Friday, 17 July 2020

ಸಲಿಲ - ಸರಸ



          ಸಲಿಲ-ಸರಸ

ಬರಡಾದ ನೆಲಕಿಂದು
ನೀರಹನಿ ತಂಪುಣಿಸಿ
ಸೀರೆಹಸಿರನು ಉಡಿಸಿದೆ...|
ತರಳೆಯ ಮನವಿಂದು
ಗರಿಗೆದರಿ ಕುಣಿಯುತಿರೆ
ಕಾರಣವು ಪ್ರೇಮದ ವರ್ಷಧಾರೆ..||


ಬಾಯ್ದೆರೆದು ಬೀಜವದು
ಕಾಯ್ದು ಎಳೆ ಚಿಗುರನು
ತೊಯ್ದು ತಾ ಗಿಡಮೂಡಿದೆ..|
ಆಯ್ದು ತುಂತುರು ಹನಿಯ
ನೇಯ್ದು ಹೃದಯದ ಗೂಡಲಿ
ಕಾಯ್ದಿಹಳು ಇನಿಯನ ಕಣ್ಣಂಚಲಿ..||


ನಾಲಿಗೆಯ ಹೊರಚಾಚಿ
ಉಲಿಯುತಲಿ ನಲಿಯುತಲಿ
ಸಲಿಲದೊಡಗೂಡಿ ಸರಸವಾಡಿ ..|
ಕಲಿಸಿಹಳು  ತನ್ನವಗೆ ಜಿನುಗುವ
ಮಳೆಹನಿಯ ಹೀರಿ ಹಿಗ್ಗಲು
ಕಾಲಕಾಲದ ಸೊಬಗು ಸವಿಯಲು..||


ಖಗಮೃಗವು ಗಿಡಮರವು
ಆಗಿಹುದು ಬೆದರಿ ಒದ್ದೆ ಮುದ್ದೆ
ಕೂಗುತಿದೆ ತೊರೆ ನೊರೆಯುತ..|
ಆಗಸದಿ ಕೋಲ್ಮಿಂಚು; ಸುಳಿಮಿಂಚು
ಆಗಮನ ಇನಿಯನ ರಸನೋಟಕೆ
ಬೀಗುವಳು ಬೆಚ್ಚನೆಯ ಬಂಧನದಲಿ..||


ಹದವಾಗಿ ಮಳೆಯಾಗಿ
ವಿಧವಿಧದ ಬೆಳೆಬೆಳೆದು
ಉದರಭರಿಸೆ ಫಸಲು ತೆನೆಗೂಡಲಿ..|
ಕಳೆಯಾಗಿ ಬಂದಿರುವ ಕೋವಿಡ್
ಕೊಳೆತೊಳೆದು; ಮನೆಮನವು
ಇಳೆಯಲಿ ಬೆಳಗಿ ಹರುಷಗೊಳಲಿ...||


✍️... ಅನಿತಾ ಜಿ.ಕೆ.ಭಟ್.
17-07-2020.


momspresso Kannada ದಲ್ಲಿ 'ಮಾನ್ಸೂನ್,ಹೆಣ್ಮಕ್ಕಳ ಸಂಭ್ರಮ' ವಿಷಯಕ್ಕಾಗಿ ಬರೆದ ಕವನ..

2 comments: