ಜೀವನ ಮೈತ್ರಿ ಭಾಗ ೧೦೧
ಗಣೇಶ ಶರ್ಮರ ಮನೆ ಕುಂಪೆಯ 'ಶಂಕರನಿಲಯ' ಖುಷಿಯಿಂದ ತುಂಬಿದ್ದ ಇಂತಹ ಸಂದರ್ಭದಲ್ಲಿ ಮನೆ ಮುಂದೆ ನಾಗರಹಾವೊಂದು ಹೆಡೆಯೆತ್ತಿ ನಿಂತಿತ್ತು.ಅದನ್ನು ಕಂಡ ಮಮತಮ್ಮ ಹೌಹಾರಿದರು.ಗಂಡನನ್ನು ಕೂಗಿದರು..ಗಣೇಶ ಶರ್ಮ ಬಂದವರೇ ನಾಗಪ್ಪನನ್ನು ಕಂಡು "ನಾಗಪ್ಪಾ.. ಹೀಗೆ ಕಾಣಿಸಿಕೊಂಡು ಭಯಪಡಿಸಬೇಡ. ನಿನಗೆ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇನೆ. ಮಗನ ಮದುವೆಯಾಯಿತು ..ಸಿಹಿ ಸುದ್ದಿಯೂ ಬಂತು..ಆದರೂ ನನ್ನ ಕಟ್ಟೆ ಇನ್ನೂ ಸರಿ ಮಾಡಲು ಹೊರಟಿಲ್ಲ ಏಕೆ?.. ಎಂದು ತಾನೇ ನಿನ್ನ ಅಹವಾಲು.. ದೀಪಾವಳಿ ಹಬ್ಬದ ನಂತರ ಒಂದು ಶುಭ ಮುಹೂರ್ತದಲ್ಲಿ ನಾಗನಕಟ್ಟೆಯ ಪುನರುತ್ಥಾನ ಕಾರ್ಯವನ್ನು ಕೈಗೊಳ್ಳುತ್ತೇವೆ..ಅಲ್ಲಿಯವರೆಗೆ ತೊಂದರೆ ಕೊಡದಿರು.."ಎನ್ನುತ್ತಾ ಕೈಮುಗಿದಾಗ ಎತ್ತಿದ ಹೆಡೆಯನ್ನು ಕೆಳಗೆ ಹಾಕಿ ಸರ್ರನೆ ಹರಿದು ಹೋಯಿತು..ಇಬ್ಬರೂ ನಿಟ್ಟುಸಿರು ಬಿಟ್ಟರು.ಇವತ್ತೇ ಈ ಸಮಾಚಾರ ಮಗನಲ್ಲಿ ಮಾತನಾಡಬೇಕು.ನಾಗನ ಕಟ್ಟೆ ,ದೈವದ ಕಟ್ಟೆ ನಿರ್ಮಾಣದ ಖರ್ಚು ಲಕ್ಷ ದಾಟಬಹುದು. ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದರು.
********
ಶಶಿ ಮುರಲಿಯ ಮನೆಗೆ ಹೋಗುವ ವಿಚಾರ ಗಂಡನಲ್ಲಿ ಪ್ರಸ್ತಾಪಿಸಿದಾಗ ಶಂಕರ ರಾಯರು "ಈಗಲೇ ಬೇಡ..ಮದುವೆಯಾದ ಹೊಸದರಲ್ಲಿ ಅವರದೇ ಆಸೆ, ಆಕಾಂಕ್ಷೆಗಳಿರುತ್ತವೆ.ಅವರ ಮಧ್ಯೆ ಇನ್ನೊಬ್ಬರು ಯಾಕೆ..? ಕೆಲವು ಸಮಯದ ಬಳಿಕ ಹೋಗಬಹುದು ಎಂದರು. ಶಶಿ ಮಾತ್ರ ತನ್ನ ಹಠ ಬಿಡಲಿಲ್ಲ."ಹಾಗಾದರೆ ನಿನ್ನಿಷ್ಟ "ಎಂದರು ಶಂಕರ ರಾಯರು.ಶಶಿ ಹೊರಡುವ ತಯಾರಿ ಮಾಡಿದಳು.ಮಗ ವೆಂಕಟನಲ್ಲಿ ಕರೆದೊಯ್ದು ಬಿಡುವಂತೆ ಕೇಳಿಕೊಂಡಳು.ವೆಂಕಟ್ ಅಮ್ಮನನ್ನು ಕರೆದುಕೊಂಡು ಅಣ್ಣನ ಮನೆಗೆ ಬಂದ.ತಾನೂ ಎರಡು ದಿನ ಉಳಿದುಕೊಳ್ಳುವ ಪ್ಲಾನ್ ಹಾಕಿದ್ದ.ಅಣ್ಣನಲ್ಲಿಗೆ ಬಂದಾಗ ಏನನಿಸಿತೋ ಏನೋ..ಒಂದೇ ದಿನದಲ್ಲಿ ವಾಪಾಸಾದ. ಹೊರಡುವ ಮುನ್ನ "ಅಮ್ಮ ನೀನು ಒಂದು ವಾರದಲ್ಲಿ ಬಾ..ನನಗೆ ಮತ್ತು ಅಪ್ಪನಿಗೆ ಇಬ್ಬರಿಗೇ ಮನೆ ನಿರ್ವಹಣೆ ಕಷ್ಟ".ಎಂದಿದ್ದ.
ಅತ್ತೆ ಮನೆಯಲ್ಲಿದ್ದಾರೆಂದು ಮಹತಿ ಅಡುಗೆ ಮನೆ ಕಡೆ ತಲೆಹಾಕುವ ಗೋಜಿಗೆ ಹೋಗಲಿಲ್ಲ.ಸೊಸೆ ತನ್ನ ಪಾಡಿಗೆ ತಾನು ಇರುವುದನ್ನು ಕಂಡು ಶಶಿಗೂ ಸರಿಕಾಣಲಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೆ ಕರೆಯುತ್ತಿದ್ದರು.ಆಗಾಗ ಸಲಹೆಗಳನು ಕೊಡುತ್ತಾ ,ಹೇಗೆ ಅಡುಗೆ ಮಾಡಬೇಕೆಂದು ಹೇಳಿಕೊಡುತ್ತಿದ್ದರು .ಮಹತಿಗೆ ಇದು ಕಿರಿಕಿರಿ ಎನಿಸಿತು.ರಾತ್ರಿ ಮಲಗುವ ಕೋಣೆಗೆ ತೆರಳಿದ ಮೇಲೆ ಗಂಡನಿಗೆ ಅತ್ತೆಯ ಮೇಲೆ ದೂರಿನ ಪಟ್ಟಿಯೇ ಇರುತ್ತಿತ್ತು.ಎರಡು ಮೂರು ದಿನ ಹೀಗೇ ನಡೆಯಿತು.ಮಡದಿ ಎಷ್ಟೇ ದೂರಿದರೂ ಮುರಲಿ ತುಟಿ ಪಿಟಿಕ್ ಎನ್ನಲಿಲ್ಲ.ಅಮ್ಮನೂ ಆಗಾಗ 'ಮಹತಿಗೂ ಅಡುಗೆ ಕಲಿಯುವಂತೆ ಹೇಳು' ಎಂದು ಹೇಳುತ್ತಿದ್ದರೆ ಅದಕ್ಕೂ ಅವನ ಮೌನವೇ ಉತ್ತರ.
ನಾಲ್ಕನೇ ದಿನ ಶಶಿ ಬೇಕೆಂದೇ ಸ್ವಲ್ಪ ತಡವಾಗಿ ಎದ್ದರು.ಸೊಸೆ ಏನು ಮಾಡುತ್ತಾಳೆ ನೋಡೋಣ. ಎಂದು...ಅತ್ತೆಯಿದ್ದಾರೆಂದು ನಂಬಿದ ಅವಳೂ ಎಂದಿನಿಂದ ಹೆಚ್ಚು ಹೊತ್ತು ಸುಖವಾಗಿ ನಿದ್ರಿಸಿದ್ದಳು.ಎದ್ದು ಬಂದು ನೋಡಿದಾಗಲೇ ತಿಳಿದದ್ದು ಅತ್ತೆ ಎದ್ದಿಲ್ಲವೆಂದು.ಆಫೀಸಿಗೂ ಬೇಗ ಹೋಗಬೇಕು.. ತಿಂಡಿಯೂ ಮಾಡಬೇಕು.. ಗಡಿಬಿಡಿಯಲ್ಲಿ ಅಡುಗೆ ಮಾಡುತ್ತಾ ಮುರಲಿಯ ಸಹಾಯ ಕೇಳಿದಳು.ಅವನೂ ಸಹಾಯಕ್ಕೆ ನಿಂತ.ಶಶಿಗೆ ಸಿಟ್ಟು ಬಂತು.
"ಗಂಡನಲ್ಲಿ ಏಕೆ ಕೆಲಸ ಮಾಡಿಸುತ್ತಿ.ಅವನ ದುಡಿಮೆ ಆಫೀಸಿನಲ್ಲಿ .. ಗಂಡು ಹೊರಗೆ ದುಡಿಯುವುದು.. ಹೆಣ್ಣು ಮನೆಯೊಳಗೆ ಜವಾಬ್ದಾರಿ ನಿಭಾಯಿಸುವುದು.. ನೀನೇ ಸ್ವಲ್ಪ ಬೇಗ ಎದ್ದು ಮಾಡಬಾರದಾ.. ಹೆಣ್ಣುಮಕ್ಕಳು ಅಡುಗೆ ಮಾಡಲು ಕಲಿತುಕೊಳ್ಳಬೇಕು"ಎಂದರು.
ಮಹತಿಗೂ ಕೋಪ ಬಂತು.ಆಕೆಯೂ "ನಾನೂ ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ ನಿಮ್ಮಂತೆ.ಹೊರಗೆ ದುಡಿಯುವ ಹೆಣ್ಣು ನಾನು.ಇಬ್ಬರೂ ಮನೆ ಕೆಲಸಗಳಿಗೆ ಹೆಗಲು ಕೊಡುವುದು ಸರಿಯಾದ ವಿಚಾರ"ಎಂದಳು.ಇದರಿಂದ ಇಬ್ಬರಲ್ಲೂ ಅಸಮಾಧಾನ ಉಂಟಾಯಿತು.
ಮಹತಿ ಚಹಾ ಮಾಡಿದಾಗ "ಚಹಾ ಮಾಡುವುದು ಹಾಗಲ್ಲ.."ಎಂದರು.ಇಬ್ಬರೂ ಮಾಡುವ ವಿಧಾನ ಬೇರೆಯಾದರೂ ಎರಡೂ ರುಚಿಸುತ್ತಿತ್ತು ಮುರಲಿಗೆ.ಇಬ್ಬರೂ ತಮ್ಮ ಕ್ರಮವನ್ನೇ ಸಮರ್ಥಿಸಿಕೊಂಡರು.ಮುರಲಿ ತಟಸ್ಥನಾಗಿದ್ದ.ಮಹತಿಯ ಆಧುನಿಕ ಸಂಸ್ಕೃತಿಯ ಉಡುಗೆ ತೊಡುಗೆಯನ್ನು ನೋಡಿ...
"ನನ್ನ ಸೊಸೆಗೆ ಮಾನ ಮುಚ್ಚುವಷ್ಟು ಬಟ್ಟೆ ಕೊಂಡುಕೊಳ್ಳಲು ನಮ್ಮಲ್ಲಿ ಆರ್ಥಿಕ ಶಕ್ತಿಯಿದೆ.ಮಗ.. ಅವಳಿಗೆ ಮೈತುಂಬ ಮುಚ್ಚಿಬರುವಂತಹ ಬಟ್ಟೆ ಕೊಡಿಸು.."ಎಂದದ್ದೇ ತಡ..ಮಹತಿ ಅತ್ತೆಗೆ ಮನಬಂದಂತೆ ಬಯ್ಯತೊಡಗಿದಳು.
"ನನ್ನ ದೇಹ,ನನ್ನ ಬಟ್ಟೆ,ನನ್ನ ಫ್ಯಾಷನ್ ಬಗ್ಗೆ ಮಾತನಾಡಲು ನೀನ್ಯಾರು.. ???" ಎನ್ನುತ್ತಾ ಉರಿದುಹೋದಳು..ಶಶಿಯು ತಾನೇನೂ ಕಮ್ಮಿಯಿಲ್ಲ ಎಂಬಂತೆ ಮುಂದುವರಿಸಿದಳು..
ಜಗಳ ಜೋರಾಗಿ ಮಹತಿ ತಿಂಡಿ ತಿನ್ನದೆ ಹೊರಟಳು.ಮುರಲಿ ಮನವೊಲಿಸಲು ಯತ್ನಿಸಿದ.. ಅವಳು ತನ್ನ ಹಠ ಸಡಿಲಿಸಲಿಲ್ಲ.ಅಮ್ಮ ತನ್ನದೇ ಸರಿ ಎಂಬ ಗುಂಗಿನಲ್ಲಿದ್ದರು.ಮುರಲಿ ದಿಕ್ಕು ತೋಚದೇ ಕುಳಿತ.. ಸಂಜೆ ಬಂದ ಮೇಲೆ ಸಮಾಧಾನಪಡಿಸಿದರಾಯಿತು .. ಎಂದು ಕೊಳ್ಳುತ್ತಾ ತನ್ನ ಆಫೀಸಿಗೆ ಹೊರಟವನಿಗೆ ಮನದ ತುಂಬಾ ಆತಂಕದ ಯೋಚನೆಗಳು..
ಮುರಲಿ ಆಫೀಸಿನಿಂದ ಹಿಂದಿರುಗಿದಾಗ ಮಹತಿ ಇನ್ನೂ ಬಂದಿರಲಿಲ್ಲ.ಅಮ್ಮನ ಸಿಟ್ಟೂ ಪೂರ್ತಿ ಇಳಿದಂತೆ ಕಾಣಲಿಲ್ಲ.ಮಹತಿಗೆ ಕರೆಮಾಡಿದರೂ ಸ್ವೀಕರಿಸುತ್ತಿರಲಿಲ್ಲ.ಎಂಟು ಗಂಟೆವರೆಗೆ ಕಾದ ಮುರಲಿ ,ನಂತರ ಮಾವನ ಮನೆಗೆ ಕರೆಮಾಡಿ ವಿಚಾರಿಸಿದ.ಅಲ್ಲಿಗೂ ಹೋಗಿರಲಿಲ್ಲ."ಏನು ಸಮಾಚಾರ ?" ಎಂದು ಅತ್ತೆ ಪ್ರಶ್ನಿಸಿದರೆ..ಹೇಳಲು ಮುರಲಿಯ ನಾಲಿಗೆ ತಡವರಿಸಿತು."ಏನಿಲ್ಲ .." ಎಂದು ಫೋನಿಟ್ಟ.ಅವಳ ಗೆಳತಿಗೂ ಕರೆಮಾಡಿದ. ಅವರಿಗೂ ತಿಳಿದಿಲ್ಲ ಎಂಬ ಉತ್ತರ ಬಂದಾಗ ತಲೆಮೇಲೆ ಕೈಹೊತ್ತು ಕುಳಿತ ಮುರಲಿ.
ಛೇ.. ನಾನು ತಪ್ಪು ಮಾಡಿದೆ.ಅಮ್ಮನ ಬಾಯಿ ಮುಚ್ಚಿಸಬೇಕಿತ್ತು..ಅಲ್ಲಲ್ಲ ಅಮ್ಮನನ್ನು ಈಗ ಬರುವುದೇ ಬೇಡ ಎನ್ನಬೇಕಿತ್ತೇನೋ... ಮಹತಿಗೆ ಹಾಗೆಲ್ಲ ಕೋಪಿಸಿಕೊಳ್ಳಬೇಡ ಎಂದು ಮೆದುವಾಗಿ ಗಲ್ಲ ಸವರಿ ಹೇಳಬೇಕಿತ್ತೇನೋ ..ಆ ದಿನ ಮಹತಿಯ ಮೇಲೆ ಬಲವಂತ ಮಾಡಲು ಹೋಗಬಾರದಿತ್ತು.ಅವಳ ಮನವೊಲಿಸಿ ತನುವ ಬಯಸಬೇಕಿತ್ತು..ಛೇ..ನನಗಿದು ತಿಳಿಯಲೇ ಇಲ್ಲ..ನಾನು ದಡ್ಡ..ಬರೀ ದಡ್ಡ... ಎಂದು ಯೋಚಿಸುತ್ತಿದ್ದವನ ಕಣ್ಣಿಂದ ನೀರು ಸುರಿಯುತ್ತಿತ್ತು..ಮಹತಿ ಒಂದು ಅವಕಾಶ ಕೊಡು..ತಿದ್ದಿಕೊಳ್ಳುವೆ..ಮುದ್ದಿನಿಂದ ನೋಡಿಕೊಳ್ಳುವೆ ಎಂದು ಅವನ ಹೃದಯ ರೋದಿಸುತ್ತಿತ್ತು.. ಆದರೆ ಮಹತಿ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಾಳಾ ..??
ಪೋಲೀಸ್ ಕಂಪ್ಲೇಂಟ್ ಕೊಡಲಾ.. ಏನಾದರೂ ಹೆಚ್ಚು ಕಮ್ಮಿಯಾದರೆ ಏನು ಮಾಡುವುದು..ಮಾವನೂ ಪ್ರಭಾವಿ ವ್ಯಕ್ತಿ... ಅಪ್ಪನಲ್ಲಿ ಹೇಳಲಾ.. ತಮ್ಮನಲ್ಲಿ ಹಂಚಿಕೊಳ್ಳಲಾ..ಎಂದು ಯೋಚಿಸುತ್ತಾ ಬೆವತುಹೋದವನಿಗೆ ಅಮ್ಮ ಮಾಡಿಟ್ಟ ಬಿಸಿ ಗಂಜಿಯೂ ಬೇಡವಾಗಿತ್ತು..
"ಏನೂ ಚಿಂತಿಸಬೇಡ.. ಸಂಸಾರದಲ್ಲಿ ಇದೆಲ್ಲ ಇದ್ದದ್ದೇ..ಅಹಂಕಾರ ಇಳಿದಾಗ ಬರದೇ ಎಲ್ಲಿಗೆ ಹೋಗುತ್ತಾಳೆ..? " ಸೊಸೆಯ ಬಗ್ಗೆ ತನ್ನ ಅಸಡ್ಡೆಯನ್ನು ಹೊರಹಾಕಿದರು ಅಮ್ಮ ಶಶಿ..
"ಏನಮ್ಮಾ ನೀನು..ನಿನ್ನ ಮಗಳಾಗಿದ್ದರೆ ಹೀಗೆ ಹೇಳುತ್ತಿದ್ದಿಯಾ ..ನೀನೂ ಇಲ್ಲಿರುವಾಗ ಸ್ವಲ್ಪ ಹೊಂದಾಣಿಕೆಯ ಗುಣ ಬೆಳೆಸಿಕೊಳ್ಳಬೇಕು.." ಎಂದು ಹೇಳಿಯೇಬಿಟ್ಟ..
"ಹೌದು ಹೌದು..ಹೆಂಡತಿ ಬಂದ ಮೇಲೆ ನಾನು ನಿನಗೆ ಹೊರೆಯಾಗಿದ್ದೇನೆ..ಬೇಡವೆಂದಾದರೆ ಇಂದೇ ಹೊರಟುಹೋಗುವೆ.. ರಾತ್ರಿ ಹನ್ನೊಂದು ಗಂಟೆವರೆಗೆ ಊರಿಗೆ ಬಸ್ ಇದೆ.ನನ್ನನ್ನು ಹತ್ತಿಸಿ ಬಿಡು.. ನಾನು ತೆರಳುತ್ತೇನೆ.." ಎಂದು ಹೇಳಿ ಸರಸರನೆ ತನ್ನ ಬಟ್ಟೆಗಳನ್ನು ಜೋಡಿಸಿಕೊಂಡರು..
ಮಡದಿ ಮನೆಗೆ ಬಂದಿಲ್ಲ..ಅಮ್ಮ ಹೊರಡುವ ಮಾತನಾಡುತ್ತಿದ್ದಾರೆ. ಅಬ್ಬಾ..ಈಗ ನಾನೇನು ಮಾಡಲಿ.. ಇಬ್ಬರಿಗೂ ನಾನೊಂದು ಮಾತಾಡಿದರೂ ಹೆಚ್ಚಾಗುತ್ತದೆ.. ಅರ್ಥಮಾಡಿಕೊಳ್ಳುವ ಬುದ್ಧಿ ,ವಿವೇಕ ಇಬ್ಬರಿಗೂ ಇಲ್ಲ.. ಎನ್ನುತ್ತಾ ತಮ್ಮನಲ್ಲಿ "ಅಮ್ಮನನ್ನು ಕಳುಹಿಸಿಕೊಡಲೇ ??"ಎಂದು ಕೇಳಿದ.. "ಸರಿ.. ಬಸ್ ಹತ್ತಿಸು..ಬೆಳಗಿನ ಜಾವ ನಾನು ಕರೆದುಕೊಂಡು ಬರುತ್ತೇನೆ " ಎಂದು ಒಪ್ಪಿದ ವೆಂಕಟ್.. ಅಮ್ಮನಿಗೆ ಟಿಕೆಟ್ ಮಾಡಿ ಬಸ್ ಹತ್ತಿಸಿ ಬಿಟ್ಟ..
ಇನ್ನು ಏನು ಮಾಡಲಿ..? ಮನೆಗೆ ವಾಪಸ್ ಹೋಗಲೋ..ಅಲ್ಲ ಮಾವನ ಮನೆಗೆ ಹೋಗಿ ಮಹತಿಯ ಸಂಗತಿ ಅರುಹಲೋ.. ಎಂದು ತಳಮಳದಲ್ಲಿದ್ದವನಿಗೆ ಮಾವ ಶಂಕರ ಶಾಸ್ತ್ರಿಗಳ ನೆನಪಾಯಿತು.. ಮಾವನಲ್ಲಿ ಹೇಳುತ್ತೇನೆ.ಅವರಿಗೆ ಅಮ್ಮನ ಸ್ವಭಾವವೂ ಗೊತ್ತು.. ಎಂದು ತಡರಾತ್ರಿ ಮಾವನ ಮನೆಗೆ ತೆರಳಿದ.ಹೊತ್ತಲ್ಲದ ಹೊತ್ತಿನಲ್ಲಿ ಕಾಲಿಂಗ್ ಬೆಲ್ ಒತ್ತಿದ ಅಳಿಯನನ್ನು ಕಂಡು ಗಾಬರಿಗೊಂಡರು
ಶಾಸ್ತ್ರಿಗಳು.ಒಂದೇ ಉಸಿರಿನಲ್ಲಿ ನಡೆದ ಘಟನೆಯನ್ನು ಸೂಕ್ಷ್ಮವಾಗಿ ತಿಳಿಸಿದ ಮುರಲಿ..ಅಳಿಯನ ಅಸಹಾಯಕತೆಯನ್ನು ಕಂಡು ಮುಂದೆ ಏನು ಮಾಡಬಹುದೆಂದು ಯೋಚಿಸತೊಡಗಿದರು.. ಶಂಕರ ಶಾಸ್ತ್ರಿಗಳು..
ಮಹತಿಯ ತಂದೆ ತಾಯಿಗೆ ವಿಚಾರವನ್ನು ತಿಳಿಸುವುದೇ ಲೇಸೆಂದು ನಿರ್ಧರಿಸಿದರು.ಹಾಗೇ ಪೋಲೀಸ್ ಕಂಪ್ಲೇಂಟ್ ಕೊಡೋಣ ಎಂದು ಹೊರಡಲನುವಾದರು..
******
ಮಗಳು ಅಳಿಯ ಮನೆಯಿಂದ ಹೊರಬಿದ್ದ ಮೇಲೆ ಮಾನಸಿಕವಾಗಿ ನರಸಿಂಹ ರಾಯರು ಜರ್ಝರಿತರಾದರು.ಸದಾ ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದರು.ದೇವರ ಸ್ತೋತ್ರ ಪಠಣ, ವೇದಾಧ್ಯಯನ,ಪುರಾಣ ವಾಚನಗಳಲ್ಲಿ ತೊಡಗಿಸಿಕೊಂಡರು.ಮಡದಿ ರೇಖಾಳಲ್ಲಿ ಅಗತ್ಯಕ್ಕೆ ತಕ್ಕವೇ ಮಾತು.ಮೌನವೇ ಹೆಚ್ಚು.ಉದ್ಯೋಗದ ಸ್ಥಳದಲ್ಲಿಯೂ ಮೊದಲಿನ ಲವಲವಿಕೆ ಇರಲಿಲ್ಲ.ರೇಖಾ ಗಂಡನ ಮಾನಸಿಕ ಆರೋಗ್ಯದ ಬಗ್ಗೆ ಚಿಂತಿತರಾದರು.ತನ್ನಿಂದಾಗಿ ಮಗಳು ಅಳಿಯ ಮನೆಯಿಂದ ಹೊರಗೆ ಹೋಗುವಂತಾಯಿತು ಎಂದು ನಿಧಾನವಾಗಿ ಅವರ ಮನಸ್ಸು ಒಪ್ಪಿಕೊಂಡಿತು.ತನ್ನ ತಪ್ಪನ್ನು ಮುಂದೆಯಾದರೂ ತಿದ್ದಿಕೊಂಡು ತಾಳ್ಮೆ, ಹೊಂದಾಣಿಕೆ ಗುಣವನ್ನು ಬೆಳೆಸಿಕೊಳ್ಳಬೇಕು.ಇಲ್ಲದಿದ್ದರೆ ನಮ್ಮ ಕುಟುಂಬವೇ ಇದಕ್ಕೆ ತಕ್ಕ ಬೆಲೆ ತೆರಬೇಕಾದೀತು.. ಎಂಬುದನ್ನು ಅರಿತರು.
ಮುಂದುವರಿಯುವುದು..
✍️...ಅನಿತಾ ಜಿ.ಕೆ .ಭಟ್
07-07-2020.
👌🏻👌🏻👌🏻
ReplyDeleteಧನ್ಯವಾದಗಳು 💐🙏
Delete