ಜೀವನ ಮೈತ್ರಿ ಭಾಗ ೧೦೪
ಸೌಜನ್ಯಳಿಗೆ ಎರಡೇ ದಿನದಲ್ಲಿ ಹೆರಿಗೆ ನೋವು ಸ್ವಲ್ಪ ಮಟ್ಟಿಗೆ ಕಾಣಿಸಲು ಆರಂಭವಾಯಿತು.ಶುಶ್ರೂಷಕಿಯರು ಅವಳನ್ನು ಲೇಬರ್ ವಾರ್ಡ್ ಗೆ ವರ್ಗಾಯಿಸಿದರು.ರಾತ್ರಿ ಕೇಶವ ಬಿಸಿ ಅಡುಗೆ ಮಾಡಿ ತಂದಾಗ ಸೌಜನ್ಯ ರೂಮಿನಲ್ಲಿರಲಿಲ್ಲ.. ಸೀದಾ ಹೋಗಿ ಕೌಂಟರಿನಲ್ಲಿ ವಿಚಾರಿಸಿದ. ಹೆರಿಗೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಅವಳನ್ನೊಮ್ಮೆ ನೋಡಬೇಕೆನಿಸಿತು.. ಶುಶ್ರೂಷಕಿಯರ ಒಪ್ಪಿಗೆ ಕೇಳಿದ.ಒಳಗೆ ತೆರಳಿ ಅವಳಿದ್ದ ನಂಬರ್ ನ ಕೊಠಡಿಯ ಬಾಗಿಲ ಬಳಿ ನಿಂತ.ಬಾಗಿಲು ತೆರೆದಿತ್ತು.ಮಡದಿಯ ಮೊಗವನ್ನು ದೂರದಿಂದಲೇ ದಿಟ್ಟಿಸಿದ.ಅವಳ ಮುಖ ಕಳೆಗುಂದಿತ್ತು.ನೀಲಿ ಗೌನ್ ಧರಿಸಿ ಮಲಗಿದ್ದ ಅವಳ ಕಣ್ಣಂಚಿನಿಂದ ನೀರು ಸುರಿಯುತ್ತಿತ್ತು.
ಮೆಲ್ಲನೆ ಒಳಗಡಿಯಿಟ್ಟ.. ಗಂಡನನ್ನು ಕಂಡೊಡನೆಯೇ ಕಣ್ಣೀರು ಒರೆಸಿಕೊಂಡಳು.ತನ್ನ ಕೈಯನ್ನು ಅವಳ ಹಣೆಯ ಮೇಲಿಟ್ಟು ಹಿಂದಕ್ಕೆ ಸವರಿದ..ಕಣ್ಣಲ್ಲಿ ಒಲವಿನ ಮಹಾಪೂರವೇ ಹರಿಸಿದ.ಉದರವನ್ನು ನೇವರಿಸಿ "ನೋವಾಗುತ್ತಿದೆಯ ಎಂದಾ.. ?"
"ಆಗೊಮ್ಮೆ ಈಗೊಮ್ಮೆ ಬರುತ್ತಿದೆ "ಎಂದವಳ ಕಣ್ಣಂಚು ಒದ್ದೆಯಾಗುತ್ತಿದ್ದುದನ್ನು ಕಂಡು ಕಣ್ಣೀರೊರೆಸಿದ.
ಒರೆಸುತ್ತಿದ್ದ ಪತಿಯ ಕೈಗಳನ್ನು ತಡೆದು ..
"ಈ ಕಣ್ಣೀರನ್ನು ಹೊರಗಿನಿಂದ ಒರೆಸುವ ಬದಲು ಮನಸಿನಾಳದಿಂದಲೇ ಒರೆಸುವಿರಾ..?"
ಎಂದವಳು ಪತಿಯೆಡೆಗೆ ದೈನ್ಯತೆಯ ನೋಟ ಬೀರಿದಳು..
ಕೇಶವ ಮೌನವಾಗಿದ್ದ..ಸೌಜನ್ಯಳ ನೋಟವನ್ನು ಎದುರಿಸಲು ಸಾಧ್ಯವಾಗಲಿಲ್ಲ.ಅವಳೆಡೆಗೆ ಬಾಗಿ ಹಣೆಯ ಮೇಲೊಂದು ಸಿಹಿಮುತ್ತನಿಟ್ಟ.ಅವಳ ಕೈಗಳ ಮೇಲೆ ಕೈಗಳನಿಟ್ಟು "ನಾನಿದ್ದೇನೆ.... ನಿನ್ನ ಹಾಗೂ ಮಗುವಿನ ಕಾಳಜಿ ,ಜವಾಬ್ದಾರಿ ನನ್ನ ಹೆಗಲ ಮೇಲಿದೆ "ಎಂದ.
"ನಿಮ್ಮ ವಂಶದ ಕುಡಿಯನ್ನು ಹೊತ್ತು ಹೆತ್ತು ಕೊಡುತ್ತಿದ್ದೇನೆ.ನನ್ನ ಒಂದು ಮಾತನ್ನು ನಡೆಸಿಕೊಡುವಿರಾ ..?".ಎಂದವಳ ಕಂಠ ಬಿಗಿದಿತ್ತು.. ಮಾತು ಕೊಡಿ ನನಗೆ ಎನ್ನುವಂತೆ ಕೈ ಮುಂದೆ ಮಾಡಿದಳು..ಕೇಶವ ತನ್ನ ಕೈ ಹಿಂದೆ ಸರಿಸಿದ..
ಶುಶ್ರೂಷಕಿಯರು ಹಾಗೂ ವೈದ್ಯೆ ಆಗಮಿಸಿದರು..ಕೇಶವನನ್ನು ರೂಮಿನಿಂದ ಹೊರಗೆ ಕಳುಹಿಸಿದರು.ಸೌಜನ್ಯಳನ್ನು ಪರೀಕ್ಷಿಸಿದರು ವೈದ್ಯರು..." ಅಮ್ಮಾ.. " ಎಂದು ನೋವಿನಿಂದ ಚೀರುವ ಅವಳ ದನಿ ಕೇಳಿ ಕೇಶವನ ಕರುಳು ಕಿವುಚಿ ಬಂದಂತಾಯಿತು.
"ನೋವು ಬರುತ್ತಿದೆಯಾ?"ಎಂದು ಕೇಳಿದರು ವೈದ್ಯೆ.
"ಬಿಟ್ಟು ಬಿಟ್ಟು ಬರುತ್ತಿದೆ.."
ವೈದ್ಯೆ ಆಕೆಗೆ ಚಿಕಿತ್ಸೆ ನೀಡಿದ ವಿವರದ ಮೇಲೆ ಕಣ್ಣಾಡಿಸಿದರು.ಕೇಶವನನ್ನು ಒಳಗೆ ಬರಲು ಹೇಳಿದರು.
"ಇವತ್ತು ಇವರಿಗೆ ಡ್ರಿಪ್ ಜೊತೆ ನೋವು ಬರುವ ಔಷಧಿ ಹಾಕಿದೀವಿ.ಆದರೂ ಸರಿಯಾಗಿ ನೋವು ಬಂದಿಲ್ಲ.ಹೆರಿಗೆಯಾಗುವಷ್ಟು ಗರ್ಭಪಾತ್ರ ಓಪನ್ ಆಗಿಲ್ಲ.. ಇವತ್ತು ಅವರಿಗೂ,ಮಗುವಿಗೂ ಆಯಾಸವಾಗಿದೆ.ಇನ್ನು ರೆಸ್ಟ್ ಮಾಡಲಿ.. ವಾರ್ಡ್ ನ ರೂಮಿಗೆ ಶಿಫ್ಟ್ ಮಾಡುತ್ತಿದ್ದೇವೆ.. ಆಹಾರ ಸೇವಿಸಲಿ.ನಾಳೆ ಬೆಳಿಗ್ಗೆ ಪುನಃ ಡ್ರಿಪ್ ಹಾಕೋಣ.."ಎಂದರು.
"ಸರಿ .."ಎಂದ ಕೇಶವ..
ರೂಮಿಗೆ ಕರೆದುಕೊಂಡು ಬಂದ ಮಡದಿಗೆ ಬಿಸಿ ಬಿಸಿ ಗಂಜಿ ಕೊಟ್ಟ ಪತಿ.ಪತಿಯ ಬಲವಂತಕ್ಕೆ ಸ್ವಲ್ಪ ತಿನ್ನುವ ಶಾಸ್ತ್ರ ಮಾಡಿ ಮಲಗಿದಳು.ಶಾರೀರಿಕ ಆಯಾಸದಷ್ಟೇ ಮಾನಸಿಕ ಬಳಲಿಕೆಯೂ ಇತ್ತು.ಪತಿ ಹೀಗೇಕೆ ಮಾಡುತ್ತಿದ್ದಾರೆ..? ಇಂತಹ ಸಂದರ್ಭದಲ್ಲಿ ಕೂಡ ನನ್ನ ಮಾತಿಗೆ ಬೆಲೆಕೊಡಬಾರದೇ..? ನನ್ನ ಮನದಿಂಗಿತಕ್ಕಿಂತ ಅವರ ಅಹಂ ಹೆಚ್ಚಾಯಿತೇ..?ಎಂದೆಲ್ಲ ಯೋಚಿಸುತ್ತಿದ್ದವಳಿಗೆ ಯಾವಾಗ ನಿದಿರೆ ಹತ್ತಿತೋ ತಿಳಿಯಲಿಲ್ಲ..
ಮರುದಿನ ಕೇಶವ ರಜೆ ಹಾಕಿ ಆಸ್ಪತ್ರೆಯಲ್ಲಿ ನಿಂತಿದ್ದ.ಬೆಳ್ಳಂಬೆಳಗ್ಗೆ ಮನೆಗೆ ತೆರಳಿ ಅಡುಗೆ ಮಾಡಿ ತಂದವನು ತಾನೇ ಮಡದಿಗೆ ತುತ್ತನುಣಿಸಿ ...ಅವಳ ಹಣೆ ಉದರದ ಮೇಲೆಲ್ಲ ತನ್ನಧರವನೊತ್ತಿ "ನಿನಗೆ ನಾನು..ನನಗೆ ನೀನು .".ಎಂದ...ಅವಳೂ ಅಷ್ಟೇ..'ನನ್ನ ಹಣೆಯಲ್ಲಿ ಇಷ್ಟೇ ಬರೆದಿದ್ದಿರಬೇಕು' ಎಂದು ಇದ್ದುದರಲ್ಲೇ ಸಂತೃಪ್ತಿ ಪಟ್ಟಕೊಂಡಳು. ಬಶೀರನೊಂದಿಗಿನ ಗೃಹ ಬಂಧನದ ಬಾಳಿಗಿಂತ.. ಪ್ರೀತಿ, ಕಾಳಜಿ ತೋರುವ ಪತಿ ಸಿಕ್ಕಿರುವುದೇ ನನ್ನ ಸೌಭಾಗ್ಯ ಎಂದುಕೊಳ್ಳಲೇ.. ಅಥವಾ ಇವನೂ ನನ್ನ ಭಾವನೆಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲವಲ್ಲಾ ಎಂದು ನೊಂದುಕೊಳ್ಳಲೇ ಎಂದು ತನ್ನೊಳಗಿನ ಸಂದಿಗ್ಧತೆಯ ಬಗ್ಗೆ ಚಿಂತಿಸುತ್ತಿದ್ದಳು.
ತನ್ನ ತನುವು ಬಯಸಿದಾಗಲೆಲ್ಲ ಬಂದು ಹದ್ದಿನಂತೆ ಕುಕ್ಕಿ ಕುಕ್ಕಿ ರಸ ಹೀರಿ,ತನ್ನ ಕಾಮದ ಹಸಿವು ನೀಗಿದಾಗ,ತನಗೂ ಈ ದೇಹಕೂ ಏನೂ ಸಂಬಂಧವಿಲ್ಲವೆಂದು ಬಿಸುಟಿ ತೆರಳುತ್ತಿದ್ದ ಬಶೀರನಿಗಿಂತ....ನನ್ನವರನ್ನಲ್ಲದಿದ್ದರೂ ನನ್ನನ್ನಾದರೂ ಪ್ರೀತಿಯಿಂದ ಕಾಣುವ ಪತಿ ಕೇಶವನೇ ಮೇಲು..ಇಂದಲ್ಲದಿದ್ದರೂ ಮುಂದೊಂದು ದಿನ ಪತಿಯ ಧೋರಣೆ ಬದಲಾಗಬಹುದು..ಎಂದು ಯೋಚಿಸುತ್ತಾ ದೀರ್ಘವಾಗಿ ಉಸಿರೆಳೆದುಕೊಂಡಳು.
ಶುಶ್ರೂಷಕಿ ಬಂದು ಸೌಜನ್ಯಳನ್ನು ಲೇಬರ್ ರೂಮಿಗೆ ಕರೆದೊಯ್ದರು.ಕೇಶವನ ಕೈಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೊಟ್ಟು "ಇದನ್ನು ತಂದು ಕೊಡಿ" ಎಂದರು.ಔಷಧ ತಂದುಕೊಟ್ಟ ಕೇಶವ ಹೊರಗೆ ಕಾಯುತ್ತಾ ಕುಳಿತಿದ್ದ..ಒಳಗಿನಿಂದ ಯಾರ ಚೀರಾಟ ಕೇಳಿದರೂ 'ತನ್ನವಳೇ ಅಳುತ್ತಿರುವಳೇನೋ' ಎಂಬಂತೆ ಕಿವಿ ನಿಮಿರಿಸಿ ಮರುಗುತ್ತಿದ್ದ.ಮರುಕ್ಷಣ' ಅವಳಿಗೇನೂ ತೊಂದರೆಯಾಗದೆ ಕಂದನನ್ನು ಭುವಿಗಿಳಿಸುವಂತೆ ಮಾಡಪ್ಪಾ 'ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದ.
*******
ಬೆಳಿಗ್ಗೆ ಆಫೀಸಿಗೆ ಹೊರಡುವ ಸಮಯ.ನರಸಿಂಹ ರಾಯರು ಇನ್ನೂ ಹೊರಟಿರಲಿಲ್ಲ..ಹೊರಡುವ ಸೂಚನೆಯೂ ಇಲ್ಲದಿದ್ದಾಗ ರೇಖಾ ಪತಿಯಲ್ಲಿ "ಇವತ್ತು ಆಫೀಸಿಗೆ ಹೋಗೋದಿಲ್ವಾ..?". ಎಂದಾಗ
"ಇಲ್ಲ ..." ಎಂದರು.
"ಕಾರಣ...?"
"ಎಲ್ಲದಕ್ಕೂ ಕಾರಣ ಹೇಳಬೇಕಾ..? ನನಗಿವತ್ತು ಹೋಗಬೇಕೆಂದು ತೋರುತ್ತಿಲ್ಲ.."
"ನೋಡಿ.. ನೀವು ಹೀಗೆ ಏನೋ ಯೋಚನೆ ಮಾಡಿಕೊಂಡು ಮನೆಯಲ್ಲಿ ಕುಳಿತರೆ ನನಗೂ ಆಫೀಸಿಗೆ ಹೋಗಲು ಸಾಧ್ಯವಾಗುವುದಿಲ್ಲ.. ಬನ್ನಿ..ಹೊರಡೋಣ.."
"ಇಲ್ಲ ..ನಾನಿವತ್ತು ಬರಲ್ಲ.ನೀನು ಬೇಕಾದರೆ ಹೋಗು..
"ಹಾಗೆಂದರೆ ಅದೆಲ್ಲ ಆಗದು.."ಎಂದು ಆಕ್ಷೇಪಿಸಿದರು ರೇಖಾ.
"ಇವತ್ತು ಸಂಕಷ್ಟಿ ವ್ರತ ಮಾಡಬೇಕೆಂದಿದ್ದೇನೆ .."
"ಹೌದಾ..ಹಾಗಾದರೆ ನಾನೂ ನಿಮ್ಮನ್ನು ಸೇರಿಕೊಳ್ಳುತ್ತೇನೆ ..ಅದೇನು ವ್ರತವೋ..? ಅದರಿಂದೇನು ಒಳಿತಾಗುತ್ತೋ ನೋಡೋಣ..ನಾನೂ ಕಟ್ಟುನಿಟ್ಟಿನ ವ್ರತ ಅನುಸರಿಸುತ್ತೇನೆ.."
ಇಬ್ಬರೂ ಆಫೀಸಿಗೆ ತೆರಳದೆ ನಿಷ್ಠೆಯಿಂದ ವ್ರತವನಾಚರಿಸಿದರು..
*****
ಮಂಗಳಮ್ಮ ,ಭಾಸ್ಕರ ಶಾಸ್ತ್ರಿಗಳು ಬೆಂಗಳೂರು ತಲುಪಿದರು.ಆಸ್ಪತ್ರೆಗೆ ಬಂದ ಅಪ್ಪ ಅಮ್ಮನನ್ನು ಕಂಡು ಕಣ್ಣು ತುಂಬಿಕೊಂಡಳು ಮೈತ್ರಿ.. "ಏನಾಯ್ತು ಮಗಳೇ.. ?"ಎಂದು ಮಗಳನ್ನು ಆಪ್ತವಾಗಿ ವಿಚಾರಿಸಿಕೊಂಡರು ಮಂಗಳಮ್ಮ.
"ನಾಲ್ಕೈದು ದಿನ ಸಂಪೂರ್ಣ ಬೆಡ್ ರೆಸ್ಟ್ ಮಾಡಲು ಸೂಚಿಸಿದ್ದಾರೆ "ಎಂದರು ಗಾಯತ್ರಿ..
"ಹೌದಾ..ಏನೂ ಅಪಾಯ ಆಗದಿದ್ದರೆ ಸಾಕು.."ಎಂದವರ ಮನಸ್ಸಿನಲ್ಲಿ ಅತ್ತೆಯ ಮಾತು ಸುಳಿಯುತ್ತಿತ್ತು..
*****
ಸೌಜನ್ಯಳ ನೋವು ತಾರಕ್ಕೇರಿತ್ತು.. ಸಹಿಸಲೂ ಅಸಾಧ್ಯವಾಗಿತ್ತು.ದಾದಿಯರ ಚುಚ್ಚು ಮಾತು ಅದಕ್ಕಿಂತಲೂ ತೀಕ್ಷ್ಣವಾಗಿತ್ತು.ವೈದ್ಯೆ ಇದ್ದಾಗ ಸರಿ ಇದ್ದು ಸಹಕರಿಸುತ್ತಿದ್ದ ದಾದಿಯರು ಅವರಾಚೆ ಪೇಷೆಂಟ್ ನೋಡಲು ತೆರಳಿದರೆ "ಏನು ನಿನ್ನ ಅಳು..ನಿನ್ನಮ್ಮ ಹೆತ್ತಿಲ್ಲವಾ..? ಊರಲ್ಲಿ ಯಾರಿಗೂ ಹೆರಿಗೆ ನೋವಿಲ್ಲವಾ..ಬರೀ ನಿನಗೊಬ್ಬಳಿಗೇನಾ...?" ಎಂದು ಗದರಿಸಿ ತಮ್ಮ ಹಸ್ತದಿಂದ ಬಲಾತ್ಕರಿಸುತ್ತಿದ್ದರೆ ಅವಳಿಗೆ ಒಮ್ಮೆ ತನ್ನ ಜೀವ ಹೋಯಿತೇನೋ ಅನಿಸುತ್ತಿತ್ತು.
ಸತತ ಆರು ಗಂಟೆಗಳ ನರಳಾಟ.. "ನೋಡಮ್ಮ ಇದು ಅಂತಿಮ ಹಂತ..ಗರ್ಭಪಾತ್ರ ಓಪನ್ ಆಗಿ ಮಗುವನ್ನು ಹೊರದೂಡಲು ಸಜ್ಜಾಗಿದೆ..ನೀನೀಗ ನೋವು ನುಂಗಿ ಮನಸ್ಸು ಮಾಡಬೇಕು" ಎಂದರು ಡಾಕ್ಟರ್ ಶಾಂತ..
ಕಣ್ಣ ಮುಂದೆ ವೈದ್ಯೆ,ದಾದಿಯರ ತಂಡ ಸಜ್ಜಾಗಿ ನಿಂತದ್ದು ಕಾಣಿಸಿತು.ತನ್ನ ಶಕ್ತಿಮೀರಿ ಪ್ರಯತ್ನಿಸಿದಳು........ ಅಮ್ಮಾ...ಎನ್ನುವ ಚೀತ್ಕಾರ........ವೈದ್ಯೆಯ ಕೈಯಲ್ಲಿ ರಕ್ತದಲ್ಲಿ ಅದ್ದಿದ ಪುಟ್ಟ ಆಕೃತಿಯನ್ನು ಕಂಡು ಸಮಾಧಾನ ಪಟ್ಟುಕೊಂಡಳು ತಾಯಿ."ಕಂಗ್ರಾಟ್ಸ್ ಅಮ್ಮಾ..ಮಗಳಿಗೆ ಜನ್ಮ ನೀಡಿದ್ದೀರಿ.."ಎಂದು ಉದ್ಗಾರವೆತ್ತಿದರು ಡಾಕ್ಟರ್ ಶಾಂತ.ಮಗುವಿನ ಅಳು ಸೌಜನ್ಯಳ ಕಿವಿಗೆ ಬಿದ್ದಿತು.ಸ್ವಚ್ಛಗೊಳಿಸಿ ಸೌಜನ್ಯಳ ಕೈಗಿತ್ತು..."ಮುದ್ದುಮಗಳು ನಿಮ್ಮ ಮಡಿಲು ತುಂಬಿದ್ದಾಳೆ "ಎಂದರು ದಾದಿ.
ಮಗುವನ್ನು ನೋಡಿ ಕಣ್ತುಂಬಿ ಕೊಂಡ ಸೌಜನ್ಯ. 'ನೀನೂ ನನ್ನಂತೆ ಹೆಣ್ಣಾಗಿ ಹುಟ್ಟಿದೆಯಲ್ಲಾ.. ನನ್ನಷ್ಟು ನೋವು ನಿನಗೆಂದೂ ಬಾರದಿರಲಿ...'ಎಂದು ಮನದಾಳದಲ್ಲಿ ದುಃಖಿಸುತ್ತಾ ಮುದ್ದಿಸಿದಳು.ಅಮ್ಮ ಅಪ್ಪನ ಅನುಪಸ್ಥಿತಿ ಸೌಜನ್ಯಳಿಗೆ ಬಹಳವೇ ಕಾಡುತ್ತಿತ್ತು.ಹಠಮಾರಿ ಪತಿಯ ಬಗ್ಗೆ ಕ್ರೋಧವೂ ಉಕ್ಕುತ್ತಿತ್ತು.
ದಾದಿ ಹೊರಗಡೆ ಬಂದು..
"ಪೇಷೆಂಟ್ ಸೌಜನ್ಯ ಪಾರ್ಟಿ"
ಎಂದು ಕೂಗಿದಳು ನರ್ಸ್..ಕೇಶವ ಒಳಗೆ ತೆರಳಿದ..
"ಕಂಗ್ರಾಟ್ಸ್..ಮುದ್ದಾದ ಮಗಳಿಗೆ ತಂದೆಯಾಗಿದ್ದೀರಿ.."ಎಂದರು ನರ್ಸ್.
ಮಗಳನ್ನು ತಂದೆಯ ಕೈಗಿಟ್ಟರು ..ಪುಟ್ಟ ಭಾಗ್ಯ ಲಕ್ಷ್ಮಿಯ ಮುಖ ನೋಡಿದ ಕೇಶವ.. ಮೆಲ್ಲಗೆ ಎದೆಗವಚಿಕೊಂಡ.
ಕೇಶವನನ್ನು ಹೊರಗೆ ಕಳುಹಿಸಿದರು. ಮೊದಲ ಬಾರಿಗೆ ಎದೆಹಾಲು ಕುಡಿಸಲು ದಾದಿಯರು ಸಹಕರಿಸಿದರು. ಸೌಜನ್ಯ ಮೊದಲ ಬಾರಿಗೆ ಅಮೃತ ಪಾನ ಮಾಡಿಸಿದ ಧನ್ಯತೆಯಲ್ಲಿ ಮಿಂದೆದ್ದಳು. ಅವಳನ್ನು ರೂಮಿಗೆ ಶಿಫ್ಟ್ ಮಾಡಿದರು.ಈಗ ಎರಡು ಗಂಟೆಗೊಮ್ಮೆ ಹಾಲು ಕುಡಿಸುವ ಕೆಲಸ ಅವಳ ಹೆಗಲ ಮೇಲಿತ್ತು.
ಅವಳಿಗೆ ಎದ್ದು ಸರಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.ಸಹಕರಿಸಲು ಜೊತೆಗೆ ಹೆಣ್ಣುಮಕ್ಕಳು ಯಾರೂ ಇಲ್ಲ.ಮಗು ಜೋರಾಗಿ ಅಳುವುದನ್ನು ಕೇಳಿ ಆಗಾಗ ದಾದಿಯರು ಬರುತ್ತಿದ್ದರು.ಒಮ್ಮೆ ಮಗು ಜೋರಾಗಿ ಆಳುತ್ತಿದ್ದಾಗ ವೈದ್ಯರು ಬಂದರು..
"ಏನಮ್ಮಾ ಜೊತೆಗೆ ಯಾರೂ ಹೆಣ್ಣುಮಕ್ಕಳಿಲ್ವಾ..ಏನು ಲವ್ ಮಾಡಿ ಓಡಿಬಂದವರಾ ?"
ಎಂದು ಏರು ದನಿಯಲ್ಲಿ ಗದರಿದರು.ಸೌಜನ್ಯಳು ಮುಖ ಸಣ್ಣಗಾಗಿಸಿ ಕುಳಿತಳು.ಅವಳಿಗೆ ನಿಭಾಯಿಸುವುದು ಕಷ್ಟ.ಕೇಶವನಾದರೂ ಎಷ್ಟು ಸಹಕರಿಸಿಯಾನು.. ? ಅವನಿಗೆ ಅನುಭವವಿಲ್ಲ..
****
ಮಂಗಳಮ್ಮ ಮಗಳನ್ನು ನೋಡಿಕೊಳ್ಳುತ್ತಾ ಸಮಯ ಸಿಕ್ಕಾಗ ಕಾರಿಡಾರ್ ನಲ್ಲಿ ಸ್ವಲ್ಪ ಅತ್ತಿಂದಿತ್ತ ನಡೆದಾಡುತ್ತಿದ್ದರು.ಹಳ್ಳಿ ಮನೆಯಲ್ಲಿ ದಿನವಿಡೀ ಓಡಾಡಿ ಕೆಲಸ ಮಾಡುತ್ತಿದ್ದವರಿಗೆ ಇಲ್ಲಿ ದೇಹ ಜಡವಾದಂತೆ ಭಾಸವಾಗುತ್ತಿತ್ತು. ಹೀಗೆ ಅಡ್ಡಾಡುತ್ತಿದ್ದವರಿಗೆ ಹತ್ತಿರದ ರೂಮಿನಲ್ಲಿ ಡಾಕ್ಟರ್ ಶಾಂತ ಆಡಿದ ಮಾತುಗಳು ಕಿವಿಗೆ ಬಿದ್ದವು.
ಮೈತ್ರಿಯಲ್ಲಿ ಹಂಚಿಕೊಂಡರು.
"ಏನಮ್ಮಾ ನೀನು... ಇಲ್ಲಿ ಇನ್ನೊಬ್ಬರ ವಿಚಾರಕ್ಕೆ ಹೋಗಬಾರರು..ಕಂಡವರನ್ನೆಲ್ಲ ಮಾತನಾಡಿಸಲು ಹೋಗಬೇಡ.ಇದು ನಮ್ಮ ಹಳ್ಳಿಯಲ್ಲ ಪಟ್ಟಣ.ರಾಜಧಾನಿ .. ಬೆಂಗಳೂರು"
ಮಗಳ ಮಾತಿಗೆ ನಕ್ಕು ಸುಮ್ಮನಾದರು.
ಮರುದಿನ ಅಲ್ಲೇ ಅಡ್ಡಾಡುವಾಗ ಜೋರಾಗಿ ಆಳುತ್ತಿತ್ತು ಮಗು.ದಾದಿಯರು ಅತ್ತ ಸುಳಿಯಲಿಲ್ಲ.ಕರುಣೆಯಿಂದ ತಾನೇ ಹೋಗಿ ತಿಳಿಸಿದರು.
"ಅದ್ಯಾವುದೋ ಲವ್ ಕೇಸು.. ಮರ್ಯಾದೆ ಇಲ್ಲದ ಜನ.. ಆಸ್ಪತ್ರೆಯಲ್ಲಿ ಬಾಣಂತಿಯ ಜೊತೆಗೆ ಹೆಣ್ಣುಮಕ್ಕಳು ಇರಬೇಕು ಎನ್ನುವ ಜ್ಞಾನ ಬೇಡವಾ.. ಗಂಡನಾದವನಿಗೆ ಅಷ್ಟೂ ತಿಳಿಯಬೇಡವಾ..?"ಎಂದು ನಿಕೃಷ್ಟವಾಗಿ ಮಾತನಾಡಿದರು.
ರೂಮಿಗೆ ಬಂದ ಮಂಗಳಮ್ಮ
"ಮಗಳೇ ಹತ್ತಿರದ ರೂಮಿನಲ್ಲಿ ಜೋರಾಗಿ ಮಗು ಅಳುತ್ತಿದೆ.. ನನಗೂ ಈಗ ಇಲ್ಲಿ ಕೆಲಸವೇನಿಲ್ಲ.. ಸ್ವಲ್ಪ ಸಹಾಯ ಮಾಡಲೇ ..ಪಾಪ.. ತಾಯಿ ಇಲ್ಲವೋ. ಅಥವಾ ಜೊತೆ ಬರುವಂತೆಯಿರಲಿಲ್ಲವೋ.. ಏನೋ..ಕರುಣೆಯುಕ್ಕುತ್ತೆ ಮಗುವಿನ ಅಳುಕೇಳಿ.."
"ಬೇಡಮ್ಮಾ ಬೇಡ...ನಿಮಗೆ ಎಷ್ಟು ಹೇಳಿದರೂ ಮತ್ತದೇ ಮಾತು.. ಅವರು ಯಾರೋ.. ಯಾವೂರಿನವರೋ ಏನೋ.. ನಮಗೇಕೆ ಅವರ ಉಸಾಬರಿ...ಹೀಗೆಲ್ಲ ಉಪಕಾರಕ್ಕೆ ಹೊರಟರೆ ನಾನು ಅಪ್ಪಂಗೆ ಹೇಳ್ತೀನಿ.."
ಮಗಳ ಮಾತಿಗೆ ಸಹಾಯ ಮಾಡಬೇಕೆನ್ನುವ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟರು.
ಮೆಡಿಕಲ್ಸ್ ನಿಂದ "ಮೈತ್ರಿಯವರ ಔಷಧ ತೆಗೆದು ಕೊಂಡು ಹೋಗಲು ಬನ್ನಿ "ಎಂದು ಫೋನ್ ಬಂತು.ಮಗಳಮ್ಮ ಹೊರಟರು.ಆ ರೂಮು ದಾಟುತ್ತಿದ್ದಂತೆ ಕಿವಿ ನೆಟ್ಟಗಾಗಿತ್ತು.ಒಂದೇ ಸಮನೆ ಮಗು ಅಳುತ್ತಿತ್ತು..ಅಳುಕಿನಿಂದಲೇ ಮೆಲ್ಲಗೆ ಬಾಗಿಲು ತಟ್ಟಿದರು ಮಂಗಳಮ್ಮ.
ಮುಂದುವರಿಯುವುದು...
✍️.... ಅನಿತಾ ಜಿ.ಕೆ.ಭಟ್.
10-07-2020.