ಜೀವನ ಮೈತ್ರಿ ಭಾಗ ೧೦೫
ಮಂಗಳಮ್ಮ ಮೆಲ್ಲನೆ ರೂಮಿನೊಳಗೆ ಕಾಲಿಟ್ಟರು.ಮಗುವನ್ನು ಸಮಾಧಾನಪಡಿಸಿ ಹಾಲುಣಿಸಲು ಹರಸಾಹಸ ಪಡುತ್ತಿದ್ದ ಸೌಜನ್ಯ ಅಪರಿಚಿತ ಹೆಣ್ಣುಮಗಳನ್ನು ಕಂಡು ಪಕ್ಕನೆ ಬದಿಯಲ್ಲಿದ್ದ ಶಾಲನ್ನು ತನ್ನೆದೆಯ ಮೇಲೆ ಹೊದೆದಳು.ಮಂಗಳಮ್ಮ ಅವಳತ್ತ ಸಾಗಿ "ಮಗು ಒಂದೇ ಸಮನೆ ಅಳುತ್ತಿದೆ.. ಹಾಗಾಗಿ ಒಮ್ಮೆ ನೋಡಿ ಹೋಗೋಣ ಅಂತ ಬಂದೆ.." ಎನ್ನುತ್ತಾ ಮಗುವಿನತ್ತ ದೃಷ್ಟಿ ಹಾಯಿಸಿದರು. ಅಳುತ್ತಿದ್ದ ಮಗುವನ್ನು..., ತನ್ನ ಕೈಗಳನ್ನು ಮುಂದಕ್ಕೆ ಚಾಚಿ ಸೌಜನ್ಯಳ ಮಡಿಲಿನಿಂದ ಎತ್ತಿಕೊಂಡರು.ಹದವಾಗಿ ಕೈಯಲ್ಲಿ ತೂಗುತ್ತಾ ಮೈಗೆ ಅವುಚಿ ಹಿಡಿದರು.ಒಂದೇ ಗತಿಯಲ್ಲಿ ಮಂಗಳಮ್ಮ ಆಡಿಸುತ್ತಿದ್ದರೆ ಮಗು ಅಳು ನಿಲ್ಲಿಸಿ ಸುಮ್ಮನಾಗಿತ್ತು.ಉಸಿರು ಎಕ್ಕಿ ಎಕ್ಕಿ ಬರುತ್ತಿತ್ತು.
ಮಗುವನ್ನು ಸೌಜನ್ಯಳ ಹತ್ತಿರ ತಾನೇ ಹಿಡಿದುಕೊಂಡು ಹಾಲುಣಿಸಲು ಆಕೆಗೆ ನೆರವಾದರು.ಆಗಲೇ ಸುಸ್ತಾಗಿದ್ದ ಸೌಜನ್ಯಗೆ ಬಹಳ ಅನುಕೂಲವಾಯಿತು.ಸ್ತನ್ಯಪಾನ ಮಾಡುತ್ತಾ ಮಗು ನಿದಿರೆಗೆ ಜಾರಿತು.ಮಗುವನ್ನೆತ್ತಿ ಬೆಡ್'ನ ಬದಿಯಲ್ಲಿ ಮಲಗಿಸಿ ಸ್ವಲ್ಪವೂ ಅಲ್ಲಾಡದಂತೆ ಕೈಸಡಿಲಿಸಿ ಬದಿಗೆ ದಿಂಬನಿಟ್ಟರು.ಕಷ್ಟಪಡುತ್ತಿದ್ದ ಸೌಜನ್ಯಳ ರಟ್ಟೆ ಹಿಡಿದು ಮಲಗಲು ಸಹಕರಿಸಿದರು.ಅವಳ ಮೇಲೆ ಬೆಡ್ ಶೀಟ್ ಎಳೆದು ಒಂದು ಮುಗುಳ್ನಗು ಸೂಸಿ .."ನಾನಿನ್ನು ಬರುವೆ.. "ಎನ್ನುತ್ತಾ ಹೊರ ನಡೆದರು.
ಅರೆ.. ನಾನು ಈ ಅಪರಿಚಿತೆಯನ್ನು ಯಾರೆಂದು ಕೇಳಲೇಯಿಲ್ಲವಲ್ಲ.. ಎಂದುಕೊಂಡವಳಿಗೆ ಅವರನ್ನು ಕರೆದು ಮಾತನಾಡಿಸಿ ಧನ್ಯವಾದ ಹೇಳೋಣ ಅನಿಸಿ,ಕರೆದಳು.. ಏನೆಂದು ಕರೆಯಲಿ ಎಂದು ಯೋಚಿಸುತ್ತಿದ್ದವಳು
"ಅಮ್ಮಾ.." ಎಂದು ಕರೆದಳು..
ಆ ದನಿ ಕೇವಲ ಆಕೆಯ ಗಂಟಲಿನಿಂದ ಬಂದಿರಲಿಲ್ಲ..ಅವಳ ಅಂತರಂಗದ ದನಿಯಾಗಿತ್ತು..ತನ್ನಮ್ಮನ ನೆನಪು ಒತ್ತರಿಸಿ ಬಂದಿತ್ತು.
ಅವಳ ಕರೆಗೆ ಓಗೊಟ್ಟು ಹೆಜ್ಜೆ ನಿಧಾನಿಸಿದರು ಮಂಗಳಮ್ಮ..
"ತುಂಬಾ ಉಪಕಾರವಾಯಿತು ನಿಮ್ಮಿಂದ" ಎಂದಳು..
"ಇದೆಲ್ಲ ದೊಡ್ಡ ಉಪಕಾರವೇನಲ್ಲ ಬಿಡಿ.ಇಲ್ಲೇ ಹೋಗುತ್ತಿದ್ದಾಗ ನೋಡಿಕೊಂಡೆನಷ್ಟೇ.."
ಎನ್ನುತ್ತಾ ತೆರಳಿದರು.ಅವರಿಗೆ ಮಗಳು ಎಚ್ಚರಿಸಿದ್ದು ನೆನಪಾಗಿತ್ತು.ಹೆಚ್ಚು ಮಾತನಾಡುವುದು ಅವರ ಉದ್ದೇಶವೂ ಆಗಿರಲಿಲ್ಲ.ತನ್ನ ಮನಸ್ಸು ಹೇಳಿದಷ್ಟನ್ನು ಮಾಡಿ ಸಂತೃಪ್ತಿಯಿಂದ ತೆರಳಿದರು.
ಯಾರಾದರೂ ಹಿರಿಯ ಮಹಿಳೆಯನ್ನು ಹುಡುಕಿ ಬರೋಣ ಎಂದು ಹೊರಟಿದ್ದ ಕೇಶವ ನಿರಾಶನಾಗಿ ಹಿಂದಿರುಗಿದ.ಬಾಣಂತನ ಮಾಡುವ ಕೆಲವು ಹೆಂಗಸರಂತೂ ತಿಂಗಳಿಗೆ ಇಪ್ಪತ್ತು ಸಾವಿರ ಕೇಳಿದ್ದರು.ತನ್ನ ಸಂಬಳವೇ ಅದರ ಆಸುಪಾಸಿನಲ್ಲಿದ್ದ ಮೇಲೆ ಅವನಾದರೂ ಹೇಗೆ ಅಷ್ಟು ಸಂಬಳ ಕೊಟ್ಟಾನು..?ರೂಮಿನೊಳಗೆ ಬಂದಾಗ 'ಯಾರಾದರೂ ಸಿಕ್ಕರಾ?' ಎಂದು ಕೇಳುವ ಸೌಜನ್ಯಳಿಗೆ ಹೇಗೆ ಮುಖ ತೋರಿಸಲಿ ? ಎಂದು ಸಂಕೋಚದಿಂದಲೇ ಒಳಗೆ ಬಂದ..ಮಗು ತಾಯಿ ಇಬ್ಬರೂ ನಿದ್ರಿಸುತ್ತಿದ್ದರು..ಎರಡು ದಿನಗಳಿಂದ ಬಳಲಿದ ಸೌಜನ್ಯ ಚೆನ್ನಾಗಿ ನಿದ್ರಿಸಲಿ..ಮಗು ಕೂಡಾ ಅಳು ನಿಲ್ಲಿಸಿ ಮಲಗಿದೆ.. ಎಂದು ಸುಮ್ಮನೆ ಬಾಲ್ಕನಿಯಲ್ಲಿ ನಿಂತ.
ಎಚ್ಚರಾದ ಸೌಜನ್ಯ ನಡೆದದ್ದನ್ನು ತಿಳಿಸಿದಳು.
"ಇಲ್ಲಿ ಮೋಸಗಾರ್ತಿಯರೂ ಇರುತ್ತಾರೆ.. ಯಾರಾದರೂ ಗುರುತು ಪರಿಚಯ ಇಲ್ಲದವರು ನಾನಿಲ್ಲದ ವೇಳೆ ಬಂದರೆ ಒಳಗೆ ಬಿಡಬೇಡ.. ಹೆಚ್ಚು ಕಮ್ಮಿಯಾದರೆ.. "ಎಂದ...ಮಡದಿ ಮಗಳ ಸುರಕ್ಷತೆಯ ದೃಷ್ಟಿಯಿಂದ..
"ಅವರು ಮೋಸಗಾರ್ತಿಯಂತೆ ನನಗನಿಸಲಿಲ್ಲ.."ಎಂದಳು ಸೌಜನ್ಯ.
*****
ಗಣೇಶ ಶರ್ಮ ಮನೆಗೆ ಜೋಯಿಸರನ್ನು ಕರೆಸಿ ನಾಗನಕಟ್ಟೆ ದೈವಸ್ಥಾನದ ಪುನರ್ನಿರ್ಮಾಣದ ವಿಷಯದಲ್ಲಿ ಪ್ರಶ್ನಾಚಿಂತನೆ ನಡೆಸಿದರು.ಜೋಯಿಸರ ಮಾತು "ಆದಷ್ಟು ಬೇಗ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಮುಂದುವರಿಯಬೇಕು.ಇಲ್ಲದಿದ್ದರೆ ಒಂದಿಲ್ಲೊಂದು ತೊಂದರೆ ತಪ್ಪಿದ್ದಲ್ಲ.ಅನಾವಶ್ಯಕ ವಿಳಂಬ ಬೇಡ.ಶುಭ ಮುಹೂರ್ತದಲ್ಲಿ ಆರಂಭಿಸಿ."ಎಂದಾಗಿತ್ತು.ಗಣೇಶ ಶರ್ಮ ಒಪ್ಪಿ.. ಮುಹೂರ್ತ ನೋಡಲು ಹೇಳಿದರು.ಅಂತೆಯೇ ಜೋಯಿಸರು ಹೇಳಿದ ಮುಹೂರ್ತದ ದಿನಕ್ಕೆ ಕೆಲಸಗಾರರನ್ನು ,ಪುರೋಹಿತರನ್ನೂ ಬರಹೇಳಿ ಸಂಕಲ್ಪ ಮಾಡಿಕೊಂಡು ಶಿಥಿಲವಾದ ಕಟ್ಟೆಯನ್ನು ಕೆಡವಿ ಪುನರ್ನಿರ್ಮಾಣ ಆರಂಭಿಸಿದರು.
ಕಟ್ಟೆಯನ್ನು ಕೆಡವಿ ಕೇವಲ ಹತ್ತೇ ನಿಮಿಷದಲ್ಲಿ ನಾಲ್ಕು ನಾಗರ ಹಾವುಗಳು ನಾಲ್ಕು ದಿಕ್ಕಿನಿಂದ ಸರಸರನೆ ಹರಿದು ಬಂದು ಹೆಡೆಯೆತ್ತಿ ನಿಂತಿದ್ದವು.ಕೆಲಸಗಾರರು ಭಯದಿಂದ ದೂರಸರಿದರು.ಅಲ್ಲಿದ್ದ ಪುರೋಹಿತರು ತನ್ನ ಕೌಳಿಗೆಯಲ್ಲಿದ್ದ ತೀರ್ಥಪ್ರೋಕ್ಷಣೆಗೈದು ... "ಮತ್ತೆ ವ್ಯವಸ್ಥಿತವಾಗಿ ಕಟ್ಟೆ ಕಟ್ಟಿ ...,ಸಂಪ್ರೋಕ್ಷಣೆ,ತಂಬಿಲ.. ಎಲ್ಲವನ್ನೂ ಶಾಸ್ತ್ರೋಕ್ತವಾಗಿ ನೆರವೇರಿಸುತ್ತೇವೆ "ಎಂದು ವಚನವಿತ್ತರು..ನಂತರ ಹೆಡೆ ಕೆಳಗೆ ಮಾಡಿ ಸರಿದು..ಅಗೆಯುವ ಕಾರ್ಯಕ್ಕೆ ಅಡ್ಡಿಮಾಡದೆ ತೆರಳಿದವು.
ಕೆಲಸ ಆರಂಭವಾಯಿತು.ದೊಡ್ಡ ಮೊತ್ತವನ್ನು ಹೊಂದಿಸುವುದು ಹೇಗೆಂಬುದು ಗಣೇಶ ಶರ್ಮರ ಚಿಂತೆಯಾಗಿತ್ತು.ತಮ್ಮ ಜಾಗದಲ್ಲಿದ್ದ ನಾಗನಬನ,ದೈವದಕಟ್ಟೆಗೆ ಊರವರಿಂದ ಚಂದಾ ಸಂಗ್ರಹಿಸುವುದು ಅವರಿಗೂ ಹಿತವಿಲ್ಲ.ಅವರಿಷ್ಟದಂತೆ ಕೊಟ್ಟರೆ ಮಾತ್ರ ಸ್ವೀಕರಿಸಬೇಕು.ಎಂಬುದು ಅವರ ಇಂಗಿತ.ಮಗನಲ್ಲಿತಿಳಿಸಿದಾಗ "ಅಪ್ಪಾ..ನಾನು ತಿಂಗಳಿಗೆ ಹತ್ತು ಸಾವಿರ ಕೊಡಬಲ್ಲೆ "ಎಂದ..
"ಆಗಲಿ.. ಮುಂದೆ ಕೈಯಲ್ಲಿ ಹಣವಿದ್ದಂತೆ ಕೆಲಸ ಮುನ್ನಡೆಸಿಕೊಂಡು ಹೋಗೋಣ.. ಎಲ್ಲಾ ಅವನ ಮೇಲೆ ಭಾರ "ಎಂದರು.
******
ಮುರಲಿ ಹೊಸ ಫ್ಲಾಟ್ ಕೊಂಡುಕೊಂಡ.ಮುರಲಿ ಮಹತಿ ಇಬ್ಬರ ಹೆಸರಿನಲ್ಲಿತ್ತು ಮನೆ.. ಇಬ್ಬರೂ ಸ್ವಲ್ಪ ಲೋನ್ ಮಾಡಿದ್ದರು.ಮುರಲಿಯಿಂದ ಸ್ವಲ್ಪ ಹೆಚ್ಚೇ ಮಹತಿ ಹಣ ಹೂಡಿದ್ದಳು.ಒಳಾಂಗಣ ವಿನ್ಯಾಸ ಮಹತಿಯ ಆಲೋಚನೆಗೆ ತಕ್ಕಂತೆ ಮಾಡಿಸುವ ಪ್ಲಾನ್ ಮಾಡಿದರು.ಮುರಲಿಯದು ಸಾಮಾನ್ಯ ಸೌಕರ್ಯ ಸಾಕು ಎಂಬ ಆಲೋಚನೆ.ಮಹತಿ ಅದ್ದೂರಿತನವನ್ನು ಬಯಸಿದಳು.ಮಡದಿಯ ಮಾತಿಗೆ ಇಲ್ಲವೆನ್ನಲಾಗಲಿಲ್ಲ.ಅಷ್ಟು ಖರ್ಚು ಮಾಡುವುದು ವ್ಯರ್ಥವೆಂದು ಕಂಡರೂ ...ಮಹತಿಯ ಆಸೆಯಂತೆ ಮನೆಯ ವಿನ್ಯಾಸ ಕಾರ್ಯ ಆರಂಭವಾಯಿತು. ಅವಳ ತಂದೆ ತಾಯಿಯೂ ಮಗಳಿಗೆ ಒತ್ತಾಸೆಯಾಗಿ ನಿಂತಿದ್ದರು.ತವರಿನ ಪ್ರತಿಷ್ಠೆಗೆ ಕುಂದು ಬಾರದಂತೆ ಮನೆ ಸಜ್ಜಾಯಿತು.
ಗೃಹ ಪ್ರವೇಶ ದಿನಾಂಕ ನಿಗದಿಮಾಡಿಕೊಂಡರು. ಮಹತಿಯ ತವರಿನ ಪರಿಚಯದ ಅರ್ಚಕರು,ಅಡುಗೆಯವರನ್ನು ಹೇಳಬೇಕೆಂಬ ಮಹತಿಯ ಹಠವೇ ಗೆದ್ದಿತು.ನೆಂಟರೂ ಬಹುತೇಕ ಮಹತಿಯ ಕಡೆಯವರೇ ಲಿಸ್ಟ್'ನಲ್ಲಿದ್ದರು.ಮುರಲಿ " ಮನೆಗೆ ತೆರಳಿ ಅಪ್ಪ ಅಮ್ಮನನ್ನು ಕರೆದು ಬರೋಣ ಬಾ" ಎಂದು ಮಹತಿಯನ್ನ ಕರೆದ.. ಅವಳು "ನನಗೆ ಬರಲು ಮನಸ್ಸಿಲ್ಲ" ಎಂದು ತಿರಸ್ಕರಿಸಿದಳು.ಮುರಲಿ ಒಬ್ಬನೇ ಹೋಗಬೇಕಾಗಿ ಬಂತು.ತಂದೆ, ತಮ್ಮನಲ್ಲಿ ವಿಷಯ ತಿಳಿಸಿ "ಬನ್ನಿ .."ಎಂದು ಕರೆದ..ತಾಯಿಯಲ್ಲಿ ಹೇಳಲು ಮನಸ್ಸು ಬರಲಿಲ್ಲ.ಏಕೆಂದರೆ ಹೊಸಮನೆಯ, ಗೃಹಪ್ರವೇಶದ ಹಲವು ಸಂಗತಿಗಳು ತನಗೇ ಹಿತವಾಗಲಿಲ್ಲ.ಮತ್ತೆ ಈ ಹಠಮಾರಿ ಅಮ್ಮನಿಗೆ ಹಿಡಿಸೀತೇ.. ಏನಾದರೂ ಅದು ಹಾಗಲ್ಲ..ಹೀಗೆ..ಅದೇಕೆ ಹೀಗೆ ಮಾಡಿದಿರಿ..ಎಂದೆಲ್ಲ ಕ್ಯಾತೆ ತೆಗೆದರೆ ಎಲ್ಲರ ಮುಂದೆ ಮಾನ ಹರಾಜು ಹಾಕಿಯಾಳು ಮಹತಿ..ಸುಮ್ಮನೆ ಎಲ್ಲರ ಮುಂದೆ ಅತ್ತೆ ಸೊಸೆ ಜಗಳಮಾಡಿದರು ಎಂದಾಗುವುದಕ್ಕಿಂತ ಅಮ್ಮನನ್ನು ಕರೆಯದಿರುವುದೇ ಲೇಸು..ಅಪ್ಪ ತಮ್ಮನಾದರೆ ಹಾಗಲ್ಲ..ಎಂದು ಅವನ ಭಾವನೆ.
******
ಮರುದಿನ ಆಫೀಸಿಗೆ ಹೋಗುವುದು ಕೇಶವನಿಗೆ ಅನಿವಾರ್ಯವಾಗಿತ್ತು.ಮಗು ಅಳುತ್ತಿದ್ದಾಗ ಮಂಗಳಮ್ಮ ಬಂದು ಸಮಾಧಾನಪಡಿಸಿ,ಸೌಜನ್ಯಳಿಗೂ ಸಹಕರಿಸಿದರು.ಸೌಜನ್ಯಳಿಗೆ ಅವರ ಮೇಲೆ ಗೌರವ ಮೂಡಿತು .
ಮತ್ತೆರಡು ದಿನಗಳಲ್ಲಿ, "ಸೌಜನ್ಯಳಿಗೆ ಡಿಸ್ಚಾರ್ಜ್ ಮಾಡುತ್ತೇನೆ, ತಾಯಿ ಮಗು ಆರೋಗ್ಯವಾಗಿ ಇದ್ದಾರೆ "ಎಂದರು ವೈದ್ಯೆ ಶಾಂತಾ.. ಕೇಶವನಿಗೆ ಒಮ್ಮೆ ಬಾಣಂತಿಗೆ ಸಹಕರಿಸಿದ ಹಿರಿಯರನ್ನು ನೋಡಿ ಧನ್ಯವಾದ ಸಮರ್ಪಿಸಬೇಕು ಎಂದು ಮನಸ್ಸಾಯಿತು.ಅವರಿದ್ದ ಕೊಠಡಿಯ ನಂಬರ್ ಸೌಜನ್ಯಳಲ್ಲಿ ಕೇಳಿದಾಗ ಆಕೆಗೂ ತಿಳಿದಿರಲಿಲ್ಲ.
"ಸರಿ ..ನಾನು ಬಿಲ್ ಮಾಡಿಸಿ , ಪಾವತಿಸಿ, ಡಿಸ್ಚಾರ್ಜ್ ಸಮ್ಮರಿ ತೆಗೆದುಕೊಂಡು ಬರುತ್ತೇನೆ..ಅವರು ಬಂದರೆ ವಿಚಾರಿಸು" ಎಂದು ಹೇಳಿ ತೆರಳಿದ.
ಈಗ ಮಂಗಳಮ್ಮ ಮಗುವನ್ನು ಸಂತೈಸುವುದನ್ನು ನೋಡಿ ಸೌಜನ್ಯ ತಾನೂ ಕಲಿತು ಕೊಂಡಿದ್ದಳು.ಸ್ನಾನ ಮಾಡಿಸುವುದು ಹೇಗೆಂದು ನರ್ಸ್ ತೋರಿಸಿಕೊಟ್ಟಿದ್ದರೂ, ಪುನಃ ಮಂಗಳಮ್ಮನಲ್ಲಿ ಕೇಳಿ ತಿಳಿದುಕೊಂಡಿದ್ದಳು.
ಮಗು ಅಳುವ ಸದ್ದು ಕೇಳಲಿಲಿಲ್ಲವೆಂದು ಮಂಗಳಮ್ಮನೂ ಹೋಗುವ ಆತುರ ತೋರಲಿಲ್ಲ.
ಕೇಶವ ವಾಪಾಸಾಗಿ ..ಹಿರಿಯರು ಬಂದಿದ್ದಾರಾ? ಕೇಳಿ..ಬ್ಯಾಗ್ ಪ್ಯಾಕ್ ಮಾಡಲು ಆರಂಭಿಸಿದ.ಹೋಗುವ ಮೊದಲು ಅವರು ಮಾತಿಗೆ ಸಿಗುವರೋ ಇಲ್ಲವೋ....ಆ ಪೇಷೆಂಟ್ ಡಿಸ್ಚಾರ್ಜ್ ಆಗಿ ಬಿಟ್ಟರೋ ಏನೋ..ಯಾರಿಗೆ ಗೊತ್ತು.. ಎಂದಿತು ಅವನ ಮನ.
ರೂಮಿನಲ್ಲಿ ಆದ ಸದ್ದಿಗೆ ಮಗು ಎಚ್ಚರವಾಗಿ ಅಳತೊಡಗಿತು.ಸೌಜನ್ಯಳಿಂದ ಸಮಾಧಾನ ಪಡಿಸುವುದು ಸಾಧ್ಯವಾಗದೆ..ಕೇಶವ ಎದೆಗಾನಿಸಿ ರಮಿಸಿದರೂ ಊಹೂಂ..ಅಳು ನಿಲ್ಲಲಿಲ್ಲ.ಕೆಳಗಡೆ ಹೋಗಿದ್ದ ಮಂಗಳಮ್ಮ ಬರುವಾಗ ಅಳು ಕೇಳಿ ಬಾಗಿಲು ಸದ್ದು ಮಾಡಿದರು.. ಸೌಜನ್ಯ ಬಾಗಿಲು ತೆರೆದಳು.
ಕೇಶವ ಅವರನ್ನು ನೋಡಿ ಅವಾಕ್ಕಾಗಿ ನಿಂತ.ಮಂಗಳಮ್ಮ ಮಗುವಿನತ್ತ ಬಾಗಿ ಮಗುವನ್ನೆತ್ತಿ ಸಮಾಧಾನಿಸಿ ಸೌಜನ್ಯಳ ಕೈಗೆ ಹಾಲುಣಿಸಲು ನೀಡಿದರು.ಕೇಶವ ತನ್ನೆರಡು ಕೈಗಳನ್ನು ಮುಗಿದು "ನನ್ನನ್ನು ಕ್ಷಮಿಸಿ...ನಿಮ್ಮಿಂದ ತುಂಬ ಉಪಕಾರವಾಯಿತು.."ಎಂದ -ಮನದೊಳಗೆ ತಾನು ಮೈತ್ರಿಯ ಮೇಲೆ ಸೇಡು ತೀರಿಸಲು ಹೊರಟಿದ್ದು ನೆನಪಾಗಿ,ನಾನೀಗ ಅಂತಹದೇ ಒಬ್ಬ ಮಗಳಿಗೆ ತಂದೆಯಾಗಿದ್ದೇನೆ ಎಂಬ ಜವಾಬ್ದಾರಿ ಮೂಡಿ-
"ಛೇ.. ನೀವು ನನಗೆ ಕೈಮುಗಿಯುವುದು ಬೇಡ.ಅಷ್ಟೆಲ್ಲಾ ದೊಡ್ಡ ಕೆಲಸ ನಾನೇನೂ ಮಾಡಿಲ್ಲ."ಎಂದರು -ಕೇಶವ ಹಿಂದೆ ಹೂಡಿದ್ದ ಕುತಂತ್ರವನ್ನರಿಯದೆ-
"ತುಂಬಾ ತುಂಬಾ ಧನ್ಯವಾದಗಳು.. "ಎನ್ನುತ್ತಾ ಅವರ ಕಾಲಿಗೆ ನಮಿಸಲು ಬಾಗಿದ.-ತಾನು ಮಾಡಲು ಹೊರಟಿದ್ದ ತಪ್ಪನ್ನು ನನೆದು ಕಣ್ಣುಗಳು ತುಂಬಿದವು-
"ಕೇಶವ್..ನನ್ನ ಕಾಲಿಗೆ ನಮಸ್ಕರಿಸುವುದು ಬೇಡ.. ನಿಜವಾಗಿಯೂ ನಿನಗೆ ..ನನಗೆ ನಮಸ್ಕರಿಸಬೇಕು,ಧನ್ಯವಾದ ಹೇಳಬೇಕೆಂದಿದ್ದರೆ ನನ್ನದೊಂದು ಮಾತಿದೆ.. ಅದನ್ನು ನಡೆಸಿಕೊಟ್ಟರೆ ಸಾಕು..ನನಗೆ ಧನ್ಯವಾದ ಅರ್ಪಿಸಿದಂತೆ.."
"ಹೇಳಿ..ಏನದು ಮಾತು..?"ಎಂದ ಅಳುಕುತ್ತಾ..
"ನಿನ್ನ ಜೀವನದಲ್ಲಿ ನಿನಗೆ ಎರಡನೇ ತಾಯಿಯ ಸ್ಥಾನವನ್ನು ತುಂಬಿದ ಹೆಣ್ಣನ್ನು ಮನನೋಯಿಸದೆ, ಅವಳನ್ನು ಹೊತ್ತು ಹೆತ್ತು ಸಾಕಿ ಸಲಸಿದ ಆ ಮಾತಾಪಿತರಿಗೆ ಕೈ ಮುಗಿದು ಕ್ಷಮಿಸಿ ಎಂದು ಕೇಳಿಕೋ.. ಅವರ ಕಾಲಿಗೆ ನಮಸ್ಕರಿಸಿ ಧನ್ಯವಾದ ಸಮರ್ಪಿಸು.."ಎಂದರು .
ಕೇಶವನ ಕಂಗಳು ತುಂಬಿದವು..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
13-07-2020.
👏👏👏
ReplyDeleteಧನ್ಯವಾದಗಳು 💐🙏
Delete