#momspresso Kannada_ ವಾರದ ಬ್ಲಾಗಿಂಗ್ ಸ್ಪರ್ಧೆ
#ನಾನೂ ಬರೆಯುತ್ತೇನೆ
#ಸಂಬಂಧಗಳ ಸುಳಿಯಲ್ಲಿ ಬದುಕು
ಕುಟುಂಬವು ನಮಗೆ ಸುರಕ್ಷಿತ ಭಾವವನ್ನು ಮೂಡಿಸುವ, ಸಂತಸದ ಹೊನಲನ್ನು ಹರಿಸುವ, ದುಃಖ ದುಮ್ಮಾನಗಳಲ್ಲಿ ಬೆಂಬಲವಾಗಿ ನಾವಿದ್ದೇವೆ ಎಂದು ಧೈರ್ಯ ನೀಡುವ ಒಂದು ಸೀಮಿತ ವ್ಯವಸ್ಥೆ. ಪತಿ ಪತ್ನಿ ಮಕ್ಕಳು ಎಂಬ ಸಣ್ಣ ಕುಟುಂಬದಿಂದ ಹಿಡಿದು ಹತ್ತಾರು ಮಂದಿ ಕೂಡಿಬಾಳುವ ಅವಿಭಕ್ತ ಕುಟುಂಬದವರೆಗೆ ಎಲ್ಲಾ ಕಡೆಯು ಬಾಂಧವ್ಯಗಳು ಸಿಹಿಕಹಿಯ ಹೂರಣ. ಕಹಿಯನ್ನು ನುಂಗಿಕೊಂಡು ಸಿಹಿಯನ್ನು ಅನುಭವಿಸಿ, ಮೆಲುಕು ಹಾಕಿ ಬದುಕಿದರೆ ಬಾಳು ಸುಗಮವಾಗಿ ಸಾಗಲು ಸಾಧ್ಯ.
ಕೌಟುಂಬಿಕ ಬಾಂಧವ್ಯಗಳಲ್ಲಿ ಪತಿಪತ್ನಿ ಸಂಬಂಧ, ಅತ್ತೆಮಾವ ಮಗಸೊಸೆ ಸಂಬಂಧ, ಅತ್ತಿಗೆ ನಾದಿನಿ, ಅತ್ತಿಗೆ ಭಾವಮೈದುನಂದಿರು, ಸೊಸೆಯ ತವರಸಂಬಂಧ, ಪತಿಯ ಕುಟುಂಬದ ಬಂಧುಬಾಂಧವರು, ಅತ್ತೆಸೊಸೆ ಬಾಂಧವ್ಯ ..
ಹೀಗೆ ಜಾಲ ದೊಡ್ಡದು. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಜಾಣ್ಮೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ. ನೀರು ಹೇಗೆ ತಾನು ಆವರಿಸಿದ ಪಾತ್ರೆಯ/ಜಾಗದ ಆಕಾರಕ್ಕೆ ಹೊಂದಿಕೊಳ್ಳುವುದೋ ಹಾಗೆಯೇ ನಾವು ಕೂಡಾ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ.
ಕುಟುಂಬದಲ್ಲಿ ಪತಿಪತ್ನಿ ಸಂಬಂಧ ಪ್ರಮುಖವಾದುದು. ಅಲ್ಲಿ ಸಂಶಯ, ಭಿನ್ನತೆ ಮೂಡದಂತೆ ಎಚ್ಚರಿಕೆವಹಿಸುವುದು ಅಗತ್ಯ. ಏರುಪೇರುಗಳಾದಲ್ಲಿ ಕೂಡಲೇ ತಮ್ಮೊಳಗೆ ಬಗೆಹರಿಸಿಕೊಳ್ಳುವ ಕ್ರಮ ರೂಢಿಸಿಕೊಳ್ಳಬೇಕು. ಎಲ್ಲವನ್ನೂ ಇನ್ನೊಬ್ಬರ ಮುಂದಿರಿಸಿದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಸಮಸ್ಯೆಗಳು ಮತ್ತಷ್ಟೂ ಜಟಿಲವಾಗುವ ಸಾಧ್ಯತೆ ಇದೆ. ತೀರಾ ಅನಿವಾರ್ಯವಾದಾಗ ಆಪ್ತರ ಸಲಹೆ ಪಡೆದುಕೊಂಡು ಮುಂದುವರಿಯಬೇಕು. ಇನ್ನೊಂದು ಅತ್ಯಂತ ಹೆಚ್ಚು ಸದ್ದುಮಾಡುವ, ಸುದ್ದಿಯಲ್ಲಿರುವ, ಕೌಟುಂಬಿಕ ಗುದ್ದಾಟಗಳಿಗೆ ಕಾರಣವಾಗುವ ಬಾಂಧವ್ಯವೆಂದರೆ ಅತ್ತೆಸೊಸೆ ಬಾಂಧವ್ಯ. ಸೊಸೆ ಮಾಡಿದ ಕೆಲಸಗಳಲ್ಲಿ, ಆಡಿದ ಮಾತುಗಳಲ್ಲಿ ತಪ್ಪನ್ನೇ ಹುಡುಕುವ ಅತ್ತೆ, ಅತ್ತೆಯ ನಡತೆ, ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ನೊಂದುಕೊಳ್ಳುವ, ಪತಿಯ ಬಳಿ ಹೇಳಿ ಅಲವತ್ತುಕೊಳ್ಳುವ ಸೊಸೆ. ಈ ಕಿತ್ತಾಟ ಎಲ್ಲಾ ಕುಟುಂಬಗಳಲ್ಲಿಯೂ ಸರ್ವೇ ಸಾಮಾನ್ಯ. ಕೆಲವು ಕಡೆ ವಿಪರೀತಕ್ಕೆ ಹೋಗಲೂಬಹುದು. ಅತ್ತೆಸೊಸೆ ಬಾಂಧವ್ಯ ದಲ್ಲಿ ಸಮಾಜ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ನಡೆಯ ಕುರಿತು ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಎಂದಿನಂತೆ ಅಂದೂ ಕೂಡ ಬೆಳಗ್ಗೆ ವಾಟ್ಸಪ್, ಫೇಸ್ಬುಕ್ ಮೇಲೆ ಕಣ್ಣಾಡಿಸಿದೆ. ವಿಡಿಯೋವೊಂದು ಮನಕಲುಕಿತ್ತು. ಸಮಾಜದಲ್ಲಿ ಸಾವಿರಕ್ಕೊಂದು ಕುಟುಂಬದಲ್ಲಿ ನಡೆವ ವಿಚಾರವನ್ನು ಸರ್ವೇ ಸಾಮಾನ್ಯ ಎಂಬಂತೆ ಬಿಂಬಿಸಲಾಗಿತ್ತು. ಒಂದು ಕುಟುಂಬದ ಚಿತ್ರಣ. ಮುಂಗೋಪಿ, ಕಟು ಹೃದಯಿ ಸೊಸೆ. ತನ್ನ ವೃದ್ಧ ಅತ್ತೆ ಮಾವನನ್ನು ಪೀಡಿಸಿ ಕಿರುಕುಳ ನೀಡಿ ವೃದ್ಧಾಶ್ರಮಕ್ಕೆ ಸೇರಿಸಲು ಕಾರಣಳಾದವಳು. ಇದು ವಿಡಿಯೋದ ಸಾರಾಂಶ. ಇದನ್ನು ಕಂಡು ನನಗೆ ಸ್ವಲ್ಪ ವಿಚಿತ್ರ ಅನಿಸಿತು. ಅದೆಷ್ಟು ಸೊಸೆಯಂದಿರು ತಮ್ಮ ಅತ್ತೆ ಮಾವನ ಕಿರುಕುಳ ತಾಳಲಾರದೇ ಉರುಳಿಗೆ ಕೊರಳೊಡ್ಡಿದ್ದಾರೋ ಏನೋ..ಎಷ್ಟು ಜನ ಮೌನಗೌರಿಯಾಗಿ ಎಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದಾರೋ ಏನೋ...ಅಂತಹ ವಿಷಯಗಳು ಸುದ್ದಿಯಾಗುವುದಿಲ್ಲ.
ಹೆಣ್ಣೊಬ್ಬಳು ತಾಯ್ತಂದೆಯರ ಪ್ರೀತಿಯಲ್ಲಿ ಬೆಳೆಯುತ್ತಾಳೆ. ಮದುವೆಯೆಂಬ ಮೂರಕ್ಷರದ ಬಂಧನದೊಂದಿಗೆ ಗಂಡನ ಮನೆಗೆ ಸೇರುತ್ತಾಳೆ. ಕೆಲವರಿಗೆ ಇದು ಅನುರಾಗ ಬಂಧನವಾದರೆ ಇನ್ನು ಕೆಲವರಿಗೆ ಸಹಿಸಲೂ ಆಗದ ಬಿಡಿಸಿಕೊಳ್ಳಲೂ ಆಗದ ಬಂಧನ. ಸೊಸೆಯಾಗಿ ಮನೆಗೆ ಬಂದ ಮಹಾಲಕ್ಷ್ಮಿಯನ್ನು ಪ್ರೀತಿಯಿಂದ ಕಾಣಬೇಕು. ತಪ್ಪಾಗುತ್ತಿದ್ದರೆ ಪ್ರೀತಿಯಿಂದ ತಿಳಿಹೇಳಬೇಕು. ಆಗಾಗ ತವರುಮನೆಗೆ ತೆರಳುವ ಅವಕಾಶ ನೀಡಬೇಕು. ಆಕೆಯ ತವರ ಬಂಧುಗಳು ಬಂದಾಗ ಮನೆಗೆ ಬರುವ ಇತರ ಬಂಧುಗಳಿಗೆ ಹೇಗೆ ಉಪಚರಿಸುತ್ತೇವೆಯೋ ಹಾಗೇ ಉಪಚರಿಸಬೇಕು. ಈ ರೀತಿ ಪ್ರೀತಿಯ ವಾತಾವರಣದಲ್ಲಿ ಬದುಕಿದ ಸೊಸೆ ತನ್ನ ಅತ್ತೆ ಮಾವನನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವಳು ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ಎಲ್ಲ ಸೊಸೆಯಂದಿರಿಗೂ ಈ ತರಹದ ಅತ್ತೆ ಮಾವ ದೊರೆಯುವುದಿಲ್ಲ. ಸೊಸೆಯ ಪ್ರತಿಯೊಂದು ಕೆಲಸದಲ್ಲೂ ತಪ್ಪನ್ನೇ ಹುಡುಕುವುದು, ತವರುಮನೆಯನ್ನು ಹಳಿಯುವುದು, ರೂಪದ ವಿಷಯದಲ್ಲಿ ಕೊಂಕು ನುಡಿಯುವುದು, ಎಷ್ಟು ಕೆಲಸ ಮಾಡಿದರೂ ಸಮಾಧಾನವಾಗದಿರುವುದು, ಸಿಕ್ಕಸಿಕ್ಕವರಲ್ಲಿ ದೂರುವುದು.... ಇತ್ಯಾದಿಗಳು ಹಲವು ಸೊಸೆಯಂದಿರ ಬಾಳನ್ನು ಹೈರಾಣವಾಗಿಸುತ್ತದೆ.
ಅತ್ತ ತವರು ಮನೆಯಲ್ಲೂ ಇದನ್ನು ಹೇಳಿಕೊಳ್ಳಲಾಗದೇ; ಇತ್ತ ಸಹಿಸಲೂ ಆಗದೆ ಹೆಣ್ಣುಮಗಳು ಮೌನಗೌರಿಯಾಗಿ ಬಿಡುತ್ತಾಳೆ. ಗಾಣದೆತ್ತಿನಂತೆ ಹಗಲಿರುಳು ದುಡಿದರೂ ಬೆಲೆಯಿಲ್ಲವಲ್ಲಾ ಎಂದು ಕೊರಗುತ್ತಾಳೆ. ಇದೇ ಕೊರಗು ಮುಂದೆ ಹಠಕ್ಕೆ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಕಾರಣವಾಗಬಹುದು. ಅದನ್ನೇ ಬಲ್ಲವರು ಹೇಳಿದ್ದು "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಎಂದು.
ಆಕೆ ಆಶಾ. ಸುಸಂಸ್ಕೃತ ಮನೆತನದ ಕುವರಿ. ಹಿರಿಯರಿಗೆ ಎದುರು ಮಾತನಾಡಬಾರದು ಎಂಬುದನ್ನು ಅರೆದು ಕುಡಿಸಿ ಬೆಳೆಸಿದ್ದಾರೆ ಆಕೆಯ ಹೆತ್ತವರು. ಎಲ್ಲರೊಂದಿಗೆ ನಗುನಗುತ್ತಲೇ ಬೆರೆತು ಚುರುಕಾಗಿ ಕಾಲೊನಿ ತುಂಬಾ ಓಡಾಡುತ್ತಿದ್ದಳು ಮದುವೆಯಾಗಿ ಬಂದ ಹೊಸದರಲ್ಲಿ.
ಆಕೆಯ ಅತ್ತೆ ಎಪ್ಪತ್ತೈದರ ಆಸುಪಾಸಿನವರು. ಮೊದಲೆಲ್ಲ ತನ್ನ ಮಗನಿಗೆ ಹುಡುಗಿ ಸಿಗಲಿಲ್ಲ ಎಂದು
ಕೊರಗುತ್ತಿದ್ದ ; ಒಮ್ಮೆಮಗನಿಗೆ ಹೆಣ್ಣು ಸಿಕ್ಕರೆ ಸಾಕು ಅನ್ನುತ್ತಿದ್ದ ಆಕೆ , ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಬದಲಾಗಿಬಿಟ್ಟಳು. ಆರಂಭದಿಂದಲೇ ಸೊಸೆಗೆ ಹಾಗೆ ಮಾಡು, ಹೀಗೆ ಮಾಡಿದ್ದು ಸರಿಯಿಲ್ಲ ಎಂದು ಬೀದಿಗೂ ಕೇಳುವಂತೆ ಗದರುತ್ತಿದ್ದಳು. ತಾನು ಒಂದು ಕುರ್ಚಿಯಲ್ಲಿ ಕುಳಿತು ಆದೇಶವನ್ನು ಮಾಡುತ್ತಿದ್ದಳೇ ಹೊರತು ಒಂದು ಕೆಲಸಕ್ಕೂ ಸೊಸೆಗೆ ಕೈ ಜೋಡಿಸಿದವಳಲ್ಲ. ಆಶಾ ಮನೆಗೆಲಸ ಪೂರೈಸಿ ಹೊರಗೆ ಉದ್ಯೋಗಕ್ಕೂ ತೆರಳುತ್ತಿದ್ದಳು. ಇದೇ ವಾಡಿಕೆ ಆಕೆ ಗರ್ಭಿಣಿಯಾದ ಎಂಟೂವರೆ ತಿಂಗಳವರೆಗೆ ನಡೆಯಿತು. ನಂತರ ಉದ್ಯೋಗಕ್ಕೆ ರಜೆ ಹಾಕಿದ ಮೇಲೆ ತುಸು ವಿಶ್ರಾಂತಿ ದೊರೆಯಿತೋ ಏನೋ ಪಾಪ...
ಗಂಡು ಮಗುವಿನ ತಾಯಿಯಾದಳು ಆಶಾ. ಬಾಣಂತನದ ನಲುವತ್ತನೇ ದಿನವೇ ವಾಪಸ್ ಕರೆಸಿಕೊಂಡಿದ್ದಳು ಅತ್ತೆ, ಮನೆಗೆಲಸ ಮಾಡಲು ಜನವಿಲ್ಲವೆಂದು. ಮನೆಗೆಲಸ, ಪುಟ್ಟಮಗುವಿನ ಆರೈಕೆ, ಕಟು ಮಾತುಗಳಿಂದ ಸೊರಗಿದ್ದಾಳೆ ಆಶಾ. ಕೃಶವಾದ ಆಶಾಳನ್ನು ನೋಡಿದರೆ ಅಪೌಷ್ಟಿಕತೆ ಎದ್ದು ಕಾಣುತ್ತದೆ. ಅಪರೂಪಕ್ಕೊಮ್ಮೆ ನೆರೆಹೊರೆಯವರನ್ನು ಕಂಡಾಗ ಬಲವಂತವಾಗಿ ಮುಖದ ಮೇಲೊಂದು ಹೂ ನಗೆ ಚಿಮ್ಮಿಸುತ್ತಾಳೆ. ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಬಿಸಾಕಿದ್ದಾಳೆ. ವಯೋಸಹಜ ದೌರ್ಬಲ್ಯವೋ ಏನೋ ಒಮ್ಮೊಮ್ಮೆ ಆಕೆಯ ಅತ್ತೆಯ ಏರುದನಿ ಕಾಲೊನಿ ದಾಟಿ ಮುಖ್ಯ ರಸ್ತೆಯವರೆಗೆ ಕೇಳಿಸುತ್ತದೆ.
ಆಶಾಳ ಗಂಡನೂ ಈ ವಿಷಯದಲ್ಲಿ ಮೌನಿ. ಹಾಗೆಂದು ಆಶಾಳ ಅತ್ತೆ ನೆರೆಹೊರೆಯವರ ಪಾಲಿಗೆ ಕೆಟ್ಟವಳಲ್ಲ. ನಗುಮೊಗದಿಂದಲೇ ಮಾತಾಡಿಸುವವಳು ಸೊಸೆಗೆ ಮಾತ್ರ ಬಿಗಿ. ಆದರೂ ಅತ್ತೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಕುಮ್ಮಕ್ಕು ನೀಡಿಲ್ಲ ಆಶಾ. ಅತ್ತೆಸೊಸೆ ಜಗಳವಂತೂ ನಡೆದೇ ಇಲ್ಲ. ಏಕೆಂದರೆ ಇತ್ತೀಚೆಗೆ ತನ್ನ ಬಾಯಿಗೆ ಹಾಕಿದ ಬೀಗವನ್ನು ಆಶಾ ತೆಗೆದೇ ಇಲ್ಲ. ಅತ್ತೆಯ ಬಗ್ಗೆ ಗಂಡನಲ್ಲಿ ಚಾಡಿ ಹೇಳಿ ತಾಯಿ ಮಗನ ಮಧ್ಯೆ ಬಿರುಕು ಮೂಡಿಸಿಲ್ಲ ಆಶಾ..
ಗೆಳತಿ ಆಶಾ..... ಮೌನಗೌರಿಯಾಗಿಬಿಟ್ಟಿದ್ದಾಳೆ.....
ಮೂಕಪ್ರಾಣಿಯಾಗಿಬಿಟ್ಟಿದ್ದಾಳೆ....
ಇಪ್ಪತ್ತೈದರ ಹರೆಯದ ಈಕೆಯ ಮೂಕರೋದನ ಯಾರಿಗೂ ಕೇಳಿಸುತ್ತಿಲ್ಲ...
ಇದು ಗೆಳತಿ ಆಶಾಳ ಕಥೆ. ಇಂತಹ ನೂರಾರು ಆಶಂದಿರು ನಮ್ಮ ಸಮಾಜದಲ್ಲಿ ಇದ್ದಾರೆ. ಅಂತಹವರ ನೋವಿನ ವಿಡಿಯೋಗಳು ಪ್ರಸಾರವಾಗುತ್ತಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿಲ್ಲ. ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಬೊಬ್ಬಿರಿಯುವ ಮಾಧ್ಯಮಗಳು ಚಕಾರವೆತ್ತುವುದಿಲ್ಲ. ಸಮಾಜವು ಅತ್ತೆಯಂದಿರ ಕಟು ನಡತೆಯನ್ನು ತಿದ್ದುವ ಪ್ರಯತ್ನ ಮಾಡುವುದೇ ಇಲ್ಲ. ಬದಲಾಗಿ ಸೊಸೆಯ ಮೇಲೆ ಆಪಾದನೆ ಹೊರಿಸಿ ಸಮ್ಮನಾಗುತ್ತದೆ.
ಎಷ್ಟೋ ಒಳ್ಳೆಯ ಅತ್ತೆಯಂದಿರೂ ಇದ್ದಾರೆ. ಮದುವೆಯ ಸಂದರ್ಭದಲ್ಲಿ ಅರ್ಧಕ್ಕೆ ನಿಂತಿದ್ದ ಸೊಸೆಯ ಓದಿಗೆ ಬೆಂಬಲವಾಗಿ ನಿಂತು, ಉದ್ಯೋಗಕ್ಕೆ ತೆರಳುವ ಸೊಸೆಯಂದಿರಿಗೆ ಮನೆಗೆಲಸ ಹೊರೆಯಾಗದಂತೆ ನೋಡಿಕೊಳ್ಳುವ ಸಹೃದಯಿ ಅತ್ತೆಯಂದಿರೂ ಇದ್ದಾರೆ. ಸೊಸೆಯ ಬಸಿರು ಬಾಣಂತನ ಸಂದರ್ಭದಲ್ಲಿ ತಾಯಂದಿರ ಸ್ಥಾನ ತುಂಬಿದವರಿದ್ದಾರೆ. ಸೊಸೆ ಉದ್ಯೋಗಕ್ಕೆ ತೆರಳಿದಾಗ ಮೊಮ್ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಹೊತ್ತವರಿದ್ದಾರೆ. ದೂರದೂರಿಗೆ ವರ್ಗಾವಣೆ ಆದಾಗ ಮೊಮ್ಮಕ್ಕಳ ಪಾಲಿಗೆ ತಾವೇ ಅಮ್ಮನ ಪ್ರೀತಿಯನ್ನುಣಿಸಿದವರಿದ್ದಾರೆ.
ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಮನೆ ನಿಭಾಯಿಸಿಕೊಂಡು ಹೋಗುವ ಸೊಸೆಯಂದಿರಿದ್ದರೂ, ಸೊಸೆಯಂದಿರು ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ರೂವಾರಿಗಳು ಎಂದು ಬಿಂಬಿತವಾಗುತ್ತಿರುವುದು ಬೇಸರದ ಸಂಗತಿ.
ಅಂತಹ ವಿಷಯಗಳನ್ನು like, comment, forward /ಮೆಚ್ಚು, ಪ್ರತಿಕ್ರಿಯಿಸು, ಹಂಚಿಕೊಳ್ಳುವ ಮುನ್ನ ತುಸು ಯೋಚಿಸಬೇಕು. ವೃದ್ಧಾಶ್ರಮಕ್ಕೆ ಹಿರಿಯರನ್ನು ಸೇರಿಸಲು ಹಲವಾರು ಕಾರಣಗಳಿರಬಹುದು. ಮನೆಯ ಎಲ್ಲ ವಿಷಯಗಳೂ ಸೊಸೆಯ ಹಿಡಿತದಲ್ಲಿ ಇರುತ್ತದೆಯೆಂಬುದು ತಪ್ಪು ಕಲ್ಪನೆ. ತೀವ್ರ ಅನಾರೋಗ್ಯ, ಉದ್ಯೋಗದಿಂದಾಗಿ ಆರೈಕೆಮಾಡಲು ಸಮಯ ಸಿಗದಿರುವುದು, ಸೊಸೆಯೂ ವಯೋಸಹಜ ಖಾಯಿಲೆಗಳಿಂದ ಹೈರಾಣವಾಗಿರುವುದು, ರಾತ್ರಿ ಹಿರಿಯರ ಆರೈಕೆಯ ಸಲುವಾಗಿ ನಿದ್ದೆಗೆಟ್ಟು ಹಗಲು ಮನೆಕೆಲಸ ನಿಭಾಯಿಸಲು ಸಾಧ್ಯವಾಗದಿದ್ದಾಗ ಸಹಾಯಕಿಯೂ ಸಿಗದಿರುವುದು..... ಇತ್ಯಾದಿ ಕಾರಣಗಳಿರಬಹುದು.
ಇತ್ತೀಚೆಗೆ ಒಂದು ಕುಟುಂಬದಲ್ಲಿ ಮಲಗಿದಲ್ಲೇ ಆದ ವಯೋವೃದ್ಧ ಮಹಿಳೆಯನ್ನು ಹತ್ತು ವರ್ಷಗಳ ಕಾಲ ರಾತ್ರಿ ನಿದ್ದೆಗೆಟ್ಟು ಸೇವೆಗೈದು ಮಗಸೊಸೆ ಇಬ್ಬರೂ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೊಸೆಯ ಆರೋಗ್ಯ ತೀವ್ರ ಏರುಪೇರಾಗಿ ಬದುಕುವ ಭರವಸೆಯೇ ಇಲ್ಲದಿದ್ದಾಗಲೂ, ವಯೋವೃದ್ಧರ ಇತರ ಐವರು ಮಕ್ಕಳಲ್ಲಿ ಒಬ್ಬರೂ ನೋಡಿಕೊಳ್ಳಲು ಬರದೇಯಿದ್ದಾಗ ಅನಿವಾರ್ಯವಾಗಿ ವೃದ್ಧಾಶ್ರಮಕ್ಕೆ ಸೇರಿಸಬೇಕಾಯಿತು.
ವಿಡಿಯೋ ಮಾಡಿ ಬಿತ್ತರಿಸುವಲ್ಲಿ ವೃದ್ಧಾಶ್ರಮ ಎಂಬ ವಾಣಿಜ್ಯ ವಹಿವಾಟನ್ನು ಭಾರತದ ಕುಟುಂಬ ವ್ಯವಸ್ಥೆಯ ಒಳಗೆ ತೂರುವ ಹುನ್ನಾರವೂ ಇರಬಹುದು. ಕುಟುಂಬವನ್ನು ಒಡೆದು ತಮ್ಮ ಜೇಬು ತುಂಬಿಸುವ ಕುತಂತ್ರ ಇರಲೂಬಹುದು.
ಈ ಬಗ್ಗೆಯೂ ಎಚ್ಚರಿಕೆ ಅತ್ಯಗತ್ಯ. ಇದು ಯಾರನ್ನೂ ದೂಷಿಸುವ ಉದ್ದೇಶದಿಂದ ಬರೆದ ಬರಹವಲ್ಲ. ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ ಅಷ್ಟೇ. ಇದರ ಮೇಲೆ ಕಟು ಟೀಕೆ, ಚರ್ಚೆ ಬೇಡ. ಭಾರತೀಯ ಸಂಸ್ಕಾರವನ್ನು ಪಾಲಿಸುವ ಎಲ್ಲಾ ಅತ್ತೆಸೊಸೆಯಂದಿರು ಹಾಗೂ ಅವರ ಕುಟುಂಬದ ಬಗ್ಗೆ ನನಗೆ ಗೌರವವಿದೆ.
ಕೌಟುಂಬಿಕ ಬಾಂಧವ್ಯವು ಕೆಡದಂತೆ ಅನುಸರಿಸಬಹುದಾದ ಕೆಲವು ಸೂತ್ರಗಳು:-
1.ಗಂಡುಮಕ್ಕಳಿಗೆ ಜವಾಬ್ದಾರಿಯುತವಾಗಿ ಬದುಕುವುದನ್ನು ಕಲಿಸುವುದು. ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವುದನ್ನು , ಇತರರ ಭಾವನೆಗಳನ್ನು ಗೌರವಿಸುವ ಗುಣವನ್ನು ಬೆಳೆಸುವುದು.
ಹೆಣ್ಣಮಕ್ಕಳಿಗೆ ಕೆಲಸ ಕಾರ್ಯಗಳು, ಸಂಸ್ಕಾರಗಳನ್ನಷ್ಟೇ ಕಲಿಸಿದರೆ ಸಾಲದು ; ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಲು, ತಾಳ್ಮೆ, ಹೊಂದಾಣಿಕೆಯಿಂದ ಬದುಕಲು ಕಲಿಸಿ. ತೀರಾ ಅನ್ಯಾಯವಾದಾಗ ದನಿಯೆತ್ತುವ ಅಭ್ಯಾಸ ತಪ್ಪಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಡಿ.
2.ಸೊಸೆ ಆಗಮಿಸುತ್ತಿದ್ದಾಳೆ ಎಂದಾದರೆ ಮೊದಲು ಆಕೆಯನ್ನು ಮಗಳಂತೆ ಕಾಣಬೇಕು, ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಿ ಸ್ನೇಹಿತರಂತೆ ವರ್ತಿಸಬೇಕು ಎಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಿ.
3.ಮೊದಲೆಲ್ಲ ಮಗ ಪ್ರತಿಯೊಂದಕ್ಕೂ ಅಮ್ಮಾ.. ಎನ್ನುತ್ತಾ ಬೆನ್ನ ಹಿಂದೆ ಬರುತ್ತಿದ್ದ, ಪ್ರಮುಖ ಕಾರ್ಯಗಳಿಗೆಲ್ಲಾ ಅಪ್ಪನ ಸಲಹೆಗಳನ್ನು ಕೇಳುತ್ತಿದ್ದ, ಸೊಸೆ ಬಂದ ಮೇಲೆ ಬದಲಾಗಿದ್ದಾನೆ. ಎಲ್ಲಾ ಅವಳ ಕುಮ್ಮಕ್ಕಿನಿಂದ ಎಂದು ಸೊಸೆಯ ಮೇಲೆ ಗೂಬೆಕೂರಿಸಬೇಡಿ. ಸೊಸೆ ಮಗನ ಕಷ್ಟಸುಖದಲ್ಲಿ ಭಾಗಿಯಾಗುವವಳು, ಆಪ್ತಗೆಳತಿ, ಪ್ರಾಣಸಖಿ.. ಅಂದ ಮೇಲೆ ಮಗನಿಗೂ ಅವಳ ಆಲೋಚನೆಗಳು, ಸಲಹೆಗಳು ಹಿತವಾಗುವುದರಲ್ಲಿ ತಪ್ಪಿಲ್ಲ.. ಅವಳನ್ನು ಹಚ್ಚಿಕೊಂಡರೆ ಸಂಕಟಪಡದೆ ಖುಷಿಪಡಿ.
4.ಸೊಸೆ ತನ್ನ ಹೆತ್ತವರು, ಒಡಹುಟ್ಟಿದವರನ್ನು ಬಿಟ್ಟು ಪತಿಯ ಮೇಲೆ ಭರವಸೆಯಿಟ್ಟು ಬಂದಿರುತ್ತಾಳೆ. ಮಗ ಅವಳಿಗೆ ನಿರಾಸೆ ಮಾಡಬಾರದು ಎಂಬ ಮನಸ್ಸು ಹಿರಿಯ ಸದಸ್ಯರಿಗಿರಲಿ.
5.ಅತ್ತೆಮಾವ ಒಂದೆರಡು ಮಾತು ಆಡಿದರೆ ತನಗೇನೂ ಅವಮಾನವಲ್ಲ, ಅದು ತನ್ನ ಹಿತದೃಷ್ಟಿಯಿಂದ ಎಂಬ ಭಾವನೆ ಸೊಸೆಯಾದವಳು ಬೆಳೆಸಿಕೊಳ್ಳಬೇಕು.
6.ತನ್ನ ಪತಿ ತನಗೆ ಮಾತ್ರ ಗಮನಕೊಡಬೇಕು ಎಂಬ ನಿರ್ಬಂಧ ಬೇಡ. ತಾನು ಬರುವುದಕ್ಕಿಂತ ಮೊದಲು ಅವನಿಗೂ ಆಪ್ತೇಷ್ಟರ ಬಳಗವಿತ್ತು ಎಂಬುದು ಪತ್ನಿಗೆ ನೆನಪಿರಲಿ.
7.ತನ್ನನ್ನು ಪ್ರೀತಿಸುವ, ಮನದಾಸೆ ತಿಳಿದು ನಡೆವ ಪತಿಯನ್ನು ಸಾಕಿ, ಸಲಹಿ, ಬೆಳೆಸಿದವರ ಶ್ರಮಕ್ಕೆ ಗೌರವಕೊಡುವುದು ಸೊಸೆಯಾದವಳ ಧರ್ಮ. ಅವರ ಆರೋಗ್ಯದ ಕಾಳಜಿ ತನ್ನ ಜವಾಬ್ದಾರಿ ಎಂಬ ಉದಾರತೆಯಿರಲಿ.
8.ಮೊನ್ನೆಮೊನ್ನೆ ಬಂದವಳಿಗೆ ಮನೆಯ ಜವಾಬ್ದಾರಿ, ಅಡುಗೆ ಮನೆಯ ಅಧಿಕಾರ ಕೊಡಲಾರೆ, ಮಗನಿಗೇನು ಗೊತ್ತು ವ್ಯವಹಾರ.. ಹಣದ ಕಪಾಟಿನ ಬೀಗದಕೈ ನಾನು ಮಗನಿಗೆ ಹಸ್ತಾಂತರಿಸಲಾರೆ ಎಂದು ಹಿರಿಯರಾದವರು ಹಠ ಹಿಡಿಯದೆ ಜವಾಬ್ದಾರಿಯನ್ನು ಹಸ್ತಾಂತರಿಸಿ. ಬೆಂಬಲವಾಗಿ ನಿಂತು ಮಾರ್ಗದರ್ಶನ ಮಾಡಿ. ಬಿಟ್ಟುಕೊಟ್ಟು ಬೆನ್ನುತಟ್ಟುವುದರಲ್ಲೂ ಹಿರಿತನವಿದೆ.
9.ನಾದಿನಿಯರು, ಭಾವಮೈದುನಂದಿರು ತನಗೂ ಅಕ್ಕತಂಗಿ ತಮ್ಮಂದಿರಂತೆ ಎಂದು ಬಗೆದು ಅಪರೂಪಕ್ಕೆ ಆಗಮಿಸುವ ಅವರನ್ನು ಪ್ರೀತಿಯಿಂದ ಸತ್ಕರಿಸುವುದು ಸೊಸೆಯಾದವಳ ಸದ್ಗುಣವಾಗಿರಲಿ.
10.ಸೊಸೆಯ ತವರ ಕಡೆಯ ಬಂಧುಗಳು ಆಗಮಿಸಿದಾಗ ಸತ್ಕರಿಸಿ ಉಪಚರಿಸಿ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಬಂಧಗಳು ಹಳಸುವಂತೆ ಮಾಡದಿರಿ.
ಕುಟುಂಬದ ಸದಸ್ಯರ ಪ್ರತಿ ನಡತೆಯನ್ನು ಬೆಳೆಯುತ್ತಿರುವ ಮಕ್ಕಳು ಗಮನಿಸುತ್ತಿರುತ್ತಾರೆ. ಅರಿವಿಲ್ಲದೆಯೇ ಅವರೊಳಗೆ ಅದೇ ಗುಣ ಬೆಳೆಯುತ್ತದೆ. ಪ್ರೀತಿಸುವ ಗುಣವಿರುವ ಕುಟುಂಬದಲ್ಲಿ ಬೆಳೆದ ಮಕ್ಕಳು ಅದನ್ನೇ ರೂಢಿಸಿಕೊಂಡರೆ .. ದ್ವೇಷ ಅಸೂಯೆಗಳೇ ತಾಂಡವವಾಡುವ ಪರಿಸರದಲ್ಲಿ ಬೆಳೆದವರಿಗೆ ಸದಾ ಕಚ್ಚಾಡುವ ಅಭ್ಯಾಸ ಬೆಳೆಯುತ್ತದೆ. ಬಾಂಧವ್ಯವನ್ನು ಕೆಡದಂತೆ ಕಾಪಾಡಿ ಕುಟುಂಬವು ನಗುನಗುತ್ತಾ ಬಾಳುವಂತೆ ಮಾಡುವುದು ಕುಟುಂಬದ ಪ್ರತೀ ಸದಸ್ಯನ ಕೈಯಲ್ಲಿದೆ.
✍️... ಅನಿತಾ ಜಿ.ಕೆ.ಭಟ್.
18-09-2020.