"ರಾಕೇಶ್ ಇಲ್ಲಿ ಬಾ ಸ್ವಲ್ಪ ಕುಳಿತುಕೊ.."ಎಂದರು ರಮಾನಂದರಾಯರು ಗಡಿಬಿಡಿಯಲ್ಲಿ ಹೊರಡುತ್ತಿದ್ದ ಮಗನ ಮುಖ ನೋಡಿ.
" ಈಗ ಆಗಲ್ಲಪ್ಪ ನನ್ನ ಫ್ರೆಂಡ್ಸ್ ಬರಲು ಹೇಳಿದ್ದಾರೆ ನಾಳೆ ಮಾತಾಡೋಣ.. " ಎಂದು ಬೆಳ್ಳಂಬೆಳಗ್ಗೆ ಮನೆಯಿಂದ ಹೊರಬಿದ್ದಿದ್ದಾನೆ ರಾಕೇಶ್.
ರಮಾನಂದರಾಯರು ನಿಟ್ಟುಸಿರು ಬಿಟ್ಟು ಅಡುಗೆಮನೆಯಲ್ಲಿ ಬೆಳಗಿನ ಉಪಾಹಾರ ತಯಾರಿಸುತ್ತಿದ್ದ ಸುಶೀಲಮ್ಮನ ಬಳಿ ಬಂದರು.. "ಸುಶೀಲ ಒಂದು ಕಪ್ ಕಾಫಿ ಕೊಡು.. ತಲೆ ನೋಯ್ತಾ ಇದೆ "ಎಂದಾಗ "ನಿಮ್ಮ ತಲೆ ನೋವಿಗೆ ಕಾರಣ ನನಗೆ ಗೊತ್ತಿಲ್ವಾ.. ಸುಮ್ಮನೆ ಕಾಫಿ ಕುಡಿದು ಮತ್ತಷ್ಟು ದೇಹವನ್ನು ಏಕೆ ಹಾಳು ಮಾಡಿಕೊಳ್ಳುತ್ತೀರಿ.."ಎಂದು ಉಪದೇಶ ಮಾಡುತ್ತಲೇ ಒಂದು ಕಪ್ ಕಾಫಿ ಕೈಗಿತ್ತರು.ಮಡದಿಯ ಸ್ವಭಾವವೇ ಹಾಗೆ ..ನನಗೆ ದಿನಕ್ಕೆ ಹತ್ತು ಸಾರಿ ಉಪದೇಶ ಮಾಡದಿದ್ದರೆ ಇವಳಿಗೆ ನಿದ್ದೆಬರದು.ನನ್ನದೇನೋ ಆಯಿತು ಮಗನಿಗೆ ಉಪದೇಶ ಮಾಡಿ ಅವನನ್ನು ಸರಿದಾರಿಗೆ ತರುವಂತೆ ಮಾಡಲು ಸಾಧ್ಯವಾಗಿಲ್ಲ ಇವಳ ಕೈಲಿ. ನನ್ನಿಂದಲೂ ಸಾಧ್ಯವಾಗುತ್ತಿಲ್ಲ.ಯಾವಾಗ ಸರಿಯಾಗುತ್ತಾನೋ ಭಗವಂತನಿಗೇ ಗೊತ್ತು.. ಎಂದುಕೊಳ್ಳುತ್ತಾ ಕಾಫಿ ಹೀರತೊಡಗಿದರು.
"ಸುಶೀಲ ...ಇವತ್ತಾದರೂ ನಮ್ಮ ಹಳ್ಳಿಯ ಖ್ಯಾತ ವೈದ್ಯರ ಪುತ್ರಿಯ ಸಂಬಂಧ ಬಂದಿರುವುದನ್ನು ಹೇಳಿ ಅವನನ್ನು ಒಪ್ಪಿಸಬೇಕು ಎಂದುಕೊಂಡಿದ್ದೆ .. ಆದರೇನು ವಯಸ್ಸಿಗೆ ಬಂದ ಮಗ ಮಾತ್ರ ಒಂದು ಕ್ಷಣವೂ ಮಾತಿಗೆ ಸಿಗುತ್ತಿಲ್ಲವಲ್ಲ."
"ನನಗೂ ಅದೇ ಚಿಂತೆ ಕಾಡುತ್ತದೆ ರೀ.. ಬೆಳ್ಳಂಬೆಳಗ್ಗೆ ಹೊರಡುತ್ತಾನೆ.. ತಡರಾತ್ರಿ ಮನೆಗೆ ಬರುತ್ತಾನೆ.. ಆಫೀಸು-ಕೆಲಸ ಜೊತೆಗೆ ಇನ್ನೇನೇನು ಸಂಪರ್ಕ ಇಟ್ಟುಕೊಂಡಿದ್ದಾನೆ ನನಗಂತೂ ಭಯವಾಗುತ್ತಿದೆ.. "ಎನ್ನುತ್ತಾ ತಾವು ನೊಂದುಕೊಂಡರು.ಮರುದಿನ ರಾಕೇಶನಲ್ಲಿ ವಿಷಯ ಪ್ರಸ್ತಾಪಿಸಲಾಯಿತು. ಹುಡುಗಿಯ ಫೋಟೋ ಕೇಳಿದ. ಫೋಟೋ ನೋಡುತ್ತಲೇ ಎಸ್ ಅಂದುಬಿಟ್ಟ. ರಮಾನಂದ ರಾಯರಿಗೂ ಸುಶೀಲಮ್ಮನವರಿಗೂ ಹಾಲುಪಾಯಸ ಉಂಡಷ್ಟೇ ಸಂತಸವಾಯಿತು.ಅವಳು ಒಳ್ಳೆಯ ಸುಸಂಸ್ಕೃತ ಮನೆತನದ ವಿದ್ಯಾವಂತ ಹೆಣ್ಣುಮಗಳು. ನಮ್ಮ ಮಗ ಹೇಗೋ ಎಂಟೆಕ್ ಅಂತ ಡೊನೇಶನ್ ಕೊಟ್ಟು ಓದು ಮುಗಿಸಿಬಿಟ್ಟಿದ್ದ. ನಮ್ಮದೇ ಉದ್ಯಮವನ್ನು ನೋಡಿಕೊಳ್ಳುತ್ತಿದ್ದ.ಅಂತಹವನಿಗೆ ಪ್ರತಿಭಾವಂತ ಹೆಣ್ಣುಮಗಳು ಸಿಗುವುದು ನಮ್ಮ ಸೌಭಾಗ್ಯವಲ್ಲದೆ ಮತ್ತೇನು. ಎಂದುಕೊಳ್ಳುತ್ತಾ ಸಂಬಂಧವನ್ನು ಮುಂದುವರಿಸಿದರು.
ಕೆಲವೇ ತಿಂಗಳುಗಳಲ್ಲಿ ನವ್ಯ ಮನೆಗೆ ಕಾಲಿಟ್ಟಳು.ಆರಂಭದಲ್ಲಿ ಜೀವನ ಚೆನ್ನಾಗಿ ಸಾಗುತ್ತಿತ್ತು.ಬಹಳ ಮೋಜಿನಿಂದ ಹನಿಮೂನ್ ಮುಗಿಸಿಕೊಂಡು ಬಂದರು.ರಾಕೇಶನಿಗೆ ಆಗಾಗ ಪಾರ್ಟಿಗಳಿಗೆ ಹೋಗುವ ಅಭ್ಯಾಸ.ಒಂದೆರಡು ಸಲ ಅವನ ಜೊತೆ ಹೋದ ನವ್ಯಾಳಿಗೆ ಅದು ಹಿಡಿಸದೇ.." ನಾನು ಬರುವುದಿಲ್ಲ" ಎನ್ನತೊಡಗಿದಳು.ಕೊನೆಗೆ ಅವನು ಕೇಳುವುದನ್ನು ಬಿಟ್ಟ.ನವ್ಯಾ ವೈದ್ಯಕೀಯ ವೃತ್ತಿ ಮಾಡುತ್ತೇನೆಂದರೆ "ಈಗಲೇ ಅವಸರವೇನು" ಎಂಬ ಉತ್ತರ.ನಂತರ "ಮಗುವಾದ ಮೇಲೆ ಮಾಡು" ಎಂದ ರಾಕೇಶ... ಮಗುವಾದ ಮೇಲೆ "ವೃತ್ತಿ ನಮಗೆ ಅನಿವಾರ್ಯವಲ್ಲ... ಯಾರ್ಯಾರ ಜೊತೆಯೋ ಮೈಮುಟ್ಟಿ ಮಾತನಾಡುವುದು ಚೆನ್ನಾಗಿರಲ್ಲ" ಎಂಬ ಸುಶೀಲಮ್ಮ.
ಒಂದು ದಿನ ಕೆಲಸದಾಕೆ ಶಾಂತಮ್ಮ "ಅಕ್ಕಾ ಇದೇನು ನಿಮ್ಮ ಯಜಮಾನರ ಪ್ಯಾಂಟಿನ ಜೇಬಿನಲ್ಲಿ ಕಾಂಡೋಮ್.."ಎಂದು ತೋರಿಸಿದಾಗ ಕುಸಿದಳು ನವ್ಯಾ.ರಾಕೇಶನನ್ನು ಕೇಳಿದರೆ ಮೂಗಿನ ತುದಿಯಲ್ಲಿ ಸಿಟ್ಟು. "ಏನು ನೀನು ನನ್ನ ಮಗನನ್ನೇ ಪ್ರಶ್ನಿಸುತ್ತೀಯಾ...?ಅವನು ಗಂಡು.. ಏನು ಬೇಕಾದರೂ ಮಾಡುತ್ತಾನೆ .ನೀನು ತಗ್ಗಿಬಗ್ಗಿ ನಡೆ..ಈಗಿನ ಹೆಣ್ಣುಮಕ್ಕಳೇ ಹೀಗೆ.. ವಿದ್ಯೆ ಮಾತ್ರ..ವಿನಯವಿಲ್ಲ."ಎಂದು ಮಗನನ್ನೇ ಸಮರ್ಥಿಸಿದರು ಅತ್ತೆ..ರಾಕೇಶ ಹಿಗ್ಗಾಮುಗ್ಗಾ ಥಳಿಸಿದ.ಅವಳು ಎಂದೂ ಅವನ ದಾರಿಗಡ್ಡ ಬರಬಾರದು ಎಂಬುದು ಅವನ ಆಶಯ.
ರಮಾನಂದ ರಾಯರು ಕಷ್ಟಪಟ್ಟು ಓದಿ ನಗರಕ್ಕೆ ಬಂದಿದ್ದರು.ಆರಂಭದಲ್ಲಿ ಅವರಿವರ ಬಳಿ ಕೆಲಸ ಮಾಡಿ ನಂತರ ತನ್ನದೇ ಆದ ಉದ್ಯಮವನ್ನು ಆರಂಭಿಸಿದರು.ವ್ಯವಹಾರದಲ್ಲಿ ಚಾಣಾಕ್ಷರಾಗಿದ್ದ ರಾಯರು ಬಹಳ ಬೇಗನೆ ಪ್ರಗತಿ ಸಾಧಿಸಿದರು.ಹಗಲಿರುಳೂ ಉದ್ಯಮದ ಬಗ್ಗೆಯೇ ಯೋಚಿಸುತ್ತಾ ಕುಟುಂಬದ ಬಗ್ಗೆ ಗಮನ ಕಡಿಮೆಯಾಗಿತ್ತು.ಸುಶೀಲಮ್ಮನೇ ಮನೆ ವ್ಯವಹಾರ ನೋಡಿಕೊಳ್ಳುತ್ತಿದ್ದರು.ರಾಕೇಶನಿಗೆ ಧಾರಾಳವಾಗಿ ದುಡ್ಡು ತಂದೆಯಿಂದ ಸಿಗುತ್ತಿತ್ತು.ಗೆಳೆಯರ ಬಳಗವೂ ದೊಡ್ಡದಾಯಿತು.ಸಣ್ಣಪುಟ್ಟ ಚಟಗಳೂ ಅಂಟಿಕೊಂಡವು.ತಾಯಿ ಸುಶೀಲಮ್ಮ ಮಗನನ್ನು ಸರಿಪಡಿಸಲು ಗಮನಕೊಡದೇ ತನ್ನ ಒಂಟಿತನವನ್ನು ಮರೆಯಲೆಂದು ಕ್ಲಬ್ ,ಗೆಳತಿಯರೆಂದು ಸುತ್ತುತ್ತಿದ್ದರು.ಅವನು ದಾರಿತಪ್ಪುತ್ತಲೇ ಹೋದ.ನಂತರ ಎಚ್ಚೆತ್ತ ತಾಯಿ ತಿದ್ದಹೊರಟರೆ ಮಗ ತಿದ್ದಿಕೊಳ್ಳುವ ಹಂತ ದಾಟಿದ್ದ.ತಂದೆಯ ಮಾತೂ ನಗಣ್ಯವಾಗಿತ್ತು.ಮದುವೆಯಾದ ಮೇಲೆ ಮಗ ಸರಿಹೋದಾನು ಎಂಬ ಭರವಸೆಯಿತ್ತು.
ಆರಂಭದಲ್ಲಿ ಹಾಗೆಯೇ ಆಗಿತ್ತು ಕೂಡ.ಆದರೆ ಅವರ ಸಂತಸ ಹೆಚ್ಚು ಸಮಯ ಉಳಿಯಲಿಲ್ಲ.ಮಗ ಪುನಃ ಮೊದಲಿನ ಅಭ್ಯಾಸಗಳಿಗೆ ಜೋತು ಬಿದ್ದ.ಉದ್ಯಮವನ್ನು ನಾನೇ ನೋಡಿಕೊಳ್ಳುತ್ತೇನೆಂದು ತಂದೆಯನ್ನು ಮನೆಯಲ್ಲೇ ಉಳಿಯುವಂತೆ ಮಾಡಿದ.ಆಫೀಸಿಗೆ ಎಳೆಯ ವಯಸ್ಸಿನ ಯುವತಿಯರನ್ನೇ ಹೊಸದಾಗಿ ಸೇರಿಸಿಕೊಳ್ಳತೊಡಗಿದ.ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದ..ನವ್ಯಾ ಕೇಳಿದರೆ ಸಿಡುಕಿನಿಂದ "ಬಿಸ್ನೆಸ್ ಅಂದರೆ ಸುಮ್ಮನೇನಾ.. ಮೀಟಿಂಗ್ ರಾತ್ರಿ ಹೊತ್ತಿನಲ್ಲಿ ಮಾಡಬೇಕಾಗುತ್ತದೆ.".ಎಂದೆಲ್ಲ ಸಾಬೂಬು.ಮಗದೊಮ್ಮೆ ಬಲವಾದ ಏಟಿನ ಉತ್ತರ.ಹೀಗೆ ದಾಂಪತ್ಯ ಕಲಹ ಸಾಗುತ್ತಿತ್ತು.ಅವನ ಕ್ರೌರ್ಯಕ್ಕೆ ಅವಳು ಬಲಿಯಾಗುತ್ತಿದ್ದಳು.ಪ್ರೀತಿಯು ತೆರೆಮರೆಗೆ ಸರಿದಿತ್ತು.
ನವ್ಯಾ ತಂದೆತಾಯಿಯಲ್ಲಿ ನೋವು ತೋಡಿಕೊಂಡಾಗ "ವೃತ್ತಿಗಿಂತ ವೈಯಕ್ತಿಕ ಬದುಕು ಮುಖ್ಯ ಮಗಳೇ.. ಸಮಾಜದಲ್ಲಿ ಗೌರವದಿಂದ ಬಾಳಬೇಕಾದರೆ ತಾಳ್ಮೆಯೆಂಬುದು ಹೆಣ್ಣಿಗಿರಲೇಬೇಕು.ದುಡುಕಬೇಡ ."ಎಂಬ ಧೈರ್ಯ ತುಂಬುವ ಮಾತುಗಳು. ಸುಶೀಲಮ್ಮನಿಗೆ ಆಗಾಗ ಮಗನನ್ನು ತಿದ್ದಹೊರಡುವ ಸೊಸೆಯನ್ನು ಕಂಡರಾಗದು.ತನ್ನೆದುರೇ ಮಗನನ್ನು ಆಡುತ್ತಾಳೆಂದು ಏನಾದರೊಂದು ನೆಪ ಹಿಡಿದು ಸೊಸೆಯನ್ನೂ, ಹೆತ್ತವರನ್ನು ಆಡುವುದನ್ನು ಕೇಳಿ ನವ್ಯಾ ಕಿವುಡಿಯಾಗಿಬಿಟ್ಟಿದ್ದಳು.
ಒಂದು ದಿನ ಮನೆಯ ಮುಂದೆ ಆಫೀಸಿನ ನೌಕರರೆಲ್ಲ ಜಮಾಯಿಸಿದ್ದರು.ಎಳೆಯ ವಯಸ್ಸಿನ ಯುವತಿಯೊಬ್ಬಳು ರಾಕೇಶನಿಂದಾಗಿ ಗರ್ಭಿಣಿಯಾಗಿದ್ದಳು."ಎಂತಹ ಕೆಲಸ ಮಾಡಿದ್ದೀರಿ..?" ಎಂದು ಗಂಡನನ್ನು ಏರುದನಿಯವಲ್ಲಿ ಪ್ರಶ್ನಿಸಿದಳು ನವ್ಯಾ."ನನ್ನದೇನೂ ತಪ್ಪಿಲ್ಲ" ಎಂದು ಜಾರಿಕೊಂಡ ರಾಕೇಶ.ಸುಶೀಲಮ್ಮ..."ನೀನು ಒಳಗೆ ಹೋಗು...ನಿನಗೇನು ಕೆಲಸ ಇಲ್ಲಿ...?ಅದೆಲ್ಲ ನಾನು ನೋಡಿಕೊಳ್ಳುತ್ತೇನೆ"ಎಂದರು ನವ್ಯಾಳಲ್ಲಿ..ಪ್ರತಿಭಟನೆಯ ಮುಂದಾಳತ್ವ ವಹಿಸಿದ ನಂಜುಡಯ್ಯನವರನ್ನು ಒಳಗೆ ಕರೆದು ಹಣದ ನಾಲ್ಕು ಕಟ್ಟನ್ನು ಅವರ ಕೈಗಿಟ್ಟರು. ಎಲ್ಲರೂ ಸದ್ದಿಲ್ಲದೇ ಸರಿದರು.ಹಣದ ಹೊಳೆಯಲ್ಲಿ ಎಲ್ಲವೂ ತೊಳೆದು ಹೋಗಿತ್ತು. ನವ್ಯಾಳ ದನಿಯೂ ಹಣದ ಮುಂದೆ ಕ್ಷೀಣಿಸಿತು.
"ಅಲ್ಲಾ..ನೀನೆಂತಹ ಹೆಂಡತಿ..ಯಾರೋ ಬಡ ಹೆಣ್ಣು.. ವಿವಾಹಿತ ಪುರುಷನಿಗೆ ಸೆರಗು ಹಾಸಿ ಈಗ ತಾನು ಗರ್ಭಿಣಿ ಎಂದರೆ ಗಂಡನನ್ನೇ ತಪ್ಪಿತಸ್ಥನಂತೆ ಕಾಣುತ್ತೀಯಲ್ಲ..ಇಂತಹವುಗಳು ಹಣಕ್ಕೆ ಎಂತಹಾ ಕೆಲಸ ಬೇಕಾದರೂ ಮಾಡಿಯಾರು..ಅಲ್ಲ.. ನೀನು ಸರಿಯಾಗಿದ್ದಿದ್ದರೆ, ಅವನ ಬೇಕುಬೇಡಗಳನ್ನು ಅರಿತು ನಡೆಯುತ್ತಿದ್ದರೆ ಇಂತಹವರ ಗಾಳಕ್ಕೆ ಬೀಳುತ್ತಿದ್ದನಾ ನನ್ನ ಮಗ..ನೀನೇ ಸರಿಯಿಲ್ಲ..ಮೊದಲು ತಿದ್ದಿಕೋ..ನನ್ನ ಮಗ ಅಪರಂಜಿ.."ಎಂದಾಗ ಮಾತನಾಡಹೊರಟರೆ ನಾನು ಗಂಡನಿಂದ ಏಟು ತಿನ್ನಡಬೇಕಾದೀತೇ ಹೊರತು ಮತ್ತೇನೂ ಮಾಡಲೂ ಸಾಧ್ಯವಿಲ್ಲ.ಕಾಲ ಬಂದೀತು ನನಗೆ ಮಾತನಾಡಲು ಎಂದು ಸುಮ್ಮನಾದಳು.
ರಮಾನಂದ ರಾಯರು ಮಗನನ್ನು ಕರೆದು ವಿಚಾರಿಸಿಕೊಂಡರು."ನನ್ನದೇನೂ ತಪ್ಪಿಲ್ಲ ಅಪ್ಪಾ..ಅವಳೇ ಮುಂದುವರಿಯುತ್ತಾ ಬಂದವಳು..ನಂಜುಡಯ್ಯನವರ ಸಹಕಾರವೂ ಇತ್ತು.."
"ನೋಡು ರಾಕೇಶ..ನೀನಾದರೂ ಸುಳ್ಳು ಹೇಳಬಲ್ಲೆ.ಆದರೆ ನಂಜುಡಯ್ಯನವರು ಸುಳ್ಳು ಹೇಳಲಾರರು ಎಂಬ ವಿಶ್ವಾಸ ನನಗಿದೆ.ಅವರು ನಾನು ಉದ್ಯಮ ಆರಂಭಿಸಿದಾಗಿನಿಂದಲೂ ಜೊತೆಗಿದ್ದವರು.ಉದ್ಯಮದ ಯಶಸ್ಸಿನಲ್ಲಿ ಅವರ ಪಾತ್ರವೂ ಇದೆ.ಕೆಲಸಗಾರರೆಂದರೆ ಕುಟುಂಬದ ಸದಸ್ಯರಂತೆ.ಅವರ ಮೇಲೆ ದೌರ್ಜನ್ಯ ಸಲ್ಲದು.ವೈಯಕ್ತಿಕ ಸುಖಕ್ಕಾಗಿ, ಚಪಲತೆಗಾಗಿ ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ.ನಿನ್ನ ನಡತೆಯನ್ನು ತಿದ್ದಿಕೋ..ಇದರಿಂದ ನಿನಗೇ ಒಳ್ಳೆಯದು. ವಿದ್ಯಾವಂತೆ,ಬುದ್ಧಿವಂತೆ,ರೂಪವಂತೆ ಪತ್ನಿಯಿದ್ದಾಳೆ.ಮುದ್ದಾದ ಮಗುವೂ ಮಡಿಲಲ್ಲಿದೆ.ಮಗುವಿಗೆ ಆದರ್ಶ ತಂದೆಯಾಗಿ ಬಾಳು..ಉದ್ಯಮದಲ್ಲಿ ಸನ್ನಡತೆಯ ಉದ್ಯಮಿ ಎನಿಸಿಕೋ..ಈ ಹುಚ್ಚಾಟಗಳನ್ನೆಲ್ಲ ನಿಲ್ಲಿಸು..ಇಲ್ಲವಾದಲ್ಲಿ ಉದ್ಯಮದ ಆಡಳಿತವನ್ನು ನಾನೇ ಮತ್ತೆ ಕೈಗೆತ್ತಿಕೊಳ್ಳುತ್ತೇನೆ.." ಎಂದು ತಂದೆ ಗಂಭೀರವಾಗಿ ನುಡಿದಾಗ ತಲೆತಗ್ಗಿಸಿ ಹೂಂಗುಟ್ಟಿದ ರಾಕೇಶ..ಒಂದೆರಡು ತಿಂಗಳು ಅಪ್ಪನ ಮಾತಿಗೆ ಬೆಲೆಕೊಟ್ಟು ನಡೆದುಕೊಂಡ. ನಂತರ ಮೊದಲಿನದೇ ಜಾಯಮಾನ ಮುಂದುವರಿಯಿತು.
ಅದೊಂದು ದಿನ ಬೆಳಗ್ಗೆ ಮನೆ ಮುಂದೆ ಪೋಲೀಸರ ಜೀಪು ಬಂದು ನಿಂತಿತ್ತು."ರಾಕೇಶ್ ಎಲ್ಲಿ..?" ಎಂದು ಅಬ್ಬರಿಸಿದರು.ರಾಕೇಶ ಮಾಳಿಗೆಗೆ ಓಡಿ ಅವಿತು ಕುಳಿತಿದ್ದ.ರಮಾನಂದರಾಯರು ಹೊರಬರುತ್ತಿದ್ದಂತೆ "ನೀವು ಒಳಗಿರಿ..ನಾನೇ ಮಾತನಾಡುತ್ತೇನೆ" ಎಂದು ಮುಂದೆ ಬಂದರು ಸುಶೀಲಮ್ಮ."ಮಗ ಮನೆಯಲ್ಲಿಲ್ಲ.ಬಿಸ್ನೆಸ್ ಟೂರ್ ಹೋಗಿದ್ದಾನೆ" ಎಂದರು."ಮೊಬೈಲ್ ಟ್ರ್ಯಾಕ್ ಮಾಡಿದ್ದೇವೆ.ಮನೆಯಲ್ಲೇ ಇದ್ದಾನೆ.". ಎಂದು ಬಂದ ಉದ್ದೇಶ ತಿಳಿಸಿದರು."ಇಲ್ಲಪ್ಲಾ..ನನ್ನ ಮಗ ಒಳ್ಳೆಯವನು.ಅಂತಹ ಕಾರ್ಯ ಅವನು ಮಾಡಲಾರ.ಬಂಗಾರದಂತಹ ಸೊಸೆಯಿದ್ದಾಳೆ.ಸದಾ ಅವಳ ಸೆರಗು ಹಿಡಿದು ಹಿಂದೆಯೇ ಸುತ್ತುತ್ತಾ ಇರುತ್ತಾನೆ.ಅಂತಹದರಲ್ಲಿ ಯುವತಿಯ ಜೊತೆ ಪಾರ್ಟಿಗಳಿಗೆ ಹೋಗುತ್ತಾನೆ ಅಂದರೆ..!! ಸಾಧ್ಯವೇ ಇಲ್ಲ.."ಇದನ್ನೆಲ್ಲ ಪಿಳಿಪಿಳಿ ಕಣ್ಣುಗಳಿಂದ ನೋಡುತ್ತಿದ್ದ ಮೊಮ್ಮಗುವಿನಲ್ಲಿ "ಹೋಗು ಅಮ್ಮನನ್ನು ಬರಹೇಳು" ಎಂದರು..ನವ್ಯಾ ಬಂದಾಗ.. "ಮಗಳೇ.. ನೋಡಮ್ಮ.. ಇವರು ರಾಕೇಶನ ಮೇಲೆ ಏನೇನೋ ಆರೋಪ ಹೊರಿಸುತ್ತಿದ್ದಾರೆ.ಆಫಿಸಿನಿಂದ ಸೀದಾ ಮನೆಗೇ ಬಂದು ನಿನ್ನ ಜೊತೆಗೇ ಇರುವವನನ್ನು ಹೀಗೆನ್ನುತ್ತಿದ್ದಾರೆ.. ನೀನಾದರೂ ಹೇಳು.."ಎಂದು ನಾಟಕೀಯವಾಗಿ ಮಮಕಾರ ತೋರುತ್ತಾ ಹೇಳಿದಾಗ..ನವ್ಯಾ ಆಲೋಚಿಸಿದಳು... ನಾನಂದುಕೊಂಡ ಸಂಶಯ ನಿಜವಾಗಿದೆ.ಪತಿಯನ್ನು ಹಲವಾರು ಬಾರಿ ತಿದ್ದಲು ಪ್ರಯತ್ನಿಸುವಾಗ ನನ್ನನ್ನು ಬೆಂಬಲಿಸಲಿಲ್ಲ,ಎಡವಟ್ಟು ಮಾಡಿದಾಗ ಮಗನನ್ನೇ ಸಮರ್ಥಿಸಿಕೊಂಡರು.ಈಗಲೂ ಅದೇ ರೀತಿ.ಆದರೆ ನನಗಿದು ಗಟ್ಟಿ ನಿರ್ಧಾರ ಕೈಗೊಳ್ಳಲು ಸಕಾಲ. ಎಂದುಕೊಂಡು .."ಹೌದು.ನನ್ನ ಪತಿ ಇಂತಹ ಕೆಲಸ ಮಾಡಿರಬಹುದೆಂಬ ಗುಮಾನಿ ನನಗಿದೆ.ಅವರು ಮಹಡಿಯಲ್ಲಿದ್ದಾರೆ.."ಎಂದು ರಾಕೇಶನನ್ನು ಪೋಲೀಸರಿಗೊಪ್ಪಿಸಿದಳು.
ಮಗನನ್ನು ಪೋಲೀಸರು ಕರೆದೊಯ್ಯುತ್ತಿದ್ದಂತೆ "ನಿನ್ನಂತಹ ಸೊಸೆಯಿದ್ದರೆ ಮನೆ ಹಾಳಾದೀತು.ಗಂಡನನ್ನು ಪೋಲೀಸರ ಕೈಗೊಪ್ಪಿಸಿದೆಯಲ್ಲ ಪಾಪಿ..ನಿನಗೀಗ ತೃಪ್ತಿಯಾಯಿತಾ.. ಪತ್ನಿಯನ್ನು 'ಕಾರ್ಯೇಶು ದಾಸಿ | ಶಯನೇಶು ರಂಭಾ...' ..." ಮಾತು ಮುಂದುವರಿಸುತ್ತಿದ್ದಂತೆಯೇ ಮಧ್ಯದಲ್ಲಿ ತುಂಡರಿಸಿ.."ಆ ಮಾತಿನ ಅರ್ಥ ನನಗೂ ಗೊತ್ತಿದೆ.ಅರ್ಥ ತಿಳಿಯದವರಿಗೆ ತಿಳಿಯಲು ಇದು ಸಕಾಲ "ಎನ್ನುತ್ತಾ ತನ್ನ,ಮಗುವಿನ ಅಗತ್ಯವಸ್ತುಗಳನ್ನು ತೆಗೆದುಕೊಂಡು ಮನೆಯಿಂದ ಹೊರಬಿದ್ದಳು..ತವರುಮನೆಯ ಬಾಗಿಲು ಅವಳಿಗಾಗಿ ತೆರೆದಿತ್ತು.
ಸುಶೀಲಮ್ಮ ಮತ್ತು ರಮಾನಂದ ರಾಯರು ದಿಕ್ಕುತೋಚದಾದರು.ರಾಯರು ಉದ್ಯಮದ ಚುಕ್ಕಾಣಿ ಹಿಡಿದರು.ಹಳ್ಳಹಿಡಿದಿದ್ದ ಉದ್ಯಮವನ್ನು ಮೇಲೆತ್ತಲು ಕಷ್ಟಪಡಬೇಕಾಯಿತು.ಬಂಗಲೆಯಂತಹ ಮನೆಯಲ್ಲಿ ಇಬ್ಬರೇ ಇದ್ದು ಅವರಿಗದು ಪಂಜರದಂತೆ ಭಾಸವಾಯಿತು.ಸುಶೀಲಮ್ಮ ಎಲ್ಲರಲ್ಲೂ ಸೊಸೆಯಿಂದಾಗಿ ಹೀಗಾಯಿತು ಎಂದರೇ ವಿನಃ ಮಗನ ತಪ್ಪನ್ನು ಆಡಲೇಯಿಲ್ಲ.ಆದರೂ ಮನಸ್ಸಾಕ್ಷಿ ಮಾತ್ರ.." ನಿನಗೆ ಅಂದೇ ತಿದ್ದಲು ಅವಕಾಶವಿತ್ತು.ತಿದ್ದಲಿಲ್ಲ.ಸೊಸೆ ತಿದ್ದುವಾಗಲೂ ವಿರೋಧಿಸಿದೆ.ಈಗ ಮಗನೂ ದೂರವಾದ.ಸೊಸೆ ಮೊಮ್ಮಗುವೂ ತಿರುಗಿ ನೋಡುವ ಯೋಚನೆಯಲ್ಲಿಲ್ಲ..ಯಾರಿಗೆ ಕೈ ತೋರಿಸಿ ಏನು ಪ್ರಯೋಜನ "ಎಂದು ಚುಚ್ಚುತ್ತಿತ್ತು..
ಜೊತೆಯಿದ್ದಾಗ ಯಾರನ್ನೂ ಒಳ್ಳೆಯ ರೀತಿಯಲ್ಲಿ ಕಾಣಲಿಲ್ಲ..ಈಗ ತೊರೆದು ಹೋದ ಮೇಲೆ ಕೊರಗಿದರೆ ಮತ್ತೆ ಸಂಬಂಧ ಸರಿಹೋಗುತ್ತದೆಯೇ.. ಎಂದು ಯೋಚಿಸುತ್ತಿದ್ದಂತೆ ಕಂಬನಿ ಹರಿದು ಸುಶೀಲಮ್ಮನ ಸೀರೆಯನ್ನು ತೋಯಿಸಿತ್ತು..
#ಕಾಲ್ಪನಿಕ
✍️.. ಅನಿತಾ ಜಿ.ಕೆ.ಭಟ್.
02-10-2020.
#momspressokannada
#ಒಂದು ಕಥೆ, ಇನ್ನೊಂದು ಆಯಾಮ ಎಂಬ ಸ್ಪರ್ಧೆಗಾಗಿ ಬರೆದ ಬರಹ.
No comments:
Post a Comment