'ಅತಿಥಿ ದೇವೋಭವ' ಎಂದು ಸಂಸ್ಕೃತದಲ್ಲಿ ಒಂದು ನುಡಿಯಿದೆ. ಅತಿಥಿಗಳನ್ನು ದೇವರೆಂದೇ ಭಾವಿಸಿ ಸತ್ಕರಿಸಬೇಕೆಂಬುದು ಅದರ ತಾತ್ಪರ್ಯ.
ಅತಿಥಿ ಅಂದರೆ ತಿಥಿಯನ್ನು ನೋಡದೆಯೆ ಬರುವವರು, ಹೇಳದೆಯೆ ಅನಿರೀಕ್ಷಿತವಾಗಿ ಬಂದವರು ಎಂಬುದಾಗಿ ಅರ್ಥ. ಆದರೆ ನಾವಿಂದು ಮೊದಲೇ ತಿಳಿಸಿ ಬರುವವರಿಗೂ, ಆಮಂತ್ರಿಸಿ ಬರುವವರಿಗೂ ಅಭ್ಯಾಗತರು ಎನ್ನುವ ಬದಲು ಅತಿಥಿಗಳೆಂದೇ ಹೇಳುವುದು ಅಭ್ಯಾಸವಾಗಿಬಿಟ್ಟಿದೆ. ಮನೆಗೆ ಯಾರಾದರೂ ಬರುತ್ತಾರೆಂದರೆ ಗೃಹಿಣಿಯರ ಕೈಕಾಲುಗಳಲ್ಲಿ ಮಿಂಚಿನ ಓಟ ಆರಂಭವಾಗುತ್ತದೆ. ಮನೆಯನ್ನು ಒಪ್ಪ ಓರಣವಾಗಿ ಇಡುವುದರಿಂದ ಆರಂಭಿಸಿ, ಅಡುಗೆ, ಸಿಹಿತಿನಿಸು ಮಾಡುವುದರವರೆಗೂ ಅವಳ ಗೌಜಿ ಮುಂದುವರಿಯುತ್ತದೆ. ಕೆಲವೊಮ್ಮೆ ಮಾಡಬೇಕು ಮಾಡಬೇಕು ಅಂದು ಕೊಂಡು ಮುಂದೂಡುತ್ತಿದ್ದ ಬಲೆತೆಗೆಯುವ ಕೆಲಸ, ರೂಮುಗಳ ಸ್ವಚ್ಛತೆ, ಕಿಟಿಕಿ ಬಾಗಿಲುಗಳನ್ನು ಒರೆಸುವ ಕೆಲಸಗಳೆಲ್ಲ ಫಟಾಫಟ್ ಮಾಡಿಬಿಡುವಂತೆ ಅವಳೊಳಗೆ ಉತ್ಸಾಹ ತುಂಬುವುದೇ ಆಗ.
ಮನೆಯವರು ಸಹಕರಿಸಿದರೆ ಖುಷಿಪಡುವ ಗೃಹಿಣಿ, ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಟಿವಿ ನೋಡುತ್ತಾ ಪೈಪರ್ ಓದುತ್ತಾ ಕಾಲಕಳೆದರೆ ಬೇಸರಿಸಿಕೊಳ್ಳುವುದು, ವಟಗುಟ್ಟುವುದು ಇದ್ದೇ ಇರುತ್ತದೆ. ಮಕ್ಕಳಲ್ಲಂತೂ ಬಂದವರೆದುರು ನೀವು ಹೀಗಿರಬೇಕು, ಹಾಗಿರಬಾರದು, ಇಂತಹಾ ಪ್ರಶ್ನೆ ಗಳನ್ನು ಕೇಳಲೇಬಾರದು ಎಂಬೆಲ್ಲ ಆಜ್ಞೆಗಳನ್ನು ಹೊರಡಿಸುತ್ತಲೇ ಇರುತ್ತಾಳೆ. "ಹೋಗಿಯಮ್ಮಾ ನೀವು.. ನಮಗೇನೂ ಅಷ್ಟೂ ಗೊತ್ತಾಗಲ್ವಾ..." ಎಂಬ ಉಡಾಫೆಯ ಉತ್ತರ ಸಿಗುವುದೂ ಸಹಜ.ಬರುವವರಿಗೆ ಸಿಹಿ ಇಷ್ಟವೋ ಖಾರ ಇಷ್ಟವೋ ತಿಳಿದುಕೊಂಡು ಸಿಹಿತಿನಿಸು ಅಥವಾ ಕುರುಕಲು ತಿಂಡಿ ತಯಾರಿಸಿ ಡಬ್ಬದೊಳಗೆ ಮುಚ್ಚಿಡುತ್ತೇವೆ. ಆಗಾಗ ಬಂದು ತೆಗೆದುಕೊಳ್ಳುವ ಮಕ್ಕಳಿಗಂತೂ.. "ನೆಂಟರು ಬರುವವರೆಗೆ ಉಳಿಸಿ ಆಯ್ತಾ" ಅಂತ ಹೇಳುತ್ತಾ ಇರಬೇಕಾಗುತ್ತದೆ. ಅಡುಗೆ ಏನು ಮಾಡಲಿ ಅಂತ ಗಂಡನನ್ನೊಮ್ಮೆ ಕೇಳಿದಂತೆ ನಾಟಕ ಮಾಡಿ ತನಗೆ ಸರಿಕಂಡಂತೆಯೇ ಅಡುಗೆ ಮಾಡಲು ಹೊರಡುತ್ತಾಳೆ. ಅದಾಗಿಲ್ಲ ಇದಾಗಿಲ್ಲ ಅಂತ ನೆಂಟರು ಬರುವವರೆಗೂ ಗಡಿಬಿಡಿ ಮುಗಿಯುವುದಿಲ್ಲ.
ನೆಂಟರು ಬಂದಾಗ ಅವರಿಗೆ ಕೈ ಕಾಲು ತೊಳೆಯಲು ನೀರು ಕೊಟ್ಟು, ಒರೆಸಿಕೊಳ್ಳಲು ಟವೆಲ್ ನೀಡಿ ಒಳಗೆ ಕರೆದುಕೊಂಡು ಹೋಗಿ, ಸಾವಕಾಶವಾ ಎಂದು ವಿಚಾರಿಸಿಕೊಂಡು ಬೆಲ್ಲ, ನೀರು ಕೊಟ್ಟು ಉಪಚರಿಸುವುದು ನಮ್ಮ ಪದ್ಧತಿ. ನಂತರ ತಿಂಡಿ ಕಾಫಿಯ ಸತ್ಕಾರ. ಬಂದವರನ್ನು ಪ್ರೀತಿಯಿಂದ, ಗೌರವದಿಂದ ಬಹುವಚನದಿಂದಲೇ ಮಾತನಾಡಿಸುವುದು ಸಂಪ್ರದಾಯ. ಇದು ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಕ್ರಮವಾಗಿದ್ದು ನಮ್ಮ ಮಕ್ಕಳಿಗೂ ಇದನ್ನೇ ಕಲಿಸುತ್ತಿದ್ದೇವೆ.
ಗೃಹಿಣಿ ಎಷ್ಟೇ ಆಯಾಸವಾದರೂ ಬಂದವರೆದುರು ತೋರಿಸಿಕೊಳ್ಳಲು ಹೋಗುವುದಿಲ್ಲ. ನಗುಮೊಗದಿಂದಲೇ ಸ್ವಾಗತಿಸಿ ಉಪಚರಿಸುವ ಅವಳ ಪರಿ ಅನನ್ಯ. ಮಾಡಿದ ಎಲ್ಲಾ ಅಡುಗೆಯ ಬಗೆಗಳಿಗೂ ಉಪ್ಪು, ಖಾರ, ಸಿಹಿ ಪ್ರಮಾಣ ಹದವಾಗಿಯೇ ಇರಲಪ್ಪಾ ಎಂದು ಮನದೊಳಗೆ ಬೇಡಿಕೊಳ್ಳುತ್ತಾಳೆ.
ನಮ್ಮ ಮನೆ ಕಟ್ಟುತ್ತಾ ಇದ್ದಂತಹ ಸಂದರ್ಭದಲ್ಲಿ ಕಾಮಗಾರಿಯನ್ನು ವೀಕ್ಷಿಸಲು ಮಾವನವರು ಬರುವವರಿದ್ದರು. ಅವರ ಜೊತೆ ಬಂಧುವೊಬ್ಬರನ್ನೂ "ಬನ್ನಿ.. ಹೋಗೋಣ.. ಮಗ ಮನೆ ಕಟ್ಟಿಸುತ್ತಿದ್ದಾನೆ.. ನೋಡಿಬರೋಣ.." ಎಂದು ಒತ್ತಾಯಿಸಿ ಕರೆದುಕೊಂಡು ಬಂದಿದ್ದರು. ಬಂದಾಗ ಬಾಯಾರಿಕೆ ನೀಡಿ, ಎಲ್ಲರಿಗೂ ತಿಂಡಿ ಕಾಫಿ ಕೊಟ್ಟು ಇಪ್ಪತ್ತು ಕಿಮೀ ದೂರದ ಸೈಟ್ ಕಡೆಗೆ ಕರೆದುಕೊಂಡು ಹೋಗಿ ತೋರಿಸಿ ಬಂದೆವು. ಸೈಟಿಗೆ ಹೋಗಲು ಇದ್ದುದರಿಂದ ನಾನು ಬೆಳಗ್ಗೆಯೇ ಅಡುಗೆ ಮಾಡಿಟ್ಟಿದ್ದೆ. ಬಂದಾಗ ನಮ್ಮವರು "ಅವರಿಗೆ ಖಾರ ಖಾರದ ಅಡುಗೆ ಆಗಬೇಕು" ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದರು. ಆಗ ನಮ್ಮ ಮಕ್ಕಳಿಬ್ಬರೂ ಚಿಕ್ಕವರಾದ್ದರಿಂದ ಸಾಂಬಾರ್ ತುಂಬಾ ಖಾರವೇನೂ ಮಾಡುತ್ತಿರಲಿಲ್ಲ. ನೆಂಟರಿಗೆಂದೇ ಸ್ವಲ್ಪ ಜಾಸ್ತಿಯೇ ಖಾರ ಮಾಡಿದ್ದೆ ಆ ದಿನ. ಆದರೂ ಪತಿ ಹೇಳಿದ ಮೇಲೆ ಇನ್ನೂ ಖಾರ ಬೇಕೇನೋ ಅಂದುಕೊಂಡು ಬೇಗನೇ ದೇವಸ್ಥಾನದ ಶೈಲಿಯ ಸಾರು ಕೂಡಾ ತಯಾರಿಸಿ, ಊಟಕ್ಕೆ ಕರೆದೆ.
ಎಲ್ಲರಿಗೂ ಪಂಕ್ತಿ ಹಾಕಿದೆ. ಸಣ್ಣ ಮಗನಿಗೆ ಒಮ್ಮೆ ಊಟಮಾಡಿಸಿದ್ದರೂ ಸಹ "ಆನೂ ಕೂರ್ತೆ" ಅಂತ ಪುನಃ ಎಲ್ಲರೊಂದಿಗೆ ಕುಳಿತುಕೊಂಡ. ಅವನಿಗೆ ದೊಡ್ಡವರ ಜೊತೆಗೆ ಕುಳಿತುಕೊಳ್ಳಲು ಸಡಗರ. ಮಕ್ಕಳು ಆಗಾಗ ಅದು ಬೇಕು, ಇದು ಬೇಕು ಅನ್ನುತ್ತಿದ್ದಾಗ ಮಾವನವರು "ಅನಿತಾ.. ನೀನು ಎಲ್ಲವನ್ನೂ ಇಲ್ಲಿ ತಂದಿಡು. ಬಡಿಸಲು ಸುಲಭ" ಅಂದರು. ಎಲ್ಲವನ್ನೂ ಪಂಕ್ತಿಯ ಮುಂದೆಯೇ ಇಟ್ಟು ಬಡಿಸತೊಡಗಿದೆ. ಸಾರನ್ನ ಮೊದಲಿಗೆ ಬಡಿಸಿದೆ. ನಂತರ ಸಾಂಬಾರಿನ ಸರದಿ. ಸಾಂಬಾರು ಅನ್ನ ಎರಡು ತುತ್ತು ಉಂಡ ನೆಂಟರು " ಇದೇನು ಹೀಗೆ .. ಒಂಥರಾ ಇದೆ.. ಬಹಳ ಸಪ್ಪೆ ಇದೆ.." ಎಂದು ಏನೇನೂ ಕುಂದುಕೊರತೆಗಳನ್ನು ಹೇಳಲಾರಂಭಿಸಿದರು. ನನಗೋ ಒಂಥರಾ ದಿಗಿಲು.. ಏನು ಮಾಡಲಪ್ಪಾ ಈಗ ಅಂತ.. ಅವರ ಪಕ್ಕದಲ್ಲೇ ಕುಳಿತಿದ್ದ ಮಾವನವರು ಎದುರಿಟ್ಟಿದ್ದ ಉಪ್ಪಿನಕಾಯಿಯ ಬಾಟಲಿಯನ್ನು ಪಕ್ಕಕ್ಕೆ ಎಳೆದುಕೊಂಡು ಅದರಿಂದ ಒಂದು ಚಮಚ ಉಪ್ಪಿನಕಾಯಿ ತಾವೇ ಬಡಿಸಿಕೊಂಡು "ನೋಡಿ.. ಸಪ್ಪೆಯಾದರೆ ಹೀಗೆ ಉಪ್ಪಿನಕಾಯಿ ಸೇರಿಸಿಕೊಂಡು ಊಟ ಮಾಡಿ" ಅಂದರು.. ನಾನು ಮಾವನವರ ಆ ಕ್ಷಣದ ಬೆಂಬಲಕ್ಕೆ ಬೆರಗಾಗಿ ನೋಡುತ್ತಲೇ ನಿಂತುಬಿಟ್ಟಿದ್ದೆ. ಬಂಧುಗಳು ಮರುಮಾತನಾಡದೆ ಊಟಮಾಡಿ ಎದ್ದರು.
ಮಾವನವರು ಆ ಕ್ಷಣ ನೀಡಿದ ಸಲಹೆ ಎಲ್ಲರಿಗೂ ಉಪಯುಕ್ತ. ಸೊಸೆಯಾದವಳಿಗಂತೂ ಇದಕ್ಕಿಂತ ಹೆಚ್ಚು ಇನ್ನೇನು ಬೇಕು. ಅಡುಗೆಯ ರೀತಿ, ಉಪ್ಪು ಖಾರದ ಪ್ರಮಾಣ ಎಲ್ಲವೂ ಒಬ್ಬೊಬ್ಬರಲ್ಲಿ ಒಂದೊಂದು ತರಹ ಇರುವುದು ನಿಜವೇ. ಆದರೆ ಪ್ರೀತಿಯಿಂದ ಬಡಿಸುವಾಗ ಸಂತೃಪ್ತಿಯಿಂದ ಹೊಟ್ಟೆತುಂಬಾ ಉಣ್ಣಲು ಅದೊಂದು ದೊಡ್ಡ ತೊಂದರೆಯಾಗುವಂತೆ ಇರಲೂ ಇಲ್ಲ. ಸಣ್ಣ ವಿಷಯವನ್ನೂ ದೊಡ್ಡದಾಗಿ ಬಿಂಬಿಸಹೊರಟವರಿಗೆ ಮಾವನವರು ಉತ್ತಮ ಜೀವನ ಪಾಠವನ್ನೇ ಕಲಿಸಿದ್ದರು. ಕೆಲವು ತಿಂಗಳ ಹಿಂದೆ ಮಾವನವರನ್ನು ಕಳೆದುಕೊಂಡ ನಂತರ ನನಗಂತೂ ಈ ಘಟನೆ ಆಗಾಗ ನೆನಪಾಗುತ್ತಲೇ ಇರುತ್ತದೆ.
ನೆಂಟರು ಬರುವ ಮೊದಲು ಹೇಗೋ ತಯಾರಿಗಳು ಆಗಿಬಿಡುತ್ತವೆ. ಆದರೆ ಸಾವಾಲಾಗುವುದು ನಂತರದ ಸ್ವಚ್ಛತಾ ಕಾರ್ಯ. ಪುಟ್ಟ ಮಕ್ಕಳಿರುವ ಮನೆಯಲ್ಲಿ ಸಿಹಿ ತಿಂಡಿ, ಕುರುಕಲು ತಿಂಡಿಗಳನ್ನು ಆಚೀಚೆ ಅಡ್ಡಾಡುತ್ತಾ ತಿಂದರಂತೂ ನೆಲವೆಲ್ಲಾ ಕಾಲಿಗಂಟಿದಂತೆ ಭಾಸವಾಗುತ್ತದೆ. ಇಡೀ ಮನೆಯ ನೆಲವೊರೆಸುವ ಕೆಲಸ ಜರೂರಾಗಿ ಆಗಲೇಬೇಕಾಗುತ್ತದೆ. ತೊಳೆಯಲು ಪಾತ್ರೆಗಳ ರಾಶಿ, ಕೆಳಗಿರಿಸಿದ ಹೊಸ ಪಾತ್ರೆಗಳನ್ನೆಲ್ಲ ಮತ್ತೆ ಯಥಾಸ್ಥಾನದಲ್ಲಿ ಇರಿಸುವುದು.. ಉಳಕೊಳ್ಳಲು ಬಂದವರಾಗಿದ್ದರೆ ಬಟ್ಟೆಗಳನ್ನು ತೊಳೆದು ಮಡಚಿಡುವ ಕೆಲಸಗಳು ಹೀಗೆ .. ಹತ್ತು ಹಲವು ಕೆಲಸಗಳು ಗೃಹಿಣಿಯ ಮುಂದಿರುತ್ತವೆ. ಕೆಲಸಗಳು ಹೆಚ್ಚಾಗುತ್ತವೆಂದು ಗೃಹಿಣಿ ನೆಂಟರನ್ನು ಆಹ್ವಾನಿಸದೇ ಇರುವುದಾಗಲಿ, ಬಂದಾಗ ಅಸಡ್ಡೆ ತೋರುವುದಾಗಲೀ ಎಂದಿಗೂ ಮಾಡಳು. ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಉಂಟಾಗುತ್ತದೆ. ಬಂಧು ಬಳಗದ ಜೊತೆಯ ಖುಷಿಯ ಕ್ಷಣಗಳು ಬಾಳಿನ ಪುಟಗಳಲ್ಲಿ ಅಚ್ಚಳಿಯದೆ ನಿಂತಿರುತ್ತವೆ.
✍️... ಅನಿತಾ ಜಿ.ಕೆ.ಭಟ್.
13-03-2021.
ಚಿತ್ರ ಕೃಪೆ:- ಅಂತರ್ಜಾಲ.
No comments:
Post a Comment