#ಕೈ ತುತ್ತು
ತಾಯಿಯು ಕೊಡುವ
ಕೈ ತುತ್ತು
ಉಂಡವಗಲ್ಲವೇ
ರುಚಿಗೊತ್ತು !!
ಕಂದಗೆ ಉಣ್ಣಲು
ಮನಸೇ ಇಲ್ಲ
ಕಥೆಯನು ಹೆಣೆದು
ಚಂದ್ರನ ಕರೆದು
ಅನ್ನವ ಬಾಯಿಗೆ
ತುರುಕುವಳಲ್ಲ!!
ಕಂದಗೆ ಕಣ್ಣಲಿ
ನಿದ್ರೆಯ ಜೊಂಪು
ತಾಯ ಕಂಠದಲಿ
ಜೋಗುಳ ಇಂಪು!!
ಕಂದನು ನಿದ್ರೆಗೆ
ಜಾರುತಲಿರಲು
ಕಾಲಿಗೆ ಚಕ್ರವ
ಕಟ್ಟುವಳಲ್ಲ!!
ಅರೆಬರೆ ಕೆಲಸವ
ಅಂದದಿ ಮುಗಿಸಿ
ಆ ಕಡೆ ಈ ಕಡೆ
ಒಪ್ಪ ಓರಣವಾಗಿಸಿ!!
ಕಂದನ ದಿಟ್ಟಿಸಿ
ನೋಡುವಳಲ್ಲ
ಒಡಲಿನ ಕುಡಿಯನು
ಹರಸುವಳಲ್ಲ!!
ದೇವನು ವೀಕ್ಷಿಸಿ
ಮೆಚ್ಚಿಹನಲ್ಲ
ಭೂಲೋಕದಿ ಕಂದಗೆ
ಜನನಿಯೆ ಶ್ರೀರಕ್ಷೆ ಎಂದಿಹನಲ್ಲ!!
✍️..ಅನಿತಾ ಜಿ.ಕೆ.ಭಟ್.
12-03-2021.
No comments:
Post a Comment