#ಜೋಡೆತ್ತು
ನಡೆಯೋಣ ಬಾ ಹೀಗೆ ಜೋಡಿಯಾಗಿ
ಹೂಡೋಣ ಒಡೆಯನ ಕೂಳಿಗಾಗಿ||
ಹದವಾಗಿ ಹೆಜ್ಜೆ ಒಂದೊಂದೆ ಇರಿಸಿ
ನೇಗಿಲಹೊರೆಗೆ ಹೆಗಲಾಗಿ
ಮಳೆಚಳಿಸುಡುಬಿಸಿಲು ಹಸಿಕೆಸರ
ಲೆಕ್ಕಿಸದೆ ದುಡಿಯೋಣ ಪೈರಿಗಾಗಿ..||
ಆಗೊಮ್ಮೆ ಈಗೊಮ್ಮೆ ಒದೆಗೆಎದೆಯೊಡ್ಡಿ ನಡೆಯುವುದೀ ಶ್ರಮಯಾನ
ಭೂತಾಯಿ ಬಸಿರು ಹಸಿರಾಗಿ ತೊನೆದು
ನಿಂತಾಗ ಧನ್ಯವೀ ಮೈಮನ||
ನಾ ಹೆಚ್ಚು ನೀ ಕಮ್ಮಿ ಭೇದವನೆಣಿಸದೆ
ದುಡಿದರೇ ಇಲ್ಲಿ ಇಂಬು
ಸೋಲಹುದು ನೋವಹುದು ಒಗ್ಗಟ್ಟುಮರೆತು ತಾಡಿದರೆ ನೀಲಿ ಕೊಂಬು||
ನಮ್ಮಯ ಸೇವೆ ಒಡೆಯನಬೆವರಹನಿ
ನೆಲದಾಯಿ ಹರಸಿದರೆ ಫಸಲು
ಹಸಿದಿರುವ ಹೊಟ್ಟೆಗೆ ಅನ್ನವನೀಯುವ
ಕಾಯಕ ಜಗದಲಿ ಮಿಗಿಲು||
✍️ಅನಿತಾ ಜಿ.ಕೆ.ಭಟ್.
24-03-2021.
#momspressokannada #ದಿನದಚಿತ್ರ
No comments:
Post a Comment