Thursday, 24 December 2020

ಪ್ರೇಮ ಸಿಂಚನ

 




ಪ್ರೇಮ ಸಿಂಚನ

ಮಂದ ಪವನ ಬೀಸಿಬಂದು
ನಾಲ್ಕು ಹನಿಯ ಉದುರಿಸಿ
ನೀ ಬರುವ ಹಾದಿಯಲ್ಲಿ
ನಗುವ ಹಸಿರು ಗರಿಕೆ ಚಿಗುರಿಸಿ||೧||

ಬಾನ ತುಂಬಾ ಸದ್ದು ಮಾಡಿ
ಮೋಡ ಓಡಿ ಹೋಗಿದೆ
ಹಿಡಿಯದಾದೆ ನಿನ್ನ ಕೂಡ
ಭುವಿಯಂತೆ ದುಗುಡ ನನಗಿದೆ||೨||

ಮಧುರ ಮಾತು ಒಲವ ಗೀತೆ
ಕರ್ಣದೊಳಗೆ ರಿಂಗಣ
ಅಧರಕಧರ ಬೆಸೆಯದಿರಲು
ಹುಸಿ ಮುನಿಸಿನ ಕಾರಣ||೩||

ಎಲ್ಲೆ ಮೀರಿ ನಡೆಯೆನೆಂದ
ನಲ್ಲ ನುಡಿಯ ಮರೆತೆಯಾ
ಕಲ್ಲು ಹೃದಯವ ಹೂವಾಗಿಸಿ
ಬಲ್ಲ ಸವಿಯ ಉಣಿಸೆಯಾ||೪||

ನಾನು ನೀನು ಬೆರೆಯಲಿಂದು
ಪರಿಶುದ್ಧ ಪ್ರೇಮ ಒರತೆಯು
ನೀನು ನನ್ನ ಮರೆತರಂತೂ
ನಯನ ದುಃಖ ಜಲಭರಿತವು||೫||

ಗರಿಕೆ ನಗುವ ಮರೆವ ಮುನ್ನ
ವಿರಹ ಅಳಿಸಿ ಬಂಧನ
ಅರಿಕೆ ನನ್ನದು, ಕೈ ಹಿಡಿದು ನನ್ನ
ಭರಿಸು ಪ್ರೇಮ ಸಿಂಚನ||೬||

✍️... ಅನಿತಾ ಜಿ.ಕೆ.ಭಟ್.
25-12-2020.

ಸಿಗ್ನೇಚರ್ ಲೈನ್- ಸೌಹಾರ್ದ ಬಳಗ- ನೀನು ಬರುವ ಹಾದಿಯಲ್ಲಿ ಗರಿಕೆ ಚಿಗುರಿ ನಗುತಿದೆ-

ಚಿತ್ರ ಕೃಪೆ:- ಅಂತರ್ಜಾಲ.

ಜೆಂಬ್ರದ ಗೌಜಿ #ಹವ್ಯಕ ಭಾಷಾ ಕವನ

 


ಜೆಂಬ್ರದ ಗೌಜಿ

ಒಪ್ಪನ ಜಾಲಿಲಿ ಚಪ್ಪರ ಎದ್ದಿದು
ಇಪ್ಪದು ಮಗಳ ಮದುವೆಯಡ
ಕೊಪ್ಪರಿಗೆ ಅಶನವ ಬೇಶುಲಿದ್ದಡ
ತಪ್ಪುಸುಲೆಡಿಯಡ ಹೇಳಿದ್ದ°..||೧||

ಮೇಲಾರಕ್ಕೊರವಲೆ ಜನ ನೂರಕ್ಕು
ಬಲರಾಮಣ್ಣನ ಅಡಿಗೆಯಡ
ಕೆಲಸಲ್ಲಿಪ್ಪ ಭರ್ಜರಿ ಕುಳವಡ
ಕೆಲವರುಷಂದಲೆ ಪೇಟೆಲಿದ್ದದಡ...||೨||

ಸುದರಿಕೆ ಮಾಡುವ ನೆಂಟ್ರೇಯಿಲ್ಲೆ
ಬದಲಿಂಗೆ ಶಂಭಣ್ಣನ ಟೀಮಿದ್ದು
ವಿಧವಿಧ ಪಾಕವ ಪ್ರೀತಿಲಿ ಬಳುಸಿ
ಒದಗುವ ಜನ ಅವ ಮೋಸಯಿಲ್ಲೆ....||೩||

ಅಬ್ಬರಲಿತ್ತದ ವಾಲಗಸೆಟ್ಟು
ದಿಬ್ಬಣಬಪ್ಪಗ ಮಂಗಳವಾದ್ಯ
ಒಬ್ಬನ ಮಾತುದೆ ಕೇಳಲೆ ಕೇಳ
ಬೊಬ್ಬೆಹೊಡದು ಹರ್ದೋತುಗೆಂಟ್ಲು...||೪||

ಕೂಸೂಮಾಣಿಯು ಒಳ್ಳೆಯ ಜೋಡಿ
ಲೇಸಾದ ಕೂಟವ ಒಪ್ಪನೆ ನೋಡಿ
ಒಸಗೆಗೂ ಮೊದಲೇ ಬಫೆಗೆ ನಿಂದವು
ಕಸವುಡುಗುವ ಮೊದಲೇ ಹಂತಿಗೆಸಾಲು...||೫||

ತಡವಲೆಡಿಯದ್ದ ಸೆಕೆಯಿದ್ದಪ್ಪಾ
ಉಂಡಪ್ಪಗ ಮೈ ಚೆಂಡ್ಯಾವುತ್ತು
ಕಂಡಾಬಟ್ಟೆ ಬಗೆಯ ಹೊಸ ಪಾಕಂಗ
ಬಿಡ್ಲೆ ಮನಸಾಗದ್ದ ರುಚಿಯಡಿಗೆ..||೬||

ಇಂದಿರುಳಿಂಗೆ ತ್ರಿಕಾಲ ಪೂಜೆ
ನಾಂದೀಯಿದ್ದಡ ನಾಳೆ ಶಂಭುವಲ್ಲಿ
ಚೆಂದಲ್ಲಿ ಹೆರಟು ಹೋಪದೆ ಕೆಲಸ
ಬಂಧುಗಳ ಗಳಸಿರೆ ಸಂಬಂಧ ಒಳಿಗು..||೭||

ಹಳೆಹೊಸ ಕ್ರಮದ ಹೂರಣಬೇಕು
ಕಳವಲೆ ಸುಖಸಂತೋಷದ ಬದುಕು
ಬಳುವಳಿಯಾದ ಸಂಸ್ಕಾರವ ಒಳಿಶಿ
ಕಳಕಳಿಲಿ  ಜೆಂಬ್ರವ ಗೌಜಿಲಿ ನಡೆಶಿ...||೮||

✍️... ಅನಿತಾ ಜಿ.ಕೆ.ಭಟ್.,ಮಂಗಳೂರು.

27-04-2020.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ ವಿಷು ವಿಶೇಷ ಕವನ ಸ್ಪರ್ಧೆಗಾಗಿ ಬರೆದ ಕವನ.
ದತ್ತ ವಿಷಯ:- ಜೆಂಬ್ರದ ಗೌಜಿ.

ಚಿತ್ರ ಕೃಪೆ:- ಅಂತರ್ಜಾಲ

  

Wednesday, 2 December 2020

ಈ ಅಗಲಿಕೆ ಅನಿರೀಕ್ಷಿತ

 


ಅಗಲಿದ ಮಾವನವರಿಗೆ ಭಾವಪೂರ್ಣ ಶ್ರದ್ಧಾಂಜಲಿ 💐

         ಅಳುತ್ತಾ ಭೂಮಿಗೆ ಬಂದ ಜೀವ, ಮತ್ತೆ ಭುವಿಯನ್ನಗಲುವಾಗ ತಾನು ಮೊದಲು ಸ್ತಬ್ಧವಾಗಿ ನಂತರ ತನ್ನವರನ್ನು ಅಳಿಸುತ್ತದೆ. ವ್ಯಕ್ತಿ ಎಷ್ಟು ವರ್ಷ ಬದುಕಿದ್ದರು ಅನ್ನುವುದಕ್ಕಿಂದ ಹೇಗೆ ಬದುಕಿಬಾಳಿದ್ದರು ಅನ್ನುವುದು ಮುಖ್ಯ. ದೇವರು ಕೊಡುವ ಆಯುಷ್ಯದಲ್ಲಿ  ಎಲ್ಲರ ಒಳಿತನ್ನು ಬಯಸುತ್ತಾ, ನಗುನಗುತ್ತಾ ಬಾಳಿ, ಕಾಲನ ಕರೆಬಂದಾಗ  ಸೀದಾ ಎದ್ದು ಹೊರಟಂತೆ ಬದುಕಿಗೆ ವಿದಾಯ ಹೇಳಿದರೆ ಆ ವ್ಯಕ್ತಿಗೆ ಸುಖಮರಣ ಅನ್ನುತ್ತಾರೆ, ಆದರೆ ಕುಟುಂಬದವರಿಗೆ ಆ ಅನಿರೀಕ್ಷಿತ ಅಗಲಿಕೆಯ ವಿಷಯವನ್ನು ಅರಗಿಸಿಕೊಳ್ಳಲು, ಉಂಟಾಗುವ ಆಘಾತವನ್ನು ಸಹಿಸಿಕೊಳ್ಳಲು ಬಹಳ ಸಮಯ ಬೇಕು.

            ಹೌದು ಬಂಧುಗಳೇ..  ನವೆಂಬರ್ 11,12 ರಂದು ನಮ್ಮ ಕುಟುಂಬ ಅನುಭವಿಸಿದ ಸಂಕಟವಿದು. ನನ್ನ ಮಾವನವರಾದ ಸುಬ್ರಹ್ಮಣ್ಯ ಭಟ್, ನೆಲ್ಲಿಕ್ಕಳಯ ಇವರು ನವೆಂಬರ್ 11 ರಂದು ಬೆಳಿಗ್ಗೆ ಕಾಫಿ ತಿಂಡಿಯ ನಂತರ ತೋಟಕ್ಕೆ ಹೋಗಿ ತನ್ನ ದೈನಂದಿನ ಕೆಲಸಕಾರ್ಯಗಳಲ್ಲಿ ತೊಡಗಿದ್ದವರು, ಸೀದಾ ಮನೆಗೆ ಬಂದರು. ತಲೆಸುತ್ತುತ್ತಿದೆ ಎನ್ನುತ್ತಾ ವಾಂತಿ ಮಾಡಿದರು. ಏನೋ ಅಜೀರ್ಣ ಆಗಿರಬೇಕು ಅಂದುಕೊಳ್ಳುತ್ತಿದ್ದಂತೆ ವಾಂತಿ ತೀವ್ರವಾಯಿತು.
ಮನೆಯಲ್ಲಿ ಅತ್ತೆ ಮಾವ ಇಬ್ಬರೇ ಇರುವುದು. ಅತ್ತೆ ನೆರೆಮನೆಯ ಬಾಲಣ್ಣನನ್ನು (ಬಾಲಚಂದ್ರ ಭಟ್ ಪೆರ್ವ- ಇವರು ಮಾವನವರ ಅಣ್ಣನ ಮಗಳ ಪತಿ) ಕರೆದರು. ಪರಿಸ್ಥಿತಿಯ ಗಂಭೀರತೆಯನ್ನರಿತು ಬಾಲಣ್ಣ ಆಸ್ಪತ್ರೆಗೆ ಕರೆದೊಯ್ಯುವ ಯೋಚನೆ ಮಾಡಿ, ತನ್ನ ಪರಿಚಯದ ಆಟೋವನ್ನು ಕರೆಸಿದರು.

      ನಮ್ಮ ಮನೆ ಇರುವುದು ಸ್ವಲ್ಪ ಹೊಂಡದಲ್ಲಿ ಅನ್ನಬಹುದು. ಪರಿಚಯದ ಒಂದೆರಡು ಆಟೋ ಬರುವುದು ಬಿಟ್ಟರೆ,.. ಜೀಪು, ಓಮ್ನಿಯಂತಹ ವಾಹನಗಳು ಮಾತ್ರ ಸರಾಗವಾಗಿ ಚಲಿಸಬಹುದಾದ ಮಾರ್ಗ. ಅಸ್ವಸ್ಥರಾದರೂ ಪಂಚೆ ಉಟ್ಟು, ದುಡ್ಡು ಎಣಿಸಿ ಕಿಸೆಗೆ ತುಂಬಿಸಿಕೊಂಡಿದ್ದರು. ಆಟೋ ಬರುವಷ್ಟರಲ್ಲಿ ಅವರಿಗೆ ಎದ್ದು ನಡೆಯುವುದಕ್ಕೂ ಕಷ್ಟವಾಗಿತ್ತು. ಆಟೋ ಡ್ರೈವರ್ ಮೈಯೆಲ್ಲಾ ತಣ್ಣಗಾದಂತಿದೆ, ಆಟೋದಲ್ಲಿ ಕರೆದುಕೊಂಡು ಹೋಗಲು ಕಷ್ಟವಾಗಬಹುದು, ಬೇರೇನಾದರೂ ವಾಹನ ವ್ಯವಸ್ಥೆ ಮಾಡೋಣ ಅಂದರು.. ಅಷ್ಟು ಬೇಗ ಬೇರೆ ವಾಹನವನ್ನು ಕರೆಸುವುದು ಸುಲಭವಲ್ಲ..ಕುಡಿಯೋದಕ್ಕೆ ಬೊಂಡ ಇದ್ದರೆ ಕೊಡಿ ಅವರಿಗೆ ಅಂದರು. ಮಾವ ನೆಟ್ಟ ಮರಗಳೆಲ್ಲ ಎತ್ತರಕ್ಕೆ ಬೆಳೆದಿದ್ದವು. ಅತ್ತೆಗೆ ಕೊಕ್ಕೆಯಲ್ಲಾದರೂ ಎಳನೀರು ಕೊಯ್ಯೋಣ ಅಂದರೆ ಯಾವ ಮರದಲ್ಲೂ ಕೊಕ್ಕೆಗೆ ಎಟಕುವಂತೆ ಎಳನೀರು ಇರಲಿಲ್ಲ. ಸ್ವಲ್ಪ ಜ್ಯೂಸ್ ಮಾಡಿ ಕೊಟ್ಟರು.

       ಬಾಲಣ್ಣ, ಆಟೋ ಡ್ರೈವರ್ ಇಬ್ಬರೂ ಸೇರಿ ಆಟೋದಲ್ಲಿ ಕುಳ್ಳಿರಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ಡ್ರೈವರ್ ಹಿಂದೆ ಆಗಾಗ ತಿರುಗಿ ನೋಡುತ್ತಾ ಸೀರಿಯಸ್ ಇದ್ದಂತಿದೆ, ಬೇರೆ ವಾಹನ ಮಾಡೋಣವಾ... ಎಂದು ಆತಂಕದಿಂದಲೇ ವಾಹನ ಚಲಾಯಿಸುತ್ತಿದ್ದರು. ಅಲ್ಪ ಸ್ವಲ್ಪ ಮಾತನಾಡುತ್ತಿದ್ದ ಮಾವ ಒಂದೆರಡು ಸಲ ಸ್ವಲ್ಪ ನೀರು ಕೇಳಿ ಕುಡಿದಿದ್ದರು ‌. ನಂತರ "ಬಾಲ.. ನಾನು ಸ್ವಲ್ಪ ಮಲಗುತ್ತೇನೆ.." ಎಂದು ಮಲಗಿದರು. ಮುಳ್ಳೇರಿಯಾದಲ್ಲಿ ಪರೀಕ್ಷಿಸಿದ ವೈದ್ಯರು ಏನಾಗಿದೆ ಎಂದು ತಿಳಿಯುತ್ತಿಲ್ಲ, ಕಾಸರಗೋಡಿಗೆ ಕರೆದೊಯ್ಯಿರಿ ಎಂದು ಸೂಚಿಸಿದರು.

       ಆಗ ಹನ್ನೊಂದು ಗಂಟೆಯ ಸಮಯ. ನನ್ನ ಪತಿ ಡಾ|| ಗೋಪಾಲಕೃಷ್ಣ ಭಟ್ ಡ್ಯೂಟಿಗೆ ಹೊರಡಲು ಸಿದ್ಧವಾಗಿದ್ದರು. ಇಂಜಿನಿಯರಿಂಗ್ ಅಂತಿಮ  ಪದವಿಯ ಪರೀಕ್ಷೆಗಳು ಜರುಗುತ್ತಿದ್ದವು. ಮಂಗಳೂರಿನಲ್ಲೇ ಇರುವ ಬೇರೊಂದು ಕಾಲೇಜಿನಲ್ಲಿ ಡೆಪ್ಯುಟಿ ಚೀಫ್ ಎಕ್ಸಾಮಿನರ್ ಆಗಿ ಪತಿ ನಿಯೋಜನೆಗೊಂಡಿದ್ದರು. ಪರೀಕ್ಷೆ ಅಪರಾಹ್ನ ಇದ್ದುದರಿಂದ ಸ್ವಲ್ಪ ಸಮಾಧಾನದಿಂದಲೇ ಹೊರಟು ನಿಂತಿದ್ದರು. ಆಗ ಕರೆಯೊಂದು ಬಂದಿತು. "ಭಾವ.." ಅನ್ನುತ್ತಾ ಮಾತನಾಡುತ್ತಿದ್ದಂತೆ ಮಾವನವರ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂದು ಅರಿತೆ. ವೈದ್ಯರಲ್ಲಿ ಮಾತನಾಡಿದರು. "ನಾನು ಪರೀಕ್ಷಾ ಕರ್ತವ್ಯವನ್ನು ಬೇರೆಯವರಿಗೆ ವರ್ಗಾಯಿಸಿ ಬರಲು ಪ್ರಯತ್ನ ಮಾಡುತ್ತೇನೆ. ಆರೋಗ್ಯ ಹೇಗಿದೆ..ಗಾಬರಿ ಆಗುವಂತಿದೆಯ" ಎಂದೆಲ್ಲ ಕೇಳಿದಾಗ,
"ಏನೆಂದು ತಿಳಿಯುತ್ತಿಲ್ಲ ಕಾಸರಗೋಡಿಗೆ ಕರೆದೊಯ್ಯಿರಿ" ಎಂದರು ವೈದ್ಯರು. "ಸರಿ..ಕರೆದೊಯ್ಯಲು ವ್ಯವಸ್ಥೆ ಮಾಡುತ್ತೇನೆ" ಎಂದುಹೇಳಿದರು. "ಭಾವ.. ನೀವು ಕರೆದೊಯ್ಯಿರಿ.. ನಾನೀಗ ಬರುತ್ತೇನೆ" ಎಂದರು.
ಸಹೋದ್ಯೋಗಿ ಡಾ|| ಸೂರ್ಯನಾರಾಯಣ ಭಟ್ ಅವರಲ್ಲಿ ವಿಷಯ ತಿಳಿಸಿದಾಗ ಪರೀಕ್ಷಾ ಜವಾಬ್ದಾರಿ ನಿಭಾಯಿಸಲು ಮುಂದೆ ಬಂದರು. ವಿಟಿಯು ಮೈಸೂರು ವಿಭಾಗಕ್ಕೆ ನೇಮಿಸಿದ್ದ  ವಿಶೇಷ ಆಫೀಸರ್'ಗೆ ವಿಷಯ ತಿಳಿಸಿದಾಗ ಅವರೂ ಕೂಡ ಸಮ್ಮತಿಸಿದರು. ನಿಯೋಜನೆಗೊಂಡಿದ್ದ ಕಾಲೇಜಿಗೆ ಕರೆ ಮಾಡಿ "ನನ್ನ ತಂದೆಯವರು ಅಸ್ವಸ್ಥರಾಗಿದ್ದಾರೆ.. ನಾನೊಬ್ಬನೇ ಮಗ ಇರುವುದು. ನಂಗೆ ಅಕ್ಕ ತಂಗಿ ಕೂಡಾ ಇಲ್ಲ.. ಪ್ಲೀಸ್.. ಈಗ ನಾನು ಹೋಗಲೇಬೇಕು.. ದಯವಿಟ್ಟು ಅವಕಾಶ ಕೊಡಿ. " ಎಂದು ಪರಿಪರಿಯಾಗಿ ವಿನಂತಿಸಿದರು. ಆ ಕಾಲೇಜಿನ ಕಡೆಯಿಂದ ಒಪ್ಪಿಗೆ ದೊರೆಯಲಿಲ್ಲ. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಡೌನ್ಲೋಡ್ ಮಾಡಲು ಬೇಕಾದ ಮಾಹಿತಿಗಳು ಬರುವುದು ಇವರ ಮೊಬೈಲಿಗೆ. ಏಕಾಏಕಿ ಮೊಬೈಲ್ ನಂಬರ್ ಬದಲಾವಣೆ ಮಾಡಿ ಪರೀಕ್ಷೆಗೆ ಏನಾದರೂ ತೊಂದರೆ ಆದರೆ.. ಎಂದು ಕಾಲೇಜಿನವರ ಮುಂಜಾಗ್ರತೆ.. ಒಂದು ಕಡೆ ನೂರಾರು ವಿದ್ಯಾರ್ಥಿಗಳ ಭವಿಷ್ಯ, ಇನ್ನೊಂದು ಕಡೆ ಕ್ಷಣದಿಂದ ಕ್ಷಣಕ್ಕೆ ತಿವ್ರವಾಗಿ ಅಸ್ವಸ್ಥರಾಗುತ್ತಿರುವ ತಂದೆಯವರು.. ಬಾಲಣ್ಣನ ಜೊತೆ ತನ್ನ ಮಾವನ ಮಗ, ಭಾವ ಗಣೇಶ್'ನನ್ನೂ ಕೂಡಾ ತಂದೆಯವರ ಜೊತೆ ಕಾಸರಗೋಡಿಗೆ ಹೋಗಲು ತಿಳಿಸಿ, ನಾನು ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾದ ಮೇಲೆ ಬರುತ್ತೇನೆ. ಎಂದು ಕಾಲೇಜಿಗೆ ತೆರಳಿ, ಸಹಿ ಹಾಕಿ, ಪ್ರಶ್ನೆ ಪತ್ರಿಕೆ ಡೌನ್ಲೋಡ್ ಮಾಡಿ ಕೊಟ್ಟು, ಪರೀಕ್ಷೆ ಸುಗಮವಾಗಿ ಸಾಗುವಂತೆ ನೋಡಿಕೊಂಡ ನಂತರ... ತನ್ನ ಜವಾಬ್ದಾರಿಗಳನ್ನು ಸಹೋದ್ಯೋಗಿ ಮಿತ್ರರಾದ ಡಾ|| ಸೂರ್ಯನಾರಾಯಣ ಭಟ್ ಅವರಿಗೆ ಹಸ್ತಾಂತರಿಸಿ ಮನೆಗೆ ಮರಳಿದರು. ಪತಿ ಆಸ್ಪತ್ರೆಯಲ್ಲಿ ನಿಲ್ಲಬೇಕಾದರೆ  ಅಗತ್ಯವಾದದ್ದನ್ನೆಲ್ಲ ಬ್ಯಾಗಿಗೆ ತುಂಬಿಸಿ ಇಟ್ಟಿದ್ದೆ. ಮನೆಗೆ ಬಂದು ಒಂದು ಗುಟುಕು ನೀರು ಕುಡಿದು ಬ್ಯಾಗ್ ಹೆಗಲಿಗೇರಿಸಿ ಹೊರಗಡಿ ಇಡುತ್ತಿದ್ದಂತೆ ಭಾವ ಗಣೇಶನ ಕರೆ ಬಂದಿತು. "ಮಾವನಿಗೆ ಬ್ರೈನ್ ಹೆಮರೇಜ್ ಆಗಿದೆ. ಇನ್ನು ಬದುಕುಳಿಯುವ ಸಾಧ್ಯತೆಗಳು ಕಡಿಮೆ.." ಎಂದು. ಶಾಕ್ ಆದರೂ ಸಹ ತಡೆದುಕೊಂಡು, ಅಪ್ಪ ನನಗೆ ಬೇಕಾದ್ದೆಲ್ಲವನ್ನೂ ಮಾಡಿ ಬೆಂಬಲವಾಗಿ ನಿಂತವರು. ಈಗ ನಾನವರಿಗೆ ಮಾಡಬೇಕಾದ್ದನ್ನು ಮಾಡಲೇಬೇಕು. ಬೇಸರಿಸಿಕೊಂಡು ಒಂದು ಕ್ಷಣವೂ ತಡಮಾಡಬಾರದು... ಎನ್ನುತ್ತಲೇ ಕಾಸರಗೋಡಿನತ್ತ ವಾಹನ ಚಲಾಯಿಸಿದರು.

        ಆಸ್ಪತ್ರೆಯಲ್ಲಿ ಕಣ್ಣುಮುಚ್ಚಿ ಮಲಗಿದ ಅಪ್ಪನನ್ನು ಕಂಡು ಮೊದಲು ಮೈ ಮುಟ್ಟಿ ನೋಡಿದರು, ಬೆಚ್ಚಗಿತ್ತು. ಉಸಿರಾಟ ಇದೆ  ಎಂದಾದಾಗ ಕೂಡಲೇ ಮಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಫಲಕಾರಿ ಆದೀತಾ ಎಂದು ಪ್ರಯತ್ನಿಸುತ್ತೇನೆ ಎಂದು ಅಲ್ಲಿನ ವೈದ್ಯರಲ್ಲಿ ತಿಳಿಸಿದರು. ಅವರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಶಿಫಾರಸು ಮಾಡಿದರು. ಮಾವನವರನ್ನು ಮಂಗಳೂರಿಗೆ ಕರೆತಂದರು. ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಬ್ರೈನ್ ಸ್ಕ್ಯಾನಿಂಗ್ ಮಾಡಿದ ವೈದ್ಯರು "ಮೆದುಳಿನ ಮಧ್ಯಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೆವಿಸ್ಟ್ರೋಕ್ ಆಗಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಬದುಕುಳಿಯುವ ಸಾಧ್ಯತೆ ಕೇವಲ ಹತ್ತು ಪರ್ಸೆಂಟ್ ಮಾತ್ರ ಇದೆ. ವಾಂತಿ ಆರಂಭವಾಗಿ ಎರಡು ಗಂಟೆಯೊಳಗೆ ತಲುಪುತ್ತಿದ್ದರೆ ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆಯಿದೆ. ಆದರೂ ಪ್ರಯತ್ನ ಮಾಡುತ್ತೇವೆ.. ಹತ್ತಿರದ ಬಂಧುಗಳಿಗೆ ವಿಚಾರ ತಿಳಿಸಬಹುದು.." ಎಂದರು. ಕೊರೋನಾದ ಕಾರಣದಿಂದ ಆಸ್ಪತ್ರೆಯಲ್ಲಿ ಯಾರೂ ನಿಲ್ಲುವಂತೆ ಇರಲಿಲ್ಲ. ಪತಿ ಭಾರವಾದ ಹೃದಯದಿಂದ ಮನೆಗೆ ಮರಳಿದರು.

       ಊಟ ಬಡಿಸಿದರೆ, ಅಪ್ಪನನ್ನು ಈ ಸ್ಥಿತಿಯಲ್ಲಿ ಕಂಡು ಊಟಮಾಡಲೂ ಮನಸ್ಸಿರಲಿಲ್ಲ. ಊರಲ್ಲಿ ಒಬ್ಬರೇ ಇರುವ ಅಬ್ಬೆಗೆ ಅಪ್ಪನ ವಿಚಾರ ತಿಳಿಸುವುದು ಹೇಗೆ ಎಂಬ ಪ್ರಶ್ನೆ. ಬಾಲಣ್ಣ ಮನೆಗೆ ತೆರಳಿ ಅತ್ತೆಯವರಲ್ಲಿ, ಚಿಕಿತ್ಸೆಯ ವಿಚಾರಗಳನ್ನು, ಮಗ ಬಂದು ಮಂಗಳೂರಿಗೆ ಕರೆದೊಯ್ದ ವಿಚಾರಗಳನ್ನು ಸೂಕ್ಷ್ಮವಾಗಿ ತಿಳಿಸಿದರು. ನಂತರ ತಾಯಿಗೆ ಕರೆಮಾಡಿ " ಅಬ್ಬೆ.. ಅಪ್ಪ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆಯಂತೆ. ಸರಿಪಡಿಸಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಇಂಜೆಕ್ಷನ್ ಕೊಟ್ಟಿದ್ದಾರೆ. ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ವೈದ್ಯರನ್ನು ಭೇಟಿಯಾದಾಗ ಹೇಗಿದೆ.. ಚಿಕಿತ್ಸೆಗೆ ಸ್ಪಂದಿಸುತ್ತಾರಾ ಎಂದು ತಿಳಿಯಬಹುದು. ನಾನು ನಾಳೆ ಕರೆ ಮಾಡುತ್ತೇನೆ.. ನೀವು ಧೈರ್ಯದಿಂದ ಇರಿ.." ಎಂದು ಹೇಳಿದರು.

        ಯಾವ ಹೊತ್ತಿಗಾದರೂ ಮನೆಗೆ ಹೋಗಬೇಕಾಗಿ ಬರಬಹುದು. ಮುಂದಿನ ಹಲವು ದಿನಗಳಿಗೆ ಬೇಕಾದ ಬಟ್ಟೆಬರೆಗಳನ್ನು, ಅಗತ್ಯವಸ್ತಗಳನ್ನು ತುಂಬಿಸಿ, ತಯಾರಾಗಿರು ಎಂದು ನನ್ನಲ್ಲಿ ಹೇಳಿ ಭಾವುಕರಾದರು. ಮರುದಿನ ಬೆಳಿಗ್ಗೆ ಅತ್ತೆಗೆ ಕರೆಮಾಡಿ "ಅಬ್ಬೆ.. ತಿಂಡಿ ತಿಂದೆಯಾ.. ಹೆದರಬೇಡ.. ನಾನು ವೈದ್ಯರನ್ನು ಭೇಟಿ ಮಾಡಿ ಮಾತನಾಡಿ.. ರಾತ್ರಿ ಕರೆಮಾಡುತ್ತೇನೆ" ಎಂದು ಸಮಾಧಾನದಿಂದ ಮಾತನಾಡುತ್ತಿದ್ದಂತೆಯೇ ಆಸ್ಪತ್ರೆಯಿಂದ ಕರೆ ಬರುತ್ತಿತ್ತು. ಮನೆಯಲ್ಲಿ ಬಳಸುವ ಮೂರು ನಾಲ್ಕು ನಂಬರ್ ಗಳನ್ನು ಆಸ್ಪತ್ರೆಯಲ್ಲಿ  ಕೊಟ್ಟಿದ್ದರು. ಆದ್ದರಿಂದ ನನ್ನ ಮೊಬೈಲ್ ಗೆ ಕರೆ ಬಂತು.. ಫಸ್ಟ್ ನ್ಯೂರೋ ದಿಂದ.. "ಪೇಷೆಂಟ್ ಸುಬ್ರಹ್ಮಣ್ಯ ಪಾರ್ಟಿ.." ಅಂದರು..
"ಹೌದು.." ಅಂದೆ..
"ಅವರು ಕಾಲ್ ರಿಸೀವ್ ಮಾಡುತ್ತಿಲ್ಲ.. ಎಲ್ಲಿದ್ದಾರೆ?" ಅಂದರು..
"ಇಲ್ಲಿದ್ದಾರೆ..ಕೊಡ್ತೇನೆ ಅಂದೆ.." ಪತಿಗೆ ನೀಡಿದೆ..
"ಸುಬ್ರಹ್ಮಣ್ಯ ಅವರ ಹಾರ್ಟ್ ಬೀಟ್ ಲೋ ಆಗ್ತಾ ಇದೆ.. ಕೂಡಲೇ ಬನ್ನಿ.. ಎಲ್ಲಿದ್ದೀರಿ ಈಗ.. ಆಸ್ಪತ್ರೆಗೆ ತಲುಪಲು ಎಷ್ಟು ಹೊತ್ತು ಬೇಕು.." ಎಂದು ಕೇಳಿ ಫೋನಿಟ್ಟರು. "ಇಪ್ಪತ್ತು ನಿಮಿಷಗಳು ಬೇಕು" ಎಂದಿದ್ದರು ಪತಿ..

"ಅನಿತಾ... ನೀನೂ ಮಕ್ಕಳೂ ಹೊರಟು ನಿಲ್ಲಿ.. ಇಲ್ಲಿನ ಎಲ್ಲಾ ಜವಾಬ್ದಾರಿಯನ್ನು ನೀನು ನಿಭಾಯಿಸು.. ನಾನು ಅಪ್ಪನ ಮುಂದಿನ ತಯಾರಿಯತ್ತ ಗಮನಹರಿಸುತ್ತೇನೆ.." ಎಂದವರೇ.. ಅರ್ಧಂಬರ್ಧ ಅಂಗಿ ತೂರಿಸಿಕೊಂಡು, ಬ್ಯಾಗನ್ನೆತ್ತಿ ಹೊರಟೇಬಿಟ್ಟರು. ಸುಮಾರು ಇಪ್ಪತ್ತು ನಿಮಿಷ ಕಳೆದಿರಬಹುದು. ಪುನಃ ನನಗೆ ಆಸ್ಪತ್ರೆಯಿಂದ ಕರೆ ಬಂತು. "ಪೇಷೆಂಟ್ ಸುಬ್ರಹ್ಮಣ್ಯ ಪಾರ್ಟಿ ಹೊರಟಿದ್ದಾರಾ.. ಎಷ್ಟು ಹೊತ್ತಾಯ್ತು ಹೊರಟು... ಆಸ್ಪತ್ರೆಗೆ ತಲುಪಿಲ್ಲ.."

"ಹೊರಟು ಇಪ್ಪತ್ತು ನಿಮಿಷ ಆಯ್ತು. ಟ್ರಾಫಿಕ್ ಇದ್ದಿರಬಹುದು. ಇನ್ನು ಸ್ವಲ್ಪ ಹೊತ್ತಿನಲ್ಲೇ ತಲುಪಬಹುದು.." ಎಂದೆ..

"ಅವರಲ್ಲಿ ಇರುವ ಮೊಬೈಲ್ ನಂಬರ್ ಯಾವುದು ಎಂದು ಕೇಳಿದರು.." ಹೇಳಿದೆ..
"ಅದು ಎಂಗೇಜ್ ಬರುತ್ತಿದೆ" ಅಂದರು..ಫೋನಿಟ್ಟರು..

        ಪತಿಗೆ ಆಗಾಗ ಬಂಧುಗಳ ಕರೆ ಬರುತ್ತಿತ್ತು. ಪಂಪ್'ವೆಲ್ ವೃತ್ತದಲ್ಲಿ ಟ್ರಾಫಿಕ್'ನಲ್ಲಿ ಸಿಲುಕಿಕೊಂಡಿರುವ ಹೊತ್ತಿಗೆ ಆಸ್ಪತ್ರೆಯಿಂದ ಬಂದ ಕರೆ ತಂದೆಯವರ ಮರಣದ ಸುದ್ದಿಯನ್ನು ತಿಳಿಸಿತ್ತು. ಆಸ್ಪತ್ರೆಗೆ ತೆರಳಿ ಮುಂದಿನ ಪ್ರಕ್ರಿಯೆ ಗಳನ್ನು ಮುಗಿಸಿ, ತನ್ನ ಸಮೀಪದ ಬಂಧುಗಳಿಗೆ ವಿಚಾರ ಮುಟ್ಟಿಸಿದರು.

       ಊರಲ್ಲಿ ಒಬ್ಬರೇ ಇರುವ ಅತ್ತೆಗೆ ಸುದ್ದಿ ಮುಟ್ಟಿಸುವ ಕಾರ್ಯ ಮಾಡಲೇಬೇಕಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆಗೆ ತಿಳಿಸುವುದು ಸುಲಭದ ವಿಷಯವಲ್ಲ. ಬಾಲಣ್ಣ ಮತ್ತು ಅವರ ಪತ್ನಿ ಶ್ರೀದೇವಿ ಅವರಿಗೆ, ಹೇಳಿದಾಗ ಏನಾದರೂ ಹೆಚ್ಚು ಕಡಿಮೆಯಾದರೆ ನಾವಿಬ್ಬರೇ ಏನು ಮಾಡೋದು ಅನ್ನುವ ಭಯ. ಅತ್ತೆಯ ತವರಿನವರಲ್ಲಿ "ಅಬ್ಬೆಗೆ ವಿಷಯ ತಿಳಿಸಿ, ಸಮಾಧಾನ ಹೇಳಿ" ಎಂದು ಕೋರಿಕೊಂಡರು ಪತಿ.
ಅತ್ತೆಯ ಇಬ್ಬರು ಅಣ್ಣಂದಿರು ತಮ್ಮ ಮಗನ ಜೊತೆ ಮನೆಗೆ ಆಗಮಿಸಿದರು.

     ಮಗ ರಾತ್ರಿ ಕರೆಮಾಡುತ್ತೇನೆ ಎಂದಿದ್ದಾನೆ. ಅಪ್ಪ ಮಾತನಾಡುತ್ತಾರೆ. ಕಣ್ಣೊಡೆದು ನನ್ನನ್ನು ನೋಡಿದ್ದಾರೆ.. ಎಂದೇನಾದರೂ ಖಂಡಿತ ಹೇಳಿಯಾನು ನನ್ನ ಮಗ.. ಎಂದು ನಂಬಿದ್ದ ಅತ್ತೆ ತನ್ನ ದೈನಂದಿನ ಕಾರ್ಯದಲ್ಲಿ ತೊಡಗಿದ್ದರು. ಕಾರಿನ ಶಬ್ದ ಕೇಳಿದಾಗ, ಎದುರು ಬಂದವರೇ.. ನನ್ನ ಪತಿ ಆಸ್ಪತ್ರೆಯಲ್ಲಿ ಇದ್ದಾರೆಂದು ತಿಳಿದು ನನ್ನನ್ನು ವಿಚಾರಿಸಲು ಅಣ್ಣಂದಿರು ಬಂದಿದ್ದಾರೆ ಎಂದುಕೊಂಡರು. ಮಾತನಾಡುತ್ತಿದ್ದಂತೆಯೇ ಮಾರ್ಗದಲ್ಲಿ ಯಾರೋ ಒಂದಿಬ್ಬರು ಬಿಳಿ ಬಟ್ಟೆ ಧರಿಸಿದವರು ಬಂದಿರುವುದು, ಬಾಲಣ್ಣನ ಮನೆ ಸಮೀಪದಲ್ಲೇ ನಿಂತು ಅವರ ಜೊತೆ ಹರಟುತ್ತಿರುವುದನ್ನು ಗಮನಿಸಿ, ಯಾರೋ ಅವರ ಪರಿಚಯದವರಾಗಿರಬಹುದು.. ಎಂದುಕೊಂಡರು.. ಒಬ್ಬರು ಮನೆಯ ಸಮೀಪ ಬಂದಾಗ, ಸರಿಯಾಗಿ ಪರಿಚಯ ಸಿಗದೇ ವಿಚಾರಿಸಿಕೊಂಡರು ಅತ್ತೆ.. ಇವರೇಕೆ ಬಂದರು.. ಎಂದು ಯೋಚಿಸುತ್ತಾ ಇದ್ದಂತೆ ಬಂದ ಬಾಲಣ್ಣನಲ್ಲಿ... ತವರಿನಿಂದ ಅಣ್ಣಂದಿರು ಬಂದಿದ್ದಾರೆ.. ಅನ್ನ ಮಾಡ್ತೀಯಾ.. ಅಂತ ಕೇಳಿದರು ಮುಗ್ಧವಾಗಿ.. ಇಲ್ಲ.. ಅನ್ನಕ್ಕಿಡಬೇಡಿ ನೀವೀಗ..ಅಂತ ಹೇಳಿ ಅಂಗಳದಿಂದ ಕೆಳಗಿಳಿದು ಬಾಲಣ್ಣ ತನ್ನ ಮನೆಯತ್ತ ಧಾವಿಸಿದರೂ ಅತ್ತೆಗೆ ಅವರ ಮಾತು ಅರ್ಥವಾಗಲೇಯಿಲ್ಲ.

     ವಯಸ್ಸಾದ ಅಣ್ಣಂದಿರು ಕೂಡಾ ತಂಗಿಯಲ್ಲಿ ವಿಚಾರ ತಿಳಿಸಲು ಹರಸಾಹಸ ಪಡುತ್ತಿದ್ದರು. ಕೊನೆಗೆ ತಂಗೀ.. ತಂಗೀ.. ಅನ್ನುತ್ತಲೇ ವಿಚಾರ ತಿಳಿಸಿದಾಗ.. ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದು ಹೋದರು. ಅತ್ತೆಗೆ ವಿಚಾರ ತಿಳಿಸುವುದನ್ನೇ ಕಾಯುತ್ತಿದ್ದ ಬಾಲಣ್ಣ ಮುಂದಿನ ತಯಾರಿ ನಡೆಸಿದರು. ಮಾರ್ಗದಲ್ಲಿ ಅಡ್ಡಾಡುತ್ತಿದ್ದ ಬಂಧುಗಳು ಆಗಮಿಸಿ ಸಹಕರಿಸಿದರು. ಮತ್ತೆ ಅರ್ಧವೇ ಗಂಟೆಯಲ್ಲಿ ಮನೆ ತಲುಪಿದ ಮಗನನ್ನು ಕಂಡಾಗ ಅತ್ತು ಕರೆದ ತಾಯಿ ಕೇಳಿದ ಪ್ರಶ್ನೆ.. "ನೀನೂ ಯಾಕೆ ನನ್ನಿಂದ ಮುಚ್ಚಿಟ್ಟೆ ಮಗ..?" ತಾಯಿಯನ್ನು ಸಂತೈಸಿ, ಅನಾರೋಗ್ಯಕ್ಕೆ ಔಷಧ ನೀಡಿ, ಒಂದೆರಡು ಗುಟುಕು ಪಾನೀಯ ಕುಡಿಸಿದ ನಂತರವೇ.. ಮೃತದೇಹವನ್ನು ಆಂಬುಲೆನ್ಸ್ ನಿಂದ ಮನೆಗೆ ತಂದರು.

       ಮುಂದಿನ ಎಲ್ಲಾ ವ್ಯವಸ್ಥೆ ಗೆ ಬಂಧುಗಳು ಸಹಕರಿಸಿದರು. ಒತ್ತಡ ತಾಳಲಾರದೆ ಆಗಾಗ ಔಷಧಿ ಸೇವಿಸುತ್ತಿದ್ದ ಅತ್ತೆಗೆ ಕಿತ್ತಳೆ ಹಣ್ಣನ್ನು ಸುಲಿದು, ತಿನ್ನಲು ಕೊಟ್ಟರೆ.. " ನಂಗೆ ಯಾಕೆ ಅನಿತಾ.. ಮಾವ ಏನೂ ತಿನ್ನದೇ ಮಲಗಿದ್ದಾಗ ನಾನು ಹೇಗೆ ತಿನ್ನಲಿ..? ಬೇಡ ನಂಗೆ.. " ಎಂದು ನಿರಾಕರಿಸುತ್ತಿದ್ದರೂ ಸಮಾಧಾನಪಡಿಸಿ ತಿನ್ನಲು ಕೊಟ್ಟೆ. ಎಲ್ಲರೂ ಸಾಂತ್ವಾನ ಹೇಳಿ, ಧೈರ್ಯ ತುಂಬುತ್ತಿದ್ದರು. ಕುಲ ಪುರೋಹಿತರಾದ ಪಳ್ಳತ್ತಡ್ಕ ಶಿವ ಭಟ್ಟರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಂಜೆ ಸುಮಾರು ಐದು ಗಂಟೆಯ ವೇಳೆಗೆ  ಮಾವನವರು ತನ್ನ ಕರ್ಮಭೂಮಿಯಲ್ಲಿ  ಪಂಚಭೂತಗಳಲ್ಲಿ ಲೀನರಾದರು.

      ಭಾರವಾದ ಹೃದಯ.. ಮನೆಯಲ್ಲಿ ನೀರವ ಮೌನ. ಯಾರು ಎಷ್ಟೇ ಸಾಂತ್ವನ ಹೇಳಿದರೂ ಅರಗಿಸಿಕೊಳ್ಳಲಾಗದ ಅಗಲಿಕೆ.. ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮಗಳಲ್ಲಿ ಬಾಲಣ್ಣ ಹಾಗೂ ನೆರೆಹೊರೆಯವರು ನಮಗೆ  ಬೆಂಬಲವನ್ನು ನೀಡಿದ್ದರು. ಬಾಲಣ್ಣನಲ್ಲಿ ಮಾತನಾಡುತ್ತಾ.. " ಅಪ್ಪ.. ನನ್ನನ್ನು ಓದಿಸಿದರು, ಉದ್ಯೋಗದಲ್ಲಿ ಇರುವುದನ್ನು ಕಂಡು ಹೆಮ್ಮೆ ಪಟ್ಟುಕೊಂಡರು, ಕಷ್ಟದಲ್ಲಿದ್ದಾಗ  ಸದಾ ಬೆಂಬಲವನ್ನು ನೀಡಿದರು, ನನಗೆ ಎಲ್ಲವನ್ನೂ ಮಾಡಿಕೊಟ್ಟ ತಂದೆಯವರ ಅನಾರೋಗ್ಯದ ಸಂದರ್ಭದಲ್ಲಿ ನಾನು ಮಾಡಲಾಗದ ಜವಾಬ್ದಾರಿ ಗಳನ್ನು ನೀವು ಮಾಡಿದ್ದೀರಿ ಭಾವ.. " ಎನ್ನುತ್ತಾ ಇವರು ಗದ್ಗದಿತರಾದಾಗ..
" ನಾನು ನನ್ನ ತಂದೆ ಅಂತಲೇ ಭಾವಿಸಿ ಮಾಡಿದ್ದೇನೆ.. ಆ ಪ್ರೀತಿ ನನ್ನಲ್ಲಿತ್ತು. ನಮ್ಮ ಕೊನೆಯ ದಿನ ಹೇಗೆ? ಎಲ್ಲಿ? ಎಂದು ನಮಗೂ ಗೊತ್ತಿಲ್ಲ.. ಇರುವಷ್ಟು ದಿನ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಹೇಳಿದಾಗ ಕಣ್ಣಾಲಿಗಳನ್ನು ತುಂಬಿಸಿಕೊಂಡು
" ಹಿರಿಯಣ್ಣನಂತೆ ನೀವು.."  ಎನ್ನುತ್ತಾ ನಮಸ್ಕರಿಸಿದರು. ಒಂದು ಕ್ಷಣ ಎಲ್ಲರೂ ಭಾವುಕರಾಗಿದ್ದೆವು. ಅವರ ಋಣ ತೀರಿಸಲು ಸಾಧ್ಯವಿಲ್ಲ.

       ಬ್ರೈನ್ ಹೆಮರೇಜ್ ಆಗುವ ಮೊದಲೇ ಅದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಾವನವರಿಗೂ ಕೆಲವು ಲಕ್ಷಣಗಳು ಕಂಡಿದ್ದವು.

* ಹದಿನೈದು ದಿನಗಳ ಮೊದಲು ವಾಂತಿ ಮಾಡಿಕೊಂಡಿದ್ದರು. ವಾಂತಿ ಮಾಡಿದಾಗ ಏನೋ ತಿಂದು ಅಜೀರ್ಣವಾಗಿದೆ ಅಂತ ಅತ್ತೆ ಮನೆಮದ್ದು ಮಾಡಿದ್ದರು. ಅಲ್ಲಿಗೆ ವಾಂತಿ ನಿಂತಿತ್ತು.

*ಒಂದೆರಡು ದಿನಗಳ ಮೊದಲು ಎರಡೂ ಕಾಲುಗಳ , ಕುತ್ತಿಗೆಯ ಸ್ನಾಯುಗಳ ಸೆಳೆತ ಆರಂಭವಾಗಿತ್ತು. ಕೆಲಸ ಮಾಡಿದ್ದು ಜಾಸ್ತಿ ಆಗಿರಬೇಕು ಎಂದುಕೊಂಡು ಮಂಡಿನೋವಿಗೆಂದು ವೈದ್ಯರು ನೀಡಿದ್ದ ನೋವುನಿವಾರಕ (painkiller ) ಸುಧಾರಿಸಿಕೊಂಡಿದ್ದರು.

*ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಆಗಿತ್ತು. ಅತ್ತೆ ದೋಸೆ ಬಡಿಸುತ್ತಿದ್ದರೆ ಹೊಟ್ಟೆ ತುಂಬುವಷ್ಟು ಬಡಿಸಿದಾಗಲೂ ಸಾಕು ಎನ್ನದೆ, ಎತ್ತಲೋ ನೋಡಿ ನಸುನಗುತ್ತಿದ್ದಂತೆ ಭಾಸವಾಗುತ್ತಿತ್ತು. ನಂತರ ಕರೆದಾಗ ಹೂಂ.. ಅನ್ನುತ್ತಾ ಎದ್ದೇಳುತ್ತಿದ್ದರು.. ಯಾಕೆ ಹೀಗೆ ಮಾಡುತ್ತಿದ್ದಾರೆ.. ಎಂದು ಅತ್ತೆಗೆ ಸಂಶಯ ಬಂದಿತ್ತು.

*ಬೆಳಿಗ್ಗೆ ದಿನವೂ ಐದು ಗಂಟೆಗೆ ಎದ್ದು ಅತ್ತೆಗೆ ಕೆಲಸಗಳಿಗೆ ಸಹಕರಿಸುತ್ತಿದ್ದ ಮಾವ, ಅಂದು ಆರು ಗಂಟೆಯಾದರೂ ಎದ್ದಿರಲಿಲ್ಲ. ಎಬ್ಬಿಸಲು ಹೋದಾಗ.. ಮೈ ಕುಲುಕಿಸಿದಾಗ ಶರೀರ ನಿಶ್ಚಲವಾದಂತೆ ಕಂಡು ಒಮ್ಮೆ ಬೆಚ್ಚಿಬಿದ್ದಿದ್ದರು ಅತ್ತೆ.  ಮರುಕ್ಷಣ ಮಾವ ಥಟ್ಟನೇ ಎಂದು ಕುಳಿತಿದ್ದರಂತೆ.. ಮತ್ತೆ ಎಂದಿನಂತೆ ತಮ್ಮ ದಿನಚರಿ ಮಾಡಿದ್ದರು.

        ಇದ್ಯಾವುದನ್ನೂ ಯಾರ ಜೊತೆಯೂ ಅವರು ಹಂಚಿಕೊಂಡಿರಲಿಲ್ಲ. ಇಂತಹ ಸಣ್ಣಪುಟ್ಟ ಬದಲಾವಣೆಗಳು ಬದುಕಿನಲ್ಲಿ ಸಾಮಾನ್ಯ ಎಂದುಕೊಂಡಿದ್ದರು. ಮಧುಮೇಹ, ರಕ್ತದೊತ್ತಡ, ಹೃದಯದ ಸಮಸ್ಯೆಗಳು.. ಯಾವುದೂ ಇಲ್ಲದಿದ್ದವರಿಗೆ ಈ ಲಕ್ಷಣಗಳು ಕಂಡಾಗಲೇ ನಮ್ಮ ಗಮನಕ್ಕೆ ತರುತ್ತಿದ್ದರೆ ಚಿಕಿತ್ಸೆ ಕೊಡಿಸಬಹುದಿತ್ತೇನೋ ಎಂದು ಆಗಾಗ ಅನಿಸುತ್ತದೆ. ಸಣ್ಣಪುಟ್ಟ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ ಎಂಬುದು ನಮ್ಮ ಕಿವಿಮಾತು..

         ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆಗೆ ಈಗ ನೋವು ತಡೆಯಲಾಗುತ್ತಿಲ್ಲ. ಬದುಕಿ ಬಾಳಿದ ಮನೆ, ಫಲಭರಿತ ಕೃಷಿ ಭೂಮಿಯನ್ನು ಬಿಟ್ಟು ಮಗನ ಜೊತೆ ನಗರಕ್ಕೆ ಬರಲು ಮನಸ್ಸು ಒಪ್ಪಲಿಲ್ಲ. ಆದರೂ ಒಪ್ಪಿಸಿ ಕರೆದುಕೊಂಡು ಬಂದಿದ್ದೇವೆ. ಈಗ ನನಗೆ ಅತ್ತೆಯನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಇದೆ. ಉದ್ಯೋಗದೊಂದಿಗೆ ಕೃಷಿ ಮಾಡುತ್ತೇನೆ, ಅಪ್ಪನ ಕನಸುಗಳನ್ನು ನಾನು ಪೂರೈಸುತ್ತೇನೆ ಎನ್ನುವ ಪತಿಗೆ ನನ್ನ ಬೆಂಬಲ ಬೇಕು.. ಇನ್ನು ಸಮಯ ಸಿಕ್ಕರೆ ಮಾತ್ರ ಬರವಣಿಗೆಯ ಹವ್ಯಾಸ... ಕುಟುಂಬದತ್ತ ಮೊದಲ ಗಮನ..

        ಬದುಕಿದ್ದಷ್ಟೂ ದಿನ ಮಾವ ತನ್ನ ಕೆಲಸಕಾರ್ಯಗಳಲ್ಲೇ ತೃಪ್ತಿ ಕಂಡವರು. ಸ್ನೇಹಜೀವಿ. ಯಾರನ್ನು ಕಂಡರೂ ನಗುಮೊಗದಿಂದ ಮಾತನಾಡಿಸುತ್ತಿದ್ದರು. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದವರು.. ತನ್ನ ಕರ್ತವ್ಯಗಳೆಲ್ಲ ಮುಗಿದವು ಎಂದು ಇತ್ತೀಚೆಗೆ ಹೇಳುತ್ತಿದ್ದರು. ಮೊಮ್ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳ ಜೊತೆಗೆ ತಾವೂ ಮಗುವಾಗುತ್ತಿದ್ದರು.  ಕೊರೋನಾದಿಂದಾಗಿ ರಜೆಯಲ್ಲಿ  ಮೊಮ್ಮಕ್ಕಳನ್ನು ಕಾಣಲಾಗದೆ ಪರಿತಪಿಸುತ್ತಿದ್ದರು. ಇತ್ತೀಚೆಗೆ  ಹೋದಾಗ ಬಹಳ ಲವಲವಿಕೆಯಿಂದ ಮೊಮ್ಮಕ್ಕಳ ಜೊತೆ ಆಡಿದ್ದರು, ಖುಷಿಪಟ್ಟಿದ್ದರು. ಅವರೊಂದಿಗೆ ಕಳೆದ ನಮ್ಮ ಸವಿನೆನಪುಗಳು ಅಮರ.

✍️... ಅನಿತಾ ಜಿ.ಕೆ.ಭಟ್.
03-12-2020.

Monday, 9 November 2020

ಕರುನಾಡು

 


      ಕರುನಾಡು

ಹಸಿರು ಸಿರಿಯ ವೈಭವದಿ
ಕಂಗೊಳಿಸುವ ಕರುನಾಡು
ಸಹ್ಯಾದ್ರಿ ಜೋಗ ಕಾವೇರಿ
ಮೆರೆವ ಚೆಲು ನೋಡು||೧||

ಶ್ರೀಗಂಧದ ಬೀಡಿನಲಿ ಉಲಿವ
ನುಡಿಯಿದುವೇ ನವಿರು
ಕಲ್ಲುಗಳ ಕೆತ್ತನೆಯಲಿ ಅರಳಿದ
ಶಿಲ್ಪಕಲೆಗಳ ತವರು||೨||

ಪಂಪರನ್ನರು ಸಂಪನ್ನಗೈದ
ಕಾವ್ಯದ ಸೊಬಗು
ಮರಿಕೋಗಿಲೆಗಳ ಕಂಠದಲಿ
ಮೂಡಲೆನಿತು ಬೆರಗು||೩||

ವೀರಶೂರ ಗಂಡುಗಲಿಗಳು
ಆಳಿದ ಹೆಮ್ಮೆಯ ನಾಡು
ದಾಳಿಯನೆದುರಿಸಿ ಕೆಚ್ಚೆದೆಯಲಿ
ಬಾಳಿದ ಮೈಸೂರಿನ ಬೀಡು||೪||

ಹೊನ್ನಿನನುಡಿ ಮಹಿಮೆಯ ಗುಡಿ
ಸರ್ವರ ಮನವ ಸೆಳೆಯುತಿದೆ
ಕೇಳಲು ಕನ್ನಡ ಕಣ ಕಣದಲ್ಲೂ
ಅಭಿಮಾನದ ಸುಧೆ ಹರಿಯುತಿದೆ||೫||

ಫಲವನು ನೀಡಿ ಗೆಲುವನು ಬಯಸಿದೆ
ಕನ್ನಡದ ಕಂಪಿನ ಭುವಿಯು
ಕನ್ನಡ ಮಣ್ಣಲಿ ಜನಿಸಿರಲೀಗ
ಜೀವನ ಸಾರ್ಥಕವೆನಿಸುತಿದೆ.||೬||

✍️... ಅನಿತಾ ಜಿ.ಕೆ.ಭಟ್.
09-11-2020.


Saturday, 31 October 2020

ಯಾವ ತರುವು ಆವ ಲತೆಗೋ... ಅಧ್ಯಾಯ ೬

 


ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                   💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೬

        ಸಂಜೆಯಾಗುವ ಹೊತ್ತು  ಕೋದಂಡರಾಮನ ಮಠದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕಾರು ನಿಂತಿತು. ಸುತ್ತಲೂ ಹಬ್ಬಿ ಫಲತುಂಬಿ ನಿಂತಿರುವ ಮಾವಿನ ತೋಪು. ಹಕ್ಕಿಗಳು ಹಣ್ಣನ್ನು ಕುಕ್ಕಿ ಕುಕ್ಕಿ ರಸ ಹೀರುತ್ತಿದ್ದವು. ಗೋವುಗಳು ಮರದಡಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದವು. ಯಾವುದೋ ಮನೆಯಿಂದ ಗೋಮಾತೆಯನ್ನು ಗಂಗೇ ಬಾ.. ಕಪಿಲೇ ಬಾ.. ಎಂದು ಕರೆಯುವುದು ಸ್ಪಷ್ಟವಾಗಿ ಕಿವಿಗಪ್ಪಳಿಸುತ್ತಿತ್ತು. ಮೇಪ್ಲವರ್ ಮರಗಳು ನಡೆಯುವ ಹಾದಿಗೆ ಕೆಂಪು ಹಾಸನ್ನು ಹಾಸಿದ್ದವು.. ಕಾರಿನಿಂದಿಳಿದ ಕುಟುಂಬ ತೋಟದೊಳಗಿನ ಹಾದಿಯಲ್ಲಿ ನಡೆಯುತ್ತಾ ಸಾಗಿತು. ಮಧ್ಯದಲ್ಲಿ ಪುಟ್ಟ ತೋಡು. ತೋಡಿಗೊಂದು ಆಡಕೆ ಮರದ ಕಾಲುಸಂಕ.. ಓಜಸ್, ಯಶಸ್ವಿ ದಾಟುವುದಕ್ಕೆ ಭಯಗೊಂಡು "ನಾವು ಬರಲ್ಲ ನವೀನಣ್ಣ" ಎಂದು ಬೊಬ್ಬಿರಿದಾಗ " ಇನ್ನು ನವೀನಣ್ಣ ಅನ್ನೋ ಹಾಗಿಲ್ಲ. ಅಪ್ಪ ಅನ್ನಬೇಕು. ಒಪ್ಪಿದ್ರೆ ಮಾತ್ರ ಆಚೆ ಬದಿಗೆ ದಾಟಿಸೋದು" ಎಂದು ಷರತ್ತು ವಿಧಿಸಿದಳು ಪಾವನಾ. ವಿಧಿಯಿಲ್ಲದೆ ಇಬ್ಬರೂ ಒಪ್ಪಿದರು. "ಅಪ್ಪಾ.. ನಮ್ಮನ್ನು ದಾಟಿಸಿ " ಎಂದಾಗ ನಗುತ್ತಾ ಅಪ್ಪ ಒಬ್ಬೊಬ್ಬರನ್ನೇ ದಾಟಿಸಿದರು.

         ಕೋದಂಡ ರಾಮನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ರಾತ್ರಿ ಮಂಗಳೂರಿನಲ್ಲಿರುವ ನವೀನ್ ನ ಮನೆಗೆ ಬರುವುದು ಎಂದು ಎಲ್ಲರೂ ನಿರ್ಧರಿಸಿದ್ದರು. ನಾವೇನೇ ನಿರ್ಧಾರ ಮಾಡಿದರೂ ಶ್ರೀರಾಮನ ನಿರ್ಧಾರ ಬೇರೆಯೇ ಇರುತ್ತದೆ. ಎಲ್ಲೆಲ್ಲಿ ಯಾವಾಗ ಏನೇನು ಆಗಬೇಕು ಎಂದು ಅವನು ನಿರ್ಧರಿಸುತ್ತಾನೋ ಹಾಗೆಯೇ ನಾವು ನಡೆಯಬೇಕು. ನಮ್ಮ ಲೆಕ್ಕಾಚಾರವೇ ಬೇರೆ ಅವನಾಟವೇ ಬೇರೆ.

      ಕೋದಂಡರಾಮನ ಮಠದ ಅಂಗಣಕ್ಕೆ ಮುಟ್ಟಿದಾಗ ಗಂಧ, ಪುಷ್ಪಗಳ ಸೌರಭ ಗಾಳಿಯಲ್ಲಿ ತೇಲಿಬರುತ್ತಿತ್ತು. ಇನ್ನೊಂದು ಬದಿಯಿಂದ ಪ್ರಸಾದದ ಪರಿಮಳ ಹರಡುತ್ತಿತ್ತು. ನಳ್ಳಿಯಲ್ಲಿ ಕೈಕಾಲು ಮುಖ ತೊಳೆದು ನವೀನ್, ಓಜಸ್ ಇಬ್ಬರೂ ಅಂಗಿ ಬನಿಯನ್ ಕಳಚಿ ಒಳಗಡಿಯಿಟ್ಟರು. ವಿಶಾಲವಾದ ಜನಜಂಗುಳಿ ಇಲ್ಲದ ಪ್ರಶಾಂತ ವಾತಾವರಣ. ಪಾವನಾಳಿಗೆ ಮನಸ್ಸು ಪ್ರಫುಲ್ಲವಾಯಿತು. ದೇವಾಲಯಕ್ಕೆ ಸುತ್ತು ಬಂದು ಕೋದಂಡರಾಮನ ಮುಂದೆ ಸೆರಗೊಡ್ಡಿ ಬೇಡಿ ಸಾಷ್ಟಾಂಗ ನಮಿಸಿದಳು.
ಅರ್ಚಕರಾದ ನವೀನನ ಕುಟುಂಬದ ದೊಡ್ಡಪ್ಪ "ಎಂತ ಮಾಣಿ. ಭಾರೀ ಅಪರೂಪ" ಎನ್ನುತ್ತಾ ಮಾತಿಗೆಳೆದರು. "ಇವತ್ತು ಇಲ್ಲೊಂದು ರಂಗಪೂಜೆಯಿದೆ. ಹೇಗೂ ದೂರದೂರಿನಿಂದ ನವವಿವಾಹಿತ ದಂಪತಿ ಕುಟುಂಬದೊಂದಿಗೆ ಬಂದಿದ್ದೀರಿ. ಪೂಜೆ ಪ್ರಸಾದ ಸ್ವೀಕರಿಸಿ ಭೋಜನ ಮಾಡಿ ತೆರಳಿ" ಎಂದಾಗ ಇಲ್ಲವೆನ್ನಲಾಗಲಿಲ್ಲ ನವೀನನಿಗೆ.

        ಮಠದ ಸುತ್ತಲಿನ ವಠಾರವನ್ನೆಲ್ಲ ಪಾವನಾಳಿಗೆ ತೋರಿಸುತ್ತಾ ತಾನು ಆಡಿ ಬೆಳೆದ ಜಾಗವೆಂದು ನೆನಪುಗಳನ್ನು ಹಂಚಿಕೊಂಡ ನವೀನ್. ಮಕ್ಕಳು ಅಜ್ಜಿಯ ಜೊತೆಗೆ ಆಟವಾಡುತ್ತಿದ್ದರು. ಮಾತನಾಡುತ್ತಾ ಕುಳಿತ ಜೋಡಿಗೆ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಪುರೋಹಿತರು ಮಹಾಪೂಜೆ ಮಂಗಳಾರತಿ ಎಂದಾಗ ಇಬ್ಬರೂ ತೆರಳಿದರು.

      ಹೆಚ್ಚೆಂದರೆ ನಲುವತ್ತು ಭಕ್ತರು ಸೇರಿದ್ದರು. ನವೀನ್ ಒಂದು ಬದಿಯಲ್ಲಿ ಸಾಲಿನಲ್ಲಿ ನಿಂತುಕೊಂಡ. ಆಚೆಬದಿ ಪಾವನಾ ನಿಂತಳು. ವಿದ್ಯುದ್ದೀಪಗಳನ್ನು ಆರಿಸಿದರು. ಇನ್ನೇನು ಪೂಜೆ ಆರಂಭವಾಗುತ್ತದೆ ಎನ್ನುವಾಗ ಯಾರೋ ಬೆನ್ನ ಮೇಲೆ ಕೈಯಿಟ್ಟ ಅನುಭವ ನವೀನನಿಗೆ. ಪಾವನಾ ಇರಬಹುದೇ? ಎಂದು ಕೈ ಮುಟ್ಟಿದಾಗ ಒರಟಾಗಿ ಸುಕ್ಕುಗಟ್ಟಿದ ಕೈಗಳು. ಮೆಲ್ಲನೆ ಹಿಂತಿರುಗಿ ನೋಡಿದ. ತನ್ನ ಕಣ್ಣನ್ನೇ ನಂಬದಾದ. ದೇವಾಲಯದ ಮುಂಭಾಗದಲ್ಲಿ ಅಲ್ಲಲ್ಲಿ ಉರಿಸಲಾಗಿದ್ದ ದೀಪಗಳ ಮಂದಬೆಳಕಿನಲ್ಲಿ, ಅಂದು ತನ್ನನ್ನು ಇದೇ ಕೈಗಳಿಂದ ಹೊಡೆದು ಮನೆಯಿಂದ ಹೊರಗಟ್ಟಿದ ತಂದೆ ಹದಿಮೂರು ವರ್ಷಗಳ ನಂತರ ಕೈಯನ್ನು ಬೆನ್ನ ಮೇಲಿಟ್ಟು ಸವರುತ್ತಿದ್ದರು. ಅವನಿಗರಿವಿಲ್ಲದೇ ಪಟಪಟನೆ ಕಣ್ಣಿಂದ ಹನಿಗಳು ಜಾರಿದವು. ಮಗನ ಕಣ್ಣಲ್ಲಿ ಕಣ್ಣಿಟ್ಟು ಅಪ್ಪ "ಮಗನೇ.. " ಎಂದರು. ಮಾತು ಹೊರಡಲಿಲ್ಲ ನವೀನನಿಗೆ.

       ಮಂಗಳಾರತಿ ಆರಂಭವಾಯಿತು. ಕೋದಂಡರಾಮನ ಅಲಂಕೃತ ಮೂರುತಿಯನ್ನು ಕಣ್ತುಂಬಿಸಿಕೊಂಡರು ರಾಮನ ಭಕ್ತರಾದ ದಂಪತಿ. ಮಂಗಳಾರತಿ ಮುಗಿಯುತ್ತಿದ್ದಂತೆ ಪಾವನಾ ನವೀನ್ ಇಬ್ಬರೂ ಜೊತೆಯಾಗಿ ತಿರುಗಿ ಸಾಷ್ಟಾಂಗ ನಮಸ್ಕರಿಸಿದರು. ವಿದ್ಯುದ್ದೀಪಗಳು ಉರಿದವು. ಮಗ ಮದುವೆಯಾಗಿದ್ದಾನೆ ಎಂದು ಅರಿತರು ಅಪ್ಪ. ಅಪ್ಪನ ಜೊತೆಗೆ ಮಾತನಾಡುತ್ತಿದ್ದಂತೆ ಆಚೆ ಕಡೆಯಿಂದ  "ಬಂಗಾರು.." ದನಿಕೇಳಿಸಿ ತಿರುಗಿದರೆ ಅಲ್ಲಿ ಅಬ್ಬೆ! ಮಮತಾಮಯಿ ಅಮ್ಮನನ್ನು ಅಗಲಿ ಅದೆಷ್ಟು ಬಾರಿ ನೆನಪಿಸಿಕೊಂಡಿದ್ದಾನೋ ಏನೋ ನವೀನ. ತಬ್ಬಿ ಆಲಿಂಗಿಸಿಬಿಟ್ಟಿದ್ದ. ಸುತ್ತಮುತ್ತ ಯಾರಿದ್ದಾರೆ ಎಂಬ ಗೊಡವೆಯೇ ಅವನಿಗಿರಲಿಲ್ಲ. ಪಾವನಾ ಕೂಡ ಭಾವುಕಳಾದಳು. ಅಪ್ಪ ಅಬ್ಬೆ ಇಬ್ಬರಿಗೂ ಮಡದಿ ಪಾವನಾಳನ್ನು ಮಕ್ಕಳನ್ನು ಅತ್ತೆಯನ್ನು ಪರಿಚಯಿಸಿದ. ಕೋದಂಡರಾಮನ ಸನ್ನಿಧಿಯಲ್ಲಿ ಮತ್ತೆ ಕುಟುಂಬ ಒಂದಾಯಿತು.

          ಊಟ ಮುಗಿಯುತ್ತಿದ್ದಂತೆ ಅಪ್ಪ ಅಮ್ಮ ಇಬ್ಬರೂ "ಮನೆಗೆ ಹೋಗೋಣ " ಎಂದು ನವೀನ್ ನನ್ನು ಕರೆದು ಒತ್ತಾಯಿಸಿದರು. "ಇವತ್ತು ಮಂಗಳೂರಿನ ಮನೆಗೆ ತೆರಳುತ್ತೇವೆ. ಮುಂದೆ ಇನ್ನೊಮ್ಮೆ ಬರುತ್ತೇವೆ" ಎಂದು ನವೀನ್ ಹೇಳಿದರೂ ಅವರು ಒಪ್ಪಲಿಲ್ಲ. ಕ್ಷಣಿಕದ ಕೋಪದಿಂದ ವರುಷಗಳ ಕಾಲ ನೊಂದು ಬೆಂದ ಜೀವವದು. ಮತ್ತೆ ಕರುಳ ಕುಡಿಯನ್ನು ಕಂಡಾಗ ಪ್ರೀತಿಯೊಸರು ಜಿನುಗದಿದ್ದೀತೇ..??  ಪಾವನಾ "ರೀ.. ಅವರು ಅಷ್ಟೊಂದು ಕೇಳಿಕೊಳ್ಳುವಾಗ ಹಿರಿಯರ ಮಾತಿಗೆ ಬೆಲೆಕೊಡಬೇಕು. ಮನೆಗೆ ಹೋಗೋಣ. ನಾಳೆ ಮಂಗಳೂರಿನತ್ತ ಪ್ರಯಾಣ ಬೆಳೆಸೋಣ." ಎಂದಾಗ ಅವಳ ಅಮ್ಮನೂ ದನಿಗೂಡಿಸಿದರು.

        ಹಲವಾರು ವರುಷಗಳ ನಂತರ ಮನೆಯಂಗಳಕ್ಕೆ ಬಂದಿಳಿದ ನವೀನ್. ಅದೇ ಮನೆ, ಅದೇ ಅಂಗಳ, ಸಾರಿಸಿದ ಸೆಗಣಿಯ ಘಮಲು, ದನದ ಕೊಟ್ಟಿಗೆ,  ಒಂದಿನಿತೂ ವ್ಯತ್ಯಾಸವಿಲ್ಲ, ಅಂದು ಗರ್ವದಿಂದಿದ್ದ ತಂದೆ, ಇಂದು ಸೋತು ಬಳಲಿದ ತಂದೆ. ಅಷ್ಟೇ ವ್ಯತ್ಯಾಸ. ಮನೆಗೆ ಬಂದ ಮಗಸೊಸೆಯನ್ನು ಹಾನ ತಂದು ಕಾಲ್ತೊಳೆದು ಬರಮಾಡಿಕೊಂಡರು ನವೀನನ ಅಮ್ಮ. ಅಣ್ಣಂದಿರಿಬ್ಬರೂ ತಡರಾತ್ರಿ ಮನೆಗೆ ಬಂದರು. ಇಬ್ಬರೂ ಅವಿವಾಹಿತರು. ತಮ್ಮ ತಮಗಿಂತ ಮೊದಲೇ ಮದುವೆಯಾದ್ದು ಅರಿತು ತುಸು ಮತ್ಸರ ಅವರ ಮಾತಿನಲ್ಲಿ ಇಣುಕಿದ್ದು ತಿಳಿದರೂ ಸುಮ್ಮನಿದ್ದ ನವೀನ್. ರಾತ್ರಿ ಮಗಸೊಸೆಗೆ ರೂಮಿನಲ್ಲಿ ಹಾಸಿಗೆ ಹಾಸಿಕೊಟ್ಟ ನವೀನನ ತಾಯಿ ಪಾವನಾಳ ಅಮ್ಮನಲ್ಲಿ ಮಾತನಾಡುತ್ತಾ ಕುಳಿತರು.

   ಪಾವನಾಳ ಕಾಲ್ಗುಣವನ್ನು ಹೊಗಳಿ ಅಟ್ಟಕ್ಕೇರಿಸಿ ಲಾಭಪಡೆಯಲೆತ್ನಿಸಿದ ನವೀನ್. "ಸಾಕು.. ಸಾಕು..ರಾಯರು ಹೊಗಳಿದ್ದು.." ಎಂದು ಮೆಲ್ಲನೆ ಗಡ್ಡವನ್ನು ಸವರಿದಳು ಪಾವನಾ. ಹಿತವಾಗಿ ಅವಳೆದೆಯಲ್ಲಿ ಶಿರವಿಟ್ಟ ಅವನು ಉಸುರಿದ್ದು ಬೇರೇನೂ ಅಲ್ಲ.. ನಿನ್ನಿಂದಲೇ ನನ್ನ ಮನಸು ಅರಳಿದ್ದು.. ನಿನ್ನಿಂದಲೇ ಬಾಳಲ್ಲಿ ಪ್ರೇಮಜ್ಯೋತಿ ಬೆಳಗಿದ್ದು.. ನಿನ್ನಿಂದಲೇ ಬಾಳಕತ್ತಲೆಯು ಸರಿದದ್ದು... ನಿನ್ನಿಂದಲೇ ನಾನು ತುಂಟನಾದದ್ದು..."

"ಅರರೇ... ಫುಲ್..ಜೋಷ್... ಏನಪ್ಪಾ...ಹೀಗೆಲ್ಲ.. ಇಷ್ಟೊಂದು ಹೊಗಳ್ಬಾರ್ದು ರೀ.."ಎನ್ನುತ್ತಾ ನಾಚಿದವಳ ಗುಳಿಕೆನ್ನೆಗೆ ರಂಗುತುಂಬಿದ ನವೀನ್.. " ನನ್ನದೊಂದು ಆಸೆಯಿದೆ... ಚಿನ್ನಾ.." ಎಂದುಸುರಿದ ಅವಳ ಗಲ್ಲ ಹಿಂಡಿ.. "ಏನು ಹೇಳಿ...ಬೇಗ..ನನ್ನ ಕಾಯಿಸ್ಬೇಡಿ.." ಎಂದಳು ಆತುರದಿಂದ.
"ನೀನು ತುಂಬಾ ಓದಿದೀಯಾ.. ಒಳ್ಳೆಯ ಸ್ಥಾನಮಾನದಲ್ಲಿದ್ದೀಯಾ.. ನಾನು ನಿನಗೆ ಯಾವ ರೀತಿಯಲ್ಲೂ ಸಮನಲ್ಲ.. ಆದರೂ  ನನ್ನ.. ಪ್ರೇಮಿಸಿದೆ.. ಬಾಳರಥದಿ ನನ್ನ ಮೆರೆಸಿದೆ.. ಈಗ ನನ್ನ ಆಸೆಗೆ ನೀರೆರೆದು ಪೋಷಿಸಬಲ್ಲೆಯಾ? ಹೇಳು.." ಎಂದಾಗ...
ಪತಿಯನ್ನು ಮುದ್ದಿನಿಂದ ರಮಿಸಿ ಕಣ್ನೋಟದಲ್ಲೇ ಒಪ್ಪಿಗೆ ಸೂಚಿಸಿದಳು.. ತನಗೆ ಪದವಿಯ ನಂತರ ಓದಬೇಕೆಂದಿದ್ದನ್ನು ,ನಡೆದ ಅನಿರೀಕ್ಷಿತ ತಿರುವುಗಳನ್ನು ಹೇಳಿಕೊಂಡ ನವೀನ್. "ಹೇಳು..ನನ್ನನ್ನು ಓದಿಸುವೆಯಾ..." ಎಂದು ದೈನ್ಯವಾಗಿ ಕೇಳಿಕೊಂಡಾಗ ಅದಕ್ಕೊಪ್ಪಿ
"ಖಂಡಿತಾ ರೀ.. ಅದಕ್ಕೆ ಇಷ್ಟೆಲ್ಲ ಪೀಠಿಕೆ ಬೇಕಿತ್ತಾ.." ಎಂದು ಮೆಲ್ಲನೆ ಅಧರಕಧರವ ಬೆಸೆದಳು. ಪ್ರೇಮರಾಗ ಸರಾಗವಾಗಿ ಪಲ್ಲವಿಸಿತು. ಬೆಳಗೆದ್ದು ಮತ್ತೆ ಹೊರಟು ಮಂಗಳೂರಿನತ್ತ ಪಯಣ ಬೆಳೆಸಿದರು. ಅಪ್ಪ ಅಮ್ಮ ಇಬ್ಬರೂ ಆಗಾಗ ಬರುತ್ತಿರಿ ಎಂದು ಹೇಳಲು ಮರೆಯಲಿಲ್ಲ.

   ಮಂಗಳೂರಿನಲ್ಲಿ ನವೀನನಿದ್ದ ಪುಟ್ಟ ಬಾಡಿಗೆ ಮನೆಯಲ್ಲಿ ಸಂಸಾರ ಆರಂಭವಾಯಿತು. ಚಿಕ್ಕ ಸಂಸಾರ. ಪ್ರೀತಿ ,ಆನಂದ ತುಂಬಿ ತುಳುಕುತ್ತಿದ್ದವು. ಕೆಲವು ದಿನಗಳ ಕಾಲ ಮನೆಯಲ್ಲಿದ್ದ ಪಾವನಾ ನಂತರ ಬೆಂಗಳೂರಿನಿಂದ ಕ್ಲಿನಿಕ್ ಮಂಗಳೂರಿಗೆ ಬದಲಾಯಿಸಿಕೊಂಡಳು. ಉದ್ಯೋಗ ಮಾಡುವುದು ಪತಿ ಇದ್ದ ಊರಿನಲ್ಲಿಯೇ.. ಪತಿಯ ಜೊತೆ ಹೆಜ್ಜೆ ಹಾಕಿ ಅವರನ್ನು  ಅನುಸರಿಸುವವಳು ನಾನು.. ಎನ್ನುತ್ತಾ ಯಾವುದೇ ಅಹಂಕಾರ ತೋರದೆ ಪುಟ್ಟ ಮನೆಯಲ್ಲಿ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದರು.

         ಸೊಸೆ  ಮೊಮ್ಮಕ್ಕಳು ಮಂಗಳೂರಿಗೆ ತೆರಳಿದ ನಂತರ ಗಂಗಾಧರ ರಾಯರಿಗೆ ಒಬ್ಬಂಟಿತನ ಕಾಡಿತು. ಒಮ್ಮೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾದಾಗ ಮಗ ಗಣೇಶ ವೈದ್ಯರೇ ಆಗಿದ್ದರೂ ಕೂಡ ನೋಡಿಕೊಳ್ಳುವ ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಅದನ್ನು ತಿಳಿದ ಪಾವನ ಬಹಳ ನೊಂದುಕೊಂಡಳು. ಪತಿ ಹಾಗೂ ಮಕ್ಕಳಲ್ಲಿ ವಿಷಯ ತಿಳಿಸಿದಾಗ ಓಜಸ್  "ಅಜ್ಜನನ್ನು ನಾನು ನೋಡಿಕೊಳ್ಳುತ್ತೇನೆ. ಶಾಲೆಗೆ ರಜೆ ಆದರೂ ಸರಿ ನನಗೆ ಅಜ್ಜನನ್ನು ನೋಡಲೇಬೇಕು" ಎಂದ. ನವೀನ್ ಕೂಡ " ನಾವು ಅವರನ್ನು ಕೈ ಬಿಡುವುದು ಸರಿಯಲ್ಲ. ನಾನು , ಓಜಸ್ ಹೋಗಿ ಬರುತ್ತೇವೆ." ಎಂದು ಬೆಂಗಳೂರಿಗೆ ತೆರಳಿದರು. ಗಂಗಾಧರ ರಾಯರ ಜೊತೆಯಲ್ಲಿ ಯಾರೂ ಇರಲಿಲ್ಲ.. ಪತ್ನಿ ತನ್ನ ಮಹಿಳಾ ಸಂಘದೊಂದಿಗೆ ವಿದೇಶಕ್ಕೆ ಟೂರ್  ಹೋಗಿದ್ದರು. ಮಗ ಸನಿಹದಲ್ಲಿ ಇದ್ದರೂ ತಂದೆ ದಾಖಲಾಗಿದ್ದ ಆಸ್ಪತ್ರೆಯ ಕಡೆಗೆ ತಲೆಯೇ ಹಾಕಲಿಲ್ಲ. ಇಂತಹ ಸಂದರ್ಭದಲ್ಲಿ ನವೀನ್ ಗಂಗಾಧರರಾಯರಿಗೆ ಬೇಕಾದ ಚಿಕಿತ್ಸೆಯನ್ನು ಕೊಡಿಸಿ ಗುಣವಾದ ನಂತರ  "ನಿಮಗೆ ಅಭ್ಯಂತರವಿಲ್ಲದಿದ್ದರೆ ನೀವು ಮಂಗಳೂರಿಗೆ ಬಂದು ನಮ್ಮ ಜೊತೆ ಇರಿ. ಸರಿಯಾಗಿ ಗುಣವಾದ ನಂತರ ಮತ್ತೆ ಬೆಂಗಳೂರಿಗೆ ಬರಬಹುದು" ಎಂದಾಗ ಒಪ್ಪಿದ ಗಂಗಾಧರರಾಯರು ಮಂಗಳೂರಿಗೆ ಆಗಮಿಸಿದ್ದರು. ಸೊಸೆ ಹಾಗೂ ಎರಡನೇ ಮಗ ನಂತಿರುವ ನವೀನ್  ಹಾಗೂ ಮೊಮ್ಮಕ್ಕಳ ಜೊತೆ ಕಾಲಕಳೆಯುತ್ತಾ ಬಹಳ ಬೇಗ ಆರೋಗ್ಯವಂತರಾಗಿ, ನಂತರ ಆಗಾಗ ಬೆಂಗಳೂರಿಗೆ ತನ್ನ ಮನೆಗೆ ಹೋಗುತ್ತಾ ಸೊಸೆ ಮೊಮ್ಮಕ್ಕಳ ನೋಡಲು ಮಂಗಳೂರಿಗೂ ಬರುತ್ತಾ ಎರಡೂ ಕುಟುಂಬಗಳ ಜೊತೆ ಬೆರೆಯುತ್ತಿದ್ದರು.

              ಸುಮಾರು ಮೂರು ವರ್ಷಗಳ ನಂತರ ನವಿನ್ ದಂಪತಿ, ಮಕ್ಕಳು, ಗಂಗಾಧರ ರಾಯರು ಕಿಕ್ಕಿರಿದ ಸಮಾರಂಭವೊಂದರಲ್ಲಿ ಕುಳಿತಿದ್ದರು. ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿದ್ದರು. ನವೀನ್ ಎಂದೋ ಕಂಡಿದ್ದ ಘಟಿಕೋತ್ಸವದಲ್ಲಿ ಭಾಗವಹಿಸುವ ಕನಸು ಪಾವನಾಳ ಬೆಂಬಲದಿಂದ ಇಂದು ಈಡೇರಿತ್ತು. ನವೀನ್ ತನ್ನ  ಗೌನ್ ಮುಟ್ಟಿ ಖುಷಿಪಡುತ್ತಿದ್ದ. ಅದರಿಂದ ನೇತಾಡುವ ಬಳ್ಳಿಗಳು ಗಾಳಿಗೆ ತೂರಾಡಿ ಪಾವನಾಳತ್ತ ಹಾರಿಹೋಗುತ್ತಿದ್ದವು. ತನ್ನ ಹೆಸರು ಬರುತ್ತಿದ್ದಂತೆ ಓಡೋಡಿ ವೇದಿಕೆಯೇರಿದ ನವೀನ್. ನಾಲ್ಕು ಚಿನ್ನದ ಪದಕಗಳನ್ನು ಎಂಬಿಎ ಪದವಿಯಲ್ಲಿ ತನ್ನ ಮುಡಿಗೇರಿಸಿಕೊಂಡಿದ್ದ. ತನ್ನ ಸಾಧನೆಗೆ ಕಾರಣವಾದ ಪತ್ನಿಯನ್ನು ವೇದಿಕೆಯಲ್ಲಿ ಸ್ಮರಿಸಿದ. ಕಾರ್ಯಕ್ರಮದ ನಿರ್ವಾಹಕರಂತೂ ಅವನಲ್ಲಿ ಪತ್ನಿಯ ಹೆಸರು ಕೇಳಿ "ಡಾ|ಪಾವನಾ ವೇದಿಕೆಗೆ ಬನ್ನಿ " ಎಂದು ಕರೆದೇಬಿಟ್ಟರು. ಸಭಾಸದರೆಲ್ಲರೂ ಕಿವಿಗಡಚಿಕ್ಕುವ ಕರತಾಡನದೊಂದಿಗೆ ಪಾವನಾರನ್ನು ಅಭಿನಂದಿಸಿದರು. ವೇದಿಕೆಯ ಎಡಭಾಗದಲ್ಲಿ ಪ್ರೆಸ್ ನವರು ಸಂದರ್ಶನಕ್ಕಾಗಿ ಕಾದುನಿಂತಿದ್ದರು. ಮರುದಿನ ಎಲ್ಲಾ ಪತ್ರಿಕೆಗಳಲ್ಲೂ " ನಾಲ್ಕು ಚಿನ್ನದ ಪದಕ ಪಡೆದ ಅಡುಗೆ ಭಟ್ರು.." ಎಂಬ ಶೀರ್ಷಿಕೆಯಡಿ ನವೀನನ ಫೊಟೋ ರಾರಾಜಿಸುತ್ತಿತ್ತು. ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಗಂಗಾಧರ ರಾಯರೂ ನವೀನ್ ನನ್ನು ಕೈಕುಲುಕಿ ಬೆನ್ನುತಟ್ಟಿದರು.

        ಕಂಪೆನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಉದ್ಯೋಗ ಗಳಿಸಿದ ನವೀನ್ ನ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ.
ಮಡದಿ ಪಾವನಾ ಮಗ ಓಜಸ್, ಮಗಳು ಯಶಸ್ವಿ ಹಾಗೂ ಮುದ್ದಾದ ಪುಟಾಣಿ ಹತ್ತು ತಿಂಗಳ ಕಂದ ತೇಜಸ್ ನೊಂದಿಗೆ, ಆಗಾಗ ಬಂದು ಹೋಗುವ ಗಂಗಾಧರ ರಾಯರೊಂದಿಗೂ ಉತ್ತಮ ಬಾಂಧವ್ಯ ಉಳಿಸಿಕೊಂಡು ಸುಖವಾಗಿ ಬಾಳುತ್ತಿದ್ದಾನೆ.
ಪಾವನಾಗೆ ಮನವರಿತು ನಡೆವ ಸಂಗಾತಿ ಸಿಕ್ಕ ಸಂತೃಪ್ತಿ. ಅಷ್ಟ ಐಶ್ವರ್ಯ ತಂದು ಸುರಿದರೂ ಬೇಡ. ಇವನನ್ನೇ ಸಂಗಾತಿಯಾಗಿ ನನಗೆ ಏಳೇಳು ಜನುಮದಲ್ಲೂ ಕರುಣಿಸು ಎಂದು ರಾಮನಲ್ಲಿ ಬೇಡಿಕೊಳ್ಳುತ್ತಿದ್ದಾಳೆ ಸುಮಂಗಲಿ ಪಾವನಾ..

ಯಾವ ತರುವು ಆವ ಲತೆಗೊ
ಒಲವ ಹೂವು ಅರಳಲು
ಯಾರ ಆಸೆಗೆ ಆರ ಒಸಗೆಯೊ
ಯಶದ ಮೆಟ್ಟಿಲೇರಲು...||

              🙏 ಶುಭಂ 🙏

✍️... ಅನಿತಾ ಜಿ.ಕೆ.ಭಟ್.
31-10-2020.




Thursday, 29 October 2020

ಯಾವ ತರುವು ಆವ ಲತೆಗೋ... ಅಧ್ಯಾಯ-೫

 




ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                       💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೫

  
        ಅಡುಗೆ ಭಟ್ಟ ಮತ್ತು ವೈದ್ಯೆ ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ ಇದು ಕಷ್ಟಸಾಧ್ಯ ಎಂದು ಮತ್ತೆ ನಿರಾಸೆಯಾಗುವ ಮುನ್ನ ತಾನೇ ಮನಸ್ಸನ್ನು ಹಿಡಿತದಲ್ಲಿಡಬೇಕು ಎಂದುಕೊಂಡನು.
ಪಾವನಾ ಕರೆಮಾಡಿದಾಗ ಬ್ಯುಸಿ ಇದ್ದೇನೆ ಎಂದು ತಪ್ಪಿಸಿಕೊಂಡ. ಓಜಸ್ ಅಂತೂ "ನೀನು ಹಾಗೆಲ್ಲ ಹೇಳಿದರಾಗಲ್ಲ" ಎಂದು ಹಠ ಹಿಡಿದು ಐದು ನಿಮಿಷ ಮಾತನಾಡುತ್ತಿದ್ದ. ಪಾವನಾಳೊಡನೆ ಮಾತ್ರ ಮೌನ. ಒಂದು ವಾರ ತಡೆದುಕೊಂಡ ಪಾವನಾ ಕರೆ ಮಾಡಿದಾಗ ಪುನಃ ಅದೇ ಉತ್ತರ. ಅಳುತ್ತಾ "ನವೀನ್ ನನ್ನನ್ನು ಮರೆತೇಬಿಟ್ಟೆಯಾ?" ಎಂದು ಹೇಳಿ ಗದ್ಗದಿತಳಾದಾಗ ಅವಳ ಮನಸ್ಸೂ ನನ್ನತ್ತ ವಾಲಿದೆ ಎಂದು ಅರಿವಾಯಿತು. ಆಕೆಯಲ್ಲಿ ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪಿಸುವುದು ಹೇಗೆ ಎಂದು ಅಳುಕುತ್ತಿದ್ದ ನವೀನ್ ಕೇಳಿಯೇಬಿಟ್ಟ "ನನ್ನನ್ನು ಮದುವೆಯಾಗಲು ಸಿದ್ಧವಿದ್ದೀಯಾ?"ಎಂದು.
ಉತ್ತರಿಸಲಿಲ್ಲ ಪಾವನಾ.
"ಬೇಕಾದಷ್ಟು ಸಮಯ ತೆಗೆದುಕೊಂಡು ನಿರ್ಧಾರ ತಿಳಿಸು. ನೇರವಾಗಿ ಹೇಳುತ್ತಿದ್ದೇನೆ ಮದುವೆಯಾಗುವುದಾದರೆ ಮಾತ್ರ ದಿನವೂ ನಿನ್ನೊಂದಿಗೆ ಮಾತು. ಇಲ್ಲವೆಂದಾದರೆ ಬರೀ ಸ್ನೇಹ. ಅಪರೂಪಕ್ಕೆ ಹರಟೆ. ಹೆಣ್ಣುಮಕ್ಕಳೊಂದಿಗೆ ಸಲುಗೆಯಿಂದ ನಡೆದುಕೊಳ್ಳುವವ ಅನ್ನುವ ಹಣೆಪಟ್ಟಿ ನನಗೆ ಬರಬಾರದು" ಎಂದಾಗ
"ನನ್ನ ರಾಮ ನಿನ್ನನ್ನು ನನಗೆ ತೋರಿಸಿಕೊಟ್ಟಿದ್ದಾನೆ. ಇದು ರಾಮನಾಣತಿ" ಎಂದು ಹೇಳಿ ತನಗೆ ನವೀನ್ ನನ್ನು ಪರಿಚಯವಾಗುವ  ದಿನ ಮುಂಜಾನೆ ಬಿದ್ದ ಕನಸನ್ನು ಹೇಳಿಕೊಂಡಳು. ಆ ಕನಸಲ್ಲಿ ನನಗೆ ಕಂಡ ಮುಖ ನಿನ್ನದೇ" ಎಂದಳು.

      ಪಾವನಾಳ ಮಾತಿನಿಂದ ಮೂಕವಾದನು ನವೀನ್. ಅವನೂ ಕೂಡ ಪ್ರಭು ಶ್ರೀರಾಮನ ಆರಾಧಕ. ತಂದೆ ಮನೆಯಿಂದ ಹೊರದಬ್ಬಿದಾಗ ರಾಮನನ್ನು ನೆನಪಿಸಿಕೊಂಡು ಹೆಜ್ಜೆ ಹಾಕಿದ್ದು ಮನೆಯ ಸಮೀಪವಿದ್ದ, ಅವನದೇ ಕುಟುಂಬದ ಹಿರಿಯರು ಆರಾಧಿಸಿಕೊಂಡು ನಿತ್ಯ ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದ ಕೋದಂಡರಾಮನ  ಪುಟ್ಟ ಮಠಕ್ಕೆ. ಅಲ್ಲಿಂದ ನಂತರ ಪ್ರತಿ ನೋವಿನಲ್ಲೂ ನಲಿವಿನಲ್ಲೂ ಸಖನಾದದ್ದು ರಾಮನೇ. ರಾಮನನ್ನು ಧ್ಯಾನಿಸಿದರೆ ಎಂತಹಾ ಕಷ್ಟವೂ ನಿವಾರಣೆಯಾಗಿ ಮುನ್ನಡೆಯಲು ಶಕ್ತಿ ದೊರಕುತ್ತಿತ್ತು. ಬಾಳ ಸಂಗಾತಿ ಬೇಕೆಂದು ಮನವು ಬೇಡಿಕೊಂಡಾಗ ಈ ರೂಪದಲ್ಲಿ ಅನುಗ್ರಹಿಸಿದನೇ?  ಇರಬಹುದು. ಇದು ರಾಮನ ಲೀಲೆಯೇ ಸರಿ ಎಂದು ಮತ್ತೊಮ್ಮೆ ರಾಮನನ್ನು ಧ್ಯಾನಿಸುತ್ತಾ..
"ನನ್ನ ಕಷ್ಟದಲ್ಲಿ ಮಾನವೀಯತೆಯಿಂದ ಸಹಾಯಮಾಡಿ ಕಾಪಾಡಿದ ನಿನ್ನನ್ನು ಕೊನೆಯ ಉಸಿರಿನವರೆಗೆ ಜೋಪಾನಮಾಡುವ ಜವಾಬ್ದಾರಿ ನನ್ನದು ಪಾವನಾ.." ಎಂದನು.
ಪಾವನಾಗೆ ಕಣ್ಣೀರು ಉಕ್ಕಿಬರುತ್ತಿದ್ದುದು ಈಗ ಆನಂದ ಭಾಷ್ಪವಾಯಿತು. ನವೀನ್ ಕೂಡಾ ಭಿನ್ನವಾಗಿರಲಿಲ್ಲ.
"ಹೇ.. ಮುದ್ದು.. ಸ್ವಲ್ಪ ಫ್ರೆಶ್ ಆಗಿ ಬಾ.. ನಾನು ಫ್ರೆಶ್ ಆಗಿ ಬರ್ತೀನಿ.. ಐದುನಿಮಿಷದ ನಂತರ ಮಾತಾಡೋಣ.." ಎಂದ.
ಹೂಂಗುಟ್ಟಿದ ಪಾವನಾ ಫೋನಿಟ್ಟಳು.

         ಫ್ರೆಶ್ ಆಗಿ ಬಂದ ಪಾವನಾ ಮೊದಲು ತನ್ನ ಪುಟ್ಟ ದೇವರ ಕೋಣೆಯೊಳಗೆ ನಗುತ್ತಿದ್ದ ರಾಮನ ದಿವ್ಯಮಂಗಲ ಮೂರುತಿಗೆ ದೀಪ ಬೆಳಗಿದಳು. ತೇಜೋಮಯ ರಾಮನ ಮಹಿಮೆಯನ್ನು  ಕೊಂಡಾಡಿದಳು.
"ಮನದೊಳಗೆ ಮನೆಮಾಡು ಮನೋಹಾರಿ ರಾಮ||
ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ||
ರಾಮಾ.....ರಾಮಾ..." ಎನ್ನುತ್ತಾ ಧ್ಯಾನಿಸುತ್ತಿದ್ದರೆ ನವೀನ್ ಪಾವನಾಳಲ್ಲಿ ಮಾತನಾಡಲು ತವಕಿಸುತ್ತಿದ್ದ.

ಹೊರಬಂದು ಫೋನ್ ಕರೆ ಸ್ವೀಕರಿಸಿದಳು ಪಾವನಾ.
" ಚಿನ್ನಾ...." ಅಂದ ಅವನ ಮಾತನ್ನು ಕೇಳುತ್ತಿದ್ದರೆ ಅವಳ ಹೃದಯ ಕಂಪಿಸುತ್ತಿತ್ತು. ಇಂತಹಾ ಸವಿನುಡಿಯನ್ನು ಕೇಳಲು ಅದೆಷ್ಟು ವರ್ಷಗಳಿಂದ ಕಾಯುತ್ತಿದ್ದೆ ಎನಿಸಿತು ಅವಳಿಗೆ.
"ಹೂಂ..." ಅಂದಳು. ಮತ್ತೆ ಸುಮ್ಮನಾದಳು.
" ಈಗ ಮಾತಾಡಲ್ವಾ.."
"........."
"ಬರೀ ಮೌನಕ್ಕೆ ದುಡ್ಡು ಕೊಡ್ತಿದೀನಿ.. ಏನಾದ್ರೂ ಮಾತಾಡು.." ಎಂದರೆ ಅವಳ ಹೃದಯದಿಂದ ನೂರಾರು ಮಾತುಗಳು ಹೊರಬರದೆ ಅವಿತಿದ್ದವು.
" ಏನು ಮಾತಾಡ್ಲಪ್ಪಾ...ರಾಯರಲ್ಲಿ?"
"ನೀನು ಏನಂದರೂ ಕೇಳಲು ಖುಷಿ. ಅದ್ಕೆ ನಿಮ್ಮನ್ನು ಆರಾಧಿಸಲಾರಂಭಿಸಿದ್ದು.."
"ಓಹೋ...ಯಾವತ್ತೋ ಕದ್ದುಬಿಟ್ಟಿದೀನಿ ಹಾಗಾದ್ರೆ.. ಆ ಹೃದಯ..."
"ಅಲ್ವಾ ಮತ್ತೆ.. ನಿನ್ನ ದನಿ ಕೇಳದಿದ್ರೆ ನಂಗೂ ವೇದನೆ..."
"ಅಂತೂ ಇಬ್ರೂ ಒಂದೇ ಟ್ರ್ಯಾಕ್ ನಲ್ಲಿ ಓಡ್ತಾ ಇದ್ವಿ ಅಂತ ಆಯ್ತು.."

       ಹರಟುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ. "ಬಾಯ್ ಪಾವನಾ.." ಅಂದಾಗ ತಡರಾತ್ರಿಯಾಗಿತ್ತು. ನವೀನ್ ವೇಗವಾಗಿ ಹೆಜ್ಜೆ ಮುಂದಿಟ್ಟ. ಒಂದೇ ದಿನದಲ್ಲಿ  ಜಾತಕ ತೋರಿಸಿ ಮದುವೆಯ ದಿನಾಂಕ ನಿಗದಿಪಡಿಸಿ ಪಾವನಾಳಿಗೆ ತಿಳಿಸಿದಾಗ ಇದು ನಿಜವೋ ಸುಳ್ಳೋ ಎಂದು ತನ್ನನ್ನು ತಾನೇ ಚಿವುಟಿಕೊಂಡಳು. ಅಡುಗೆ ವೆಂಕಣ್ಣ ನವೀನ್ ಗೆ ತಂದೆಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸುವ ಭರವಸೆಯಿತ್ತ. ಒಂದು ಶುಭ ಮುಹೂರ್ತದಲ್ಲಿ ಪಾವನಾಳ ಆರಾಧ್ಯದೈವ ಶ್ರೀ ಸೀತಾರಾಘವನ ಸನ್ನಿಧಿಯಲ್ಲಿ ಸರಳವಾಗಿ ವಿವಾಹ ನೆರವೇರಿತು. ಗಂಗಾಧರ ರಾಯರು ಸೊಸೆಯ ಮದುವೆಗೆ ಆಗಮಿಸಿ ಮನದುಂಬಿ "ಸುಖವಾಗಿ ಬಾಳಿ" ಎಂದು ಹರಸಿದರು. ಹೊರಡುವಾಗ ನವೀನ್ ನ ಕೈಕುಲುಕಿ "ನೀನು ನನ್ನ ಎರಡನೇ ಮಗ ಅಂತ ತಿಳೀತೀನಿ ಕಣೋ.." ಎಂದಾಗ ಪಾವನಾ ಆಹಾ!! ಎಂತಹ ಹೃದಯ ವೈಶಾಲ್ಯತೆ ಮಾವನವರದು. ಇಂತಹ ಸಹೃದಯಿಗೆ ಎಂತಹ ಮಗ!! ಎಂದು ಒಂದು ಕ್ಷಣ ಭಾವುಕಳಾದಳು.

         ಓಜಸ್ ಗೆ ಅಂತೂ ತುಂಬಾ ಸಂತೋಷ ಆಗಿತ್ತು. ಇನ್ನು ನವೀನಣ್ಣ ನಾವು ಜೊತೇಲೇ ಇರೋದು ಅಂತ ಎಲ್ಲರಲ್ಲೂ ಹೇಳ್ತಾ ಇದ್ರೆ ಪಾವನಾ ಮಾತ್ರ "ಇನ್ನು ಅಪ್ಪ ಅನ್ಬೇಕು" ಎಂದು ತಾಕೀತು ಮಾಡಿದಳು. "ಇರ್ಲಿ ಬಿಡಿ.. ಅವನಿಷ್ಟದಂತೆ ಹೇಳಲಿ" ಎನ್ನುತ್ತಾ ತುಂಟ ನಗೆಯನ್ನು ಬೀರಿದ ನವೀನ್. ಪಾವನಾ ನಾಚಿ ಕೆಂಪೇರಿದಳು. ಕೆಂಪಡರಿದ ಅವಳ ಮುದ್ದು ಮುಖವನ್ನು ಮತ್ತೆ ಮತ್ತೆ ನೋಡಿ ಆನಂದಿಸಿದ ನವೀನ್.

       ಮದುವೆ ಮುಗಿಸಿ ಎಲ್ಲರೂ ಅವರವರ ಮನೆಗೆ ತೆರಳಿದರು. ಪಾವನಾಳ ಅಮ್ಮ ಮದುಮಕ್ಕಳ ಜೊತೆ ಫ್ಲಾಟ್ ಗೆ ಬಂದರು. ರಾತ್ರಿ ಊಟ ಮುಗಿಸಿ ಮಗಳು ಅಳಿಯನನ್ನು ಮಧುಮಂಚದತ್ತ ಕಳುಹಿಸಿಕೊಟ್ಟರು ತಾಯಿ ಸಾವಿತ್ರಿ.

      ಆ ಬೆಳ್ಳಿಯ ಚಂದಿರನ ತಂಪಲಿ ಬೀಸುವ ತಂಗಾಳಿಗೆ ಮೈಯೊಡ್ಡಿ ನಿಂತ ಜೋಡಿ.. ನಿನ್ನ ಕೈಬಿಡಲಾರೆ, ಕೂದಲು ಕೊಂಕದಂತೆ ಕಾಯುವೆ.. ಎಂಬ ಅವನ ಭರವಸೆಗೆ ಪರವಶಳಾದ ಅವಳು ಅವನೆದೆಗೆ ಮುಖವಿಟ್ಟಳು. ನಾಚಿದ ಚಂದಿರ ಮೋಡದ ಮರೆಯಲ್ಲಿ ಅವಿತ. ಅವಳ ಹಾರುವ ಕೂದಲು ತಾನೂ ತನ್ನಿರುವ ಮರೆತು ಬಂಧನದಿ ಜೊತೆಯಾಯಿತು. ಹಣೆಯ ಮೇಲಿನ ಸಿಂಧೂರ ಅವನೊಲುಮೆಯ ಉಂಗುರಕೆ ಸಾಕ್ಷಿಯಾಯಿತು.

ಯಾವ ತರುವು ಆವ ಲತೆಗೊ
ಒಲವ ಹೂವು ಅರಳಲು
ಯಾವ ದುಂಬಿಗೆ ಆವ ಸುಮವೊ
ಮಧುವ ಹೀರಿ ನಲಿಯಲು...||

ಯಾವ ಹನಿಗೆ ಆರ ಕೈಯೋ
ಮೆಲ್ಲಮೆಲ್ಲನೆ ಒರೆಸಲು
ಹೆಜ್ಜೆಹೆಜ್ಜೆಗೂ ಲಜ್ಜೆದುಂಬಿ
ಹೃದಯಕದವ ತೆರೆಯಲು...||

ಯಾವ ಕಸುಬೋ ಆವ ಧನವೋ
ಬರಿಯ ಉದರ ತುಂಬಲು
ಪ್ರೇಮದೊಸರಲಿ ಕೊಚ್ಚಿಹೋಗಿ
ಮನವು ತನುವ ಬೆಸೆಯಲು...||

ಪ್ರೀತಿಯೊಂದೆ ಸುಖಿಸಲು
ಮಧುರ ಮೈತ್ರಿ ಸವಿಯಲು
ಕರದಿ ಕರವನಿರಿಸುತ
ಕುದಿವ ಹೃದಯವ ತಣಿಸಲು..||

     ಅವನ ನುಡಿಸುವ ಕೊಳಲಾದಳು ಅವಳು. ಅವನ ಗಾನದಿ ಮೈಮರೆತು ತಲೆದೂಗಿದಳು. ಉಸಿರಿಗೂ ತಾನು ಪರಕೀಯ ಅನಿಸುವಷ್ಟು ಸನಿಹವಾದಳು. "ನನ್ನ ಹೀಗೇ ನೋಡ್ಕೊಳ್ತೀಯೇನೋ.." ಎನ್ನುತ್ತಾ ಕಣ್ಣಲ್ಲಿ ಕಣ್ಣಿಟ್ಟು ಕಣ್ತುಂಬಿಕೊಂಡಳು. "ಹುಚ್ಚು ಹುಡುಗಿ. ಈಗ ಯಾರಾದ್ರೂ ಅಳ್ತರೇನೋ.." ಎನ್ನುತ್ತಾ ಕಂಬನಿಯೊರೆಸಿದ. ಅವನ ಪ್ರತಿಯೊಂದು ನುಡಿಯೂ ಹೃದಯದೊಳಗೆ ಜಾಗಪಡೆದಿತ್ತು.
ಕಣ್ಣ ಹನಿಯನೆಲ್ಲ ತನ್ನೆದೆಯ ಚಿಪ್ಪಿನೊಳಗೆ ಬಂಧಿಸಿ ಮುತ್ತಾಗಿಸಿದ ಇನಿಯ. ನಲ್ಲೆಯ ಸನಿಹ ಮುದನೀಡಿದ ರಸಘಳಿಗೆ ತನ್ನ ನೋವಿನ ಪಯಣವನೆಲ್ಲ ಮರೆಸಿ ನಿನಗೆ ನಾನು ನನಗೆ ನೀನು ಒಲವೇ ನಮ್ಮ ಬದುಕು ಎಂದು ಯುಗಳಗೀತೆ ಹಾಡಿದರು.
 
        ಬೆಳಿಗ್ಗೆ ಐದು ಗಂಟೆಗೆ ಏಳುತ್ತಿದ್ದ ಪಾವನಾಗೆ ಇಂದು ದೇಹ ಭಾರವಾಗಿತ್ತು. ಮನಸ್ಸು ಸಂತಸದಿ ಕುಣಿಯುತಿತ್ತು. ತನ್ನ ಹೊದಿಕೆಯನ್ನು ಅವನಿಗೆ ಹೊದೆಸಿ ಏಳಹೊರಟ ಅವಳನ್ನು ಕೈಹಿಡಿದು ಬರಸೆಳೆಯಿತು ಹಿಂದಿನಿಂದ ಬಂದ ಕೈ.."ರೀ.." ಎಂದು ಮೆದುವಾಗಿ ಸರಿಸಿದಳು. ಮತ್ತೆ  ಸುತ್ತುವರಿದ  ಬಾಹುಬಂಧನ.. ಅವನ ರಾಗಕೆ ಸೋತ ರಾಧೆ ಆದಳು.

        ರೂಮಿನಿಂದ ಹೊರಬಂದಾಗಲೇ ಗಂಟೆ ಆರೂವರೆ ಆಗಿತ್ತು. ಬೇಗನೆ ಸ್ನಾನ ಮುಗಿಸಿ ದೀಪ ಬೆಳಗಿ ಗಣಪತಿ, ದುರ್ಗೆ, ರಾಮನಿಗೆ ನಮಸ್ಕರಿಸಿದಳು. "ಮನದೊಳಗೆ ಮನೆಮಾಡು ಮನೋಹಾರಿ ರಾಮ..ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ...ರಾಮ...
ರಾಮ...." ಎಂದು ಸುಶ್ರಾವ್ಯವಾಗಿ ಹಾಡುವಾಗ ನವೀನ್ ಕೂಡ ಫ್ರೆಶ್ ಆಗಿ ಬಂದು ಪಾವನಾಳ ಹಿಂದೆ ನಿಂತಿದ್ದ. ತಿಳಿಯದ ಪಾವನಾ ನಮಸ್ಕರಿಸಲು ಬಗ್ಗಿದಾಗ ಹೊಕ್ಕುಳ ಮೇಲೇನೋ ಹರಿದಂತಾಗಿ ಹಿಂದಿರುಗಿದರೆ.. ಅವರೇ..!  "ಹೂಂ.. ಏನ್ರೀ.. ಈಗ್ಲೂ.." ಅಂತ ಮೆಲುದನಿಯಲ್ಲಿ ಹೇಳಿ ಕೆನ್ನೆ ಕೆಂಪಾಗಿಸಿ ದೇವರಿಗೆ ನಮಸ್ಕರಿಸಿದಳು. ನವೀನ್ ಕೂಡಾ ಅವಳನ್ನು ಅನುಸರಿಸಿದ. ಮಗಳು ಅಳಿಯನ ಅನುರಾಗವನ್ನು ಕಣ್ತುಂಬಿಸಿಕೊಂಡ ಅಮ್ಮ ಸಾವಿತ್ರಿ.
"ನೂರ್ಕಾಲ ಸುಖವಾಗಿ ಬಾಳಲಿ ಈ ಜೋಡಿ" ಎಂದು ಮನದುಂಬಿ ಹರಸಿದರು.
"ಅಮ್ಮಾ.. " ಎನ್ನುತ್ತಾ ಒಳಬಂದ ಪಾವನಾ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ ನವೀನ್ ತಾನೂ ಹಿಂಬಾಲಿಸಿದ. ಬಾಗಿ ನಮಸ್ಕರಿಸಿದವನಿಗೆ ಕಟಿ ತನ್ನ ಇರುವಿಕೆ ತಿಳಿಸಿತ್ತು. "ಇಬ್ರೂ ಸುಖವಾಗಿ ಬಾಳಿ" ಎಂದು ಮನದುಂಬಿ ಹರಸಿದರು ಅಮ್ಮ.

       ನವೀನ್ ತಾನು ನಂಬಿದ ತನ್ನೂರಿನ ಕೋದಂಡರಾಮನ ಮಠಕ್ಕೆ ತೆರಳಬೇಕು ಎಂದು ಹೇಳಿದಾಗ ಎಲ್ಲರೂ ಸೇರಿ ಇಂದೇ ಹರಡೋಣವೆಂದು ದನಿಗೂಡಿಸಿದರು. ಕಾರಿನಲ್ಲಿ ಕುಟುಂಬ ಕರಾವಳಿಯತ್ತ ಪಯಣ ಬೆಳೆಸಿತು.

ಮುಂದುವರಿಯುವುದು....


✍️...ಅನಿತಾ ಜಿ.ಕೆ.ಭಟ್.
30-10-2020.




Wednesday, 28 October 2020

ಯಾವ ತರುವು ಆವ ಲತೆಗೋ... ಅಧ್ಯಾಯ ೪

 


ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                   💐💐
ಯಾವ ತರುವು ಆವ ಲತೆಗೋ: ಅಧ್ಯಾಯ-೪

               'ಭಟ್ಸ್ ನರ್ಸಿಂಗ್ ಹೋಂ' ಇದು ನಗರದಲ್ಲಿ ಖ್ಯಾತಿವೆತ್ತ ಡಾಕ್ಟರ್ ಕೃಷ್ಟ ಪ್ರಸಾದ್ ಅವರ ಕನಸಿನ ಕೂಸು. ಪ್ರಸಾದ್ ಅವರ  ಮಗ ನವನೀತ ಪ್ರಸಾದ್. ಮಗಳು ಪಾವನಾ ಹುಟ್ಟಿದ ವರ್ಷವೇ ಕನಸು ಸಾಕಾರಗೊಂಡದ್ದು. ಮಗಳು ತಂದ ಸೌಭಾಗ್ಯ ಎಂದೇ ನಂಬಿದವರು ಪ್ರಸಾದ್. ಮುದ್ದಿನ ಕುವರಿ ಪಾವನಾ ಎಂದರೆ ಆಸ್ಪತ್ರೆಯ ಸಿಬ್ಬಂದಿಗಳಿಗೆಲ್ಲ ಅಚ್ಚುಮೆಚ್ಚು, ಮನೆಮಗಳಂತೆ. ತಾಯಿ ಸಾವಿತ್ರಿ ಮಕ್ಕಳಿಬ್ಬರು ದೊಡ್ಡವರಾಗುತ್ತಿದ್ದಂತೆ ತಾನು ಕ್ಲಬ್, ಮಹಿಳಾ ಮಂಡಳಿ, ಸಮಾಜ ಸೇವೆ ಎಂದು ಸುತ್ತತೊಡಗಿದರು. ಬರಬರುತ್ತಾ ಕುಟುಂಬದಿಂದ ಹೆಚ್ಚು ಗಮನ ಸಮಾಜಸೇವೆಗೆ ಮೀಸಲಿಟ್ಟರು. ಮಕ್ಕಳಿಗೆ ತಾಯಿಯ ಪ್ರೀತಿಯ ಕೊರತೆ ಕಾಡುತ್ತಿತ್ತು. ಅಪ್ಪ ಮಾತನಾಡಲು ಸಿಗುವುದೇ ಅಪರೂಪ. ಸಿಕ್ಕಾಗಲಂತೂ ಬಹಳ ಸಹೃದಯತೆಯಿಂದ ಕಕ್ಕುಲಾತಿಯಿಂದ ಮಾತಿಗೆಳೆಯುವುದು, ನಗು, ಹರಟೆ ಎಲ್ಲವೂ ಖುಷಿ ಕೊಡುತ್ತಿತ್ತು.

       ತಂದೆತಾಯಿಯ ಆಸೆಯಂತೆ ಮಕ್ಕಳಿಬ್ಬರೂ ವೈದ್ಯಕೀಯ ಶಿಕ್ಷಣ ಪಡೆದರು. ಮಗಳಿಗೆ ಎಂಬಿಬಿಎಸ್ ಮುಗಿಯುತ್ತಿದ್ದಂತೆ ಒಳ್ಳೆಯ ಸಂಬಂಧ ಬಂದದ್ದರಿಂದ ತಡಮಾಡದೆ ವಿವಾಹ ನೆರವೇರಿಸಿದರು. ಮಗ ನವನೀತ ವೈದ್ಯಕೀಯ ಉನ್ನತ ವಿದ್ಯಾಭ್ಯಾಸ ಪಡೆದು ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯಕ್ಕೆ ಸೇರಿಕೊಂಡನು.

      ಪಾವನಾ ಗಂಡನ ಮನೆಗೆ ಕಾಲಿಟ್ಟಿದ್ದು ವೈದ್ಯರ ಪತ್ನಿಯಾಗಿ. ಮಾವ ಗಂಗಾಧರ ರಾಯರು ಕೇಂದ್ರ ಗೂಢಾಚಾರ ಇಲಾಖೆಯ ನಿವೃತ್ತ ಅಧಿಕಾರಿ. ಅತ್ತೆ ಗೃಹಿಣಿ. ಆರಂಭದಿಂದಲೇ ಗಂಡ ಡಾಕ್ಟರ್ ಗಣೇಶ್ ನ ನಡವಳಿಕೆಯಲ್ಲಿ ಏನೋ  ಏರುಪೇರು ಗಮನಿಸಿದ್ದಳು ಪಾವನಾ. ಯಾರಲ್ಲೂ ಹಂಚಿಕೊಳ್ಳಲೂ ಸಾಧ್ಯವಾಗಲಿಲ್ಲ ಅವಳಿಗೆ. ಎಷ್ಟೋ ಸಲ ಅಮ್ಮನಲ್ಲಿ ಹೇಳೋಣ ಅಂದುಕೊಂಡಾಗ ಅಮ್ಮ ನಾನು ಮೀಟಿಂಗ್ ನಲ್ಲಿದ್ದೇನೆ, ಅಲ್ಲಿದ್ದೇನೆ ಇಲ್ಲಿದ್ದೇನೆ ಅಂದಾಗ ಹೇಳುವ ಆಪ್ತವಾತಾವರಣವೇ ಸಿಗಲಿಲ್ಲ.

       ಗಂಡನಿಂದ ಸಂಪೂರ್ಣ ಪ್ರೀತಿ ದೊರಕುತ್ತಿಲ್ಲವೆಂದು ಖಚಿತವಾದಾಗ ಪಾವನಾ ಮೂರು ತಿಂಗಳ ಗರ್ಭಿಣಿ. ಮನೆಯಲ್ಲಿ ಸಮಯ ಕಳೆಯಲು ಕಷ್ಟವಾಗುತ್ತಿದೆ ಎಂದಾಗ ಮಾವ ಮನೆಯ ಪಕ್ಕದಲ್ಲಿ ಕ್ಲಿನಿಕ್ ಹಾಕಿಕೊಟ್ಟರು. ತಡರಾತ್ರಿ ಮನೆಗೆ ಆಗಮಿಸುತ್ತಿದ್ದ ಗಣೇಶ್. ಊಟ ಬಡಿಸಿದರೆ ಊಟವಾಗಿದೆ ಎನ್ನುತ್ತಾ ತನ್ನ ಪಾಡಿಗೆ ರೂಂ ಸೇರಿಕೊಳ್ಳುತ್ತಿದ್ದ. ಅಪ್ಪನಿಗೆ ಮಗನ ವರ್ತನೆ ಅತಿರೇಕವೆನಿಸಿ ಬುದ್ಧಿ ಹೇಳಿದರು. ಆದರೂ ಬದಲಾವಣೆಯಿಲ್ಲ.

       ಪಾವನಾ ಮಾವ ಗಂಗಾಧರ ರಾಯರೊಂದಿಗೆ ಬಹಳ  ಸಲುಗೆಯಿಂದ ಇದ್ದಳು. ಮಾವ ಸೊಸೆ ಅಂದರೆ ಸ್ನೇಹಿತರಂತೆ. ಗಂಗಾಧರ ರಾಯರು ಕಷ್ಟಪಟ್ಟು ಓದಿ ಉದ್ಯೋಗ ಗಳಿಸಿದವರು. ಶ್ರಮವಹಿಸಿ ಗುಪ್ತಚರ ವರದಿಗಳನ್ನು ಸಂಗ್ರಹಿಸುವುದು, ಗುಪ್ತ ಕೋಡ್ ಗಳನ್ನು  ಅರ್ಥೈಸಿಕೊಳ್ಳುವುದರಲ್ಲಿ ಎತ್ತಿದ ಕೈ. ಹಗಲು ರಾತ್ರಿ ಎನ್ನದೆ ಉದ್ಯೋಗಕ್ಕೆ ಮೀಸಲಿಟ್ಟರು. ಮೇಲೆ ಮೇಲೆ ಉನ್ನತ ಸ್ಥಾನ ಅಲಂಕರಿಸುತ್ತಾ ಹೋದರು. ಮೊದಲೇ ಸಿಡುಕಿನವಳಾದ ಸಮಾಜ ಸೇವಕಿಯಾದ ಮಡದಿಯ ಬಗ್ಗೆ ಯೋಚಿಸುವಷ್ಟು ಬಿಡುವು ಪಡೆದುಕೊಳ್ಳಲಿಲ್ಲ. ಮಗನನ್ನು ಪ್ರೀತಿಯಿಂದ ಮಾತನಾಡಿಸಬೇಕೆಂದು ಅನಿಸಲೇಯಿಲ್ಲ. ಉದ್ಯೋಗವೇ ಉಸಿರಾಗಿತ್ತು. ನಿವೃತ್ತಿಯ ನಂತರ ತನ್ನ ತಪ್ಪಿನ ಅರಿವಾಯಿತು. ಮಗ ಈಗ ವೈದ್ಯ. ತಾನಾಯಿತು ತನ್ನ ಕೆಲಸವಾಯಿತು. ಅಪ್ಪನೊಂದಿಗೆ ಮಾತನಾಡಲು ಬಯಸುತ್ತಿಲ್ಲ. ಮಡದಿಗೆ ಸಮಾಜಸೇವಕಿ ಎಂಬ ಬಿರುದಾವಳಿಗಳು ಬಿಗುಮಾನ ತಂದುಕೊಟ್ಟಿದ್ದವು. ಗಂಗಾಧರ ರಾಯರು ಒಬ್ಬಂಟಿಯಾದರು. ಮಗನಿಗೆ ಮದುವೆ ಮಾಡಿ ಸೊಸೆ ಬಂದಾಗ ಗಂಗಾಧರ ರಾಯರಿಗೆ ಬಹಳ ಖುಷಿಯಾಯಿತು. ಪಾವನಾ ಬಾಯಿ ತುಂಬ ಪಟಪಟನೆ ಅರಳುಹುರಿದಂತೆ ಮಾತನಾಡುವವಳು. ಮಾವನ ಏಕಾಂಗಿತನಕ್ಕೆ ಸೊಸೆಯೇ ಔಷಧವಾದಳು. ಇಬ್ಬರೂ ಹರಟೆ ಹೊಡೆಯುತ್ತಾ ಒಬ್ಬರನ್ನೊಬ್ಬರು ಹಚ್ಚಿಕೊಂಡರು. ಆಗಲೇ ಪಾವನಾ ಗಂಡನ ಅನಾದರವನ್ನು ಮಾವನ ಬಳಿ ಹಂಚಿಕೊಂಡಳು. ಮಗನ ಬಗ್ಗೆ ಮಾಹಿತಿ ಕಲೆಹಾಕಿದ ರಾಯರಿಗೆ ಆಘಾತ ಕಾದಿತ್ತು. ಮಗನನ್ನು ತಿದ್ದುವ ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಸರಿಪಡಿಸಲಾಗದಷ್ಟು ಬದಲಾಗಿದ್ದ ಗಣೇಶ್.

      ಪಾವನಾ ಸೀಮಂತವಾಗಿ ತವರಿಗೆ ತೆರಳಿದಾಗ ತಂದೆತಾಯಿಗೂ ಸಮಾಚಾರ ತಿಳಿದು ಖೇದವಾದರೂ ಇಂದಲ್ಲ ನಾಳೆ ಅಳಿಯ ಸರಿಹೋದಾನು ಎಂಬ ಭರವಸೆಯಲ್ಲಿ ಮಗಳಿಗೆ ಧೈರ್ಯ ತುಂಬಿದರು. ಮುದ್ದಾದ ಗಂಡುಮಗು ಓಜಸ್ ಗೆ ಜನ್ಮವಿತ್ತಳು ಪಾವನಾ. ಮತ್ತೆ ಪತಿಯ ಮನೆ ವಾಸ. ಗೋಳು ಹೇಳಿಕೊಂಡರೆ ವಿಚ್ಛೇದನ ಬೇಡ ಎನ್ನುವ ಎರಡೂ ಕುಟುಂಬಗಳ ಹಿರಿಯರು. ಇಕ್ಕಟ್ಟಿಗೆ ಸಿಲುಕಿದಳು ಪಾವನಾ. ಹೀಗಿರುವಾಗಲೇ ಎರಡನೇ ಸಲ ಗರ್ಭಿಣಿಯಾಗಿ ಹೆಣ್ಣು ಮಗು ಯಶಸ್ವಿಗೆ ಜನ್ಮವಿತ್ತಳು..
    
     ಗಣೇಶ್ ವೈದ್ಯೆಯೊಬ್ಬಳ ಸಹವಾಸದಲ್ಲಿ ಸುಖಿಯಾಗಿದ್ದ. ಮೋಹದ ಪಾಶ ಬಹಳ ಬಲವಾಗಿತ್ತು. ಮಾಡೆಲ್ ಕೂಡ ಆಗಿದ್ದ ಆ ವೈದ್ಯೆಗೆ ಮದುವೆ ಆಗಿ ಡೈವೋರ್ಸ್ ಆಗಿತ್ತು. ಗಣೇಶ್ ನನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಜೀವನವನ್ನು ಸರಿಪಡಿಸಿಕೊಂಡಳು. ಒಂದಷ್ಟು ಅಮಲಿನ ಚಟಗಳನ್ನು  ಕಲಿಸಿಬಿಟ್ಟಳು.
ಇತ್ತ ಅದರ ಅರಿವಿಲ್ಲದ ಗಣೇಶನ ಅಪ್ಪ ಅಮ್ಮ ಅವನಿಗೆ ಪಾವನಾಳನ್ನು ಮದುವೆ ಮಾಡಿದ್ದರು. ಗಣೇಶ್ ವಿಷಯವನ್ನು ಮುಚ್ಚಿಟ್ಟು ಪಾವನಾಳಿಗೆ ಅನ್ಯಾಯ ಮಾಡಿದ್ದ. ಇದನ್ನು ಅರಿತ ಪಾವನಾ ಹಿರಿಯರು ವಿಚ್ಛೇದನಕ್ಕೆ ಒಪ್ಪದ ಕಾರಣ ಹೇಳಕೇಳದೆ ಒಂದು ದಿನ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಮನೆಯಿಂದ ಹೊರನಡೆದಳು.

        ಗೆಳತಿ ವಿದ್ಯಾ ಮತ್ತು ಅವಳ ಹೆತ್ತವರು ಪಾವನಾಳಿಗೆ ಆಶ್ರಯ ನೀಡಿದರು. ಇತ್ತ ಮನೆಯವರೆಲ್ಲರೂ ಅವಳಿಗಾಗಿ ಹುಡುಕಾಟ ನಡೆಸಿದರೂ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಗಂಗಾಧರ ರಾಯರು ಮುದ್ದಿನ ಸೊಸೆ ಮೊಮ್ಮಕ್ಕಳ  ನೆನಪಿನಲ್ಲಿ ನಲುಗಿ ಹೋದರು. ಒಂದು ವರ್ಷ ಗೆಳತಿಯ ಮನೆಯಲ್ಲುಳಿದಿದ್ದ  ಪಾವನಾ ಒಂದು ಕ್ಲಿನಿಕ್ ತೆರೆದಳು. ಪುಟ್ಟ ಬಾಡಿಗೆ ಮನೆಯನ್ನೂ ಮಾಡಿಕೊಂಡಳು. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಲು ಪತಿಯಿಂದ ಪರಿತ್ಯಕ್ತಳಾದ ಚಿನ್ನಮ್ಮ ಜೊತೆಯಾದಳು. ಅದೊಂದು ದಿನ ಗಂಗಾಧರ ರಾಯರಿಗೆ ಸೊಸೆಯ ಇರುವಿಕೆ ತಿಳಿದು ಕೂಡಲೇ ಕ್ಲಿನಿಕಿಗೆ ಧಾವಿಸಿದರು. ಸುತ್ತಲೂ ಇದ್ದ ಪೇಷೆಂಟ್ ಗಳನ್ನು ಸರಿಸಿ ಸೀದಾ ಒಳಗೆ ತೆರಳಿದ ಗಂಗಾಧರ ರಾಯರು ಪಾವನಾಳ ಬಳಿಬಂದಾಗ ಕಣ್ಣೀರ ಕಟ್ಟೆಯೊಡೆದು ಪಾವನಳ ಕೈಹಿಡಿದು "ಮಗಳೇ ನಮ್ಮಿಂದ ನೀನು ನೋವನುಭವಿಸುವಂತಾಯಿತು. ಕ್ಷಮಿಸಿಬಿಡಮ್ಮಾ. ಕರ್ತವ್ಯ ಮರೆತ ಮಗನನ್ನು ಹೆತ್ತ ತಂದೆಯನ್ನು" ಎಂದಾಗ ಅಲ್ಲಿದ್ದವರೆಲ್ಲ ಸಿನಿಮಾ ದೃಶ್ಯವೋ ಎನ್ನುವಂತೆ ಗರಬಡಿದು ನಿಂತರು. ಪಾವನಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಗಂಗಾಧರ ರಾಯರು ಹೊರಗೆ ಬಂದು ಕುಳಿತರು. ಪಾವನಾ ಸ್ವಲ್ಪ ಹೊತ್ತಿನಲ್ಲಿ ಚೇತರಿಸಿಕೊಂಡು ನನ್ನ ಜವಾಬ್ದಾರಿ ನಾನು ಮರೆಯಬಾರದು ಎಂದು ಮತ್ತೆ ರೋಗಿಗಳನ್ನು ಪರೀಕ್ಷಿಸಲಾರಂಭಿಸಿದಳು.

       ಆರೂವರೆ ಗಂಟೆ ಸಮಯ..ಕ್ಲಿನಿಕ್ ಬಾಗಿಲೆಳೆಯುವ ಸಮಯ. ಅಲ್ಲೇ ಯೋಚಿಸುತ್ತಾ ಕುಳಿತಿದ್ದರು ಗಂಗಾಧರ ರಾಯರು. "ಮಾವ.. "ಎನ್ನುತ್ತಾ ಒಳಗೆ ಕರೆದಳು ಪಾವನಾ. ಇಬ್ಬರೂ ಗಹನವಾಗಿ ಚರ್ಚಿಸಿದರು.
ನಂತರ ಇಬ್ಬರೂ ಜೊತೆಯಾಗಿ ಬಾಡಿಗೆ ಮನೆಗೆ ತೆರಳಿದರು. ಮೊಮ್ಮಕ್ಕಳನ್ನು ಕಂಡ ಅಜ್ಜ ಬಹಳ ಆನಂದಪಟ್ಟರು. ಅಂದಿನಿಂದ ದಿನಾ ಸಂಜೆ ರಾಯರು ಪಾವನಾಳ ಕ್ಲಿನಿಕ್ ಗೆ, ಮನೆಗೆ ಭೇಟಿನೀಡುವ ಪರಿಪಾಠ ಬೆಳೆಸಿಕೊಂಡರು. ಮಗ ಜವಾಬ್ದಾರಿ ಮರೆತರೂ ತಾನು ಮರೆಯಬಾರದು ಎಂಬುದು ಅವರ ನಿಲುವಾಗಿತ್ತು. ಕೆಲವೇ ತಿಂಗಳಲ್ಲಿ ಸೊಸೆಗೆ ಒಂದು ಸುಸಜ್ಜಿತ ಫ್ಲಾಟ್ ಕೊಂಡರು. ಸೊಸೆ ಮೊಮ್ಮಕ್ಕಳ ಹಿತವನ್ನೇ ಬಯಸಿದರು. ಮಗ ಸೊಸೆ ಬೇರೆಯಾದರು ಮಾವ ಸೊಸೆ ಬಾಂಧವ್ಯ, ಅಜ್ಜ ಮೊಮ್ಮಕ್ಕಳ ತುಂಟಾಟಗಳು ಯಥಾಪ್ರಕಾರ ಮುಂದುವರಿಯಿತು. ಸೊಸೆಯ ಭವಿಷ್ಯದ ದೃಷ್ಟಿಯಿಂದ ಮಾವ ತಾವೇ ಮುಂದಾಗಿ ವಿಚ್ಛೇದನ ಕೊಡಿಸಿದರು. ಓಜಸ್ ಈಗ "ಏಕೆ ಅಪ್ಪ ಜೊತೆಯಲ್ಲಿಲ್ಲ?" ಎಂದು ಕೇಳುತ್ತಿದ್ದ. ಉತ್ತರ ಕೊಡಲು ಪಾವನಾಳ ನಾಲಿಗೆ ಚಡಪಡಿಸುತ್ತಿತ್ತು. ನವೀನ್ ನನ್ನು ಅತಿಯಾಗಿ ಹಚ್ಚಿಕೊಂಡಾಗ ಹಿಂದಿನ ಬಾಳ ಕಹಿನೆನಪುಗಳು ಮತ್ತೆ ಮೈಕೊಡವಿ ನಿಂತಿದ್ದವು..

         ಎರಡು ದಿನದಲ್ಲಿ ನವೀನ್ ಗುಣಮುಖನಾಗಿ ತನ್ನೂರಿಗೆ ಹೊರಟು ನಿಂತಾಗ ಓಜಸ್ ದು ಒಂದೇ ಹಠ " ನೀನು ಇಲ್ಲೇ ಇರು. ನಾನು ನೀನು ಫ್ರೆಂಡ್ಸ್" ಅಂತ. ಹಾಗೂ ಹೀಗೂ ಅವನಲ್ಲಿ ಸಾಬೂಬು ಹೇಳಿ ತನ್ನೂರಿಗೆ ಹೊರಟ ನವೀನ್ ನನ್ನು ಮೆಜೆಸ್ಟಿಕ್ ಗೆ ಕರೆದೊಯ್ದ ಬಸ್ ಹತ್ತಿಸಿ ಬಂದರು ಪಾವನಾ, ಓಜಸ್, ಯಶಸ್ವಿ. ದಿನವೂ ನವೀನ್ ನೊಂದಿಗೆ ಹರಟುವುದು ಓಜಸ್ ನ ರೂಢಿಯಾಯಿತು. ಒಂದು ದಿನ ಮಾತನಾಡದಿದ್ದರೆ ಓಜಸ್ ಊಟ ಮಾಡುತ್ತಿರಲಿಲ್ಲ. ಪಾವನಾ ಮತ್ತು ಮಕ್ಕಳೊಂದಿಗೆ  ಪ್ರತಿನಿತ್ಯ ಮಾತನಾಡುತ್ತಿದ್ದ ನವೀನ್. ಹೀಗೇ ಸಾಗುತ್ತಿತ್ತು ಪಯಣ. ಒಂದು ಹಂತಕ್ಕೆ ಬಂದಾಗ  ನವೀನ್ ಗೆ ಪಾವನಾಳನ್ನು ತಾನು ಅತಿಯಾಗಿ ಆರಾಧಿಸುತ್ತಿದ್ದೇನೆ, ಓಜಸ್ ಕೇವಲ ನೆಪಮಾತ್ರ ಎಂದು ಅರಿವಾಯಿತು. ತನ್ನ ಮನಸ್ಸನ್ನು ಹತೋಟಿಯಲ್ಲಿ ಇಡಬೇಕೆಂದು ಮಾತನಾಡದಿರಲು ನಿರ್ಧರಿಸಿದ.

                      ***
         ತನ್ನ ಕಾಲೇಜು ಸಹಪಾಠಿ ಸುಕನ್ಯಾಳನ್ನು ಪ್ರೀತಿಸಿದ್ದ ನವೀನ್. ಐದು ವರ್ಷಗಳ ಮೂಕಪ್ರೀತಿ ಅದಾಗಿತ್ತು. ಮಾತನಾಡಲು ಬಹಳವೇ ಮನವು ತವಕಿಸುತ್ತಿತ್ತು. ಆದರೆ ಆಗಿನ ಕಾಲ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಕದ್ದು ಮುಚ್ಚಿ ಒಂದೆರಡು ಮಾತನಾಡಿದರೆ ಹೆಚ್ಚು. ಪದವಿ ಮುಗಿಯುತ್ತಲೇ ಸುಕನ್ಯಾಗೆ ಮನೆಯವರು ಗಂಡು ಹುಡುಕತೊಡಗಿದರು. ನವೀನ್ ತನ್ನ ಮತ್ತು ಸುಕನ್ಯಾಳ ಪ್ರೀತಿಯನ್ನು ತನ್ನ ತಂದೆಯಲ್ಲಿ ಹೇಳಿಕೊಂಡ. ಚೆನ್ನಾಗಿ ಬಾರಿಸಿದರು ತಂದೆ. ಮನೆಯಿಂದ ಹೊರಗೆ ನಡೆ ಎಂದು ಕೋಪದಲ್ಲಿ ಅಬ್ಬರಿಸಿದರು. ಕೆಲವು ದಿನ ಎಲ್ಲೋ ಕಳೆದ ನವೀನ್  ಸುಕನ್ಯಾಳ ಮನೆಗೆ ತೆರಳಿ ಮದುವೆ ಮಾಡಿ ಕೊಡುವಂತೆ ಆಕೆಯ ತಂದೆಯನ್ನು ಬೇಡಿಕೊಂಡ. ಅಲ್ಲೂ ಅದೇ ತಿರಸ್ಕಾರ. ಸುಕನ್ಯಾ ತಂದೆಯೆದುರು ನವೀನ್ ನನ್ನು ಪ್ರೀತಿಸಿದ್ದೇನೆ ಎನ್ನಲು ಹಿಂಜರಿದಳು. ಅಪ್ಪನ ಕ್ರೋಧಕಂಡು ಹೆದರಿದ ಹರಿಣಿಯಾದಳು "ನಿನ್ನಂತಹ ಬಡವನಿಗೆ, ಇನ್ನೂ ಓದು ಪೂರ್ತಿಯಾಗದವನಿಗೆ ನಾನು ಹೆಣ್ಣು ಕೊಡಲಾರೆ. ನಿನ್ನ ವಿದ್ಯಾಭ್ಯಾಸ ಮುಗಿಯುವವರೆಗೆ ಕಾಯಲು ಸಾಧ್ಯವಿಲ್ಲ" ಎಂದು ಹೇಳಿ ಅಬ್ಬರಿಸಿದರು. ಸುಕನ್ಯಾಳನ್ನು ಕರೆದು ಅವನೆದುರು ನಿಲ್ಲಿಸಿ "ಹೌದೇನೇ.. ನೀನು ಇವನನ್ನು ಪ್ರೀತಿಸಿದ್ದೀಯಾ?"ಎಂದಾಗ ಅವಳು "ಅಪ್ಪಾ...ಇಲ್ಲ ನಾನು ಪ್ರೀತಿಸಿಲ್ಲ. ಅವನೇ ನನ್ನನ್ನು ಹಿಂಬಾಲಿಸುತ್ತಿದ್ದ" ಎಂದಾಗ ನವೀನ್ ಸೋತುಹೋದ. ತನ್ನ ಪ್ರೇಮಕ್ಕೆ ಅರ್ಥವಿಲ್ಲ, ಬೆಲೆಕೊಡುವವರೂ ಇಲ್ಲ ಎಂಬುದು ತಿಳಿದು ಮೂಕನಾದ.

           ಹೀಗೆ ಮನೆಯಿಂದ ಹೊರಗೆ ಹಾಕಲ್ಪಟ್ಟ ನವೀನ್ ಗೆ ಆಸರೆ ನೀಡಿದ್ದು ಅಡುಗೆ ವೆಂಕಣ್ಣ. ಅವನೊಂದಿಗೆ ಅಡುಗೆ ಸಹಾಯಕನಾಗಿ ಕರೆದೊಯ್ದು ಕೆಲಸ ಕಲಿಸಿದ. ಕೆಲವು ವರ್ಷಗಳ ನಂತರ ಮಂಗಳೂರಿನ ಮೆಡಿಕಲ್ ಕಾಲೇಜೊಂದರ ಲೇಡೀಸ್ ಹಾಸ್ಟೆಲ್ ನಲ್ಲಿ ಅಡುಗೆಕೆಲಸ ನವೀನ್ ಗೆ ದೊರೆತಿತು..  ಆದಾಯವೂ ಚೆನ್ನಾಗಿತ್ತು. ದೇಹಕ್ಕೂ ಸಾಕಷ್ಟು ವಿಶ್ರಾಂತಿ ದೊರಕುತ್ತಿತ್ತು. ಅವನ ಜೀವನ ಒಂದು ಹಂತಕ್ಕೆ ಬಂದು ನಿಂತಿತ್ತು. ಹೀಗಿರುವಾಗ ವಿದ್ಯಾರ್ಥಿನಿಯರಿಗೆ ರಜೆಯಿದ್ದಾಗ ಅಡುಗೆ ಕೆಲಸವಿಲ್ಲದಿದ್ದರೆ ವೆಂಕಣ್ಣನೊಂದಿಗೆ ಅಡುಗೆಗೆ ಹೋಗುತ್ತಿದ್ದ. ಹೀಗೆ ರಜೆಯಿದ್ದಾಗ ಬೆಂಗಳೂರಿಗೆ ವೆಂಕಣ್ಣನೊಡನೆ ಅಡುಗೆಗೆ ಹೋದ ನವೀನನಿಗೆ ಪಾವನಾ ಪರಿಚಯವಾಗಿದ್ದಳು.

       ಅಡುಗೆ ಭಟ್ಟ ಮತ್ತು ವೈದ್ಯೆ ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ ಇದು ಕಷ್ಟಸಾಧ್ಯ ಎಂದು ಮತ್ತೆ ನಿರಾಸೆಯಾಗುವ ಮುನ್ನ ತಾನೇ ಮನಸ್ಸನ್ನು ಹಿಡಿತದಲ್ಲಿಡಬೇಕು ಎಂದುಕೊಂಡನು.
ಪಾವನಾ ಕರೆಮಾಡಿದಾಗ ಬ್ಯುಸಿ ಇದ್ದೇನೆ ಎಂದು ತಪ್ಪಿಸಿಕೊಂಡ. ಓಜಸ್ ಅಂತೂ "ನವೀನಣ್ಣ.. ನೀನು ಹಾಗೆಲ್ಲ ಹೇಳಿದರಾಗಲ್ಲ " ಎಂದು ಹಠ ಹಿಡಿದು ಐದು ನಿಮಿಷ ಮಾತನಾಡುತ್ತಿದ್ದ.

ಮುಂದುವರಿಯುವುದು...

✍️.... ಅನಿತಾ ಜಿ.ಕೆ.ಭಟ್.
29-10-2020.




Tuesday, 27 October 2020

ಯಾವ ತರುವು ಆವ ಲತೆಗೋ..ಅಧ್ಯಾಯ ೩

 


ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                    💐💐

ಯಾವ ತರುವು ಆವ ಲತೆಗೋ: ಅಧ್ಯಾಯ ೩

        ನವೀನ್ ಎತ್ತಲೋ ನೋಡುತ್ತಾ ಮಲಗಿಕೊಂಡಿದ್ದಾನೆ. ಯಾವುದೋ ಯೋಚನೆಯಲ್ಲಿ ಮುಳುಗಿಹೋಗಿದ್ದಾನೆ. ಟಕ್ ಟಕ್ ದನಿ ಅವನ ಅರಿವಿಗೆ ಬರುತ್ತಿಲ್ಲ. ಮೆಲ್ಲಗೆ ಬಾಗಿಲು ಸರಿಸಿ ಒಳಗಡಿಯಿಟ್ಟರು ಡಾಕ್ಟರ್ ಪಾವನಾ. "ಹಲೋ ನವೀನ್.."ಎಂದಾಗ ಒಮ್ಮಿಂದೊಮ್ಮೆಲೇ ಬೆಚ್ಚಿಬಿದ್ದ ನವೀನ್.
"ಮೇಡಂ.. ನೀವು.. ಇಲ್ಲಿ.."
"ಹೌದು.. ನಾನು ನಿಮ್ಮನ್ನು ಹುಡುಕಿಕೊಂಡು ಬಂದೆ"
"ನಿಮ್ಮನ್ನೇ ನೆನಪಿಸಿಕೊಳ್ಳುತ್ತಿದ್ದೆ"
"ಓಹೋ.. ಹೌದಾ.. ಒಳ್ಳೇದಾಯ್ತು. ಅದೇ ಹೊತ್ತಿಗೆ ನಾನು ಬಂದಿದ್ದು"
ನವೀನ್ ನ ಕಣ್ಣುಗಳು ತುಂಬಿ ಬಂದವು. "ಯಾರೂ ಗುರುತು ಪರಿಚಯವಿಲ್ಲದ ಇಲ್ಲಿ ನಾನು ಒಬ್ಬಂಟಿಯಾಗಿ ಬಿಟ್ಟಿದ್ದೆ. ಅಡುಗೆ ವೆಂಕಣ್ಣ ಕರೆ ಸ್ವೀಕರಿಸಲಿಲ್ಲ. ನಿಮ್ಮ ಫೋನ್ ನಂಬರ್ ಎಲ್ಲೋ ಕಳೆದುಕೊಂಡುಬಿಟ್ಟೆ "

"ಇರಲಿ ಬಿಡಿ.. ಜ್ವರ ಹೇಗಿದೆ ಈಗ?" ಎಂದು ಕೇಳಿ ಪಾವನಾ ಪರೀಕ್ಷಿಸಿದರು. "ಜ್ವರ ಕಡಿಮೆಯಾಗಿದೆ. ಕಫ, ಉಸಿರಾಟದ ತೊಂದರೆಗಳೂ ನಿಯಂತ್ರಣಕ್ಕೆ ಬಂದಿವೆ. ನವೀನ್ ನೀವು ಅಡ್ಮಿಟ್ ಆಗಿದ್ದೇ ಚಿಕಿತ್ಸೆ ಪಡೆಯಬೇಕೆಂದಿಲ್ಲ. ಔಷಧದಲ್ಲೇ ಗುಣವಾದೀತು. ಇಲ್ಲಿದ್ದರೆ ನಾಲ್ಕಾರು ಬ್ಲಡ್ ಟೆಸ್ಟ್, ಚೆಕಪ್, ಟ್ರೀಟ್ಮೆಂಟ್ ಎಂದು ಹೇಳಿ ಮೂರು ದಿನದಲ್ಲಿ ಮೂವತ್ತು ಸಾವಿರ ಬಿಲ್ ಕೈಗಿಡುತ್ತಾರೆ ನವೀನ್" ಎಂದು ಪಾವನಾ ಅಂದಾಗ ನವೀನ್ ಮೌನಿಯಾದ.

"ಏನು ಮಾಡಲಿ ಮೇಡಂ. ಮನೆಗೆ ತೆರಳುವಷ್ಟು ಆರೋಗ್ಯ ಸುಧಾರಿಸಿಲ್ಲ. ಗುರುತು ಪರಿಚಯವಿಲ್ಲದ ಊರು" ಎಂದು ಹೇಳಲು ನಾಲಿಗೆ ತವಕಿಸುತ್ತಿದ್ದರೂ ಸುಮ್ಮನಿದ್ದ. ಅವನ ಮುಖದ ಭಾವವನ್ನು ಓದಿದ ಪಾವನಾ
"ನವೀನ್.. ನೀವೇನೂ ಯೋಚಿಸಬೇಡಿ. ನಮ್ಮ ಮನೆಯಲ್ಲಿ ಉಳಿದುಕೊಳ್ಳಬಹುದು ನಿಮಗೇನೂ ಅಭ್ಯಂತರವಿಲ್ಲದಿದ್ದರೆ"

" ನಿಮಗೆ ಸುಮ್ಮನೆ ತೊಂದರೆಯೇಕೆ ಮೇಡಂ"
"ಹಾಗೇನಿಲ್ಲ.. ನವೀನ್.. ನೀವು ಇಲ್ಲಿದ್ದರೆ ಅನಗತ್ಯವಾಗಿ ಹಣ ಪೀಕಿಸುತ್ತಾರೆ. ಜೊತೆಯಲ್ಲಿ ಯಾರೂ ಇಲ್ಲ ಎಂಬುದೂ ತಿಳಿದಿದೆ. ನಿಮ್ಮ ದುಡಿಮೆಯ ಒಂದು ತಿಂಗಳ ಬೆವರಿನ ಆದಾಯವನ್ನು  ಅನಾವಶ್ಯಕವಾಗಿ ಮೂರು ದಿನದಲ್ಲಿ ಕಳೆದುಕೊಳ್ಳಬೇಕಾದೀತು. ಯೋಚನೆ ಮಾಡಿ.."
ಎಂದ ಪಾವನಾಳ ಮಾತಿಗೆ ಒಪ್ಪಿ " ಡಿಸ್ಚಾರ್ಜ್ ಮಾಡುತ್ತಾರಾ ನಮಗೆ ಬೇಕೆಂದಾಗ" ಎಂದು ಮುಗ್ಧವಾಗಿ ಕೇಳಿದ.

."ನಾನು ಮಾತಾಡಿ ನೋಡುತ್ತೇನೆ"ಎಂದ ಪಾವನಾ ಡಾಕ್ಟರ್ ನ ಛೇಂಬರ್ ನತ್ತ ನಡೆದಳು. ಅಲ್ಲಿ ನಿಂತಿದ್ದ ನರ್ಸ್ ಪಾವನಾರನ್ನು ವಿಚಾರಿಸಿಕೊಂಡು ".ಈಗ ಆಗಲ್ಲ ಮೇಡಂ.. ಡಾಕ್ಟರ್ ಇಲ್ಲಿ ಕಾಯ್ತಾ ಇರುವ ಪೇಷೆಂಟ್ ನೋಡಿ ಸೀದಾ ಊಟಕ್ಕೆ ಹೋಗ್ತಾರೆ. ನೀವು ನಾಲ್ಕು ಗಂಟೆಗೆ ಬನ್ನಿ" ಎಂದಳು.
"ಮೇಡಂ.. ಐದೇ ನಿಮಿಷದಲ್ಲಿ ಹೊರಗೆ ಬರ್ತೀನಿ. ಪ್ಲೀಸ್" ಅಂದರು ಪಾವನಾ. ನರ್ಸ್ ಖಡಾಖಂಡಿತವಾಗಿ ಈಗ ಸಾಧ್ಯವಿಲ್ಲ ಎಂದರು..
   ಪಾವನಾ ತಾನು ವೈದ್ಯೆ ಎಂದು ಹೇಳಿ ತಾನು ಚಿಕಿತ್ಸೆ ಕೊಡುತ್ತಿದ್ದ ವ್ಯಕ್ತಿ ಇಲ್ಲಿ ದಾಖಲಾಗಿದ್ದಾರೆ. ಆ ಬಗ್ಗೆ ಸ್ವಲ್ಪ ಮಾತನಾಡುವುದಿತ್ತು ಎಂದಾಗ ನರ್ಸ್ "ಸಾರಿ ಮೇಡಂ.. ನೀವು ಡಾಕ್ಟರ್ ಎಂದು ನನಗೆ ಗೊತ್ತಿರಲಿಲ್ಲ. ಡಾಕ್ಟರ್ ನ ಕೇಳಿ ಬರ್ತೇನೆ" ಎಂದು ಛೇಂಬರ್ ನ ಒಳಗೆ ಹೋಗಿ ಸಂಗತಿ ತಿಳಿಸಿದಳು. ಡಾಕ್ಟರ್ ಮೇಡಂ ಅನ್ನು ಒಳಗೆ ಬರಹೇಳಲು ನರ್ಸ್ ಗೆ ಆದೇಶಿಸಿದರು.

ಒಳಗೆ ಬಂದ ಪಾವನಾ.".ಹಲೋ..ಸರ್..ಐ ಯಾಮ್ ಡಾ.ಪಾವನಾ"ಎಂದರು.
"ಓಹ್ ನೈಸ್ ಟು ಮೀಟ್ ಯು. ಮೇಡಂ" ಎಂದು ಕೈಕುಲುಕಿದರು. ಪಾವನಾ ತಾನು ನವೀನ್ ಗೆ ಚಿಕಿತ್ಸೆ ಕೊಡುತ್ತಿದ್ದು ಗುಣಮುಖನಾಗುತ್ತಿದ್ದ, ಅನಿವಾರ್ಯವಾಗಿ ಇಲ್ಲಿಗೆ ದಾಖಲಾದ ಸಂಗತಿಯನ್ನು ಅರುಹಿದರು. ಡಾಕ್ಟರ್ ಪ್ರತಾಪ್ "ನೋ ಮೇಡಂ.. ಅನಗತ್ಯವಾಗಿ ನಾವು ಯಾರನ್ನೂ ಅಡ್ಮಿಟ್ ಮಾಡ್ಕೊಳ್ಳಲ್ಲ. ಬೆಳಿಗ್ಗೆ ಬಹಳ ವೀಕ್ ನೆಸ್ ಮತ್ತು ಫೀವರ್ ಇತ್ತು. ಟ್ರೀಟ್ ಮೆಂಟ್ ಕೊಟ್ಟು ಈಗ ಕಡಿಮೆಯಾಗುತ್ತಿದೆ. ಈಗಲೇ ಡಿಸ್ಚಾರ್ಜ್ ಮಾಡೋದಕ್ಕೆ ಆಗಲ್ಲ ಮೇಡಂ"
"ಹಾಗಲ್ಲ ಸರ್.. ಅವರು ಚೇತರಿಸ್ತಾ ಇದ್ರು. ಔಟ್ ಪೇಷೆಂಟ್ ಆಗಿದ್ದು ಔಷಧ, ಆಹಾರ, ವಿಶ್ರಾಂತಿಯಿಂದ ಗುಣವಾಗಬಹುದು ಎಂದು ನನ್ನ ಅಭಿಪ್ರಾಯ. ಹಾಗಾಗಿ ಡಿಸ್ಚಾರ್ಜ್ ಮಾಡಿಸ್ಕೊಂಡು ಕರ್ಕೊಂಡು ಹೋಗ್ತೀನಿ"

      "ಕರ್ಕೊಂಡು ಹೋಗ್ತೀನಿ ಅನ್ನೋದಕ್ಕೆ ನೀವ್ಯಾರು ಮೇಡಂ? ನಿಮ್ಮ ಹತ್ರ ಚಿಕಿತ್ಸೆಗೆ ಬಂದಾಗ ನೀವು ಟ್ರೀಟ್ ಮೆಂಟ್ ಕೊಡೋದು. ನಮ್ಮ ಹತ್ರ ಬಂದಾಗ ನಾವು ಟ್ರೀಟ್ ಮೆಂಟ್ ಕೊಡೋದು. ಅಷ್ಟು ಗೊತ್ತಿದ್ದೂ ಯಾಕ್ರೀ ಮಧ್ಯೆ ನೀವು ಬರೋದು. ನಿಮ್ಮಿಂದ ಗುಣಮಾಡಿಸಲು ಸಾಧ್ಯವಾದ್ರೆ ಇಲ್ಲಿಗ್ಯಾಕೆ ಬರ್ತಿದ್ದ" ಎನ್ನುತ್ತಾ ದನಿ ಏರಿಸಿದರು.
ಪಾವನಾ ಸಮಾಧಾನದಿಂದ "ನೀವೀಗ ಡಿಸ್ಚಾರ್ಜ್ ಮಾಡಲು ಅನುಮತಿ ಕೊಡಿ. ಆ ಪೇಷೆಂಟ್ ಗೆ ನಾನೇ ಚಿಕಿತ್ಸೆ ಕೊಡ್ತೀನಿ"
"ಅದೆಲ್ಲ ಮಾತಾಡೋಕೆ ನೀವ್ಯಾರು? ಅವನ ಅಕ್ಕನಾ ತಂಗೀನಾ?"
"ಸಹೋದರಿ ಅಂತಾನೇ ಅಂದುಕೊಳ್ಳಿ, ಅಡ್ಡಿಯಿಲ್ಲ"
"ಅವನು ಆಗ್ಲೇ ಹೇಳಿದಾನೆ. ನನಗೆ ಇಲ್ಲಿ ಯಾರೂ ಪರಿಚಯದವರು ಇಲ್ಲ ಅಂತ. ಮತ್ತೆ ನೀವೇನು ಈಗ ಬಂದು ಹೀಗೆಲ್ಲ ಉದ್ದುದ್ದ ಭಾಷಣ ಬಿಗಿಯೋದು?"
"ನಮ್ಮದೂ ಅವಂದೂ ಒಂದೇ ಊರು. ಸೋ.. ನನ್ನ ಸೋದರನನ್ನ ನಾನು ಮನೆಗೆ ಕರ್ಕೊಂಡು ಹೋಗ್ತೀನಿ. ಜ್ವರ ಕಡಿಮೆ ಆಗ್ತಿಲ್ಲಾಂದ್ರೆ ನಮ್ಮದೇ ಆಸ್ಪತ್ರೆ ಇದೆ. ಅಲ್ಲೇ ಚಿಕಿತ್ಸೆ ಕೊಡಿಸ್ತೀನಿ"

  ವೈದ್ಯ ಪ್ರತಾಪ್ ಗೆ ಸ್ವಲ್ಪ ಅಳುಕು ಕಾಡಿತು.. ತಾನು ಅನಗತ್ಯ ಟೆಸ್ಟ್ ಬರೆದುಕೊಟ್ಟಿದ್ದು, ಲೋ ಡೋಸ್ ಮದ್ದು ಕೊಟ್ಟು ಕೆಲವು ದಿನ ಇಟ್ಕೊಳ್ಳೋಣ. ಹೇಗೂ ಯಾರೂ ಫ್ಯಾಮಿಲಿ ಯವರು ಬಂದಿಲ್ಲ ಎಂದುಕೊಂಡದ್ದು ಇವರಿಗೆ ಗೊತ್ತಾದ್ರೂ ಕಷ್ಟ. ಮತ್ತೆ ಇಮೇಜ್ ಹಾಳಾಗುತ್ತದೆ. ಈಗ ವಿರೋಧಿಸಿ ತನ್ನ ಮುಖವಾಡ ಬಯಲಾಗುವುದಕ್ಕಿಂತ ಸುಮ್ಮನೆ ಡಿಸ್ಚಾರ್ಜ್ ಮಾಡುವುದೇ ಲೇಸು.
"ಮೇಡಂ ಬರೀ ನಿಮ್ಮ ಮಾತು ಕೇಳಿ ಬಿಡೋದು ಸರಿಯಲ್ಲ. ಪೇಷೆಂಟ್ ಬಯಸಿದರೆ ಮಾತ್ರ ಬಿಡುಗಡೆ ಮಾಡುತ್ತೇವೆ"
"ಸರಿ.. ಅವರ ಡ್ರಿಪ್ ಮುಗೀತು. ಅವರನ್ನೇ ಕರೆಯುತ್ತೇನೆ" ಎಂದು ಹೊರಟ ಪಾವನಾರನ್ನು ನಿಲ್ಲಿಸಿದ ವೈದ್ಯರು ನಿಮ್ಮ ನರ್ಸಿಂಗ್ ಹೋಂ ಹೆಸರೇನು ಡಾಕ್ಟರ್ ಎಂದು ಕೇಳಿದರು.

"ಭಟ್ಸ್ ನರ್ಸಿಂಗ್ ಹೋಂ, ರಾಜಾಜಿನಗರ" ಎಂದಾಗ ಡಾಕ್ಟರ್ ಪ್ರತಾಪ್ ಒಮ್ಮೆ ಸ್ತಬ್ಧರಾದರು.
ಸಾವರಿಸಿಕೊಂಡು "ಹಾಗಾದರೆ ನೀವು ಡಾಕ್ಟರ್ ಕೃಷ್ಣ ಪ್ರಸಾದ್ ಅವರ"
"ಅವರ ಮಗಳು ನಾನು" ಎಂದಾಗ ಮೊದಲು
"ಸಾರಿ ಮೇಡಂ.. ನೀವೆಂದು ತಿಳೀಲಿಲ್ಲ. ಪ್ರಸಾದ್ ನಮ್ಮ ಸೀನಿಯರ್ ಡಾಕ್ಟರ್. ಡಾಕ್ಟರ್ಸ್ ಯೂನೀಯನ್ ನ ಅಧ್ಯಕ್ಷರು. ಕ್ಷಮಿಸಿ ಮೇಡಂ. ನವೀನ್ ನ ಈಗಲೇ ಡಿಸ್ಚಾರ್ಜ್ ಮಾಡ್ತೀವಿ" ನರ್ಸ್ ನತ್ತ ತಿರುಗಿ "ಅಕ್ಕಾ.. ಮೇಡಂಗೆ ಕೋಲ್ಡ್ ಜ್ಯೂಸ್ ತಗೊಂಡು ಬಾ" ಎಂದು ಹೇಳಿ " ಜ್ಯೂಸ್ ಕುಡಿದು ನೀವು ಹೊರಗೆ ಕೂತಿರಿ ಮೇಡಂ" ಎಂದರು ಡಾಕ್ಟರ್ ಪ್ರತಾಪ್.
"ನನಗೆ ಜ್ಯೂಸ್ ಏನೂ ಬೇಡ. ಊಟದ ಹೊತ್ತಿಗೆ ನಾನು ಅದೆಲ್ಲ ಕುಡಿಯುವುದಿಲ್ಲ" ಎಂದು ಹೇಳಿ ಡಾಕ್ಟರ್ ಗೆ ನಮಸ್ಕರಿಸಿ ಧನ್ಯವಾದ ಹೊರಗೆ ಹೊರಟರು ಪಾವನಾ.

     ಡಾಕ್ಟರ್ ಪ್ರತಾಪ್ ಸುರಿಯುತ್ತಿರುವ ಬೆವರನ್ನು ಒರೆಸಿಕೊಂಡರು. ಏನು ಅನಾಹುತ ಎಳೆದು ಹಾಕಿಕೊಳ್ಳುತ್ತಿದ್ದೆ. ಸದ್ಯ ಪ್ರಸಾದ್ ಅವರ ಮಗಳು ಎಂದು ಗೊತ್ತಾಗಿದ್ದಕ್ಕೆ ಆಯ್ತು. ಇಲ್ಲಾಂದ್ರೆ ರಾಂಗ್ ಟ್ರೀಟ್ ಮೆಂಟ್ ಅಂತ ಕೇಸು ಯೂನಿಯನ್ ನಲ್ಲಿ ದೂರುದಾಖಲಿಸಿದರೆ ಸಂಕಷ್ಟ ಅನುಭವಿಸಬೇಕಾಗಿತ್ತು. ಅರ್ಧವೇ ಗಂಟೆಯಲ್ಲಿ ನವೀನ್ ನನ್ನು ಬಿಡುಗಡೆಗೊಳಿಸಿದರು. ಬೆಳಗ್ಗೆಯೇ ಐದುಸಾವಿರ ಬಿಲ್ ಪಾವತಿಸಲು ಹೇಳಿದ್ದವರು ಈಗ ಒಂದೇ ಸಾವಿರ ಪಡೆದು ನಗುನಗುತ್ತಾ ಡಿಸ್ಚಾರ್ಜ್ ಮಾಡಿದ್ದು ನವೀನ್ ಗೆ ಆಶ್ಚರ್ಯವಾದರೂ ಕಾರಣ ತಿಳಿದಿರಲಿಲ್ಲ. ಪಾವನಾ ನವೀನ್ ನನ್ನು ಮನೆಗೆ ಕರೆದೊಯ್ದಳು. ನವೀನ್ ಬಹಳವೇ ಸಂಕೋಚಗೊಂಡಿದ್ದ. ಪ್ರಭಾಕರ ರಾಯರ ಮನೆಯಿಂದ ಎರಡು ಅಂತಸ್ತು ಕೆಳಗಿನ ಮನೆ. ಮನೆಗೆ ತಲುಪಿದ ಕೂಡಲೇ ರಜೆಯೆಂದು ಮನೆಯಲ್ಲಿದ್ದ ಪಾವನಾರ ಇಬ್ಬರು ಮಕ್ಕಳೂ ಹತ್ತಿರವೇ ಸುಳಿದರು. ಕೊಂಚ ಸಂಕೋಚ ಸಡಿಲವಾಯಿತು ನವೀನ್ ಗೆ.

      ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡಿದರು. ಸಂಜೆ ನಾಲ್ಕು ಗಂಟೆಗೆ ಪಾವನಾ ಕ್ಲಿನಿಕ್ ಗೆ ಹೊರಡುವ ಸಮಯ. ಯಾವತ್ತೂ ಪಕ್ಕದ್ಮನೆ ಶಾಂತಮ್ಮ ಮಕ್ಕಳಿಗೆ ಜತೆಯಾಗುತ್ತಿದ್ದರು. ಇಂದು ನವೀನ್ ಇದ್ದುದರಿಂದ ಯಶಸ್ವಿಯನ್ನು ಶಾಂತಮ್ಮನ ಮನೆಯಲ್ಲಿ ಬಿಟ್ಟಳು ಪಾವನಾ. ಮನೆಯಲ್ಲಿ ನವೀನ್ ಗೆ ಓಜಸ್ ಜತೆಯಾದ. ಅಮ್ಮ ತೆರಳಿದ ಕೂಡಲೇ ನವೀನ್ ನ ಬಳಿತೆರಳಿದ ಓಜಸ್ "ನವೀನಣ್ಣಾ.." ಎಂದು ಅವನಿಗಂಟತೊಡಗಿದ. ತನ್ನ ಬಣ್ಣದ ಪೆನ್ಸಿಲುಗಳನ್ನು ಅವನು ಮಲಗಿಕೊಂಡಿದ್ದ ಚಾಪೆಯ ಬದಿಯಲ್ಲಿ ಗುಡ್ಡೆ ಹಾಕಿ ಚಿತ್ರ ಬಿಡಿಸಿ "ನವೀನಣ್ಣಾ ಚೆನ್ನಾಗಿದೆಯಾ?" ಎಂದು ಕೇಳತೊಡಗಿದ. ನವೀನ್ ಗೂ ಚಿತ್ರ ಬರೆಯಲು ಹೇಳಿಕೊಟ್ಟ. ಇಬ್ಬರೂ ಬಹಳ ಬೇಗ ಗೆಳೆಯರಾದರು. ರಾತ್ರಿ ಪಾವನಾ ಮನೆಗೆ ಬರುವಾಗ ಓಜಸ್ ನ ಮುಖದಲ್ಲಿ ಹೊಸದೊಂದು ಕಾಂತಿಯಿತ್ತು. ಮಾತಿನಲ್ಲಿ ಲವಲವಿಕೆಯಿತ್ತು. ನವೀನ್ ನ ಚಾಪೆಯ ಪಕ್ಕದಲ್ಲಿ ಹರಡಿ ಚಲ್ಲಾಪಿಲ್ಲಿಯಾದ ಬಣ್ಣದ ಪೆನ್ಸಿಲುಗಳು ಇಬ್ಬರ ಗೆಳೆತನಕ್ಕೆ ಸಾಕ್ಷಿಹೇಳಿದವು. ಪಕ್ಕದ ಮನೆಯಿಂದ ಯಶಸ್ವಿಯನ್ನು ಕರೆದುಕೊಂಡು ಬಂದ ಪಾವನಾ ನವೀನ್ ನ ಆರೋಗ್ಯ ವಿಚಾರಿಸಿಕೊಂಡಳು. "ನಾನು ಗುಣಮುಖನಾಗುತ್ತಿದ್ದೇನೆ. ನೀವು ಯೋಚಿಸಬೇಡಿ ಮೇಡಂ. ಏನಾದರೂ ಮನೆಗೆಲಸಕ್ಕೆ ಸಹಾಯ ಮಾಡಲೇ" ಎಂದು ಕೇಳಿದ. ವಿನಯದಿಂದಲೇ ತಿರಸ್ಕರಿಸಿದ ಪಾವನಾ "ಸಹಾಯವೂ ಬೇಡ, ಮೇಡಂ ಎನ್ನುವುದೂ ಬೇಡ. ಪಾವನ ಅನ್ನಿ ಸಾಕು" ಎಂದಾಗ ಸಂಕೋಚಗೊಳ್ಳುವ ಸರದಿ ನವೀನ್ ನದ್ದು.

       ಓಜಸ್ ಸ್ನಾನ ಊಟ ಎಲ್ಲದಕ್ಕೂ ನವೀನ್ ನನ್ನು ಬಹಳ ಹಚ್ಚಿಕೊಂಡ. ಮಲಗಲಂತೂ "ಅಮ್ಮಾ ನಾನೂ ನವೀನಣ್ಣನ ಪಕ್ಕ ಮಲಗೋದು" ಎಂದು ಹೇಳಿ ಅಲ್ಲೇ ತನ್ನ ಬೆಡ್ ಹಾಕಿಸಿಕೊಂಡ. ಮಗ ನವೀನ್ ನನ್ನು ಅಷ್ಟೊಂದು ಹಚ್ಚಿಕೊಳ್ಳುವಾಗ ಆಕೆಗೆ ಅವನ ಬೆಳವಣಿಗೆಯಲ್ಲಿ ಸಂಬಂಧದ ಖಾಲಿತನ ಅರಿವಾಗಿ ನೆನಪಿನ ಅಲೆಯಲ್ಲಿ ಕೊಚ್ಚಿಹೋದಳು.


     
                         *****
    
        'ಭಟ್ಸ್ ನರ್ಸಿಂಗ್ ಹೋಂ' ನಗರದಲ್ಲಿ ಖ್ಯಾತಿವೆತ್ತ ಡಾಕ್ಟರ್ ಕೃಷ್ಟ ಪ್ರಸಾದ್ ಅವರ ಕನಸಿನ ಕೂಸು. ಪ್ರಸಾದ್ ಮಗ ನವನೀತ ಪ್ರಸಾದ್.
ಮಗಳು ಪಾವನಾ ಹುಟ್ಟಿದ ವರ್ಷವೇ ತಮ್ಮ ಕನಸು ಸಾಕಾರಗೊಂಡದ್ದು ಮಗಳು ತಂದ ಸೌಭಾಗ್ಯ ಎಂದೇ ನಂಬಿದವರು ಪ್ರಸಾದ್. ಮುದ್ದಿನ ಕುವರಿ ಪಾವನ ಎಂದರೆ ಆಸ್ಪತ್ರೆಯ ಸಿಬ್ಬಂದಿಗಳಿಗೆಲ್ಲ ಅಚ್ಚುಮೆಚ್ಚು, ಮನೆಮಗಳಂತೆ. ತಾಯಿ ಸಾವಿತ್ರಿ, ಮಕ್ಕಳಿಬ್ಬರು ದೊಡ್ಡವರಾಗುತ್ತಿದ್ದಂತೆ ತಾನು ಕ್ಲಬ್, ಮಹಿಳಾ ಮಂಡಳಿ, ಸಮಾಜ ಸೇವೆ ಎಂದು ಸುತ್ತತೊಡಗಿದರು. ಬರಬರುತ್ತಾ ಕುಟುಂಬದಿಂದ ಹೆಚ್ಚು ಗಮನ ಸಮಾಜಸೇವೆಗೆ ಮೀಸಲಿಟ್ಟರು. ಮಕ್ಕಳಿಗೆ ತಾಯಿಯ ಪ್ರೀತಿಯ ಕೊರತೆ ಕಾಡುತ್ತಿತ್ತು. ಅಪ್ಪ ಮಾತನಾಡಲು ಸಿಗುವುದೇ ಅಪರೂಪ. ಸಿಕ್ಕಾಗಲಂತೂ ಬಹಳ ಸಹೃದಯತೆಯಿಂದ ಕಕ್ಕುಲಾತಿಯಿಂದ ಮಾತಿಗೆಳೆಯುವುದು, ನಗು, ಹರಟೆ ಎಲ್ಲವೂ ಖುಷಿ ಕೊಡುತ್ತಿತ್ತು.

ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.


28-10-2020.





Monday, 26 October 2020

ಯಾವ ತರುವು ಆವ ಲತೆಗೋ... ಅಧ್ಯಾಯ ೨

 


ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                       💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೨

         ಆಗಲೇ ಗಂಟೆ ಒಂದೂ ಮುಕ್ಕಾಲಾಗಿತ್ತು. ಕಾರ್ಯಕ್ರಮದ ಮನೆಯಲ್ಲಿ ಊಟವೂ ಆಗಿರುತ್ತದೆ. ಆದರೂ ಹೋಗದಿದ್ದರೆ ಅವರಿಗೆ ಸಮಾಧಾನವಾಗದು ಎಂದು ಒಳಹೋದಳು ಪಾವನಾ. ಒಳಗಡಿಯಿಡುತ್ತಲೇ "ಪಾವನಾ.. ಬಾರಮ್ಮ" ಎಂದು ಪ್ರೀತಿಯಿಂದ ಸ್ವಾಗತಿಸಿ, ದೇವರ ತೀರ್ಥ ಪ್ರಸಾದ ಕೊಟ್ಟರು ಪ್ರಭಾಕರ ರಾಯರು. ಉಷಾತ್ತೆ ಪಾವನಾಳಿಗೆ ಊಟ ಬಡಿಸುವ ವ್ಯವಸ್ಥೆ ಮಾಡಿದರು. ಅವರಿಗೆ ನವೀನ್ ನೂ ಜತೆಯಾದ.
"ಈಗ ಹೇಗಿದೆ ಜ್ವರ?" ಕೇಳಿದಳು ಪಾವನಾ.
"ಕಡಿಮೆಯಾಗ್ತಿದೆ" ಎಂದಷ್ಟೇ ಚುಟುಕಾಗಿ ಉತ್ತರಿಸಿದ. ಉಷಾತ್ತೆ ಇನ್ನಾರೋ ಬಂದರೆಂದು ತೆರಳಿದರು. ನವೀನ್ ಬಡಿಸಿದ. ನವೀನನನ್ನು ಮಾತಿಗೆಳೆದ ಪಾವನಾ ಅವನೂ ತನ್ನ ತಂದೆತಾಯಿಯ ಹುಟ್ಟೂರಿನವನೇ ಎಂದು ಅರಿತಳು. ತನ್ನ ವಿಸಿಟಿಂಗ್ ಕಾರ್ಡ್ ನೀಡಿ "ಎರಡು ದಿನಗಳ ಔಷಧ ಮುಗಿದ ನಂತರ ಔಷಧ ಬೇಕಾದರೆ ಕ್ಲಿನಿಕ್ ಗೆ ಬನ್ನಿ. ವನದುರ್ಗಾ ಮೈನ್ ರೋಡ್ ನಲ್ಲಿ ಎರಡನೇ ತಿರುವು. ಒಂದು ಕಿಲೋಮೀಟರ್ ಸಾಗಿ ಬಲಗಡೆ ತಿರುಗಿದರೆ ಅಲ್ಲೇ ಬಲಬದಿಯಲ್ಲಿ ನನ್ನ ಕ್ಲಿನಿಕ್" ಎಂದಳು..
ತಲೆಯಾಡಿಸಿದ ನವೀನ್..

   ಊಟ ಮುಗಿಸಿ ತನ್ನ ಮನೆಗೆ ಹೋದಳು ಪಾವನಾ. ಮಕ್ಕಳು ಬರುವುದು ಇನ್ನು ಸ್ವಲ್ಪ ಹೊತ್ತಿನಲ್ಲೇ. ಅವರಿಗೆ ಆಹಾರ ತಯಾರಿಸಿಟ್ಟಳು. ಮಕ್ಕಳು ಬಂದಾಗ ಅವರ ಸ್ನಾನ ಮಾಡಿಸಿ, ಹೊಟ್ಟೆ ತುಂಬಿಸಿ ಎಂದಿನಂತೆ ಪಕ್ಕದ್ಮನೆ ಶಾಂತಮ್ಮನ ಜೊತೆ ಮಾಡಿ ಕ್ಲಿನಿಕ್'ಗೆ ತೆರಳಿದಳು.
 
        ಮರುದಿನ ಬೆಳಿಗ್ಗೆ ಪ್ರಭಾಕರ ರಾಯರು ಕರೆ ಮಾಡಿ "ಪಾವನಾ.. ನವೀನ್ ಅತಿಯಾದ ಜ್ವರದಿಂದ ಬಳಲುತ್ತಿದ್ದಾನೆ. ಒಮ್ಮೆ ಬಾ"ಎಂದು ಕರೆದಾಗ ಮತ್ತೆ ಬರುತ್ತೇನೆ ಎಂದು ಹೇಳಲು ಮನಸ್ಸಾಗದೆ ತನ್ನ ಕೆಲಸಗಳನ್ನು ಅಲ್ಲೇ ಬಿಟ್ಟು ತೆರಳಿದಳು. ಪರೀಕ್ಷಿಸಿ ನೋಡಿ "ನಿನ್ನೆ ಕೊಟ್ಟಿದ್ದ ಮಾತ್ರೆ ಬೇಡ " ಎಂದು ಹೇಳಿ
ಜ್ವರದ ಇಂಜೆಕ್ಷನ್ ಕೊಟ್ಟಳು. "ಮಧ್ಯಾಹ್ನ ಬಂದು ನೋಡುತ್ತೇನೆ." ಎಂದು ಹೇಳಿದಾಗ "ಮೇಡಂ.. ನಾನು ಮಧ್ಯಾಹ್ನ ಇಲ್ಲಿರುವುದಿಲ್ಲ" ಎಂದ ನವೀನ.
"ಇಷ್ಟು ಜ್ವರ ಬರುವಾಗ ಎಲ್ಲಿ ಹೋಗ್ತೀಯಾ?" ಎಂದು ಆತ್ಮೀಯವಾಗಿ ವಿಚಾರಿಸಿಕೊಂಡಳು ಪಾವನಾ.
"ಇಲ್ಲಿ ಅಡುಗೆಗೆಂದು ಬಂದೆ. ಇಲ್ಲಿ ಆಯಿತು. ಇನ್ನು ಮುಂದಿನ ಪಯಣ. ಸಾಧ್ಯವಾಗದಿದ್ದಲ್ಲಿ ಊರಿಗೆ ಹೋಗುತ್ತೇನೆ" ಎಂದಾಗ ಪ್ರಭಾಕರ ಮಾವ "ಇವತ್ತು ನೀನು ಇಲ್ಲೇ ಉಳಿದುಕೊಳ್ಳಬಹುದು ನವೀನ್" ಎಂದರು. ನವೀನ್ ತಲೆಯಲ್ಲಾಡಿಸಿದ. ಪಾವನಾ ಪ್ರಭಾಕರ ಮಾವನಲ್ಲಿ ಅವನಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿ ತೆರಳಿದಳು.
ಪಾವನಾ ಮೂರು ಹೊತ್ತು ನವೀನ್ ನನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದಳು. ರಾತ್ರಿ ತುಸು ಜ್ವರ ಕಡಿಮೆಯಾಗುತ್ತಿರುವುದು ಕಂಡುಬಂತು. ಮರುದಿನ ತೆಗೆದುಕೊಳ್ಳಬೇಕಾದ ಔಷಧವನ್ನು ನೀಡಿದಳು. ನಾಳೆ ಕ್ಲಿನಿಕ್ ನಿಂದ ಬಂದು ಪರೀಕ್ಷಿಸುತ್ತೇನೆ ಎಂದಳು. ಆಕೆಗೆ ಮರುದಿನ ಬೆಳಿಗ್ಗೆ ತನ್ನ ಆರಾಧ್ಯದೈವ ಶ್ರೀ ಸೀತಾರಾಘವನ ಸನ್ನಿಧಿಗೆ ತೆರಳುವುದಿತ್ತು.

      ಮರುದಿನ ಬೆಳಿಗ್ಗೆ ಎದ್ದು ಬಂದ ಪ್ರಭಾಕರ ರಾಯರ ಮಗ "ಅಪ್ಪ ಇವತ್ತು ಭಾನುವಾರ. ಮತ್ತೆ ಸೋಮವಾರ, ಮಂಗಳವಾರ ನನಗೂ ಅನುಪಮ ಇಬ್ಬರಿಗೂ ಒಟ್ಟಿಗೆ ಅಪರೂಪಕ್ಕೆ ರಜೆ ದೊರೆತಿದೆ. ತೀರ್ಥಯಾತ್ರೆ ಮಾಡಿಕೊಂಡು ಬರೋಣ. ತುಂಬಾ ದಿನಗಳಿಂದ ಹೇಳುತ್ತಿದ್ದಿರಲ್ಲ" ಎಂದಾಗ ಪ್ರಭಾಕರ ರಾಯರು ಹಿಂದೆ ಮುಂದೆ ನೋಡದೆ ಒಪ್ಪಿದರು. ಅವರಿಗೀಗ ಪ್ರಯಾಣಕ್ಕೆ ನವೀನ್ ತೊಡಕಾಗಿದ್ದ. ಅವನನ್ನೇನು ಮಾಡೋಣ?. ಜ್ವರ ಪೂರ್ಣ ಗುಣವಾಗಿಲ್ಲ. ಎಂದು ಯೋಚಿಸುತ್ತಿದ್ದಾಗ "ಅಪ್ಪಾ.. ಹೀಗೆ ಯಾರೋ ಪರಿಚಯವಿಲ್ಲದವರನ್ನು ಆರೈಕೆ ಮಾಡುವುದು ಉಚಿತವಲ್ಲ. ನನಗೆ ಒಂದು ನರ್ಸಿಂಗ್ ಹೋಂ ಪರಿಚಯವಿದೆ. ಅಲ್ಲಿ ಸೇರಿಸೋಣ. ಟ್ರೀಟ್ ಮೆಂಟ್ ಕೊಡ್ತಾರೆ" ಎಂದ ಮಗನ ಮಾತನ್ನು ಪ್ರಭಾಕರ ರಾಯರು ಉಷಾ ಇಬ್ಬರೂ ಪುರಸ್ಕರಿಸಿದರು.

       ನವೀನ್ ನಲ್ಲಿ ವಿಷಯ ತಿಳಿಸಿದಾಗ "ಬೇಡ...ನನ್ನನ್ನು ಮೆಜೆಸ್ಟಿಕ್ ನಲ್ಲಿ ಬಿಡಿ..ಹೇಗೋ ನಮ್ಮೂರು ಸೇರಿಕೊಳ್ಳುವೆ" ಎಂದ. "ಆರೋಗ್ಯ ಸುಧಾರಿಸಿಲ್ಲ. ಇಲ್ಲೇ ಗೊತ್ತಿರುವ ನರ್ಸಿಂಗ್ ಹೋಂ ಇದೆ. ಅಲ್ಲಿ ಚೆಕಪ್ ಗೆ ಕರೆದೊಯ್ಯುತ್ತೇವೆ. ವೈದ್ಯರು ಪ್ರಯಾಣ ಮಾಡಲು ಒಪ್ಪಿದರೆ ಮೆಜೆಸ್ಟಿಕ್ ಬಸ್ ಹತ್ತು" ಎಂದು ಹೇಳಿದರು ಪ್ರಭಾಕರ ರಾಯರ ಮಗ, ಪ್ರಶಾಂತ್.
"ಸರಿ "ಎಂದು ತಲೆಯಾಡಿಸಿದ ನವೀನ್.

       ಆರು ಗಂಟೆಗೆ ಎಲ್ಲರೂ ಹೊರಟರು ನವೀನ್ ಕೂಡ. ನರ್ಸಿಂಗ್ ಹೋಂ ಪಕ್ಕದಲ್ಲಿ ನವೀನ್ ನನ್ನು ಇಳಿಸಿದ ಪ್ರಶಾಂತ್ "ನಾನು ಬರಬೇಕಾ?" ಎಂದು ಉದಾಸೀನತೆಯಿಂದ ಅನಾದರದಿಂದ ಬೇಡವಲ್ಲ ಎಂಬ ಧಾಟಿಯಲ್ಲಿ ಕೇಳಿದಾಗ ನವೀನ್ ಮನನೊಂದು ಮಾತನಾಡಲಿಲ್ಲ. ಕಾರು ರೊಂಯ್ಯನೆ ಮುಂದಕ್ಕೆ ಓಡಿತು. ಆರೋಗ್ಯವಿಲ್ಲದೆ ಯಾರೂ ಜೊತೆಯೂ ಇಲ್ಲದೆ ಏಕಾಂಗಿಯಾದ ನವೀನ್. ನಿತ್ರಾಣವಿದ್ದ ನವೀನ್  ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತ. ನರ್ಸ್ ವಿಚಾರಿಸಿ ಡ್ಯೂಟಿ ಡಾಕ್ಟರ್ ಬಳಿ ಕರೆದೊಯ್ದಳು. ಪರೀಕ್ಷಿಸಿದ ವೈದ್ಯರು "ಜ್ವರ, ಉಸಿರಾಟದ ಸಮಸ್ಯೆ ಅಧಿಕವಾಗಿರುವುದರಿಂದ ಡ್ರಿಪ್ ಹಾಕಬೇಕಾಗಿದೆ" ಎಂದು ಅಡ್ಮಿಟ್ ಮಾಡಿಕೊಂಡರು. ಮುಗ್ಧ ನವೀನ್ ಗೆ ಅಳು ಉಕ್ಕಿ ಬಂದಿತ್ತು. ಗುರುತು ಪರಿಚಯವಿಲ್ಲದ ಊರು, ಜನ. ಯಾರೂ ತನ್ನವರಿಲ್ಲ. ಅಡುಗೆಯಲ್ಲಿ ಸಿಕ್ಕಿದ ದುಡ್ಡು ಇಲ್ಲಿಗೆ ಸರಿಯಾಯಿತು ಎಂದು ನೊಂದುಕೊಂಡನು. ವೈದ್ಯರು ಬಂದು ಡ್ರಿಪ್ ಹಾಕಿ ಹೋದರು.

    ಒಂಟಿಯಾದ ನವೀನ್ ಅಡುಗೆ ವೆಂಕಣ್ಣನಿಗೆ ಕರೆ ಮಾಡಿದ. ಅವರು ಫೋನೆತ್ತುತ್ತಲೇ ಇಲ್ಲ. ಪಾವನಾರ ನೆನಪಾಯಿತು. ಅವರು ಕೊಟ್ಟಿದ್ದ ವಿಳಾಸ ಹುಡುಕಲು ಮಲಗಿದಲ್ಲಿಂದ ಏಳಲಾಗದೆ ಚಡಪಡಿಸಿದ. ಆಯಾ ಬಂದಾಗ ತನ್ನ ಬ್ಯಾಗ್ ನಲ್ಲಿದ್ದ ವಿಳಾಸದ ಚೀಟಿ ಹುಡುಕಿ ಕೊಡಲು ಹೇಳಿದರೂ ಆಕೆಗೆ ಸಿಕ್ಕಲೇಯಿಲ್ಲ. ವಿಧಿಯಿಲ್ಲದೆ ತನ್ನ ಆರಾಧ್ಯದೈವ ರಾಮನ ಧ್ಯಾನದಲ್ಲಿ ಮುಳುಗಿದ. ಅವನಿಗೆ ಮೊರೆಯಿಟ್ಟ.
  
       ಮುಂಜಾನೆ ಬೇಗ ಶ್ರೀ ಸೀತಾರಾಘವನ ಸನ್ನಿಧಾನಕ್ಕೆ ತೆರಳಿ ತಲೆಬಾಗಿ ಅವನ ಪಾದಗಳಿಗೆ ನಮಸ್ಕರಿಸಿ ಬಂದರು ಪಾವನಾ ಮತ್ತು ಮಕ್ಕಳು. ನಂತರ ಮನೆಗೆ ಬಂದು ಕ್ಲಿನಿಕ್ ಗೆ ಹೊರಟ ಪಾವನಾ ನವೀನ್ ನನ್ನು ರಾತ್ರಿ ಪರೀಕ್ಷಿಸಲು ಬರುತ್ತೇನೆ ಎಂದು ಹೇಳಿದ್ದರೂ ಮನಸ್ಸು ತಡೆಯದೆ ಕ್ಲಿನಿಕ್'ಗೆ ಹೋಗುವ ಮುನ್ನವೇ ಪ್ರಭಾಕರ ರಾಯರ ಮನೆಗೆ ಬಂದಳು. ಮನೆಗೆ ಬೀಗ ಜಡಿದು ಮನೆಯವರೆಲ್ಲರೂ ಎಲ್ಲಿಗೋ ತೆರಳಿದ್ದು ಅರಿವಾದಾಗ ಪಾವನಾ ಚಡಪಡಿಸಿದಳು. ನವೀನ್ ಗೆ ಆರೋಗ್ಯ ಸರಿಹೋಗಿರಬಹುದಾ? ಎಲ್ಲರೂ ಎಲ್ಲಿ ಹೋಗಿರಬಹುದು? ನಿನ್ನೆ ರಾತ್ರಿ ಬಂದಿದ್ದ ನನಗೆ ಒಂದು ಮಾತೂ ಕೂಡಾ ಹೇಳದೆ..! ಎಂದು ಯೋಚಿಸುತ್ತಾ ಕಾರ್ ಸ್ಟಾರ್ಟ್ ಮಾಡಿದಳು.

      ಕ್ಲಿನಿಕ್ ಮುಂದೆ ರೋಗಿಗಳು ಸಾಲುಗಟ್ಟಿ ಕುಳಿತಿದ್ದರು. ಅವರನ್ನು  ಒಬ್ಬೊಬ್ಬರನ್ನಾಗಿ ಬರಹೇಳಿದಳು. ರೋಗಿಗಳನ್ನು ಪರೀಕ್ಷಿಸುತ್ತಿದ್ದರೂ ಪಾವನಾಳ ಮನವು ನವೀನ್ ಕುರಿತು ಚಿಂತಿಸುತ್ತಿತ್ತು. ಒಂದು ಮಾತು ನನಗೆ ಹೇಳಿಲ್ಲವಲ್ಲ..! ಎಷ್ಟು ಕಾಳಜಿಯಿಂದ ಚಿಕಿತ್ಸೆ ಕೊಟ್ಟಿದ್ದೆ. ಛೇ...!! ಈ ಉದ್ಯೋಗವೇ ಹೀಗೆ. ಜನ ಸೇವೆಯಂತೆ.. ಜನಸೇವೆ..! ನಮ್ಮಿಂದ ಸೇವೆ ಮಾಡಿಸಿಕೊಂಡವರಿಗೆ ನಮ್ಮ ನೆನಪೇ ಇಲ್ಲ.
ನಮಗೂ ಚಿಕಿತ್ಸೆ ಪಡಕೊಂಡವರು ಗುಣವಾದರಾ? ಹೇಗಿದ್ದಾರೆ? ಇನ್ನೇನಾದರೂ ಚಿಕಿತ್ಸೆಯಲ್ಲಿ ಬದಲಾವಣೆ ಮಾಡಬೇಕಾ ಎಂಬೆಲ್ಲ ಯೋಚನೆಗಳು ಕಾಡುತ್ತಿರುತ್ತವೆ. ನಮ್ಮ ಸಂಬಂಧಿಗಳಲ್ಲದಿದ್ದರೂ ನಮ್ಮ ಬಳಿ ಬರುವ ರೋಗಿ ಎಂಬ ಆತ್ಮೀಯತೆ ಬೆಳೆಯುತ್ತದೆ. ಇದನ್ನಾದರೂ ಏಕೆ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಆರೋಗ್ಯ ಏರುಪೇರಾದರೆ ತಡರಾತ್ರಿ, ನಸುಕಾದರೂ ಸರಿ ಕರೆ ಮಾಡಿ ಬರಹೇಳುವವರಿಗೆ ಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗುವಾಗ ಹೇಳಿಹೋಗುವ ಸೌಜನ್ಯವಾದರೂ ಇದ್ದರೆ ಚೆನ್ನ..!!

       ಎಂದೆಲ್ಲ ಯೋಚಿಸುತ್ತಾ ತಲೆಚಿಟ್ಟುಹಿಡಿಸಿಕೊಂಡಳು. ಪ್ರಭಾಕರ ರಾಯರ ಮಡದಿ ಉಷಾಗೆ ಕರೆಮಾಡಿದಳು ಪಾವನಾ. ಅವರು ಫೋನ್ ಎತ್ತುತ್ತಿರಲಿಲ್ಲ. ಪ್ರಭಾಕರ ರಾಯರಿಗೇ ಕರೆ ಮಾಡಿದಳು. ಅವರಲ್ಲಿ ' ಏಕೆ ಹೀಗೆ ಮಾಡಿದಿರಿ?' ಎಂದು ಕೇಳಬೇಕು ಎಂದುಕೊಂಡಳು. ಅವರೂ ಫೋನ್ ಸ್ವೀಕರಿಸುತ್ತಿಲ್ಲ. ಕ್ಷಣಕ್ಷಣಕ್ಕೂ ಮನಸು ಸ್ತಿಮಿತ ಕಳೆದುಕೊಳ್ಳುವಂತಾಯಿತು.

   ಒಮ್ಮೆ  ವಾಶ್ ರೂಂ ಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿ ಬಂದಳು. ಸ್ವಲ್ಪ ಹಿತಕರವೆನಿಸಿತು. ಯಾರದೋ ಅನಾದರಕ್ಕೆ ನಾನೇಕೆ ಚಿಂತಿಸಬೇಕು ಎಂದು ತನ್ನ ಜವಾಬ್ದಾರಿಯತ್ತ ಗಮನಹರಿಸಿದಳು. ರೋಗಿಗಳ ಸರತಿ ಸಾಲು ಕರಗುತ್ತಾ ಬಂದಿತು. ಅಷ್ಟರಲ್ಲಿ ಒಂದು ಫೋನ್ ಕರೆ ಬಂದಿತು. ಗೊತ್ತಿಲ್ಲದ ನಂಬರ್ ಎಂದು ಸ್ವಲ್ಪ ನಿಧಾನಿಸಿದಳು. ಮತ್ತೆ ಮತ್ತೆ ರಿಂಗಾಗುತ್ತಿತ್ತು. ರೋಗಿಗಳನ್ನೆಲ್ಲ ಪರೀಕ್ಷಿಸಿ ಕಳುಹಿಸಿದ ನಂತರ ಕರೆ ಸ್ವೀಕರಿಸಿದರು. ಆ ಕಡೆಯಿಂದ ಪ್ರಭಾಕರ ರಾಯರು ಮಾತನಾಡುತ್ತಿದ್ದರು ''ಹಲೋ.ಪಾವನಾ..ನಾನಮ್ಮ ಪ್ರಭಾಕರ ಮಾವ, ನೀನು ಕರೆ ಮಾಡಿದರೂ ನನಗೆ ರಿಸೀವ್ ಮಾಡೋಕೆ ಆಗಲಿಲ್ಲ. ಫೋನ್ ಚಾರ್ಜ್ ಮುಗಿದಿತ್ತು. ಈಗ ಚಾರ್ಜ್ ಮಾಡಿದಾಗ ಗೊತ್ತಾಯಿತು. ಈಗ ಸಿಗ್ನಲ್ ಕೂಡ ಸಿಗ್ತಿಲ್ಲ. ಅದಕ್ಕೆ ಮಗನ ಫೋನ್ ನಿಂದ ಕರೆಮಾಡಿದ್ದೇನೆ."

ಚುಟುಕಾಗಿ "ಹೂಂ.."ಎಂದ ಪಾವನಾ.

"ಗಡಿಬಿಡಿಯಲ್ಲಿ ನಿಂಗೆ ಹೇಳೋದು ಮರೆತಿದ್ದೆ. ನಾನಿವತ್ತು ಬೆಳಿಗ್ಗೆ ಕುಟುಂಬ ಸಮೇತ ತೀರ್ಥಯಾತ್ರೆ ಹೊರಟಿದ್ದೇವೆ. ನವೀನ್ ನನ್ನು ಅಲ್ಲಿಯೇ ಸಮೀಪದಲ್ಲಿರುವ ನರ್ಸಿಂಗ್ ಹೋಂನಲ್ಲಿ  ಚಿಕಿತ್ಸೆ ಪಡೆದುಕೊಳ್ಳಲು ಹೇಳಿದ್ದೇವೆ. ನಂತರ ನಾವು ಅವನ ಕಾಂಟಾಕ್ಟ್ ಮಾಡಿಲ್ಲ" ಎಂದಾಗ ಪಾವನಾ ನೊಂದುಕೊಂಡು ಫೋನಿಟ್ಟಳು.

      ದುಡಿಯಲು ಬಡವರು ಬೇಕು. ಅಕಸ್ಮಾತ್ ಎಲ್ಲಾದರೂ ಆರೋಗ್ಯ ಏರುಪೇರಾದರೆ ಅಂತಹವರು ಯಾರಿಗೂ ಬೇಡ. ಎಂತಹ ಶೋಚನೀಯ ಸ್ಥಿತಿ ಶ್ರಮಿಕರಿಗೆ. ಶ್ರಮಿಕ ಕಾರ್ಮಿಕರಿಲ್ಲದೆ ಯಾವ ಕಾರ್ಯವೂ ನಡೆಯದು. ಆದರೂ ತಾತ್ಸಾರ, ಅಸಡ್ಡೆ.. ಎಂದುಕೊಳ್ಳುತ್ತಾ ಕ್ಲಿನಿಕ್ ನ ಶಟರ್ ಎಳೆದು ಕಾರು ಚಲಾಯಿಸಿದಳು.

      ಕಾರು ಅದೇ ನರ್ಸಿಂಗ್ ಹೋಂ ನ ಎದುರು ಬಂದು ನಿಂತಿತು. ಪಾವನಾ ರಿಸೆಪ್ಷನ್ ನಲ್ಲಿ ನವೀನ್ ನನ್ನು ವಿಚಾರಿಸಿಕೊಂಡಳು. ಅವರನ್ನು ಅಡ್ಮಿಟ್ ಮಾಡಿಕೊಳ್ಳಲಾಗಿದೆ ಎಂದ ರಿಸೆಪ್ಷನಿಸ್ಟ್ ರೂಂ ನಂಬರ್ ಹೇಳಿದಳು. ಪಾವನಾ ಅತ್ತ ಧಾವಿಸಿದಳು. ರೂಂ ನಂಬರ್ 114 ಎಲ್ಲಿ ಬರುತ್ತದೆ ಎಂದು ಹುಡುಕುತ್ತಾ ಹೊರಟಳು. ಮೊದಲ ಮಹಡಿಯಲ್ಲಿ ಎಡಗಡೆಗೆ ತಿರುಗಿ ಮುಂದೆ ಸಾಗಿದಾಗ ಕೊನೆಯ ರೂಂ 114. ರೂಂ ನ ಹೊರಗೆ ನಿಂತು ಬಾಗಿಲಿಗೆ ಮೆಲ್ಲನೆ ಕುಟ್ಟಿ ಟಕ್ ಟಕ್ ಸದ್ದು ಮಾಡಿದಳು. ಒಳಗಿನಿಂದ ಯಾವುದೇ ಸದ್ದಿಲ್ಲ. ಮೆಲ್ಲನೆ ಒಳಗೆ ಇಣುಕಿದಳು.

   ನವೀನ್ ಎತ್ತಲೋ ನೋಡುತ್ತಾ ಮಲಗಿಕೊಂಡಿದ್ದಾನೆ. ಯಾವುದೋ ಯೋಚನೆಯಲ್ಲಿ ಮುಳುಗಿಹೋಗಿದ್ದಾನೆ. ಟಕ್ ಟಕ್ ದನಿ ಅವನ ಅರಿವಿಗೆ ಬರುತ್ತಿಲ್ಲ. ಮೆಲ್ಲಗೆ ಬಾಗಿಲು ಸರಿಸಿ ಒಳಗಡಿಯಿಟ್ಟರು ಡಾಕ್ಟರ್ ಪಾವನಾ "ಹಲೋ ನವೀನ್.." ಎಂದಾಗ ಒಮ್ಮಿಂದೊಮ್ಮೆಲೇ ಬೆಚ್ಚಿಬಿದ್ದ ನವೀನ್
"ಮೇಡಂ.. ನೀವು... ಇಲ್ಲಿ..."

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
27-10-2020.



Sunday, 25 October 2020

ಯಾವ ತರುವು ಆವ ಲತೆಗೋ... ಅಧ್ಯಾಯ-೧

 


ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                       💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೧

              ಅಂದು ಪಾವನಾಳಿಗೆ ಎಂದಿನಿಂದ ಬೇಗನೇ ಎಚ್ಚರವಾಗಿತ್ತು. ಮೆಲ್ಲನೆ ಕಿಟಿಕಿಯ ಪರದೆ ಸರಿಸಿ ಇಣುಕಿದಳು. ಹುಣ್ಣಿಮೆಯ ಚಂದಿರ ಅವಳನ್ನು ನೋಡಿ ನಸುನಕ್ಕ. ತಣ್ಣನೆಯ ಗಾಳಿಯು ಬೀಸಿದಾಗ ಮನವು ಪ್ರಫುಲ್ಲವಾಯಿತು. ಇನ್ನೂ ಅರ್ಧ ಗಂಟೆ ಇದೆ ಅಲಾರಾಂ ಹೊಡೆದುಕೊಳ್ಳುವುದಕ್ಕೆ ಅಂತ ಹೊದಿಕೆಯೆಳೆದು ಸುಮ್ಮನೆ ಮಲಗಿಕೊಂಡಳು. ಬಲಗಡೆ ಮಲಗಿದ್ದ ಓಜಸ್'ನ ಕಾಲುಗಳು ಅವಳ ಮೇಲೆ ಬರಲು ಹವಣಿಸುತ್ತಿದ್ದವು. ಎಡಮಗ್ಗುಲಲ್ಲಿ ಯಶಸ್ವಿ ಕಾಲು ದಿಂಬಿನ ಮೇಲಿಟ್ಟು ತಲೆ ಕೆಳಭಾಗದಲ್ಲಿ ಇಟ್ಟು ಮಲಗಿದ್ದಳು. ಇಬ್ಬರನ್ನೂ ಹರಸಾಹಸಪಟ್ಟು ಸರಿಯಾಗಿ ಮಲಗಿಸಿದಳು. ತಾನೂ ಮಗ್ಗುಲು ಬದಲಾಯಿಸಿ ಮಲಗುವ ಪ್ರಯತ್ನ ಮಾಡಿದಳು. ಆಗಷ್ಟೇ ಬಿದ್ದ ಕನಸು ಅವಳಲ್ಲಿ  ಯೋಚನಾ ಲಹರಿಯನ್ನು ಹರಿಯಬಿಟ್ಟಿತ್ತು. ನಿದ್ದೆ ಸುಳಿಯುವ ಯಾವ ಲಕ್ಷಣಗಳೂ ಕಾಣಿಸದೆ ಸುಮ್ಮನೆ ಮಲಗುವುದಕ್ಕಿಂತ ಮನೆಕೆಲಸಕಾರ್ಯಗಳನ್ನು ಮಾಡೋಣ ಎಂದು ರಾಮ ರಾಮ ಎನ್ನುತ್ತಾ ಎದ್ದಳು.

          ಎದ್ದು ಹಲ್ಲುಜ್ಜಿ ಮುಖತೊಳೆದು ಬಂದು ಒಂದು ಲೋಟ ಬಿಸಿ ಬಿಸಿ ಕಾಫಿ ಹೀರಿದರೆ ಒಂದು ಸ್ಫೂರ್ತಿಯೇ ಬೇರೆ ಎಂದುಕೊಂಡು ಕಾಫಿ ಮಾಡಲು ಫ್ರಿಡ್ಜ್ ಬಾಗಿಲು ತೆರೆದು ಹಾಲಿನ ಪ್ಯಾಕೆಟ್ ಹೊರತೆಗೆದಳು. ಹಾಲು ಪಾತ್ರೆಗೆ ಹಾಕಿ ಕುದಿಯಲು ಇಟ್ಟವಳು ಮೆಲ್ಲನೆ ಹಾಡೊಂದನ್ನು ಗುನುಗುತ್ತಾ ಕಿಟಕಿಯಿಂದಾಚೆ ನೋಡತೊಡಗಿದಳು. ಕೋಗಿಲೆಗಳು ಇಂಪಾಗಿ ಹಾಡುತ್ತಿದ್ದವು. ರಸ್ತೆಯ ಮೇಲೆ ವಯಸ್ಸಾದ ದಂಪತಿಗಳು ವಾಕಿಂಗ್ ಆರಂಭಿಸಿದ್ದರು. ಈ ಇಳಿವಯಸ್ಸಿನಲ್ಲೂ ಜೊತೆಗೆ ವಾಕಿಂಗ್ ಮಾಡುವ ಸೌಭಾಗ್ಯ. ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು ಭಗವಂತ ಎಂದುಕೊಳ್ಳುತ್ತಾ ದೀರ್ಘವಾಗಿ ಉಸಿರು ತೆಗೆದುಕೊಂಡಳು. ಪಕ್ಕಕ್ಕೆ ಹೊರಳಿದಾಗ ಹಾಲುಕ್ಕಿ ಹದವಾಗಿ ಒಲೆಯ ಮೇಲೆ ಕುಳಿತಿತ್ತು. ಕೂಡಲೇ  ಒಲೆ ಆರಿಸಿದಳು. ಹಾಲುಕ್ಕಿದಂತೆ ನನ್ನ ಜೀವನದಲ್ಲಿ ಸೌಭಾಗ್ಯ ಉಕ್ಕಿದರೆ ಚೆಂದವಿತ್ತು. ದೌರ್ಭಾಗ್ಯೆ ನಾನು ಎಂದು ಒಂದು ಕ್ಷಣ ಭಾವುಕಳಾದಾಗ ಕಣ್ಣಂಚಿನಿಂದ ಹನಿಯು ಜಾರಲು ಅನುಮತಿಯ ಕೇಳಿತ್ತು.

        ಹೀಗೆ ನೋವಾದಾಗಲೆಲ್ಲ ಆಕೆ ಗುನುಗುವ "ಮನದೊಳಗೆ ಮನೆಮಾಡು ಮನೋಹಾರಿ ರಾಮ, ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ" ಎನ್ನುವ ಸಾಲನ್ನು ಭಕ್ತಿಯಿಂದ ಮತ್ತೆ ಮತ್ತೆ ಅನುಭವಿಸಿ ಹಾಡಿ ತನ್ನೊಳಗಿನ ಚೈತನ್ಯವನ್ನು ಬಡಿದೆಬ್ಬಿಸಿದಳು. ಯಾರಿಲ್ಲದಿದ್ದರೂ ನನ್ನ ಹೃದಯದ ರಾಮ ನನ್ನ ಕೈಬಿಡನು ಎಂಬ ಧೈರ್ಯ ಮೂಡಿ ಮುಖದಲ್ಲೊಂದು ಸಂತೃಪ್ತಿಯ ಹೊನಲು ಹರಿಯಿತು.

           ದಿನನಿತ್ಯದ ಕೆಲಸಕಾರ್ಯಗಳಲ್ಲಿ ಮಗ್ನಳಾದಳು. ತಿಂಡಿ ತಯಾರು ಮಾಡಿ ಮಕ್ಕಳನ್ನೆಬ್ಬಿಸಿ ಹಲ್ಲುಜ್ಜಿಸಿ ಸ್ನಾನ ಮಾಡಿಸಲು ಕರೆದೊಯ್ದಳು. ಸ್ನಾನ ಮಾಡಿ ಬಂದು ಸುಮ್ಮನೆ ಆಟವಾಡುತ್ತಾ ಇದ್ದ ಮಕ್ಕಳನ್ನು "ಬೇಗ ಬೆನಕ ಬೆನಕ ಏಕದಂತ  ಹೇಳಿ ತಿಂಡಿ ತಿನ್ನಲು ಬನ್ನಿ. ಶಾಲೆಗೆ ತಡವಾಗುತ್ತಿದೆ" ಎಂದು ಅವಸರಿಸಿದಳು. ಮಕ್ಕಳನ್ನು ಶಾಲೆಗೆ ಹೊರಡಿಸಿ ಶಾಲಾ ಬಸ್ ಹತ್ತಿಸಲು ಮನೆಬಾಗಿಲಿಗೆ ಬೀಗಜಡಿದು ಲಿಫ್ಟ್ ಬಟನ್ ಒತ್ತಿದರೆ ಅದಿನ್ನೂ ಬರಬೇಕಾದರೆ ಐದು ನಿಮಿಷ ಬೇಕು ಎಂದುಕೊಂಡು ಮೆಟ್ಟಿಲಿಳಿಯುತ್ತಾ ನಡೆದುಕೊಂಡು ಹೋಗೋಣ ಎಂದು ಎರಡು ಮೆಟ್ಟಿಲಿಳಿದಾಗಲೇ ಎದುರಿನಿಂದ ಪ್ರಭಾಕರ ರಾಯರು ಏದುಸಿರು ಬಿಡುತ್ತಾ ಮೆಟ್ಟಿಲೇರುತ್ತಿದ್ದವರು .." ಪಾವನಾ... ಇವತ್ತು ನಮ್ಮಲ್ಲಿ ಗಣಹೋಮ ಶಿವಪೂಜೆ ಇದೆ. ಎರಡು ದಿನದಿಂದ ನಿಮಗೆ ಹೇಳಬೇಕೆಂದು ಪ್ರಯತ್ನ ಪಟ್ಟೆ. ನೀನು ಸಂಪರ್ಕಕ್ಕೆ ಸಿಕ್ಕಿಲ್ಲ. ದೇವರ ಕೃಪೆ ನೋಡು ಪೂಜೆಗೆ ಹೂವು ತರುತ್ತಿರುವಾಗಲೇ ಎದುರು ಸಿಕ್ಕಿದೆ. ಬಿಡುವು ಮಾಡಿಕೊಂಡು ಬಾ. ಮಧ್ಯಾಹ್ನ ಹನ್ನೆರಡು ಗಂಟೆಗೆ ಮಂಗಳಾರತಿ, ನಂತರ ಭೋಜನ. ಸಾವಕಾಶವಾಗಿ ಬಂದು ಆತಿಥ್ಯವನ್ನು ಸ್ವೀಕರಿಸು " ಎಂದು ಸವಿನಯದಿಂದ ಆಮಂತ್ರಿಸಿದರು. ನಗುತ್ತಾ "ಆಗಲಿ. ಬಿಡುವಾದರೆ ಬರುತ್ತೇನೆ" ಎನ್ನುತ್ತಾ ಮೆಟ್ಟಿಲಿಳಿದಳು.

        ಪ್ರಭಾಕರ ರಾಯರು ಪಾವನಾಳ ಮನೆಯಿರುವ ಅಂತಸ್ತಿನಿಂದ ಎರಡು ಅಂತಸ್ತು ಮೇಲಿರುವವರು. ಪಾವನಾಳ ತಂದೆ ತಾಯಿ, ಪ್ರಭಾಕರ ರಾಯರು ಮೂಲತಃ ಕರಾವಳಿಯವರು. ಒಂದೇ ಊರಿನವರೆಂಬ ಬಾಂಧವ್ಯ ಎರಡೂ ಕುಟುಂಬಗಳ ನಡುವೆ ಇತ್ತು.

       ಪಾವನ ಕ್ಲಿನಿಕ್ ಗೆ ಹೊರಡುವಾಗ ಎಂದಿನಂತೆ ಚೂಡಿದಾರ್ ಧರಿಸದೆ, ಲಕ್ಷಣವಾಗಿ ಸರಳವಾದ ಸೀರೆಯುಟ್ಟು ಹೊರಟಳು. ಹೊರಡುತ್ತಿದ್ದಾಗಲೇ ಫೋನ್ ಕರೆ ಬಂದಿತು ಪ್ರಭಾಕರ ರಾಯರದು
"ಪಾವನಾ.. ಕ್ಲಿನಿಕ್ ಗೆ ಹೋಗುವ ಮುನ್ನ ಒಮ್ಮೆ ಮನೆಗೆ ಬಂದು ಹೋಗಮ್ಮ. ಊರಿನಿಂದ ಅಡುಗೆಗೆಂದು ಬಂದ ಹುಡುಗ ವಿಪರೀತ ಜ್ವರದಿಂದ ಬಳಲುತ್ತಿದ್ದಾನೆ"
"ಸರಿ ಮಾವ.. ಇನ್ನು ಐದು ನಿಮಿಷದಲ್ಲಿ ನಿಮ್ಮ ಮನೆಯಲ್ಲಿರ್ತೀನಿ"

       ಯಾವಾಗಲೂ ಚೂಡಿದಾರ್ ಅಥವಾ ಕುರ್ತಾ ಧರಿಸಿ ಕ್ಲಿನಿಕ್ ಗೆ ತೆರಳುತ್ತಿದ್ದ ಪಾವನಾ
ಇತ್ತೀಚೆಗೆ ಕಾರ್ಯಕ್ರಮಗಳಿಗೆ ಹೋಗುವುದಿದ್ದರೆ ಸೀರೆಯುಡಲು ಆರಂಭಿಸಬೇಕೆಂದು ಎರಡು ಸಾದಾ ಕಾಟನ್ ಸೀರೆಕೊಂಡು ಸಿಂಪಲ್ಲಾಗಿ ರವಿಕೆ ಹೊಲಿಸಿಕೊಂಡಿದ್ದಳು. ಬಿಳಿಯಾಗಿದ್ದ ಪಾವನಾ ಪಿಂಕ್ ಬಣ್ಣದ ಕಾಟನ್ ಸೀರೆಯಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಳು. ಹೊರಟು ಪ್ರಭಾಕರ ಮಾವನ ಮನೆಗೆ ತೆರಳಿದಳು. ಬಾಗಿಲಲ್ಲೇ ಮಾವ ಅತ್ತೆ ಸ್ವಾಗತಿಸಿ "ಬಾರಮ್ಮ ಪಾವನಾ.. ತಿಂಡಿ ಕಾಫಿ ಮಾಡೋಣ"ಎಂದಾಗ "ಬೇಡ ಎಲ್ಲ ಮನೆಯಲ್ಲೇ ಮುಗಿಸಿದೆ. ಯಾರಿಗೋ ಜ್ವರ ಅಂದ್ರಲ್ಲ. ನೋಡ್ಕೊಂಡು ಹೋಗೋಣ ಅಂತ ಬಂದೆ"
"ಪಾವನಾ.. ಇಲ್ಲಿ ಅಡುಗೆಗೆಂದು ಬಂದ ಯುವಕ. ಇವನೇ ನೋಡು.. ಜ್ವರದಿಂದ ಬಳಲುತ್ತಿದ್ದಾನೆ. ಆದರೂ ಪಾಪ ಬೆಳಿಗ್ಗೆ ಎದ್ದು ಕೆಲಸ ಆರಂಭಿಸಿದ್ದಾನೆ" ಎಂದಾಗ ಯುವಕನತ್ತ ದೃಷ್ಟಿಹರಿಸಿದಳು ಪಾವನಾ.

        ಸುಮಾರು ಮೂವತ್ತು ವರ್ಷಗಳ ಒಳಗಿನ ಕಟ್ಟುಮಸ್ತಾದ ದೇಹದ ಯುವಕನಂತೆ ಕಾಣುತ್ತಿದ್ದ. ಮುಖವು ಜ್ವರದ ತಾಪದಿಂದ ಬಳಲಿದಂತಿದ್ದರೂ ಸೌಮ್ಯತೆ ಎದ್ದು ಕಾಣುತ್ತಿತ್ತು. ಪ್ರಭಾಕರ ಮಾವನ ಹೆಂಡತಿ ಉಷಾತ್ತೆ "ಸ್ವಲ್ಪ ಇಲ್ಲಿ ಬಾ...ಕುಳಿತುಕೋ.. ನವೀನ್.. ಇವರೇ ಡಾಕ್ಟರ್" ಎಂದು ಕರೆದು ಕುರ್ಚಿಯನ್ನು ತೋರಿಸಿದರು. ಪಾವನಾ ಪರೀಕ್ಷೆ ಮಾಡಿದಳು. ಜ್ವರ ಏರಿತ್ತು. ಜ್ವರವೇರಿ ಕಣ್ಣು ಕೆಂಡದುಂಡೆಯಂತಾಗಿತ್ತು. ಶ್ವಾಸಕೋಶದಲ್ಲಿ ಕಫ ಕಟ್ಟಿತ್ತು. "ಇಷ್ಟು ಜ್ವರ, ಕಫ ಇದ್ದಾಗಲೂ ವಿಶ್ರಾಂತಿ ಪಡೆಯುವುದು ಬಿಟ್ಟು ಕೆಲಸ ಮಾಡುತ್ತೀರಲ್ಲ ನವೀನ್" ಎಂದು ಪಾವನಾ ಕೇಳಿದಾಗ "ಎಲ್ಲ ಹೊಟ್ಟೆಪಾಡಿಗೆ ಮೇಡಂ.. ಸ್ವಲ್ಪ ಜಾಸ್ತಿ ಸಂಪಾದನೆಯಿದೆ ಬೆಂಗಳೂರಲ್ಲಿ ಅಂತ ಹದಿನೈದು ದಿನ ಅಡುಗೆ ಕೆಲಸವನ್ನು  ಅಡಿಗೆ ವೆಂಕಣ್ಣನ ಜತೆ ಮಾಡೋಣ ಅಂತ ಬಂದರೆ ಹೀಗೆ ಜ್ವರ ಬರಬೇಕಾ?" ಎಂದು ಹೇಳಿ ಸಪ್ಪಗಾದನು. ಜ್ವರದ ಮಾತ್ರೆ, ಆಂಟಿಬಯೋಟಿಕ್, ಕಫದ ಔಷಧಿಗಳನ್ನು ಕೊಟ್ಟು ಎರಡು ದಿನ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದಳು. "ಸರಿ ಮೇಡಂ" ಎಂದು ತಲೆಯಲ್ಲಾಡಿಸಿದ ನವೀನ್.

       ಇವರಿಗೆ ರೆಸ್ಟ್ ತೆಗೆದುಕೊಳ್ಳಿ ಎಂದು ಉಸುರುವುದು ಸುಲಭ. ನಮ್ಮಂತಹ ಅಡುಗೆ ಭಟ್ಟರಿಗೆ ವಿಶ್ರಾಂತಿ ಎಲ್ಲಿಂದ? ಭ್ರಾಂತಿ..!
ಈಗ ದಿನದ ಇಪ್ಪತ್ತೆರಡು ಗಂಟೆ ನಾನು ದುಡಿಯಲೇ ಬೇಕು. ಈಗಲೇ ನಮಗೆ ಸಂಪಾದನೆಯ ಸೀಸನ್. ವಿಶ್ರಾಂತಿ ತೆಗೆದುಕೊಂಡು ಕೂತರೆ ಮತ್ತೆ ಮಳೆಗಾಲದಲ್ಲಿ ಇಂತಹ ಸಂಪಾದನೆ ಬೇಕೆಂದರೂ ಸಿಗಲಾರದು.
ಸರಿಯಾಗಿ ನಿದ್ದೆಯಿಲ್ಲ. ಒಲೆಯ ಮುಂದೆ ಪದಾರ್ಥಗಳು ಬೇಯುವುದರೊಂದಿಗೆ ನಾವೂ ಬೇಯುತ್ತೇವೆ. ಆದರೂ ಅಡುಗೆ ರುಚಿಯಾಗದಿದ್ದರೆ ಮೊದಲು ತೆಗಳುವುದು ಅಡುಗೆಭಟ್ಟರನ್ನೇ. ನಮ್ಮ ಗೋಳು ಯಾರಿಗೂ ಅರ್ಥವಾಗಲಾರದು. ಆದರೆ ಸಮಾರಂಭದ ಅಡುಗೆ ನನಗೆ ನಿತ್ಯದ ಕಾಯಕವಲ್ಲವಲ್ಲ. ಹದಿನೈದು ದಿನ ಇದ್ದು ಊರಿಗೆ ಮರಳುವವನು ಬೇಗನೆ ಖಾಲಿಕೈಯಲ್ಲಿ ಮರಳುವಂತಾದರೆ ಮಾತ್ರ ಬೇಸರ ಎಂದು ತನ್ನಲ್ಲೇ ಅಂದುಕೊಂಡು ಆಕೆ ಕೊಟ್ಟ ಮಾತ್ರೆಯನ್ನು ನುಂಗಿದನು.

       ಉಷಾತ್ತೆ ಕೊಟ್ಟ ಕಾಫಿ ಹೀರಿ ಕ್ಲಿನಿಕ್ ಗೆ ತೆರಳಿದಳು ಪಾವನಾ. ಮನಸ್ಸಿನ ತುಂಬಾ ನವೀನ್ ಬಗ್ಗೆ ಅನುಕಂಪ ತುಂಬಿತ್ತು. ದೂರದೂರಿನಿಂದ ಸ್ವಲ್ಪ ಜಾಸ್ತಿ ಸಂಪಾದನೆ ಬೆಂಗಳೂರಿನಲ್ಲಿ ಆಗಬಹುದು ಎಂದು ಬಂದು ಇಲ್ಲಿ ಅನಾರೋಗ್ಯ ಅನುಭವಿಸಿದರೆ.. ಪಾಪ..!! ದುಡಿಯೋದೂ ಕಷ್ಟ, ವಿಶ್ರಾಂತಿ ಪಡೆದುಕೊಳ್ಳುವುದು ಮತ್ತೂ ಕಷ್ಟ. ನಾನಂದುಕೊಳ್ಳುತ್ತಿದ್ದೆ ನನಗೊಬ್ಬಳಿಗೇ ದೇವರು ನೋವು ಕೊಟ್ಟುಬಿಟ್ಟ ಅಂತ. ನನಗಿಂತಲೂ   ಕಷ್ಟಪಡುವವರು ಜಗತ್ತಿನಲ್ಲಿದ್ದಾರೆ ಎಂದು ಯೋಚಿಸುತ್ತಾ ತನ್ನ ಕುರ್ಚಿಯಲ್ಲಿ ಆಸೀನಳಾದಳು ಪಾವನಾ. " ಯಸ್..ಕಮಿನ್" ಎಂದು ಹೇಳಿ ರೋಗಿಗಳ ಪರೀಕ್ಷೆ ಮಾಡಿ ಔಷಧ ಕೊಡತೊಡಗಿದಳು..

      ಮಧ್ಯಾಹ್ನ ಗಂಟೆ ಒಂದು ಆದಾಗ ರೋಗಿಗಳ ಸಂಖ್ಯೆ ಇಳಿಮುಖವಾಯಿತು. ಇನ್ನು ಪೂಜಾ ಕಾರ್ಯಕ್ರಮಕ್ಕೆ ಹೊರಡಬೇಕು ಅನ್ನುವಷ್ಟರಲ್ಲಿ ಒಂದು ಎಳೆಯ ಜೋಡಿ ಬಂದಿತ್ತು. "ಡಾಕ್ಟ್ರೇ.. ಇವಳಿಗೆ ವಾಂತಿ ಮಾತ್ರೆ ಕೊಡ್ರೀ" ಅಂದ ಆಕೆಯ ಗಂಡ.
ಹೆಣ್ಣುಮಗಳನ್ನು ಒಳಕರೆದು ಪರೀಕ್ಷೆ ಮಾಡಿದ ಪಾವನಾ "ಹಾಗೆಲ್ಲ ವಾಂತಿ ಮಾತ್ರೆ ಕೊಡಿ ಅಂತ ಕೇಳಬಾರದು. ಏನು ಖಾಯಿಲೆ ಅಂತ ಗೊತ್ತಿಲ್ಲದೆ  ಸ್ವಯಂ ಔಷಧ ಪ್ರಯೋಗ ಮಾಡಕೂಡದು"
"ಮತ್ತೇನ್ರೀ.. ಎರಡು ದಿನದಿಂದ ಬರೀ ವಾಂತೀನೇ ಮಾಡ್ತಾಳ್ರೀ"
"ಅದಕ್ಕೆ ಏನು ಕಾರಣ ಎಂದು ಪರೀಕ್ಷಿಸಿ ವೈದ್ಯರು ಔಷಧಿಗಳನ್ನು ಕೊಡುವುದು"
"ಹೂಂ.. ಡಾಕ್ಟ್ರೇ.. ನನ್ ಹೆಂಡ್ತಿಗೆ ಈಗ ಯಾವ ರೋಗ ಬಂದೇತಿ? ಅದನ್ನಾದರೂ ಹೇಳಿ.."

     ಪಾವನಾ ನಗುತ್ತಾ "ಅವಳಿಗೆ ಯಾವ ಕಾಯಿಲೇನೂ ಬಂದಿಲ್ಲಪ್ಪಾ"
"ನೀವೇ ಹಿಂಗಂದ್ರೆ ಹೇಗೆ ಡಾಕ್ಟ್ರಮ್ಮಾ?"
"ಹೌದು. ಕಾಯಿಲೆಯಿಂದ ವಾಂತಿ ಮಾಡ್ತಿಲ್ಲ. ಅವಳು ಗರ್ಭಿಣಿ ಆಗಿದ್ದಾಳೆ. ಈಗ ಆರಂಭದಲ್ಲಿ ಸ್ವಲ್ಪ ವಾಕರಿಕೆ, ಸುಸ್ತು ಎಲ್ಲ ಸಾಮಾನ್ಯ"
"ಹೌದೇನ್ರಿ.. ಮೇಡಮ್ಮೋರೆ" ಎಂದವನ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು.
ಆಕೆಗೆ ಅಗತ್ಯವಾದ ಪೌಷ್ಟಿಕಾಂಶದ ಮಾತ್ರೆಗಳನ್ನು ಕೊಟ್ಟು ಕಳುಹಿಸಿಕೊಟ್ಟು ಕ್ಲಿನಿಕ್ ಬಾಗಿಲು ಹಾಕಿ ಕಾರು ಚಲಾಯಿಸಿದಳು ಪಾವನಾ.

      ಆಗಲೇ ಗಂಟೆ ಒಂದೂ ಮುಕ್ಕಾಲಾಗಿತ್ತು. ಕಾರ್ಯಕ್ರಮದ ಮನೆಯಲ್ಲಿ ಊಟವೂ ಆಗಿರುತ್ತದೆ. ಆದರೂ ಹೋಗದಿದ್ದರೆ ಅವರಿಗೆ ಸಮಾಧಾನವಾಗದು ಎಂದು ಒಳಹೋದಳು ಪಾವನಾ..ಒಳಗಡಿಯಿಡುತ್ತಲೇ "ಪಾವನಾ.. ಬಾರಮ್ಮ" ಎಂದು ಪ್ರೀತಿಯಿಂದ ಸ್ವಾಗತಿಸಿ, ದೇವರ ತೀರ್ಥ ಪ್ರಸಾದ ಕೊಟ್ಟರು ಪ್ರಭಾಕರ ರಾಯರು. ಉಷಾತ್ತೆ ಪಾವನಾಳಿಗೆ ಊಟ ಬಡಿಸುವ ವ್ಯವಸ್ಥೆ ಮಾಡಿದರು. ಅವರಿಗೆ ನವೀನ್ ನೂ ಜತೆಯಾದ.
"ಈಗ ಹೇಗಿದೆ ಜ್ವರ? " ಕೇಳಿದಳು ಪಾವನಾ.
"ಕಡಿಮೆಯಾಗ್ತಿದೆ" ಎಂದಷ್ಟೇ ಚುಟುಕಾಗಿ ಉತ್ತರಿಸಿದ.

ಮುಂದುವರಿಯುವುದು...

✍️ ಅನಿತಾ ಜಿ.ಕೆ.ಭಟ್.
26-10-2020.

ಈ ನೀಳ್ಗತೆಯು ಎರಡು ಭಾಗಗಳಾಗಿ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ.
















ತೂಗುಯ್ಯಾಲೆ #ಚಿತ್ರಕವನ

 


ತೂಗುಯ್ಯಾಲೆ

ಜೀವನವೆಂಬುದು ತೂಗುಯ್ಯಾಲೆ
ಬದುಕು ಜೀಕುವುದು ಸೇತುವೆ ಮೇಲೆ
ಬೆಸೆಯಬೇಕು ಸ್ನೇಹ ಸೇತುವೆ
ಮನುಜ ಮನುಜನ ಮಧ್ಯವೇ...

ಸೇತುವೆ ಬೆಸೆದಿದೆ ಎರಡು ತೀರಗಳ
ತೀರಿಸಿದೆ ಜನರ ಸಂಕಷ್ಟಗಳ
ತಿಳಿನೀರ ಶರಧಿಯ ಸೊಬಗು
ಸಾಗುವರ ಮೊಗದಿ ಹೂನಗೆ....

ಸುತ್ತ ಹಸಿರ ಹಾಸು ಕಣ್ತುಂಬ
ಸಲಿಲದಿ ಸೇತುವೆಯ ಪ್ರತಿಬಿಂಬ
ಶುದ್ಧ ಮನವದು ಪ್ರೀತಿ ತುಂಬಿ
ಅರಳಿದರೆ ಸಾರ್ಥಕವು ಹಸಿರ ಕಂಬ....

ಕಬ್ಬಿಣದ ಕಂಬಗಳು, ಹಾಸು,ಸರಳು
ಹಸನಾಗಿಸಿದೆ ಹಲವರ ಬಾಳು
ಶಾಲೆಗೆ ತೆರಳುವ ಪುಟ್ಟ ಮಕ್ಕಳು
ಖುಷಿಯಲಿ ಸಾಗುವರು ಕೊಂಕಿಸುತ ಕೊರಳು..

ತೂಗುಸೇತುವೆ ನಿನ್ನುಪಕಾರವ
ಮರೆಯಲಾರರು ಊರ ಮಂದಿ
ನಿನ್ನ ಪುಣ್ಯಜನುಮ ಸಾರ್ಥಕವು
ಕುಣಿದಿವೆ ಹೃದಯಗಳಿಲ್ಲಿ ಆನಂದದಿಂದ...

✍️... ಅನಿತಾ ಜಿ.ಕೆ.ಭಟ್.
25-10-2020.

ಚಿತ್ರ ಕೃಪೆ ಹವಿಸವಿ ಬಳಗ.




ಜಾಲ #ಕವನ

 


ಜಾಲ

ಬದುಕೆಂಬ ಮೂರಕ್ಷರ
ಭುವಿಯೊಳಗಿನ ಹಂದರ
ಇಹುದು ದಿನ ಮೂರು
ಕಾಡುವ ಚಿಂತೆ ನೂರು...

ಮಿಥ್ಯ ಬಿಂಬವ ನಂಬದೆ
ಅಂತರ್ಜಾಲವು ಸತ್ಯ
ಅಲ್ಲವೆಂಬುದರಿವೆ ನೀ ಮುಂದೆ
ಮಾಯಾಜಾಲವೆಂಬುದು ಕಹಿಸತ್ಯ...

ಹಾಳುನೋಟದಿ ನೆಟ್ಟು
ಬಳಸಿ ಸಂಪೂರ್ಣ ನೆಟ್ಟು
ತಲೆಹಾಳಾದೀತು ಕೆಟ್ಟು
ಹಿಂದಿರುಗೊಮ್ಮೆ ಬದಿಗಿಟ್ಟು...

ಚಿತ್ರ ವಿಚಿತ್ರವ ಸೆರೆಹಿಡಿದು
ಮನವು ಕದಡಿ ಜಡಹಿಡಿದು
ಪ್ರಕೃತಿಮಾತೆ ಕೈಬೀಸಿ ಕರೆದು
ನಸುನಗುತ ನಿಂದಿಹಳು ಸುತ್ತುವರಿದು...

ಜಾಲದೊಳಗಿನ ಜೀವಕೆ
ಅದುವೇ ಸಕಲಕೂ ವೇದಿಕೆ
ಹೊರಜಗತ್ತಿಗೆ ಎಳೆದು ಮುಸುಕು
ಹೊದ್ದು ತಿಳಿಯದು ಬಾಳ ನಸುಕು....

✍️... ಅನಿತಾ ಜಿ.ಕೆ.ಭಟ್.
25-10-2020.




Thursday, 22 October 2020

ಶಾರದಾ ನಮನ../ಭಕ್ತಿಗೀತೆ/bhakthigeethe

    


ಶಾರದಾ ನಮನ

ತಾಯಿ ಶಾರದೆ ಒಲಿದು ಬಾರೇ
ಕರವ ಜೋಡಿಸಿ ಬೇಡುವೆ
ದಯವ ತೋರು, ವಿಧೇಯ ಮನದಿ
ವರದೆ ನಿನ್ನಡಿಗೆರಗುವೆ ||೧||

ಸರ್ವಶಕ್ತಳೆ ವಿಂಧ್ಯವಾಸಿನಿ
ಗಾನ ನಾಟ್ಯ ವಿನೋದಿನಿ
ಶ್ವೇತವಸನೆ ವಿದ್ಯಾದಾಯಿನಿ
ಮತಿಗೆ ದ್ಯುತಿಯ ನೀಡು ನೀ||೨||

ಚಂದ್ರವದನೇ ಮಂಗಳಾಂಗಿಯೇ
ನೀಡು ಭಾವಸ್ಫುರಣೆಗೆ ಸ್ಫೂರ್ತಿಯ
ಮಂದಸ್ಮಿತೆ ಕಮಲವಾಸಿನಿ
ಮೂಡಿಸೆನ್ನಲಿ ಪದಮಾಲೆಯ||೩||

ಅಂತರಂಗದಿ ನೆಲೆಸು ಮಾತೆಯೆ
ಜ್ಞಾನ ತೊಡರನು ಬೆಳಗುತ
ಶಾಂತಬಿಂಬವು ಕಣ್ಣತುಂಬುತ
ಕೃಪಾ ಸಿಂಧುವ ಹರಿಸುತ||೪||

ಎನ್ನ ಕಾಯವ ನಿನ್ನ ಮಾಯೆಲಿ
ನುಡಿಸಿ ಹೊಮ್ಮಿಸು ನಾದವ
ಹೃದಯ ತಂತಿಯ ಲಯದಿ ಮೀಟಿ
ನಿರತಹರಿಸು ಲಹರಿಯ||೫||

ವಾಗ್ದೇವಿ ನೆಲೆಸೆನ್ನ ದೇಹಗುಡಿಯೊಳು
ನಿನ್ನ ನಿತ್ಯವು ನುತಿಪುವೆ
ಶಂಕರಾರ್ಚಿತೆ ಲೋಕಪೂಜಿತೆ
ಅನುಗ್ರಹಿಸು ಪ್ರೇಮದಿ ಪಾಡುವೆ||೬||

✍️... ಅನಿತಾ ಜಿ.ಕೆ.ಭಟ್.
17-10-2020.

ಹಾಡನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..

https://youtu.be/AZeoCwFK-b0



Sunday, 11 October 2020

ಪೇರಳೆ ಹಣ್ಣಿನ ಹಲ್ವಾ - ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ

 

ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ :- 11-10-2020.
ವಿಕ ಪಾಕಶಾಲೆ Queen

ಹಬ್ಬಗಳ ಸಾಲಿಗೆ ಸಿಹಿ ಖಾದ್ಯಗಳ ಮೋಡಿ
                        ****
ಪೇರಳೆ/ಸೀಬೆ ಹಣ್ಣಿನ ಹಲ್ವಾ :-

     ಪೇರಳೆ/ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ.ಇದರಲ್ಲಿ ವಿಟಮಿನ್ ಸಿ ಮತ್ತು ಖನಿಜಾಂಶಗಳು ಹೇರಳವಾಗಿದ್ದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಲು ಸಹಕಾರಿ.ಈ ಗುಣಗಳಿಂದಾಗಿ ಬಡವರ ಸೇಬು ಎಂದೇ ಕರೆಯಲ್ಪಡುತ್ತದೆ.ದಿನಕ್ಕೊಂದು ಅಥವಾ ಎರಡು ತಾಜಾ ಪೇರಳೆ ಹಣ್ಣುಗಳ ಸೇವನೆಯಿಂದ ದೇಹವನ್ನು ಕಾಯಿಲೆಗಳಿಂದ ದೂರವಿಡಬಹುದು.

ಬೇಕಾಗುವ ಸಾಮಗ್ರಿಗಳು:-
ಪೇರಳೆ ಹಣ್ಣಿನ ಪೇಸ್ಟ್ -2 ಕಪ್
ಸಕ್ಕರೆ-1ಕಪ್
ತುಪ್ಪ-1/2ಕಪ್
ಗೋಧಿ ಹುಡಿ-1/2ಕಪ್
ಏಲಕ್ಕಿ

ಮಾಡುವ ವಿಧಾನ:-
     ಬಲಿತ ಪೇರಳೆಯನ್ನು ಸೀಳಿ ಎರಡು ಭಾಗಗಳಾಗಿ ಮಾಡಿಕೊಂಡು , ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಮೂರು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ.ತಣ್ಣಗಾದ ನಂತರ ಹಣ್ಣಿನ ತುಂಡುಗಳನ್ನು ನೀರಿನಿಂದ ತೆಗೆದುಕೊಂಡು ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿ...ಸೋಸಿಕೊಳ್ಳಿ.ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಧಿ ಹುಡಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ.ನಂತರ ಪೇರಳೆ ಹಣ್ಣಿನ ರುಬ್ಬಿದ ಮಿಶ್ರಣವನ್ನು ಹಾಕಿ ತುಪ್ಪ ಹಾಕಿ ತಿರುವಿ.ಹಸಿವಾಸನೆ ಹೋದ ನಂತರ ಗೋಧಿ ಹುಡಿ ,ಸಕ್ಕರೆ ಹಾಕಿ ತಿರುವುತ್ತಿರಿ.ಪಾಕ ತಳಬಿಟ್ಟು ಬಂದಾಗ ಏಲಕ್ಕಿಪುಡಿ ಬೆರೆಸಿ... ತುಪ್ಪ ಸವರಿದ ತಟ್ಟೆಗೆ ಹಾಕಿ ಕತ್ತರಿಸಿ ..ಬಿಸಿ ಬಿಸಿ ಪೇರಳೆ ಹಲ್ವಾ ರೆಡಿ.

✍️ ... ಅನಿತಾ ಜಿ.ಕೆ.ಭಟ್.
06-10-2020.


          

                      ****


Tuesday, 6 October 2020

ಸಂತೃಪ್ತ ಸೃಷ್ಟಿ

 


ಸಂತೃಪ್ತ ಸೃಷ್ಟಿ

ಇಲ್ಲೇನು ಮಾಡುವಿರಿ ಹೀಗೆ ಕುಳಿತು?
ಆಸರೆಯ ಕೊಡೆಯೊಳಗೆ ಮೆಲ್ಲ ಅವಿತು
ಕಾರ್ಮೋಡ ಮುಸುಕಿ ಕತ್ತಲು ಕವಿದು
ಕೆರೆಕೊಳ್ಳ ಬರನೀಗಿ ಒಡಲು ತುಂಬಿಹುದು||

ಕೈಲಿ ಹಿಡಿದಿಹ ಮಾರುದ್ದ ಗಾಳ
ಹೊಟ್ಟೆ ಹಾಕುತಿದೆ ಬಿಡದೆ ತಾಳ
ನಿತ್ಯವೂ ಬೆಂಬಿಡದ ಗೋಳು
ಮೀನು ದೊರೆತರೆ ಸುಖವು ಬಾಳು||

ಮುಂಗಾರು ಹನಿಯಾಗಿ ಸುರಿಯೆ
ಸೊಂಪಾದ ಧರಣಿ ಹಸಿರಸಿರಿಯೆ
ಹೊಳೆವ ಹಸಿಹುಲ್ಲ ಚಿಗುರು
ತಂಪಾದ ತಂಗಾಳಿ ಇನ್ನಿಲ್ಲ ಬೆವರು||

ಹೊನ್ನೀರ ಹನಿಯ ಸಿಂಚನ
ಮೈಯೆಲ್ಲ ಚಳಿಯ ರೋಮಾಂಚನ
ಹೊದ್ದು ಮಲಗಲಾರ ಈತ ರೈತನು
ಕಾಯಕಕೆ ಬದ್ಧ ನೀಗಿಸುತ ಹಸಿವನು||

ಕಾಲಕಾಲಕೆ ಬಂದರೆ ಮಳೆ
ರೈತನಿಗೆ ಸಮೃದ್ಧ ಬೆಳೆ
ಕೊಡೆಹಿಡಿದು ಗಾಳದತ್ತ ಏಕಾಗ್ರ ದೃಷ್ಟಿ
ಆಹಾರ ಸರಪಳಿಯಲಿ ಸಂತೃಪ್ತ ಸೃಷ್ಟಿ||

                      
✍️... ಅನಿತಾ ಜಿ.ಕೆ.ಭಟ್.
06-10-2020.

ಚಿತ್ರ ಕೃಪೆ :ಹವಿಸವಿ ಬಳಗ.


Monday, 5 October 2020

ವಿದಾಯ..ಕಿರುಗತೆ #ಹವ್ಯಕ ಭಾಷಾ ಬರಹ

 


      "ಮೈಯೆಲ್ಲಾ ಸುಡ್ತು, ಕೈಕಾಲು ಬೇನೆ,ತಲೆಯಂತೂ ಭಾರ...ಯಪ್ಪಾ!!..ತಡಕ್ಕೊಂಬಲೇ ಎಡ್ತಿಲ್ಲೆ.."ಹೇಳಿಗೊಂಡು ಚಿಕಿತ್ಸಾಲಯದೊಳ ಬಂದ ಗಂಗೆಜ್ಜಿಯ ವೈದ್ಯ ಶ್ಯಾಮರಾಯರು ಕೂಲಂಕಷವಾಗಿ ಪರೀಕ್ಷೆ ಮಾಡಿದವು.ಪಥ್ಯಾಹಾರ,ಅನುಪಾನ,ಮದ್ದು ಹೇಂಗೆ ತೆಕ್ಕೊಂಬದು ಹೇಳಿ ಲಾಯಿಕಿಲಿ ವಿವರವಾಗಿ ತಿಳಿಸಿಕೊಟ್ಟು ಶುಲ್ಕ ತೆಕ್ಕೊಳದ್ದೆ ಕಳ್ಸಿಕೊಟ್ಟವು.ಬಾಯಿಮಾತಿಲ್ಲೇ ರೋಗಿಯ ಅರ್ಧಾಂಶ ಖಾಯಿಲೆ ಗುಣಮಾಡುವ, ಮಾನವೀಯ ಗುಣಂಗೊಕ್ಕೆ ಜನಾನುರಾಗಿ ಆಯಿದವು ವೈದ್ಯ ಶ್ಯಾಮರಾಯರು.

      ಹಣೆಯ ತುಂಬಾ ನೆರಿಗೆ,ರಕ್ತ ಮಾಂಸ ಎಲ್ಲ ಆರಿ ಕೃಶವಾದ ಶರೀರ,ಕಿವಿಹರ್ದು ಇನ್ನೇನು ಬೀಳ್ತು ಹೇಳ್ವಾಂಗಾದ ಅಮೆರಿಕನ್ ಡೈಮಂಡ್ ಬೆಂಡೋಲೆಗ,ಬಣ್ಣ ಮಾಸಿದ ಹಳೆಯ ಸೀರೆ_ಇಂಥ ದಯನೀಯ ಸ್ಥಿತಿಲ್ಲಿಪ್ಪ ಗಂಗೆಜ್ಜಿಯ ನೋಡಿ ಮನಸ್ಸಿಲ್ಲೇ ಮರುಗಿದವು ವೈದ್ಯ ಶ್ಯಾಮರಾಯರು.ಗಂಗೆಜ್ಜಿಯೋ ಸಣ್ಣ ಪ್ರಾಯಲ್ಲೇ ಗಂಡನ ಕಳಕ್ಕೊಂಡು ಊರೋರನ್ನೇ ತನ್ನ ಕುಟುಂಬ ಹೇಳ್ಯೊಂಡು ಪ್ರೀತಿಲ್ಲಿ ಬದ್ಕಿದ ಜೀವ.ಈಗ ಪ್ರಾಯ ಎಂಭತ್ತು ಅಪ್ಪಗ ವಯೋಸಹಜ ದೌರ್ಬಲ್ಯಂಗ.

      ಮದ್ದು ತೆಕ್ಕೊಂಡು ,ಕೈಲಿ ಕೋಲು ಊರಿಗೊಂಡು ಮೆಲ್ಲಂಗೆ ತನ್ನ ಮನೆಕಡೆ ಹೋವ್ತಾ ಇತ್ತು ಗಂಗೆಜ್ಜಿ.ಮನೆ ತಲ್ಪುಲೆ ಚೂರು ದಾರಿ ಇಪ್ಪಗ ನಡವಲೆಡಿಯದ್ದೆ ಸ್ಮೃತಿ ತಪ್ಪಿ ಬಿದ್ದತ್ತು ಗಂಗೆಜ್ಜಿ.ಎರಡ್ಮೂರು ಮನೆಯವು ಆ ದಾರಿಲಿ ಹೋಪದು ಬಿಟ್ರೆ ಬೇರೆ ಜನಸಂಚಾರ ಇಲ್ಲೆ; ಹಾಂಗಾಗಿ ಆರಿಂಗೂ ಗೊಂತಾಯಿದಿಲ್ಲೆ.ಪಾಪ....ಗಂಗೆಜ್ಜಿ ...ಕಸ್ತಲಪ್ಪಗ ಕೇಶವ ಜೋಯಿಸರು ಆ ದಾರಿಲ್ಲಿ ಲೈಟ್ ಹಾಕ್ಕೊಂಡು ನಡಕ್ಕೊಂಡು ಬಪ್ಪಗ ಏನೋ ಎರಡು ಮಿನುಗುವ ಬೆಣ್ಚು ಕಾಣ್ತು, ಮುಂದೆ ನಡೆತ್ತಾ ಎಂತ ಹೇಳಿ ನೋಡ್ತಾ...ಬಿದ್ದಿದು ಗಂಗೆಜ್ಜಿ... ಗಂಗೆಜ್ಜಿಗೆ ಪ್ರಜ್ಞೆ ಇಲ್ಲೆ ,ಆದರೂ ಬೆಂಡೋಲೆ ಹೊಳವದು ನಿಲ್ಸಿದ್ದಿಲ್ಲೆ.

      ಬಿದ್ದ ಗಂಗೆಜ್ಜಿಯ ಎತ್ತಿ,ಪ್ರಥಮ ಚಿಕಿತ್ಸೆ ಕೊಟ್ಟು,ನೆರೆಕರೆಯವಕ್ಕೆಲ್ಲ ತಿಳಿಸಿ, ಮುಂದಿನ ಚಿಕಿತ್ಸೆಗೆ ವೈದ್ಯ ಶ್ಯಾಮರಾಯರಿಂಗೆ ಕರೆ ಮಾಡಿದವು ಕೇಶವ ಜೋಯಿಸರು . ವೈದ್ಯ ಶ್ಯಾಮರಾಯರು ಚಿಕಿತ್ಸಾಲಯಂದ ಬಂದು ಸ್ನಾನಕ್ಕೆ ಬಚ್ಚಲು ಮನೆಗೆ ಹೋಯಿದವು.ಫೋನು ಕರೆ ಬಂದಪ್ಪಗ ವೈದ್ಯ ಪತ್ನಿ ಸುಮಕ್ಕ"ರೀ.. ಫೋನು"ಹೇಳಿ ಜೋರಾಗಿ ಗಂಡನ ಕೂಗಿತ್ತು."ಆತು ಬತ್ತೆ ಈಗ"ಹೇಳಿ ಮೆಲುದನಿಲ್ಲಿ ಹೇಳಿದ್ದು ಸುಮಕ್ಕಂಗೆ ಕೇಳಿದ್ದೋ? ಇಲ್ಲೆಯೋ ?ಗೊಂತಿಲ್ಲೆ.ಪುನಃ ಪದೇ ಪದೇ ಫೋನ್ ಕರೆ ಬಪ್ಪದು ಕೇಳಿ, ಏನೋ ತುರ್ತು ಕರೆ ಆದಿಕ್ಕು ಹೇಳಿ"ರೀ..ಬೇಗ ಮಿಂದಿಕ್ಕಿ ಬನ್ನಿ.ಫೋನ್ ಬಂತು ಹೇಳಿರೆ ಕೇಳ್ತಿಲ್ಯ? "ಹೇಳಿ ದನಿಯೇರಿಸಿತ್ತು.ಶ್ಯಾಮರಾಯರು "ಗಂಟ್ಲು ಹರ್ಕಳಡ್ದೇ...ಬತ್ತಿ"ಹೇಳಿ ತಾನೂ ದನಿಯೇರಿಸಿ,ಬೇಗ ಮಿಂದಿಕ್ಕಿ ಬಂದು ಕರೆ ಸ್ವೀಕರಿಸಿದವು.

      ತುರ್ತು ಕರೆಗೆ ಸ್ಪಂದಿಸಿ ಹೆರಟು ಹೋದವು.ಅಲ್ಲಿಗೆ ವೈದ್ಯ ಶ್ಯಾಮರಾಯರು ತಲುಪೆಕ್ಕಾದರೆ ಮೊದಲೇ..,ಗಂಗೆಜ್ಜಿ ಎಲ್ಲೋರಿಂಗೆ ವಿದಾಯ ಹೇಳಿ ಪರಲೋಕ ಯಾತ್ರೆ ಹೆರಟಿದು.

                  😭

✍️ ಅನಿತಾ ಜಿ.ಕೆ.ಭಟ್.
06-10-2020.
ಚಿತ್ರ: ಹವಿಸವಿ ಕೃಪೆ




ಅಡುಗೆ ಅವಾಂತರ

 


        ರಮಾ ಬೇಗಬೇಗನೆ ಬೆಳಿಗ್ಗೆ ಅಡುಗೆ ಮಾಡುತ್ತಾ ತರಾತುರಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಳು.ಇಂದು ಉದ್ಯೋಗಕ್ಕೂ ಬೇಗನೆ ಹೋಗಬೇಕಾಗಿರುವುದರಿಂದ ಅಡುಗೆ ಕೆಲಸಕ್ಕೆ ಗಂಡ ರಮೇಶನ ಸಹಾಯ ಕೇಳಿದಳು.ರಮೇಶನಂತೂ ಅಮ್ಮಾವ್ರ ಮುದ್ದಿನ ಗಂಡ.ನಗುನಗುತ್ತಲೇ ಸಹಕರಿಸಿ ತರಕಾರಿ ಹಚ್ಚಿ, ತೆಂಗಿನಕಾಯಿ ತುರಿದು ಕೊಟ್ಟ.

"ರೀ...ನಾನೀಗ ಒಲೆಯಲ್ಲಿ ಅನ್ನ ಇಟ್ಟಿದ್ದೇನೆ.ಮೂರು ವಿಷಲ್ ಆದಾಗ ಬೆಂಕಿ ಆರಿಸಿ"ಎಂದು ಹೇಳುತ್ತಾ ಇನ್ನೂ ಮಲಗಿದ್ದ ಪುಟ್ಟ ಮಕ್ಕಳನ್ನು ಎಬ್ಬಿಸಲು ತೆರಳಿದಳು.

ಇಲ್ಲೇ ನಿಂತು ಏನು ಮಾಡಲಿ ..?ಸುಮ್ಮನೆ ಸಮಯ ಹಾಳು.. ವಿಷಲ್ ಆದಾಗ ಬರುವೆ.. ಎಂದುಕೊಂಡು ಗಡ್ಡ ತೆಗೆಯಲು ಹೊರಟ.. ರಮೇಶ. ಗಡ್ಡಕ್ಕೆ ಶೇವಿಂಗ್ ಕ್ರೀಮ್ ಲೇಪಿಸುತ್ತಿದ್ದಾಗಲೇ ರಮಾ ಕೂಗಿದಳು.."ರೀ.. ಕುಕ್ಕರ್ ಸೀಟಿ ಕೂಗಿತಾ.."..ಅಂತ...

"ಇಲ್ಲ. ..ಕಣೇ..ಇನ್ನೂ ವಿಷಲ್ ಹೊಡೆದಿಲ್ಲ"ಎಂದ ರಮೇಶ.. ಸಮಾಧಾನದಿಂದ ಶೇವಿಂಗ್ ಮಾಡುತ್ತಿದ್ದ.ಮಕ್ಕಳನ್ನು ಎಬ್ಬಿಸಿ  ಹಲ್ಲುಜ್ಜಿಸಿ ಸ್ನಾನ ಮಾಡಿಸಿ ಬಂದ ರಮಾ ಕುಕ್ಕರ್ ನಲ್ಲಿ ವಿಷಲ್ ಬಾರದಿದ್ದಕ್ಕೆ ಅನುಮಾನಗೊಂಡು ಅಡುಗೆ ಮನೆಯತ್ತ ಧಾವಿಸಿದಳು..ಅವಸ್ಥೆ ನೋಡಿ ಹೌಹಾರಿದಳು...

ಕುಕ್ಕರ್ ನ ಮುಚ್ಚಳದ ಸಂದಿನಿಂದ ಅನ್ನದಲ್ಲಿದ್ದ ನೀರೆಲ್ಲ ಉಕ್ಕಿ ಒಲೆಯ ಮೇಲೆಲ್ಲ ಚೆಲ್ಲಿ ಕೆಳಗೂ ಪ್ರವಾಹ ಬಂದಿತ್ತು.ಅನ್ನ ತಳಹಿಡಿದು ಸೀದು ವಾಸನೆ ಬರಲಾರಂಭಿಸಿತ್ತು .

"ಅಲ್ರೀ...ನೀವಾದ್ರೂ ನೋಡೋದಲ್ವ..ಏನು ವಿಷಲ್ ಬಂದಿಲ್ಲ..ವಾಸನೆ ಬರ್ತಾ ಇದೆ ಅಂತ... ನೋಡಿ ಏನಾಗೋಯ್ತು ..ಮೊನ್ನೆನೇ ಹೇಳಿದ್ದೆ ನಿಮ್ಗೆ ಹೊಸ ಗ್ಯಾಸ್ಕಿಟ್ ತನ್ನಿ ಅಂತಾ.. ಹಳೇದು ಈಗ ಸರಿ ಭದ್ರವಾಗಿ ನಿಲ್ಲೋದಿಲ್ಲ.. ಅಂತಾ...ತಂದ್ರಾ..ಇಲ್ಲ... ಎಲ್ಲಾ ನನ್ನ್ ಕರ್ಮ...ಈ ಅನ್ನ ಉಣ್ಣೋಕೂ ಆಗಲ್ಲ.. ಬೇರೆ ಮಾಡಲು ಸಮಯವಿಲ್ಲ..."ಎಂದು ಗೊಣಗಿಕೊಂಡಳು ... ಪ್ರೀತಿಯ ಗಂಡನ ಮೇಲೆ ಯಾವತ್ತಿನಿಂದ ತುಸು ಹೆಚ್ಚೇ ರೇಗಾಡಿದಳು... ರಮಾ...

ಪೆಚ್ಚಾದ ರಮೇಶ ಮರುಮಾತನಾಡದೆ ದೊಡ್ಡ ಪಾತ್ರೆ ತೆಗೆದುಕೊಂಡು ಅದರಲ್ಲಿ ಅನ್ನ ಮಾಡಲು ಹೊರಟ.ಬಿದ್ದ ಅನ್ನದ ತೆಳಿಯನ್ನು ಒರೆಸಿ ಒಪ್ಪವಾಗಿಸಿದ...ರಮಾ  ಇನ್ನರ್ಧ ಗಂಟೆಯಲ್ಲಿ ತನಗೆ ಹೊರಟಾಗಬೇಕು ಎಂದು ಬೇಗ ಸ್ನಾನಕ್ಕೆ ತೆರಳಿ, ಸ್ನಾನ ಮುಗಿಸಿ ಸೀರೆಯುಟ್ಟು ತಯಾರಾಗಿ ಬಂದಳು.

ಲಗುಬಗೆಯಿಂದ ಅಡುಗೆ ಮನೆಗೊಮ್ಮೆ ಊಟದ ಕೋಣೆಗೊಮ್ಮೆ ಅತ್ತಿಂದಿತ್ತ ಓಡಾಡುತ್ತ ಮಕ್ಕಳಿಗೆ ತಿಂಡಿ ಬಡಿಸುವುದು ಬುತ್ತಿಗೆ ತುಂಬಿಸುವುದು ಮಾಡುತ್ತಿದ್ದಳು..

ಚಿಗುರು ಹಸುರು ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸುವ, ಮಲ್ಲಿಗೆ ಮಾಲೆಯನ್ನು ಉದ್ದಜಡೆಗೆ ಮುಡಿದು ಅತ್ತಿಂದಿತ್ತ ಓಡಾಡುವಾಗ ಬೆನ್ನ ಮೇಲೆ ನರ್ತಿಸುವ ಕೇಶರಾಶಿಯನ್ನು ಕಂಡು ರಮೇಶ ಮಂತ್ರಮುಗ್ಧನಾಗಿದ್ದ.ಆದರೂ ಮುಖದಲ್ಲಿ ಆ ಭಾವವನ್ನು ತೋರ್ಪಡಿಸದೇ ತನ್ನೊಳಗೆ ಅದುಮಿಟ್ಟಿದ್ದನು.

ಅಡುಗೆಮನೆಯಲ್ಲಿ ಇದ್ದ ರಮೇಶನ ಗಂಭೀರವಾದ ಮುಖ ಕಂಡು ರಮಾ "ರೀ....ವೇಳೆಯಾಗುತ್ತಿದೆ . ಬೇಗನೆ ಹೋಗಬೇಕಾಗಿದೆ.. ಆದ್ದರಿಂದ ಸಿಟ್ಟಲ್ಲಿ ನಿಮ್ಮ ಮೇಲೆ ರೇಗಾಡಿದೆ.. ತಪ್ಪು ತಿಳಿಯಬೇಡಿ.. ನನ್ನನ್ನೂ ಸ್ವಲ್ಪ ಅರ್ಥಮಾಡಿಕೊಳ್ಳಿ.."ಎಂದು  ಹೇಳಿ ತನ್ನ ಕೆಲಸದಲ್ಲಿ ಮಗ್ನಳಾದಳು..

ಬೆಂದ ಅನ್ನವನ್ನು ಬಸಿದ ರಮೇಶ.ರಮಾ ಬುತ್ತಿಗೆ ತುಂಬಿಸುತ್ತಿದ್ದಲ್ಲಿ ಇರಿಸಿದ..ಎಲ್ಲರ ಬುತ್ತಿಗೂ ಅನ್ನ ತಂಬಿಸಲು ತೊಡಗಿದಳು ರಮಾ..ಅನಿರೀಕ್ಷಿತವಾಗಿ ತನ್ನ ಹಿಂದಿನಿಂದ ಬಂದ ಕೈಗಳನ್ನು ಕಂಡು ಬೆರಗಾದಳು.ಸುತ್ತಿದ ಕೈಗಳು ಬಿಗಿಯಾದವು. ಅಧರಕಧರವು ಬೆಸೆಯಿತು..ಮಲ್ಲೆ ಮೆಲ್ಲನೆ ಕಂಪು ಬಿರಿಯಿತು.ಕೋಪ ಕ್ಷಣದಿ ಕರಗಿತು.. ಮನವು ಒಂದಾಗಿ ಹಿತವಾಗಿ ಪಲ್ಲವಿಸಿತು.. 

"ರೀ...ನಿಮಗೇನು...ಹೇಳಿದರೆ ತಿಳುಯುವುದೇ ಇಲ್ಲ...ನಾನೀಗ ಐದೇ ನಿಮಿಷದಲ್ಲಿ ಮನೆಯ ಗೇಟು ದಾಟಿಬಿಡಬೇಕು..ಈಗ ಬಿಡಿ.."ಎನ್ನುತ್ತಾ ಮೆಲ್ಲಗೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಳು..ಅನುರಾಗ ಬಂಧನ ಮತ್ತಷ್ಟು ಗಾಢವಾಗಿ ಬೆಸೆಯಿತು..

ಅಷ್ಟರಲ್ಲಿ ಮಕ್ಕಳು "ಅಮ್ಮಾ ನಮಗೆ ಇನ್ನೂ ಸ್ವಲ್ಪ ತಿಂಡಿ ಬಡಿಸು" ಎಂದು ಕೂಗಿಕೊಂಡಾಗ ರಮೇಶ ವಾಸ್ತವಕ್ಕೆ ಬಂದು ತೋಳು ಸಡಿಲಿಸಿದ..

ತಿಂಡಿ ಬಡಿಸಿ ..."ಮಕ್ಕಳೇ ನೀವು ಸಮಾಧಾನದಿಂದ ತಿಂಡಿ ತಿಂದು ಅಪ್ಪನ ಜೊತೆಗೆ ಶಾಲೆಗೆ ತೆರಳಿ "ಎಂದು ಮಕ್ಕಳಿಗೆ ಹೇಳಿ ರಮಾ ತಾನು ಅರ್ಧಂಬರ್ಧ ತಿಂಡಿ ತಿಂದು ಬ್ಯಾಗ್ ಹೆಗಲಿಗೇರಿಸಿ ಹೊರಟು ನಿಂತಾಗ ರಮೇಶ ಎವೆಯಿಕ್ಕದೆ ನೋಡುತ್ತಲೇ ನಿಂತ..ರಮಾ ಕಣ್ಣ ದೃಷ್ಟಿಯಿಂದ ಮರೆಯಾಗುವವರೆಗೂ..

 ✍️... ಅನಿತಾ ಜಿ.ಕೆ.ಭಟ್

06-10-2020.

ಚಿತ್ರ :ಹವಿಸವಿ ಕೃಪೆ