Tuesday, 7 July 2020

ಜೀವನ ಮೈತ್ರಿ ಭಾಗ ೧೦೨(102)



ಜೀವನ ಮೈತ್ರಿ ಭಾಗ ೧೦೨


     ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ಶಂಕರ ಶಾಸ್ತ್ರಿಗಳು "ಮುರಲಿ.. " ಎನ್ನುತ್ತಾ ಏನೋ ಹೇಳಲು ಹೊರಟರು.ಅವರು ಹೇಳಿದ್ದಕ್ಕೆ ಸುಮ್ಮನೆ ತಲೆಯಾಡಿಸಿದ ಮುರಲಿ.

       ಕಾರಿನಿಂದ ಇಳಿದು ಮನೆಯೊಳಗೆ ತೆರಳಿ ಮಹೇಂದ್ರ ಗುಪ್ತಗೆ ಕರೆ ಮಾಡಿದರು.ನಾಲ್ಕನೇ ಬಾರಿ ರಿಂಗಾಗುತ್ತಿದ್ದಾಗ ಎತ್ತಿದ ಮಹೇಂದ್ರ ಗುಪ್ತ ಅವರಲ್ಲಿ ಶಂಕರ ಶಾಸ್ತ್ರಿಗಳು ವಿಷಯವನ್ನು ಸೂಕ್ಷ್ಮವಾಗಿ ಅರುಹಿ ಸಹಾಯ ಕೋರಿದರು.ನಾಳೆ ಬೆಳಿಗ್ಗೆ ನೋಡೋಣ ಎಂದರು ಮಹೇಂದ್ರ.

ಮಾವ..ಮುರಲಿಯಲ್ಲಿ "ಈಗ ಮಲಗೋಣ.. ಬೆಳಗ್ಗೆ ನೋಡೋಣ.."ಎಂದರು..ಮಲಗಿದರೂ ಮುರಲಿಗೆ ನಿದ್ರೆ ಸ್ವಲ್ಪವೂ ಸುಳಿಯಲಿಲ್ಲ..ತನ್ನ ನಡತೆಯಲ್ಲಿನ ತಪ್ಪು,ಅಮ್ಮನ ನಡವಳಿಕೆ,ಮಹತಿಯ ಹಠಮಾರಿತನ ಎಲ್ಲವನ್ನೂ ಮನದ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದ.

                      *****

        ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಮಹತಿ ಬೆಳ್ಳಂಬೆಳಗ್ಗೆ ಯಾರೆಲ್ಲ ಕರೆ ಮಾಡಿದ್ದಾರೆಂಬ ಕುತೂಹಲ ತಡೆಯಲಾರದೆ ಸ್ವಿಚ್ ಆನ್ ಮಾಡಿದಳು.ಕಾಕತಾಳೀಯವಾಗಿ ಮಹೇಂದ್ರ ಗುಪ್ತ ಅದೇ ಸಮಮದಲ್ಲಿ ಕರೆಮಾಡಿದರು..ಅಯ್ಯೋ...ಈಗ ಏನು ಮಾಡಲಿ.. ನಿನ್ನೆ ಫುಲ್ ಮೂಡ್ ಆಫ್ ಆಗಿದ್ದಾಗ ಏನಾದರೂ ಎಡವಟ್ಟು ಮಾಡಿದೀನಾ.. ಅಥವಾ ನನ್ನ ಪರ್ಸನಲ್ ವಿಚಾರ ಗೊತ್ತಾಗಿದೆಯಾ..ಪರ್ಸನಲ್ ವಿಚಾರ ಗೊತ್ತಾಗುವ ಛಾನ್ಸೇ ಇಲ್ಲ.. ಬಾಸ್ ನ ಕರೆ ಸ್ವೀಕರಿಸದಿದ್ದರೆ ಆಫೀಸಿನಲ್ಲಿ ಎಲ್ಲರೆದುರು ಮಾನ ತೆಗೆಯೋದು ಗ್ಯಾರಂಟಿ.. ಎಂದು ಯೋಚಿಸುತ್ತಾ ಫೋನ್ ಕರೆ ಸ್ವೀಕರಿಸಿದಳು.

"ಹಲೋ ...ಮಹತಿ... ಗುಡ್ ಮಾರ್ನಿಂಗ್..
.. ನಿನ್ನೆ ನೀವು ಮನೆಗೆ ಒಯ್ದಿದ್ದ ಫೈಲು ಅಗತ್ಯವಾಗಿ ಇವತ್ತು ಬೆಳಿಗ್ಗೆ ಏಳುಗಂಟೆಗೆ ನನ್ನ ಕೈಗೆ ಸಿಗಬೇಕು.ಎಂಟೂರವರೆಗೆ ಹೈಯರ್ ಆಫೀಸರ್ಸ್ ಜತೆ ಮೀಟಿಂಗ್ ಇದೆ.ಅದಕ್ಕೂ ಮುನ್ನ ಇದನ್ನೆಲ್ಲ ರೆಡಿ ಇಟ್ಟುಕೊಳ್ಳಬೇಕು.ನಿಮ್ಮ ಮನೆ ವಿಳಾಸ ಹೇಳಿದರೆ ಅಲ್ಲೇ ಬಂದು ಕಲೆಕ್ಟ್ ಮಾಡಿಕೊಳ್ತೀನಿ.."ಎಂದಾಗ ಮಹತಿ 'ಇನ್ನೇನು ಮಾಡಲಿ..ಹೇಗೆ ಅಡ್ರೆಸ್ ಹೇಳಲಿ'..ಎಂದು ಪೇಚಿಗೆ ಸಿಲುಕಿದಳು.

         ಹೇಳದೆ ಬೇರೆ ದಾರಿಯಿರಲಿಲ್ಲ.. ಹೇಳಿದಳು.."ಸರಿ..ಇನ್ನು ಮೂವತ್ತು ನಿಮಿಷದಲ್ಲಿ ಅಲ್ಲಿ ಇರ್ತೇನೆ "ಎಂದರು ಬಾಸ್..

ಮುರಲಿ,ಶಂಕರ ಶಾಸ್ತ್ರಿಗಳು, ಮಹೇಂದ್ರ ಗುಪ್ತ ಮೂವರೂ ಮಹೇಂದ್ರ ಅವರ ವಾಹನದಲ್ಲಿ ತೆರಳಿದರು.ಮಹೇಂದ್ರಗುಪ್ತ ಮಾತ್ರ ಕಾರಿನಿಂದಿಳಿದರು.ಮಹತಿ ಫೈಲ್ ಹಿಡಿದು ಗೇಟಿನೆದುರು ಕಾಯುತ್ತಿದ್ದಳು.ಜತೆಗೊಬ್ಬಳು ತರುಣಿಯೂ ಇದ್ದಳು.ಫೈಲ್ ತೆಗೆದುಕೊಂಡ ಮಹೇಂದ್ರ ಗುಪ್ತ "ನಿಮಗಿನ್ನೊಂದು ಫೈಲ್ ಕೊಡುತ್ತೇನೆ.ಬೆಳಗ್ಗೆ ಹತ್ತೂವರೆಯಷ್ಟು ಹೊತ್ತಿಗೆ ಅದನ್ನು ರೆಡಿಮಾಡಿಡಿ..ಕಾರಿನಲ್ಲಿದೆ ಬನ್ನಿ ಕೊಡುತ್ತೇನೆ "ಎಂದರು.ಮಹತಿ ಕಾರಿನೆಡೆಗೆ ಹೆಜ್ಜೆ ಹಾಕಿದಳು.

ಕಾರಿನ ಸಮೀಪಕ್ಕೆ ಬಂದಾಗ .. ಹ್ಞಾಂ..ತನ್ನ ಕಣ್ಣನ್ನೇ ನಂಬದಾದಳು.. ಹಬ್ಬೀ ಮುರಲಿ ..!! ಶಂಕರ ಶಾಸ್ತ್ರಿಗಳು..!! ತಲೆಸುತ್ತು ಬರುವುದೊಂದು ಬಾಕಿ.ತನ್ನನ್ನು ಹುಡುಕಲು ಹೆಣೆದ ಬಲೆಯಿದು ಎಂದು ಕ್ಷಣದಲ್ಲೇ ಅರಿತಳು.. ಬಾಸ್'ನ ಎದುರು ತಲೆತಗ್ಗಿಸಿದಳು..


ಮಹತಿಯು ಮೌನವಾಗಿದ್ದಳು.ಮುರಲಿ ಕಾರಿನಿಂದಿಳಿದು ಮಡದಿಯ ಕೈಯನ್ನು ಹಿಡಿದು "ಸಾರಿ..ಕಣೇ..ಬಾ..ಮನೆಗೆ ಹೋಗೋಣ.." ಎಂದ..ಮಹತಿಯ ಜತೆಗಿದ್ದವಳು.".ಏನು..ಏನು ನಡೀತಾ ಇದೆ ಇಲ್ಲಿ.. "ಎನ್ನುತ್ತಾ ಮುರಲಿಯಲ್ಲಿ.. "ಯಾಕೋ.. ಅವಳ ಕೈ ಹಿಡಿದುಕೊಂಡಿದ್ದೀಯಾ .?". ಎಂದಳು.

"ನಮಸ್ತೇ..ನಾನು ಮುರಲಿ...ಮಹತಿ ನನ್ನ ಮಡದಿ "ಎಂದ ವಿನಯದಿಂದ..

"ಓಹ್..ಹಾಗೋ..ನನಗೆ ತಿಳಿದಿರಲಿಲ್ಲ..ಸಾರೀ.."ಎಂದಳು..ಮಹತಿಯ ಕಡೆಗೆ ತಿರುಗಿ" ಮತ್ತೆ ಯಾಕೆ ಇಲ್ಲಿ ಬಂದೆ ನೀನು.." ಎನ್ನುತ್ತಾ ಮಹತಿಯ ನಡೆಯನ್ನು ಆಕ್ಷೇಪಿಸಿದಳು..
ಮಹತಿಯ ಕಣ್ಣುಗಳಿಂದ ನೀರು ಜಿನುಗಲು ಆರಂಭವಾಯಿತು.ಮುರಲಿ ಅವಳ ಕಣ್ಣಂಚಿನಿಂದ ಜಿನುಗುತ್ತಿದ್ದ ನೀರು ಕೆಳಗೆ ಬೀಳದಂತೆ ಕಾಯ್ದ.."ಬಾ ಹೋಗೋಣ.. "ಎಂದು ಮನೆಗೆ ಕರೆದೊಯ್ಯುವ ಯೋಚನೆ ಮಾಡಿದ.

"ನನ್ನದೊಂದು ಕಂಡೀಷನ್ ಇದೆ" ಎಂದಳು ಗದ್ಗದಿತಳಾಗಿ..

"ಏನದು ಹೇಳು.."

"ನನಗೆ ನನ್ನಿಚ್ಛೆಯಂತೆ ಬದುಕಲು ಅವಕಾಶವಿದೆ ಎಂದಾದರೆ ಮಾತ್ರ ವಾಪಾಸಾಗುತ್ತೇನೆ. ಇಲ್ಲವಾದಲ್ಲಿ ನೀವು ,ನಿಮ್ಮಮ್ಮನೇ ಇದ್ದುಕೊಳ್ಳಿ.. ನಾನು ನನ್ನ ಹಾದಿಯನ್ನು ನೋಡಿಕೊಳ್ಳುತ್ತೇನೆ. ಪರರ ಹಂಗಿನಲ್ಲಿ ನಿತ್ಯವೂ ಚುಚ್ಚುನುಡಿ ಕೇಳುತ್ತಾ ಬಾಳಲು ನನಗಿಷ್ಟವಿಲ್ಲ.."ಎಂದಳು..

"ಅಮ್ಮ ಊರಿಗೆ ತೆರಳಿದ್ದಾರೆ.ಇನ್ನು ನಾನು ನೀನು ಇಬ್ಬರೇ ಇರೋದು.. ನಾನು ನಿನ್ನ ಇಷ್ಟಕ್ಕೆ ಭಂಗ ತರುವವನಲ್ಲ.. ಪ್ಲೀಸ್..ಬಾ.."
ಎಂದಾಗ ಹೊರಟಳು ಮಹತಿ...ಪ್ರಕರಣ ಸುಖಾಂತ್ಯವಾಯಿತೆಂದು ನಿಟ್ಟುಸಿರು ಬಿಟ್ಟರು ಶಂಕರ ಶಾಸ್ತ್ರಿಗಳು.

        ‌.           *******

        ದಿಢೀರನೆ ಬೆಂಗಳೂರಿನಿಂದ ಮಡದಿ ವಾಪಾಸಾಗುವ ಸುದ್ದಿ ಕೇಳಿ ಶಂಕರರಾಯರಿಗೆ ಸ್ವಲ್ಪ ಅನುಮಾನ ಹುಟ್ಟಿಕೊಂಡಿತು.ಶಶಿ ಏನಾದರೂ ಅಧಿಪತ್ಯ ಸಾಧಿಸಲು ನೋಡಿ ಸಂಬಂಧ ಹಳಸಿರಬಹುದೇ.. ನಿನ್ನೆ ನಾನು ಮಾತನಾಡಿದಾಗ ಎರಡು ದಿನಗಳ ನಂತರ ಬರುತ್ತೇನೆ ಎಂದವಳು ಇಂದೇ ಹೊರಟಿದ್ದಾಳೆಂದರೆ..ಯಾವುದಕ್ಕೂ ಮನೆಗೆ ಬಂದ ಮೇಲೆ ಕೇಳಿ ನೋಡೋಣ..

ವೆಂಕಟ್ ಬಸ್ ಇಳಿಯುವಲ್ಲಿಗೆ ಹೋಗಿ ಅಮ್ಮನನ್ನು ಕರೆದುಕೊಂಡು ಬರುವಾಗ "ಏನಮ್ಮಾ.. ಇದ್ದಕ್ಕಿದ್ದಂತೆ ಬಂದುಬಿಟ್ಟೆ..?"ಎಂದು ಕೇಳಿದ.

"ಏನು ಹುಡುಗೀರೋ ಏನೋ..ಈಗಿನ ಕಾಲದವರು..ಬುದ್ಧಿವಾದ ಹೇಳುವಂತೆಯೇ ಇಲ್ಲ..ಅವರು ಮಾಡಿದ್ದೇ ಸರಿ...ಅಲ್ಲ ಸ್ವಲ್ಪವೂ ತಿಳಿಹೇಳಬಾರದಾ..?"

"ಏನಾಯ್ತಮ್ಮಾ..ಅಂತಹದ್ದು..?"

"ಅರೆಬರೆ ಮೈ ತೋರುವ ಬಟ್ಟೆ ಧರಿಸುವ ಅಗತ್ಯವೇನು..?ಹೊಟ್ಟೆಗೆ ಬಟ್ಟೆಗೆ ಕೊರತೆಯಿದೆಯೇ..?ನಮ್ಮ ಸಂಪ್ರದಾಯ ಹೀಗಿದೆ..ಇದರಂತೆ ನಡೆದುಕೋ ಎಂದರೆ ತಪ್ಪಾ..ನನಗೂ ಮದುವೆಯಾದ ಆರಂಭದಲ್ಲೇ ನಮ್ಮತ್ತೆ ಮನೆಯ ಸಂಪ್ರದಾಯ ನೇಮ ನಿಷ್ಠೆ ಗಳನ್ನು ತಿಳಿಸಿ ಹೇಳುತ್ತಿದ್ದರು.."
ಅಮ್ಮನ ಮಾತುಗಳನ್ನು ಕೇಳಿದ ವೆಂಕಟ್'ಗೆ ಪರಿಸ್ಥಿತಿ ಅರಿವಾಯಿತು..


              *******


       ಮಹತಿಯ ಬಾಸ್ ಮಹೇಂದ್ರ ಗುಪ್ತ, ಶಂಕರ ಶಾಸ್ತ್ರಿಗಳ ಹಳೆವಿದ್ಯಾರ್ಥಿ.ಮಹತಿಯನ್ನು ಹುಡುಕುವ ಉಪಾಯ ಮಾಡುತ್ತಿದ್ದಾಗ ಶಂಕರ ಶಾಸ್ತ್ರಿಗಳಿಗೆ ತಮ್ಮ ವಿದ್ಯಾರ್ಥಿಯ ಸಹಾಯ ಪಡೆದುಕೊಳ್ಳೋಣ ಎಂದೆನಿಸಿತು.ಮಹೇಂದ್ರ ಗುಪ್ತ ಕೂಡಾ ತನ್ನ ಲೆಕ್ಚರರ್ ಮಾತಿಗೆ ಬೆಲೆಕೊಟ್ಟು ಅವಳನ್ನು ಹುಡುಕಲು ಯೋಜನೆ ರೂಪಿಸಿದರು.

      ಅವಳು ಇರುವ ಸ್ಥಳ ತಿಳಿದು ಅಲ್ಲಿಗೆ ತೆರಳುವ ದಾರಿಯುದ್ದಕ್ಕೂ ಮಾವ, ಅಳಿಯ ಮುರಲಿಗೆ ಬುದ್ಧಿಮಾತು ಹೇಳಿದರು.ಇನ್ನು ಮುಂದೆ ಹೀಗಾಗದಂತೆ ನೋಡಿಕೋ ಎಂದರು..

"ಮುರಲಿ... ಮದುವೆಯಾದ ಮೇಲೆ ಮಡದಿಯ ಮನಸ್ಸನ್ನು ಅರ್ಥಮಾಡಿಕೊಂಡು ನಡೆಯಬೇಕು.ಮಹತಿ ನೇರ ನಡೆನುಡಿಯ ಹೆಣ್ಣುಮಗಳು.ಇಂತಹವರಿಗೆ ಎಲ್ಲರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಬಹುದು.ಹಾಗೆಂದು ನಾವು ತೀರಾ ಒತ್ತಡ ಹೇರಬಾರದು.ಅಮ್ಮ ಶಶಿಗೆ ಜೊತೆಯಾಗಿ ತಂದೆ ಇದ್ದಾರೆ.ಸಣ್ಣಮಗ ವೆಂಕಟನೂ ಇದ್ದಾನೆ.ಈಗ ಮಹತಿಗೆ ನೀನೇ ಬೇಕು.ನೀನೂ ಅವಳ ಮಾತಿಗೆ ಬೆಲೆಕೊಡದಿದ್ದರೆ ಅವಳಾದರೂ ಏನು ಮಾಡಿಯಾಳು...? ತವರಿನಲ್ಲಿ ಎಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಿಲ್ಲ.

       ಅಮ್ಮ ಮಗನನ್ನು ಪ್ರೀತಿಯಿಂದಲೇ ನಡೆಸಿಕೊಳ್ಳಬಹುದು.ಆದರೆ ಸೊಸೆಯನ್ನು ಅಷ್ಟೇ ಆದರದಿಂದ ನಡೆಸಿಕೊಂಡ ಉದಾಹರಣೆಗಳು ಸಿಗುವುದು ವಿರಳ.ಇದ್ದರೆ ಅದು ಕುಟುಂಬದ ಸೌಭಾಗ್ಯ. ಸೊಸೆಯಾದವಳಲ್ಲಿ ತಗ್ಗಿ ಬಗ್ಗಿ ನಡೆಯುವ ವಿನಯವಿದ್ದರೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ.ಇಲ್ಲವಾದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ.ನೇರ ನಡೆಯವರು ಮೇಲ್ನೋಟಕ್ಕೆ ಒರಟರಂತೆ ಕಂಡರೂ ಅವರೊಳಗೂ ಮೃದು ಹೃದಯವಿದೆ.ಕುಟುಂಬದ ಕಾಳಜಿಯಿದೆ.ಅವರನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.
ಅಮ್ಮ ಮಡದಿಯನ್ನು ಆಡಿದರೆ  ... ಇಷ್ಟು ಮುಂದುವರಿಯುವ ಮುನ್ನವೇ ಅಮ್ಮಾ ..ಸುಮ್ಮನಿರು..ಅವಳಿಷ್ಟದಂತಿರಲಿ..ಅಂದರೂ ತಪ್ಪಿಲ್ಲ..ಅದು ನಿನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಇರುವ  ಮಾರ್ಗ
ಅಥವಾ ಮಡದಿಯ ಮನವೊಲಿಸಿ ಅಮ್ಮ ಹೇಳಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡ.. ಎಂದು ರಮಿಸಿ ,ಅಲ್ಲಿಯೇ ತಿಳಿಗೊಳಿಸಬೇಕು.


      ನನಗೆ ಇಂತಹ ವಿಚಾರ ಬಂದಾಗ ಯಾವಾಗಲೂ ಮಂಗಳತ್ತೆ ನೆನಪಾಗುತ್ತಾರೆ.. ಅಜ್ಜಿ ಆಗಾಗ ಏನಾದರೊಂದು ತಗಾದೆ ತೆಗೆಯುತ್ತಲೇ ಇರುತ್ತಾರೆ.. ಭಾಸ್ಕರ ಮಾವನೂ ಅಮ್ಮನ ಕಡೆಯೇ..ಪಾಪ..ಮಂಗಳತ್ತೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಏನೂ ಆಗಿಲ್ಲವೆಂಬಂತೆ ಬದುಕುತ್ತಾರೆ..ಇಂತಹ ತಾಳ್ಮೆ ಎಲ್ಲರಲ್ಲಿಯೂ ಹುಡುಕುವುದು ತಪ್ಪು.ಗಾಯತ್ರಿ ಅತ್ತೆಯನ್ನು ಹಾಗೆ ಅಂದದ್ದೇ ಆದಲ್ಲಿ ಆಕೆ ತಿರುಗಿ ನಾಲ್ಕು ಮಾತಿನೇಟು ಬೀಸಿಯೇ ತನ್ನಿಚ್ಛೆಯಂತೆ ಬದುಕುತ್ತಿದ್ದಳು.. ಗಾಯತ್ರಿಯ ಈ ನಡವಳಿಕೆ ಗೊತ್ತಿದ್ದ ಕಾರಣ ಅಜ್ಜಿ ಸಣ್ಣ ಸೊಸೆಯನ್ನು ಆಡಲು ಹಿಂಜರಿಯುತ್ತಾರೆ.ಹೊಂದಾಣಿಕೆ ಮಾಡಿಕೊಳ್ಳುವ ದೊಡ್ಡ ಸೊಸೆಯೇ ಅವರ ಟಾರ್ಗೆಟ್..ಇದೇ ಅಭ್ಯಾಸ ಶಶಿಗೂ ಬಂದಿದೆ.ಈಗ ಮಡದಿಯನ್ನು ಸುಖವಾಗಿ ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ.ಒಮ್ಮೆ ಸಂಸಾರ ಹಾಳಾದರೆ ಮತ್ತೆ ಹಳಿಗೆ ತರುವುದು ಸುಲಭದ ಮಾತಲ್ಲ.ಅಮ್ಮ ಇಂದು ಮುನಿದರೆ ಇನ್ನು ಕೆಲವು ಸಮಯದಲ್ಲಿ ಮರೆತಾರು..ಉದ್ಯೋಗದಲ್ಲಿದ್ದು ಸ್ವಾತಂತ್ರ್ಯ ಬಯಸುವ ಹೆಣ್ಣು ಸಿಡುಕಿನಿಂದ ತೆರಳಿ ವಿಚ್ಛೇದನಕ್ಕೆ ಮುಂದಾದರೆ ಕಷ್ಟ..ಅಹಂ ಎಂಬುದು ಸಂಸಾರವನ್ನು ಹಾಳು ಮಾಡದಂತೆ ಕಾಪಾಡಿಕೋ.."
ಮಾವನ ಅನುಭವದ ಹಿತನುಡಿಗಳು ಅಕ್ಷರಶಃ ಸತ್ಯ ಎಂದೆನಿಸಿತು ಮುರಲಿಗೆ.

                   ********

         ತನ್ನ ಜೊತೆಗೆ ಮನೆಗೆ ಹಿಂದಿರುಗಿದ ಮಹತಿಯನ್ನು ರಮಿಸಬೇಕು, ಸಮಾಧಾನಿಸಿ ಸಂತಸಪಡಿಸಬೇಕು ಎಂದುಕೊಂಡಿದ್ದ ಮುರಲಿ.ಆದರೆ ಮಹತಿ ಅದನ್ನೆಲ್ಲ ಬಯಸಲಿಲ್ಲ.ಅತ್ತೆಯ ಮೇಲಿನ ಅವಳ ಸಿಟ್ಟನ್ನೆಲ್ಲಾ ಹೊರಹಾಕಿದಳು.ಮುರಲಿಯನ್ನೂ ಮಾತಿನಿಂದ ಚುಚ್ಚಿದಳು.ಮೌನವಾಗಿ ಕೇಳಿಸಿಕೊಂಡ ಮುರಲಿ.ಗಂಡ ಏನೂ ಪ್ರತಿಕ್ರಿಯೆ ಕೊಡದಿದ್ದಾಗ ತಾನೇ ಆಯಾಸಗೊಂಡು  ಮಾತಿನ ಪ್ರಹಾರವನ್ನು ನಿಲ್ಲಿಸಿದಳು.ಆಫೀಸಿಗೆ ಹೊರಡತೊಡಗಿದಳು.ಮುರಲಿಯೂ ಹೊರಟ.ಮಾತಿಲ್ಲ ..ನಗೆಯಿಲ್ಲ..ನವಜೋಡಿಯ ನಡುವೆ ತುಂಟತನವಿಲ್ಲ..ಅಹಂ, ನೇರ ನುಡಿ ಎಲ್ಲವನ್ನೂ ನುಂಗಿಹಾಕಿತ್ತು... ಉದ್ಯೋಗ, ಸಂಪಾದನೆ ಇದ್ದರೂ ಮಧುರವಾದ, ಸರಸಮಯ ಭಾವನೆಗಳಿಗೆ ಬರವಿತ್ತು.


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
08-07-2020.


3 comments:

  1. This comment has been removed by the author.

    ReplyDelete
  2. ಮುಂದೇನು.... ಕಾದು ನೋಡಬೇಕು...

    ReplyDelete
    Replies
    1. ಹೌದು.. ಕುತೂಹಲ ಕಾದಿರಿಸಿದೆ.. ಧನ್ಯವಾದಗಳು 💐🙏

      Delete