Wednesday, 8 July 2020

ಜೀವನ ಮೈತ್ರಿ ಭಾಗ ೧೦೩(103)



ಜೀವನ ಮೈತ್ರಿ ಭಾಗ ೧೦೩


      ದಿನಗಳು, ತಿಂಗಳುಗಳು ಶರವೇಗದಲ್ಲಿ ಉರುಳುತ್ತಿದ್ದವು. ತಿಂಗಳು ತುಂಬುತ್ತಿದ್ದಂತೆ ಸೌಜನ್ಯ  ತನ್ನ ತವರನ್ನು ಬಹಳ ಹಚ್ಚಿಕೊಂಡಿದ್ದಳು.ಹಠಮಾರಿ ಪತಿ ಕೇಶವ ಮಾತ್ರ ಮತ್ತೆ ಮಾವನ ಮನೆಯ ಕಡೆ ತಲೆಹಾಕಲು ನಿರಾಕರಿಸುತ್ತಿದ್ದ.ಬಾಣಂತನಕ್ಕೆ ಒಬ್ಬ ವಯಸ್ಸಾದ ಹೆಂಗಸನ್ನು ಮಾತನಾಡಿ ವ್ಯವಸ್ಥೆ ಮಾಡಿದ್ದ ಕೇಶವ.ಸೌಜನ್ಯ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದಳು.ಪತಿಯ ಕಾಳಜಿಯ ವ್ಯವಸ್ಥೆ ಬೇಡವೆನ್ನಲಾಗದು...ತವರಿನ ಆಸರೆಗೆ ಮನಸು ಬಯಸದೆ ಸುಮ್ಮನಾಗದು. ತುಂಬು ಗರ್ಭಿಣಿಯ ಆರೈಕೆ, ಬಾಣಂತನ ..ತಿಳಿದವರು ಯಾರು ಬೇಕಾದರೂ ಮಾಡಬಹುದು.ಆದರೆ ಅಮ್ಮ ಮಾಡಿದಂತಾಗುತ್ತದೆಯೇ..? ಪುಟ್ಟ ಮನೆ ,ಸಣ್ಣ ಸಂಪಾದನೆಯಲ್ಲಿ ಬದುಕುವುದು ಗರ್ಭಿಣಿ ಸೌಜನ್ಯಗೆ ಸಾಕುಸಾಕಾಗಿ ಹೋಗಿತ್ತು.ಆದರೆ ಪತಿಯ ಮಾತನ್ನು ಮೀರುವಂತಿಲ್ಲ..ಒಂದೊಂದು ಸಲ ನಾನಿಷ್ಟು ವಿದ್ಯೆ ಸಂಪಾದಿಸಿದ್ದೂ ವ್ಯರ್ಥ.. ಅದರಿಂದ ದುಡಿಮೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ..ಎಂದೆಲ್ಲ ಯೋಚಿಸಿ ಖಿನ್ನತೆಗೆ ಜಾರುತ್ತಿದ್ದಳು.

       ನರಸಿಂಹ ರಾಯರು ಮಗಳು ಅಳಿಯ ದೂರವಾದ ಮೇಲೆ ಮಡದಿಯಲ್ಲಿ ಮಾತನಾಡುವುದನ್ನೇ ಕಡಿಮೆ ಮಾಡಿದ್ದರು.ತಾನಾಯಿತು ತನ್ನ ಉದ್ಯೋಗ, ಆಧ್ಯಾತ್ಮ ಚಿಂತನೆಗಳಾಯಿತು ಎಂದು ಬದುಕುತ್ತಿದ್ದರು.ರೇಖಾಗೆ ತನ್ನ ಮುಂಗೋಪದಿಂದಾದ ಎಡವಟ್ಟನ್ನು ತಾನೇ ಸರಿಪಡಿಸಬೇಕಷ್ಟೇ . ಇಲ್ಲವಾದಲ್ಲಿ ಮಗಳು ಅಳಿಯನಂತೆ ಪತಿಯೂ ದೂರವಾದರೆ..ಎಂಬ ಚಿಂತೆ ಮೂಡುತ್ತಿತ್ತು.


      ಸೌಜನ್ಯಗೆ ಒಂಭತ್ತು ತಿಂಗಳು ತುಂಬಿತು.ಕೇಶವ ಮಡದಿಯನ್ನು ತಪಾಸಣೆಗಾಗಿ ಡಾಕ್ಟರ್ ಶಾಂತ ಅವರ ಬಳಿ ಕರೆದೊಯ್ದನು.ಡಾಕ್ಟರ್  ..".ಇನ್ನು ಕೆಲವೇ ದಿನಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ.ಇಲ್ಲಿಯೇ ಉಳಿಯುವುದು ಒಳಿತು" ಎಂದರು.ಹಲವು ದಿನ ನಿಂತರೆ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವೇ ಎಂಬ ಚಿಂತೆ ಕೆಶವನಿಗೆ.ಅವನ ಚಿಂತೆಯನ್ನು ಕಂಡು "ಏನ್ರೀ..ನೀವು..ಮಡದಿ ಮಗುವಿನ ಆರೋಗ್ಯ ಮುಖ್ಯವಾ..? ಅಲ್ಲ.. ದುಡ್ಡು ಖರ್ಚಾಗದಿರುವುದು ಮುಖ್ಯವೋ..? ಅಷ್ಟೂ ದುಡ್ಡಿಲ್ಲದಿದ್ದರೆ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇದೆ.ಅಲ್ಲಿ ನೋಡಿಕೊಳ್ಳಿ..
"ಎಂದರು..ಕೊನೆಗೆ ಕೇಶವ ಒಪ್ಪಿದ.


      ಆಸ್ಪತ್ರೆಯಲ್ಲಿ ಸೌಜನ್ಯಳನ್ನು ಜೊತೆಗೆ ನಿಲ್ಲಲು ಬಾಣಂತನ ಮಾಡಲು ಒಪ್ಪಿದ್ದ ಹಿರಿಯ ಹೆಂಗಸನ್ನು ಕೇಳಿಕೊಂಡರು.ಆಕೆ ಕೇಶವ ಕೊಡುವೆನೆಂದು ಹೇಳಿದ್ದಕ್ಕಿಂತ ಹೆಚ್ಚಿನ ದುಡ್ಡಿಗೆ ಬೇರೊಂದು ಮನೆಗೆ ಬಾಣಂತಿಯ ಆರೈಕೆಗೆ ತೆರಳಿ ಆಗಿತ್ತು. ಕೇಶವ  ಮುಂದೆ ಏನು ಮಾಡಬಹುದೆಂದು ಯೋಚಿಸತೊಡಗಿದ.. ಏನಾದರೂ.. ಧೈರ್ಯದಿಂದ ಎದುರಿಸಬೇಕು ಎಂದುಕೊಂಡ ಕೇಶವ.. ಸಂಜೆ ಆಫೀಸಿನಿಂದ ಮನೆಗೆ ತೆರಳಿ ಅಡುಗೆ ಮಾಡಿ ತರುತ್ತಿದ್ದ ಆಸ್ಪತ್ರೆಗೆ..ಮತ್ತೆ ಆಸ್ಪತ್ರೆಯಲ್ಲಿ ಸೌಜನ್ಯಳ ಜೊತೆಗಿದ್ದು ಬೆಳ್ಳಂಬೆಳಗ್ಗೆ ಪುನಃ ಮನೆಗೆ ತೆರಳಿ ಅಡುಗೆಮಾಡಿ ಬಿಸಿ ಬಿಸಿ ತಂದುಕೊಡುತ್ತಿದ್ದ. ನಂತರ ತನ್ನ ಉದ್ಯೋಗಕ್ಕೆ ತೆರಳುತ್ತಿದ್ದ.ಮಧ್ಯದಲ್ಲಿ ಔಷಧ ಏನಾದರೂ ಬೇಕಾದರೆ ತಂದುಕೊಡುವಂತೆ ನರ್ಸ್ ನಲ್ಲಿ ಹೇಳಿ ವ್ಯವಸ್ಥೆ ಮಾಡಿ ಹೋಗುತ್ತಿದ್ದ.

    ಆಸ್ಪತ್ರೆಯಲ್ಲಿ ಒಬ್ಬಳೇ ಮಲಗಿರುತ್ತಿದ್ದ ಸೌಜನ್ಯಳ ಕಣ್ಣಂಚಿನಿಂದ ಕೆಲವೊಮ್ಮೆ ಹನಿಗಳು ತೊಟ್ಟಿಕ್ಕುತ್ತಿದ್ದವು.ಹೆಣ್ಣಿಗೇಕೆ ಈ ಸತ್ವ ಪರೀಕ್ಷೆ..ಹೆಣ್ಣಿಗೇಕೆ ಗಂಡ ಹೇಳಿದಂತೆಯೇ ನಡೆಯಬೇಕೆಂಬ ಸಾಮಾಜಿಕ ಕಟ್ಟುಪಾಡುಗಳು.. ಗಂಡು ತನ್ನಿಚ್ಛೆಯಂತೆ ಬದುಕಬಹುದಾದರೆ ಹೆಣ್ಣಿಗೇಕೆ ಆ ಸ್ವಾತಂತ್ರ್ಯ ಇಲ್ಲ..ಅಂತಹ ಮುಕ್ತ ವಾತಾವರಣವಿದ್ದರೆ ನಾನೀಗ ಅಮ್ಮ ಅಪ್ಪನ ಮಡಿಲಲ್ಲಿ ನನ್ನ  ತುಂಬು ಗರ್ಭದ ಜತೆ ಕನಸು ಕಾಣುತ್ತಾ ಇರುತ್ತಿದ್ದೆ.. ಎಂದೆಲ್ಲ ಯೋಚನೆಗಳು ಬರಬೇಡವೆಂದರೂ ಮತ್ತೆ ಮತ್ತೆ ಬಂದು ಕಾಡುತ್ತಿದ್ದವು.

           ********


       ಗರ್ಭಿಣಿ ಮೈತ್ರಿಗೆ ಆರು ತಿಂಗಳುಗಳು ತುಂಬಿದವು. ಆಫೀಸಿಗೆ ಹೋಗುವುದು ಕಷ್ಟವೆಂದು ಮನೆಯಲ್ಲೇ ಕುಳಿತು ಕಾರ್ಯ ನಿರ್ವಹಿಸಲು ಕಂಪೆನಿಯಿಂದ ಒಪ್ಪಿಗೆ ಪಡೆದಿದ್ದಳು.ಆವಳಿಗೆ ಸತತ ಕುಳಿತು ಕಾರ್ಯನಿರ್ವಹಿಸಲು ಕಷ್ಟವಾಗತೊಡಗಿತು. ಬೆನ್ನು ಮತ್ತು ಹೊಟ್ಟೆ ನೋವು ತೀವ್ರವಾಯಿತು. ಊರಿನಿಂದ ಕರೆಮಾಡಿದ ಹಿರಿಯರು ಆರೋಗ್ಯದ ಅನುಪಾನ, ಮನೆಮದ್ದುಗಳನ್ನು ಹೇಳುತ್ತಿದ್ದರು.. ಏನು ಮಾಡಿದರೂ ಕಡಿಮೆಯಾಗಲಿಲ್ಲ.ತಡೆಯಲು ಅಸಾಧ್ಯವಾದಾಗ ವೈದ್ಯರಲ್ಲಿಗೆ ಕರೆದೊಯ್ಯಬೇಕಾಯಿತು. ಡಾಕ್ಟರ್ ಪರಿಶೀಲಿಸಿ "ಗರ್ಭಪಾತ್ರದ ಕೆಳಭಾಗ ತೆಳ್ಳಗಾಗಿದೆ. ಇನ್ನು ಬಹಳ ಜಾಗ್ರತೆ ಬೇಕು. ಎರಡು ದಿನ ಫುಲ್ ಬೆಡ್ ರೆಸ್ಟ್ ಬೇಕು.. ಅದಕ್ಕೋಸ್ಕರ  ಅಡ್ಮಿಟ್ ಆಗಿ" ಎಂದು ಹೇಳಿದರು. ಶಾಸ್ತ್ರಿ ನಿವಾಸದಲ್ಲಿ ಸಹಜವಾಗಿಯೇ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಅಜ್ಜಿ "ಅವಳು ಕೆಲಸ ಬಿಡುವುದೇ ಒಳಿತು.ತುಂಬ ಹೊತ್ತು ಕುಳಿತುಕೊಂಡು ಕಂಪ್ಯೂಟರ್ ಮುಂದೆ ಕೆಲಸ ಮಾಡುವುದು ಬೇಡ "ಎಂದು ಒಂದೇ ಸಮನೆ ಹೇಳುತ್ತಿದ್ದರು.ಗರ್ಭಿಣಿಗೆ ಅತ್ತಿತ್ತ ಓಡಾಡುವ, ಬೇರೆ ಬೇರೆ ಭಂಗಿಯಲ್ಲಿ ಕೆಲಸ ಮಾಡುವ ಅವಕಾಶ ಬೇಕು .. ಎಂದು ಅವರ ಅಭಿಪ್ರಾಯವಾಗಿತ್ತು.

    ಮಂಗಳಮ್ಮನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಬೇಗ ಬೇಗನೆ ಬಟ್ಟೆ ಬರೆಯನ್ನು ತುಂಬಿಸಿಕೊಂಡು ರೆಡಿಯಾಗಿದ್ದರು.ಹೆಣ್ಣು ಮಕ್ಕಳು ಯಾರು ಜೊತೆಗಿಲ್ಲದೆ ಆಸ್ಪತ್ರೆಯಲ್ಲಿ ಮಗಳು ಹೇಗೆ ಇರುತ್ತಾಳೋ ಎಂದು ಆತಂಕ ಒಂದು ಕಡೆ.ಅಳಿಯ ಕಿಶನ್ ಚೆನ್ನಾಗಿ ನೋಡಿಕೊಂಡಾನು ಎಂಬ ಭರವಸೆ ಮತ್ತೊಂದು ಕಡೆ.ಭಾಸ್ಕರ ಶಾಸ್ತ್ರಿಗಳು ಮಡದಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೊರಟರು ‌.ಸದಾ ಅಕ್ಕನನ್ನು ರೇಗಿಸುತ್ತಿದ್ದ ತಮ್ಮ ಮಹೇಶನ ಮುಖ ಕಳೆಗುಂದಿತು..

      ವಿಷಯ ತಿಳಿಯುತ್ತಿದ್ದಂತೆ ಶಂಕರ ಶಾಸ್ತ್ರಿಗಳು,ಗಾಯತ್ರಿ ಆಸ್ಪತ್ರೆಗೆ ಧಾವಿಸಿದ್ದರು.ಮೈತ್ರಿಯ ಜೊತೆಗೆ ಗಾಯತ್ರಿ ಚಿಕ್ಕಮ್ಮ ತಾನು ನಿಂತಳು.."ಅಕ್ಕ ಬರುವಲ್ಲಿವರೆಗೆ ನಾನು ನಿಲ್ಲುತ್ತೇನೆ.. ನೀವು ಒಂದು ದಿನ ರಜೆ ಹಾಕಿ ಮನೆಕಡೆ ನೋಡಿಕೊಳ್ಳಿ "ಎಂದು ಪತಿಯಲ್ಲಿ ಹೇಳಿದರು..


                  *****

          ಮುರಳಿ ಹಾಗೂ ಮಹತಿಯ ಸಂಸಾರ ಒಂದು ಗತಿಯಲ್ಲಿ ಸಾಗುತ್ತಿತ್ತು. ಮುರಳಿ ಯಾವುದಕ್ಕೂ ಮಡದಿಯನ್ನು ಆಕ್ಷೇಪಿಸುತ್ತಿರಲಿಲ್ಲ... ಒತ್ತಾಯಿಸುತ್ತಿರಲಿಲ್ಲ.. ಊರಿಗೆ ನಾಲ್ಕು ಸಲ ಹೋಗಿ ಬಂದಾಗಲೂ ಒಬ್ಬನೇ ಹೋಗಿ ಬಂದಿದ್ದ.ಮಡದಿಯಲ್ಲಿ ಬರುತ್ತೀಯಾ...ಎಂದು ಕೇಳುತ್ತಿದ್ದ.. ಅವಳು ನಾನು ಬರುವುದಿಲ್ಲ ..ಎಂದರೆ ಅಷ್ಟೇ.. ಮುಂದೆ  ಮಾತನಾಡುವುದು ಬಿಟ್ಟು ತಾನೇ ಹೋಗಿಬರುತ್ತಿದ್ದ.

       ಅಮ್ಮ ಶಶಿ ಆರಂಭದಲ್ಲಿ ಮುರಲಿಯಲ್ಲಿ ಹೆಚ್ಚು ಮಾತನಾಡದಿದ್ದರೂ ನಂತರ ಕೆಟ್ಟ ಘಟನೆಯನ್ನು ಮರೆತು ಬಿಟ್ಟಿದ್ದರು..ಮಗನಲ್ಲಿ ಬಾಯ್ತುಂಬಾ ಮಾತನಾಡಿ ,ಮಹತಿಯ ಸುದ್ದಿಯನ್ನು ಕೇಳುತ್ತಿದ್ದರು...ಮಗ ಬಂದನೆಂದರೆ ಅವನಿಗೆ ಇಷ್ಟವಾದ ಅಡುಗೆ ,ತಿಂಡಿಗಳನ್ನು ತಪ್ಪದೇ ಮಾಡಿ ಇಡುತ್ತಿದ್ದರು..ಹಣ್ಣು ಹಂಪಲು ತರಕಾರಿಗಳನ್ನು ಬೆಂಗಳೂರಿಗೆ ಕೊಟ್ಟು ಕಳುಹಿಸುತ್ತಿದ್ದರು. ಆದರೆ ಅವುಗಳು ಯಾವುವೂ ಮಹತಿಯ ಮನಸ್ಸನ್ನು ಬದಲಾಯಿಸಲಿಲ್ಲ. ಒಮ್ಮೆ ಆಕೆಗೆ ಋಣಾತ್ಮಕ ಭಾವನೆ ಬಂದರೆ ಮುಗಿಯಿತು. ಅಷ್ಟು ಬೇಗನೆ ಮನಸ್ಸು ಬದಲಾಗುವುದಿಲ್ಲ..ದೇಹದ ಗಾಯ ಬೇಗ ಮಾಸುತ್ತದೆ ..ಆದರೆ ಮನಸ್ಸಿಗಾದ ಗಾಯ ಮಾಸಲು ಸಮಯ ಬೇಕು.. ಕೆಲವೊಮ್ಮೆ ಗಾಯಮಾಸುವುದೇ ಇಲ್ಲ.ವರ್ಷಾನುಗಟ್ಟಲೆ ಉಳಿದು ಬಿಡುತ್ತವೆ.


       ಮುರಳಿಗೆ ಉದ್ಯೋಗ ಸಿಕ್ಕಿದ ನಂತರ ಪ್ರತಿ ತಿಂಗಳು ಅವನ ಸಂಬಳದಲ್ಲಿ ನಿರ್ದಿಷ್ಟ ಮೊತ್ತ ತಂದೆ-ತಾಯಿಗೆ ಕಳುಹಿಸಿಕೊಡುತ್ತಿದ್ದ. ಯಾವಾಗ ಶಶಿ ಮತ್ತು ಮಹತಿಗೆ ಕಿತ್ತಾಟವಾಯಿತೋ ಅಂದಿನಿಂದ  ಮನೆಗೆ ಹಣ ಕಳುಹಿಸುವುದು ನಿಲ್ಲಿಸಿದ. ಮುರಲಿಗೆ ತಾಯಿಯ ನಡೆಯಿಂದ ಬಹಳವೇ ಬೇಸರವಾಗಿದೆ. ಜೊತೆಗೆ ಮಹತಿ ಎಲ್ಲಾ ಹಣಕಾಸಿನ ವಿಚಾರದಲ್ಲಿ ಬಹಳ ಶಿಸ್ತಿನಿಂದ ಲೆಕ್ಕಚಾರ ಇಡುತ್ತಿದ್ದಳು. ಗಂಡನ ಸಂಪಾದನೆ ಒಂದು ಚೂರೂ ಹೊರ ಹೋಗದಂತೆ ಎಚ್ಚರವಹಿಸಿ ಗಂಡನಿಗೆ ಸಲಹೆ ನೀಡುತ್ತಿದ್ದಳು.ಮಹತಿಯೊಂದಿಗಿನ ಬೇಸರ ಅವಳ ಕಾಳಜಿ,ಅನುರಾಗ ಬಾಂಧವ್ಯದಲ್ಲಿ ಬಹಳ ಬೇಗ ದೂರವಾಗಿತ್ತು..ನವ ಜೋಡಿ ಶೃಂಗಾರ ಭಾವದ ಗುಂಗಿನಲ್ಲಿ ಮತ್ತೆ ಒಟ್ಟಾಗಿ ತಮ್ಮ ಭವಿಷ್ಯದತ್ತ ಗಮನಹರಿಸಿದರು.



       "ನೀವು ಕಷ್ಟಪಟ್ಟು ದುಡಿದ ಹಣವನ್ನು ಬೇಕಾಬಿಟ್ಟಿ ಮನೆಯವರಿಗೆ ಕಳುಹಿಸುತ್ತಿದ್ದರೆ ಅವರಿಗೆ ಅದರ ಬೆಲೆ ತಿಳಿದಿರುವುದಿಲ್ಲ. ಆದ್ದರಿಂದ ಆ ರೀತಿ ಹಣ ಕಳುಹಿಸುವುದು ಬೇಡ .. ಅಲ್ಲಿ ನಿಮ್ಮ ತಮ್ಮನೂ ಇದ್ದಾನೆ ..ಅವನೂ ದುಡಿದು ಸಂಪಾದಿಸಲಿ.". ಎಂದು ಖಡಕ್ಕಾಗಿ ಹೇಳಿದಳು. "ಅವರ ಜೀವನಕ್ಕೆ ತಕ್ಕ ದುಡಿಯುವಂತಹ ಶಕ್ತಿ ಅವರಿಗಿದೆ. ಇಲ್ಲದಿದ್ದಲ್ಲಿ ಇಷ್ಟು ಕಾರುಬಾರು ಮಾಡುತ್ತಿರಲಿಲ್ಲ. .."ಎಂಬುದು ಅವಳ ವಾದ. ಮುರಲಿಗೆ ಮಡದಿಯ ಮಾತನ್ನು ತಿರಸ್ಕರಿಸುವಂತೆ ಇರಲಿಲ್ಲ .


         ವೆಂಕಟನಿಗೆ ಹೇಳುವಂತಹ ಸಂಪಾದನೆ ಏನೂ ಇರಲಿಲ್ಲ. ಇದ್ದದ್ದು ಅವನ ಖರ್ಚಿಗೆ, ಮನೆಗೆ ಸಣ್ಣಪುಟ್ಟ ಸಾಮಾನುಗಳನ್ನು ತರುವುದಕ್ಕೆ ಸರಿಹೋಗುತ್ತಿತ್ತು. ಹಿರಿಯರಿಂದ ಬಂದ ಸಾಗುವಳಿ ಭೂಮಿ ಧಾರಾಳವಿತ್ತು..ತೀರಾ ಇತ್ತೀಚಿನವರೆಗೂ ಮುತುವರ್ಜಿಯಿಂದ ಕೃಷಿ ಮಾಡಿಸುತ್ತಿದ್ದರು. ಆದರೆ ಈಗ ಮಗನ ಸಂಪಾದನೆ ಕುಳಿತಲ್ಲಿಗೇ ಸಿಗುತ್ತಿದ್ದುದರಿಂದ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿರಲಿಲ್ಲ.. ಹಿಂದೆ ದುಡಿದು ಕೂಡಿಟ್ಟ ದುಡ್ಡಿದ್ದರೂ ಅದನ್ನು ಬಳಸದೆ ಜೋಪಾನವಾಗಿ ಇಟ್ಟಿದ್ದರು.ಮಗನ ಸಂಪಾದನೆಯಿಂದ ಖುಷಿಯಾಗಿದ್ದ ಶಂಕರ ರಾಯರು ಶಶಿ ದಂಪತಿಗಳಿಗೆ ಈಗ ಒಮ್ಮಿಂದೊಮ್ಮೆಲೆ  ಕೈ ಕಟ್ಟಿದಂತಾಯಿತು.

      ಮಹತಿ ಹಠಮಾರಿಯಾದರೂ ಬಹಳ ಬುದ್ಧಿವಂತೆ.. ತನ್ನ ಕುಟುಂಬದ ಒಳಿತಿಗಾಗಿ ಸದಾ ಚಿಂತನೆ ಮಾಡುತ್ತಿರುವವಳು. ಅವಳ ದೂರದರ್ಶಿತ್ವ, ಹಣವನ್ನು ಕೂಡಿಡುವ ಕ್ರಮ ಮುರಳಿಗೆ ಇಷ್ಟವಾಗಿತ್ತು. ಮಹತಿ ಉದ್ಯೋಗಕ್ಕೆ ಸೇರಿದಂದಿನಿಂದಲೇ ಎಲ್ಲ ಹಣವನ್ನು ಕೂಡಿಡುತ್ತಿದ್ದಳು. ಅವಳ ಖರ್ಚಿಗೆ ಅಪ್ಪ ಕೊಡುತ್ತಿದ್ದ ದುಡ್ಡು ಸಾಕಾಗುತ್ತಿತ್ತು.. ಇದರಿಂದ ಅವಳಲ್ಲಿ ಮುರಳಿಗಿಂತ ಅಧಿಕ ಉಳಿತಾಯದ ಹಣವಿತ್ತು.


       "ನಾವು ಒಂದು ಫ್ಲ್ಯಾಟ್ ಕೊಳ್ಳೋಣ" ಎಂದು  ಮಹತಿ ಪತಿಯನ್ನು ಒತ್ತಾಯಿಸಿದಳು. ಇಬ್ಬರ ಉಳಿತಾಯದ ಹಣ ,ಮಾಡಿಸಿದ ಎಲ್ಐಸಿ ಪಾಲಿಸಿಗಳು ಹಾಗೂ ತೆಗೆದುಕೊಳ್ಳಬಹುದಾದ ಲೋನ್ ಎಲ್ಲವನ್ನು ಮಹತಿ ನಿಖರವಾಗಿ ಲೆಕ್ಕ ಹಾಕಿಕೊಂಡು ಪ್ಲಾನ್ ಮಾಡಿದ್ದಳು. ಮನೆ ಹುಡುಕಾಟ ಆರಂಭವಾಯಿತು. ತಮ್ಮ ಉದ್ಯೋಗಕ್ಕೆ ಅನುಕೂಲವಾಗುವಂತಹ ಸ್ಥಳದಲ್ಲಿ ಇರುವ ಫ್ಲಾಟುಗಳ ಕಡೆಗೆ ಗಮನಹರಿಸಿದರು.ಮಗಳು ಅಳಿಯ ಮನೆ ಹುಡುಕುವುದು ಗೊತ್ತಾದ ಕೂಡಲೇ ಸತ್ಯನಾರಾಯಣ ರಾಯರು ಅಳಿಯನಲ್ಲಿ "ಏನಾದರೂ ಸಹಾಯ ಬೇಕಾದರೆ ಕೇಳಲು ಹಿಂಜರಿಯಬೇಕಿಲ್ಲ "ಎಂದರು.


       ಮುರಳಿ ಮಹತಿ ಆಗಾಗ ಮಹತಿಯ ತವರು ಮನೆಗೆ ತೆರಳುತ್ತಿದ್ದರು. ಅಲ್ಲಿ ಬಹಳ ಗೌರವಾದರಗಳು ದೊರೆಯುತ್ತಿದ್ದವು.ಅಷ್ಟೇ ಅಲ್ಲದೆ ಸತ್ಯನಾರಾಯಣರವರು ಮತ್ತು ಸ್ವರ್ಣ ಎಲ್ಲಾ ವಿಧದಿಂದಲೂ ಮಗಳು ಅಳಿಯನ ಕಾಳಜಿ ಮಾಡುತ್ತಾ, ಸಲಹೆ ಕೊಡುತ್ತಾ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದರು. ಇದರಿಂದಾಗಿ ಮುರಳಿ ದಿನದಿಂದ ದಿನಕ್ಕೆ ಮಡದಿಯ ತವರಿನ ಕಡೆಗೆ ವಾಲುತ್ತಿದ್ದ.. ಅವರೇ ಆಪ್ತವಾಗತೊಡಗಿದರು.. ಸ್ವಲ್ಪ ಸ್ವಲ್ಪವೇ ತನ್ನ ತಂದೆ-ತಾಯಿ, ತಮ್ಮನಿಂದ ಮಾನಸಿಕವಾಗಿ ದೂರವಾಗುತ್ತಿದ್ದ..


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
09-07-2020.



2 comments: