ಅಂದು 'ಶುಭಾಂಶು' ಮನೆಯಲ್ಲಿ ಸಡಗರವು ತುಂಬಿತ್ತು. ಆ ಮನೆಗೆ ಬಾಣಂತಿ, ಮಗು ಬರುವವರಿದ್ದರು. ಅವರ ಬರುವಿಕೆಗಾಗಿ ಎಲ್ಲರೂ ಕಾದುಕುಳಿತಿದ್ದರು. ರಾಧಾಬಾಯಿಯವರು ಒಂದು ದಿನ ಮುಂಚಿತವಾಗಿಯೇ ಬಂದು ಬಾಣಂತಿಯ ಆರೈಕೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಸನತ್ ತನ್ನ ಅಕ್ಕನ ಪುಟ್ಟ ಮಗನನ್ನು ಬರಮಾಡಿಕೊಳ್ಳಲು ತುಂಬಾ ಉತ್ಸಾಹದಲ್ಲಿದ್ದ. ಅವನು ಹೇಗಿರಬಹುದು ಅಕ್ಕನಂತೆಯಾ? ಭಾವನಂತೆಯಾ? ಎಂಬೆಲ್ಲ ಕುತೂಹಲ ಅವನಲ್ಲಿ ಮನೆಮಾಡಿತ್ತು. ಜಗನ್ನಿವಾಸ ರಾಯರು ಮಗಳು ಮತ್ತು ಮೊಮ್ಮಗನನ್ನು ಬರಮಾಡಿಕೊಳ್ಳುವ ಆತುರದಲ್ಲಿ ಅತ್ತಿಂದಿತ್ತ ಸಾಗಿ ಯಾವ ಕೆಲಸ ಬಾಕಿಯಿದೆ ಎಂದು ಹುಡುಕಿ ಮಾಡುತ್ತಿದ್ದರು. ಬಾಣಂತನಕ್ಕೆ ಹಿರಿಯ ಮಹಿಳೆ ರಾಧಾಬಾಯಿ ಸಿಕ್ಕರು ಎಂಬ ಸಮಾಧಾನವೂ ರಾಯರಿಗಿತ್ತು . ಉಮಾಳಿಗೆ ಒಬ್ಬಳಿಗೇ ಬಾಣಂತನ ಕೆಲಸಗಳನ್ನು ಮನೆ ಕೆಲಸದೊಂದಿಗೆ ಮಾಡಿಕೊಳ್ಳಲು ಕಷ್ಟವಾಗಬಹುದು ಎಂದು ಸಹಾಯಕರನ್ನು ಹುಡುಕಿದಾಗ, ಸುಲಭವಾಗಿ ಯಾರು ಸಿಗದಿದ್ದಾಗ ಜಗನ್ನಿವಾಸ ರಾಯರು ತಲೆಮೇಲೆ ಕೈಹೊತ್ತು ಕುಳಿತಿದ್ದರು. ಅಂತಹ ಸಂದರ್ಭದಲ್ಲಿ ದೂರದ ಸಂಬಂಧಿ ರಾಧಾಬಾಯಿ ತಾನು ಒಪ್ಪಿಕೊಂಡರು. ಹೂವೆತ್ತಿದಂತೆ ಕೆಲಸ ಸಲೀಸಾಯಿತು ಎಂದುಕೊಂಡರು ರಾಯರು.
ಬಾಣಂತಿ ಮಗು ಆಗಮಿಸಿದ ಮೊದಲ ದಿನದಿಂದಲೇ ಎಲ್ಲಾ ಆರೈಕೆ ಅನುಪಾನಗಳಲ್ಲಿ ರಾಧಾಬಾಯಿ ಅವರದ್ದು ಎತ್ತಿದ ಕೈ. ತಾನೂ ಹೆತ್ತು, ಮಗಳಂದಿರ ಬಾಣಂತನವನ್ನೂ ಮಾಡಿ ಅನುಭವವಿದ್ದ ಹಿರಿಜೀವ ರಾಧಾ ಬಾಯಿಯವರು. ಅವರ ಮಾತಿನಂತೆ ಎಲ್ಲವನ್ನೂ ನಿಭಾಯಿಸುತ್ತಾ ಸಹಕರಿಸುತ್ತಿದ್ದರು ಉಮಾ. ರಾತ್ರಿಯಿಡೀ ಅಳುವ ಮಗುವಿನೊಂದಿಗೆ ತಾನು ನಿದ್ದೆ ಬಿಟ್ಟು ಕುಳಿತು, ಮಗುವಿನ ಲಾಲನೆ ಪಾಲನೆಯನ್ನು ರಾಧಾಬಾಯಿ ಮಾಡುತ್ತಿದ್ದರು. "ತೂಗಿರೆ ರಂಗನ.. ತೂಗಿರೆ ಕೃಷ್ಣನ.. ತೂಗಿರೆ ಅಚ್ಯುತಾನಂತನ.." ಎನ್ನುತ್ತಾ ಜೋಗುಳ ಹಾಡು ಹಾಡಿ, ಹಳೆಯ ಧೋತಿಯನ್ನು ಮನೆಯ ಛಾವಣಿಯ ಅಡ್ಡಕ್ಕೆ ಬಿಗಿದು ಇಳಿಬಿಟ್ಟ ಜೋಲಿಯಲ್ಲಿ ಮಲಗಿಸುತ್ತಿದ್ದರು. ಬಾಣಂತಿಯ ಪಥ್ಯಗಳ, ಆಹಾರ ಕ್ರಮಗಳ ಮಾರ್ಗದರ್ಶನವನ್ನು ಉಮಾಳಿಗೆ ನೀಡುತ್ತಿದ್ದರು.
ಬೆಳಗ್ಗೆ ಬೇಗನೆ ಎದ್ದು, ಹಂಡೆಯಲ್ಲಿ ನೀರು ತುಂಬಿಸಿ, ಕಟ್ಟಿಗೆ ತೆಂಗಿನ ಸಿಪ್ಪೆಯಿಂದ ಬೆಂಕಿ ಮಾಡಿ ನೀರು ಬಿಸಿಬಿಸಿ ಕಾಯಲು ಬಿಡುತ್ತಿದ್ದರು. ಒಂಭತ್ತು ಗಂಟೆ ಆಗುವ ಮುನ್ನವೇ ಬಾಣಂತಿ ಮತ್ತು ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿಸುತ್ತಿದ್ದರು. ನಂತರ ಇಬ್ಬರಿಗೂ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸುತ್ತಿದ್ದರು. ತದನಂತರವೂ ರಾಧಾಬಾಯಿ ಬಾಣಂತಿ ಮಗುವಿನ ಬಟ್ಟೆಯನ್ನು ಕೆಲಸದ ಪಾರಕ್ಕನಿಗೆ ಒಗೆಯಲೆಂದು ಕೊಟ್ಟು ಬರುವುದು, ಸಣ್ಣಪುಟ್ಟ ಹಳ್ಳಿ ಮದ್ದುಗಳ ತಯಾರಿ, ಅಡುಗೆ ಕೆಲಸಗಳಲ್ಲಿ ಕೈ ಜೋಡಿಸುವುದು.. ಇತ್ಯಾದಿಗಳಲ್ಲಿ ನಿರತರಾಗಿರುತ್ತಿದ್ದರು.
ಹೀಗೆ ಐದಾರು ದಿನ ಕಳೆಯುವಾಗ ರಾಧಾಬಾಯಿ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಮಾತನಾಡಿ ಫೋನಿಟ್ಟವರು ಮಂಕಾಗಿದ್ದರು. ಇದನ್ನು ಉಮಾ ಗಮನಿಸಿದರೂ ರಾಧಾಬಾಯಿ ಹೇಳದಿದ್ದ ಮೇಲೆ ತಾನೇ ಕೇಳುವುದು ಸರಿಯಲ್ಲ ಎಂದು ಸುಮ್ಮನಾದರು. ಇದು ಮುಂದಿನ ವಾರವೂ ಪುನರಾವರ್ತನೆಯಾಯಿತು. ಈ ಸಲ ಮಾತ್ರ ರಾಧಾ ಬಾಯಿಯವರು "ನೋಡು ಉಮಾ... ವೇದಾವತಿ ಕರೆ ಮಾಡಿದ್ದಾಳೆ. ನೀನು ಮನೆಗೆ ಹೋಗೋದು ಯಾವಾಗ? ಅಲ್ಲಿ ನಿನ್ನ ಸೊಸೆಗೆ ಕಷ್ಟವಾಗುವುದಲ್ಲವೇ.. ಎಂದು ಹೇಳುತ್ತಿದ್ದಾಳೆ."
"ಹೌದೇ.. ರಾಧತ್ತೆ.. ಎರಡು ತಿಂಗಳ ಮಟ್ಟಿಗಾದರೂ ನೀವಿಲ್ಲಿ ಇದ್ದರೆ ನನಗೆ ಅನುಕೂಲ.. ನಿಮಗೆ ಇಲ್ಲಿ ಕಷ್ಟವಾಗದಂತೆ ನಾವು ನೋಡಿಕೊಳ್ಳುತ್ತೇವೆ. "
"ಹೌದು.. ನನ್ನ ಮಗ ಸೊಸೆಯ ಒಪ್ಪಿಗೆ ಪಡೆದು ಬಂದಿದ್ದೇನೆ. ಆದರೂ ವೇದಾವತಿ ಯಾಕೆ ಹೀಗೆ ಮಾತನಾಡುತ್ತಿದ್ದಾಳೆ..? ತಿಳಿಯುತ್ತಿಲ್ಲ ನನಗೆ.."
"ಯಾವುದಕ್ಕೂ ನೀವೊಮ್ಮೆ ನಿಮ್ಮ ಮಗ ಸೊಸೆಯನ್ನು ಕೇಳಿನೋಡಿ" ಎಂದರು ಉಮಾ.
ಸನತ್ ಕಾಲೇಜಿನಿಂದ ಬಂದೊಡನೆ ಅಳಿಯನನ್ನು ಎತ್ತಿ ಮುದ್ದಾಡುತ್ತಿದ್ದ. ಹೊರಗಿನ ಜಗಲಿಗೆ ಎತ್ತಿಕೊಂಡು ಹೋಗಿ ಒಂದು ಸುತ್ತು ಹಾಕಿ ಬರುತ್ತಿದ್ದ. ಅಮ್ಮ "ಸನತ್... ಪುಟ್ಟ ಮಗುವಿಗೆ ತಂಪಾದ ಗಾಳಿ ಬಡಿಯುತ್ತೆ ಕಣೋ.. ಶೀತವಾದೀತು.." ಎಂದರೂ ಅವನು ಕೇಳುವವನಲ್ಲ. ಜಗನ್ನಿವಾಸ ರಾಯರೂ ಅಷ್ಟೇ ಆಗಾಗ ಮೊಮ್ಮಗನನ್ನು ಏರುಸ್ವರದಲ್ಲಿ ಮಾತನಾಡಿಸಿ, ಯಕ್ಷಗಾನದ ಪದಗಳನ್ನು ಹೇಳಿ, ಜೋ ಜೋ ಶ್ರೀ ಕೃಷ್ಣ ಪರಮಾನಂದ.. ಜೋ ಜೋ ಗೋಪಿಯ ಕಂದಾ ಮುಕುಂದ.. ಎನ್ನುತ್ತಾ ಹಾಡು ಹೇಳಿ ಮುದ್ದಿಸಿ ಹೋಗುತ್ತಿದ್ದರು.
ಕೆಲವು ದಿನಗಳ ಬಳಿಕ ರಾಧಾಬಾಯಿ ತನ್ನ ಮನೆಗೆ ಕರೆ ಮಾಡಿ ಮಾತನಾಡಿದರು. ಸೊಸೆ ನಗುನಗುತ್ತಾ "ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನೀವು ಆರಾಮವಾಗಿ ಎರಡು ತಿಂಗಳು ಬಿಟ್ಟು ಬನ್ನಿ ಅತ್ತೆ.." ಎಂದಾಗ ಸೊಸೆಯ ಮಾತನ್ನು ಕೇಳಿದ ರಾಧಾಬಾಯಿ ಅವರಿಗೆ ಸಮಾಧಾನವಾಯಿತು. ಬಂದ ಕಾರ್ಯ ಪೂರ್ಣಗೊಳಿಸಿ ತೆರಳುವೆನೆಂದರು.
ಆದರೆ ವೇದಾವತಿಯ ಕರೆ ಬರುವುದು ಮಾತ್ರ ಕಡಿಮೆಯಾಗಲಿಲ್ಲ. ವಾರಕ್ಕೆರಡು ಬಾರಿ ಕರೆ ಮಾಡಿ ಬಾಣಂತಿ ಮಗುವಿನ ಬಗ್ಗೆ ಎಲ್ಲ ಮಾಹಿತಿಯನ್ನು ಚೂರೂ ಬಿಡದೆ ವಿಚಾರಿಸಿಕೊಂಡು.. ''ನೀನು ಯಾಕೆ ಇನ್ನೂ ಅಲ್ಲೇ ಇದ್ದೀಯ? ಮನೆಗೆ ಹೋಗು ನಿನ್ನ ಮೊಮ್ಮಗುವಿಗೆ ವಿಪರೀತ ಜ್ವರವಂತೆ, ಹಠಮಾಡುತ್ತದಂತೆ.." ಎಂದು ಹೇಳುತ್ತಿದ್ದರು. ಮಗದೊಮ್ಮೆ ನಿನ್ನ ಮಗನಿಗೆ ಸೊಂಟ ಉಳುಕಿದೆಯಂತೆ, ಸೊಸೆಗೆ ಕೈಗೆ ತಾಗಿದೆಯಂತೆ, ರಾತ್ರಿಯೆಲ್ಲ ನಿದ್ದೆಗೆಟ್ಟು ನಿನ್ನ ಆರೋಗ್ಯ ಏರುಪೇರಾದರೆ ಏನು ಮಾಡುವುದು..?.... ಪದೇ ಪದೇ ಹೀಗೆ ಹೇಳುವಾಗ ರಾಧಾಬಾಯಿ ಅವರಿಗೆ ಇರುಸುಮುರುಸು. ಅಲ್ಲದೆ ವೇದಾವತಿಯವರು ರಾಧಾಬಾಯಿಯವರಿಗೂ ಉಮಾಳಿಗೂ ಇಬ್ಬರಿಗೂ ಸಂಬಂಧಿ. ಅಂದಮೇಲೆ ಅವರ ಮಾತು ಕೇಳದಿರುವುದು ಕಷ್ಟ. ತನ್ನ ಸೊಸೆಯಲ್ಲಿ ತನ್ನ ವಿರುದ್ಧ ಏನಾದರೂ ಛೂ.. ಬಿಟ್ಟರೆ ಎಂದು ಕೂಡ ಸ್ವಲ್ಪ ಅಂಜಿಕೆಯಾಯಿತು ರಾಧಾ ಬಾಯಿಯವರಿಗೆ.
ರಾಧಾಬಾಯಿಯವರಿಗೆ ಬಾಣಂತನ ಪೂರ್ತಿ ಮಾಡಿ ಹೋಗಬೇಕೆಂಬ ಆಸೆ ಇದ್ದರೂ, ವೇದಾವತಿಯ ಒತ್ತಡದಿಂದಾಗಿ ಅರ್ಧದಲ್ಲಿ ಹೋಗುವ ನಿರ್ಧಾರವನ್ನು ಕೈಗೊಂಡರು. ಜಗನ್ನಿವಾಸ ರಾಯರು ಮತ್ತು ಉಮಾ ಹಲವು ಬಾರಿ, ಎರಡು ತಿಂಗಳಾಗಿ ಹೋಗಬಹುದು ಎಂದು ಒತ್ತಾಯಿಸಿದರೂ ಅವರಿಗೆ ನಿಲ್ಲುವ ಧೈರ್ಯ ಬರಲಿಲ್ಲ. ಮನೆಗೆ ತೆರಳಿದ ರಾಧಾಬಾಯಿ ಮನೆಯವರಲ್ಲಿ ವಿಚಾರಿಸಿದರು. ಅವರಿಗೂ ವೇದಾವತಿಯ ನಡತೆಯ ಹಿನ್ನೆಲೆ ಏನು ತಿಳಿದಿರಲಿಲ್ಲ.
ರಾಧಾಬಾಯಿ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿದು ಸುಮಾರು ದಿನ ಕಳೆದರೂ ವೇದಾವತಿಯ ಕರೆ ಬಂದಿರಲಿಲ್ಲ. ತಿಂಗಳು ಕಳೆವಾಗ ವೇದಾವತಿ ಕರೆ ಮಾಡಿದಾಗ ಉಪಾಯವಾಗಿ ಮಾತಿಗೆಳೆದರು ರಾಧಾಬಾಯಿ. "ನೋಡು.. ವೇದಾ.. ಉಮಾ ಮಗಳು ತುಂಬಾ ಅದೃಷ್ಟವಂತೆ..."
"ಹೌದಕ್ಕಾ.. ಹೌದು..."
"ಒಳ್ಳೆಯ ಕಡೆ ಸಂಬಂಧವೂ ಕೂಡಿಬಂದಿತ್ತು. ಈಗ ಮೊದಲನೆಯದೇ ಗಂಡು ಮಗು ಎಂಬ ಸಂಭ್ರಮ."
"ಹೌದು.. ಅಷ್ಟು ಮಾತ್ರವಲ್ಲದೆ, ನೀನು ಕೂಡ ಅಲ್ಲಿ ಹೋಗಿ ಅವರಿಗೆ ಸಹಕರಿಸಿ ಅವರ ಸಂಭ್ರಮವನ್ನು ಹೆಚ್ಚು ಮಾಡಿದೆ."
"ಅಯ್ಯೋ.. ನಾನೇನು ಮಾಡಿದೆ? ಈ ಮುದುಕಿ ಏನು ಮಾಡಿಯಾಳು? ಸಲ್ಪ ಅಲ್ಲಿ ಸ್ವಲ್ಪ ಇಲ್ಲಿ ಕುಳಿತು, ಕುಳಿತಲ್ಲಿಂದಲೇ ಹೇಳುತ್ತಿದ್ದೆ ಅಷ್ಟೇ."
"ಅದನ್ನಾದರೂ ಯಾಕೆ ಮಾಡಬೇಕು.? ನಮಗೆಲ್ಲಾ ಗಂಡು ಮಗು ಇಷ್ಟು ಸುಲಭದಲ್ಲಿ ದಕ್ಕಿದೆಯೇ..?"
"ಅದೆಲ್ಲ ನಮ್ಮ ಹಣೆಬರಹ ವೇದಾ"
"ಅಲ್ಲ ಕಣೇ ಅಕ್ಕಾ.. ನನಗೆ ನಾಲ್ಕು ಹೆಣ್ಣು ಮಕ್ಕಳಾದ ನಂತರ ಐದನೆಯದು ಗಂಡು.. ಮೊದಲನೇ ಮಗು ಹೆಣ್ಣಾದಾಗ ಮೂದಲಿಸಿದರು ನನ್ನ ಅತ್ತೆ, ಗಂಡ. ತವರಿನವರೆಲ್ಲ ನನ್ನ ಅಣ್ಣನಿಗೆ ಗಂಡು ಮಗು ಹುಟ್ಟಿದೆ ಎಂದು ನನ್ನನ್ನು ತಾತ್ಸಾರದಿಂದಲೇ ಕಂಡರು. ಬಾಣಂತನ ಮುಗಿಸಿ ಗಂಡನ ಮನೆಗೆ ಬಂದಾಗ ಸಿಕ್ಕಿದ್ದು ಬರೀ ಇರಿವ ಮಾತುಗಳ ಸ್ವಾಗತ.."
"ನನ್ನದು ಬೇರೆ ಇಲ್ಲ ಕಥೆ.. ಆರು ಹೆಣ್ಣು ಹೆತ್ತವಳು ಯಾರಿಗೂ ಬೇಡ ಎಂದು ಮೂದಲಿಸುತ್ತಿದ್ದರು. ಕೊನೆಗೆ ದೇವರು ಕಣ್ಣು ಬಿಟ್ಟ.. ಏಳನೆಯದು ಗಂಡು ಹುಟ್ಟಿದ.. ಆಗಲೇ ಆಪರೇಷನ್ ಮಾಡಿಸಿಕೊಂಡೆ.. ಈಗ ಯಾರಾದರೂ ನಿಮಗೆ ಎಷ್ಟು ಮಕ್ಕಳು ಎಂದರೆ ಹೇಳಲೂ ಸಂಕೋಚವಾಗುತ್ತದೆ.. ಈಗಿನವರಿಗೆಲ್ಲ ಒಂದೋ ಎರಡೋ ಮಕ್ಕಳು ಇರುವಾಗ ನಮ್ಮನ್ನು ನೋಡಿ ನಕ್ಕಾರು.. ಎಂದು ಅಳುಕಾಗುತ್ತಿದೆ.."
"ಹೌದು.. ನನಗೂ ಹಾಗೇ ಅನಿಸುತ್ತದೆ. ನಾವೆಲ್ಲ ಎಷ್ಟು ತಿರಸ್ಕಾರದ ನುಡಿ ಕೇಳಬೇಕಾಗಿ ಬಂದಿತ್ತು. ಆದರೆ ಈಗ ಉಮಾ ಮಗಳಿಗೆ.. ಅಬ್ಬಾ ಅದೆಷ್ಟು ಸಂಭ್ರಮ ಅಷ್ಟು ಸುಲಭವಾಗಿ... ಬಾಣಂತನಕ್ಕಾದರೂ ಸ್ವಲ್ಪ ಕಷ್ಟಪಡಲಿ.. ನೀನೇಕೆ ಸಹಾಯಕ್ಕೆ ಹೊರಟೆ.. ಬದುಕಿನ ಕಷ್ಟ ಅವರಿಗೂ ತಿಳಿಯಲಿ.."
"ಅದೆಲ್ಲ ನಮ್ಮ ಕಾಲದಲ್ಲಿ ವೇದಾ.. ಈಗ ಹೆಣ್ಣುಮಕ್ಕಳನ್ನೂ ಬಲು ಪ್ರೀತಿಯಿಂದ ಸಾಕುತ್ತಾರೆ. ಅಲ್ಲದೆ ಉಮಾಳ ಮಗಳು-ಅಳಿಯ ವಿದ್ಯಾವಂತರು. ಹೆಣ್ಣು ಮಗು ಹುಟ್ಟಿದರೂ ಅಷ್ಟೇ ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು. ಅಷ್ಟಕ್ಕೂ ನನ್ನನ್ನು ಬರಲು ಹೇಳಿರುವುದು ಹೆರಿಗೆಗೂ ಮುನ್ನವೇ.. ಗಂಡು ಮಗುವೆಂದು ತಿಳಿದು ನನ್ನನ್ನು ಬರಲು ಹೇಳಲಿಲ್ಲ.. ಗಂಡಾದರೂ ಹೆಣ್ಣಾದರೂ ಹೆತ್ತವರಿಗೆ ಮಕ್ಕಳು ಅಲ್ಲವೇ ವೇದಾ.."
"ಗಂಡೆಂಬ ಅಹಂ ಅವರ ತಲೆಗೆ ಏರಬಾರದು ಎಂದರೆ ಸ್ವಲ್ಪ ಅವರೂ ಕಷ್ಟ ಪಡಬೇಕು. ನಮ್ಮಷ್ಟಲ್ಲದಿದ್ದರೂ ಕಿಂಚಿತ್ತಾದರೂ... ದೇವರು ಕೆಲವರಿಗೆ ಅನ್ಯಾಯ ಮಾಡಿ ಕೆಲವರಿಗೆ ಮಾತ್ರ ಹರಸುತ್ತಾನೆ.. ಆತನದೂ ತಾರತಮ್ಯವೇ.."
"ಹೆಣ್ಣುಮಕ್ಕಳನ್ನು ಕೂಡ ಈಗ ವಿದ್ಯಾಭ್ಯಾಸ ನೀಡಿ ಸಾಕಿ ಸಲಹಿದರೆ ಅವರು ಕೂಡ ಹೆತ್ತವರಿಗೆ ಇಳಿವಯಸ್ಸಿನಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾರೆ. " ಎಂದರು ರಾಧಾ ಬಾಯಿ.
"ಏನೇ ಆದರೂ.. ನೋಡಿ... ನಾವು ನಾಲ್ಕು ಹೆಣ್ಣುಮಕ್ಕಳನ್ನು ಕಲಿಸಿ ಮದುವೆ ಮಾಡಲು ಎಷ್ಟು ಪ್ರಯಾಸಪಟ್ಟೆವು. ಈಗ ಮಗನ ವಿದ್ಯಾಭ್ಯಾಸಕ್ಕೆ ಪರದಾಡುವಂತಾಗಿದೆ.. ಅಂತಹದ್ದರಲ್ಲಿ ಉಮಾಳ ಮಗಳಿಗೆ.. ಬಯಸದೆ ಬಂದ ಭಾಗ್ಯವೇ ಸರಿ.."
ಅವಳ ಮಾತುಗಳನ್ನು ಕೇಳಿದ ರಾಧಾಬಾಯಿ ಅವರಿಗೆ... ವೇದಾವತಿ ಪದೇ ಪದೇ ಕರೆ ಮಾಡಿ "ನೀನು ಮನೆಗೆ ಹೋಗು'' ಎಂದು ಹೇಳುತ್ತಿದ್ದುದರ.. ಹಿಂದಿನ ಕಹಿಸತ್ಯ ಅರ್ಥವಾಯಿತು. ಅತಿಯಾದ ಪುತ್ರವ್ಯಾಮೋಹದಿಂದ, ಅರ್ಥಾತ್ ಗಂಡುಸಂತಾನದ ವ್ಯಾಮೋಹದಿಂದ, ಉಮಾಳ ಮಗಳ ಮೇಲೆ ಮತ್ಸರಗೊಂಡಿದ್ದ ವೇದಾಳ ಮನಸ್ಥಿತಿಯ ಬಗ್ಗೆ ಮರುಕ ಹುಟ್ಟಿತು. ಸೊಸೆಯಾಗಿ ಮನೆ ಬೆಳಗಲು, ಸಖಿಯಾಗಿ ಸುಖವುಣಿಸಲು, ಮಡಿಲಾಗಿ ಮಮತೆಯನು ಧಾರೆಯೆರೆಯಲು, ಹಿರಿಯಜ್ಜಿಯಾಗಿ ಮಾರ್ಗದರ್ಶನ ಮಾಡಲು, ಸಹೋದರಿಯಾಗಿ ಬಾಂಧವ್ಯ ಬೆಸೆಯಲು ಹೆಣ್ಣು ಬೇಕು. ಆದರೆ ಒಡಲಲ್ಲಿ ಕುಡಿಯೊಡೆದಾಗ ಮಾತ್ರ ಗಂಡಾದರೇ ಬೆಲೆ ಹೆಚ್ಚು ಎಂಬ ಪುತ್ರ ವ್ಯಾಮೋಹವನ್ನು ಇಂದಿಗೂ ಸಡಿಲಿಸದ ವೇದಾವತಿಯನ್ನು ಕಂಡು ಇಂಥವರನ್ನು ಈ ಜನ್ಮದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಅಥವಾ ಅಂತಹದೊಂದು ಪವಾಡ ನಡೆಯಬೇಕಾದರೆ ಅದು ಭಗವಂತನಿಂದ ಮಾತ್ರ ಸಾಧ್ಯ ಎಂದುಕೊಂಡರು ರಾಧಾ ಬಾಯಿ.
✍️... ಅನಿತಾ ಜಿ.ಕೆ.ಭಟ್.
16-03-2022.
#ಪ್ರತಿಲಿಪಿಕನ್ನಡ ದೈನಿಕ ಕಥೆ
#ವಿಷಯ ಪುತ್ರ ವ್ಯಾಮೋಹ