ಬಾಳದಾರಿಯಲ್ಲಿ ಹೊಸ ಹೆಜ್ಜೆ- ಆಯಾಮ-೨
ಇಬ್ಬರು ಅತ್ತಿಗೆಯಂದಿರು ಹಂಚಿಕೊಂಡ ವಿಷಯವನ್ನು ಕೇಳಿ ನಾನು ದಿಗ್ಭ್ರಾಂತಳಾದೆ. "ಇಲ್ಲಾ ಹಾಗೆಲ್ಲ ನಡೆದಿರಲಾರದು" ಎಂದೆ. ಮತ್ತಷ್ಟು ವಿವರಿಸಿದರು. ಪ್ರಶಾಂತವಾಗಿದ್ದ ನನ್ನ ಮನಸ್ಸೆಂಬ ತಿಳಿನೀರ ಕೊಳಕ್ಕೆ ಕಲ್ಲೆಸೆದಂತಾಯಿತು. ಎರಡು ದಿನ ತವರು ಮನೆಯಲ್ಲಿ ಆರಾಮವಾಗಿ ಇದ್ದು ಹೋಗೋಣ ಎಂದು ಬಂದರೆ ಮನಶ್ಶಾಂತಿಯೇ ಇಲ್ಲದಂತಾಯಿತಲ್ಲ...!! ಯಾಕಾದರೂ ಹೀಗಾಯಿತು..ಅತ್ತಿಗೆಯರ ಮಾತು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ದೊಡ್ಡ ಅತ್ತಿಗೆ ನಿಜವನ್ನೇ ಹೇಳುತ್ತಾರೆ. ಸಣ್ಣತ್ತಿಗೆ ಸ್ವಲ್ಪ ಮಸಾಲೆ ಬೆರೆಸಿದರೂ ಇಲ್ಲದ್ದನ್ನು ಹೇಳಲಾರರು. ಎಂದು ನನ್ನ ಮನಸ್ಸು ಚಿಂತಿಸುತ್ತಿತ್ತು.
ತವರಿಗೆ ಬಂದು ಒಂದು ವರ್ಷದ ಮೇಲಾಯಿತು. ತವರಿಗೆ ಬರಬೇಕೆಂದು ಯೋಚಿಸುತ್ತಿದ್ದರೂ ಏನಾದರೊಂದು ಅಡ್ಡಿ. ನಮ್ಮದು ತುಂಬು ಕುಟುಂಬ. ಅತ್ತೆ ,ಮಾವ,ಭಾವ, ಮೈದುನ ,ಅವರ ಕುಟುಂಬ ಎಂದು ಹದಿನೈದು ಜನರಿದ್ದೇವೆ. ತವರಿಗೆ ಹೋಗಬೇಕೆಂದರೆ ಪತಿ ಒಪ್ಪಿದರೆ ಅಷ್ಟೇ ಸಾಲದು ಅತ್ತೆ-ಮಾವನ ಒಪ್ಪಿಗೆ ಬೇಕು. ನಾಲ್ಕಾರು ಸಲ ಕೇಳಿ ಇವತ್ತೇನೋ ಹೋಗಬಹುದು ಎಂದು ಒಪ್ಪಿದ್ದರು. ಒಪ್ಪಿಗೆ ಸಿಕ್ಕಿದ್ದೇ ತಡ ಮಕ್ಕಳಿಬ್ಬರ ಜೊತೆ ಬ್ಯಾಗ್ ಹೆಗಲಿಗೇರಿಸಿಕೊಂಡು ಹೊರಟೇ ಬಿಟ್ಟಿದ್ದೆ.ಎಷ್ಟು ಖುಷಿ ಇತ್ತು ತವರಿನ ಅಂಗಳವನ್ನು ಮುಟ್ಟಿದಾಗ...!! ಎಲ್ಲರನ್ನೂ ಕಂಡು ಮಾತನಾಡಿದಾಗ..!!
ಅವಳು ನನ್ನ ಗೆಳತಿ ನವ್ಯ .ಹೆಚ್ಚುಕಡಿಮೆ ಒಂದೇ ವಯಸ್ಸು ನಮ್ಮದು. ಆಗಾಗ ಒಟ್ಟಿಗೆ ಆಡುತ್ತಿದ್ದವರು. ನಾನು ಸರಕಾರಿ ಶಾಲೆಗೆ ಒಂದೆರಡು ಮೈಲಿ ಗುಡ್ಡ ಬೆಟ್ಟಗಳ ನಡುವೆ ನಡೆದು ಹೋಗುತ್ತಿದ್ದರೆ.. ಆಕೆ ವೈದ್ಯರಾದ ತನ್ನ ತಂದೆಯ ಜೊತೆ ಕಾರಿನಲ್ಲಿ ಖಾಸಗಿ ಶಾಲೆಗೆ ತೆರಳುತ್ತಿದ್ದಳು. ನಾನು ಶಾಲೆಗೆ ಹೋಗುತ್ತಿದ್ದುದು ಅವರ ಮನೆ ಎದುರಿನಿಂದಲೇ. ನನ್ನನ್ನು ಕಂಡರೆ ಆಕೆ ಕಾರಿನೊಳಗಿಂದ ಹೊರಗೆ ಕೈ ಬೀಸದೆ ಹೋಗಲಾರಳು. ಸಂಜೆ ನಾನು ಗೆಳತಿಯರೊಂದಿಗೆ ಬರುವಾಗ ದಾರಿಬದಿಯಲ್ಲಿನ ಮರದಿಂದ ಕೊಯ್ದ ಮಾವಿನಕಾಯಿಯೋ, ಕೊಟ್ಟೆ ಮುಳ್ಳಿನ ಹಣ್ಣೋ, ಬಿದ್ದ ಅಂಬಟೆಯೋ, ಹುಣಸೆಹಣ್ಣೋ ಸಿಕ್ಕರೆ ಅದರಲ್ಲೊಂದು ಪಾಲು ಅವಳಿಗೆ ಕೊಟ್ಟೇ ನಾನು ಮನೆಗೆ ಬರುತ್ತಿದ್ದರು. "ಶಾರಿ.. ನೀನು ಎಷ್ಟು ಅದೃಷ್ಟವಂತೆ. ಶಾಲೆಯಿಂದ ಬರುವಾಗ ಹಣ್ಣುಗಳನ್ನು ಕೊಯ್ದು ತಿನ್ನಬಹುದು .ಯಾರು ಬೈಯುವವರು ಇಲ್ಲ.. ನನಗಾದರೆ ಅಪ್ಪನ ಜೊತೆ ಕಾರಿನಲ್ಲಿ ಬರಬೇಕು. ಗೆಳತಿಯರು ಜೊತೆಗಿಲ್ಲ.ಇಂತಹ ತಾಜಾ ಹಣ್ಣುಗಳೂ ಇಲ್ಲ..".ಅಂದಾಗಲೇ ನನ್ನ ಸರಕಾರಿ ಶಾಲೆ,ನಡೆದು ಹೋಗುವ ಅಭ್ಯಾಸದ ಬಗ್ಗೆ ಹೆಮ್ಮೆಯೆನಿಸಿದ್ದು.ಆಕೆಗೇನೇ ಹೊಸ ವಸ್ತು ತಂದರೂ ನನಗೆ ತೋರಿಸದೆ ಇರುವವಳಲ್ಲ.ಆಕೆಯ ಬಣ್ಣಬಣ್ಣದ ಹೊಸ ಅಂಗಿಗಳು, ಮಿನುಗುವ ಚಪ್ಪಲಿಗಳು, ಬಣ್ಣಬಣ್ಣದ ನವನವೀನ ಶೈಲಿಯ ಹೇರ್ಪಿನ್ನುಗಳು ಎಲ್ಲವೂ ನನಗೆ ಮ್ಯೂಸಿಯಂನಲ್ಲಿಟ್ಟ ವಸ್ತುಗಳಂತೆ ಕಾಣುತ್ತಿದ್ದವು.ನೋಡಲು ಮಾತ್ರ ಕೊಳ್ಳುವಂತಿಲ್ಲ, ಧರಿಸುವಂತಿಲ್ಲ ಎಂಬಂತೆ.ಅವಳೇನೂ ಕೊಡದವಳಲ್ಲ.ಒಮ್ಮೆ "ನಿನಗಾಯಿತು ತೆಗೆದುಕೋ" ಎಂದು ಒತ್ತಾಯಿಸಿ ಬಣ್ಣದ ಹೇರ್ ಬ್ಯಾಂಡ್ ಕೊಟ್ಟಿದ್ದಳು.ನಾನು ಖುಷಿಯಿಂದ ಹಾಕಿಕೊಂಡು ಮನೆಯತ್ತ ಸಾಗಿದ್ದೆ.ನನ್ನ ತಲೆಯಲ್ಲಿ ಅದನ್ನು ಕಂಡಿದ್ದೇ ತಡ ಅಣ್ಣಂದಿರು ಅಪ್ಪನಿಗೆ ವರದಿ ಮಾಡಿದ್ದರು.ಅಪ್ಪ ನಾಗರ ಬೆತ್ತ ತೆಗೆದುಕೊಂಡು ಸರೀ ಬಾರಿಸಿದ್ದರು.ಅದರ ನಂತರ ಇನ್ನೊಬ್ಬರ ವಸ್ತು ಆಸೆಯಾದರೂ ಮುಟ್ಟುತ್ತಿರಲಿಲ್ಲ.ಕೊಡಿಸುವ ಸಾಮರ್ಥ್ಯ ನಮ್ಮ ತಂದೆಯವರಿಗೂ ಇರಲಿಲ್ಲ.
ಪಿಯುಸಿ ಮುಗಿದು ಆಕೆ ಮೆಡಿಕಲ್ ಓದಲು ಹೋಗುವ ಮುನ್ನ ಮನೆಗೆ ಬಂದು ನನ್ನಲ್ಲಿ ಮಾತನಾಡಿ ಹೋಗಿದ್ದಳು. ಅದೇ ಕೊನೆ.. ಮತ್ತೆಂದೂ ನಾನು ಆಕೆಯ ಮುಖ ನೋಡಿಲ್ಲ. ನನಗೆ ಮತ್ತೆ ಕೆಲವೇ ದಿನಗಳಲ್ಲಿ ಮದುವೆಯಾಗಿತ್ತು. ತುಂಬು ಕುಟುಂಬಕ್ಕೆ ಹೋದ ನನಗೆ ಗೆಳತಿಯರ ಬಗ್ಗೆ ಯೋಚಿಸಲೂ ಬಿಡುವಿರುತ್ತಿರಲಿಲ್ಲ. ಅಪರೂಪಕ್ಕೆ ತವರಿಗೆ ಬಂದಾಗ ತಾಯಿ ,ಅತ್ತಿಗೆಯಂದಿರು ಹೇಳಿದ ವಿಚಾರವಷ್ಟೇ ನನಗೆ ತಿಳಿಯುತ್ತಿದ್ದು. ಆಕೆಯ ಓದು ಮುಗಿಯುತ್ತಿದ್ದಂತೆ ಶ್ರೀಮಂತ ಸಂಬಂಧವು ಕೂಡಿಬಂದು ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಸಂಸಾರ ಮಾಡುತ್ತಿದ್ದುದು ಎಲ್ಲವೂ ಅತ್ತಿಗೆಯವರ ಮೂಲಕ ತಿಳಿಯಿತು. ಆದರೆ ಈಗ ಹೇಳಿದ ಸುದ್ದಿ ಮಾತ್ರ ನನಗೆ ಆಘಾತಕಾರಿಯಾಗಿತ್ತು.
ನವ್ಯ ಜಗಳಗಂಟಿಯಲ್ಲ. ಜಗಮೊಂಡಿ ಮೊದಲೇ ಅಲ್ಲ. ಎಲ್ಲರ ಜೊತೆಯೂ ಚೆಲ್ಲುಚೆಲ್ಲಾಗಿ ವರ್ತಿಸದಿದ್ದರೂ ಕೆಲವೇ ಕೆಲವು ಗೆಳತಿಯರಲ್ಲಿ ಆತ್ಮೀಯತೆ ಇಟ್ಟುಕೊಂಡವಳು. ಜಂಭ ಅವಳಲ್ಲಿ ನಾನು ಕಂಡಿಲ್ಲ. ಜನಾನುರಾಗಿ ವೈದ್ಯರಾದ ಅವಳ ತಂದೆಯ ಆದರ್ಶಗಳೆಲ್ಲವೂ ಅವಳಿಗೆ ಬಳುವಳಿಯಾಗಿ ಬಂದಿತ್ತು. ಹಾಗಿದ್ದರೂ ಇಂತಹ ಬಿರುಗಾಳಿ ಅವಳ ಜೀವನದಲ್ಲಿ ಹೇಗೆ ಎದ್ದಿತು ಎಂಬುದೇ ನನ್ನ ಮುಂದಿನ ಉತ್ತರ ಸಿಗದ ಪ್ರಶ್ನೆಯಾಗಿತ್ತು.
ಮಧ್ಯಾಹ್ನ ಊಟಕ್ಕೆ ಕುಳಿತವಳು ಉಂಡೆನೋ, ಉಂಡದ್ದು ಹೊಟ್ಟೆಗಿಳಿಯಿತೋ ನನಗಂತೂ ಗೊತ್ತಿಲ್ಲ. ಬಟ್ಟಲು ಎತ್ತಿಕೊಂಡಿದ್ದು ಹೋಗಿ ಕೈತೊಳೆದು ಬಂದವಳು.."ಅತ್ತಿಗೆ ನಾನು ಡಾಕ್ಟ್ರ ಮನೆಗೆ ಹೋಗಿ ಬರುತ್ತೇನೆ "ಎಂದೆ.
"ಅಲ್ಲೇನಿದೆ ನಿನಗೆ..ಇಂತಹ ಸಂದರ್ಭದಲ್ಲಿ" ಎಂದರೂ.. "ನಾನು ಇಂತಹ ಸಮಯದಲ್ಲಿ ಹೋಗಬಹುದು'' ಎಂದೆ.ಚಾವಡಿಗೆ ಬಂದಾಗ ಅಣ್ಣಂದಿರು "ಅವರ ಜೀವನ ಸರಿಪಡಿಸಿಕೊಳ್ಳಲು ಬೇಕಾದಷ್ಟು ದುಡ್ಡು ಅವರಲ್ಲಿದೆ.ನೀನು ಹೋಗಿ ಮಾತನಾಡಿ ಮಾಡುವುದೇನಿದೆ.." ಎಂದಾಗ "ದುಡ್ಡಿಗೂ ಮಾನವೀಯತೆಗೂ ವ್ಯತ್ಯಾಸವಿದೆ ಅಣ್ಣಾ....ಶ್ರೀಮಂತರಾದರೂ ಬಡವರಾದರೂ ಬಾಳಿನ ಕಷ್ಟ ,ಸುಖ ,ಭಾವನೆಗಳು ಒಂದೇ ಅಲ್ಲವೇ ಅಣ್ಣಾ.."ಎಂದುತ್ತರಿಸಿ ಬಿರಬಿರನೆ ನಡೆದಿದ್ದೆ.ನನ್ನ ಮಾತು ಅವರಿಗೆ ಕೇಳಿತೋ ಇಲ್ಲವೋ ,ಏನಾದರೂ ಉತ್ತರಿಸಿದರೋ ಒಂದೂ ನನಗೆ ಬೇಕಾಗಿರಲಿಲ್ಲ.
ನಾಲ್ಕು ತೋಟ ದಾಟಿದಾಗ ಚಿಕ್ಕ ಹೊಳೆ. ಅದಕ್ಕೊಂದು ಕಾಲುಸಂಕ. ಅದನ್ನು ದಾಟಿದರೆ ಡಾಕ್ಟ್ರ ತೋಟವೇ ಸಿಗುತ್ತದೆ. ಅಲ್ಲೇ ಇಪ್ಪತ್ತು ಹೆಜ್ಜೆ ನಡೆದು ಮುಂದುವರಿದು ಹತ್ತಿದರೆ ವೈದ್ಯರ ಮನೆಯಂಗಳ. ಇವೆಲ್ಲವೂ ನಾನು ಬಾಲ್ಯದಲ್ಲಿ ನಡೆದುಹೋಗುತ್ತಿದ್ದ ಹಾದಿ. ಈಗ ಅಲ್ಪಸ್ವಲ್ಪ ಬದಲಾವಣೆಗಳಾದರೂ ನನಗೆ ದಾರಿಯಂತೂ ಮರೆತಿಲ್ಲ.ಅಂಗಳದ ಬದಿಯಲ್ಲಿ ನಿಂತವಳಿಗೆ ಮೊದಲಿನ ಅಂದ-ಚಂದದ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಕೈತೋಟ ಸೊರಗಿದಂತೆ ಕಂಡಿತು. ಸ್ವಲ್ಪ ಸದ್ದಾದರೆ ಸಾಕು ಬೊಬ್ಬಿರಿಯುತ್ತಿದ್ದ ವಿಶೇಷ ತಳಿಯ ಎರಡು ನಾಯಿಗಳು ಈಗ ಇಲ್ಲವೋ ಏನೋ..ಬೊಗಳಲಿಲ್ಲ.. ನಾನು ಮುಂದೆ ನಡೆದು ಜಗಲಿಯ ಬದಿಯಲ್ಲಿ ನಿಂತೆ. ಒಳಗಿನಿಂದ ಏನು ಸದ್ದು ಬರಲಿಲ್ಲ. ಸ್ವಲ್ಪ ಹೊತ್ತಾದ ಪುಟ್ಟ ಮಗುವೊಂದು. "ಅಜ್ಜಿ ಯಾರೋ ಬಂದಿದ್ದಾರೆ ನೋಡಿ "ಎಂದು ಕೂಗುವ ಧ್ವನಿ ಕೇಳಿಸಿತು. ಓಹೋ ಇದು ನವ್ಯಾಳ ಮಗುವೇ ಆಗಿರಬೇಕು. ಎಂದು ಯೋಚಿಸುತ್ತಿದ್ದಂತೆಯೇ ನವ್ಯಾಳ ಅಮ್ಮ ಲತಾತ್ತೆ "ಒಳಗೆ ಬನ್ನಿ'' ಎಂದರು. ನನ್ನ ಹತ್ತಿರ ಬಂದು "ನೀನು ಶಾರಿ ತಾನೇ .."ಎಂದು ಗುರುತು ಹಿಡಿದರು. "ಹೌದು "ಎಂದೆ.
ಲತಾತ್ತೆ ಮಾತ್ರ ಬಹಳ ಕುಂದಿದ್ದರು. ಮೊದಲು ಊರಿನಲ್ಲಿ ಬಹಳ ರೂಪವಂತೆ ಆಕೆ. ಹಾಗೆಯೇ ಸೌಜನ್ಯವಂತೆ. ಒಳಗೆ ಕರೆದು ಬಾಯಾರಿಕೆ ಕೇಳಿ ಉಪಚರಿಸಿದರು. ಮಗುವನ್ನು ಕರೆದು "ಹೋಗು ಅಮ್ಮನಲ್ಲಿ ಹೇಳು.. ಶಾರಿ ಬಂದಿದ್ದಾಳೆ ಎಂದು.." ಎಂದಾಗ ಆತ ಮಾಳಿಗೆ ಮೆಟ್ಟಿಲೇರಿ ಹೋದ. ಸ್ವಲ್ಪ ಹೊತ್ತಿನಲ್ಲಿ ಮಾಳಿಗೆಯ ಮೆಟ್ಟಿಲಿಳಿದು ನವ್ಯ ಬರುತ್ತಿದ್ದಂತೆಯೇ ನನ್ನ ಕಂಗಳು ಮುನ್ಸೂಚನೆ ನೀಡಿದವು. ಬಂದವಳೇ ಶಾರೀ ಅನ್ನುತ್ತಾ ಎರಡು ಕೈಗಳಿಂದ ನನ್ನನ್ನು ಬಿಗಿದಪ್ಪಿದಳು. ಮಾತಿಲ್ಲ.. ಆದರೂ ಪರಸ್ಪರ ಭಾವಗಳು ವಿನಿಮಯವಾಗುತ್ತಿದ್ದವು. ವೈದ್ಯರು ಬಂದು "ಯಾರು ಬಂದಿರುವುದು..?" ಅಂದಾಗಲೇ ನವ್ಯಳ ಕೈ ಸಲ್ಪ ಸಡಿಲವಾದುದು. ನನ್ನ ಗಂಟಲಿಂದ ಧ್ವನಿ ಹೊರಡಲು ಕಷ್ಟಪಡುತ್ತಿದ್ದಾಗ ಲತಾತ್ತೆ ತಾವೇ "ಅವಳು ಶಾರಿ.. ನವ್ಯಳ ಗೆಳತಿ" ಎಂದರು. "ಆರಾಮವಾಗಿದ್ದೀಯಾ ಶಾರಿ.. ಎಷ್ಟು ಸಮಯವಾಯಿತು ನಿನ್ನನ್ನು ಕಾಣದೆ". ಎಂದು ಆತ್ಮೀಯವಾಗಿ ವಿಚಾರಿಸಿಕೊಂಡರು.ಅಷ್ಟರಲ್ಲಿ ಚಹಾ ತಂದ ಲತಾತ್ತೆ "ಚಹಾ ಕುಡಿದು ಸ್ವಲ್ಪ ಹೊತ್ತು ನೀವಿಬ್ಬರೇ ಮಾತಾಡಿ ಬನ್ನಿ.." ಎಂದು ನನ್ನ ಮುಖ ನೋಡಿ ಹೇಳಿದರು.
ಹಾಗೆಯೇ ನಾವಿಬ್ಬರೂ ಮಾಳಿಗೆಗೆ ಹೋಗಿ ಮಾತನಾಡತೊಡಗಿದೆವು. ಅವಳ ಮಾತೇ ಹೆಚ್ಚಿತ್ತು. ನಾನು ಹೂಂಗುಟ್ಟುತ್ತಾ ಮಧ್ಯೆ ಮಧ್ಯೆ ಸಂತೈಸುತ್ತಿದೆ. ತನ್ನ ಬಾಳಪಯಣವನ್ನು ನನ್ನ ಮುಂದೆ ಬಿಚ್ಚಿಟ್ಟರು.ಶಾರಿ .. ನಿನ್ನ ಮುಂದೆ ಹೇಳಿಕೊಂಡರೆ ಸರಿಯೋ-ತಪ್ಪೋ ನನಗೆ ತಿಳಿಯದು. ಆದರೆ ಹೇಳಿ ಮನಸ್ಸಾದರೂ ಹಗುರ ಮಾಡಿಕೊಳ್ಳುವೆ.. ಅನ್ಯಥಾ ಭಾವಿಸದಿರು... ಎನ್ನುತ್ತಾ ಶುರುಮಾಡಿದಳು. ನನಗೆ ಅಪ್ಪನಂತೆ ಸಮಾಜಸೇವೆ ಮಾಡಬೇಕು,ಆದರ್ಶ ವೈದ್ಯೆಯಾಗಬೇಕೆಂಬ ಕನಸಿತ್ತು.ನನ್ನ ಆಸೆಗಳಿಗೆಲ್ಲ ಪ್ರೋತ್ಸಾಹ ಕೊಡುತ್ತೇವೆ ಎಂದುಕೊಂಡು ಬಂದ ಸಂಬಂಧವನ್ನು ಅಪ್ಪ ಅಮ್ಮ ಇಬ್ಬರೂ ಬೇಡವೆನ್ನಲಿಲ್ಲ. ನನಗೂ ಒಪ್ಪಿಗೆಯಾಗಿತ್ತು. ಆದರೆ ಮದುವೆಯಾದ ನಂತರ ನಡೆದಿದ್ದೇ ಬೇರೆ. ನಾನು ವೃತ್ತಿ ಮಾಡುತ್ತೇನೆ ಎಂದಾಗ ಪತಿಗೆ ಅದೇನು ಹಿಂಸೆಯಂತೆ ಕಾಣುತ್ತಿತ್ತು.. ತಾನೆಲ್ಲಿ ಸಣ್ಣವನಾಗಿ ಬಿಡುತ್ತೇನೋ ಎಂಬ ಭಾವನೆಯಿರಬಹುದು.ಕೈಗೊಂದು ಮಗು ಬಂದಮೇಲೆ ಪತಿ ನನ್ನನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದ್ದಾರೆ ಎನ್ನಿಸಿತು. ಮಾತನಾಡಲು ಹೋದರೆ ಸಿಡುಕು. ಆಧುನಿಕ ಜೀವನಶೈಲಿಯು ಅವರಿಗೆ ಬಹಳ ಇಷ್ಟ. ಆದರೆ ಅದರ ಇನ್ನೊಂದು ಮುಖ ನಾನು ಅನುಭವಿಸಬೇಕಾಯಿತು. ಪಾರ್ಟಿ ಎಂದು ಹೋದರೆ ಮನೆಗೆ ಹಿಂದಿರುಗುವುದು ತಡರಾತ್ರಿ. ಕೇಳಿದರೆ ಕರುಣೆ ಇಲ್ಲದೆ ಹೊಡೆಯುತ್ತಿದ್ದರು. ಜೊತೆಗೆ ಅತ್ತೆಯ ಸಮರ್ಥನೆ. ಮಾವ ಮನೆಯಲ್ಲಿದ್ದರೂ ಅವರ ಮಾತಿಗೆ ಅಷ್ಟು ಬೆಲೆ ಇಲ್ಲ. ಅವರಾದರೂ ನನ್ನನ್ನು ಸ್ವಲ್ಪವಾದರೂ ಅರ್ಥಮಾಡಿಕೊಂಡಿದ್ದರು. ನೋಡು ನನ್ನ ಮೈಯಲ್ಲಿನ ಗಾಯಗಳ ಕಲೆ... ಎಂದಾಗ ನನಗೆ ಆ ಕ್ರೂರತೆಯ ನೆನೆದು ಕಂಬನಿಯನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ.ಸಮಾಜದ ಅಂಜಿಕೆಯಿಂದ, ಮಗುವಿಗೆ ತಂದೆ, ಅಜ್ಜ-ಅಜ್ಜಿ ಎನ್ನುವ ಬಾಂಧವ್ಯ ಸಿಗಬೇಕು ಎಂಬ ಕಾರಣಕ್ಕೆ ಎಲ್ಲವನ್ನು ಸಹಿಸಿ ಬದುಕಿದ್ದೆ.ಉದ್ಯಮದಿಂದ ಮಾವನನ್ನು ದೂರವಿಟ್ಟು ತಾನೇ ಉದ್ಯೋಗ ಜವಾಬ್ದಾರಿ ವಹಿಸಿ ಎಳೆಯ ಪ್ರಾಯದ ಹೆಣ್ಣು ಮಕ್ಕಳನ್ನು ಉದ್ಯೋಗಕ್ಕೆ ಸೇರಿಸಿಕೊಂಡು, ಬಳಸಿಕೊಳ್ಳುತ್ತಿರುವುದು ನನಗೆ ಕೆಲವರಿಂದ ಮಾಹಿತಿ ಬರುತ್ತಿತ್ತು. ಆ ವಿಷಯದಲ್ಲಿ ಹಲವಾರು ಸಾರಿ ತಿದ್ದಲು ಪ್ರಯತ್ನಿಸಿದ್ದೆ. ಪ್ರಯತ್ನವೆಲ್ಲ ನೀರ ಮೇಲೆ ಹೋಮ ಮಾಡಿದಂತೆ ಆಗುತ್ತಿತ್ತು.
ಒಂದು ದಿನ ಎಳೆಯ ವಯಸ್ಸಿನ ಹೆಣ್ಣು ಮಗಳೊಬ್ಬಳು ನನ್ನ ಪತಿಯಿಂದ ಗರ್ಭಿಣಿಯಾದಾಗ ನನ್ನ ಎದೆಗೆ ಕೊಳ್ಳಿ ಇಟ್ಟಂತಾಗಿತ್ತು.ಎಲ್ಲೆಲ್ಲಿಂದಲೋ ಕೇಳುತ್ತಿದ್ದ ಸುದ್ದಿ ನಿಜವಾಗಿ ಮನೆಯೆದುರೇ ಬಂದು ನಿಂತಿತ್ತು.ದುಡ್ಡು ಎಲ್ಲ ಕಳಂಕವನ್ನೂ ತೊಳೆಯಿತು..ಈ ಸಂದರ್ಭದಲ್ಲಿ ನಾನೆಲ್ಲಿಯಾದರೂ ತಮ್ಮ ಮಗನನ್ನು ಬಿಟ್ಟು ಹೋದರೆ ಎಂಬ ಕಾರಣಕ್ಕಾಗಿ ಅತ್ತೆ ನನ್ನೆಲ್ಲ ಆಭರಣಗಳನ್ನು ,ಬ್ಯಾಂಕ್ ದಾಖಲೆಗಳನ್ನು ತಮ್ಮ ಬಳಿ ಇರಿಸಿಕೊಂಡರು ಬಲಾತ್ಕಾರವಾಗಿ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಬಿಟ್ಟೆ. ಒಂದು ದಿನ ಬೆಳ್ಳಂಬೆಳಗ್ಗೆ ಮನೆಯ ಮುಂದೆ ಪೊಲೀಸರು ನಿಂತಿದ್ದರು.ಅವರ ಮಾತುಗಳನ್ನು ಕೇಳಿದಾಗ ನನ್ನ ಸಂಶಯವೆಲ್ಲ ನಿಜವಾಗಿತ್ತು.ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟದ ಆರೋಪ ಪತಿಯ ಮೇಲಿತ್ತು.ಈಗಲೇ ಸರಿಯಾದ ಸಮಯ ಎಂದು ತಿಳಿದು ಸುಳ್ಳು ಹೇಳಬೇಕೆಂಬ ಒತ್ತಡವಿದ್ದರೂ ಸತ್ಯವನ್ನೇ ಹೇಳಿ ಪತಿಯನ್ನು ಪೊಲೀಸರಿಗೊಪ್ಪಿಸಿ ಮಗನ ಜೊತೆ ನಾನು ಹೊರಬಂದೆ.
ಹೊರ ಬರುವುದೇನೋ ಬಂದೆ ..ಆದರೆ ಸಮಾಜ ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಿದೆ. ಉತ್ತರಿಸುವ ಶಕ್ತಿ ನನಗಿಲ್ಲ. ಶಾರಿ ನೀನಾದರೂ ನನ್ನನ್ನು ನಂಬುತ್ತೀಯಲ್ಲ. ನಾನು ಮಾಡಿದ್ದು ತಪ್ಪಾ.. ನನ್ನ ಸ್ಥಾನದಲ್ಲಿ ಇದ್ದರೆ ನೀನು ಏನು ಮಾಡುತ್ತಿದ್ದೆ..?. ಎಂದು ಮುಗ್ಧವಾಗಿ ಕೇಳಿದರೆ...ನಾನು ನನ್ನ ಅಂಗೈಯನ್ನು ಅವಳ ಅಂಗೈ ಮೇಲಿಟ್ಟು "ನೀನು ಮಾಡಿದ್ದು ಸರಿಯಾಗಿದೆ.. ನಿನ್ನ ಜೊತೆ ನಾನಿದ್ದೇನೆ "ಎಂದು ಹಿಂದೆ ಮುಂದೆ ನೋಡದೆ ಹೇಳಿಬಿಟ್ಟಿದ್ದೆ.
"ಸದಾ ಕಣ್ಣೀರು ಒಳ್ಳೆಯದಲ್ಲ ಮಗಳೇ.. ನೀನು ಕ್ಲಿನಿಕ್'ಗೆ ಹೋಗಲಾರಂಭಿಸು "ಎಂದು ಅಪ್ಪ ಹೇಳುತ್ತಿದ್ದಾರೆ. ಎರಡು ವರ್ಷದಿಂದ ಅನಾರೋಗ್ಯದ ಕಾರಣದಿಂದ ಕ್ಲಿನಿಕ್ ಬಾಗಿಲು ತೆರೆಯದವರು ಹದಿನೈದು ದಿನಗಳ ಹಿಂದೆ ತಮ್ಮ ಹಳೆಯ ಕಂಪೌಂಡರ್ ಅವರಲ್ಲಿ ಕ್ಲಿನಿಕ್ ಸ್ವಚ್ಛಗೊಳಿಸಿ ಕೊಟ್ಟಿದ್ದರು. ಆದರೂ ಸೇವೆಸಲ್ಲಿಸಲು ನನ್ನ ಮನಸ್ಸು ಹಿಂದೇಟು ಹಾಕುತ್ತಿದೆ.ನೀನು ನಾಳೆ ತವರಿನಲ್ಲಿ ಇದ್ದೀಯಲ್ಲವೇ.. ನಾಳೆ ನನ್ನ ಜೊತೆಗೆ ಕ್ಲಿನಿಕ್ ಬರೋದಕ್ಕೆ ಆಗುತ್ತಾ...ನಾಳೆಯಿಂದಲೇ ಕ್ಲಿನಿಕ್ ಆರಂಭಿಸಲಾ" ಎಂದು ಕೇಳಿದಳು. "ಹೂಂ.. ನಿನ್ನೆಲ್ಲ ಕಾರ್ಯಗಳಿಗೂ ನನ್ನ ಬೆಂಬಲವಿದೆ. ನಿನಗೆ ಮಗುವಿನ ಭವಿಷ್ಯ ರೂಪಿಸುವ ಕನಸಿದೆ. ಆ ಜವಾಬ್ದಾರಿಯನ್ನು ನೀನು ಸಮರ್ಥವಾಗಿ ಹೊರಬಲ್ಲೆ.. ಸಮಾಜ ಏನೇ ಹೇಳಲಿ ನಿನ್ನ ದೃಷ್ಟಿಕೋನ ಸರಿ ಇದ್ದರೆ ಮುಂದೊಂದು ದಿನ ಸಮಾಜ ನಿನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬಹುದು.." ಅಂದೆ.. ನನ್ನ ಮಾತಿನಿಂದ ಅವಳಿಗೆ ಮುಖದಲ್ಲೊಂದು ಮಂದಹಾಸ ಮೂಡಿತು. ಮನಸು ಸ್ವಲ್ಪ ಹಗುರಾದಂತೆ ಅನ್ನಿಸಿತೇನೋ.
ಮರುದಿನ ಬೆಳಿಗ್ಗೆ ಅವಳೊಂದಿಗೆ ಕ್ಲಿನಿಕ್'ಗೆ ಹೋಗಲು ತವರಿನಿಂದ ಬೇಗನೆ ಹೊರಡುವ ತಯಾರಿಯಲ್ಲಿದ್ದೆ. ಅತ್ತಿಗೆಯಂದಿರು ಅಣ್ಣಂದಿರು "ಸಂಸಾರ ಮುರಿಯಹೊರಟವರ ಉಸಾಬರಿ ನಿನಗೇಕೆ...?" ಎಂದರೂ ನಾನದನ್ನು ಮನಸ್ಸಿಗೆ ಹಾಕಿಕೊಳ್ಳಲಿಲ್ಲ. ನನ್ನ ಮಕ್ಕಳು ಅಣ್ಣಂದಿರ ಮಕ್ಕಳೊಂದಿಗೆ ಆಡುತ್ತಿದ್ದರು. ಅದರಿಂದಾಗಿ ಮಕ್ಕಳ ಚಿಂತೆ ನನಗಿರಲಿಲ್ಲ. ಸೀದಾ ಡಾಕ್ಟ್ರ ಮನೆಗೆ ಹೋದೆ.. ನವ್ಯ ಹೊರಟು ನಿಂತಿದ್ದಳು. ಅವಳ ಜೊತೆಗೆ ಕಾರು ಹತ್ತಿದಾಗ ನಾನಂದು ನಡೆದುಕೊಂಡು ಹೋಗುತ್ತಿದ್ದಾಗ ನವ್ಯ ನನಗೆ ಕೈ ಬೀಸಿದಂತೆ.. ಇವತ್ತು ಅವಳ ಅಪ್ಪ-ಅಮ್ಮ ನಮಗೆ ನಗುನಗುತ್ತಾ ಕೈಬೀಸಿದರು.. ಶುಭವಾಗಲಿ ಎಂದು ಅವರ ಮುಖಭಾವ ಹರಸಿದಂತಿತ್ತು.
ಕ್ಲಿನಿಕ್ ಬಾಗಿಲು ತೆರೆಯುತ್ತಿದ್ದಂತೆಯೇ ಕೆಲವರು ಕುತೂಹಲದಿಂದ ಇಣುಕಿದರು . ಕೆಲವರು ಅಲ್ಲಿಯೇ ಸಮೀಪದ ಅಂಗಡಿಗೆ ಬಂದವರು ಏನೋ ಔಷಧಿ ಆಗಬೇಕಿತ್ತು ಇಲ್ಲಿಂದಲೇ ಪರೀಕ್ಷೆ ಮಾಡಿ ಕೊಂಡುಕೊಳ್ಳುವ ಎಂದು ಬಂದರು. ಇನ್ನು ಕೆಲವರು ವೈಯಕ್ತಿಕವಾಗಿ ಪ್ರಶ್ನೆಗಳನ್ನು ಕೇಳಿದರು. ಒಂದಿಬ್ಬರು ಗಂಡನನ್ನು ಬಿಟ್ಟು ಬಂದಿದ್ದೀಯಲ್ಲ ಎಂದು ಚುಚ್ಚಿದರು. ಎಲ್ಲವನ್ನೂ ಒಂದೇ ಸಮನಾಗಿ ಸ್ವೀಕರಿಸಿ ಗಟ್ಟಿ ಮನಸ್ಸಿನಿಂದ ಚಿಕಿತ್ಸೆ ನೀಡಿದಳು. ಸಂಜೆ ಮನೆಗೆ ಹೊರಡುವಾಗ "ಶಾರಿ ನನಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕವಾಗಿ ಯಾವ ಕೊರತೆಯೂ ಇರಲಿಲ್ಲ... ಆದರೆ ಸಮಾಜವನ್ನು ಎದುರಿಸುವ ಧೈರ್ಯ ಮಾತ್ರ ಇರಲಿಲ್ಲ. ಈ ಮಾನಸಿಕ ದೃಢತೆಯನ್ನು ನನಗೆ ತಂದುಕೊಟ್ಟವಳು ನೀನು. ನನ್ನ ನಿನ್ನ ಗೆಳೆತನ ನನ್ನ ಹೊಸ ಹೆಜ್ಜೆಯನ್ನು ಭದ್ರವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಗೆಳತಿಯನ್ನು ಹೊಂದಿರುವ ನಾನೇ ಧನ್ಯೆ..!!" ಅಂದಾಗ ನನ್ನ ಕಣ್ಣುಗಳಿಂದ ಆನಂದಭಾಷ್ಪ ಉದುರಿತು.
ಅವಳಾಡಿದ ನುಡಿಗಳು ನಾನು ಅವಳ ಗೆಳತಿ ಆಗಿದ್ದಕ್ಕೆ ಸಾರ್ಥಕ ಎಂದೆನಿಸಿತು.ಅವಳ ಭವಿಷ್ಯ ಬೆಳಗಲಿ ಎಂದು ಹಾರೈಸಿ ನನ್ನ ತವರುಮನೆಯತ್ತ ಸಾಗಿದೆ..ಕಾಕತಾಳೀಯವಾದರೂ ಸರಿಯಾದ ಸಮಯಕ್ಕೇ ತವರಿಗೆ ಕಳುಹಿಸಿದ ಅತ್ತೆಮಾವನ ಬಗ್ಗೆ ಗೌರವದ ಭಾವನೆ ಮೂಡಿತು...
#ಕಾಲ್ಪನಿಕ
✍️..ಅನಿತಾ ಜಿ.ಕೆ.ಭಟ್.
02-10-2020.
ಒಂದು ಕಥೆ, ಎರಡು ಆಯಾಮ ಎಂದ ಸ್ಪರ್ಧೆಯ ಬರಹ.
No comments:
Post a Comment