ಜೀವನ ಮೈತ್ರಿ ಭಾಗ ೧೦೭
ಮೈತ್ರಿಯನ್ನು ಪರೀಕ್ಷಿಸಲು ಡಾಕ್ಟರ್ ಶಾಂತ ಬಂದರು.. ಆಕೆಯನ್ನು ಪರಿಕ್ಷಿಸಿ
"ಇವತ್ತು ಡಿಸ್ಚಾರ್ಜ್ ಮಾಡ್ತೀನಿ.. ಇನ್ನು ಮನೆಯಲ್ಲಿ ಕೇರ್ ತೆಗೆದುಕೊಳ್ಳಿ..ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ.ಪುನಃ ಈ ತರಹ ಆದರೆ ತುಂಬಾ ಅಪಾಯಕಾರಿ.."ಎಂದು ಎಚ್ಚರಿಸಿದರು.
ಡಿಸ್ಚಾರ್ಜ್ ಆಗಿ ಮನೆಗೆ ಬಂದಾಗ ಕಿಶನ್ ...ಮೈತ್ರಿಗೆ 'ಉದ್ಯೋಗದಿಂದ ರಜೆ ಪಡೆದುಕೊಳ್ಳುವುದು ಒಳಿತು' ಎಂದು ಸಲಹೆಯಿತ್ತನು..ಮಂಗಳಮ್ಮನದೂ ಅದೇ ಮಾತು.." ತುಂಬಾ ಹೊತ್ತು ಒಂದೇ ರೀತಿ ಕುಳಿತು ಕೊಳ್ಳದೆ.. ಕೆಲಸ ಸ್ವಲ್ಪ ದಿನ ಮಾಡುವೆ " ಎನುವ ಮೈತ್ರಿ.. 'ಮಗುವಾದ ನಂತರ ಹೇಗೂ ಉದ್ಯೋಗ ಮಾಡಲು ಕಷ್ಟ.ಈಗಲೇ ಸ್ವಲ್ಪ ಹಣ ಮಾಡಿಕೊಳ್ಳುತ್ತೇನೆ' ..ಎಂದು ಅವಳ ಭಾವನೆ.ಕಿಶನ್ ಗೆ ಸಿಟ್ಟು ಬಂದಿತು.ಮುಖ ಕೆಂಪೇರಿತ್ತು.ಆದರೂ ರೇಗದೆ ಮನಸು ಹತೋಟಿಯಲ್ಲಿಟ್ಟು ತನ್ನ ರೂಮಿಗೆ ಹೋಗಿ ಬಟ್ಟೆಗೆ ಇಸ್ತ್ರಿ ಹಾಕುತ್ತಿದ್ದ.'ಮಡದಿಗೆ ನಾನೇನು ಕಡಿಮೆ ಮಾಡಿದ್ದೇನೆ ..ಆದರೂ ಅವಳ ಹಠ ಅವಳು ಬಿಡುವುದಿಲ್ಲವಲ್ಲ.ಏನಾದರೂ ತೊಂದರೆಯಾದರೆ ಮತ್ತೆಷ್ಟು ಸವಾಲನ್ನು ಎದುರಿಸಬೇಕಾದೀತು ಎಂಬುದೆಲ್ಲ ಇವಳಿಗೆ ತಿಳಿಯುವುದಿಲ್ಲವಲ್ಲ.'. ಎಂದು ಯೋಚಿಸುತ್ತಿದ್ದ.
ಮಂಗಳಮ್ಮ ಮಗಳ ಮನೆಯಲ್ಲಿ ನಿಂತು ಮಗಳ ಆರೈಕೆಯಲ್ಲಿ ತೊಡಗಿದರು.ಮೈತ್ರಿ ಆರೋಗ್ಯ ಜೋಪಾನವಾಗಿ ನೋಡಿಕೊಂಡು ಮನೆಯಿಂದಲೇ ಕೆಲಸ ನಿಭಾಯಿಸಿದಳು. ಮನೆಯಲ್ಲಿ ಗಣೇಶ ಶರ್ಮ ಸೊಸೆಯ ಸೀಮಂತಕ್ಕೆ ಮುಹೂರ್ತ ನೋಡಿದರು.ಕಿಶನ್ ಗೆ ತಿಳಿಸಿದರು.ಮಂಗಳಮ್ಮ, ಮೈತ್ರಿ, ಕಿಶನ್ ಮೂವರೂ ರೈಲಿನಲ್ಲಿ ತಮ್ಮೂರಿಗೆ ಪ್ರಯಾಣಿಸಿದರು.ಇಂತಹ ಸಂದರ್ಭದಲ್ಲಿ ರೈಲು ಪ್ರಯಾಣವೇ ಒಳ್ಳೆಯದೆಂದು ನಿರ್ಧರಿಸಿದ್ದರು.ಅಂತೂ ಏನೂ ತೊಂದರೆಯಾಗದೆ ಮನೆ ತಲುಪಿದಾಗ ಕುಟುಂಬ ನಿಟ್ಟುಸಿರು ಬಿಟ್ಟಿತು.
ಸೀಮಂತದ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ವಿಪರೀತ ಅದ್ದೂರಿಯಿಲ್ಲದೆ ಸರಳವಾಗಿ ನೆರವೇರಿತು. ನಂತರ ಕಿಶನ್ ಮಡದಿಯನ್ನು ತವರಿಗೆ ಕಳುಹಿಸಿ ಕೊಡುವ ಸಂದರ್ಭದಲ್ಲಿ ಎದುರಿಗೆ ಏನೂ ತೋರಿಸಿಕೊಳ್ಳದಿದ್ದರೂ ಒಳಗೊಳಗೇ ನರಳಿದ.ಇದುವರೆಗೆ ಅವಳೊಂದಿಗೆ ಕಳೆದ ಖುಷಿಯ ಕ್ಷಣಗಳೆಲ್ಲ ನೆನಪಿಗೆ ಬಂದು ಹೃದಯ ಭಣಗುಟ್ಟುತ್ತಿತ್ತು.
ತವರಿಗೆ ಬಂದ ಮೈತ್ರಿಗೆ ಎಲ್ಲರ ಅಕ್ಕರೆ, ಆರೈಕೆ ಹಿತವಾಗಿತ್ತು.ಬೆಳ್ಳಂಬೆಳಗ್ಗೆ ಅಜ್ಜನ ಪೂಜೆಯ ಮಂತ್ರಘೋಷ,ಅಜ್ಜಿಯ ಕುಂಕುಮಾರ್ಚನೆ, ಸ್ತೋತ್ರ ಪಠಣ,ಸಂಜೆ ಅಪ್ಪನ ಯಕ್ಷಗಾನದ ಪದಗಳು .. ಮೈತ್ರಿಗೂ ಮೈತ್ರಿಯ ಗರ್ಭದಲ್ಲಿರುವ ಭ್ರೂಣಕ್ಕೂ ಕಿವಿಗೆ ತಂಪನೀಯುತ್ತಿದ್ದವು.ಬಸುರಿಗೆಂದು ಅಮ್ಮ ತರತರದ ಅಡುಗೆಗಳನ್ನು ಮಾಡುತ್ತಿದ್ದರು.ಅಜ್ಜಿ ಆರೋಗ್ಯಕರವಾದ ಕುಡಿಗಳನ್ನು ಕೊಯ್ದು ತಂದು ತಂಬುಳಿ ,ಚಟ್ನಿ ಮಾಡಿ ಕೊಡುತ್ತಿದರು.
*******
ತವರುಮನೆ ಸೇರಿದ ಸೌಜನ್ಯಳಿಗೆ ತಾಯಿ ರೇಖಾ ತಾನು ಉದ್ಯೋಗದಿಂದ ರಜೆ ಪಡೆದು ಬಾಣಂತನ ಮಾಡಿದರು.ಸುನೀತ ಸಹಾಯಕ್ಕೆ ಬರತೊಡಗಿದಳು.ನರಸಿಂಹರಾಯರ ಖಿನ್ನತೆಗೆ ಮೊಮ್ಮಗಳೇ ಔಷಧವಾದಳು.ಸಂಜೆ ಆಫೀಸಿನಿಂದ ಮರಳಿದರೆ ಅಜ್ಜನ ಮಡಿಲಲ್ಲೇ ಮೊಮ್ಮಗಳು.ಅವಳಿಗೆಂದು ಲಾಲಿಯ ಹಾಡು, ದೇವರನಾಮಗಳನ್ನು ಹೇಳತೊಡಗಿದರು. ಮಗಳಿಗಿಂತಲೂ ಎರಡುಪಟ್ಟು ಮೊಮ್ಮಗಳನ್ನು ಹಚ್ಚಿಕೊಂಡರು ಅಜ್ಜ ನರಸಿಂಹ ರಾಯರು.ರೇಖಾ 'ಈಗಲಾದರೂ ಪತಿ ಸರಿಹೋದರಲ್ಲ' ಎಂದು ಖುಷಿಪಟ್ಟರು.ಕೇಶವ ದಿನವೂ ಮಾವನ ಮನೆಯಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ.
******
ಬೆಂಗಳೂರಿನಲ್ಲಿ ಒಬ್ಬನೇ ಇರುವಾಗ ಕಿಶನ್ ಮೈತ್ರಿಯನ್ನು ನೆನಪಿಸಿಕೊಂಡು ಕಣ್ತುಂಬಿಕೊಳ್ಳುತ್ತಿದ್ದ . ಮೊದಲಿನಂತೆ ಹಾಯ್ಕುಗಳು,ಪ್ರೇಮಕವಿತೆಗಳನ್ನು ಬರೆದು ಮೈತ್ರಿಗೆ ಕಳುಹಿಸಿ ತನ್ನ ನೋವನ್ನು ಮರೆಯುತ್ತಿದ್ದ.ಮೈತ್ರಿ ತವರಿಂದಲೇ ಆಫೀಸಿನ ಕೆಲಸಗಳನ್ನು ಮಾಡುತ್ತಿದ್ದಳು..ಅಜ್ಜಿ ಮಾತ್ರ ಈ ವಿಷಯದಲ್ಲಿ ಮೊಮ್ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು..''ಹೀಗೆ ಇಡೀ ದಿನ ಕುಳಿತೇ ಇದ್ದರೆ ಹೆರಿಗೆ ಕಷ್ಟವಾದೀತು.. ಆರೋಗ್ಯ ಹಾಳಾದೀತು'' ಎಂದು.. ಒಂಭತ್ತು ತಿಂಗಳು ಭರ್ತಿಯಾದಾಗ ಮೈತ್ರಿ ಉದ್ಯೋಗ ಮಾಡುವುದು ನಿಲ್ಲಿಸಿ ತಾಯ್ತನದ ರಜೆ ಪಡೆದುಕೊಂಡಳು.
ಒಂಭತ್ತು ತಿಂಗಳಾದಾಗ ಕಿಶನ್ ಬಂದು ಮೈತ್ರಿಯನ್ನು ವೈದ್ಯರಲ್ಲಿಗೆ ಕರೆದೊಯ್ದು ಚೆಕಪ್ ಮಾಡಿಸಿಕೊಂಡು ಬಂದ."ಇನ್ನು ನಾಲ್ಕು ದಿನ ಕಾಯೋಣ.ನಂತರ ನೋವು ಬಾರದಿದ್ದರೂ ಅಡ್ಮಿಟ್ ಮಾಡಿ".ಎಂದರು ತವರಿನ ಸಮೀಪದ ಖಾಸಗಿ ನರ್ಸಿಂಗ್ ಹೋಂ ನ ವೈದ್ಯೆ ಮಾಯಾ.. ಕಿಶನ್ ವಿಷಯವನ್ನು ಮಾವ ಅತ್ತೆಯ ಬಳಿ ಅರುಹಿ ಬೆಂಗಳೂರಿಗೆ ಪಯಣ ಬೆಳೆಸಿದ.
ದೈಹಿಕ ವ್ಯಾಯಾಮ ಇನ್ನು ಸ್ವಲ್ಪ ಅಗತ್ಯವೆಂದು ವೈದ್ಯೆಯೂ ಹೇಳಿದ್ದರಿಂದ ಮೈತ್ರಿ ಮನೆಕೆಲಸಕ್ಕೆ ಅಮ್ಮನಿಗೆ ಸಹಕರಿಸುತ್ತಿದಳು.. ತನ್ನ ಬಟ್ಟೆ ತೊಳೆಯುವುದು..ಎಲರ ಬಟ್ಟೆ ಒಣಹಾಕುವುದು, ಮಡಚಿಡುವುದು ಇತ್ಯಾದಿಯೆಲ್ಲ ಅವಳೇ ಮಾಡುತ್ತಾ ಮನೆಯ ಅಂಗಳದಲ್ಲಿ ಬೆಳಿಗ್ಗೆ ಸಂಜೆ ವಾಕಿಂಗ್ ಮಾಡುತ್ತಿದ್ದಳು.ದಿನವೂ ಒಂದು ಗಂಟೆ ಸಂಗೀತಾಭ್ಯಾಸ ಮಾಡುತ್ತಿದ್ದಳು.ತನ್ನ ಕಾಲೇಜಿನ ಗೆಳತಿಯರಿಗೆಲ್ಲ ಕರೆ ಮಾಡಿ ಮಾತನಾಡುತ್ತಾ ಸಮಯ ಕಳೆಯುತ್ತಿದ್ದಳು.
ಒಂದು ದಿನ ಸಂಜೆಯ ವೇಳೆಯಲ್ಲಿ ಸಣ್ಣಗೆ ನೋವು ಹೊಟ್ಟೆಯ ಅಡಿಭಾಗದಲ್ಲಿ ಕಾಣಿಸಿಕೊಳ್ಳಲು ಆರಂಭವಾಯಿತು.ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು.ಕಿಶನ್ ಗೂ, ಅವನ ಮನೆಯವರಿಗೂ ವಿಷಯ ತಿಳಿಸಿದರು.ವೈದ್ಯೆ ಬಂದು ಚೆಕಪ್ ಮಾಡಿ ಹೆರಿಗೆ ನೋವು ಆರಂಭವಾದ ಕಾರಣ ಡ್ರಿಪ್ ಹಾಕಿದರು.ಮಂಗಳಮ್ಮನಲ್ಲಿ "ಭ್ರೂಣದ ಬೆಳವಣಿಗೆ ಆಗಿದೆ.ಇನ್ನು ಕಾಯುವುದು ಬೇಡ..ಹೆರಿಗೆಗೆ ಪ್ರಯತ್ನಿಸೋಣ"ಎಂದರು. ಭಾಸ್ಕರ ಶಾಸ್ತ್ರಿಗಳು ಅಳಿಯನಿಗೆ ಕರೆ ಮಾಡಿ ತಿಳಿಸಿದರು.ಕಿಶನ್ ಕೂಡಲೇ ಹೊರಟ..
ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮ ಲೇಬರ್ ರೂಮಿನ ಹೊರಗೆ ರಾತ್ರಿ ಕಾಯುತ್ತಿದರು. ಭಾಸ್ಕರ ಶಾಸ್ತ್ರಿಗಳು ಊಟ ಮಾಡಿಕೊಂಡು ಬಂದರು .ಮಂಗಳಮ್ಮ ಅದಕ್ಕೂ ಹೋಗಲಿಲ್ಲ."ನನಗೆ ಮಗಳು ನೋವಿನಲ್ಲಿ ಇರುವಾಗ ಅನ್ನ ಗಂಟಲಿನಲ್ಲಿ ಇಳಿಯದು" .. ಎಂದು ಮಗಳಿಗಾಗಿ ತಾಯಿ ಕೊರಗುತ್ತಿದ್ದರು..ಏನೂ ಸುದ್ದಿ ಬರುವ ಲಕ್ಷಣವಿಲ್ಲದಾಗ ಭಾಸ್ಕರ ಶಾಸ್ತ್ರಿಗಳು ರೂಮಿಗೆ ಬಂದು ಮಲಗಿಕೊಂಡರು..ಮಂಗಳಮ್ಮನಿಗೆ ಮಾತ್ರ ಮನಸು ಬರಲಿಲ್ಲ.ಮಗಳು ಎಷ್ಟು ನೋವನುಭವಿಸುತ್ತಿದ್ದಾಳೋ ಏನೋ..ವೈದ್ಯೆ,ದಾದಿಯರು ಚೆನ್ನಾಗಿ ನೋಡಿಕೊಂಡರೆ ಸಾಕು.. ಎಂದು ಯೋಚಿಸುತ್ತಾ ಕಚ್ಚುತ್ತಿದ್ದ ಸೊಳ್ಳೆಯನ್ನು ಬಡಿದು ಓಡಿಸುತ್ತಿದ್ದಾಗ ಅತ್ತೆ ಮಹಾಲಕ್ಷ್ಮಿ ಅಮ್ಮ ಕರೆ ಮಾಡಿ ವಿಚಾರಿಸಿದರು.."ಇನ್ನೂ ಹೆರಿಗೆ ಆಗಿಲ್ಲ ಅತ್ತೆ..ಎಷ್ಟು ಹೊತ್ತಾಯಿತು..ಪಾಪ ಕಷ್ಟವಾಗುತ್ತಿದೆಯೋ ಏನೋ ... ಕೇಳೋಣವೆಂದರೆ ದಾದಿಯರು ಒಬ್ಬರೂ ಹೊರಗೆ ಬರುವುದು ಕಾಣುತ್ತಿಲ್ಲ ಅತ್ತೆ" ಎಂದವರಿಗೆ ಅಳುವೇ ಬಂದಿತ್ತು."ನೀನು ತಾಯಿಯಾಗಿ ಹೀಗೆ ಅತ್ತರೆ ಹೇಗೆ.. ಧೈರ್ಯದಿಂದ ಇರು.". ಎಂದರು ಅತ್ತೆ..
ಬೆಳಗಿನ ಜಾವ...ಮಂಗಳಮ್ಮ ಕಾದು ಕಾದು ಸಣ್ಣಗೆ ನಿದ್ದೆ ತೂಗಿದರು.ಫಕ್ಕನೆ ಒಮ್ಮಿಂದೊಮ್ಮೆಲೆ ಯಾರೋ ಕೂಗಿದಂತಾಯಿತು..ಎಚ್ಚರಾದರೆ ಯಾರೂ ಇಲ್ಲ.. ಹೂಂ..ಬರೀ ಕನಸು.. ಮೈತ್ರಿ ಒಳಗೆ ಕಣ್ಣೀರು ಸುರಿಸುತ್ತಿರಬಹುದು..ನನಗೋ ಇಲ್ಲಿ ಹಾಳು ನಿದ್ದೆಯ ಜೊಂಪು..!! ಎನ್ನುತ್ತಾ ಹೋಗಿ ಮುಖ ತೊಳೆದು ಬಂದು ಕುಳಿತರು.
ಆ ಕಡೆಯಿಂದ ಯಾರೋ ನಡೆದು ಬರುವ ಸಪ್ಪಳ ಕೇಳಿಸುತ್ತಿತ್ತು.ಯಾರಾದರೂ ಪೇಷೆಂಟ್ ಪಾರ್ಟಿ ಇರಬಹುದು ಎಂದು ಆ ಕಡೆಗೆ ನೋಡಲಿಲ್ಲ..ತನ್ನ ಸಮೀಪಕ್ಕೆ ಬಂದಂತಾಯಿತು.."ಅತ್ತೇ"..ಅಂದಾಗ" ಓಹೋ.. ಅಳಿಯ... ಹ್ಞಾಂ..." ಎಂದವರ ಮುಖ ನೋಡಿದಾಗ ಕಿಶನ್ ಗೆ ತಾಯಿಯ ಸಂಕಟ ತಿಳಿದು ಕರುಳು ಹಿಂಡಿದಂತಾಯ್ತು. ಮುಖದಲ್ಲಿ ಎಂದಿನಂತೆ ನಗೆಯಿಲ್ಲ...ಲವಲವಿಕೆಯಿಲ್ಲ.
"ಕಿಶನ್... ನಿನ್ನೆ ರಾತ್ರಿಯೇ ಕರೆದೊಯ್ದಿದ್ದಾರೆ..ಇನ್ನೂ ಹೆರಿಗೆಯಾಗಿಲ್ಲ.ಯಾರೂ ಹೊರಗೆ ಬಂದಿಲ್ಲ.. ಪ್ಲೀಸ್ ಒಮ್ಮೆ ವಿಚಾರಿಸಿ ನೋಡು ''ಎಂದರು..
ಕಿಶನ್ ವಿಚಾರಿಸಲೆಂದು ಲೇಬರ್ ರೂಮಿನ ಬಾಗಿಲಿನತ್ತ ಸಾಗಿದ..ಒಬ್ಬ ನರ್ಸ್ ಹೊರಗೆ ಬಂದರು..ಪೇಷೆಂಟ್ ಯಮುನಾ ಪಾರ್ಟಿ ಎಂದರು..ಆ ಪೇಷೆಂಟಿನ ಕಡೆಯವರು ಒಳಗೆ ಹೋದರು.ಕಿಶನ್ ತನ್ನವಳ ಬಗ್ಗೆ ದಾದಿಯಲ್ಲಿ ವಿಚಾರಿಸಿದ."ಅವರನ್ನು ನೋಡಿಕೊಂಡ ಶುಶ್ರೂಷಕಿಯೇ ಬಂದು ಹೇಳುವರು ಸರ್.."ಎಂದು ಹೇಳಿ ಒಳಗೆ ತೆರಳಿದಳು.. ಕಿಶನ್ ಗೂ ತನ್ನ ಮೈತ್ರಿಗೆ ಏನಾಗಿದೆಯೋ..ಯಾಕಿವರು ಏನೂ ಹೇಳುತ್ತಿಲ್ಲ ಎಂಬುದೇ ಚಿಂತೆಯಾಯಿತು..
ಸ್ವಲ್ಪ ಹೊತ್ತಿನ ಬಳಿಕ ಶುಶ್ರೂಷಕಿಯೊಬ್ಬರು ಬಾಗಿಲಲ್ಲಿ ನಿಂತು ಪೇಷೆಂಟ್ ಮೈತ್ರಿ ಪಾರ್ಟಿ ಎಂದಾಗ ಧಿಗ್ಗನೆದ್ದು ತೆರಳಿದ ಕಿಶನ್..ಮಂಗಳಮ್ಮನೂ ಹಿಂಬಾಲಿಸಿದರು..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
16-07-2020.
,👏👏
ReplyDeleteಧನ್ಯವಾದಗಳು 💐🙏
Delete