ಜೀವನ ಮೈತ್ರಿ ಭಾಗ ೧೦೮
ಮೈತ್ರಿಯನ್ನು ಲೇಬರ್ ವಾರ್ಡಿಗೆ ದಾಖಲಿಸಿ ಸ್ವಲ್ಪ ಹೊತ್ತಿಗೆ ಡಾಕ್ಟರ್ ಮಾಯಾ ಆಗಮಿಸಿದರು.ಅವಳನ್ನು ಪರೀಕ್ಷಿಸಿ ನೋವು ಬರಲು ಔಷಧಿಗಳನ್ನು ಬರೆದುಕೊಟ್ಟರು. ಮೈತ್ರಿಗೆ ಡ್ರಿಪ್ ಹಾಕಲು ಆರಂಭಿಸಿದಾಗ ಸಣ್ಣದಾಗಿ ಬರುತ್ತಿದ್ದ ನೋವು ಜೋರಾಗಲಾರಂಭಿಸಿತು. ಒಮ್ಮೆ ಸುಸೂತ್ರವಾಗಿ ಹೆರಿಗೆಯಾದರೆ ಸಾಕು ಎನಿಸುವಷ್ಟು ಯಾತನೆ ಅನುಭವಿಸುತ್ತಿದ್ದಳು. ಹತ್ತಿರದ ಕೋಣೆಯಿಂದ ಕಿರುಚಾಟ ಕೇಳಿದಾಗ ಅವಳಿಗೆ ಮತ್ತಷ್ಟು ಮೈ ಬೆವರುತ್ತಿತ್ತು.
ಮುಂದಿನ ಬಾರಿ ವೈದ್ಯೆ ಬಂದಾಗ ಸಣ್ಣಗೆ ಕಂಪಿಸುತ್ತಿದ್ದವಳನ್ನು ಕಂಡು "ಹೆದರಬೇಡಮ್ಮ..ಏನಾಗಲ್ಲ..ನಾನಿದ್ದೇನೆ.. ಸ್ವಲ್ಪ ಹೊತ್ತಲ್ಲಿ ನಿನಗೆ ಹೆಚ್ಚು ನೋವಾಗದಂತೆ ತಾಯಿಯ ಪಟ್ಟ ಕೊಡಿಸುತ್ತೇನೆ.. " ಎಂದು ಧೈರ್ಯ ತುಂಬಿದರು.ಕಿಶನ್ ಹೊರಟಿರಬಹುದಾ,ಅವನಿಗೀಗ ಏನು ಫೀಲ್ ಆಗುತ್ತಿರಬಹುದು,ನನ್ನ ಬಗ್ಗೆ ಯೋಚಿಸುತ್ತಿರಬಹುದಾ,ಅಲ್ಲ ಬರೀ ಮಗು ಹೆಣ್ಣೋ ಗಂಡೋ ಎಂಬ ಧ್ಯಾನದಲ್ಲಿರಬಹುದಾ..ಎಂದೆಲ್ಲ ಯೋಚಿಸುತ್ತಿದ್ದಳು ಬಿಟ್ಟು ಬಿಟ್ಟು ಬರುತ್ತಿದ್ದ ನೋವನ್ನು ಮರೆಯಲು.
ಗಂಟೆಯಿಂದ ಗಂಟೆಗೆ ಅವಳ ನೋವು ತಾರಕಕ್ಕೇರುತ್ತಿತ್ತು. ಪಕ್ಕದ ಕೋಣೆಯಿಂದ ಕಿರುಚಾಟ ನಿಂತು ಮಗುವಿನ ಅಳು ಕೇಳಿಬಂತು.. ಇನ್ನು ವೈದ್ಯೆ ನನ್ನದೇ ಹೆರಿಗೆ ಮಾಡಿಸುತ್ತಾರೆ ಎಂದುಕೊಂಡು ಬರುತ್ತಿರುವ ಬೇನೆಗೆ ಕಣ್ಣೀರು ಸುರಿಸುತ್ತಿದ್ದಳು. ಇಲ್ಲ..ವೈದ್ಯೆಯ ಆಗಮನದ ಸುಳಿವಿಲ್ಲ.. ಇನ್ನೆಷ್ಟು ಹೊತ್ತು ಈ ಸಂಕಟ.. ಎಂದುಕೊಳ್ಳುತ್ತಾ ದಾದಿಯನ್ನು ಕೇಳಿದಳು..ಆಕೆ ಪರೀಕ್ಷಿಸಿ.."ಇನ್ನೂ ಸರಿಯಾಗಿ ಗರ್ಭದ್ವಾರ ಓಪನ್ ಆಗಿಲ್ಲಮ್ಮ...ಒಂದೆರಡು ಗಂಟೆ ಬೇಕು" ಎಂದಾಗ..ಅವಳೆದೆ ಧಸಕ್ಕೆಂದಿತು. ಇದನ್ನೇ ಸಹಿಸಲು ಕಷ್ಟ...ಇನ್ನು ಹೆಚ್ಚು...ಉಫ್...ಈ ತಾಯ್ತನವೆಂಬುದು ಸುಲಭವಾಗಿ ದಕ್ಕುವಂತಹುದಲ್ಲ.. ಎಂದು ಭಾವುಕಳಾದಳು.
ಎರಡು ಗಂಟೆಯ ಬಳಿಕ ವೈದ್ಯರು ಆಗಮಿಸಿದರು.ಇನ್ನು ಸ್ವಲ್ಪವೇ ಹೊತ್ತು ಎಂದರು ಪರೀಕ್ಷಿಸುತ್ತಾ.. ಬಳಿಯಲ್ಲಿ ನಿಂತಿದ್ದ ವೈದ್ಯೆ "ನಿನಗೇನು ಹವ್ಯಾಸಗಳಿವೆ ?" ಎಂದು ಮಾತಿಗೆಳೆದರು. ನನಗೆ ಹಾಡುವುದೆಂದರೆ ಇಷ್ಟವೆಂದಳು.. "ಓಹ್..ಹಾಗಾದರೆ ಪಕ್ಕನೆ ನೆನಪಾಗುವ ಒಂದು ಹಾಡು ಹಾಡಿ..ಇನ್ನೊಂದು ನೋವಿನ ಆವರ್ತನೆ ಬರುವ ಮುನ್ನ" ಎಂದರು..ಅವಳಿಗೂ ಮನಸು ರಿಲ್ಯಾಕ್ಸ್ ಆಗಲು ಏನಾದರೂ ಬೇಕಿತ್ತು..' ಪವಡಿಸೋ ಪರಮಾತ್ಮ ಶ್ರೀ ವೆಂಕಟೇಶ '..ಗೀತೆಯ ನಾಲ್ಕು ಸಾಲುಗಳನ್ನು ಹಾಡಿದಾಗ .. ಮತ್ತೆ ನೋವು ಆರಂಭವಾಯಿತು..ಅಲ್ಲಿಗೆ ಹಾಡು ನಿಲ್ಲಿಸಬೇಕಾಯಿತು. ಅವಳ ಹಾಡಿಗೆ ತಲೆದೂಗಿದರು ದಾದಿಯರು ಮತ್ತು ವೈದ್ಯೆ.ದಾದಿಯರು ಆ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದರು..ಹಾಡಿನ ತುಣುಕನ್ನು ಮತ್ತೆ ಮತ್ತೆ ಕೇಳುತ್ತಾ ತಂಡ ಹೆರಿಗೆಗೆ ಸಜ್ಜಾದಾಗ ಮೈತ್ರಿ ಹಾಡಿನಲ್ಲೇ ತಲ್ಲೀನಳಾಗಿದ್ದಳು.ಕೆಲವೇ ಕ್ಷಣಗಳಲ್ಲಿ ಮೈತ್ರಿ ಚೀರುತ್ತಿದ್ದಂತೆ ಡಾಕ್ಟರ್ ಮಾಯಾ ಮಗುವನ್ನು ತಮ್ಮ ಕೈಯಲ್ಲಿ ಹಿಡಿದಿದ್ದರು..ಅಮ್ಮನ ಹಾಡನ್ನು ಕೇಳುತ್ತಾ ಮಗು ಭುವಿಗಿಳಿಯಿತು.."ನೋಡಿ ಪರಮಾತ್ಮ ನಿಮ್ಮ ಮಡಿಲಲ್ಲೇ ಪವಡಿಸಿದ್ದಾನೆ.."ಎನ್ನುತ್ತಾ ಅವಳ ಬಳಿ ಮಗುವನ್ನು ಹಿಡಿದಾಗ ಅವಳಿಗೋ ಪರಮಾನಂದದ ಅಶ್ರುಧಾರೆ ಸುರಿಯಿತು..ಮಗುವಿನ ಪುಟ್ಟ ಬೆರಳುಗಳನ್ನು ಹಿಡಿದು ಸಿಹಿಮುತ್ತನಿತ್ತಳು.
ದಾದಿ ಮಗುವನ್ನು ಸ್ವಚ್ಛಗೊಳಿಸಿ ಅಮ್ಮನ ಮಡಿಲಲ್ಲಿ ಮಲಗಿಸಿದರು.ಹೊರಗಡೆ ತೆರಳಿ ಪೇಷೆಂಟ್ ಮೈತ್ರಿ ಪಾರ್ಟಿ ಎಂದು ಕರೆದಾಗ ಕಿಶನ್,ಮಂಗಳಮ್ಮ ಮುಂದೆ ಬಂದರು.."ಗಂಡು ಮಗು .. ಕಂಗ್ರಾಟ್ಸ್ " ಎಂದು ಹೇಳಿ ಒಳಗೆ ಕರೆದೊಯ್ದು ಮಗುವನ್ನು ಕಿಶನ್'ನ ಕೈಗಿತ್ತರು.."ನಿಮ್ಮ ಮಗ ಅಮ್ಮನ ಹಾಡನ್ನು ಕೇಳುತ್ತಾ ಭೂಮಿಗೆ ಬಂದ ಅದೃಷ್ಟ ವಂತ.."ಎಂದಾಗ ಕಿಶನ್ ಗೆ ರೋಮಾಂಚನವಾಯಿತು..ಮಗನ ಪುಟ್ಟ ಕೆಂಪಗಿನ ಮುಖ,ಇಷ್ಟೇ ಇಷ್ಟು ಸಣ್ಣ ಬೆರಳುಗಳು,ಉದ್ದವಾದ ಉಗುರುಗಳು,ಮುದ್ದಾದ ಪಾದವ ಮೆದುವಾಗಿ ಸ್ಪರ್ಶಿಸಿದ."ಬಂಗಾರು.. ನಿನ್ನ ನೋಡಲು ಎಷ್ಟು ಕಾತುರನಾಗಿದ್ದೆ ಗೊತ್ತಾ..ಅಮ್ಮಂಗೆ ಜಾಸ್ತಿ ನೋವು ಕೊಡದೆ ಹೊರಗೆ ಬಾ.. ಅಂದಾಗ ಕೇಳಿಸಿಕೊಂಡವನಂತೆ ಮೆದುವಾಗಿ ಒದೆಯುತ್ತಿದ್ದೆಯಂತೆ..!! ಅಮ್ಮ ನನ್ನ ಕೈ ಉದರದ ಮೇಲಿರಿಸಿ ತೋರಿಸುತ್ತಿದ್ದಳು.. ಹೂಂ..ತುಂಟ..ಅಮ್ಮನಂತೆಯೇ ಮುಖ,ಗಲ್ಲ,ಆದರೆ ತಲೆಕೂದಲು ಮಾತ್ರ ನನ್ನಂತೆ.."ಎಂದುಕೊಳ್ಳುತ್ತಾ ಬಿಳಿ ಹತ್ತಿಬಟ್ಟೆಯಲ್ಲಿ ಸುತ್ತಿದ್ದ ತನ್ನ ಪ್ರೇಮದ ಕುಡಿಯನ್ನು ಎದೆಗಾನಿಸಿದ.
ಮೈತ್ರಿಯ ಆರೋಗ್ಯವನ್ನು ವಿಚಾರಿಸಿದ ನಂತರ ಇಬ್ಬರನ್ನು exit ಬಾಗಿಲಲ್ಲಿ ಹೊರಗಡೆ ಹೋಗುವಂತೆ ತಿಳಿಸಿದರು."ಓಹೋ ...ಇಲ್ಲೊಂದು ದ್ವಾರವಿದೆ..ನನಗದು ತಿಳಿದಿರಲಿಲ್ಲ.." ಎಂದುಕೊಳ್ಳುತ್ತಾ ಹೊರಬಂದಾಗ ಇಲ್ಲಿ ಬಹಳಷ್ಟು ಮಂದಿ ಕುಳಿತಿದ್ದನ್ನು,ದಾದಿಯರು ಹೆಚ್ಚು ಬಳಸುತ್ತಿದ್ದುದನ್ನು ಕಂಡು ನಾನೂ ಈ ಬಗ್ಗೆ ಗೊತ್ತಿದ್ದರೆ ಮೈತ್ರಿಯನ್ನು ಆಗಾಗ ವಿಚಾರಿಸಿಕೊಳ್ಳುತ್ತಿದ್ದೆ ಎಂದುಕೊಂಡರು ಮಂಗಳಮ್ಮ ಮನದಲ್ಲೇ.
ಹತ್ತಿರದ ಬಂಧುಗಳಿಗೆ ವಿಷಯ ತಿಳಿಸಿದರು.
ಬೆಳಿಗ್ಗೆ ಮೈತ್ರಿಯನ್ನು ವಾರ್ಡಿಗೆ ಶಿಫ್ಟ್ ಮಾಡಿದ್ದರು.ಗಣೇಶ ಶರ್ಮ ,ಮಮತಮ್ಮನೂ ಮೊಮ್ಮಗುವನ್ನು ನೋಡಲು ಆಗಮಿಸಿದರು.ಮಹೇಶ ಬೆಳಗ್ಗೆಯೇ ಬಂದಿದ್ದ ಅಳಿಯನನ್ನು ನೋಡಲು..ಎಲ್ಲರಿಗೂ ಪುಟ್ಟ ರಾಜಕುಮಾರನ ಆಗಮನ ಸಂತಸವನ್ನು ತಂದಿತ್ತು.
ಅಜ್ಜಿ ಮಹಾಲಕ್ಷ್ಮಿ ಅಮ್ಮ ಮನೆಯಲ್ಲಿ ಇದ್ದುಕೊಂಡು ಮೈತ್ರಿಯ ಬಾಣಂತನಕ್ಕೆ ತಯಾರು ಮಾಡುತ್ತಿದ್ದರು.ಎರಡು ತಿಂಗಳಿಗೆ ಮೊದಲೇ ತೋಟದಿಂದ ದೊಡ್ಡ ಗಾತ್ರದ ಕೆಲವು ಅಡಕೆ ಹಾಳೆಯನ್ನು ಕೊಯ್ದು ತಂದು ಅದರ ಮೇಲೆ ಭಾರವಿಟ್ಟು ಚಪ್ಪಟೆಯಾಗಿ ಮಾಡಿ ಜೋಪಾನ ಮಾಡಿದ್ದರು.ಅದನ್ನೆಲ್ಲ ಹೊರತೆಗೆದು ಚೆನ್ನಾಗಿ ಒರೆಸಿ ಮೈತ್ರಿಯ ರೂಮಿನಲ್ಲಿಟ್ಟರು ."ಪುಟ್ಟ ಮಕ್ಕಳನ್ನು ಪ್ಲಾಸ್ಟಿಕ್ ಶೀಟ್ ಮೇಲೆ ಬಟ್ಟೆ ಹಾಕಿ ಮಲಗಿಸುವುದರಿಂದ ಇದು ಉತ್ತಮ.ಮಕ್ಕಳ ದೇಹಕ್ಕೆ ಆಧಾರ ನೀಡುತ್ತದೆ.ಒಣಗಿಸಿದ ಚಪ್ಪಟೆ ಅಡಿಕೆ ಹಾಳೆಯ ಮೇಲೆ ದಪ್ಪನೆ ಬಟ್ಟೆ ಹಾಸಿ ಮಗುವನ್ನು ಮಲಗಿಸಿದರೆ ಸುಖ ನಿದ್ರೆ.ಪ್ರಯಾಣಿಸುವಾಗ ಬಳಸಿದರೆ ,ಮಗುವಿಗೆ ಅತಿ ಆಯಾಸವಾಗದು.ಹಾಗಾಗಿ ಮನೆಗೆ ವಾಪಾಸಾದ ಮೇಲೆ ಹಠವೂ ಕಡಿಮೆ."ಎಂದು ತನ್ನ ಅನುಭವವನ್ನು ಸರಸುವಿನ ಜೊತೆ ಹಂಚಿಕೊಂಡರು.ಅವಳೂ "ಹೌದಮ್ಮ.. ಹೌದು.."ಎಂದು ದನಿಗೂಡಿಸಿದಳು.
ಬಾಣಂತಿಗೆಂದೇ ಹಲವು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಾಣಂತಿ ತೈಲ ಮಾಡಿಟ್ಟರು. ಮಗುವಿನ ಮೈಗೆ ಹಚ್ಚಲು ಬೇಕಾಗುವ ಕೆಂಪೆಣ್ಣೆಯನು ತಯಾರಿಸಿಟ್ಟರು. ಸರಸು ಕೂಡ ಸಹಕರಿಸಿದ್ದಳು. ಬಾಣಂತಿಯ ಸ್ನಾನದ ಮತ್ತು ಬಾಣಂತಿ,ಮಗುವಿನ ಬಟ್ಟೆ ಒಗೆಯುವ ಜವಾಬ್ದಾರಿ ಅವಳಿಗೆ ವಹಿಸಿದರು.ಮಗುವಿನ ಮೈಗೆ ಹಚ್ಚಲು ಗಂಧ ಚಂದನದ ಕೊರಡನ್ನು ತೆಗೆದಿರಿಸಿದರು.ಪುಟ್ಟ ಮಗುವಿಗೆಂದು ಶ್ಯಾಮ ಶಾಸ್ತ್ರಿಗಳ ಹಳೆಯ ಮುಂಡು ವೇಸ್ಟಿಗಳನ್ನೆಲ್ಲ ಚೆನ್ನಾಗಿ ತೊಳೆದು ಮಡಚಿಟ್ಟಿದ್ದರು. ಸಂಜೆ ಮನೆಗೆ ಮಹೇಶ ಬಂದಾಗ ಅಜ್ಜಿಯ ತಯಾರಿಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟ.
"ಎಂತ ಪುಳ್ಳಿ..ಹಾಂಗೆ ನೋಡ್ತೆ..ಇದೆಲ್ಲ ಎನಗೆ ನೆಂಪು ಒಳಿತ್ತಿಲ್ಲೆ..ಎಲ್ಲ ಒಂದು ಪುಸ್ತಕಲ್ಲಿ ಬರೆದಿಡು..ನಿನ್ನ ಕಾಲಕ್ಕೆ ನಾನಿರುತ್ತೇನೋ ಇಲ್ಲವೋ.. ಆಗ ಉಪಯೋಗಕ್ಕೆ ಬಕ್ಕು"..
"ಏನೂ.."ಎಂದು ಮಹೇಶ ಕಣ್ಣರಳಿಸಿದ ಅಜ್ಜಿಯ ಮುಂದಾಲೋಚನೆಗೆ.
"ಅಜ್ಜಿ.. ಪುಸ್ತಕದಲ್ಲಿ ಬರೆಯೋದಕ್ಕಿಂತ ಈ ಲ್ಯಾಪ್ ಟಾಪ್ ನಲ್ಲಿ ಬರೆದರೆ ಒಳ್ಳೆಯದು..ಯಾವ ಕಾಲಕ್ಕೂ ಅಳಿಸಿ ಹೋಗುವುದಿಲ್ಲ..." ಎನ್ನುತ್ತಾ ಅಪ್ಪ ಇಂಜಿನಿಯರಿಂಗ್ ಗೆ ಸೇರಿಸಿ ಕೆಲವೇ ದಿನಗಳಲ್ಲಿ ತೆಗೆದುಕೊಟ್ಟ ಲ್ಯಾಪ್ ಟಾಪ್ ಹೊರತೆಗೆದ.ಅಜ್ಜಿಗೆ ಖುಷಿಯೋ ಖುಷಿ.ಅಜ್ಜಿ ಹೇಳುತ್ತಾ ಹೋದಂತೆ ಟೈಪ್ ಆಯಿತು..ಅಜ್ಜಿಗೇನು ಸಂಭ್ರಮ ಹೊಸ ತಂತ್ರಜ್ಞಾನ ಕಂಡು.. ಮತ್ತೆ ಅವರ ಪಟವೂ ಅದರ ಮೇಲೆ ಕಂಡಾಗ ಪುಳ್ಳಿಯ ಬೆನ್ನು ತಟ್ಟಿದರು."ಇದನ್ನು ಜೋಪಾನವಾಗಿ ಇಡು..ಪುಳ್ಳಿ.." ಎಂದರು.
ಕಿಶನ್ ಆಸ್ಪತ್ರೆಯಲ್ಲಿ ಇದ್ದುಕೊಂಡು ಮಂಗಳಮ್ಮ ಮೈತ್ರಿಗೆ ಸಹಕರಿಸುತ್ತಿದ್ದ. ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಆಗಿ ಶಾಸ್ತ್ರೀ ನಿವಾಸಕ್ಕೆ ಚೊಚ್ಚಲ ಬಾಣಂತನಕ್ಕೆ ಮೈತ್ರಿಯ ಸುಖಾಗಮನವಾಯಿತು. ಮಂಗಳಮ್ಮ ಮೈತ್ರಿಯ ಕೊಣೆಯಲ್ಲಿದ್ದು ಮಗುವನ್ನೂ ಬಾಣಂತಿಯನ್ನೂ ನೋಡಿಕೊಂಡರೆ,ಅಜ್ಜಿ ಮನೆಕೆಲಸ ನಿಭಾಯಿಸುತ್ತಿದ್ದರು . ಸರಸು ಬಾಣಂತಿ ಮೀಯಿಸಿದರೂ ಮಗುವನ್ನು ಮಂಗಳಮ್ಮನೇ ಸ್ನಾನ ಮಾಡಿಸುತ್ತಿದ್ದರು.ಮೈಗೆ ಎಣ್ಣೆ ಹಚ್ಚಿ, ವಿಶಾಲವಾದ ಬಚ್ಚಲು ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಕಾಯಿಸಿದ ಬಿಸಿ ಬಿಸಿ ನೀರ ಸ್ನಾನ ಮಾಡುವುದು ಮೈತ್ರಿಗೂ ಬಲು ಹಿತವಾಗಿತ್ತು.
ದಿನಗಳು ಉರುಳುತ್ತಿದ್ದವು.ಒಮ್ಮೊಮ್ಮೆ ರಾತ್ರಿಯಿಡೀ ಅತ್ತು ರಂಪ ಮಾಡುವ ಪೋರ ಹಗಲಿಡೀ ಸುಖವಾಗಿ ನಿದ್ರಿಸುತ್ತಿದ್ದ.ಇನ್ನೊಮ್ಮೆ ಸಂಪೂರ್ಣ ಅದಲು ಬದಲು.ಜೋರಾಗಿ ಅತ್ತರೆ ಯಾರ ಕೈಯಲ್ಲೂ ಸಮಾಧಾನವಾಗದ ತುಂಟ ಸೋದರ ಮಾವನ ಮಡಿಲಲ್ಲಿ ಮಲಗಿ ಸಿನೆಮಾ ಹಾಡುಗಳನ್ನು ಕೇಳಿದಾಗ ಶಾಂತನಾಗುತ್ತಿದ್ದ .. ಶ್ಯಾಮ ಶಾಸ್ತ್ರಿಗಳು "ಎಲಾ ಇವನಾ.. !!! ಮಹಾ ತುಂಟನಾಗುತ್ತಾನೋ ಹೇಗೆ..?" ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದರು.
ಸಾಂಪ್ರದಾಯಿಕ ಬಾಣಂತನದಲ್ಲಿ ಎರಡು ತಿಂಗಳು ಪೂರೈಸಿದಳು ಮೈತ್ರಿ.ತೆಳ್ಳಗೆ ಬೆಳ್ಳಗಿದ್ದ ಮೈತ್ರಿ ಮೈ ಕೈ ತುಂಬಿಕೊಂಡು ಗುಂಡು ಗುಂಡಗೆ ಆಗಿದ್ದಳು.ಮೂರುತಿಂಗಳು ತುಂಬಿದಾಗ ತೊಟ್ಟಿಲ ಮಗುವನ್ನು ಕರೆದೊಯ್ಯುವುದೆಂದು ನಿರ್ಧರಿಸಲಾಯಿತು.
ಅಜ್ಜ ತೋಟದ ಬದಿಯಲ್ಲಿದ್ದ ಹಲಸಿನ ಮರವನ್ನು ಕೊಯ್ಯಲು ಹೇಳಿದರು.ಅದರಿಂದ ಹಲಗೆ ಮಾಡಿ ,ಮಗುವಿಗೆ ತೊಟ್ಟಿಲು ಮಾಡಬೇಕೆಂದು ಅವರಾಸೆ.ಅವರಾಸೆಯಂತೆ ಸುಂದರವಾದ ಹಲಸಿನ ಮರದ ತೊಟ್ಟಿಲು ಸಿದ್ಧವಾಯಿತು.. ಮರದ ಕೆಲಸ ಮಾಡುವ ಎಪ್ಪತ್ತು ವರ್ಷದ ಬಾಬು ಆಚಾರಿ ಮನೆಗೇ ಬಂದು ತೊಟ್ಟಿಲನ್ನು ಮಾಡಿಕೊಟ್ಟರು.
*****
ಕೇಶವ ಮಾವನ ಮನೆಯಲ್ಲೇ ಇದ್ದು ಉದ್ಯೋಗಕ್ಕೆ ಹೋಗುತ್ತಿದ್ದ. ಮಗಳ ಬಾಣಂತನ ಮುಗಿಸಿ ರೇಖಾ ಕೂಡಾ ಉದ್ಯೋಗಕ್ಕೆ ತೆರಳಲಾರಂಭಿಸಿದರು. ಮನೆಯಲ್ಲಿ ಸೌಜನ್ಯಳಿಗೆ ಮಗುವನ್ನು ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿತ್ತು. ಒಮ್ಮೆ ಸಂಜೆಯಾದರೆ ಸಾಕು ಎನಿಸುತ್ತಿತ್ತು. ತಂದೆ ಮನೆಗೆ ಬಂದಾಗ ಅವರ ಕೈಗೆ ಮಗುವನ್ನು ಕೊಟ್ಟು ತನ್ನ ಕೆಲಸಗಳನ್ನು ಬೇಗ ಬೇಗನೆ ಮುಗಿಸಿ ಬಿಡುತ್ತಿದಳು.
ನರಸಿಂಹ ರಾಯರು ತಮ್ಮ ಗುರುತು ಪರಿಚಯದವರಲ್ಲಿ ಅಳಿಯನಿಗೆ ಒಳ್ಳೆಯ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸಿದರು. ಕೆಲವು ಕಡೆ ಹೋಗಿ ಇಂಟರ್ವ್ಯೂ ಗೆ ಹಾಜರಾದ ಕೇಶವ.ಗಂಡನಿಗೊಂದು ಒಳ್ಳೆಯ ಕೆಲಸ ಸಿಗಲಿ ಎಂದು ಸೌಜನ್ಯ ದಿನವೂ ಪ್ರಾರ್ಥಿಸುತ್ತಿದ್ದಳು.
ಮುಂದುವರಿಯುವುದು..
✍️ ಅನಿತಾ ಜಿ.ಕೆ.ಭಟ್.
10-07-2020.
👏👏
ReplyDeleteಧನ್ಯವಾದಗಳು 💐🙏
Delete