ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನೀಳ್ಗತೆ.
💐💐
ಯಾವ ತರುವು ಆವ ಲತೆಗೋ: ಅಧ್ಯಾಯ ೩
ನವೀನ್ ಎತ್ತಲೋ ನೋಡುತ್ತಾ ಮಲಗಿಕೊಂಡಿದ್ದಾನೆ. ಯಾವುದೋ ಯೋಚನೆಯಲ್ಲಿ ಮುಳುಗಿಹೋಗಿದ್ದಾನೆ. ಟಕ್ ಟಕ್ ದನಿ ಅವನ ಅರಿವಿಗೆ ಬರುತ್ತಿಲ್ಲ. ಮೆಲ್ಲಗೆ ಬಾಗಿಲು ಸರಿಸಿ ಒಳಗಡಿಯಿಟ್ಟರು ಡಾಕ್ಟರ್ ಪಾವನಾ. "ಹಲೋ ನವೀನ್.."ಎಂದಾಗ ಒಮ್ಮಿಂದೊಮ್ಮೆಲೇ ಬೆಚ್ಚಿಬಿದ್ದ ನವೀನ್.
"ಮೇಡಂ.. ನೀವು.. ಇಲ್ಲಿ.."
"ಹೌದು.. ನಾನು ನಿಮ್ಮನ್ನು ಹುಡುಕಿಕೊಂಡು ಬಂದೆ"
"ನಿಮ್ಮನ್ನೇ ನೆನಪಿಸಿಕೊಳ್ಳುತ್ತಿದ್ದೆ"
"ಓಹೋ.. ಹೌದಾ.. ಒಳ್ಳೇದಾಯ್ತು. ಅದೇ ಹೊತ್ತಿಗೆ ನಾನು ಬಂದಿದ್ದು"
ನವೀನ್ ನ ಕಣ್ಣುಗಳು ತುಂಬಿ ಬಂದವು. "ಯಾರೂ ಗುರುತು ಪರಿಚಯವಿಲ್ಲದ ಇಲ್ಲಿ ನಾನು ಒಬ್ಬಂಟಿಯಾಗಿ ಬಿಟ್ಟಿದ್ದೆ. ಅಡುಗೆ ವೆಂಕಣ್ಣ ಕರೆ ಸ್ವೀಕರಿಸಲಿಲ್ಲ. ನಿಮ್ಮ ಫೋನ್ ನಂಬರ್ ಎಲ್ಲೋ ಕಳೆದುಕೊಂಡುಬಿಟ್ಟೆ "
"ಇರಲಿ ಬಿಡಿ.. ಜ್ವರ ಹೇಗಿದೆ ಈಗ?" ಎಂದು ಕೇಳಿ ಪಾವನಾ ಪರೀಕ್ಷಿಸಿದರು. "ಜ್ವರ ಕಡಿಮೆಯಾಗಿದೆ. ಕಫ, ಉಸಿರಾಟದ ತೊಂದರೆಗಳೂ ನಿಯಂತ್ರಣಕ್ಕೆ ಬಂದಿವೆ. ನವೀನ್ ನೀವು ಅಡ್ಮಿಟ್ ಆಗಿದ್ದೇ ಚಿಕಿತ್ಸೆ ಪಡೆಯಬೇಕೆಂದಿಲ್ಲ. ಔಷಧದಲ್ಲೇ ಗುಣವಾದೀತು. ಇಲ್ಲಿದ್ದರೆ ನಾಲ್ಕಾರು ಬ್ಲಡ್ ಟೆಸ್ಟ್, ಚೆಕಪ್, ಟ್ರೀಟ್ಮೆಂಟ್ ಎಂದು ಹೇಳಿ ಮೂರು ದಿನದಲ್ಲಿ ಮೂವತ್ತು ಸಾವಿರ ಬಿಲ್ ಕೈಗಿಡುತ್ತಾರೆ ನವೀನ್" ಎಂದು ಪಾವನಾ ಅಂದಾಗ ನವೀನ್ ಮೌನಿಯಾದ.
"ಏನು ಮಾಡಲಿ ಮೇಡಂ. ಮನೆಗೆ ತೆರಳುವಷ್ಟು ಆರೋಗ್ಯ ಸುಧಾರಿಸಿಲ್ಲ. ಗುರುತು ಪರಿಚಯವಿಲ್ಲದ ಊರು" ಎಂದು ಹೇಳಲು ನಾಲಿಗೆ ತವಕಿಸುತ್ತಿದ್ದರೂ ಸುಮ್ಮನಿದ್ದ. ಅವನ ಮುಖದ ಭಾವವನ್ನು ಓದಿದ ಪಾವನಾ
"ನವೀನ್.. ನೀವೇನೂ ಯೋಚಿಸಬೇಡಿ. ನಮ್ಮ ಮನೆಯಲ್ಲಿ ಉಳಿದುಕೊಳ್ಳಬಹುದು ನಿಮಗೇನೂ ಅಭ್ಯಂತರವಿಲ್ಲದಿದ್ದರೆ"
" ನಿಮಗೆ ಸುಮ್ಮನೆ ತೊಂದರೆಯೇಕೆ ಮೇಡಂ"
"ಹಾಗೇನಿಲ್ಲ.. ನವೀನ್.. ನೀವು ಇಲ್ಲಿದ್ದರೆ ಅನಗತ್ಯವಾಗಿ ಹಣ ಪೀಕಿಸುತ್ತಾರೆ. ಜೊತೆಯಲ್ಲಿ ಯಾರೂ ಇಲ್ಲ ಎಂಬುದೂ ತಿಳಿದಿದೆ. ನಿಮ್ಮ ದುಡಿಮೆಯ ಒಂದು ತಿಂಗಳ ಬೆವರಿನ ಆದಾಯವನ್ನು ಅನಾವಶ್ಯಕವಾಗಿ ಮೂರು ದಿನದಲ್ಲಿ ಕಳೆದುಕೊಳ್ಳಬೇಕಾದೀತು. ಯೋಚನೆ ಮಾಡಿ.."
ಎಂದ ಪಾವನಾಳ ಮಾತಿಗೆ ಒಪ್ಪಿ " ಡಿಸ್ಚಾರ್ಜ್ ಮಾಡುತ್ತಾರಾ ನಮಗೆ ಬೇಕೆಂದಾಗ" ಎಂದು ಮುಗ್ಧವಾಗಿ ಕೇಳಿದ.
."ನಾನು ಮಾತಾಡಿ ನೋಡುತ್ತೇನೆ"ಎಂದ ಪಾವನಾ ಡಾಕ್ಟರ್ ನ ಛೇಂಬರ್ ನತ್ತ ನಡೆದಳು. ಅಲ್ಲಿ ನಿಂತಿದ್ದ ನರ್ಸ್ ಪಾವನಾರನ್ನು ವಿಚಾರಿಸಿಕೊಂಡು ".ಈಗ ಆಗಲ್ಲ ಮೇಡಂ.. ಡಾಕ್ಟರ್ ಇಲ್ಲಿ ಕಾಯ್ತಾ ಇರುವ ಪೇಷೆಂಟ್ ನೋಡಿ ಸೀದಾ ಊಟಕ್ಕೆ ಹೋಗ್ತಾರೆ. ನೀವು ನಾಲ್ಕು ಗಂಟೆಗೆ ಬನ್ನಿ" ಎಂದಳು.
"ಮೇಡಂ.. ಐದೇ ನಿಮಿಷದಲ್ಲಿ ಹೊರಗೆ ಬರ್ತೀನಿ. ಪ್ಲೀಸ್" ಅಂದರು ಪಾವನಾ. ನರ್ಸ್ ಖಡಾಖಂಡಿತವಾಗಿ ಈಗ ಸಾಧ್ಯವಿಲ್ಲ ಎಂದರು..
ಪಾವನಾ ತಾನು ವೈದ್ಯೆ ಎಂದು ಹೇಳಿ ತಾನು ಚಿಕಿತ್ಸೆ ಕೊಡುತ್ತಿದ್ದ ವ್ಯಕ್ತಿ ಇಲ್ಲಿ ದಾಖಲಾಗಿದ್ದಾರೆ. ಆ ಬಗ್ಗೆ ಸ್ವಲ್ಪ ಮಾತನಾಡುವುದಿತ್ತು ಎಂದಾಗ ನರ್ಸ್ "ಸಾರಿ ಮೇಡಂ.. ನೀವು ಡಾಕ್ಟರ್ ಎಂದು ನನಗೆ ಗೊತ್ತಿರಲಿಲ್ಲ. ಡಾಕ್ಟರ್ ನ ಕೇಳಿ ಬರ್ತೇನೆ" ಎಂದು ಛೇಂಬರ್ ನ ಒಳಗೆ ಹೋಗಿ ಸಂಗತಿ ತಿಳಿಸಿದಳು. ಡಾಕ್ಟರ್ ಮೇಡಂ ಅನ್ನು ಒಳಗೆ ಬರಹೇಳಲು ನರ್ಸ್ ಗೆ ಆದೇಶಿಸಿದರು.
ಒಳಗೆ ಬಂದ ಪಾವನಾ.".ಹಲೋ..ಸರ್..ಐ ಯಾಮ್ ಡಾ.ಪಾವನಾ"ಎಂದರು.
"ಓಹ್ ನೈಸ್ ಟು ಮೀಟ್ ಯು. ಮೇಡಂ" ಎಂದು ಕೈಕುಲುಕಿದರು. ಪಾವನಾ ತಾನು ನವೀನ್ ಗೆ ಚಿಕಿತ್ಸೆ ಕೊಡುತ್ತಿದ್ದು ಗುಣಮುಖನಾಗುತ್ತಿದ್ದ, ಅನಿವಾರ್ಯವಾಗಿ ಇಲ್ಲಿಗೆ ದಾಖಲಾದ ಸಂಗತಿಯನ್ನು ಅರುಹಿದರು. ಡಾಕ್ಟರ್ ಪ್ರತಾಪ್ "ನೋ ಮೇಡಂ.. ಅನಗತ್ಯವಾಗಿ ನಾವು ಯಾರನ್ನೂ ಅಡ್ಮಿಟ್ ಮಾಡ್ಕೊಳ್ಳಲ್ಲ. ಬೆಳಿಗ್ಗೆ ಬಹಳ ವೀಕ್ ನೆಸ್ ಮತ್ತು ಫೀವರ್ ಇತ್ತು. ಟ್ರೀಟ್ ಮೆಂಟ್ ಕೊಟ್ಟು ಈಗ ಕಡಿಮೆಯಾಗುತ್ತಿದೆ. ಈಗಲೇ ಡಿಸ್ಚಾರ್ಜ್ ಮಾಡೋದಕ್ಕೆ ಆಗಲ್ಲ ಮೇಡಂ"
"ಹಾಗಲ್ಲ ಸರ್.. ಅವರು ಚೇತರಿಸ್ತಾ ಇದ್ರು. ಔಟ್ ಪೇಷೆಂಟ್ ಆಗಿದ್ದು ಔಷಧ, ಆಹಾರ, ವಿಶ್ರಾಂತಿಯಿಂದ ಗುಣವಾಗಬಹುದು ಎಂದು ನನ್ನ ಅಭಿಪ್ರಾಯ. ಹಾಗಾಗಿ ಡಿಸ್ಚಾರ್ಜ್ ಮಾಡಿಸ್ಕೊಂಡು ಕರ್ಕೊಂಡು ಹೋಗ್ತೀನಿ"
"ಕರ್ಕೊಂಡು ಹೋಗ್ತೀನಿ ಅನ್ನೋದಕ್ಕೆ ನೀವ್ಯಾರು ಮೇಡಂ? ನಿಮ್ಮ ಹತ್ರ ಚಿಕಿತ್ಸೆಗೆ ಬಂದಾಗ ನೀವು ಟ್ರೀಟ್ ಮೆಂಟ್ ಕೊಡೋದು. ನಮ್ಮ ಹತ್ರ ಬಂದಾಗ ನಾವು ಟ್ರೀಟ್ ಮೆಂಟ್ ಕೊಡೋದು. ಅಷ್ಟು ಗೊತ್ತಿದ್ದೂ ಯಾಕ್ರೀ ಮಧ್ಯೆ ನೀವು ಬರೋದು. ನಿಮ್ಮಿಂದ ಗುಣಮಾಡಿಸಲು ಸಾಧ್ಯವಾದ್ರೆ ಇಲ್ಲಿಗ್ಯಾಕೆ ಬರ್ತಿದ್ದ" ಎನ್ನುತ್ತಾ ದನಿ ಏರಿಸಿದರು.
ಪಾವನಾ ಸಮಾಧಾನದಿಂದ "ನೀವೀಗ ಡಿಸ್ಚಾರ್ಜ್ ಮಾಡಲು ಅನುಮತಿ ಕೊಡಿ. ಆ ಪೇಷೆಂಟ್ ಗೆ ನಾನೇ ಚಿಕಿತ್ಸೆ ಕೊಡ್ತೀನಿ"
"ಅದೆಲ್ಲ ಮಾತಾಡೋಕೆ ನೀವ್ಯಾರು? ಅವನ ಅಕ್ಕನಾ ತಂಗೀನಾ?"
"ಸಹೋದರಿ ಅಂತಾನೇ ಅಂದುಕೊಳ್ಳಿ, ಅಡ್ಡಿಯಿಲ್ಲ"
"ಅವನು ಆಗ್ಲೇ ಹೇಳಿದಾನೆ. ನನಗೆ ಇಲ್ಲಿ ಯಾರೂ ಪರಿಚಯದವರು ಇಲ್ಲ ಅಂತ. ಮತ್ತೆ ನೀವೇನು ಈಗ ಬಂದು ಹೀಗೆಲ್ಲ ಉದ್ದುದ್ದ ಭಾಷಣ ಬಿಗಿಯೋದು?"
"ನಮ್ಮದೂ ಅವಂದೂ ಒಂದೇ ಊರು. ಸೋ.. ನನ್ನ ಸೋದರನನ್ನ ನಾನು ಮನೆಗೆ ಕರ್ಕೊಂಡು ಹೋಗ್ತೀನಿ. ಜ್ವರ ಕಡಿಮೆ ಆಗ್ತಿಲ್ಲಾಂದ್ರೆ ನಮ್ಮದೇ ಆಸ್ಪತ್ರೆ ಇದೆ. ಅಲ್ಲೇ ಚಿಕಿತ್ಸೆ ಕೊಡಿಸ್ತೀನಿ"
ವೈದ್ಯ ಪ್ರತಾಪ್ ಗೆ ಸ್ವಲ್ಪ ಅಳುಕು ಕಾಡಿತು.. ತಾನು ಅನಗತ್ಯ ಟೆಸ್ಟ್ ಬರೆದುಕೊಟ್ಟಿದ್ದು, ಲೋ ಡೋಸ್ ಮದ್ದು ಕೊಟ್ಟು ಕೆಲವು ದಿನ ಇಟ್ಕೊಳ್ಳೋಣ. ಹೇಗೂ ಯಾರೂ ಫ್ಯಾಮಿಲಿ ಯವರು ಬಂದಿಲ್ಲ ಎಂದುಕೊಂಡದ್ದು ಇವರಿಗೆ ಗೊತ್ತಾದ್ರೂ ಕಷ್ಟ. ಮತ್ತೆ ಇಮೇಜ್ ಹಾಳಾಗುತ್ತದೆ. ಈಗ ವಿರೋಧಿಸಿ ತನ್ನ ಮುಖವಾಡ ಬಯಲಾಗುವುದಕ್ಕಿಂತ ಸುಮ್ಮನೆ ಡಿಸ್ಚಾರ್ಜ್ ಮಾಡುವುದೇ ಲೇಸು.
"ಮೇಡಂ ಬರೀ ನಿಮ್ಮ ಮಾತು ಕೇಳಿ ಬಿಡೋದು ಸರಿಯಲ್ಲ. ಪೇಷೆಂಟ್ ಬಯಸಿದರೆ ಮಾತ್ರ ಬಿಡುಗಡೆ ಮಾಡುತ್ತೇವೆ"
"ಸರಿ.. ಅವರ ಡ್ರಿಪ್ ಮುಗೀತು. ಅವರನ್ನೇ ಕರೆಯುತ್ತೇನೆ" ಎಂದು ಹೊರಟ ಪಾವನಾರನ್ನು ನಿಲ್ಲಿಸಿದ ವೈದ್ಯರು ನಿಮ್ಮ ನರ್ಸಿಂಗ್ ಹೋಂ ಹೆಸರೇನು ಡಾಕ್ಟರ್ ಎಂದು ಕೇಳಿದರು.
"ಭಟ್ಸ್ ನರ್ಸಿಂಗ್ ಹೋಂ, ರಾಜಾಜಿನಗರ" ಎಂದಾಗ ಡಾಕ್ಟರ್ ಪ್ರತಾಪ್ ಒಮ್ಮೆ ಸ್ತಬ್ಧರಾದರು.
ಸಾವರಿಸಿಕೊಂಡು "ಹಾಗಾದರೆ ನೀವು ಡಾಕ್ಟರ್ ಕೃಷ್ಣ ಪ್ರಸಾದ್ ಅವರ"
"ಅವರ ಮಗಳು ನಾನು" ಎಂದಾಗ ಮೊದಲು
"ಸಾರಿ ಮೇಡಂ.. ನೀವೆಂದು ತಿಳೀಲಿಲ್ಲ. ಪ್ರಸಾದ್ ನಮ್ಮ ಸೀನಿಯರ್ ಡಾಕ್ಟರ್. ಡಾಕ್ಟರ್ಸ್ ಯೂನೀಯನ್ ನ ಅಧ್ಯಕ್ಷರು. ಕ್ಷಮಿಸಿ ಮೇಡಂ. ನವೀನ್ ನ ಈಗಲೇ ಡಿಸ್ಚಾರ್ಜ್ ಮಾಡ್ತೀವಿ" ನರ್ಸ್ ನತ್ತ ತಿರುಗಿ "ಅಕ್ಕಾ.. ಮೇಡಂಗೆ ಕೋಲ್ಡ್ ಜ್ಯೂಸ್ ತಗೊಂಡು ಬಾ" ಎಂದು ಹೇಳಿ " ಜ್ಯೂಸ್ ಕುಡಿದು ನೀವು ಹೊರಗೆ ಕೂತಿರಿ ಮೇಡಂ" ಎಂದರು ಡಾಕ್ಟರ್ ಪ್ರತಾಪ್.
"ನನಗೆ ಜ್ಯೂಸ್ ಏನೂ ಬೇಡ. ಊಟದ ಹೊತ್ತಿಗೆ ನಾನು ಅದೆಲ್ಲ ಕುಡಿಯುವುದಿಲ್ಲ" ಎಂದು ಹೇಳಿ ಡಾಕ್ಟರ್ ಗೆ ನಮಸ್ಕರಿಸಿ ಧನ್ಯವಾದ ಹೊರಗೆ ಹೊರಟರು ಪಾವನಾ.
ಡಾಕ್ಟರ್ ಪ್ರತಾಪ್ ಸುರಿಯುತ್ತಿರುವ ಬೆವರನ್ನು ಒರೆಸಿಕೊಂಡರು. ಏನು ಅನಾಹುತ ಎಳೆದು ಹಾಕಿಕೊಳ್ಳುತ್ತಿದ್ದೆ. ಸದ್ಯ ಪ್ರಸಾದ್ ಅವರ ಮಗಳು ಎಂದು ಗೊತ್ತಾಗಿದ್ದಕ್ಕೆ ಆಯ್ತು. ಇಲ್ಲಾಂದ್ರೆ ರಾಂಗ್ ಟ್ರೀಟ್ ಮೆಂಟ್ ಅಂತ ಕೇಸು ಯೂನಿಯನ್ ನಲ್ಲಿ ದೂರುದಾಖಲಿಸಿದರೆ ಸಂಕಷ್ಟ ಅನುಭವಿಸಬೇಕಾಗಿತ್ತು. ಅರ್ಧವೇ ಗಂಟೆಯಲ್ಲಿ ನವೀನ್ ನನ್ನು ಬಿಡುಗಡೆಗೊಳಿಸಿದರು. ಬೆಳಗ್ಗೆಯೇ ಐದುಸಾವಿರ ಬಿಲ್ ಪಾವತಿಸಲು ಹೇಳಿದ್ದವರು ಈಗ ಒಂದೇ ಸಾವಿರ ಪಡೆದು ನಗುನಗುತ್ತಾ ಡಿಸ್ಚಾರ್ಜ್ ಮಾಡಿದ್ದು ನವೀನ್ ಗೆ ಆಶ್ಚರ್ಯವಾದರೂ ಕಾರಣ ತಿಳಿದಿರಲಿಲ್ಲ. ಪಾವನಾ ನವೀನ್ ನನ್ನು ಮನೆಗೆ ಕರೆದೊಯ್ದಳು. ನವೀನ್ ಬಹಳವೇ ಸಂಕೋಚಗೊಂಡಿದ್ದ. ಪ್ರಭಾಕರ ರಾಯರ ಮನೆಯಿಂದ ಎರಡು ಅಂತಸ್ತು ಕೆಳಗಿನ ಮನೆ. ಮನೆಗೆ ತಲುಪಿದ ಕೂಡಲೇ ರಜೆಯೆಂದು ಮನೆಯಲ್ಲಿದ್ದ ಪಾವನಾರ ಇಬ್ಬರು ಮಕ್ಕಳೂ ಹತ್ತಿರವೇ ಸುಳಿದರು. ಕೊಂಚ ಸಂಕೋಚ ಸಡಿಲವಾಯಿತು ನವೀನ್ ಗೆ.
ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡಿದರು. ಸಂಜೆ ನಾಲ್ಕು ಗಂಟೆಗೆ ಪಾವನಾ ಕ್ಲಿನಿಕ್ ಗೆ ಹೊರಡುವ ಸಮಯ. ಯಾವತ್ತೂ ಪಕ್ಕದ್ಮನೆ ಶಾಂತಮ್ಮ ಮಕ್ಕಳಿಗೆ ಜತೆಯಾಗುತ್ತಿದ್ದರು. ಇಂದು ನವೀನ್ ಇದ್ದುದರಿಂದ ಯಶಸ್ವಿಯನ್ನು ಶಾಂತಮ್ಮನ ಮನೆಯಲ್ಲಿ ಬಿಟ್ಟಳು ಪಾವನಾ. ಮನೆಯಲ್ಲಿ ನವೀನ್ ಗೆ ಓಜಸ್ ಜತೆಯಾದ. ಅಮ್ಮ ತೆರಳಿದ ಕೂಡಲೇ ನವೀನ್ ನ ಬಳಿತೆರಳಿದ ಓಜಸ್ "ನವೀನಣ್ಣಾ.." ಎಂದು ಅವನಿಗಂಟತೊಡಗಿದ. ತನ್ನ ಬಣ್ಣದ ಪೆನ್ಸಿಲುಗಳನ್ನು ಅವನು ಮಲಗಿಕೊಂಡಿದ್ದ ಚಾಪೆಯ ಬದಿಯಲ್ಲಿ ಗುಡ್ಡೆ ಹಾಕಿ ಚಿತ್ರ ಬಿಡಿಸಿ "ನವೀನಣ್ಣಾ ಚೆನ್ನಾಗಿದೆಯಾ?" ಎಂದು ಕೇಳತೊಡಗಿದ. ನವೀನ್ ಗೂ ಚಿತ್ರ ಬರೆಯಲು ಹೇಳಿಕೊಟ್ಟ. ಇಬ್ಬರೂ ಬಹಳ ಬೇಗ ಗೆಳೆಯರಾದರು. ರಾತ್ರಿ ಪಾವನಾ ಮನೆಗೆ ಬರುವಾಗ ಓಜಸ್ ನ ಮುಖದಲ್ಲಿ ಹೊಸದೊಂದು ಕಾಂತಿಯಿತ್ತು. ಮಾತಿನಲ್ಲಿ ಲವಲವಿಕೆಯಿತ್ತು. ನವೀನ್ ನ ಚಾಪೆಯ ಪಕ್ಕದಲ್ಲಿ ಹರಡಿ ಚಲ್ಲಾಪಿಲ್ಲಿಯಾದ ಬಣ್ಣದ ಪೆನ್ಸಿಲುಗಳು ಇಬ್ಬರ ಗೆಳೆತನಕ್ಕೆ ಸಾಕ್ಷಿಹೇಳಿದವು. ಪಕ್ಕದ ಮನೆಯಿಂದ ಯಶಸ್ವಿಯನ್ನು ಕರೆದುಕೊಂಡು ಬಂದ ಪಾವನಾ ನವೀನ್ ನ ಆರೋಗ್ಯ ವಿಚಾರಿಸಿಕೊಂಡಳು. "ನಾನು ಗುಣಮುಖನಾಗುತ್ತಿದ್ದೇನೆ. ನೀವು ಯೋಚಿಸಬೇಡಿ ಮೇಡಂ. ಏನಾದರೂ ಮನೆಗೆಲಸಕ್ಕೆ ಸಹಾಯ ಮಾಡಲೇ" ಎಂದು ಕೇಳಿದ. ವಿನಯದಿಂದಲೇ ತಿರಸ್ಕರಿಸಿದ ಪಾವನಾ "ಸಹಾಯವೂ ಬೇಡ, ಮೇಡಂ ಎನ್ನುವುದೂ ಬೇಡ. ಪಾವನ ಅನ್ನಿ ಸಾಕು" ಎಂದಾಗ ಸಂಕೋಚಗೊಳ್ಳುವ ಸರದಿ ನವೀನ್ ನದ್ದು.
ಓಜಸ್ ಸ್ನಾನ ಊಟ ಎಲ್ಲದಕ್ಕೂ ನವೀನ್ ನನ್ನು ಬಹಳ ಹಚ್ಚಿಕೊಂಡ. ಮಲಗಲಂತೂ "ಅಮ್ಮಾ ನಾನೂ ನವೀನಣ್ಣನ ಪಕ್ಕ ಮಲಗೋದು" ಎಂದು ಹೇಳಿ ಅಲ್ಲೇ ತನ್ನ ಬೆಡ್ ಹಾಕಿಸಿಕೊಂಡ. ಮಗ ನವೀನ್ ನನ್ನು ಅಷ್ಟೊಂದು ಹಚ್ಚಿಕೊಳ್ಳುವಾಗ ಆಕೆಗೆ ಅವನ ಬೆಳವಣಿಗೆಯಲ್ಲಿ ಸಂಬಂಧದ ಖಾಲಿತನ ಅರಿವಾಗಿ ನೆನಪಿನ ಅಲೆಯಲ್ಲಿ ಕೊಚ್ಚಿಹೋದಳು.
*****
'ಭಟ್ಸ್ ನರ್ಸಿಂಗ್ ಹೋಂ' ನಗರದಲ್ಲಿ ಖ್ಯಾತಿವೆತ್ತ ಡಾಕ್ಟರ್ ಕೃಷ್ಟ ಪ್ರಸಾದ್ ಅವರ ಕನಸಿನ ಕೂಸು. ಪ್ರಸಾದ್ ಮಗ ನವನೀತ ಪ್ರಸಾದ್.
ಮಗಳು ಪಾವನಾ ಹುಟ್ಟಿದ ವರ್ಷವೇ ತಮ್ಮ ಕನಸು ಸಾಕಾರಗೊಂಡದ್ದು ಮಗಳು ತಂದ ಸೌಭಾಗ್ಯ ಎಂದೇ ನಂಬಿದವರು ಪ್ರಸಾದ್. ಮುದ್ದಿನ ಕುವರಿ ಪಾವನ ಎಂದರೆ ಆಸ್ಪತ್ರೆಯ ಸಿಬ್ಬಂದಿಗಳಿಗೆಲ್ಲ ಅಚ್ಚುಮೆಚ್ಚು, ಮನೆಮಗಳಂತೆ. ತಾಯಿ ಸಾವಿತ್ರಿ, ಮಕ್ಕಳಿಬ್ಬರು ದೊಡ್ಡವರಾಗುತ್ತಿದ್ದಂತೆ ತಾನು ಕ್ಲಬ್, ಮಹಿಳಾ ಮಂಡಳಿ, ಸಮಾಜ ಸೇವೆ ಎಂದು ಸುತ್ತತೊಡಗಿದರು. ಬರಬರುತ್ತಾ ಕುಟುಂಬದಿಂದ ಹೆಚ್ಚು ಗಮನ ಸಮಾಜಸೇವೆಗೆ ಮೀಸಲಿಟ್ಟರು. ಮಕ್ಕಳಿಗೆ ತಾಯಿಯ ಪ್ರೀತಿಯ ಕೊರತೆ ಕಾಡುತ್ತಿತ್ತು. ಅಪ್ಪ ಮಾತನಾಡಲು ಸಿಗುವುದೇ ಅಪರೂಪ. ಸಿಕ್ಕಾಗಲಂತೂ ಬಹಳ ಸಹೃದಯತೆಯಿಂದ ಕಕ್ಕುಲಾತಿಯಿಂದ ಮಾತಿಗೆಳೆಯುವುದು, ನಗು, ಹರಟೆ ಎಲ್ಲವೂ ಖುಷಿ ಕೊಡುತ್ತಿತ್ತು.
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
28-10-2020.
👌👌
ReplyDelete