Sunday, 25 October 2020

ಯಾವ ತರುವು ಆವ ಲತೆಗೋ... ಅಧ್ಯಾಯ-೧

 


ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
                       💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೧

              ಅಂದು ಪಾವನಾಳಿಗೆ ಎಂದಿನಿಂದ ಬೇಗನೇ ಎಚ್ಚರವಾಗಿತ್ತು. ಮೆಲ್ಲನೆ ಕಿಟಿಕಿಯ ಪರದೆ ಸರಿಸಿ ಇಣುಕಿದಳು. ಹುಣ್ಣಿಮೆಯ ಚಂದಿರ ಅವಳನ್ನು ನೋಡಿ ನಸುನಕ್ಕ. ತಣ್ಣನೆಯ ಗಾಳಿಯು ಬೀಸಿದಾಗ ಮನವು ಪ್ರಫುಲ್ಲವಾಯಿತು. ಇನ್ನೂ ಅರ್ಧ ಗಂಟೆ ಇದೆ ಅಲಾರಾಂ ಹೊಡೆದುಕೊಳ್ಳುವುದಕ್ಕೆ ಅಂತ ಹೊದಿಕೆಯೆಳೆದು ಸುಮ್ಮನೆ ಮಲಗಿಕೊಂಡಳು. ಬಲಗಡೆ ಮಲಗಿದ್ದ ಓಜಸ್'ನ ಕಾಲುಗಳು ಅವಳ ಮೇಲೆ ಬರಲು ಹವಣಿಸುತ್ತಿದ್ದವು. ಎಡಮಗ್ಗುಲಲ್ಲಿ ಯಶಸ್ವಿ ಕಾಲು ದಿಂಬಿನ ಮೇಲಿಟ್ಟು ತಲೆ ಕೆಳಭಾಗದಲ್ಲಿ ಇಟ್ಟು ಮಲಗಿದ್ದಳು. ಇಬ್ಬರನ್ನೂ ಹರಸಾಹಸಪಟ್ಟು ಸರಿಯಾಗಿ ಮಲಗಿಸಿದಳು. ತಾನೂ ಮಗ್ಗುಲು ಬದಲಾಯಿಸಿ ಮಲಗುವ ಪ್ರಯತ್ನ ಮಾಡಿದಳು. ಆಗಷ್ಟೇ ಬಿದ್ದ ಕನಸು ಅವಳಲ್ಲಿ  ಯೋಚನಾ ಲಹರಿಯನ್ನು ಹರಿಯಬಿಟ್ಟಿತ್ತು. ನಿದ್ದೆ ಸುಳಿಯುವ ಯಾವ ಲಕ್ಷಣಗಳೂ ಕಾಣಿಸದೆ ಸುಮ್ಮನೆ ಮಲಗುವುದಕ್ಕಿಂತ ಮನೆಕೆಲಸಕಾರ್ಯಗಳನ್ನು ಮಾಡೋಣ ಎಂದು ರಾಮ ರಾಮ ಎನ್ನುತ್ತಾ ಎದ್ದಳು.

          ಎದ್ದು ಹಲ್ಲುಜ್ಜಿ ಮುಖತೊಳೆದು ಬಂದು ಒಂದು ಲೋಟ ಬಿಸಿ ಬಿಸಿ ಕಾಫಿ ಹೀರಿದರೆ ಒಂದು ಸ್ಫೂರ್ತಿಯೇ ಬೇರೆ ಎಂದುಕೊಂಡು ಕಾಫಿ ಮಾಡಲು ಫ್ರಿಡ್ಜ್ ಬಾಗಿಲು ತೆರೆದು ಹಾಲಿನ ಪ್ಯಾಕೆಟ್ ಹೊರತೆಗೆದಳು. ಹಾಲು ಪಾತ್ರೆಗೆ ಹಾಕಿ ಕುದಿಯಲು ಇಟ್ಟವಳು ಮೆಲ್ಲನೆ ಹಾಡೊಂದನ್ನು ಗುನುಗುತ್ತಾ ಕಿಟಕಿಯಿಂದಾಚೆ ನೋಡತೊಡಗಿದಳು. ಕೋಗಿಲೆಗಳು ಇಂಪಾಗಿ ಹಾಡುತ್ತಿದ್ದವು. ರಸ್ತೆಯ ಮೇಲೆ ವಯಸ್ಸಾದ ದಂಪತಿಗಳು ವಾಕಿಂಗ್ ಆರಂಭಿಸಿದ್ದರು. ಈ ಇಳಿವಯಸ್ಸಿನಲ್ಲೂ ಜೊತೆಗೆ ವಾಕಿಂಗ್ ಮಾಡುವ ಸೌಭಾಗ್ಯ. ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು ಭಗವಂತ ಎಂದುಕೊಳ್ಳುತ್ತಾ ದೀರ್ಘವಾಗಿ ಉಸಿರು ತೆಗೆದುಕೊಂಡಳು. ಪಕ್ಕಕ್ಕೆ ಹೊರಳಿದಾಗ ಹಾಲುಕ್ಕಿ ಹದವಾಗಿ ಒಲೆಯ ಮೇಲೆ ಕುಳಿತಿತ್ತು. ಕೂಡಲೇ  ಒಲೆ ಆರಿಸಿದಳು. ಹಾಲುಕ್ಕಿದಂತೆ ನನ್ನ ಜೀವನದಲ್ಲಿ ಸೌಭಾಗ್ಯ ಉಕ್ಕಿದರೆ ಚೆಂದವಿತ್ತು. ದೌರ್ಭಾಗ್ಯೆ ನಾನು ಎಂದು ಒಂದು ಕ್ಷಣ ಭಾವುಕಳಾದಾಗ ಕಣ್ಣಂಚಿನಿಂದ ಹನಿಯು ಜಾರಲು ಅನುಮತಿಯ ಕೇಳಿತ್ತು.

        ಹೀಗೆ ನೋವಾದಾಗಲೆಲ್ಲ ಆಕೆ ಗುನುಗುವ "ಮನದೊಳಗೆ ಮನೆಮಾಡು ಮನೋಹಾರಿ ರಾಮ, ಒಳಗಿಳಿದು ಕೊಳೆತೊಳೆದು ಬೆಳಗೆನ್ನ ರಾಮ" ಎನ್ನುವ ಸಾಲನ್ನು ಭಕ್ತಿಯಿಂದ ಮತ್ತೆ ಮತ್ತೆ ಅನುಭವಿಸಿ ಹಾಡಿ ತನ್ನೊಳಗಿನ ಚೈತನ್ಯವನ್ನು ಬಡಿದೆಬ್ಬಿಸಿದಳು. ಯಾರಿಲ್ಲದಿದ್ದರೂ ನನ್ನ ಹೃದಯದ ರಾಮ ನನ್ನ ಕೈಬಿಡನು ಎಂಬ ಧೈರ್ಯ ಮೂಡಿ ಮುಖದಲ್ಲೊಂದು ಸಂತೃಪ್ತಿಯ ಹೊನಲು ಹರಿಯಿತು.

           ದಿನನಿತ್ಯದ ಕೆಲಸಕಾರ್ಯಗಳಲ್ಲಿ ಮಗ್ನಳಾದಳು. ತಿಂಡಿ ತಯಾರು ಮಾಡಿ ಮಕ್ಕಳನ್ನೆಬ್ಬಿಸಿ ಹಲ್ಲುಜ್ಜಿಸಿ ಸ್ನಾನ ಮಾಡಿಸಲು ಕರೆದೊಯ್ದಳು. ಸ್ನಾನ ಮಾಡಿ ಬಂದು ಸುಮ್ಮನೆ ಆಟವಾಡುತ್ತಾ ಇದ್ದ ಮಕ್ಕಳನ್ನು "ಬೇಗ ಬೆನಕ ಬೆನಕ ಏಕದಂತ  ಹೇಳಿ ತಿಂಡಿ ತಿನ್ನಲು ಬನ್ನಿ. ಶಾಲೆಗೆ ತಡವಾಗುತ್ತಿದೆ" ಎಂದು ಅವಸರಿಸಿದಳು. ಮಕ್ಕಳನ್ನು ಶಾಲೆಗೆ ಹೊರಡಿಸಿ ಶಾಲಾ ಬಸ್ ಹತ್ತಿಸಲು ಮನೆಬಾಗಿಲಿಗೆ ಬೀಗಜಡಿದು ಲಿಫ್ಟ್ ಬಟನ್ ಒತ್ತಿದರೆ ಅದಿನ್ನೂ ಬರಬೇಕಾದರೆ ಐದು ನಿಮಿಷ ಬೇಕು ಎಂದುಕೊಂಡು ಮೆಟ್ಟಿಲಿಳಿಯುತ್ತಾ ನಡೆದುಕೊಂಡು ಹೋಗೋಣ ಎಂದು ಎರಡು ಮೆಟ್ಟಿಲಿಳಿದಾಗಲೇ ಎದುರಿನಿಂದ ಪ್ರಭಾಕರ ರಾಯರು ಏದುಸಿರು ಬಿಡುತ್ತಾ ಮೆಟ್ಟಿಲೇರುತ್ತಿದ್ದವರು .." ಪಾವನಾ... ಇವತ್ತು ನಮ್ಮಲ್ಲಿ ಗಣಹೋಮ ಶಿವಪೂಜೆ ಇದೆ. ಎರಡು ದಿನದಿಂದ ನಿಮಗೆ ಹೇಳಬೇಕೆಂದು ಪ್ರಯತ್ನ ಪಟ್ಟೆ. ನೀನು ಸಂಪರ್ಕಕ್ಕೆ ಸಿಕ್ಕಿಲ್ಲ. ದೇವರ ಕೃಪೆ ನೋಡು ಪೂಜೆಗೆ ಹೂವು ತರುತ್ತಿರುವಾಗಲೇ ಎದುರು ಸಿಕ್ಕಿದೆ. ಬಿಡುವು ಮಾಡಿಕೊಂಡು ಬಾ. ಮಧ್ಯಾಹ್ನ ಹನ್ನೆರಡು ಗಂಟೆಗೆ ಮಂಗಳಾರತಿ, ನಂತರ ಭೋಜನ. ಸಾವಕಾಶವಾಗಿ ಬಂದು ಆತಿಥ್ಯವನ್ನು ಸ್ವೀಕರಿಸು " ಎಂದು ಸವಿನಯದಿಂದ ಆಮಂತ್ರಿಸಿದರು. ನಗುತ್ತಾ "ಆಗಲಿ. ಬಿಡುವಾದರೆ ಬರುತ್ತೇನೆ" ಎನ್ನುತ್ತಾ ಮೆಟ್ಟಿಲಿಳಿದಳು.

        ಪ್ರಭಾಕರ ರಾಯರು ಪಾವನಾಳ ಮನೆಯಿರುವ ಅಂತಸ್ತಿನಿಂದ ಎರಡು ಅಂತಸ್ತು ಮೇಲಿರುವವರು. ಪಾವನಾಳ ತಂದೆ ತಾಯಿ, ಪ್ರಭಾಕರ ರಾಯರು ಮೂಲತಃ ಕರಾವಳಿಯವರು. ಒಂದೇ ಊರಿನವರೆಂಬ ಬಾಂಧವ್ಯ ಎರಡೂ ಕುಟುಂಬಗಳ ನಡುವೆ ಇತ್ತು.

       ಪಾವನ ಕ್ಲಿನಿಕ್ ಗೆ ಹೊರಡುವಾಗ ಎಂದಿನಂತೆ ಚೂಡಿದಾರ್ ಧರಿಸದೆ, ಲಕ್ಷಣವಾಗಿ ಸರಳವಾದ ಸೀರೆಯುಟ್ಟು ಹೊರಟಳು. ಹೊರಡುತ್ತಿದ್ದಾಗಲೇ ಫೋನ್ ಕರೆ ಬಂದಿತು ಪ್ರಭಾಕರ ರಾಯರದು
"ಪಾವನಾ.. ಕ್ಲಿನಿಕ್ ಗೆ ಹೋಗುವ ಮುನ್ನ ಒಮ್ಮೆ ಮನೆಗೆ ಬಂದು ಹೋಗಮ್ಮ. ಊರಿನಿಂದ ಅಡುಗೆಗೆಂದು ಬಂದ ಹುಡುಗ ವಿಪರೀತ ಜ್ವರದಿಂದ ಬಳಲುತ್ತಿದ್ದಾನೆ"
"ಸರಿ ಮಾವ.. ಇನ್ನು ಐದು ನಿಮಿಷದಲ್ಲಿ ನಿಮ್ಮ ಮನೆಯಲ್ಲಿರ್ತೀನಿ"

       ಯಾವಾಗಲೂ ಚೂಡಿದಾರ್ ಅಥವಾ ಕುರ್ತಾ ಧರಿಸಿ ಕ್ಲಿನಿಕ್ ಗೆ ತೆರಳುತ್ತಿದ್ದ ಪಾವನಾ
ಇತ್ತೀಚೆಗೆ ಕಾರ್ಯಕ್ರಮಗಳಿಗೆ ಹೋಗುವುದಿದ್ದರೆ ಸೀರೆಯುಡಲು ಆರಂಭಿಸಬೇಕೆಂದು ಎರಡು ಸಾದಾ ಕಾಟನ್ ಸೀರೆಕೊಂಡು ಸಿಂಪಲ್ಲಾಗಿ ರವಿಕೆ ಹೊಲಿಸಿಕೊಂಡಿದ್ದಳು. ಬಿಳಿಯಾಗಿದ್ದ ಪಾವನಾ ಪಿಂಕ್ ಬಣ್ಣದ ಕಾಟನ್ ಸೀರೆಯಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಳು. ಹೊರಟು ಪ್ರಭಾಕರ ಮಾವನ ಮನೆಗೆ ತೆರಳಿದಳು. ಬಾಗಿಲಲ್ಲೇ ಮಾವ ಅತ್ತೆ ಸ್ವಾಗತಿಸಿ "ಬಾರಮ್ಮ ಪಾವನಾ.. ತಿಂಡಿ ಕಾಫಿ ಮಾಡೋಣ"ಎಂದಾಗ "ಬೇಡ ಎಲ್ಲ ಮನೆಯಲ್ಲೇ ಮುಗಿಸಿದೆ. ಯಾರಿಗೋ ಜ್ವರ ಅಂದ್ರಲ್ಲ. ನೋಡ್ಕೊಂಡು ಹೋಗೋಣ ಅಂತ ಬಂದೆ"
"ಪಾವನಾ.. ಇಲ್ಲಿ ಅಡುಗೆಗೆಂದು ಬಂದ ಯುವಕ. ಇವನೇ ನೋಡು.. ಜ್ವರದಿಂದ ಬಳಲುತ್ತಿದ್ದಾನೆ. ಆದರೂ ಪಾಪ ಬೆಳಿಗ್ಗೆ ಎದ್ದು ಕೆಲಸ ಆರಂಭಿಸಿದ್ದಾನೆ" ಎಂದಾಗ ಯುವಕನತ್ತ ದೃಷ್ಟಿಹರಿಸಿದಳು ಪಾವನಾ.

        ಸುಮಾರು ಮೂವತ್ತು ವರ್ಷಗಳ ಒಳಗಿನ ಕಟ್ಟುಮಸ್ತಾದ ದೇಹದ ಯುವಕನಂತೆ ಕಾಣುತ್ತಿದ್ದ. ಮುಖವು ಜ್ವರದ ತಾಪದಿಂದ ಬಳಲಿದಂತಿದ್ದರೂ ಸೌಮ್ಯತೆ ಎದ್ದು ಕಾಣುತ್ತಿತ್ತು. ಪ್ರಭಾಕರ ಮಾವನ ಹೆಂಡತಿ ಉಷಾತ್ತೆ "ಸ್ವಲ್ಪ ಇಲ್ಲಿ ಬಾ...ಕುಳಿತುಕೋ.. ನವೀನ್.. ಇವರೇ ಡಾಕ್ಟರ್" ಎಂದು ಕರೆದು ಕುರ್ಚಿಯನ್ನು ತೋರಿಸಿದರು. ಪಾವನಾ ಪರೀಕ್ಷೆ ಮಾಡಿದಳು. ಜ್ವರ ಏರಿತ್ತು. ಜ್ವರವೇರಿ ಕಣ್ಣು ಕೆಂಡದುಂಡೆಯಂತಾಗಿತ್ತು. ಶ್ವಾಸಕೋಶದಲ್ಲಿ ಕಫ ಕಟ್ಟಿತ್ತು. "ಇಷ್ಟು ಜ್ವರ, ಕಫ ಇದ್ದಾಗಲೂ ವಿಶ್ರಾಂತಿ ಪಡೆಯುವುದು ಬಿಟ್ಟು ಕೆಲಸ ಮಾಡುತ್ತೀರಲ್ಲ ನವೀನ್" ಎಂದು ಪಾವನಾ ಕೇಳಿದಾಗ "ಎಲ್ಲ ಹೊಟ್ಟೆಪಾಡಿಗೆ ಮೇಡಂ.. ಸ್ವಲ್ಪ ಜಾಸ್ತಿ ಸಂಪಾದನೆಯಿದೆ ಬೆಂಗಳೂರಲ್ಲಿ ಅಂತ ಹದಿನೈದು ದಿನ ಅಡುಗೆ ಕೆಲಸವನ್ನು  ಅಡಿಗೆ ವೆಂಕಣ್ಣನ ಜತೆ ಮಾಡೋಣ ಅಂತ ಬಂದರೆ ಹೀಗೆ ಜ್ವರ ಬರಬೇಕಾ?" ಎಂದು ಹೇಳಿ ಸಪ್ಪಗಾದನು. ಜ್ವರದ ಮಾತ್ರೆ, ಆಂಟಿಬಯೋಟಿಕ್, ಕಫದ ಔಷಧಿಗಳನ್ನು ಕೊಟ್ಟು ಎರಡು ದಿನ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದಳು. "ಸರಿ ಮೇಡಂ" ಎಂದು ತಲೆಯಲ್ಲಾಡಿಸಿದ ನವೀನ್.

       ಇವರಿಗೆ ರೆಸ್ಟ್ ತೆಗೆದುಕೊಳ್ಳಿ ಎಂದು ಉಸುರುವುದು ಸುಲಭ. ನಮ್ಮಂತಹ ಅಡುಗೆ ಭಟ್ಟರಿಗೆ ವಿಶ್ರಾಂತಿ ಎಲ್ಲಿಂದ? ಭ್ರಾಂತಿ..!
ಈಗ ದಿನದ ಇಪ್ಪತ್ತೆರಡು ಗಂಟೆ ನಾನು ದುಡಿಯಲೇ ಬೇಕು. ಈಗಲೇ ನಮಗೆ ಸಂಪಾದನೆಯ ಸೀಸನ್. ವಿಶ್ರಾಂತಿ ತೆಗೆದುಕೊಂಡು ಕೂತರೆ ಮತ್ತೆ ಮಳೆಗಾಲದಲ್ಲಿ ಇಂತಹ ಸಂಪಾದನೆ ಬೇಕೆಂದರೂ ಸಿಗಲಾರದು.
ಸರಿಯಾಗಿ ನಿದ್ದೆಯಿಲ್ಲ. ಒಲೆಯ ಮುಂದೆ ಪದಾರ್ಥಗಳು ಬೇಯುವುದರೊಂದಿಗೆ ನಾವೂ ಬೇಯುತ್ತೇವೆ. ಆದರೂ ಅಡುಗೆ ರುಚಿಯಾಗದಿದ್ದರೆ ಮೊದಲು ತೆಗಳುವುದು ಅಡುಗೆಭಟ್ಟರನ್ನೇ. ನಮ್ಮ ಗೋಳು ಯಾರಿಗೂ ಅರ್ಥವಾಗಲಾರದು. ಆದರೆ ಸಮಾರಂಭದ ಅಡುಗೆ ನನಗೆ ನಿತ್ಯದ ಕಾಯಕವಲ್ಲವಲ್ಲ. ಹದಿನೈದು ದಿನ ಇದ್ದು ಊರಿಗೆ ಮರಳುವವನು ಬೇಗನೆ ಖಾಲಿಕೈಯಲ್ಲಿ ಮರಳುವಂತಾದರೆ ಮಾತ್ರ ಬೇಸರ ಎಂದು ತನ್ನಲ್ಲೇ ಅಂದುಕೊಂಡು ಆಕೆ ಕೊಟ್ಟ ಮಾತ್ರೆಯನ್ನು ನುಂಗಿದನು.

       ಉಷಾತ್ತೆ ಕೊಟ್ಟ ಕಾಫಿ ಹೀರಿ ಕ್ಲಿನಿಕ್ ಗೆ ತೆರಳಿದಳು ಪಾವನಾ. ಮನಸ್ಸಿನ ತುಂಬಾ ನವೀನ್ ಬಗ್ಗೆ ಅನುಕಂಪ ತುಂಬಿತ್ತು. ದೂರದೂರಿನಿಂದ ಸ್ವಲ್ಪ ಜಾಸ್ತಿ ಸಂಪಾದನೆ ಬೆಂಗಳೂರಿನಲ್ಲಿ ಆಗಬಹುದು ಎಂದು ಬಂದು ಇಲ್ಲಿ ಅನಾರೋಗ್ಯ ಅನುಭವಿಸಿದರೆ.. ಪಾಪ..!! ದುಡಿಯೋದೂ ಕಷ್ಟ, ವಿಶ್ರಾಂತಿ ಪಡೆದುಕೊಳ್ಳುವುದು ಮತ್ತೂ ಕಷ್ಟ. ನಾನಂದುಕೊಳ್ಳುತ್ತಿದ್ದೆ ನನಗೊಬ್ಬಳಿಗೇ ದೇವರು ನೋವು ಕೊಟ್ಟುಬಿಟ್ಟ ಅಂತ. ನನಗಿಂತಲೂ   ಕಷ್ಟಪಡುವವರು ಜಗತ್ತಿನಲ್ಲಿದ್ದಾರೆ ಎಂದು ಯೋಚಿಸುತ್ತಾ ತನ್ನ ಕುರ್ಚಿಯಲ್ಲಿ ಆಸೀನಳಾದಳು ಪಾವನಾ. " ಯಸ್..ಕಮಿನ್" ಎಂದು ಹೇಳಿ ರೋಗಿಗಳ ಪರೀಕ್ಷೆ ಮಾಡಿ ಔಷಧ ಕೊಡತೊಡಗಿದಳು..

      ಮಧ್ಯಾಹ್ನ ಗಂಟೆ ಒಂದು ಆದಾಗ ರೋಗಿಗಳ ಸಂಖ್ಯೆ ಇಳಿಮುಖವಾಯಿತು. ಇನ್ನು ಪೂಜಾ ಕಾರ್ಯಕ್ರಮಕ್ಕೆ ಹೊರಡಬೇಕು ಅನ್ನುವಷ್ಟರಲ್ಲಿ ಒಂದು ಎಳೆಯ ಜೋಡಿ ಬಂದಿತ್ತು. "ಡಾಕ್ಟ್ರೇ.. ಇವಳಿಗೆ ವಾಂತಿ ಮಾತ್ರೆ ಕೊಡ್ರೀ" ಅಂದ ಆಕೆಯ ಗಂಡ.
ಹೆಣ್ಣುಮಗಳನ್ನು ಒಳಕರೆದು ಪರೀಕ್ಷೆ ಮಾಡಿದ ಪಾವನಾ "ಹಾಗೆಲ್ಲ ವಾಂತಿ ಮಾತ್ರೆ ಕೊಡಿ ಅಂತ ಕೇಳಬಾರದು. ಏನು ಖಾಯಿಲೆ ಅಂತ ಗೊತ್ತಿಲ್ಲದೆ  ಸ್ವಯಂ ಔಷಧ ಪ್ರಯೋಗ ಮಾಡಕೂಡದು"
"ಮತ್ತೇನ್ರೀ.. ಎರಡು ದಿನದಿಂದ ಬರೀ ವಾಂತೀನೇ ಮಾಡ್ತಾಳ್ರೀ"
"ಅದಕ್ಕೆ ಏನು ಕಾರಣ ಎಂದು ಪರೀಕ್ಷಿಸಿ ವೈದ್ಯರು ಔಷಧಿಗಳನ್ನು ಕೊಡುವುದು"
"ಹೂಂ.. ಡಾಕ್ಟ್ರೇ.. ನನ್ ಹೆಂಡ್ತಿಗೆ ಈಗ ಯಾವ ರೋಗ ಬಂದೇತಿ? ಅದನ್ನಾದರೂ ಹೇಳಿ.."

     ಪಾವನಾ ನಗುತ್ತಾ "ಅವಳಿಗೆ ಯಾವ ಕಾಯಿಲೇನೂ ಬಂದಿಲ್ಲಪ್ಪಾ"
"ನೀವೇ ಹಿಂಗಂದ್ರೆ ಹೇಗೆ ಡಾಕ್ಟ್ರಮ್ಮಾ?"
"ಹೌದು. ಕಾಯಿಲೆಯಿಂದ ವಾಂತಿ ಮಾಡ್ತಿಲ್ಲ. ಅವಳು ಗರ್ಭಿಣಿ ಆಗಿದ್ದಾಳೆ. ಈಗ ಆರಂಭದಲ್ಲಿ ಸ್ವಲ್ಪ ವಾಕರಿಕೆ, ಸುಸ್ತು ಎಲ್ಲ ಸಾಮಾನ್ಯ"
"ಹೌದೇನ್ರಿ.. ಮೇಡಮ್ಮೋರೆ" ಎಂದವನ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು.
ಆಕೆಗೆ ಅಗತ್ಯವಾದ ಪೌಷ್ಟಿಕಾಂಶದ ಮಾತ್ರೆಗಳನ್ನು ಕೊಟ್ಟು ಕಳುಹಿಸಿಕೊಟ್ಟು ಕ್ಲಿನಿಕ್ ಬಾಗಿಲು ಹಾಕಿ ಕಾರು ಚಲಾಯಿಸಿದಳು ಪಾವನಾ.

      ಆಗಲೇ ಗಂಟೆ ಒಂದೂ ಮುಕ್ಕಾಲಾಗಿತ್ತು. ಕಾರ್ಯಕ್ರಮದ ಮನೆಯಲ್ಲಿ ಊಟವೂ ಆಗಿರುತ್ತದೆ. ಆದರೂ ಹೋಗದಿದ್ದರೆ ಅವರಿಗೆ ಸಮಾಧಾನವಾಗದು ಎಂದು ಒಳಹೋದಳು ಪಾವನಾ..ಒಳಗಡಿಯಿಡುತ್ತಲೇ "ಪಾವನಾ.. ಬಾರಮ್ಮ" ಎಂದು ಪ್ರೀತಿಯಿಂದ ಸ್ವಾಗತಿಸಿ, ದೇವರ ತೀರ್ಥ ಪ್ರಸಾದ ಕೊಟ್ಟರು ಪ್ರಭಾಕರ ರಾಯರು. ಉಷಾತ್ತೆ ಪಾವನಾಳಿಗೆ ಊಟ ಬಡಿಸುವ ವ್ಯವಸ್ಥೆ ಮಾಡಿದರು. ಅವರಿಗೆ ನವೀನ್ ನೂ ಜತೆಯಾದ.
"ಈಗ ಹೇಗಿದೆ ಜ್ವರ? " ಕೇಳಿದಳು ಪಾವನಾ.
"ಕಡಿಮೆಯಾಗ್ತಿದೆ" ಎಂದಷ್ಟೇ ಚುಟುಕಾಗಿ ಉತ್ತರಿಸಿದ.

ಮುಂದುವರಿಯುವುದು...

✍️ ಅನಿತಾ ಜಿ.ಕೆ.ಭಟ್.
26-10-2020.

ಈ ನೀಳ್ಗತೆಯು ಎರಡು ಭಾಗಗಳಾಗಿ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ.
















2 comments: