Monday, 7 February 2022

ವಿಶೇಷ ಅಭಿಮಾನಿ

 



      ಅಂದು ಚುಮುಚುಮು ಚಳಿಯನ್ನು ಲೆಕ್ಕಿಸದೆ ಬೇಗನೆ ಎದ್ದಿದ್ದೆ.. ಅದೆಂತಹ ಹುರುಪು ಈ ಚಳಿಗಾಲದಲ್ಲೂ ಅಂತೀರಾ..? ಹೌದು ಈ ಹೆಣ್ಣುಮಕ್ಕಳು ಒಂಥರಾ ವಿಚಿತ್ರ. ಅದರಲ್ಲೂ ವಿವಾಹಿತ ಮಹಿಳೆಯರು ಮತ್ತೂ ವಿಚಿತ್ರ. ಅವರ ನಡತೆ ಎಲ್ಲಿ ಯಾವಾಗ ಹೇಗೆ ಎಂದು ಊಹಿಸುವುದು ಕಷ್ಟ. ಹಾಗೆಯೇ ನಾನೂ ಕೂಡಾ. ದಿನಕ್ಕೆ ಒಂದೆರಡು ಬಗೆ ತಿಂಡಿ ಅನ್ನ ಸಾಂಬಾರು ಮಾಡುವಲ್ಲಿ ಬೇಸತ್ತು ಹೋಗುವ ನಾನು, ಅಂದು ಮಾಡಿದ್ದು ಮನೆಯ ನಾಲ್ಕು ಮಂದಿ ಸದಸ್ಯರಿಗೆ ನಾಲ್ಕು ವಿಧದ ತಿಂಡಿ. ಸಾಂಬಾರು ಚಟ್ನಿ.. ವಿಶೇಷವೇನಿಲ್ಲ.. ಯಾರೂ ಕೂಡಾ ನನಗೆ ಅದು ಮೆಚ್ಚಲ್ಲ, ಇದು ಇಷ್ಟವಾಗಿಲ್ಲ, ನಾನು ತಿನ್ನಲಾರೆ ಎಂದೆಲ್ಲ ಹಠ ಹಿಡಿದು ನನ್ನ ಹೊರಡುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡವೆಂದು ನಿರ್ಧರಿಸಿ, ಇಷ್ಟೆಲ್ಲಾ ಬೇಯಿಸಿ ಡೈನಿಂಗ್ ಟೇಬಲ್ ಮೇಲೆ ಜೋಡಿಸಿಟ್ಟೆ.

      ಇಷ್ಟೆಲ್ಲಾ ಭಯಂಕರ ತಯಾರಿ ಮಾಡಿ ಏನು ಟ್ರಿಪ್ ಹೋಗ್ತಾರೆ ಅಂದುಕೊಂಡಿರಾ ಇಲ್ಲ.. ಪಿಕ್ ನಿಕ್ ಹೋಗೋದಾ ಅಲ್ಲ.. ಅಲ್ಲವೇ ಅಲ್ಲ.. ನನ್ನ ತವರ ಕಡೆಯ ವಿವಾಹವೊಂದಕ್ಕೆ ಹೋಗುವ ತಯಾರಿ ಅಷ್ಟೇ. ಕೊರೋನಾದ ಕಾರಣದಿಂದ ತವರ ಕಡೆಯ ಬಂಧುಗಳನ್ನು ಕಾಣದೆ ವರುಷವೆರಡು ಕಳೆದಿತ್ತು. ಈ ಮದುವೆಯ ನೆಪದಲ್ಲಾದರೂ ಎಲ್ಲರನ್ನೂ ನೋಡಿ ಮಾತನಾಡಿ ಬರಬಹುದೆಂಬ ಸಣ್ಣ ಆಸೆ. ಮದುವೆ ಇದ್ದುದು ದೇವಾಲಯದ ಪಕ್ಕದ ಮಂಟಪದಲ್ಲಿ ಆದ್ದರಿಂದ ಬೆಳಗ್ಗೇ ತಲೆಗೆ ಸ್ನಾನ ಮಾಡಿ ಕೂದಲು ಒಣಗಲು ಬಿಟ್ಟಿದ್ದೆ.

      ನನ್ನ ಈ ಸಂಭ್ರಮದ ಕ್ಷಣಕ್ಕೆ ಕಾಟ ಕೊಡಲೆಂದೇ ಗಂಟಲು ಗೊರ ಗೊರ ಎನ್ನುತ್ತಾ ಹಣೆ ಬಿಸಿಯೇರಿತ್ತು. ಮದುವೆಗೆ ಹೋಗುವ ಮಾರ್ಗದಲ್ಲಿ ವೈದ್ಯರ ಕ್ಲಿನಿಕ್ ಗೆ ಭೇಟಿ ಕೊಡುವ ಎಂಬ ಪತಿಯ ಮಾತನ್ನು ಸರಾಸಾಗಾಟಾಗಿ ತಳ್ಳಿ ಹಾಕಿದೆ. ಏಕೆಂದರೆ ನನ್ನ ದುರಾದೃಷ್ಟಕ್ಕೆ ಎಲ್ಲಿಯಾದರೂ ಇಂತಹಾ ಪರಿಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದರೆ... ನನ್ನ ಆಸೆಯೆಲ್ಲ ಠುಸ್ ಆದೀತು. ಅದಕ್ಕಿಂತ ಹೆಚ್ಚಾಗಿ ಕಳೆದ ತಿಂಗಳು ತವರ ಕಡೆಯ ವಿವಾಹವೊಂದರಲ್ಲಿ ಅನಾನುಕೂಲದಿಂದ ಭಾಗವಹಿಸದಿದ್ದುದು ಭಾರೀ ವಿವಾದ ಹುಟ್ಟಿಸಿತ್ತು. "ನೀವೆಲ್ಲ ಹೊರಡುತ್ತಿರಿ. ನಾನು ಬೇಗ ಡಾಕ್ಟರ್ ಕ್ಲಿನಿಕ್ ಗೆ ಹೋಗಿ ಚೆಕಪ್ ಮಾಡಿಸಿ ಔಷಧವನ್ನು ತರುತ್ತೇನೆ" ಎಂದು ಚೂಡಿದಾರ್ ಸಿಕ್ಕಿಸಿಕೊಂಡು ಹೊರಟೇ ಬಿಟ್ಟೆ.. ಪತಿರಾಯ.." ಏ.. ನಿಲ್ಲು ಮಾರಾಯ್ತಿ.. ಎಂತ ಅವಸರ ನಿಂಗೆ.. ಇವತ್ತು ನಾನು ಮನೇಲಿದ್ದೇನೆ.. ಕರ್ಕೊಂಡು ಹೋಗ್ತೇನೆ" ಎಂದರೂ ಕೇಳದೆ ಚಪ್ಪಲಿ ಮೆಟ್ಟಿ ಗೇಟು ದಾಟಿ ಸಾಗಿದ್ದೆ.

        ಇನ್ನೂ ಬಾಗಿಲು ತೆರೆಯದ ಕ್ಲಿನಿಕ್ ನ ಮುಂದೆ ನಿಂತು ಕಾದೆ. ನನ್ನ ಜೊತೆ ಇನ್ನಿಬ್ಬರೂ ಸರತಿಯಲ್ಲಿ ಸೇರಿಕೊಂಡರು. ವೈದ್ಯರಿಗೆ ಬೆಳಗ್ಗೆಯೇ  ಗಿರಾಕಿಯಾಗಿ ಮದ್ದಿನೊಂದಿಗೆ ಮನೆಸೇರಿದೆ. "ಇಷ್ಟು ಬೇಗ ಬಂದ್ಯಾ.. ವೈದ್ಯರು ಇಷ್ಟು ಬೇಗ ಕ್ಲಿನಿಕ್ ಓಪನ್ ಮಾಡ್ತಾರಾ.. ಕ್ಯೂ ಇರಲಿಲ್ಲವಾ.." ಎಂಬೆಲ್ಲ ಪ್ರಶ್ನೆಗಳಿಗೆ "ಉತ್ತರಿಸಲು ಸಮಯವಿಲ್ಲ" ಎಂದು ಹೇಳಿ ಹತ್ತೇ ನಿಮಿಷದಲ್ಲಿ ಹೊರಟು ತಯಾರಾದೆ.

      ಅಂತೂ ಇಂತೂ ಹನ್ನೊಂದು ಗಂಟೆಗೆ ಶ್ರೀ ರಾಮನ ದೇವಾಲಯದ ಆವರಣವನ್ನು ತಲುಪಿದೆವು. ನನ್ನ ಪಾಲಿಗೆ ಅದು ಭಕ್ತಿಭಾವದ ವಾತಾವರಣ. ಶ್ರೀ ರಾಮನ ಪರಮ ಪವಿತ್ರ ಮಠ. ಸುಮಾರು ಮೂವತ್ತು ವರುಷಗಳ ಕೆಳಗೆ ಲಂಗ ದಾವಣಿ ತೊಟ್ಟು, ಎರಡು ಜಡೆ ಹೆಣೆದು ಹಚ್ಚ ಹಸಿರಿನ ಗದ್ದೆಯ ಹುಣಿಯಲ್ಲಿ(ಬದು) ನಡೆಯುತ್ತಾ ನನ್ನ ಅಮ್ಮ, ದೊಡ್ಡಮ್ಮ ಒಡಹುಟ್ಟಿದವರೊಂದಿಗೆ ಮೊತ್ತ ಮೊದಲ ಬಾರಿಗೆ ಆ ಕ್ಷೇತ್ರಕ್ಕೆ ಬಂದಿದ್ದೆ. ತುಂಬು ಸಂಭ್ರಮದಿಂದ ನಲಿದಿದ್ದೆ. ಹಿರಿಯ ಯತಿವರ್ಯರು ಭಾಗವಹಿಸಿದ್ದ ಆ ಕಾರ್ಯಕ್ರಮವು ನಮ್ಮೂರಿನ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಇನ್ನೂ ಆ ಸಂಭ್ರಮದ ಚಿತ್ರಣಗಳು ಮನಃಪಟಲದಲ್ಲಿ ಅಚ್ಚೊತ್ತಿ ನಿಂತಿವೆ.

     ಈಗ ನನ್ನಿಬ್ಬರು ಮಕ್ಕಳ ನಿಗಾವಹಿಸುತ್ತಾ, ಪತಿಯ ಜೊತೆ ನಡೆಯುತ್ತಾ, ಮೆಲ್ಲನೇ ನಡೆಯುತ್ತಿರುವ ನನ್ನಮ್ಮನ ಕಾಳಜಿ ವಹಿಸುತ್ತಾ ಶ್ರೀರಾಮನಿಗೆ ಪ್ರದಕ್ಷಿಣೆ ಹಾಕಿದೆವು. ಮನದೊಳಗೆ ಹೇಳಲಾರದ ಸಂತೃಪ್ತಿ ಮನೆಮಾಡಿತ್ತು. ಮೂವತ್ತು ವರ್ಷಗಳ ಹಿಂದೆ ನನ್ನ ಕೈ ಹಿಡಿದು ಜೋಪಾನ ಮಾಡಿದ್ದ ಅಮ್ಮ... ಈಗ ನಾನು ಅಮ್ಮನಿಗೆ ಅದೇ ಬೆಚ್ಚನೆಯ ಪ್ರೀತಿಯನ್ನು ಹೊದೆಸುವ ಅನುಪಮ ಕ್ಷಣ...

     ಮುಖದ ಮೇಲಿನ ಮಾಸ್ಕ್ ಸರಿಸದೇ ಸಭಾಂಗಣದಲ್ಲಿ ಆಸೀನರಾದೆವು. ಬಂಧುಗಳನ್ನು ಸ್ವಲ್ಪ ಅಂತರದಿಂದಲೇ ಪ್ರೀತಿಯಿಂದ ಮಾತಾನಾಡಿಸಿದೆವು. ಹರಟಿದೆವು.. ಮಾತನಾಡುತ್ತಲೇ ಬಹುತೇಕರು ತಾವೂ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ತಿಳಿಸಿದರು. ವಿವಾಹ ಮಂಟಪದಿಂದ ಸ್ವಲ್ಪ ದೂರದಲ್ಲಿ ಹಿಂದೆ ನಾನೂ ಪತಿಯೂ ಕುಳಿತೆವು.
ಆಗ ಒಬ್ಬ ಮಹಿಳೆ ನಮ್ಮತ್ತಲೇ ಬಂದರು. ನನ್ನ ಕುರ್ಚಿಯ ಹಿಂದೆ ನಿಂತರು. ನಾನು "ಆರಾಮವಾಗಿದ್ದೀರಾ..?" ಎಂದು ಕೇಳುತ್ತಲೇ ಕ್ಷೇಮ ಸಮಾಚಾರ ವಿಚಾರಿಸಿದೆ. ಒಂದೆರಡು ಮಾತು ಮಾತನಾಡಿದರು.
"ನೀನು ಬರೀತೀಯಂತೆ.. !!"
"ಹೌದು.."
"ಸಂಸ್ಕಾರದ ಬಗ್ಗೆ ಬರೆದಿದ್ದೀಯಂತೆ.."
ನಾನು  ಮೌನಿಯಾದೆ. ಕಳೆದು ಮೂರು ವರ್ಷಗಳಿಂದ ಬರೆಯುತ್ತಿರುವ ನನಗೆ ನನ್ನ ಲೇಖನದ ಶೀರ್ಷಿಕೆ, ಸಾಲುಗಳು, ವಿಷಯವಸ್ತುಗಳು ತಕ್ಷಣವೇ ನೆನಪಿಗೆ ಬರುವುದಿಲ್ಲ.
ಮುಖದ ಮೇಲೊಂದು ವಿಕೃತ ನಗೆ ಮೂಡಿಸಿ,
"ಹೇಳು.. ಸಂಸ್ಕಾರ ಅಂದರೇನು? ಹೇಳು.." ಎಂದರು..
"ನೋಡಿ.. ನಾನು ಯಾವುದಾದರೂ ವಿಷಯ ಕೊಟ್ಟಾಗ, ಸಿಕ್ಕಾಗ ಅದರ ಬಗ್ಗೆ ಏನು ಬರೆಯಬಹುದು ಎಂದು ಯೋಚಿಸಿ ನನಗೆ ತಿಳಿದಂತೆ ಬರೆಯುತ್ತೇನೆಯೇ ಹೊರತು.. ಆ ಬರಹದಲ್ಲಿ ಇರುವುದೆಲ್ಲ ನನ್ನ ವೈಯಕ್ತಿಕ ಜೀವನದ ತತ್ವ ಆದರ್ಶಗಳೇ  ಅಲ್ಲ. ಯಾವ ಬರಹವನ್ನೂ ಕೂಡಾ ವೈಯಕ್ತಿಕವಾಗಿ ಪರಿಗಣಿಸದಿರಿ.." ಎಂದೆ..
ಊಹೂಂ.. ಅವರಿಗೆ ಸಮಾಧಾನವಾಗಲಿಲ್ಲ.
ನನ್ನ ಬೆನ್ನ ಹಿಂದಿನಿಂದ ನನ್ನ ಎಡ ಭುಜದತ್ತ ತಮ್ಮ ಬಲಗೈಯನ್ನು ಮುಂದೆ ಚಾಚಿ, ತೋರು ಬೆರಳನ್ನು ಅಲ್ಲಾಡಿಸುತ್ತಾ, "ಹೇಳು.. ಭಾರೀ ಬರೀತೀಯಂತೆ.. ಭಾರೀ ಗೊತ್ತುಂಟಂತೆ.. ಸಂಸ್ಕಾರ ಅಂದರೇನು..? ಏನು ಗೊತ್ತುಂಟು ನಿನಗೆ ಸಂಸ್ಕಾರದ ಬಗ್ಗೆ ಬರೆಯುವಷ್ಟು.. ?" ಧ್ವನಿ ಏರಿತ್ತು.

      "ಸಂಸ್ಕಾರವೆಂದರೆ ಹಿರಿಯರನ್ನು ಗೌರವಿಸಬೇಕು. ಎಲ್ಲರನ್ನೂ ಮಾನವೀಯ ದೃಷ್ಟಿಯಿಂದ ನೋಡಬೇಕು. ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಿರಿಯರನ್ನೂ ಪ್ರೀತಿಯಿಂದ ಕಾಣಬೇಕು. ಅವರ ಮಾತುಗಳಿಗೂ ಕಿವಿಗೊಡಬೇಕು.." ಎಂದಷ್ಟೇ ಹೇಳಿ ನಿಲ್ಲಿಸಿದೆ.

    ಕಣ್ಣು ದೊಡ್ಡದು ಮಾಡಿ.. "ಹೌದು.. ಇದೆಲ್ಲ ಇದೆಯಾ ನಿನ್ನಲ್ಲಿ..? ಇದೆಲ್ಲಾ ಇದ್ದಿದ್ದರೆ ನೀನು ಹೀಗೆ ಮಾಡುತ್ತಿದ್ದೀಯಾ.. ನಿನ್ನಮ್ಮ ನಿನಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಅಂತ ಬರೆದಿದ್ದೀಯಂತೆ.. ಅವರೇನು ಸಂಸ್ಕಾರ ಕಲಿಸಿದ್ದಾರೆ ನಿನಗೆ.. ಸಂಸ್ಕಾರ ಕಲಿಸಿದ್ದರೆ ತಿಂಗಳ ಹಿಂದೆ ನಡೆದ ನಮ್ಮ ಮಗನ ವಿವಾಹ ಸಮಾರಂಭಕ್ಕೆ ಬಾರದೆ ಇರುತ್ತಿದ್ದೆಯಾ..?" ವಾಗ್ಝರಿ ಹರಿಯುತ್ತಲೇ ಇತ್ತು..

"ಖಂಡಿತಾ ನಿಮ್ಮ ಮಗನ ವಿವಾಹ ಸಮಾರಂಭಕ್ಕೆ ಬರಬೇಕೆಂಬ ಮನಸು ನನಗಿತ್ತು. ಆದರೆ ಅನಿವಾರ್ಯ ವೈಯಕ್ತಿಕ ಕಾರಣಗಳಿಂದ ಬರಲಾಗಲಿಲ್ಲ.. ಹಿಂದಿನ ಕಾರ್ಯಕ್ರಮಗಳಿಗೆಲ್ಲ ಕುಟುಂಬ ಸಮೇತರಾಗಿ ಬಂದಿದ್ದೇವೆ.. ಮುಂದೆಯೂ ಬರುತ್ತೇವೆ.." ಎಂದು ಸಮಾಧಾನದಿಂದಲೇ ಉತ್ತರಿಸಿದೆ..
ಆದರೂ ಆಕೆಗೆ ತೃಪ್ತಿ ಆಗಿಲ್ಲ.

"ಏನು ಕಲಿಸಿದ್ದಾಳೆ ನಿನ್ನ ತಾಯಿ ಸಂಸ್ಕಾರ.. ನಿನ್ನಲ್ಲಿ ತುಂಬಾ ಮಾತನಾಡುವುದಿದೆ ನನಗೆ.. ಕೇಳಿದರೆ ನಿನಗೆ ಕೋಪ ಬರಬಹುದು.. ಆದರೆ ನಾನು ಬಿಡಲಾರೆ.. ನಾನೇನು ನಿನ್ನ ಬರಹವನ್ನು ಯಾವತ್ತೂ ಓದುವುದಿಲ್ಲ. ನನ್ನಲ್ಲಿ ದೊಡ್ಡ ಫೋನಿಲ್ಲ.. ನನ್ನ ಇಬ್ಬರು ಮಗಳಂದಿರು ಓದುತ್ತಾರೆ. ದೊಡ್ಡ ಮಗಳು ಕೇಳಿದಳು.. ಅನಿತಕ್ಕನಿಗೆ ತಂದೆ ತಾಯಿ ಏನು ಸಂಸ್ಕಾರ ಕಲಿಸಿದ್ದಾರೆ ಎಂದು.."
ಎನ್ನುತ್ತಾ ಬೆರಳು ಝಳಪಿಸುತ್ತಿದ್ದರು. ನಾನು ಅಕ್ಷರಶಃ ಕಂಗಾಲಾದೆ.
ಆಕೆ ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ. ಸುತ್ತಲೂ ಬಹಳಷ್ಟು ಜನ ಬಂಧು ಬಾಂಧವರಿದ್ದಾರೆ. ಅವರೆಲ್ಲರೂ ಗಮನಿಸುವಾಗ ನನಗೆ ಸಂಕೋಚವಾಗುತ್ತಿದೆ. ಆದರೆ ಆಕೆಗೆ ಅದು ಗಮನಕ್ಕೆ ಬರುತ್ತಲೇ ಇಲ್ಲ.

     ಕೊನೆಗೆ ನಾನೇ ಅಂದೆ.. "ನೋಡಿ ನಿಮ್ಮಿಂದ ನಾನು ಸಂಸ್ಕಾರ ಕಲಿಯಬೇಕಾಗಿಲ್ಲ.. ನನಗೆ ನನ್ನ ಹೆತ್ತವರು ಕಲಿಸಿದ ಸಂಸ್ಕಾರ.. ನಾನು ಬದುಕಿನಲ್ಲಿ ಅಳವಡಿಸಿಕೊಂಡ ಸಂಸ್ಕಾರ ಸಾಕು.." ಎಂದೆ..
ನನ್ನ ಹಿಂದಿನಿಂದ ತೆರಳಿ , ಒಂದು ಕುರ್ಚಿಯ ಆಚೆ ಕುಳಿತಿದ್ದ ನನ್ನ ಪತಿಯ ಹಿಂದೆ ನಿಂತರು.
"ಯಾಕೆ ನನ್ನ ಮಗನ ಮದುವೆಗೆ ಬರಲಿಲ್ಲ..?" ಅವರು ನಗುತ್ತಾ ನನ್ನತ್ತ ನೋಡಿದರು. ಅವರಿಗೆ ವ್ಯಾವಹಾರಿಕ ಜಂಜಾಟದಲ್ಲಿ ಅದು ಯಾವಾಗ ಇತ್ತು ಎಂಬುದೇ ಮರೆತುಹೋಗಿತ್ತು.
ಆದರೂ ಆಕೆ ಹೇಳುತ್ತಲೇ ಹೋದರು. ತಕ್ಷಣ ಆ ದಿನದ ಅನಾನುಕೂಲ ನೆನಪಾದ ಪತಿ ಕಾರಣವನ್ನು ಹೇಳಿದರು. ಆದರೂ ಆಕೆ ಬಿಡುವ ಲಕ್ಷಣವಿಲ್ಲ. ನಮ್ಮ ಮನೆಯವರು ಹೇಳಿದ ನೈಜ ಕಾರಣಗಳಿಗೆಲ್ಲ ವಾದಿಸಿ ಎದುರುತ್ತರ ನೀಡಿದ ಆಕೆ ಕೊನೆಗೆ ಬಂದು ನಿಂತದ್ದು ಸಂಸ್ಕಾರ ಶಬ್ದಕ್ಕೆ.
"ನಿನ್ನ ಹೆಂಡತಿ ತಂದೆ ತಾಯಿ ಸಂಸ್ಕಾರ ಕಲಿಸಿದ್ದಾರೆ ಎಂದೆಲ್ಲ ಭಾರೀ ಬರೆಯುತ್ತಾಳಂತೆ.. ಇದೇನಾ ಅವಳ ಸಂಸ್ಕಾರ.. ಇದೇನಾ ಇಷ್ಟು ಕಲಿತ ನಿನ್ನ ಸಂಸ್ಕಾರ.. ನಿನ್ನ ಅತ್ತೆಮಾವನವರು ಏನು ಸಂಸ್ಕಾರ ಕಲಿಸಿದ್ದಾರೆ ಆಕೆಗೆ..?"
ಪತಿ ಮಾತನಾಡಲಿಲ್ಲ. ಅರ್ಥವಾಗದಂತಹ ಮನಸ್ಥಿತಿಯಲ್ಲಿರುವವರಿಗೆ  ಹೇಳುವುದು ವ್ಯರ್ಥ ಎಂದು ಸುಮ್ಮನಾದರು.
ಅಲ್ಲಿಂದ ಹೊರಟು ಹೋದರು.

      ನಂತರ ನಾಲ್ಕಾರು ಬಾರಿ ನನ್ನ ಪತಿಯ ತಲೆ ಕಂಡ ಕೂಡಲೇ ಬೆನ್ನು ಬಿಡದ ಬೇತಾಳನಂತೆ ಬಂದು ಬೆರಳು ಝಳಪಿಸುತ್ತಾ, ಇನ್ನೇನೇನೋ ಹೇಳುತ್ತಾ ಸಂಸ್ಕಾರ ಪದಕ್ಕೇ ಅಂಟಿಕೊಳ್ಳುತ್ತಿದ್ದರು.. ಪತಿಗೆ ಬಹಳ ಕಿರಿಕಿರಿಯಾಗಿತ್ತು.. ಸಾಧು, ಗಂಭೀರ ಸ್ವಭಾವದ, ಯಾರ ತಂಟೆಗೂ ಹೋಗದ ಪತಿಗೆ ಬಹಳ ನೋವಾಯಿತು. ಆದರೂ ಸಂಯಮ ಕಳೆದುಕೊಳ್ಳಲಿಲ್ಲ.

        ಹೊರಡುವ ಸಮಯದಲ್ಲಿ ನಾನು ಅಮ್ಮನಲ್ಲಿ ಈ ವಿಚಾರವನ್ನು ಹಂಚಿಕೊಂಡೆ. ಆಕೆ ಎಲ್ಲಿದ್ದಳೋ.. ಸರಸರನೆ ಓಡುತ್ತಾ ಬಂದರು. "ಅಮ್ಮನಲ್ಲಿ ದೂರುಕೊಡುತ್ತೀಯಾ..?" ಎನ್ನುತ್ತಾ ದುರುಗುಟ್ಟಿ ನೋಡಿದರು. ನನ್ನಮ್ಮನ ಮುಖವನ್ನು ದಿಟ್ಟಿಸುತ್ತಾ.. "ನೋಡು ಇವಳಿಗೇನು ಸಂಸ್ಕಾರ ಕಲಿಸಿದ್ದಿ.. ನನ್ನ ಮಗಳಂದಿರು ಕೇಳುತ್ತಿದ್ದಾರೆ. ದೊಡ್ಡಮ್ಮ ಏನು ಸಂಸ್ಕಾರ ಕಲಿಸಿದ್ದಾರೆ...?"

"ಅವಳೇನು ಮಾಡಿದ್ದಾಳೆ ನಿನಗೆ.. ನಿನ್ನ ಮಗನ ಮದುವೆಗೆ ಆಕೆಗೆ ಬರಲು ಸಾಧ್ಯವಾಗಿಲ್ಲ. ಹಿಂದೆ ಬಂದಿದ್ದಳು. ಮುಂದೆ ಬರುತ್ತಾಳೆ.." ಎಂದರು ಅಮ್ಮ..
ನನ್ನ ಮೇಲೆ ಮತ್ತೆ ಏನೇನೋ ಹೇಳುತ್ತಾ ಬಂದರು..
"ನೋಡಿ.. ನನ್ನಮ್ಮ ತಾನು ಬದುಕಿ ತೋರಿಸಿದ ಸಂಸ್ಕಾರದಲ್ಲಿ ನಾನು ನಡೆಯುತ್ತೇನೆ. ಹೋಗಿ ಬರುವೆ.." ಎನ್ನುತ್ತಾ ಅಮ್ಮನಿಗೆ ಕೈ ಬೀಸಿ ಹೊರಟರೆ..
ನನ್ನ ಹಿಂದೆಯೆ ಹತ್ತು ಹೆಜ್ಜೆ ಓಡುತ್ತಾ ಬಂದು "ಏಯ್ ನಿಲ್ಲು ನಿಲ್ಲು.. ನಿನ್ನಲ್ಲಿ ಏನೆಲ್ಲ ಕೇಳುವುದಿದೆ ನನಗೆ ಎಂದು ಹೇಳುತ್ತಲೇ ಇದ್ದರು.." ನಾನು ಹಿಂದಿರುಗಿ ನೋಡದೆಯೇ ಬಿರುಸಾಗಿ ಸಾಗಿದೆ..

     ಶ್ರೀ ರಾಮನ ಮುಂದೆ ಕರ ಜೋಡಿಸಿ ನಿಂತೆ. ಏನಿದೆಲ್ಲಾ... ನನಗೆ ಒಂದೂ ತಿಳಿಯುತ್ತಿಲ್ಲ.. ಬರವಣಿಗೆ ಎಂಬ ಹವ್ಯಾಸ ಇಂತಹ ಇಕ್ಕಟ್ಟನ್ನೂ ತಂದೊಡ್ಡುತ್ತದೆಯೇ..  ಕಾಪಾಡು ತಂದೆ ಶ್ರೀ ರಾಮಚಂದ್ರ.. ಎಂದು  ದೀನಳಾಗಿ ಶರಣಾಗಿ ನಿಂತೆ.. ಮನಸ್ಸಿನ ಅಲ್ಲೋಲಕಲ್ಲೋಲ ಒಮ್ಮೆಲೇ ಶಾಂತವಾಗಿ ತೃಪ್ತಭಾವ ನನ್ನನ್ನಾವರಿಸಿತು. "ಹೋಗಿ ಬಾ ಮಗಳೇ.. ಶುಭವಾಗಲಿ.." ಎಂಬ ಲಹರಿ  ಗಾಳಿಯಲ್ಲಿ ಮೆಲುವಾಗಿ ತೂರಿ ಬಂದಂತಾಯಿತು..

      ಅಷ್ಟಕ್ಕೂ ಇದಕ್ಕೆಲ್ಲ ಕಾರಣವಾದದ್ದು  ಮಾಮ್ಸ್‌ಪ್ರೆಸೊ ಬ್ಲಾಗ್. ಎರಡು ವರ್ಷಗಳ ಹಿಂದೆ ವಾರದ ಸವಾಲಿನಲ್ಲಿ "ನಿಮ್ಮ ತಾಯಿಯಲ್ಲಿ ನೀವು ಕಂಡ ಆದರ್ಶ ಗುಣಗಳು" ಎಂಬ ವಿಷಯಕ್ಕೆ ನಾನು ಬರೆದ "ನನಗೆ ನನ್ನಮ್ಮನೇ ಮಾದರಿ" ಎಂಬ ಸಣ್ಣ ಲೇಖನ. ಇದರಲ್ಲಿ ನನ್ನಮ್ಮನಲ್ಲಿ ನಾನು ಗುರುತಿಸಿದ್ದ ಅಂಶಗಳನ್ನು ಬರೆದಿದ್ದೆ. ಅಲ್ಲಿ ಬರೆದದ್ದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ಅಮ್ಮನ ಬಗ್ಗೆ ಕಡಿಮೆಯೇ ಬರೆದಿದ್ದೇನೆ ಹೊರತು ವೈಭವೀಕರಿಸಿಲ್ಲ. ಅಷ್ಟಕ್ಕೂ ನಾನು ಬರೆದಿರುವುದು ನನ್ನ ದೃಷ್ಟಿಯಲ್ಲಿ ನನ್ನ ಅಮ್ಮನ ಬಗ್ಗೆ ಇರುವ ಭಾವವೇ ಹೊರತು ಇನ್ನಾರದೋ ದೃಷ್ಟಿಕೋನದಿಂದ ಅಳೆದು ಬರೆದಿದ್ದಲ್ಲ. ಆದರೂ ಬ್ಲಾಗ್ ನ ಒಂದು ವಾಕ್ಯ, ಒಂದು ಶಬ್ದವೇ ಇಷ್ಟೆಲ್ಲಾ  ಮಾತುಗಳಿಗೆ ಕಾರಣವಾಗಿರುವುದು ಬಲು ನೋವಿನ ಸಂಗತಿ. ಬರೆಯುವುದು ನಮ್ಮ ಹವ್ಯಾಸವೇನೋ ಹೌದು. ಆದರೆ ಇಂತಹ ಘಟನೆಗಳು ನಡೆದಾಗ ಮನಸು ಮೂಕವಾಗಿ ರೋದಿಸುತ್ತದೆ. ನಮ್ಮದೇ ಶ್ರಮದಿಂದ ಹವ್ಯಾಸವೊಂದನ್ನು ರೂಪಿಸಿಕೊಂಡಾಗ, ಅದನ್ನು ಕಂಡು ಮನಸು ಹುಳ್ಳಗೆ ಆಗುವುದಾರೆ ನಾವೇನು ಮಾಡಲು ಸಾಧ್ಯ.?

✍️... ಅನಿತಾ ಜಿ.ಕೆ.ಭಟ್.
03-02-2022.
#ಪ್ರತಿಲಿಪಿ ಕನ್ನಡ
#ದೈನಿಕವಿಷಯ_ ಸಾಹಿತ್ಯಾಭಿಮಾನಿ


No comments:

Post a Comment