ಜೀವನ ಮೈತ್ರಿ ಭಾಗ ೧೦೬
ಕೇಶವನ ಹೃದಯಕ್ಕೆ ಮಂಗಳಮ್ಮನ ಮಾತು ನಾಟಿತು.ಮಡದಿಯ ಕೈಯಲ್ಲಿದ್ದ ಮಗಳ ಮುದ್ದು ಮುಖ ನೋಡಿ ಅವಳ ಭವಿಷ್ಯವನ್ನು ಒಮ್ಮೆ ಊಹಿಸಿಕೊಂಡವನು,ತಡಮಾಡದೆ ತನ್ನ ಕೈಯನ್ನು ಜೇಬಿನೆಡೆಗೆ ಕೊಂಡೊಯ್ದ.. ಸೌಜನ್ಯಳ ಎದೆ ಬಡಿದುಕೊಳ್ಳುವುದು ಅವಳ ಕಿವಿಗಳಿಗೂ ಕೇಳಿಸುತ್ತಿತ್ತು.ಮಾವನವರ ಮೊಬೈಲ್ ನಂಬರ್ ಹುಡುಕಿ ಕರೆಮಾಡಿ ವಿಷಯ ತಿಳಿಸಿದ.ತಾನೂ ಮಾತನಾಡಬೇಕೆಂದು ಬಯಸಿದ ಸೌಜನ್ಯಳಿಗೆ ತೀರಾ ನಿರಾಸೆಯಾಯಿತು.'ಹೇಳಿ ಕೊಟ್ಟ ಬುದ್ಧಿ ಎಷ್ಟಾದರೂ ಇಷ್ಟೇ..'. ಎಂದು ಮರುಗಿದಳು.
ಮಂಗಳಮ್ಮನ ನಿರೀಕ್ಷೆಯೂ ಪೂರ್ಣವಾಗಿ ಫಲಿಸಲಿಲ್ಲ.ಆದರೂ ಅವರು ಭರವಸೆ ಕಳೆದುಕೊಳ್ಳದೆ ,ಸೌಜನ್ಯಳ ಬಳಿ ಬಂದು ಅವಳ ಬೆನ್ನು ಸವರಿ, "ಮಗುವನ್ನು ಚೆನ್ನಾಗಿ ನೋಡಿಕೋ.. ಏನಾದರೂ ಸಲಹೆ ಬೇಕಾದರೆ ಕೇಳು "ಎನ್ನುತ್ತಾ ತನ್ನ ಸಂಪರ್ಕ ಸಂಖ್ಯೆ ಕೊಟ್ಟು ,ಕೇಶವನಲ್ಲಿ ನಸುನಕ್ಕು ತನ್ನ ರೂಮಿಗೆ ಬಂದರು.
ಸ್ವಲ್ಪ ಹೊತ್ತಿನ ಬಳಿಕ ಕ್ಯಾಬ್ ಏನು ಇನ್ನೂ ಬಂದಿಲ್ಲ..ಎಂದು ಕೇಶವ ಚಾಲಕನಿಗೆ ಕರೆ ಮಾಡಿದಾಗ.. "ಆಸ್ಪತ್ರೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಇದ್ದೇನೆ.. ಟ್ರಾಫಿಕ್ ಜಾಮ್ ಆಗಿದೆ.. ಕ್ಲಿಯರ್ ಆಗಲು ಅರ್ಧ ತಾಸಿಗಿಂತ ಜಾಸ್ತಿ ಹೊತ್ತು ಹಿಡಿದೀತು.. ತಲುಪಿದಾಗ ನಾನೇ ಕರೆ ಮಾಡುವೆ "ಎಂದ..
ಈಗ ಕಾಯುವ ಕೆಲಸ.. ಸೌಜನ್ಯ ಮಲಗಿಕೊಂಡಳು.ಕೇಶವ ತನ್ನ ಆಲೋಚನೆಗಿಂತ ಭಿನ್ನವಾಗಿ ನಡೆದ ಬೆಳವಣಿಗೆಗಳಿಂದ ವಿಚಲಿತನಾದಂತೆ ಕಂಡುಬಂದ.ಮನದೊಳಗೆ ಏನೋ ಲೆಕ್ಕಾಚಾರ ಹಾಕುತ್ತಾ ರೂಮು ಬಾಲ್ಕನಿ ಮಧ್ಯೆ ಓಡಾಡುತ್ತಿದ್ದ..ಮಾನಸಿಕ ಅಸ್ಥಿರತೆ ಇದ್ದಂತಿತ್ತು.
ರೂಮ್ ಬಾಗಿಲು ಬಡಿದಾಗ..ಕೇಶವ.."ಡ್ರೈವರ್ ಆಗಿರಬೇಕು..ಇವ ಕರೆ ಮಾಡಿದರೆ ಸಾಕಿತ್ತು.". ಎನ್ನುತ್ತಾ ಬಾಗಿಲು ತೆಗೆದ..ಮಲಗಿದ್ದ ಸೌಜನ್ಯ ಎದ್ದು ಕುಳಿತಳು..
.
.
.
.
.
.
.
.
.
ಬಂದವರನ್ನು ನೋಡಿ ಕೇಶವ ಅವಾಕ್ಕಾದನು.. ಸೌಜನ್ಯಳಿಗೆ ಒಮ್ಮೆಲೇ ಉಂಟಾದ ಶಾಕಿನಿಂದ ಪ್ರಜ್ಞೆ ತಪ್ಪಿತು..
.
.
.
.
.
.
.
.
ಅಳುತ್ತಾ ಅಮ್ಮ ರೇಖಾ,ಅಪ್ಪ ನರಸಿಂಹ ರಾಯರು ಮಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದಾಗ ಎಚ್ಚರಾದಳು..ತಾನು ಬಾಣಂತಿ ಎಂಬುದನ್ನು ಮರೆತು ಇಬ್ಬರನ್ನೂ ಬಾಚಿ ತಬ್ಬಿ ಅಳುತ್ತಿದ್ದ ಮಡದಿಯನ್ನು ಕಂಡ ಕೇಶವನಿಗೆ ತಾನೆಷ್ಟು ದೊಡ್ಡ ತಪ್ಪು ಮಾಡಿದ್ದೆ ಎಂಬುದರ ಅರಿವಾಯಿತು.ಇಬ್ಬರೂ ಮಲಗಿದ್ದ ಮೊಮ್ಮಗಳನ್ನು ಎತ್ತಿ ಆಡಿಸಿ ಖುಷಿಪಟ್ಟರು..ಆಗ ಎಚ್ಚರಾದ ಮಗಳಿಗೆ ಸೌಜನ್ಯ "ನೋಡು.. ನಿನ್ನ ಅಜ್ಜಿ ಅಜ್ಜ ಬಂದಿದ್ದಾರೆ" ಎನ್ನುವ ಅವಳ ದನಿಯಲ್ಲೇ ಸಂಭ್ರಮವಿತ್ತು..
"ಅಳಿಯಂದಿರೇ..ಹೇಗೂ ಲಗೇಜ್ ಪ್ಯಾಕ್ ಮಾಡಿ ಆಗಿದೆ.. ಕಾರಲ್ಲಿಡೋಣ.. ಬನ್ನಿ.. ನಮ್ಮನೆಗೇ ಹೋಗೋಣ.. ಚೊಚ್ಚಲ ಬಾಣಂತಿಗೆ ಆರೈಕೆ ತವರಲ್ಲೇ ಆದರೆ ಚಂದ ...ಕೆಟ್ಟ ಘಳಿಗೆಯನ್ನು ಮರೆತು ಮತ್ತೆ ಮೊದಲಿನಂತೆ ಇರೋಣ.." ಎಂದಾಗ ಮಾವನವರ ಮಾತನ್ನು ತಳ್ಳಿ ಹಾಕುವಂತಿರಲಿಲ್ಲ ಕೇಶವನ ಪರಿಸ್ಥಿತಿ...".ಸರಿ ..."ಎಂದು ಒಪ್ಪಿದ.. ಕ್ಯಾಬ್ ಡ್ರೈವರ್ ಗೆ ಫೋನ್ ಮಾಡಿ ಪ್ರಯಾಣ ಕ್ಯಾನ್ಸಲ್ ಮಾಡಿದ..
ಸೌಜನ್ಯ ಅಮ್ಮನಲ್ಲಿ ಮಾತನಾಡುತ್ತಾ ಮಂಗಳಮ್ಮನ ಸಹಕಾರವನ್ನು ಕೊಂಡಾಡಿದಳು.ರೇಖಾಳಿಗೂ ಅವರನ್ನೊಮ್ಮೆ ಮಾತನಾಡಿಸಬೇಕೆಂದೆನಿಸಿ ಅವರ ರೂಮ್ ಹುಡುಕಿಕೊಂಡು ಹೋಗಿ ಅವರ ಉಪಕಾರವನ್ನು ನೆನೆಸಿಕೊಂಡು ಭಾವುಕರಾದರು.."ಅಳಿಯನ ಮನಸ್ಸನ್ನು ಬದಲಾಯಿಸಿದ ನಿಮಗೆ ಏನು ಕೊಟ್ಟರೂ ಕಡಿಮೆಯೇ "ಎಂದಾಗ ..
"ನನಗೇನೂ ಕೊಡುವುದು ಬೇಡ..ನಿಮ್ಮಿಂದ ಒಂದು ಕೆಲಸ ಮಾಡಲು ಸಾಧ್ಯವೇ.?".ಎಂಬ ಕೋರಿಕೆಯನ್ನು ಸಲ್ಲಿಸಿದರು..ಮಂಗಳಮ್ಮನ ಮಾತುಗಳನ್ನು ಕೇಳಿ "ಖಂಡಿತ ಪ್ರಯತ್ನಿಸುತ್ತೇವೆ..ನಿಮ್ಮ ಸಹೃದಯತೆಗೆ ಚಿರ ಋಣಿ.. "ಎಂದು ಮರಳಿದರು..
ಆ ಕೋರಿಕೆ ಏನು..?
*****
ನರಸಿಂಹ ರಾಯರು ಅಳಿಯನ ಕರೆ ಬಂದಾಗ ಬಹಳ ಖುಷಿಯಿಂದ ಸ್ವೀಕರಿಸಿದರು. "ಮಗಳ ಹೆರಿಗೆಯಾಗಿದೆ.ಮೊಮ್ಮಗಳು ಬಂದಿದ್ದಾಳೆ" ... ಅಂದಾಗ ಮತ್ತಷ್ಟು ಹಿಗ್ಗಿದರು.. ಕೂಡಲೇ ಮಡದಿಗೆ ತಿಳಿಸಿದರು.ಗಂಡನ ಮಾತನ್ನು ಅರ್ಧ ಕೇಳುತ್ತಿದ್ದಂತೆಯೇ.. ರೇಖಾ.."ರೀ..ನಾವು ಆಸ್ಪತ್ರೆಗೆ ಹೋಗೋಣ ಈಗಲೇ.. "ಎಂದು ಗಡಿಬಿಡಿಯಲ್ಲಿ ಕೈಗೆ ಸಿಕ್ಕಿದ್ದನ್ನು ಬ್ಯಾಗಿಗೆ ತುಂಬಿಸಿ ವ್ಯಾನಿಟಿ ಬ್ಯಾಗನ್ನು ಹೆಗಲಿರಗೇರಿಸಿ ಸರಸರನೆ ಮೆಟ್ಟಲಿಳಿದು ತೆರಳಿದರು.ಇದನ್ನು ಕಂಡ ಸಹೋದ್ಯೋಗಿಗಳು.. "ಏನು ರೇಖಾ ಮೇಡಂ.. ಇಷ್ಟು ಅರ್ಜೆಂಟಾಗಿ ಓಡಿದ್ದು.. ಏನಾದರೂ ಹೆಚ್ಚು ಕಮ್ಮಿಯಾಯಿತಾ...?"
"ಮುಖದಲ್ಲಿ ಗಾಬರಿ ಇರಲಿಲ್ಲ.. ಮಂದಹಾಸವಿತ್ತು..."
"ಮೀಟಿಂಗ್ ಕ್ಯಾನ್ಸಲ್ ಮಾಡಿ ಸರ್ ಕೂಡಾ ಹೋದರಂತೆ.."
"ಹೇಳಿ ಹೋಗು ಕಾರಣ.. .." ಅಂತ ಇನ್ನೊಬ್ಬರು ಗುನುಗುನಿಸಿದರು..ಹೀಗೆ ಸಹೋದ್ಯೋಗಿಗಳು ತಮ್ಮಲ್ಲೇ ಚರ್ಚಿಸುತ್ತಿದ್ದರು.
ನರಸಿಂಹ ರಾಯರು ಕಾರನ್ನು ಎಂದಿನಿಂದ ವೇಗವಾಗಿಯೇ ಚಲಾಯಿಸುತ್ತಿದ್ದರು.. "ರೀ..ಮೆಲ್ಲ.. "ಎಂದು ರೇಖಾ ಎಚ್ಚರಿಸಿದರೂ.. ಅವರಿಗೆ ಮಗಳು.. ಮೊಮ್ಮಗಳನ್ನು ನೋಡುವ ತವಕ ಅತಿಯಾಗಿತ್ತು..
"ರೀ... ನೀವು ಹೇಳಿದ ದಿನಾಂಕ ನೋಡಿದರೆ.. ನಾವು ಸಂಕಷ್ಟಿ ವ್ರತ ಮಾಡಿದ್ದೆವಲ್ಲ..ಅದೇ ದಿನ ಮಗಳು ಹೆತ್ತಿದ್ದು.. ನಿಜಕ್ಕೂ ವ್ರತ ಮಾಡಿದ್ದಕ್ಕೋ ಏನೋ ನಮಗೆ ಮಗಳನ್ನು ಮತ್ತೆ ನೋಡುವ ಭಾಗ್ಯ ದೊರೆತಿದ್ದು.."
"ನೋಡು..ರೇಖಾ ಈಗಲೇ ಎಚ್ಚರಿಸುತ್ತೇನೆ.ನಾಲಿಗೆ ಇದೆಯೆಂದು ಅವರಲ್ಲಿ ಏನೆಲ್ಲ ಮಾತನಾಡಬೇಡ..ಪ್ರತೀ ಮಾತೂ ಆಡುವ ಮುನ್ನ ಯೋಚಿಸು.. ಇನ್ನೊಮ್ಮೆ ನನ್ನಿಂದ ಮಗಳನ್ನು ದೂರಮಾಡಬೇಡ.. ಪ್ಲೀಸ್"
"ಆಯ್ತು ರೀ..ಮಾತು ಕಡಿಮೆ ಮಾಡುತ್ತೇನೆ..."
"ಮಾತು ಕಡಿಮೆ ಮಾಡಿದರೆ ಮಾತ್ರ ಸಾಲದು ಬುದ್ಧಿಯೂ ಹಿಡಿತದಲ್ಲಿರಲಿ.."
"ಹೂಂ.. ಸರಿ..ಸರಿ.."
"ಮಗಳನ್ನು ಬಾಣಂತನಕ್ಕೆ ಮನೆಗೆ ಕರೆದುಕೊಂಡು ಬರೋಣ..ಅಳಿಯನೂ ಇಲ್ಲಿಯೇ ಇರಲಿ..ಬಾಣಂತನ ಮುಗಿಸಿ ಬೇಕಾದಲ್ಲಿ ಅವರ ಮನೆಗೆ ತೆರಳಲಿ.. ಇಲ್ಲಿರುವುದು ಅವರಿಗೆ ಇಷ್ಟವಿಲ್ಲದಿದರೆ.."
"ಹಾಗೇ ಆಗಲಿ..."
"ಅಲ್ಲಿವರೆಗೆ ನಿನ್ನ ನಾಲಿಗೆಗೆ ಕಂಟ್ರೋಲ್ ನೀನೇ ಹಾಕಿಕೋ.."
"ಸರಿ ಅಂದೆ ಆಗಲೇ.."
ಎನ್ನುತ್ತಾ ಆಸ್ಪತ್ರೆಗೆ ಬಂದು ತಲುಪಿದರು.ರಿಸೆಪ್ಷನ್ ನಲ್ಲಿ ಮಗಳ ಹೆಸರು ಹೇಳಿ ರೂಮು ಹುಡುಕಿ ಬರುತ್ತಿದ್ದಾಗ ಇಬ್ಬರೂ ವೇಗವಾಗಿ ಹೆಜ್ಜೆ ಹಾಕುತ್ತಿದ್ದರು.. ಅವರ ಕಂಗಳಲ್ಲಿ ಮಗಳನ್ನು ನೋಡುವ ಕಾತರ..ಮೊಮ್ಮಗಳನ್ನು ಎತ್ತಿ ಮುದ್ದಿಸುವ ಹಂಬಲವಿತ್ತು.
*****
ಮುರಲಿಯ ಗೃಹಪ್ರವೇಶ ಸಮಾರಂಭಕ್ಕೆ ಊರಿನಿಂದ ಶಂಕರ ರಾಯರು, ವೆಂಕಟ್ ಬಂದಿದ್ದರು.. ಗಾಯತ್ರಿ ಶಂಕರ ಶಾಸ್ತ್ರಿಗಳು ತೆರಳಿದರು..ಮತ್ತೆ ಹೆಚ್ಚಿನವರು ಮಹತಿಯ ಕಡೆಯವರು ಮತ್ತು ಸಹೋದ್ಯೋಗಿಗಳು.ಎಲ್ಲದಕ್ಕೂ ಮಹತಿಯ ತವರ ಬೆಂಬಲ ,ಮುಂದಾಳುತ್ವ ಎದ್ದು ಕಾಣುತ್ತಿತ್ತು.ಮನೆ ಅದ್ದೂರಿಯಾಗಿತ್ತು.ಶಂಕರ ಶಾಸ್ತ್ರಿಗಳು
"ಶಶಿಯಕ್ಕ ಏನು ಬರಲಿಲ್ಲವಂತೆ ..?"ಎಂದು ಮಡದಿಯಲ್ಲಿ ಕೇಳಿದರು..
"ನನಗೂ ಗೊತ್ತಿಲ್ಲ.ಆದರೆ ಬಂದರೂ ಇಲ್ಲಿನ ಏರ್ಪಾಡು ಅವರಿಗೆ ಹಿಡಿಸುತ್ತಿರಲಿಲ್ಲ.ಕಳೆದ ಬಾರಿ ಬಂದು ಆದ ಅವಾಂತರ ಮನಸಿಂದ ಮಾಸಿರಲಿಕ್ಕಿಲ್ಲ.. "ಎಂದರು ಗಾಯತ್ರಿ.
"ಹೌದು ಮತ್ತೆ..ಅದೆಲ್ಲ ನಿಮಗೆ ಹೆಂಗಸರಿಗೇ ನೆನಪಿರುವುದು ನನಗೆ ಯಾವತ್ತೇ ಮರೆತು ಹೋಗಿದೆ ನೋಡು.. " ಎನ್ನುತ್ತಾ ಮಡದಿಯನ್ನು ದಿಟ್ಟಿಸಿದರು..
"ಹುಟ್ಟು ಬುದ್ಧಿ ಘಟ್ಟ ಹತ್ತಿದರೂ ಬಿಡದು ಎಂಬ ಮಾತು ಶಶಿಯತ್ತಿಗೆಯಂತಹವರಿಗೆ ಸರಿಯಾಗಿ ಅನ್ವಯಿಸುತ್ತದೆ.ಅತ್ತೆಯೂ ಮೊದಲೆಲ್ಲ ಬೆಂಗಳೂರಿಗೆ ಬಂದಾಗ ಅದೇ ರೀತಿ ಮಾಡುತ್ತಿದ್ದರಲ್ಲ..ಈಗ ತುಂಬಾ ಬದಲಾಗಿದ್ದಾರೆ..."
"ಹೌದು..ಶಶಿಯೂ ಬದಲಾಗುತ್ತಾಳೆ ನೋಡು..ಇಲ್ಲದಿದರೆ ಅಪರೂಪಕ್ಕಾದರೂ ಮಗನ ಮನೆಗೆ ಬರಬೇಕು ಅನಿಸಿದಾಗ ಬರಲು ಸಾಧ್ಯವಾದೀತಾ...?"
"ಹೌದು..ತನ್ನ ಲಾಭಕ್ಕೆ ತಕ್ಕಂತೆ ಬುದ್ಧಿಯನ್ನೂ ತಿದ್ದಿಕೊಳ್ಳುವ ಗುಣ ಅವರಿಗೆ ರಕ್ತಗತವಾಗಿ ಬಂದಿದೆ.. "ಎಂದಾಗ
"ಸಮಯ ಸಿಕ್ಕಾಗ ನೀನು ಹೀಗೆ ನನ್ನಮ್ಮನನ್ನು ಆಡುವ ಅಭ್ಯಾಸ ಇನ್ನೂ ಬಿಟ್ಟಿಲ್ಲ.."
ಎಂದಾಗ ರೇಖಾ ನಸುನಕ್ಕು "ಅದು ಗಂಡಸರನ್ನು ಬೊಗಸೆಯೊಳಗಿಟ್ಟುಕೊಳ್ಳುವ ಕಲೆ "ಎಂದು ಹೇಳುತ್ತಾ ಒಳಗೆ ತೆರಳಿದಳು..
********
ನಾಗನ ಕಟ್ಟೆಯ ಜೀರ್ಣೋದ್ಧಾರದ ಕೆಲಸಕ್ಕೆ ಕೈ ಹಾಕಿದ್ದ ಗಣೆಶ ಶರ್ಮರಿಗೆ ಮಗನ ಕರೆ ಭರವಸೆ ತುಂಬಿತು.. ಕಿಶನ್ ಕರೆ ಮಾಡಿ "ಅಪ್ಪಾ..ನನಗೆ ನನಗೆ ಮುಂಭಡ್ತಿ ದೊರೆತಿದೆ.. ನಾನು ಪ್ರತಿ ತಿಂಗಳೂ ಇನ್ನೂ ಹೆಚ್ಚು ಹಣ ಕೊಡಬಲ್ಲೆ..ಜಾಸ್ತಿಯಾದ ನನ್ನ ಸಂಬಳದ ಹಣ ನಾಗನ ಕಟ್ಟೆಯ ದುರಸ್ತಿಗೆ.. " ಎಂದಾಗ "ಎಲ್ಲ ಆ ನಾಗ,ಪರಿವಾರ ದೈವಗಳ ಮಹಿಮೆ" ಎಂದರು..
ಸೊಸೆಯ ಆರೋಗ್ಯ ವಿಚಾರಿಸಿಕೊಂಡರು.."ಈಗ ಮೈತ್ರಿಯ ಆರೋಗ್ಯ ಸುಧಾರಿಸಿದೆ.. ಬಹುಶಃ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು ಎಂದನು..
ಮುಂದುವರಿಯುವುದು..
✍️ ಅನಿತಾ ಜಿ.ಕೆ.ಭಟ್.
14-07-2020.
👌🏼👌🏼
ReplyDeleteಧನ್ಯವಾದಗಳು 💐🙏
Delete