್ಸಾಹ. ಅದರ ಮಧ್ಯೆ ಮಧ್ಯೆ ನಿಲುಗನ್ನಡಿಯಲ್ಲಿ ತನ್ನ ರೂಪವನ್ನು ತಾನೆ ದಿಟ್ಟಿಸುತ್ತಾ ಆನಂದಿಸುತ್ತಿದ್ದ ಸೊಸೆ ಮಾನ್ವಿ ಅನ್ನು ನೋಡಿ 'ಅಬ್ಬ ಇವಳಿಗೇನು ಕೊಬ್ಬು!' ಅಂದುಕೊಳ್ಳುತ್ತಿದ್ದರು.
ಇಪ್ಪತ್ತೈದರ ಹರೆಯದ ಮಾನ್ವಿ ನೋಡಲು ತೆಳ್ಳಗೆ ಬೆಳ್ಳಗಿದ್ದು ರೇಶಿಮೆಯಷ್ಟು ನಾಜೂಕಿನ ಕೂದಲಿನವಳು, ಕಪ್ಪಾದ ಹುಬ್ಬು, ಚೂಪಾದ ನೀಳ ನಾಸಿಕ, ಸೇಬಿನಂತಹ ಗಲ್ಲ, ಬಟ್ಟಲು ಕಂಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅವಳ ಎದುರಿನಲ್ಲಿ ಶಾಂತಲಾ ತನ್ನ ಸೌಂದರ್ಯದ ಬಗ್ಗೆ ಸ್ವಲ್ಪ ಕೀಳರಿಮೆಯನ್ನು ಹೊಂದಿ ಹಿಂದೆ ನಿಲ್ಲುತ್ತಿದ್ದರು. ಮುಕ್ಕಾಲಂಶ ಬೆಳ್ಳಗಾದ ತಲೆಕೂದಲು.. ಸುಕ್ಕುಗಟ್ಟಿದ ಮುಖ.. ಸದಾ ಕೆಲಸ ಮಾಡುತ್ತಾ ಒರಟಾದ ಕೈಗಳು.. ಒಡೆದ ಹಿಮ್ಮಡಿ... ಅಂದಗೆಟ್ಟ ಉಗುರುಗಳು.. ಅವರಿಗೆ ಸೊಸೆಯನ್ನು ನೋಡುವಾಗ ತನ್ನ ಶರೀರದ ಬಗ್ಗೆ ತಾನೇ ಹಿಂಸೆ ಪಡುವಂತೆ ಆಗುತ್ತಿತ್ತು.. ಸೊಸೆ ಜೊತೆ ನಿಂತುಕೊಳ್ಳಲು ಇದಕ್ಕೇ ಹಿಂಜರಿಯುತ್ತಿದ್ದರು. ಎಲ್ಲರೂ ಆಕೆಗಿಂತ ಅತ್ತೆ ಕಡಿಮೆ ಸುಂದರಿ ಎಂದು ಭಾವಿಸಬಹುದು ಎಂಬುದು ಮನದಲ್ಲಿದ್ದ ಅಳುಕು. ಮಾನ್ವಿ ಆಗಾಗ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದರೂ ಶಾಂತಲಾ ಮಾತ್ರ ಕನ್ನಡಿಯಲ್ಲಿ ತನ್ನನ್ನು ಕಾಣದಂತೆ ಎಚ್ಚರಿಕೆವಹಿಸಿ ಅತ್ತಿತ್ತ ಹೋಗುತ್ತಿದ್ದರು.
ಮದುವೆಯ ಸಮಾರಂಭ ಎಲ್ಲ ಮುಗಿದು ಊಟ ಮಾಡಿ ಹೊರಡುವ ಸಮಯವಾಯಿತು. ಶಾಂತಲಾ ಮಗ ದೀಪುವನ್ನು ಕರೆದು "ಮಗಾ.. ನನ್ನನ್ನು ನೀನು ಈಗ ಮೊದಲು ಕರೆದುಕೊಂಡು ಹೋಗು.. ಈಗ ಸ್ವಲ್ಪ ಹೊತ್ತಿನಲ್ಲಿ ನೀವು ಬೆಂಗಳೂರಿಗೆ ಹೊರಡುತ್ತಿದ್ದೀರಲ್ಲ.. ನಿಮಗೆಲ್ಲ ತಯಾರಿ ಮಾಡಬೇಕಲ್ಲ.." ಎಂದಾಗ ಅಲ್ಲಿ ಹತ್ತಿರ ಬಂದ ಮಾನ್ವಿ "ದೀಪು.. ಇಲ್ಲಿ ತುಂಬಾ ಸೆಖೆಯಾಗುತ್ತಿದೆ. ನನಗಿನ್ನು ಮನೆಗೆ ಹೋಗಿ ಪುನಃ ಹೊರಡಬೇಕು ಎಷ್ಟು ಕೆಲಸ ಇದೆ. ಎರಡು ಮೂರು ದಿನಕ್ಕೆ ಬೇಕಾದಷ್ಟು ಬಟ್ಟೆಬರೆ ಎಲ್ಲ ಪ್ಯಾಕ್ ಮಾಡಬೇಕಷ್ಟೇ.. ನನ್ನನ್ನೇ ಮೊದಲು ಕರೆದುಕೊಂಡು ಹೋಗು.." ಎಂದು ಮುಖ ಚಿಕ್ಕದು ಮಾಡುತ್ತಾ ಬೇಡಿಕೊಂಡಾಗ ದೀಪು ಮೊದಲು ಪ್ರಾಶಸ್ತ್ಯ ಕೊಟ್ಟದ್ದು ಮಾನ್ವಿಗೆ.. "ಅಮ್ಮಾ... ಇವಳನ್ನೇ ಮೊದಲು ಬಿಟ್ಟು ಬರುತ್ತೇನೆ.. ಅವಳಿಗೆ ಈಗಲೇ ಹೊರಡಬೇಕು ಅಲ್ವಾ.." ಎಂದಾಗ ಇಷ್ಟು ವರ್ಷ ಕೈತುತ್ತನಿತು ಸಾಕಿದ ಮಗನೇ ನನ್ನನ್ನು ಕಡೆಗಣಿಸಿ ಅವಳನ್ನು ಮೆರೆಸುತ್ತಾನಲ್ಲ ಎಂದು ಭಾವಿಸುತ್ತಾ ಹಲುಬಿದರು.
ಮಗ ದೀಪು ಪದವಿ ಓದಿ ಮನೆಯ ಸಮೀಪದಲ್ಲೇ ಇದ್ದ ಪಂಚಾಯತ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸರ್ಕಾರಿ ಕೆಲಸ. ಪ್ರೈವೇಟ್ ಆಗಿ ಎಂಎ ಕೂಡ ಓದಿಕೊಂಡಿದ್ದ. ಸರ್ವಿಸ್ ಆದಂತೆ ಮುಂದೆ ಬಡ್ತಿ ಸಿಗಬಹುದು. ಇದನ್ನೆಲ್ಲಾ ನೋಡಿಕೊಂಡು ಮಾನ್ವಿಯಂತಹ ಇಂಜಿನಿಯರಿಂಗ್ ಹುಡುಗಿ ಮದುವೆಯಾಗಿದ್ದು. ಅಷ್ಟು ಒಳ್ಳೆ ಹುಡುಗಿ ಸಿಕ್ಕಿದ್ದು ನಮ್ಮ ಅದೃಷ್ಟವೇ ಸರಿ ಎಂದುಕೊಳ್ಳುತ್ತಿದ್ದರು ಶಾಂತಲಾ ದಂಪತಿ. ಆದರೆ ಮಗ ದೀಪು ಮಾನ್ವಿಗೆ ಮೊದಲು ಮಣೆ ಹಾಕಿದಾಗ ವಿಚಲಿತಗೊಳ್ಳುತ್ತಿದ್ದವರು ಶಾಂತಲಾ. ಇವತ್ತು ಸಂಜೆ ದೀಪು ತನ್ನ ಆಫೀಸ್ ಕೆಲಸದ ಮೇಲೆ ಬೆಂಗಳೂರಿಗೆ ಹೋಗುವವನಿದ್ದ. ಆಫೀಸ್ ಕೆಲಸ ಒಂದು ದಿನ, ಹೆಚ್ಚಾದರೆ ಒಂದೂವರೆ ದಿನ. ನವವಿವಾಹಿತ ಜೋಡಿ ಇನ್ನು ಹನಿಮೂನ್ ಎಂದು ಎಲ್ಲೂ ಹೋಗಿಲ್ಲ. ಬೆಂಗಳೂರಿಗೆ ಹೋದಾಗ ಎರಡು ಮೂರು ದಿನವಾದರೂ ಅಲ್ಲಿ ಸ್ವಲ್ಪ ಸುತ್ತಾಡಿ ಬರಬಹುದು ಎಂದು ಮಾನ್ವಿಯನ್ನು ಜೊತೆಯಲ್ಲಿ ಕರೆದೊಯ್ಯುವ ಸಿದ್ಧತೆ ಮಾಡಿದ್ದರು.
ಅವರಿಗೆ ಹೊರಡುವಾಗ ಒಂದಷ್ಟು ತಿನಿಸುಗಳನ್ನು ಕಟ್ಟಿ ಕೊಡಬೇಕೆಂದು ಎಲ್ಲವನ್ನೂ ಮಾಡಿ ಡಬ್ಬದಲ್ಲಿ ಇರಿಸಿದ್ದರು ಶಾಂತಲಾ. ಅದನ್ನೆಲ್ಲ ಕೈಹಾಕಿ ಮಾನ್ವಿ ತೆಗೆದುಕೊಳ್ಳುವವಳೂ ಅಲ್ಲ..
ಎಲ್ಲವನ್ನು ತುಂಬಿಸಿ ಪ್ಯಾಕ್ ಮಾಡಿ ಶಾಂತಲಾಳೇ ಕೊಡಬೇಕಾಗಿತ್ತು. ಸಾಲದ್ದಕ್ಕೆ ಸಂಜೆ ಹೊತ್ತು ಹಟ್ಟಿಯಲ್ಲಿದ್ದ ದನವನ್ನು ಹಾಲು ಹಿಂಡಬೇಕು. ತನ್ನ ವೇಳೆಗೆ ಆಗುತ್ತಲೇ ಅದು ಜೈವಿಕ ಗಡಿಯಾರದಂತೆ ಅಂಬಾ.. ಎನ್ನುತ್ತಾ ಕೂಗಲು ಆರಂಭಿಸುತ್ತದೆ. ತಡವಾದರೆ ಪತಿ ಶೇಖರ ರಾಯರಂತೂ ಹಾಲು ಹಿಂಡುವುದಕ್ಕೆ ಹೋಗಲಾರರು. ಮನೆಗೆ ಹೋಗಿ ಈ ಝರಿ ಸೀರೆಯನ್ನು ಬದಲಾಯಿಸಿ ನಿತ್ಯದ ಕಾಟನ್ ಸೀರೆ ಉಟ್ಟು ಹಾಲು ಹಿಂಡಿ... ಮಗ ಸೊಸೆಗೆ ಕಾಫಿ ತಿಂಡಿ ಮಾಡಿ ಕೊಟ್ಟು ಬೇಕಾದ್ದನ್ನು ತುಂಬಿಸಿ ಕೊಟ್ಟು... ಅಬ್ಬಬ್ಬಾ ಎಷ್ಟೊಂದು ಕೆಲಸ ಇದೆ.. ಈ ಮಾನ್ವಿಗಾದರೂ ಏನಿದೆ ಕೆಲಸ..? ಉಟ್ಟಿದ್ದ ಸೀರೆಯನ್ನು ಅಲ್ಲೇ ಬಿಚ್ಚಿ ಹಾಕಿ ಅದೇನೋ ಕುರ್ತಾ ಅಂತೆ.. ಅದನ್ನು ಮೇಲಿಂದ ಸುರಿದು, ಕೆಳಗಿನಿಂದ ಲೆಗ್ಗಿನ್ಸ್ ಅನ್ನು ಏರಿಸಿಕೊಂಡರಾಯಿತು.. ಆದರೂ ತಾನೇ ಮೊದಲು ಹೋಗಬೇಕೆಂಬ ಹಠ ಇವಳಿಗೆ.. ಶಾಂತಲಾ ಇದೆಲ್ಲ ಯೋಚಿಸುತ್ತಿದ್ದಂತೆಯೇ ದೀಪುವಿನ ಆಗಮನವಾಯಿತು.
"ಬಾ ಅಮ್ಮಾ.. ನಡಿ ಹೋಗೋಣ ಮನೆಗೆ" ಎಂದು ಕರೆದ. ಮಗನೊಂದಿಗೆ ಬೈಕಿನಲ್ಲಿ ಕುಳಿತು ಹೊರಟರು. ಮನಸ್ಸಿನಲ್ಲಿ ಕಾರಿದ್ದರೆ ಎಲ್ಲರೂ ಜೊತೆಗೆ ಹೋಗಬಹುದಿತ್ತು ಎಂಬ ಆಲೋಚನೆಯೂ ಮೂಡಿತು. ಇರಲಿ.. ಇನ್ನೊಂದೆರಡು ವರ್ಷ ಕಳೆದಾಗ ಹೊಸ ಕಾರನ್ನು ಕೊಳ್ಳೋಣವಂತೆ ಎಂದುಕೊಂಡರು. ಮನೆಗೆ ತಲುಪಿ, ಒಳಗೆ ಸಾಗಿದಾಗ ಹಜಾರದಲ್ಲಿ ಫ್ಯಾನಿನಡಿಯಲ್ಲಿ ಕುಳಿತ ಮಾನ್ವಿ ತಲೆಕೂದಲನ್ನು ಹರಡಿ ನಿಲುಗನ್ನಡಿಯ ಮುಂದೆ ನಿಂತು ಮುಖಕ್ಕೆ ಅದೇನ್ನನ್ನೋ ಉಜ್ಜಿಕೊಳ್ಳುತ್ತಿದ್ದಳು. ಒಮ್ಮೆಲೇ ಸಿಟ್ಟು ನೆತ್ತಿಗೇರಿತು ಶಾಂತಲಾಳಿಗೆ. ಮಾಡಲು ಎಷ್ಟೊಂದು ಕೆಲಸವಿದೆ. ಅದನ್ನೆಲ್ಲ ಬಿಟ್ಟು, ಬೇಗನೆ ಬಂದವಳು ಮಾಡಿಕೊಳ್ಳುತ್ತಿರುವುದು ಆದರೂ ಏನು..? ಎಂದು ಕೋಪ ನುಂಗಿಕೊಂಡರು.. ಅತ್ತೆಯ ಮುಖ ನೋಡಿ ಅರಿತ ಮಾನ್ವಿ "ಅತ್ತೇ.. ನನಗೆ ಹಾಲಿನಲ್ಲಿ ಸೆಖೆಗೆ ಮುಖವೆಲ್ಲ ಉರಿದು ಕೆಂಪಾಗಿದೆ. ಅದಕ್ಕೆ ಸ್ವಲ್ಪ ಮುಖಕ್ಕೆ ಹಣ್ಣಿನ ಫೇಸ್ ಪ್ಯಾಕ್ ಹಾಕಿಕೊಳ್ಳುತ್ತಿದ್ದೆ ನೋಡಿ.." ಎನ್ನುತ್ತಾ ಕನ್ನಡಿಯಿಂದ ಮುಖ ಕೀಳದೆ ಉಲಿದಳು.. "ನಿನಗೆ ಸಹಜ ಸೌಂದರ್ಯವಿದ್ದರೂ ಸೌಂದರ್ಯದ ಚಿಂತೆ.. ನನಗೆ ನನ್ನ ಆರೋಗ್ಯವೂ, ಸೌಂದರ್ಯವೂ ಕೆಟ್ಟು ಹೋಗುತ್ತಿದ್ದರೂ ಕೆಲಸದ ಚಿಂತೆ.." ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಒಳನಡೆದರು.
ಬೇಗಬೇಗನೆ ತನ್ನ ಝರಿ ಸೀರೆಯನ್ನು ತೆಗೆದಿಟ್ಟು ನಿತ್ಯದ ಹಳೆಯ ಕಾಟನ್ ಸೀರೆ ಉಟ್ಟು, ಕೈಯಲ್ಲೊಂದು ಚೊಂಬು ಹಿಡಿದು ಸೀದಾ ಕೊಟ್ಟಿಗೆಗೆ ನಡೆದರು. ದನ ಗಂಗೆ ಒಂದೇ ಸಮನೆ ಅಂಬಾ ಎನ್ನುತ್ತಿತ್ತು. ಕರುವನ್ನು ಬಿಟ್ಟು ಅದಕ್ಕೆ ಹಾಲುಣಿಸಿ ನಂತರ ತಾವು ಬಿಂದಿಗೆಗೆ ಹಾಲು ಹಿಂಡಲಾರಂಭಿಸಿದರು. ಒಂದು ಬಿಂದಿಗೆ ಹಾಲನ್ನು ತಂದು ಮಗ-ಸೊಸೆ ಗಂಡನಿಗೆ ಚಹಾ ಮಾಡಿ, ಕುರುಕುಲು ತಿಂಡಿಗಳನ್ನು ತೆಗೆದುಕೊಂಡು ಹೋಗಿ ಹಜಾರದಲ್ಲಿ ಇಟ್ಟರು. ಎಲ್ಲರೂ ಚಹಾ ತಿಂಡಿಯನ್ನು ಸೇವಿಸುತ್ತಿದ್ದಂತೆ ಇನ್ನೊಂದಷ್ಟು ಎಣ್ಣೆ ತಿಂಡಿಯನ್ನು ಪ್ಯಾಕ್ ಮಾಡಿದರು..
ಐದೂವರೆ ಹೊತ್ತಿಗೆ ಮಗ-ಸೊಸೆ ಹೊರಟು ನಿಂತರು. ಸೊಸೆಯ ಮುಖವನ್ನು ಸ್ಪಷ್ಟವಾಗಿ ವೀಕ್ಷಿಸಿದರು ಶಾಂತಲಾ. ಇಷ್ಟೊಂದು ಮೃದುವಾದ ತ್ವಚೆ ಇದ್ದರೂ ಮತ್ತೂ ಏನೇನೋ ಮೆತ್ತಿಕೊಳ್ಳುವುದು ಯಾಕಪ್ಪಾ? ಎಂದು ಭಾವಿಸಿದರು. ಆ ಮಾತುಗಳನ್ನೆಲ್ಲ ತನ್ನೊಳಗೆ ನುಂಗಿಕೊಂಡರು. "ಅಮ್ಮಾ.. ಬೈಕಿನಲ್ಲಿ ನಗರದವರೆಗೆ ಹೋಗಿ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೇವೆ. ನಂತರ ಟ್ರೈನ್ನಲ್ಲಿ ಬೆಂಗಳೂರಿಗೆ ಪ್ರಯಾಣ."
"ಮಗಾ.. ದೀಪು. ಸರಿ ಜಾಗರೂಕತೆಯಿಂದ ಹೋಗಿಬನ್ನಿ" ಎಂದು ಹೇಳುತ್ತಾ ಕಳುಹಿಸಿಕೊಟ್ಟರು ಶಾಂತಲಾ ಮತ್ತು ಶೇಖರರಾಯರು.
ಮಗ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಹತ್ತಿ ಕುಳಿತ ಮಾನ್ವಿ ಮೆಲ್ಲಗೆ ತನ್ನ ಕೈಗಳಿಂದ ಪತಿಯನ್ನು ತಬ್ಬಿಹಿಡಿದಳು. ಅವರಿಬ್ಬರ ನಡುವೆ ಸಣ್ಣದೊಂದು ಅನುರಾಗದ ಅನುಬಂಧ ಕಂಡ ಹಿರಿಯ ದಂಪತಿಗಳಿಗೂ ಕಚಗುಳಿ ಇಟ್ಟಂತೆ ಆಯ್ತು. ಬೈಕ್ ಕಣ್ಣನೋಟದಿಂದ ಮುಂದಕ್ಕೆ ಸಾಗುವವರೆಗೆ ಇಬ್ಬರು ನೋಡುತ್ತಾ ನಿಂತರು. "ಎಷ್ಟು ವರ್ಷದಿಂದ ಹೇಳುತ್ತಾ ಇದ್ದೆ.. ನೀವು ಒಂದು ದ್ವಿಚಕ್ರವಾಹನ ಕೊಳ್ಳಿ.. ಎಂದು. ನೀವು ಕೇಳಿದಿರಾ..? ಮಗ ಕೊಂಡುಕೊಂಡ. ಸೊಸೆಯನ್ನು ಎಷ್ಟು ನಾಜೂಕಾಗಿ ಕರೆದೊಯ್ಯುತ್ತಾನೆ ನೋಡಿ. ಅವರಿಗಿದೆ ಆ ಭಾಗ್ಯ. ನನಗೆ ಇಲ್ಲವಲ್ಲ.."
"ಎಲಾ ಇವಳೇ.. ಬೈಕಿನಲ್ಲಿ ಕುಳಿತು ಪತಿಯನ್ನು ಮೆದುವಾಗಿ ಬಳಸಿ ಹಿಡಿಯಬೇಕೆಂದೆನೂ ಇಲ್ಲ.. ಹಾಗೆಯೇ ತಬ್ಬಿ ಹಿಡಿಯಬಹುದು.." ಎಂದಾಗ ಶಾಂತಲಾರ ಮುಖ ರಂಗೇರಿತ್ತು.
"ಇದಕ್ಕೇನು ಕಮ್ಮಿ ಇಲ್ಲ ನೀವು.. ಮಾತಿನಲ್ಲಿ ರೈಲು ಬಿಡುವುದಕ್ಕೆ'' ಎಂದು ಛೇಡಿಸಿದರು.
ಬಿರಬಿರನೆ ಒಳಗೆ ನಡೆಯುತ್ತಿದ್ದ ಶಾಂತಲಾರನ್ನು ಹಿಂಬಾಲಿಸಿದ ರಾಯರು ಮೆಲ್ಲನೆ ಆಕೆಯ ಕೈಹಿಡಿದು ನಿಲ್ಲಿಸಿ ಹೆಗಲ ಮೇಲೆ ಕೈಯಿಟ್ಟು.. ಮುಖವನ್ನೇ ದಿಟ್ಟಿಸಿದರು.. ನುಣುಚಿಕೊಳ್ಳುತ್ತಿದ್ದ ಶಾಂತಲಾರನ್ನ ಮತ್ತಷ್ಟು ಬಲವಾಗಿ ಹಿಡಿದು "ಏನೀಗ.. ನಮ್ಮ ನಡುವಿನ ಅನುರಾಗದ ಅನುಬಂಧ ಕಡಿಮೆಯಾಗಿದೆ ಎಂದು ನಿನ್ನ ಭಾವನೆಯೇ... ನೀನೆಂದಿಗೂ ನನ್ನ ಪಾಲಿಗೆ ಸೌಂದರ್ಯವತಿ.. ನಾನು ರಸಿಕ ಮಹಾರಾಜ..." ಎನ್ನುತ್ತಾ ಮಡದಿಯ ಮುಖವನ್ನು ತನ್ನತ್ತ ತಿರುಗಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು...
"ಥೂ.. ಹೋಗೀಪಾ ನನಗೆ ಕೆಲಸವಿದೆ" ಎನ್ನುತ್ತಾ ಹಜಾರದಿಂದ ವೇಗವಾಗಿ ನಡೆದು ಬಂದು ಒಳಗೆ ಸಾಗುತಿದ್ದವರು ನಿಲುಗನ್ನಡಿಯಲ್ಲಿ ತನ್ನ ಮುಖವನ್ನೊಮ್ಮೆ ದಿಟ್ಟಿಸಿಕೊಂಡರು.. ಮುಖದ ಮೇಲೆ ಅರಳಿದ ಮಂದಹಾಸದಿಂದ ತನ್ನನ್ನು ಮತ್ತಷ್ಟು ಸುಂದರವಾಗಿ ಕಂಡಿತು ಅವರಿಗೆ..
ಹಾಗೆಯೇ ಒಂದರೆಗಳಿಗೆ ತಲ್ಲೀನರಾಗಿ ಕನ್ನಡಿಯ ಮುಂದೆ ನಿಂತರು.. ಮುಖದ ಮೇಲೆ ಅರಳಿದ ಗೆಲುವಿನ ನಗೆಯಿಂದ ಮುಖದ ಸುಕ್ಕುಗಳು ಹೆಚ್ಚು ಕಾಣಲಿಲ್ಲ ಅವರಿಗೆ.. ಹಿಂದಿನಿಂದ ರಾಯರ ಆಗಮನವಾಗುತ್ತಿದ್ದಂತೆಯೇ ಮುಖದ ಸೌಂದರ್ಯ ಮತ್ತೆ ಇಮ್ಮಡಿಗೊಂಡಂತೆ ಕಂಡಿದ್ದು.. "ಸೊಸೆಯ ಮುಖ ಮೇಕಪ್ಪು ಬಳಿಯುವ ಸೌಂದರ್ಯವಾದರೆ, ನಿನ್ನದು ಹೃದಯದಿಂದ ಪರಿಪಕ್ವವಾದ ಸೌಂದರ್ಯ ಕಣೆ" ಎನ್ನುತ್ತಾ ರಾಯರು ಹಿಂದಿನಿಂದ ಬಳಸಿದರೆ ಶಾಂತಲಾ ಅವರ ಎದೆಗೊರಗಿ ನಗುತ್ತಿದ್ದರು.. ಅಲ್ಲಿದ್ದದ್ದು ಬರೀ ನಿಷ್ಕಲ್ಮಶ ನಗು, ಪರಿಶುದ್ಧ ಪ್ರೇಮ.. ನಲುವತ್ತು ವರುಷಗಳಿಂದ ಒಂದಾಗಿ ಬೆರೆತ ಎರಡು ನಿಷ್ಕಲ್ಮಶ ಹೃದಯಗಳು... ಎಲ್ಲದಕ್ಕೂ ನಿಲುಗನ್ನಡಿ ಸಾಕ್ಷಿಯಾಗಿತ್ತು.
✍️... ಅನಿತಾ ಜಿ.ಕೆ.ಭಟ್.
24-02-2022.
#ಪ್ರತಿಲಿಪಿಕನ್ನಡ ದೈನಿಕಕಥೆ
#ವಿಷಯ ನಿಲುಗನ್ನಡಿ
No comments:
Post a Comment