Saturday, 14 December 2019

ಒಳಮನಸಿನ ತೊಳಲಾಟ



        ಸುತ್ತಲಿನ ಆಗುಹೋಗುಗಳ ಪರಿವೆಯೇ ಇಲ್ಲದೆ ಮಲಗಿದ್ದ ಗಂಡನಿಗೆ ಕಾಫಿ ಕುಡಿಸಿ ,ದೋಸೆಯ ತುಂಡುಗಳನ್ನು ತಿನ್ನಿಸಿ ಬಾಯೊರೆಸಿದರು ಶಂಕರಿಯಮ್ಮ.ಗಂಡ ಈಶ್ವರಯ್ಯನಿಗೆ ಪಕ್ಷವಾತ ತಗುಲಿ ಇಂದಿಗೆ ಐದು ವರ್ಷ.ಅಂದಿನಿಂದ ಶಂಕರಿಯಮ್ಮ ಗಂಡನನ್ನು ಮಗನಂತೆ ಕಂಡು ಆರೈಕೆ ಮಾಡಿದರು.ಇತ್ತೀಚೆಗೆ ತೀರಾ ಕಂಗಾಲಾದ ಪರಿಸ್ಥಿತಿ.ಎಲ್ಲವೂ ಮಲಗಿದಲ್ಲಿಯೇ.ಎತ್ತಿ ಕೂರಿಸಲು ,ಸ್ನಾನ ಮಾಡಿಸಲು ಮಗ ನರಸಿಂಹ ಸಹಾಯ ಮಾಡುತ್ತಾನೆ.ಅಷ್ಟು ಬಿಟ್ಟರೆ ಮತ್ತೆಲ್ಲವೂ ಶಂಕರಿಯಮ್ಮನ ಹೆಗಲ ಮೇಲೆ.ಅವರಿಗೂ ವಯಸ್ಸಾಯಿತು.ವಯೋಸಹಜ ದೌರ್ಬಲ್ಯ ಗಳು ಕಾಡುತ್ತಿವೆ..

         ನರಸಿಂಹ ಬೆಳಗ್ಗೆ ಬೇಗನೆದ್ದು ದನದ ಹಾಲುಹಿಂಡಿ,ಹಸುಕರುಗಳ ಸೆಗಣಿ ಬಾಚಿ , ಕೊಟ್ಟಿಗೆ ತೊಳೆದು, ಹುಲ್ಲು ಹಿಂಡಿ ಕೊಟ್ಟು ಹಾಲನ್ನು ಡೈರಿಗೆ ಕೊಟ್ಟು ಒಳಗೆ ಕಾಲಿಟ್ಟನು.ಬಂದ ಮಗನತ್ತ ದೈನ್ಯತೆಯ ನೋಟ ಬೀರಿದರು.ತಾಯಿಯ ಈ ಪರಿಯ ನೋಟವನ್ನು ಸಹಿಸುವುದು ನರಸಿಂಹನಿಗೆ ಬಹಳ ಕಷ್ಟ.ಮುಂದೆ ಅಮ್ಮ ಏನು ಹೇಳುತ್ತಾರೆ ಎಂಬುದರ ಅರಿವೂ ಅವನಿಗಿತ್ತು.ಹೌದು ಅಮ್ಮ ಇತ್ತೀಚೆಗೆ ಹೇಳುವುದೊಂದೇ" ಮಗ...ನನಗೂ ವಯಸ್ಸಾಯಿತು...ಅಪ್ಪ ಬದುಕಿದ್ದಾಗಲೇ ಮದುವೆ ಆಗು ಕಣೋ..ನಿನಗೂ ಆಸರೆಗೆ ಒಂದು ಜೀವ ಅಂತ ಇರುತ್ತೆ ಕಣೋ..."

         ಅಮ್ಮನ ಮಾತು ಬರುವ ಮುನ್ನವೇ ವೇಗವಾಗಿ ಊಟದ ಕೋಣೆಯತ್ತ ದಾಪುಗಾಲಿಕ್ಕಿದ.ಅಮ್ಮ ಮಾಡಿ ಮುಚ್ಚಿಟ್ಟ ದೋಸೆ ಬಟ್ಟಲಿಗೆ ಬಡಿಸಿಕೊಂಡು ಕೊಬ್ಬರಿ ಚಟ್ನಿಯೊಂದಿಗೆ ಸವಿದ.ಅಮ್ಮನ ಕೈರುಚಿಯನ್ನು ಮೀರಿಸುವವರುಂಟೆ..?? ಹೊಟ್ಟೆತುಂಬಾ ತಿಂದು ಒಂದು ತಪಲೆಯಲ್ಲಿ ಇದ್ದ ಕೊತ್ತಂಬರಿ ಜೀರಿಗೆ ಕಷಾಯವನ್ನು ಕುಡಿದು ತೇಗಿ ಹೊರಬಂದ..ಅಮ್ಮ ಅಪ್ಪನ ಬೆಳಗಿನ ಚಾಕರಿ ಮುಗಿಸಿದರು. ಮೆಲ್ಲನೆ ಆಸಕ್ತಿಯೇ ಇಲ್ಲದಂತೆ ಬಟ್ಟಲಿನ ಬುಡದಲ್ಲಿ ಕುಳಿತರು..ಅಮ್ಮನ ವೇದನೆಯನ್ನು ಕಂಡ ನರಸಿಂಹನಿಗೆ ಸುಮ್ಮನೆ ತಪ್ಪಿಸಿಕೊಳ್ಳಲು ಮನಸ್ಸು ಬರಲಿಲ್ಲ..


         "ಎಷ್ಟು ದಿನ ಹೀಗೇ ಇರ್ತಿ ನರಸಿಂಹ.ಮದುವೆ ಮಾಡಿಕೋ..ಬರುವ ಯುಗಾದಿಗೆ ನಿನಗೆ ವರ್ಷ ಭರ್ತಿ  ನಲುವತ್ತಾಗುತ್ತೆ..ನಿನ್ನ ಪ್ರಾಯದವರೆಲ್ಲ ಮದುವೆಯಾಗಿ ಮಗನಿಗೆ ಬ್ರಹ್ಮೋಪದೇಶ ಮಾಡಿ ಆಯ್ತು.. ನಿನಗೆ ಯಾವ ಚಿಂತೆಯೂ ಇಲ್ಲ.. ಮೊನ್ನೆ  ಮಾವನ ಮಗನ ಮದುವೆಯಲ್ಲಿ ಅತ್ತಿಗೆಯಂದಿರೆಲ್ಲ ಕೇಳುವಾಗ ನನಗೇ ಏನು ಹೇಳಬೇಕೋ ತೋಚಲಿಲ್ಲ... ನೀನು ಯಾವ ಹುಡುಗಿಯನ್ನು ತೋರಿಸಿ ಇವಳನ್ನು ಮದುವೆ ಆಗ್ತೀನಿ ಅಂತೀಯೋ ..ನಾನು ಅವಳನ್ನು ಮನಸಾರೆ ಸೊಸೆಯೆಂದು ಸ್ವೀಕರಿಸುತ್ತೇನೆ.."

         "ಹೇಳುವವರು ಹೇಳಲಿ... ನಾನು ನಿನ್ನ ಮಗನಮ್ಮಾ.. ನಿಮ್ಮನ್ನು ಯಾವತ್ತೂ ಕೈಬಿಡಲ್ಲ.." ಎಂದು ಅಮ್ಮನನ್ನು ಸಂತೈಸಿ ಹೊರಗೆ ಹೋದ..

       ಶಂಕರಿಯಮ್ಮ ಕಷ್ಟದಲ್ಲಿ ತುತ್ತು ಗಂಟಲಿನಲ್ಲಿಳಿಸಿದರು..ನನ್ನ ಅತ್ತಿಗೆ ಸುನಂದಾಗೆ ನರಸಿಂಹನ ಪ್ರಾಯದ್ದೇ ಹೆಣ್ಣುಮಗು ಹುಟ್ಟಿದಾಗ ನನ್ನ ತಾಯಿ ಶಂಕರಿಗೆ ಗಂಡು ಮಗು ಎಂದು ಸಂಭ್ರಮಿಸಿದ್ದರು..ಎಲ್ಲ ನೀರಮೇಲೆ ಹೋಮ ಮಾಡಿದಂತಾಯ್ತು..ಸುನಂದಾಳ ಮಗಳು ಸುಮಾಗೆ ಮದುವೆಯಾಗಿ ಡಿಗ್ರಿ ಓದುವ ಮಗಳಿದ್ದಾಳೆ..ನಮ್ಮ ನರಸಿಂಹನಿಗೆ ಮಾತ್ರ ಕಂಕಣ ಭಾಗ್ಯ ಕೂಡಿ ಬಂದಿಲ್ಲ..ಛೇ...!!
ಎಲ್ಲರಲ್ಲೂ ಮಗನಿಗೆ ಎಲ್ಲಾದರೂ ಹುಡುಗಿಯಿದ್ದರೆ ಹೇಳಿ ಎಂದು ಹೇಳಿಯಾಯಿತು..ಸಿಗಲಿಲ್ಲ.ಈಗಂತೂ ನಾನು ಹಾಗೆ ಹೇಳುತ್ತೇನೆಂದು ನೆಂಟರು ನನ್ನ ಬಳಿ ಮಾತನಾಡುವುದನ್ನೇ ಕಡಿಮೆ ಮಾಡಿದ್ದಾರೆ ..

            ನರಸಿಂಹನ ತಲೆಯೂ ಯೋಚನೆಗಳಿಂದ ತುಂಬಿತ್ತು..ಅಲ್ಲ ಮದುವೆಯಾದರೆ ಮಾತ್ರ ಬದುಕಾ...ಬ್ರಹ್ಮಾಚಾರಿಯಾಗಿದ್ದರೆ ತಪ್ಪಾ.. ಹೆತ್ತವರನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಲದಾ...ನನಗೂ ಮದುವೆಯ ಕನಸೇನೋ ಇದೆ.. ನನ್ನವಳು ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.. ಮನೆತನಕ್ಕೆ ತಕ್ಕಂತೆ ಬಾಳಬೇಕು..ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು... ಇದಕ್ಕೆಲ್ಲಾ ಸರಿಹೊಂದುವ ಹುಡುಗಿ ಸಿಗುತ್ತಾಳಾ... ಮದುವೆಯಾಗಿ ಸ್ವಲ್ಪ ಸಮಯಕ್ಕೆ ಪಟ್ಟಣಕ್ಕೆ ಹೋಗೋಣ ಎಂದರೆ ತಂದೆ ತಾಯಿಯ ಗತಿಯೇನು..?? ಎಲ್ಲರೂ ಕಂಡಾಗ ಫೋನ್ ಮಾಡಿದಾಗ.. ಮದುವೆ ಯಾವಾಗ..?? ಎಂದು ಕೇಳುವ ಪ್ರಶ್ನೆಗೆ  ತೆರೆಯೆಳೆಯಲು ನನ್ನಿಂದ ಆದೀತೇ..

              ನನ್ನಂತೆಯೇ ಹುಡುಗಿಗೂ ಕನಸಿರುವುದಿಲ್ಲವೇ..ಪಟ್ಟಣದಲ್ಲಿ ಗಂಡ ಮಕ್ಕಳೊಂದಿಗೆ ಹೈಫೈ ಜೀವನ ಬೇಕು..ಕಾರು, ಬಂಗಲೆ, ಐಶಾರಾಮಿ ಸೌಲಭ್ಯಗಳೂ ಬೇಕು ಎಂದು..ಅದೂ ತಪ್ಪಾ..ಅಲ್ಲವಲ್ಲಾ.. ಹಾಗೆಂದು ಅದನ್ನೆಲ್ಲ ಪೂರೈಸಲು ನನ್ನಿಂದ ಸಾಧ್ಯಾನಾ..ಕೈಹಿಡಿದವಳಿಗೆ ನಿರಾಸೆಪಡಿಸುವುದಕ್ಕಿಂತ ಒಂಟಿ ಬದುಕೇ ಲೇಸು...

          ಹಾಗೂ ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಿ ಮತ್ತೆ ಪುನಃ ಉದ್ಯೋಗಕ್ಕೆ ಸೇರಲು ಮಡದಿ ಒತ್ತಾಯಿಸಿದರೆ..ನನ್ನ ಮನಸ್ಸನ್ನು ಕಲ್ಲು ಮಾಡಿ ಇಲ್ಲವೆನ್ನಲು ಆದೀತೇ.. ಸಾಫ್ಟವೇರ್ ಇಂಜನಿಯರ್ ಆಗಿದ್ದು ಕೈತುಂಬಾ ಸಂಬಳವಿದ್ದ ಉದ್ಯೋಗ ಬಿಟ್ಟು ಹಳ್ಳಿ ಸೇರಿದ್ದು ತಂದೆತಾಯಿಯನ್ನು ನೋಡಿಕೊಳ್ಳಲೆಂದು ...ಆ ಉದ್ದೇಶವನ್ನೇ  ಕೌಟುಂಬಿಕ ಪ್ರಪಂಚದಲ್ಲಿ ನಾನು ಮರೆತರೆ...


         ಎಂದೆಲ್ಲ ಯೋಚಿಸುತ್ತಿದ್ದ ನರಸಿಂಹನಿಗೆ ಇಂದು ಹತ್ತಿರದ ಪಟ್ಟಣಕ್ಕೆ ಹೋಗಬೇಕೆಂದು ನೆನಪಾಯಿತು.." ಅಮ್ಮಾ...ಹೋಗಿಬರುತ್ತೇನೆ"... ಎಂದು ಹೇಳಿ ಹಳೆಯ ಓಮ್ನಿ ಯಲ್ಲಿ ಅಡಿಕೆ, ಬಾಳೆಗೊನೆ ತೆಗೆದುಕೊಂಡು ಹೊರಟ.ಪಟ್ಟಣದಲ್ಲಿ ಅದನ್ನು ಮಾರಿ ದಿನಸಿ ಅಂಗಡಿಗೆ ಬಂದು ಒಂದೊಂದೇ ಸಾಮಾನು ಚೀಟಿಯಲ್ಲಿದ್ದುದನ್ನು ಓದಿ ಹೇಳಿದ.ಅಲ್ಲಿದ್ದ ಅಂಗಡಿಯ ಸಹಾಯಕಿ .."ಸರ್.. ನೀವು ಆ ಚೀಟಿಯನ್ನೇ ಕೊಟ್ಟುಬಿಡಿ ..ನಮಗೆ ಸುಲಭ ಆಗುತ್ತದೆ.." ಎಂದು ಕೇಳಿ ಪಡೆದುಕೊಂಡು ಸಾಮಾನು ಕಟ್ಟಿಕೊಡುತ್ತಿದ್ದ ರಾಮಣ್ಣನ ಕೈಗಿತ್ತಳು..

ನರಸಿಂಹ ಸಾಮಾನು ಕಟ್ಟಿ ಆಗುವಷ್ಟು ಹೊತ್ತು ಪಕ್ಕದ ಫ್ಯಾನ್ಸಿ ಅಂಗಡಿಯತ್ತ ನೋಟಹರಿಸಿದ.ಒಂದು ಕುಟುಂಬ ವ್ಯಾಪಾರ ಮಾಡುತ್ತಿತ್ತು .ಪುಟ್ಟ ಹುಡುಗಿ ".....ಅದು ಬೇಕು ಇದು ಬೇಕು "ಎಂದು ಸಿಕ್ಕಿದ್ದೆಲ್ಲಾ ತೋರಿಸುತ್ತಿತ್ತು.ಪಕ್ಕದಲ್ಲಿದ್ದ ಅಮ್ಮ "ಅದು ಬೇಡ ಮಗಳೇ..." ಎಂದರೆ ಅಪ್ಪ ಮಾತ್ರ ಅದಕ್ಕೆ ಎಷ್ಟು ಎಂದು ಕೇಳಿ ಇರಲಿ ಎನ್ನುತ್ತಿದ್ದ.. ಇದನ್ನೆಲ್ಲಾ ಬಾಗಿಲ ಸಂದಿಯಲ್ಲಿ ನಿಂತು ಸುಮಾರು ಆರೇಳು ವರ್ಷದ ಬಾಲಕಿಯೊಬ್ಬಳು ಆಸೆಯ ಕಣ್ಣುಗಳಿಂದ ಗಮನಿಸುತ್ತಿದ್ದಳು.ತಂದೆ ಮಗಳಿಗೆ ಬೇಕಾದ್ದನ್ನೆಲ್ಲ ಕೊಡಿಸಿ ದೊಡ್ಡ ಪ್ಯಾಕ್ ಹಿಡಿದು ಹೊರಬಂದು ಹೆಂಡತಿ ಮಗಳನ್ನು ಕಾರಿನಲ್ಲಿ ಕುಳ್ಳಿರಿಸಿದರೆ ...ಬಾಗಿಲ ಸಂದಿಯಲ್ಲಿ ಆಸೆಕಂಗಳಿಂದ ನೋಡುತ್ತಿದ್ದ ಹುಡುಗಿಯ ಕಣ್ಣಂಚಿನಿಂದ ಕಣ್ಣೀರು ಜಿನುಗಿತ್ತು.


       ಇದನ್ನು ಕಂಡು ನರಸಿಂಹ "ನಿನಗೇನಾದರೂ ಬೇಕಿತ್ತಾ ಹುಡುಗಿ.".ಅಂದ.. ಒಂದು ಕ್ಷಣ ನರಸಿಂಹನ ಮುಖವನ್ನೇ ದಿಟ್ಟಿಸಿದ ಬಾಲಕಿ.. ಅಪರಿಚಿತ ವ್ಯಕ್ತಿಯ ಕಂಡು .."ಬೇಡ.. ನನಗೇನೂ ಬೇಡ..ನನಗೂ ಆಪ್ಪ ಇದ್ದರೆ...ಕೊಡಿಸುತ್ತಿದ್ದರು.."ಎಂದು ಹೇಳಿ ಸೀದಾ ತಾನು ಸಾಮಾನು ಕೊಳ್ಳುತ್ತಿದ್ದ ಅಂಗಡಿಯ ಒಳಗೆ ಹೋಯಿತು.ಅಲ್ಲಿದ್ದ ಸಹಾಯಕಿಯ ಮಗಳು ಈಕೆ ಎಂದು ತಿಳಿಯಲು ನರಸಿಂಹನಿಗೆ ಹೆಚ್ಚು ಕಾಲ ಹಿಡಿಯಲಿಲ್ಲ..

         ಸಾಮಾನಿನ ಬಿಲ್ ಕೈಗಿತ್ತ ಸಹಾಯಕಿಯ ಮುಖವನ್ನೊಮ್ಮೆ ನೋಡಿದ ನರಸಿಂಹ..ಇವನೇನು ಹೀಗೆ ನೋಡುತ್ತಿದ್ದಾನೆ ಎಂಬಂತೆ ಅತ್ತ ನೋಡಿದಳು ಆಕೆ.. ಮನೆಗೆ ಮರಳುತ್ತಿದ್ದ ನರಸಿಂಹನ ತಲೆಯಲ್ಲಿ ಯೋಚನೆಗಳ ಕೊರೆತ.. ನಾವು ನಮ್ಮ ಸ್ವಾರ್ಥ ವನ್ನೇ ನೋಡುತ್ತಿದ್ದೇವೆ..ನಮ್ಮ ಇಷ್ಟಕಷ್ಟಗಳಿಗೆ ಹೊಂದುವಂತಹ ಹೆಣ್ಣನ್ನು ಕೈಹಿಡಿಯಬೇಕು ಎಂದು ಯೋಚಿಸುತ್ತಿದ್ದೇವೆಯೇ ಹೊರತು ಕಷ್ಟದಲ್ಲೇ ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿರುವವರ ಬಗ್ಗೆ ಯೋಚಿಸುವುದೇ ಇಲ್ಲ..ಛೇ..!ನನ್ನದು ಎಷ್ಟು ಸಣ್ಣತನ.. ನಾನು ಆ ಪುಟ್ಟ ಬಾಲಕಿಗೆ ಯಾಕೆ ತಂದೆಯ ಸ್ಥಾನದಲ್ಲಿ ನಿಲ್ಲಬಾರದು... ಯಾವುದೋ ಕಾರಣಕ್ಕೆ ಬದುಕಿನಲ್ಲಿ ನೊಂದು ಬೆಂದು ಹೋದ ಸ್ತ್ರೀ ಗೆ ಯಾಕೆ ಜೀವನ ಕೊಡಬಾರದು..ನನ್ನಂತೆಯೇ ಆಕೆಗೂ ಸುಂದರ ಬದುಕಿನ ಕನಸಿರಬಹುದು .. ನಾನು ನಿನಗೆ ನೀನು ನನಗೆ ಎಂದು ಬದುಕಹೊಸೆದರೆ ತಪ್ಪೇನಿದೆ...ಎಂದೆಲ್ಲ ಯೋಚನೆಗಳೇ ತುಂಬಿದವು.. ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು.

          ಮನೆಗೆ ಮರಳಿದ ನರಸಿಂಹನ ಮೊಗದಲ್ಲಿ ಮಂದಹಾಸ ಇತ್ತು.ಅಂಗಳದಲ್ಲಿ ಓಮ್ನಿ ನಿಲ್ಲಿಸಿದವನೇ ಅಮ್ಮಾ.. ಎನ್ನುತ್ತಾ ಒಳಗೆ ಓಡಿದ..ನೀನಂದಂತೆ ನಾನು ಮದುವೆಯಾಗುತ್ತೇನೆ.. ಹುಡುಗಿಯನ್ನು ಮದುವೆಗೆ ಒಪ್ಪಿಸುವ ಕೆಲಸ ನಿನ್ನದು..

ಹರುಷಗೊಂಡ ಶಂಕರಿಯಮ್ಮ "ಹೌದೋ... ಯಾರವಳು ..ಹೇಳು.."

"ಅವಳೇ ಅಮ್ಮಾ...ಶ್ಯಾಮಣ್ಣನ ಅಂಗಡಿಯಲ್ಲಿ ಸಹಾಯಕಿ ಆಗಿದ್ದಾಳಲ್ಲ .. ಅವಳು..."

"ಅವಳಾ.."ಮುಖ ಸಣ್ಣದು ಮಾಡಿಕೊಂಡರು..

"ಯಾಕಮ್ಮಾ.. ಅವಳು ಚೆನ್ನಾಗಿಲ್ವಾ... ಯಾರನ್ನು ತಂದು ನಿಲ್ಲಿಸಿದರೂ ಒಪ್ಪಿಕೊಳ್ಳುವೆ ಅಂದೆ.."

"ಹೌದು ಅಂದೆ.. ಆದರೆ... ಅವಳನ್ನು ಮದುವೆಯಾದರೆ ಜನ ಬಾಯಿಗೊಂದರಂತೆ ಆಡಿಕೊಳ್ಳುತ್ತಾರೆ ..ಬೇಡ ಕಣೋ.."

"ಇಲ್ಲಮ್ಮ.. ನಾನು ನಿರ್ಧಾರ ಮಾಡಿ ಆಗಿದೆ..ಆದರೆ ಅವಳನ್ನೇ ಆಗೋದು.."

     "ಬೇಡ ಎಂದು ಹೇಳುತ್ತಿದ್ದೇನೆ...ಅವಳ ಜಾತಿ ಬೇರೆ..ಸಂಸ್ಕಾರ ಬೇರೆ.. ಮತ್ತೆ ಯಾವನ ಜೊತೇಲೋ ಓಡಿಹೋದವಳು... ಇಷ್ಟೆಲ್ಲಾ ಆದರೂ ಏನೂ ನಡೆದಿಲ್ಲ ಎಂಬಂತೆ ಬದುಕುತ್ತಿದ್ದಾಳೆ.."

      "   ...  ನೋಡಮ್ಮ.. ಮನುಷ್ಯ ಜಾತಿ ..ಹೆಣ್ಣು ಗಂಡು ಎಂಬ ಭೇದವನ್ನಷ್ಟೇ  ನಂಬುವವನು ನಾನು..ಅಲ್ಲದೇ ಪ್ರೀತಿ ಮಾಡಿದ್ದು ತಪ್ಪಲ್ಲ.. ಮದುವೆಯಾದರೂ ಪ್ರೀತಿಮಾಡಲೇಬೇಕು ತಾನೇ.. ಅಷ್ಟೆಲ್ಲಾ ನೋವನುಭವಿಸಿದರೂ ಆತ್ಮಹತ್ಯೆ ಮಾಡಿಕೊಳ್ಳುವ ಗೋಜಿಗೆ ಹೋಗದೆ ಮಗಳೊಂದಿಗೆ ಸಮಾಜದಲ್ಲಿ ಬದುಕುವುದಕ್ಕೆ ಗುಂಡಿಗೆ ಬೇಕಮ್ಮಾ..ಅವಳನ್ನೇ ಮದುವೆಯಾಗ್ತೀನಿ..."..ಎಂದವನೇ ತನ್ನ ಸ್ನೇಹಿತರ ಮೂಲಕ ಹುಡುಗಿಯ ಬಗ್ಗೆ ವಿಚಾರಿಸಿದ..

        ಆಕೆಯ ಹೆಸರು ನಂದಿನಿ.ಅಮ್ಮ ಹೇಳಿದ ಘಟನೆಗಳು ಸತ್ಯ.ಪ್ರೀತಿಸಿ ಮೋಸಹೋಗಿದ್ದಳು.ಕೈಗೊಂದು ಮಗು ಬಂದಾಗ ಆತ ಪರಾರಿಯಾಗಿದ್ದ.ಜವಾಬ್ದಾರಿ ಬೇಡ ಹೆಣ್ಣು ಮಾತ್ರ ಬೇಕು ಎನ್ನುವ ಖಯಾಲಿಯ ಮನುಷ್ಯ.. ತವರು ಮನೆಯಲ್ಲಿ ಆಶ್ರಯ ಪಡೆದುಕೊಂಡಳು ನಂದಿನಿ.ಇಷ್ಟೆಲ್ಲ
ಆದರೂ ತಂದೆಯಿಲ್ಲದ ಮಗುವಿಗೆ ತಂದೆಯ ಸ್ಥಾನ ನೀಡಲು ನಾನು ಬದ್ಧ..ಎಂದ ನರಸಿಂಹ.. ಎಂದೂ ಪುನಃ ಮದುವೆಯಾಗುವ ಕನಸನ್ನು ಕಾಣದಿದ್ದ ನಂದಿನಿ ನರಸಿಂಹನ ಹೃದಯ ವೈಶಾಲ್ಯತೆಯನ್ನು ಕಂಡು ಒಪ್ಪಿಗೆಯಿತ್ತಳು.. ಹಳ್ಳಿಯಲ್ಲಿ ಬದುಕುತ್ತಾ ಹಿರಿಯರ ಜೊತೆ ಮನೆತನಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಭರವಸೆಯಿತ್ತಳು..ನಂದಿನಿಯ ಮಗಳು ನಿಶಾ ಹೊಸ ತಂದೆ ಸಿಗುವರೆಂಬ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಳು..


        ಸಧ್ಯದಲ್ಲೇ ಅವಿವಾಹಿತ ಬದುಕನ್ನು ಕೊನೆಗಾಣಿಸಿ ಮದುವೆಯಾಗಿ  ... ಮಡದಿಗೆ ಒಳ್ಳೆಯ ಪತಿಯಾಗಿ..ಮಗಳಿಗೆ ಜವಾಬ್ದಾರಿಯುತ ತಂದೆಯಾಗಿ ತನ್ನ ಹೆತ್ತವರನ್ನೂ ಚೆನ್ನಾಗಿ ನೋಡಿಕೊಂಡು ಬದುಕಬೇಕು ಎಂದು ಕನಸುಕಾಣುತ್ತಿದ್ದಾನೆ ನರಸಿಂಹ..

✍️... ಅನಿತಾ ಜಿ.ಕೆ.ಭಟ್.
14-12-2019.

2 comments:

  1. ಕಥೆಯ ending ಚೆನ್ನಾಗಿದೆ.

    ReplyDelete
  2. ಹೌದು.. ಸಮಾಜದಲ್ಲಿ ಬದಲಾವಣೆಗಾಗಿ ಈ ಸಂದೇಶ.. ಧನ್ಯವಾದಗಳು 💐🙏

    ReplyDelete