Sunday, 5 July 2020

ಜೀವನ ಮೈತ್ರಿ ಭಾಗ ೧೦೦(100)



ಜೀವನ ಮೈತ್ರಿ ಭಾಗ ೧೦೦

💐 ನೂರರ ಸಂಭ್ರಮದ ಸಂಚಿಕೆ 💐


   ಬೆಂಗಳೂರಿನ ಯಾಂತ್ರಿಕ ಜೀವನಚಕ್ರ ಮತ್ತೆ ಆರಂಭವಾಯಿತು.ಗಡಿಬಿಡಿಯ ಒತ್ತಡಮಯ ಜೀವನ.ಯಾವುದಕ್ಕೂ ಬಿಡುವಿಲ್ಲ ಎನ್ನುವ ಪರಿಸ್ಥಿತಿ..


ಅಂದು ಭಾನುವಾರ.ಕಿಶನ್ ಬೆಳಿಗ್ಗೆ ಪೇಪರ್ ಓದುತ್ತಾ ಕುಳಿತಿದ್ದ."ರೀ.."ಎಂದಳು ಮೈತ್ರಿ.
"ಹೂಂ.".ಎಂದ ಪೇಪರಿನಿಂದ ಮುಖವೆತ್ತದೆ..
ಅವನು ನನ್ನತ್ತ ನೋಡಬೇಕು ಎಂದು ಬಯಸಿದಳು ಅವಳು..ಆದರೂ ಬೇಸರ ವ್ಯಕ್ತಪಡಿಸಲಿಲ್ಲ..

"ರೀ...ಈ ತಿಂಗಳು..."

"ಹಾಂ..ಈ ತಿಂಗಳು.. ಏನು .. ತವರಿಗೆ ಹೋಗಬೇಕು ಅಂತ ತಾನೇ... ಹೋಗೋಣ..ಮುಟ್ಟಿನ ಸಮಯ ತಪ್ಪಿಸಿ ಹೋಗೋಣ.."ಎಂದ ಪೇಪರ್ ಮುಂದಿನ ಪುಟ ತಿರುವುತ್ತಾ..

ಹೇಳಬೇಕೆಂದಿದ್ದದ್ದು ಅವಳ ಗಂಟಲಿನಲ್ಲೇ ಉಳಿದು ಹೋಯಿತು.. ಅಡುಗೆ ಮನೆಯತ್ತ ಹೆಜ್ಜೆ ಹಾಕಿದಳು.ತಿಂಡಿ ಕಾಫಿ ಆಗಿ ಮನೆಕೆಲಸದಲ್ಲಿ ತೊಡಗಿದಳು.ಯಾಕೋ ಎಂದಿನ ಲವಲವಿಕೆ ಇರಲಿಲ್ಲ..

ಮಧ್ಯಾಹ್ನದ ಅಡುಗೆ ತಯಾರಿಯಲ್ಲಿದ್ದಾಗ ಅನ್ನದ ಕುಕ್ಕರ್ ಸೀಟಿ  ಹೊಡೆಯುತ್ತಿದ್ದಂತೆ ಆಕೆ ಸಿಂಕ್ ನ ಕಡೆಗೆ ಧಾವಿಸಿದಳು.ವ್ಯಾಕ್ ..ಶಬ್ದ ಕೇಳಿ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ನೋಡುತ್ತಿದ್ದ ಕಿಶನ್  ಅಡುಗೆ ಮನೆಗೆ ಬಂದ.. ಮೆಲ್ಲನೆ ಅವಳ ಭುಜ ಹಿಡಿದು ಎದೆಗೆ ಒರಗಿಸಿಕೊಂಡ.. ನೀರು ಕುಡಿಯಲು ನೀಡಿದ.
".ಕೆಲಸ ಕೆಲಸ ಅಂತ ತುಂಬಾ ಒದ್ದಾಡಿದರೆ ಹೀಗೆಲ್ಲ ಆಗುತ್ತದೆ.. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೋ..ಬಾ.." ಎನ್ನುತ್ತಾ ಕರೆದೊಯ್ಯಲು ಹೊರಟವನನ್ನು..ತಡೆದು..

"ಮೊಳಕೆ ಬರಿಸಿದ ಹೆಸರು ಕಾಳು ಅಲ್ಲಿದೆ..ಕೋಸಂಬರಿ ಮಾಡಬೇಕು..ಈಗಲೇ ..."

ಅವಳ ಮಾತನ್ನು ಅರ್ಧದಲ್ಲೇ ನಿಲ್ಲಿಸಿದ ಕಿಶನ್..
"ಇದೇ ನೀನು ಮಾಡುವ ತಪ್ಪು.. ಊಟಕ್ಕೆ ಒಂದೇ ಬಗೆ ಇದ್ದರೂ ಸಾಕು.. ವಾರವಿಡೀ ದಣಿದ ಈ ಶರೀರಕ್ಕೆ ವಿಶ್ರಾಂತಿ ನೀಡು.."
ಎನ್ನುತ್ತಾ ಅವಳ ಹೆಗಲ ಮೇಲೆ ಕೈಯಿಟ್ಟು ಕೋಣೆಗೆ ಕರೆದೊಯ್ಯುತ್ತಿದ್ದವನ ಕೈಯನ್ನು ತಾನು ಹಿಡಿದು ತನ್ನ ಉದರದ ಮೇಲೆ ತಂದು ಮೆದುವಾಗಿ ಸವರಿ.. ಕಿಶನ್'ನ ಮುಖವನ್ನೇ ದಿಟ್ಟಿಸಿದಳು.. ಒಂದು ಕ್ಷಣ ಅಲ್ಲೇ ನಿಂತ ಕಿಶನ್..

"ಏನು..ಏನಂದೇ.." ಎನ್ನುತ್ತಾ ಅವಳ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸಿದ..ಅವನ ಕಣ್ಣುಗಳಲ್ಲಿ  ಹೊಳಪಿತ್ತು ... ಮುಖದಲ್ಲಿ ಸಂತಸದ ಗೆಲುವಿನ ನಗುವಿತ್ತು..

"ಹೌದು..ರೀ..ಅದೇ..ಅದೇ..ಆಗಲೇ ಹೇಳಬೇಕೆಂದಿದ್ದೆ ... ನೀವು ಯಾಕೋ ಗಮನಿಸುತ್ತಿಲ್ಲ ಎಂದೆನಿಸಿತು..."

     ಕಳೆದುಹೋದ ಅಸಡ್ಡೆ ಅವನಿಗೀಗ ಬೇಕಾಗಿರಲಿಲ್ಲ..ಹೊಸ ಜವಾಬ್ದಾರಿ ಹೊರುವುದಷ್ಟೇ ಬೇಕಾಗಿತ್ತು.."ಮುದ್ಗೊಂಬೆ...ಸಿಹಿ ಸುದ್ದಿ.. ಇನ್ನು ಮೇಲೆ ...ಮನೆ ಕೆಲಸಕ್ಕೆ ನಾನೇ ಮುಂದಾಗಿ ನಿಲ್ತೀನಿ..ನಿನ್ನ ಆರೋಗ್ಯ ಜೋಪಾನವಾಗಿ ನೋಡಿಕೋ.. "ಎನ್ನುತ್ತಾ ಆಕೆಯ ಕದಪುಗಳಿಗೆ ,ಅಧರಗಳಿಗೆ ಸಿಹಿಯ ಮುತ್ತನುಣಿಸಿದ.ಉದರವ ತೀಡಿ ನಮಗೆ ಪ್ರಮೋಷನ್ ಕೊಡ್ತಿದೀಯಾ ಕಂದಾ... ನೀನು .." ಎನ್ನುತ್ತಾ ಉದರದ ಮೇಲೆ ಪ್ರೇಮಮುದ್ರೆಯನೊತ್ತಿದ.. ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಅವನ ಪ್ರೇಮಲೀಲೆ ತೋರಿದ..


"ನಾಳೆಯಿಂದ ಬೆಳಿಗ್ಗೆ ನಾನೇ ಮೊದಲು ಏಳುವುದು..ನಿಂಗೆ ಬಿಸಿ ಬಿಸಿ ಹಾಲು ಕೇಸರಿ ದಳ ಹಾಕಿ ನಾನೇ ಮಾಡಿ ಕೋಡ್ತೀನಿ.."
ಎಂದವನ ಮೂಗನ್ನು ಮೆದುವಾಗಿ ಚಿವುಟಿದಳು..

"ನಾಳೆಯೇ ಒಳ್ಳೆಯ ಗೈನಕಾಲಜಿಸ್ಟ್ ನ ಭೇಟಿಮಾಡೋಣ.. ಇವತ್ತು ಡಾಕ್ಟರ್ ರಜೆಯಲ್ಲಿರುತ್ತಾರೆ.ನಾಳೆ ಬೆಳಿಗ್ಗೆ ಫೋನ್ ಮಾಡಿ ಅಪಾಯಿಂಟ್ಮೆಂಟ್ ತಗೊಳ್ಳೋಣ..ಹಾಂ.. ಇಲ್ಲಿ ಯಾರು ಒಳ್ಳೆಯ ಡಾಕ್ಟರ್ ಅಂತ ಯಾರಿಂದ ತಿಳ್ಕೊಳ್ಳೋದು .." ಹೇಳುತ್ತಲೇ ಇದ್ದ ಕಿಶನ್..

"ಪಕ್ಕದ ಮನೆಯ ಶಾಂತಮ್ಮನವರನ್ನು ಕೇಳೋಣ.ಹೇಗೂ ನಮ್ಮ ಕಡೆಯವರೇ.. ಇತ್ತೀಚೆಗೆ ಮಗಳ ಬಾಣಂತನವನ್ನು ಮಾಡಿದ ಅನುಭವ ಇರುವವರು.."ಎಂದಳು ಮೈತ್ರಿ.

"ಅದೇ ಸರಿಯಾದ ಉಪಾಯ..ಊಟದ ಬಳಿಕ ನಾನು ಒಂದು ರೌಂಡ್ ಅವರ ಮನೆ ತನಕ ಹೋಗಿ ಬರುತ್ತೇನೆ.ಚಿದಂಬರ ರಾಯರಲ್ಲಿ ಮಾತನಾಡಿದಂತೆಯೂ ಆಯಿತು..ಶಾಂತಮ್ಮನವರಲ್ಲಿ ವಿಚಾರಿಸಿಕೊಳ್ಳುವ ಕೆಲಸವೂ ಆಗುತ್ತದೆ.."

ಎನ್ನುತ್ತಿದ್ದವನ  ಎದೆಯ ಮೇಲೆ ಕಚಗುಳಿಯಿಟ್ಟು .."ಹೀಗೇ ಮಾತನಾಡುತ್ತಾ ನಿಂತು ಬಿಡ್ತೀರೋ.. ಅಲ್ಲಾ ನನ್ನನ್ನು ರೂಮ್ ಗೆ ಹೋಗಲು ಬಿಡ್ತೀರೋ.. "ಅಂದಾಗ..

ಅವಳ ಹೆಗಲನ್ನು ಸುತ್ತುವರಿದಿದ್ದ ಅವನ ಕೈಗಳನ್ನು ಕೆಳಗೆ ಸರಿಸಿ ತನ್ನೆರಡೂ ಕೈಗಳಿಂಧ ಅವಳನ್ನು ಅನಾಮತ್ತಾಗಿ ಎತ್ತಿಕೊಂಡು ಬೆಡ್ ರೂಂ ಗೆ ಸಾಗಿದ.ಪತಿಯ ಅನಿರೀಕ್ಷಿತ ನಡತೆಯಿಂದ... ಮೈತ್ರಿ ಗಲಿಬಿಲಿಗೊಂಡರೂ ಅವನ ಅತಿ ಮುದ್ದು ಅವಳಿಗೆ ಬಹಳವೇ ಇಷ್ಟವಾಗಿತ್ತು ಎಂದು ಅವಳ ಕದಪುಗಳು ಸಾರುತ್ತಿದವು.

         ********

       ಮಹತಿಗೆ ಒಮ್ಮೊಮ್ಮೆ ಆಫೀಸ್ ನಲ್ಲಿ ಕೆಲಸಗಳ ಒತ್ತಡ ಹೆಚ್ಚು ಇರುತ್ತಿತ್ತು.ಆಗೆಲ್ಲ ಅವಳು ಫೋನ್ ಮಾಡಿದರೆ ಸಾಕು...ಅವಳ ತವರಿನಿಂದ ಅಡುಗೆ ಮಾಡಿ ತಂದು ಮನೆ ಬಾಗಿಲಿಗೆ ಕೊಟ್ಟು ಹೋಗುತ್ತಿದ್ದ ಅವಳಪ್ಪನ ಕಾರ್  ಡ್ರೈವರ್.ಇದು ಮುರಲಿಗೆ ಕಸಿವಿಸಿ ಆಯಿತು."ಎಷ್ಟು ದಿನ ಇನ್ನೊಬ್ಬರ ಹಂಗಿನಲ್ಲಿರುವುದು.ನಾನೇ ಅಡುಗೆ ಮಾಡುತ್ತೇನೆ" ಎಂದು ಹೇಳಿದ.ಮಹತಿಯೂ ಸಮ್ಮತಿಸಿದಳು.ಬರಬರುತ್ತಾ ಮುರಲಿಯ ಅಡುಗೆಯೇ ಖಾಯಂ ಆಯಿತು.ಮಾತೆತ್ತಿದರೆ ನಾನೂ ನಿನ್ನಂತೆಯೇ ದುಡಿಯುತ್ತೇನೆ,ಸಂಪಾದಿಸುತ್ತೇನೆ,ಗಂಡು ಹೆಣ್ಣು ಸಮಾನರು ಎಂದು ವಾದಕ್ಕಿಳಿಯುತ್ತಿದ್ದಳು.ಅವಳಿಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ.ಅನ್ನ ಸಾರು, ಚಪಾತಿ ದಾಲ್, ಬಿಟ್ಟರೆ ಬೇರೇನೂ ಕಲಿಯುವ ಗೋಜಿಗೆ ಹೋಗಲಿಲ್ಲ.ಮುರಲಿಗೆ ರುಚಿ ರುಚಿಯಾದ ಅಡುಗೆ ಉಣ್ಣಲು ಆಸೆ.ತನ್ನಾಸೆಗೋಸ್ಕರ ತಾನೇ ಅಡುಗೆಯ ಜವಾಬ್ದಾರಿ ಹೊರುತ್ತಿದ್ದನೇ ವಿನಃ ಜಗಳಕ್ಕಿಳಿಯುತ್ತಿರಲಿಲ್ಲ.


     ಆ ದಿನ ಅವಳು ಬಹಳವೇ ದಣಿದಿದ್ದಳು.ಅಲ್ಲದೆ ಅವಳಿಗೆ ಸತತ ಕೂಡುವಿಕೆಯಿಂದಾಗಿ ಇನ್ಫೆಕ್ಷನ್ ಕೂಡ ಆಗಿತ್ತು.ಇನ್ಫೆಕ್ಷನ್ ನಿಂದಾಗಿ ಆಫೀಸಿನಲ್ಲಿ ಬಹಳವೇ ಕಷ್ಟವಾಗುತ್ತಿತ್ತು.ಆದ್ದರಿಂದ ಒಂದೆರಡು ದಿನ ಪತಿಯಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದಳು.
ಅದೆಲ್ಲ ಮುರಲಿಗೆ ಅರ್ಥವಾಗುವುದಿಲ್ಲ.ಅವನು  ಶೃಂಗಾರಭಾವದಲ್ಲಿ ಅವಳ ಸಂಗವ ಬಯಸಿದ.ಅವಳು ಬೇಡವೆಂದಳು.ಅವಳನ್ನು ರಮಿಸುವ ಪ್ರಯತ್ನದಲ್ಲಿ  ನಿರತನಾಗಿ ಮನವ ಗೆದ್ದೆನೆಂದು ಬೀಗಿ ಮುಂದುವರಿದ.. ಅವಳು ಸಿಟ್ಟಿನಿಂದ ಅವನ ಕೆನ್ನೆಗೆರಡು ಬಾರಿಸಿದಳು.. ಎದ್ದು ಕುಳಿತು.." ಏನು.. ನನ್ನದೂ ಕೂಡ ಒಂದು ಜೀವ.ನನ್ನ ಭಾವನೆಗಳಿಗೆ ಬೆಲೆಯಿಲ್ಲವೇ..?" ಎಂದು ಗುರಾಯಿಸಿದಳು.

ಆತ ಅವಳ ಮಾತನ್ನು ತಿರಸ್ಕರಿಸಿ ಮುಂದುವರಿದ."ನಾನೂ ನಿನಗೆ ಸಮಾನಳು ತಿಳಿ.. "ಎಂದು ಅವನನ್ನು ದೂಡಿದಳು..

"ಸಮಾನತೆ ಮಲಗುವ ಕೋಣೆಯಿಂದ ಹೊರಗೆ ಮಾತ್ರ.ಮಂಚದಲ್ಲಿ ಗಂಡು ಗಂಡೇ.. ಹೆಣ್ಣು ಹೆಣ್ಣೇ..  " ಎನ್ನುತ್ತಾ ಬಲವಂತದಿಂದ ತನ್ನ ಕಾಮ ವಾಂಛೆಯನ್ನು ತೀರಿಸಿದ.. ಜೀವನದಲ್ಲಿ ಮೊದಲ ಬಾರಿಗೆ ಸೋತಂತೆ ಅನಿಸಿತವಳಿಗೆ..ಅವಳಿಗಾದ ಸೋಲು  ಮುರಲಿಯ ಮೇಲೆ ಸಣ್ಣ ದ್ವೇಷ ಭಾವನೆ ಬೆಳೆಯಲು ಕಾರಣವಾಯಿತು.


      ಊರಲ್ಲಿದ್ದ ಶಶಿಗೆ ಮಗಸೊಸೆಯ ನೆನಪಾಗುತ್ತಿತ್ತು.ಇಬ್ಬರೂ ದುಡಿಯುವವರು.ಗಡಿಬಿಡಿಯಲ್ಲಿ ಆಹಾರ ಅನುಪಾನ ಸರಿಯಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ..ನಮ್ಮೂರಿನ ಅಡುಗೆಗಳನ್ನು ಸೊಸೆಗೆ ಈಗಲೇ ಕಲಿಸಬೇಕು.ಆರಂಭದಲ್ಲೇ ಸೊಸೆಯನ್ನು ಹದಹಿಡಿಯಬೇಕು. ಎಂದುಕೊಂಡು ಒಂದು ದಿನ ಶಶಿ ಮಗನಿಗೆ ಫೋನಾಯಿಸಿ "ಮಗಾ..ನಾನು ನಿನ್ನ ಮನೆಗೊಮ್ಮೆ ಬರಬೇಕು ಕಣೋ.."ಎಂದರು. ಮುರಲಿಗೂ ಅಮ್ಮನ ಕೈರುಚಿ ಸವಿಯುವ ಆಸೆ."ಬನ್ನಿ .."ಎಂದ.ಅತ್ತೆ ಬರುವುದು ಗೊತ್ತಾಗುತ್ತಿದ್ದಂತೆ ಗರಂ ಆದಳು ಮಹತಿ."ನನ್ನನ್ನು ಕೇಳದೆ ಬರಲು ಹೇಳಿದ್ದೇಕೆ?" ಎಂದು ಅವಳ ವಾದ.


*******


      ಕಿಶನ್ ಸಂಜೆ ಚಿದಂಬರ ರಾಯರ ಮನೆಗೆ ಹೋಗಿ ವಿಚಾರಿಸಿಕೊಂಡು ಬಂದನು.ವಿಚಾರ ತಿಳಿದ ಶಾಂತಮ್ಮ, ಚಿದಂಬರರಾಯ ದಂಪತಿ ಕಂಗ್ರಾಟ್ಸ್ ಹೇಳಿದರು. ಅವರು ಹತ್ತಿರದಲ್ಲಿ ಇದ್ದ ಖಾಸಗಿ ನರ್ಸಿಂಗ್ ಹೋಮ್'ನಲ್ಲಿ ಡಾಕ್ಟರ್ ಶಾಂತ ಎಂಬ ಸ್ತ್ರೀ ರೋಗ ತಜ್ಞೆಯನ್ನು ಸೂಚಿಸಿದರು. ಇವರ ಮಗಳಿಗೂ ಅವರೇ ಡೆಲಿವರಿ ಮಾಡಿದಂತೆ. ಮರುದಿನ ಬೆಳಿಗ್ಗೆ ವೈದ್ಯರ ಅಪಾಯಿಂಟ್ಮೆಂಟ್ ಪಡೆದ. ಅರ್ಧ ದಿನ ರಜೆ ಪಡೆದು ಪರೀಕ್ಷೆ  ಮಾಡಿಸಲು ತೆರಳಿದರು.

     ವೈದ್ಯೆ ಚೆಕಪ್ ಮಾಡಿ .. ಅಗತ್ಯವಾದ ಸಲಹೆಗಳನ್ನು ನೀಡಿದರು. ಮಾತ್ರೆಗಳನ್ನು ಬರೆದು ಕೊಟ್ಟರು. ಮೂರು ತಿಂಗಳವರೆಗೆ ಅತಿಯಾಗಿ ಬಗ್ಗಿ ಕೆಲಸ ಮಾಡಬೇಡಿ ..ಎಂದು ಸಲಹೆ ನೀಡಿದರು.ಪ್ರಯಾಣಿಸುವಾಗ ಜಾಗರೂಕತೆ ವಹಿಸಬೇಕು . ಎಂದರು


     ವೈದ್ಯರ ಸಲಹೆಗಳನ್ನೆಲ್ಲಾ  ಪಾಲಿಸುತ್ತಾ ಉದ್ಯೋಗ ,ಮನೆ ಎರಡನ್ನೂ ನಿಭಾಯಿಸುತ್ತಾ ಬಂದಳು ಮೈತ್ರಿ. ಹಣ್ಣು ಹಂಪಲು,ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಳು.
ಕೆಲಸಗಳಲ್ಲಿ ಕಿಶನ್ ಬಹಳ ಮುತುವರ್ಜಿಯಿಂದ ಹೆಗಲು ಕೊಡುತ್ತಿದ್ದ.ಟ್ರಾಫಿಕ್ ತೊಂದರೆಯಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಳ್ಳಲು ಆಫೀಸಿಗೆ ಬೈಕಿನಲ್ಲಿ ತೆರಳುತ್ತಿದ್ದವರು, ಈಗ  ನಿತ್ಯವೂ ಕಾರಿನಲ್ಲಿ ಪ್ರಯಾಣಿಸಲು ಆರಂಭಿಸಿದರು.


     ಎರಡು ತಿಂಗಳಾಗುತ್ತಿದ್ದಂತೆ  ಸಿಹಿ ಸುದ್ದಿಯನ್ನು ಕುಟುಂಬದವರಿಗೆ ತಿಳಿಸಿದರು. ಎರಡು ಕಡೆಯವರಲ್ಲಿ ಸಂಭ್ರಮ ಮನೆಮಾಡಿತ್ತು. ಮಂಗಳಮ್ಮ ಆಗಾಗ ಕರೆಮಾಡಿ ಮಗಳ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಮಮತಾ "ಮೈತ್ರಿಗೆ ಕಷ್ಟವಾಗುತ್ತಿದ್ದರೆ ಉದ್ಯೋಗ ಬಿಟ್ಟರೂ ತೊಂದರೆಯಿಲ್ಲ.ಈಗ ಸಂಪಾದನೆಗಿಂತ ಆರೋಗ್ಯವೇ ಮುಖ್ಯ.. " ಎಂದು ಸಲಹೆ ನೀಡಿದರು.



     ಗಣೇಶ ಶರ್ಮರ ಮನೆ ಕುಂಪೆಯ 'ಶಂಕರನಿಲಯ' ಖುಷಿಯಿಂದ ತುಂಬಿದ್ದ ಇಂತಹ ಸಂದರ್ಭದಲ್ಲಿ ಮನೆ ಮುಂದೆ ನಾಗರಹಾವೊಂದು ಹೆಡೆಯೆತ್ತಿ ನಿಂತಿತ್ತು.ಅದನ್ನು ಕಂಡ ಮಮತಮ್ಮ ಹೌಹಾರಿದರು.ಗಂಡನನ್ನು ಕೂಗಿದರು..

ಮುಂದುವರಿಯುವುದು...

✍️... ಅನಿತಾ ಜಿ.ಕೆ .ಭಟ್.
06-07-2020.





2 comments:

  1. ನೂರರ ಸಂಭ್ರಮ... ಅಭಿನಂದನೆಗಳು 💐💐

    ReplyDelete