ಜೀವನ ಮೈತ್ರಿ ಭಾಗ ೧೦೯
ಗಣೇಶ ಶರ್ಮ ನಾಗನ ಬನ ಮತ್ತು ದೈವದ ಕಟ್ಟೆಯ ಕಾಮಗಾರಿಗಳನ್ನು ವೀಕ್ಷಿಸಿದರು.ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ.ಈಗಲೇ ಜೋಯಿಸರಲ್ಲಿ ಪುನರ್ ಪ್ರತಿಷ್ಠಾ ಕಲಶಾದಿ ಕಾರ್ಯಕ್ರಮಗಳಿಗೆ ಶುಭ ಮುಹೂರ್ತವನ್ನು ಕೇಳುವುದು ಉಚಿತವೆಂದು ನಿರ್ಧರಿಸಿದರು.ಅಂತೆಯೇ ದಿನ ನಿಗದಿ ಮಾಡಲಾಯಿತು.ಕಿಶನ್ ಕೂಡಾ ಹದಿನೈದು ದಿನಗಳಿಗೊಮ್ಮೆ ಬಂದು ಕಾರ್ಯಕ್ರಮದ ಕರೆಯೋಲೆ ಅಚ್ಚುಹಾಕಿಸುವುದು, ಹಂಚುವುದು,ಆದಷ್ಟು ಬೇಗ ಕೆಲಸ ಮುಂದುವರಿಯುವಂತೆ ನೋಡಿಕೊಳ್ಳಲು ತಂದೆಯೊಡನೆ ಕೈ ಜೋಡಿಸುತ್ತಿದ್ದ.ಒಂದು ಶನಿವಾರ ಭಾನುವಾರ ಮಾವನ ಮನೆಗೆ ತೆರಳಿ ಮಡದಿ ಮಗುವಿನ ಜತೆ ಕಳೆದರೆ ಮುಂದಿನ ಸರದಿ ತನ್ನ ಮನೆ ಕಡೆಗೆ.ಹೀಗೆ ಎರಡೂ ಕಡೆ ನಿಭಾಯಿಸುತ್ತಿದ್ದ.
ಕಿಶನ್ ಬಂದ ದಿನ ಮಗನನ್ನು ಅವನ ಕೈಗೆ ನೀಡುವ ಮೈತ್ರಿಗೆ ಸ್ವಲ್ಪ ಬಿಡುವು ಸಿಗುತ್ತಿತ್ತು.ಕಿಶನ್ ಮಗನಿಗೆ ಲಾಲಿ ಹಾಡಿದರೆ ಅವನೋ ಪಿಳಿಪಿಳಿ ಕಣ್ಣುಗಳಿಂದ ಅಪ್ಪನ ಮುಖವನ್ನೇ ನೋಡುತ್ತಾ ನಿದಿರೆಗೆ ಜಾರುತ್ತಿದ್ದ.. ಮಧ್ಯದಲ್ಲಿ ಎಚ್ಚರಾದರೆ ಬೇಗನೆ ಓಡಿ ಬಂದು ಮತ್ತೆ ಲಾಲಿ ಹಾಡಿ ತೊಟ್ಟಿಲು ತೂಗುತ್ತಿದ್ದ.ಆಗಾಗ ಒದ್ದೆ ಮಾಡಿಕೊಂಡರೆ ತಾನೇ ಬಟ್ಟೆ ಬದಲಾಯಿಸಿ ಅವನನ್ನು ಬೆಚ್ಚಗೆ ಮಲಗಿಸುತ್ತಿದ್ದ.."ನನಗೆ ನೀಡುತ್ತಿದ್ದ ಪ್ರೀತಿಯಲ್ಲಿ ನೀನು ಪಾಲುಪಡೆದೆಯಾ ಪುಟ್ಟ?" ಎನ್ನುತ್ತಾ ಹಲುಬುತ್ತಿದ್ದಳು ಮೈತ್ರಿ..
ಮಗು ತಡರಾತ್ರಿ ರಂಪ ಮಾಡಿದರೂ ಕಿಶನ್ ಹಾಜರು..ರಮಿಸಲು ಏನೆನೋ ಕಸರತ್ತು.ರಮಿಸಿದ ಮೇಲೆಯೇ ತಾನೂ ಮಲಗುತ್ತಿದ್ದುದು.ಇದನ್ನು ಕಂಡ ಅಜ್ಜಿ "ಇವನೊಬ್ಬನೇ ಇಷ್ಟು ಕಕ್ಕುಲಾತಿಯ ಮನುಷ್ಯ ನಾನು ಕಂಡಿದ್ದು" ಎಂದು ಆಡಿದ್ದರು..ಅವರೇನೇ ಅಂದರೂ ತಲೆಕೆಡಿಸಿಕೊಳ್ಳದೆ ಮಗುವನ್ನೆತ್ತಿ ಮುದ್ದುಮಾಡಲು ಮುಂದೆ ಬರುತ್ತಿದ್ದ.ತಿಂಗಳೆರಡು ಆಗುವಾಗಲೇ ಬೊಂಬೆಗಳು ದೊಡ್ಡ ಬಕೆಟಿನಷ್ಟಾಗಿದ್ದವು.ಅವುಗಳ ನಾನಾ ರಾಗಗಳು, ಆಟಗಳನ್ನು ನೋಡಿ ಮಗುವೇಕೆ..ಅಜ್ಜ ಅಜ್ಜಿಯೇ ಕಣ್ಣು ಬಾಯಿ ಬಿಡುತ್ತಿದ್ದರು.
*****
ಸೌಜನ್ಯಳಲ್ಲಿ" ಮಗಳೇ... ನಾವು ಒಮ್ಮೆ ಅಜ್ಜಿ ಮನೆಯ ಗ್ರಾಮದೇವರ ಸನ್ನಿಧಾನಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಬೇಕಿತ್ತು.. ಯಾವಾಗ ಹೋಗೋಣ...?"ಎಂದರು ಅಮ್ಮ ರೇಖಾ.
"ಅಮ್ಮಾ...ಈಗಲೇ ಅವಸರವೇನು..ನಮ್ಮ ಪುಟಾಣಿ ಸ್ವಲ್ಪ ದೊಡ್ಡವಳಾಗಲಿ.ನನ್ನ ಗಂಡನಿಗೂ ಒಳ್ಳೆಯ ಉದ್ಯೋಗ ಸಿಕ್ಕಾಗ ಹೋದರಾಯಿತು.."ಎಂದಳು ಸೌಜನ್ಯ.
"ಅದು...ಅದು..."
"ಅದೂ..ಇಲ್ಲ..ಇದೂ ಇಲ್ಲ..ನೀವಿಬ್ಬರೇ ಮನೆಯಲ್ಲಿದ್ದಾಗ ದೈವ ದೇವರು ,ಪೂಜೆ ಪುನಸ್ಕಾರ ಅಂತ ತೊಡಗಿಸಿಕೊಂಡಿದ್ದಿರಿ.ಅದರ ಒಂದು ಭಾಗವಿದು..ನಂಗೆ ಗೊತ್ತಿಲ್ವಾ ..ನನ್ನ ಅಪ್ಪ ಅಮ್ಮನ ಗುಟ್ಟು.."ಎಂದು ನಸುನಕ್ಕಳು..
ಮಗಳು ಅಳಿಯ ಮನೆಬಿಟ್ಟು ಹೋದವರು ವಾಪಾಸಾಗದಿದ್ದಾಗ ಆತಂಕಗೊಂಡ ರೇಖಾ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟುಕೊಂಡಿದ್ದರು.ನಡೆದ ಘಟನೆಗಳನ್ನು ಅಚಾತುರ್ಯದಿಂದ ನಡೆದುಹೋಯಿತು ಮರೆತುಬಿಡೋಣ ಎಂದು ಹೇಳಿ ಮಗಳು ಅಳಿಯನನ್ನು ಪುನಃ ಕರೆತರಲು ಮನಸು ಹೇಳುತ್ತಿತ್ತು.ಆದರೆ ಒಂದು ರೀತಿಯ ಅಹಂ,ಅಲ್ಲ ...ತಾನುಹಿರಿಯಳು ಅವರೇ ತಗ್ಗಲಿ ಎಂಬ ಭಾವವೋ,ಅಲ್ಲ.. ಅಷ್ಟು ಕಡಿಮೆ ಸಂಪಾದನೆಯಲ್ಲಿ ಬೆಂಗಳೂರಿನಲ್ಲಿ ಜೀವಿಸಲು ಸಾಧ್ಯವಿಲ್ಲ.ಹಾಗಾಗಿ ವಾಪಾಸು ಬಂದೇ ಬರುತ್ತಾರೆ ಎಂಬ ಮೊಂಡು ಧೈರ್ಯವೋ... ಒಟ್ಟಾರೆಯಾಗಿ ಅವರಿಗೆ ಮಗಳು ಅಳಿಯನನ್ನು ಮನವೊಲಿಸಿ ಕರೆತರುವ ಬುದ್ಧಿಮೂಡಲಿಲ್ಲ. ಆಗ ಹೊಳೆದದ್ದು ತನ್ನ ತವರಿನ ಗ್ರಾಮ ದೇವಾಲಯ ಶ್ರೀ ವನದುರ್ಗೆಯ ಪವಿತ್ರ ಸನ್ನಿಧಾನ.ಅಲ್ಲಿಗೆ ಹರಕೆ ಹೊತ್ತರೆ ಎಂತಹ ಕಷ್ಟಗಳೂ ಹೂವೆತ್ತಿದಂತೆ ನಿವಾರಣೆಯಾಗಿ ಮನಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ. ಹೀಗೆ ಹರಕೆ ಹೊತ್ತಕೊಂಡಿದ್ದರು ರೇಖ..ಈಗ ಆ ತಾಯಿ ಎಲ್ಲಾ ವಿಧದಿಂದಲೂ ಮಂಗಳವನ್ನೇ ಉಂಟುಮಾಡಿದಾಗ ಅವಳ ಹರಕೆ ತೀರಿಸಬೇಡವೇ.. ಆದಷ್ಟು ಬೇಗನೇ ತೀರಿಸಬೇಕೆನ್ನುವುದು ಅವರ ಬಯಕೆ.
"ಸೌಜನ್ಯ..ಹಾಗಲ್ಲಮ್ಮ..ಹರಕೆ ಹೊತ್ತಿದ್ದೀನಿ.ಈಗ ಅದನ್ನು ತೀರಿಸಲೇಬೇಕು.. ತುಂಬಾ ತಡಮಾಡಬಾರದು ಮಗಳೇ..ಎಲ್ಲರೂ ಜೊತೆಗೆ ಹೋಗೋಣ..ನಿಮ್ಮ ವಿವಾಹ ಸಮಾರಂಭದ ನಂತರ ಆ ಕಡೆಗೆ ತೆರಳಿಲ್ಲ.ಈಗಲಾದರೂ ಹೋಗಿ ಪೂಜೆ ಮಾಡಿಸಿ ಬರೋಣ.."
"ಸರಿ ಅಮ್ಮ..ನಿಮ್ಮಿಷ್ಟಕ್ಕೆ ನನ್ನದೇನೂ ಅಭ್ಯಂತರವಿಲ್ಲ.. "ಎಲ್ಲರೂ ಚರ್ಚಿಸಿ ಮುಂದಿನ ಶುಕ್ರವಾರ ವನದುರ್ಗಾ ದೇವಾಲಯಕ್ಕೆ ತೆರಳುವುದೆಂದು ನಿಶ್ಚಯವಾಯಿತು.ಮೊದಲೇ ಕರೆ ಮಾಡಿ ಬರುವ ವಿಷಯ,ಮಾಡಿಸುವ ಪೂಜೆಯ ವಿವರ ನೀಡಿದರು. ಅಂತೆಯೇ ಗುರುವಾರವೇ ಕುಟುಂಬದ ಸದಸ್ಯರು ಕರಾವಳಿಯತ್ತ ಪಯಣಿಸಿದರು. ರೇಖಾಳ ತವರಿಗೆ ಹೋಗಿ ಅಲ್ಲಿ ಸ್ನಾನ , ತಿಂಡಿ ಮುಗಿಸಿ ದೆವಾಲಯಕ್ಕೆ ತೆರಳಿದರು.
ವನದುರ್ಗಾ ದೇವಿಯ ದೇವಾಲಯ ಇರುವುದು ಹಚ್ಚಹಸುರಿನ ವನಸಿರಿಯ ಮಡಿಲಲ್ಲಿ.ಎಂತಹವರೂ ಕೂಡ ಮೆಚ್ಚಿಕೊಳ್ಳುವ ಸುಂದರ ತಾಣ. ಬಹಳ ಶಕ್ತಿಯುತ ಸನ್ನಿಧಾನ. ಇಲ್ಲಿ ಕೆಟ್ಟ ಯೋಚನೆ ಅಪ್ಪಿ ತಪ್ಪಿಯೂ ಮಾಡುವಂತೆಯೇ ಇಲ್ಲ.ಮಾಡಿದರೆ ಅದು ಘಟಿಸಿಯೇ ತೀರುವುದು.ದೇವಾಲಯಕ್ಕೆ ರಸ್ತೆಯಿಲ್ಲ.ಒಂದು ಮೈಲಿ ದೂರದಲ್ಲಿ ವಾಹನ ನಿಲ್ಲಿಸಿ ಅಡಕೆ,ಬಾಳೆ ತೆಂಗಿನ ತೋಟದ ಮಧ್ಯದಲ್ಲಿ ನಡೆದುಕೊಂಡು ಬರಬೇಕು.ವಿಶಾಲವಾದ ಗದ್ದೆಗಳ ಬದುವಿನಲ್ಲಿ ನೀರ ಕಣಿಯಲ್ಲಿ ಹರಿಯುವ ಶುಭ್ರ ನೀರಿನ ಝುಳುಝುಳು ನಾದವನ್ನು ಆಸ್ವಾದಿಸುತ್ತಾ ಮುಂದುವರಿಯಬೇಕು.ನಂತರ ಹತ್ತಿರ ಹತ್ತಿರ ಸೊಂಪಾಗಿ ಬೆಳೆದು ನಿಂತು ಆಕಾಶ ನೋಡುತ್ತಿರುವ ಮರಗಿಡಗಳ ಮಧ್ಯೆ ಬೆಟ್ಟವೇರಿದಾಗ ಸಿಗುವುದು ವನದೇವಿಯ ಸನ್ನಿಧಾನ.ವರುಷವಿಡೀ ಆರದ ಎಂದೂ ಬತ್ತಿದ ಇತಿಹಾಸವಿರದ ದೇವಾಲಯದ ಸರಸ್ಸು ಮನಸೆಳೆಯುತ್ತದೆ..ಅದರಿಂದ ಹರಿದು ಬರುವ ನೀರಿನಲ್ಲಿ ಕಾಲುತೊಳೆದು ಒಳಗೆ ತೆರಳಿದರು.
ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಅರ್ಚಕರಿಂದ ತೀರ್ಥ ಪ್ರಸಾದ ಸ್ವೀಕರಿಸಿದರು. ನಂತರ ತಾವು ಮಾಡಬೇಕಿದ್ದ ಪೂಜಾಕಾರ್ಯಕ್ಕೆ ಎಲ್ಲ ಸಿದ್ಧತೆಯೂ ನಡೆದಿದೆ ಎಂದು ಪುರೋಹಿತರು ಹೇಳಿದಾಗ ಪೂಜೆಗೆ ಕುಳಿತರು.
ದೇವಾಲಯದ ಮುಖಮಂಟಪದ ಎದುರಿನ ಜಗಲಿಯಲ್ಲಿ ಒಂದು ವಿವಾಹ ಕಾರ್ಯಕ್ರಮ ಜರಗುತ್ತಿತ್ತು.ಹೆಣ್ಣುಮಕ್ಕಳಿಗೆ ವಿವಾಹ ಸಂಬಂಧ ಸರಿಯಾಗಿ ಕೂಡಿಬರದಿದ್ದಲ್ಲಿ ವನದುರ್ಗಾ ಸನ್ನಿಧಿಯಲ್ಲಿ ಮದುವೆ ಮಾಡುತ್ತೇವೆ ಎಂದು ಹರಕೆ ಹೊತ್ತುಕೊಳ್ಳುವುದು ಆ ಊರಿನವರ ನಂಬಿಕೆ.
ಪೂಜೆ ಸಂಪೂರ್ಣಗೊಳ್ಳುವ ಹಂತದಲ್ಲಿತ್ತು. ಪುರೋಹಿತರಿಗೆ ಕ್ರಿಯಾದಕ್ಷಿಣೆ ನೀಡಿ ನಮಸ್ಕರಿಸುವ ಹೊತ್ತು.ಆಗ ಎದುರಿನಿಂದ ಬರುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೇಶವ. ಗುರುತುಹಿಡಿದ. ಒಂದು ಕ್ಷಣ ಮೈ ಬೆವರಿದಂತಾಯಿತು .ಕೈ ನಡುಗಿದಂತಾಯಿತು. ಶರೀರದ ಶಕ್ತಿಯೆಲ್ಲಾ ಉಡುಗಿದಂತಾಯಿತು.. ಪುರೋಹಿತರು "ವೀಳ್ಯದೆಲೆ ,ತೆಂಗಿನಕಾಯಿ, ತುಲಸಿದಳ ಹಿಡಿದುಕೊಳ್ಳಿ" ಎಂದರೂ ಕೇಶವನ ಅರಿವಿಗೆ ಬಂದಿರಲಿಲ್ಲ."ರೀ..."ಎಂದಳು ಸೌಜನ್ಯ.. ಸಾವರಿಸಿಕೊಂಡ ಕೇಶವ ಪುರೋಹಿತರು ಹೇಳಿದಂತೆ ಮುಂದುವರಿಸಿದ.
ಕಾರ್ಯಕ್ರಮ ಮುಗಿದು ಹೊರಡಲನುವಾದವರಿಗೆ ಅರ್ಚಕರು.."ನೀವು ಪ್ರಸಾದ ಭೋಜನ ಸ್ವೀಕರಿಸಿ ಹೋಗಬಹುದು.ನಿತ್ಯವೂ ನಮ್ಮದೇ ಅಡುಗೆಯ ಊಟ.ಇಂದು ಮದುವೆಯ ಊಟವೇ ವನದುರ್ಗೆಯ ಪ್ರಸಾದ ಭೋಜನ..."ಎಂದಾಗ ಕೇಶವ ಹೊರಡುವ ಆತುರ ತೋರಿದರೂ ರೇಖಾ "ನಿಲ್ಲೋಣ .."ಎಂದರು.ನಿರ್ವಾಹವಿಲ್ಲದೆ ಮುಳ್ಳಿನ ಮೇಲೆ ಕುಳಿತಂತಿದ್ದ ಕೇಶವ.
ಅರ್ಚಕರ ಸಾಲಿನಲ್ಲಿ ಇವರಿಗೂ ಬಾಳೆಲೆಗಳನ್ನು ಇರಿಸಿದ್ದರು.ಪ್ರತಿಯೊಬ್ಬರೂ ಬಾಳೆಲೆಗಳಿಗೆ ನೀರು ಚಿಮುಕಿಸಿ ತೊಳೆದು ಸ್ವಚ್ಛಗೊಳಿಸಿದರು.ಮದುವೆಯ ಕಡೆಯವರು ಬಡಿಸುತ್ತಾ ಬಂದರು.ಕೇಶವ ಪಂಕ್ತಿಯ ಒಂದು ಬದಿಯಲ್ಲಿದ್ದ.ಅವನ ಬಾಳೆಗೆ ಮೊದಲು.ಬಡಿಸುವ ವ್ಯಕ್ತಿ ಪಾಯಸವನ್ನು ಬಾಳೆಲೆಯ ಅಂಚಿಗೆ ಬಡಿಸಿದರು.ಕೇಶವ ತಲೆಯೆತ್ತಿ ನೋಡಿದ.ಆ ವ್ಯಕ್ತಿಯೂ ಮುಖವನ್ನು ದಿಟ್ಟಿಸಿದರು.ಮುಂದೆ ಬಡಿಸುತ್ತಾ ಸಾಗಿದರು.ಕೇಶವನ ಮನದಲ್ಲಿ ಬಲವಾದ ಅಲೆಯೊಂದು ಎದ್ದಿತು.
ಊಟದ ಬಳಿಕ ಸೌಜನ್ಯ , ರೇಖಾ ನರಸಿಂಹ ರಾಯರು ಅಲ್ಲಿಯೇ ಅಡ್ಡಾಡುತ್ತಾ ಪ್ರಕೃತಿಯನ್ನು ಆನಂದಿಸುತ್ತಿದ್ದರು .ಆದರೆ ಕೇಶವನಿಗೆ ಒಮ್ಮೆ ಹೋದರೆ ಸಾಕಿತ್ತು. ಮಗಳನ್ನೆತ್ತಿಕೊಂಡು ಹೊರಗಡೆ ಸಾಗಿದ.ರೇಖಾ ಕೇಶವನನ್ನು ಹುಡುಕುತ್ತಾ ಬಂದರು."ಇಲ್ಲಿ ಬಾ " ಎಂದು ಒತ್ತಾಯಿಸಿ ಕರೆದೊಯ್ದರು.ಸೌಜನ್ಯಳೂ ಅಲ್ಲಿದ್ದಳು.ದೇವಾಲಯದ ಹೊರಾಂಗಣದ ಜಗಲಿಯ ಎದುರು ನಿಂತು .."ನೋಡಿ ಕೇಶವ, ಸೌಜನ್ಯ...ಈಗ ಹಿರಿಯರೊಬ್ಬರಿಗೆ ಈ ಪುಟಾಣಿಯನ್ನು ಎತ್ತಿಕೊಳ್ಳಲು ನೀಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು"ಎಂದರು..ಇಬ್ಬರೂ ಮುಖ ಮುಖ ನೋಡಿಕೊಂಡರು."ಬನ್ನಿ .." ಎಂದು ದೇವಸ್ಥಾನದ ಬಲಭಾಗಕ್ಕೆ ತಿರುಗಿ ನಾಲ್ಕು ಹೆಜ್ಜೆ ಮುಂದೆ ಸಾಗಿದಾಗ...ಕೇಶವ ಸೌಜನ್ಯ ಇಬ್ಬರೂ ಒಮ್ಮೆ ಸ್ತಬ್ಧರಾದರು..
.
.
.
.
.
.
.
.
.
.
.
.
.
.
.
ಅಲ್ಲಿದ್ದವರು ಬರುತ್ತಿದ್ದವರ ಕಡೆಗೇ ನೋಡುತ್ತಿದ್ದರು.ಕೇಶವ ಮಗಳನ್ನು ಅವರ ಕೈಗೆ ನೀಡಲು ನಿಧಾನಿಸಿದ.. ರೇಖಾ ತಾನೇ ಮಗುವನ್ನೆತ್ತಿ ಅವರ ಕೈಯಲ್ಲಿ ನೀಡಿದಳು.ಅಪರಿಚಿತರಾದರೂ ಮುದ್ದುಬಂಗಾರಿ ಸ್ವಲ್ಪವೂ ಅಳಲಿಲ್ಲ.ಬದಲಾಗಿ ಮೆಲ್ಲನೆ ಕನ್ನಡಕದತ್ತ ಕೈ ಚಾಚಿದಳು.ಕನ್ನಡಕ ಅವಳ ಪುಟ್ಟ ಬೆರಳುಗಳ ಎಳೆತಕ್ಕೆ ಸಿಲುಕಿ ಬಿಟ್ಟಿತು..
ಅಜ್ಜನಿಗೂ ಮೊಮ್ಮಗಳ ತುಂಟಾಟಕ್ಕೆ ನಗೆಯುಕ್ಕಿತು.ತನ್ನ ಕನ್ನಡಕವನ್ನೆಳೆದ ಮೊಮ್ಮಗಳನ್ನು ಮನಸಾರೆ ಮುದ್ದಿಸಿದರು.ಕೇಶವನ ಕಣ್ಣುಗಳು ಮಂಜಾದವು.ಅವನಂತೂ ನಮಸ್ಕರಿಸಲು ಬಾಗುವ ಬದಲು ಪಕ್ಕದಲ್ಲಿದ್ದ ಕಂಬಕ್ಕೊರಗಿ ಬಿಕ್ಕಳಿಸತೊಡಗಿದ.ಹಿಂದಿನಿಂದ ಬಂದವರೇ.. ಒಂದು ಕೈಯಲ್ಲಿ ಮೊಮ್ಮಗಳನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಬೆನ್ನು ಸವರುತ್ತಾ "ಮಗನೇ..ಹೇಗಿದ್ದೀಯಾ..?"ಎನ್ನುತ್ತಿದ್ದರೆ ಅವನ ಕಣ್ಣಂಚಿನಿಂದ ಒಂದೇ ಸಮನೆ ಹನಿಗಳು ಕೆಳಗಿಳಿದು ನೆಲಸೇರುತ್ತಿದ್ದವು.
ಬಂಗಾರಣ್ಣ ಮಗನನ್ನು ಸಮಾಧಾನಿಸಿ ಮಾತನಾಡಿದರು. ಮನೆಗೆ ಕರೆಮಾಡಿ "ಮಗ ಸೊಸೆ ಬರುತ್ತಿದ್ದಾರೆ.. ರಾತ್ರಿ ಊಟಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಡು" ಎಂದರು..
ರೇಖಾಳ ತವರಿಗೆ ಹೋಗಿ ವಿಶ್ರಾಂತಿ ಪಡೆದು ತಮ್ಮ ಲಗೇಜ್ ತೆಗೆದುಕೊಂಡು ಎಲ್ಲರೂ ಸಂಜೆ ಬಾರಂತಡ್ಕದತ್ತ ಹೊರಟರು.
********
ಮಗನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಆ ತಾಯಿ ಹೃದಯ ಕಣ್ತುಂಬಿಕೊಂಡು ಹರುಷದಿಂದ ಕುಣಿದಾಡಿತ್ತು.. ಅಂದು ವಧೂಗೃಹಪ್ರವೆಶದ ದಿನ ಅವನಿಗಿಷ್ಟದ ಹೆಸರು ಪಾಯಸ,ಹೋಳಿಗೆ ಮಾಡಿದ್ದರೂ ಒಂದು ಹಿಡಿಯೂ ಮಗನ ಉದರ ಸೇರಲಿಲ್ಲವಲ್ಲಾ ಎಂದು ಕೊರಗುತ್ತಿದ್ದ ಅಮ್ಮ ಅದೆಲ್ಲವನ್ನೂ ತನ್ನ ಕೈಯಾರೆ ಮಾಡಿ ಮಗನ ಕುಟುಂಟದ ಆಗಮನಕ್ಕೆ ಕಾದು ಕುಳಿತಿದ್ದರು.
ಗೋಧೂಳಿಯ ಸಮಯ..ಹಕ್ಕಿಗಳ ಹಿಂಡು ಗೂಡು ಸೇರುತ್ತಿತ್ತು.ದಿನಕರ ತನ್ನ ದಿನದ ಪಯಣದ ಆಯಾಸ ಪರಿಹರಿಸಲು ಪಡುಗಡಲಾಚೆ ತೆರಳಿದ..ಶುಭ ಶುಕ್ರವಾರ ಮುದ್ದು ಪುಟಾಣಿ ಭಾಗ್ಯಲಕ್ಷ್ಮಿಯೊಂದಿಗೆ ಮನೆ ಮಗನನ್ನು ಸ್ವಾಗತಿಸಲು ಸುಮಾ ಮನೆಬಾಗಿಲಲ್ಲಿ ನಿಂತಿದ್ದರು.. ಕಾರು ಅಂಗಳಕ್ಕಿಳಿಯುತ್ತಿದ್ದಂತೆ ಓಡಿ ಕಾರಿನ ಬಳಿಗೆ ಬಂದ ತಾಯಿ ಪುಟಾಣಿ ಭಾಗ್ಯಲಕ್ಷ್ಮಿಯನ್ನೆತ್ತಿಕೊಂಡು ಮಗನನ್ನು ತಬ್ಬಿಹಿಡಿಕೊಂಡು " ಮಗನೇ ...ಈ ಅಮ್ಮನನ್ನು ನೋಡಲು ಇಂದಾದರೂ ಬಂದೆಯಲ್ಲಾ..." ಎನ್ನುತ್ತಿದ್ದಾಗ ಎಲ್ಲರ ಕಣ್ಣುಗಳೂ ತೇವವಾಗಿದ್ದವು..ಬಂಗಾರಣ್ಣ ತನ್ನ ದುಡುಕಿನ ನಡತೆಗೆ ಪರಿತಪಿಸಿದರು..
ರೇಖಾ ಮಂಗಳಮ್ಮನ 'ಕೋರಿಕೆ'ಯನ್ನು ಈಡೇರಿಸಿದರು.
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
20-07-2020.
Channagide...
ReplyDeleteಧನ್ಯವಾದಗಳು 💐🙏
Delete