#ಪ್ರೀತಿ
ಮುಗಿಲಬಾಗಿಲಲಿಣುಕಿ ಕದಿರೆಸೆವ
ರವಿಗೆ ಇಬ್ಬನಿ ಇಳೆಯ ಪ್ರೀತಿ||
ಸಾಗರದಂಚಿನಲಿ ಮುಳುಗೆದ್ದು
ಬರುವಾಗ ತಂದಾನ ಮತ್ತದೇ ಪ್ರೀತಿ||೧||
ಹಾಲ್ಗೆನ್ನೆ ಹಸುಳೆಯ ಅಳುಕೇಳಿ ಬಂದೆತ್ತಿ
ರಮಿಸುವ ಅಮ್ಮನ ಪ್ರೀತಿ||
ಹಾಲ್ಜೇನನುಣಿಸಿ ಅಪ್ಪಿ ಮುದ್ದಾಡಿ
ಹರಸುವ ಅವ್ವನ ಪ್ರೀತಿ||೨||
ಕುಡಿನೋಟದರಸಿಯ ಕಡೆತನಕ ಕಾಯುವೆ
ನುಡಿದಿಹ ಒಡೆಯನ ಪ್ರೀತಿ||
ದುಡಿದುಂಬ ಬಡವನು ಮಡದಿಗೆ
ತೊಡಿಸುವ ವಜ್ರವೈಢೂರ್ಯವೆ ಪ್ರೀತಿ||೩||
ಹಣ್ಣಿನಮರದಲಿ ಗಿಣಿಯನು ತೋರಿಸಿ
ಕೆಣಕುವ ಅಣ್ಣನ ಪ್ರೀತಿ||
ಸಣ್ಣವನೀನೆಂದು ಬಣ್ಣಿಸಿ ಹೊಗಳುವ
ಕಣ್ಣಲಿ ಸೋದರ ಪ್ರೀತಿ||೪||
ಅಳತೆಗೆ ನಿಲುಕದೆ ಎದೆಯನ್ನಾಳುವ
ಮಧುರಾನುಭವ ಪ್ರೀತಿ||
ಸೃಷ್ಟಿಯಸೊಬಗಿನ ಕಣಕಣದಲ್ಲಿ
ಅಡಗಿಹ ಸವಿಯದು ಪ್ರೀತಿ||೫||
✍️ ಅನಿತಾ ಜಿ.ಕೆ.ಭಟ್.
19-03-2021.
No comments:
Post a Comment