Tuesday, 21 July 2020

ಜೀವನ ಮೈತ್ರಿ ಭಾಗ ೧೧೦(110)



ಧಾರಾವಾಹಿಯ ಕೊನೆಯ ಸಂಚಿಕೆ.ತಪ್ಪದೇ ಓದಿ .

ಜೀವನ ಮೈತ್ರಿ ಭಾಗ ೧೧೦


   ಮಗ....ಸೊಸೆ ಹಾಗೂ ಮೊಮ್ಮಗುವಿನ ಜೊತೆಗೆ ಆಗಮಿಸಿದ ಖುಷಿಯಲ್ಲಿ ಸುಮಾ ನಗುನಗುತ್ತಾ ಎಲ್ಲರನ್ನೂ ಉಪಚರಿಸಿದರು. ಬಹಳ ದಿನಗಳ ನಂತರ ಅಮ್ಮನ ಕೈಯಡುಗೆಯನ್ನು ಉಂಡ ಕೇಶವನಿಗೆ ಬಲು ತೃಪ್ತಿಯಾಗಿತ್ತು. ಸೌಜನ್ಯಳಿಗೆ ಈ ಮನೆಯಲ್ಲಿ ಮೊದಲ ದಿನ.ಅವಳ ಮಗುವಿಗೂ ಮೊದಲ ದಿನ.ಪ್ರಯಾಣಿಸಿ ಬಂದ ಮಗಳ ಹಠವೂ ಜೋರಾಗಿಯೇ ಇತ್ತು. ಕೇಶವನೂ ರಮಿಸಲು ಪ್ರಯತ್ನಿಸುತ್ತಿದ್ದ. ಆದರೂ ಮಗು ಜೋರಾಗಿ ಅಳುತ್ತಿದ್ದಾಗ ಬಂಗಾರಣ್ಣ ಏನೋ ನೆನಪಾದವರಂತೆ ಸೀದಾ ಮನೆಯ ಮಾಳಿಗೆಗೆ ತೆರಳಿದರು.ಅಲ್ಲಿಂದ ಒಂದು ದೊಡ್ಡ ಗೋಣಿಕಟ್ಟಲ್ಲಿ ಏನೋ ಭಾರವಾದ ವಸ್ತುವನ್ನು ಹಿಡಿದುಕೊಂಡು ಬಂದು.. "ಸುಮಾ.. ಇದನ್ನು ಸ್ವಚ್ಛಗೊಳಿಸಿ ಕೊಡು "ಎಂದರು.ಅವರು ಜೋಪಾನವಾಗಿ ಶುಚಿಗೊಳಿಸಿ ಕೊಟ್ಟಾಗ ಮುಂದಿನ ತಯಾರಿಮಾಡಿದ್ದರು ಬಂಗಾರಣ್ಣ.. ಕೋಣೆಯಲ್ಲಿ ಛಾವಣಿಯ ಅಡ್ಡಕ್ಕೆ ಹಗ್ಗ ಸಿಕ್ಕಿಸಿ ತೊಟ್ಟಿಲನ್ನು ಕಟ್ಟಿಯೇ ಬಿಟ್ಟರು ಅಜ್ಜ ಅಜ್ಜಿ.. ಸುಮಾ ದಪ್ಪದ ತಲೆದಿಂಬನ್ನಿಟ್ಟು ಬೆಚ್ಚಗೆ ಹಾಸಿ ಕೊಟ್ಟರು ..ಕೇಶವ ಮಗಳನ್ನು ಮಲಗಿಸಿದ.. ಸುಮಾ ...'ಜೋ ಜೋ..ಶ್ರೀ ಕೃಷ್ಣ ಪರಮಾನಂದ..ಜೋ ಜೋ..ಗೋಪಿಯ ಕಂದಾ ಮುಕುಂದಾ..ಜೋ..ಜೋ.."ಎಂದು ಹಾಡುತ್ತಾ ತೊಟ್ಟಿಲನ್ನು ತೂಗಿದಾಗ..ಅಜ್ಜಿಯ ಹಾಡಿನ ಮೋಡಿಗೆ ಮಗು ನಿದಿರೆಗೈಯಿತು..ಎಲ್ಲರು ನಿರಾಳರಾದರು.


       ಒಂದೂವರೆ ವರುಷದಿಂದ ಹರುಷವಿಲ್ಲದೆ ಸ್ತಬ್ದವಾದಂತಿದ್ದ ಮನೆಯಲ್ಲಿ ಮತ್ತೆ ಲವಲವಿಕೆ ತುಂಬಿತು.ಮರುದಿನ ಬೆಳಿಗ್ಗೆ ಅಂಗಳದಲ್ಲಿ ಕಾರು ನಿಂತಿದ್ದನು ಕಂಡ ಕೆಲಸದವರು ಮೊದಲು ಚಾವಡಿಗೆ ಇಣುಕಿ ಬಂದವರು ಯಾರೆಂದು ಸ್ಪಷ್ಟ ಪಡಿಸಿಕೊಂಡರು.'ಸಣ್ಣ ದನಿ ಮನೆಗೆ ಬಂದಿದ್ದಾರೆ' ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಊರಿಡೀ ಹಬ್ಬಿತು.ಸುಮಾ ಮಗನಲ್ಲಿ ಕೆಲವು ದಿನ ರಜೆ ಹಾಕಿ ನಿಲ್ಲಲು ಒತ್ತಾಯಿಸಿದರು.ರೇಖಾ ನರಸಿಂಹ ರಾಯರು ಬೆಂಗಳೂರಿಗೆ ವಾಪಾಸಾದರು.ಮಗನ ಉದ್ಯೋಗ ಬಾಡಿಗೆ ಮನೆಯ ವಿಚಾರಗಳನ್ನು ತಿಳಿದುಕೊಂಡ ಅಮ್ಮ ಮಗನಲ್ಲಿ "ಇನ್ನು ಇಲ್ಲಿಯೇ ಇರಿ .." ಎಂದು ಒತ್ತಾಯಿಸಿದರು. ಯಾವುದಕ್ಕೂ ಯೋಚನೆ ಮಾಡಲು ಸ್ವಲ್ಪ ಕಾಲಾವಕಾಶ ಬೇಕು ಎಂದ ಕೇಶವ.


ಸಮಯ ಸಂದರ್ಭ ನೋಡಿಕೊಂಡು ಸೌಜನ್ಯಳಲ್ಲಿ ವಿಚಾರ ಚರ್ಚಿಸಿದ. ಅವಳು ನಿಧಾನವಾಗಿ ಆಲೋಚಿಸಿದಳು..ತವರಿನಲ್ಲಿಯೇ ತುಂಬಾ ಸಮಯ ಉಳಿದುಕೊಳ್ಳಲು ನನಗೆ ಅಭ್ಯಂತರವಿಲ್ಲದಿದ್ದರೂ ಕೇಶವನಿಗೆ ಅಲ್ಲಿ ಹೊಂದಿಕೆಯಾಗುವುದು ಕಷ್ಟ.ಅವನ ಸ್ವಭಾವವೇ ಹಾಗೆ. ಸ್ವಾಭಿಮಾನಿಯೋ .. ಒರಟನೋ.. ಮೂಗಿನ ತುದಿಯಲ್ಲಿ ಕೊಪವಿರುವವನೋ..ಮಗದೊಮ್ಮೆ ಮೃದು ಹೃದಯಿಯೋ...ಏನೆಂದೂ ಹೇಳಲಾಗದ ಸ್ವಭಾವ ಅವನದು.ಇನ್ನು ಸಂಬಳವೋ  ಬೆಂಗಳೂರಿನ ಜೀವನ ಶೈಲಿಗೆ ಅತಿ ಕಡಿಮೆ..ಬಾಡಿಗೆ ಮನೆ ವಾಸ್ತವ್ಯವೂ ಕಷ್ಟ..ಅನಿವಾರ್ಯವಾದರೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು.. ಇಲ್ಲಿ ಎಲ್ಲ ಅನುಕೂಲ ಗಳಿದ್ದು..ಹಿರಿಯರಿಂದ ಬಂದಂತಹ ಫಲವತ್ತಾದ ಕೃಷಿಭೂಮಿ ಇರುವಾಗ ಅಲ್ಲಿ ಒದ್ದಾಡುವುದಕ್ಕಿಂತ ಇಲ್ಲಿನ ಬಾಳುವುದೇ ಚಂದ..ಗೌರವ ಕೂಡಾ.. ನಾನಂತೂ ಹಳ್ಳಿಯಾದರೂ ಎಲ್ಲ ಸೌಕರ್ಯಗಳಿದ್ದರೆ ಹೊಂದಿಕೊಳ್ಳಬಲ್ಲೆ ಎಂದೇ ಮದುವೆಗೆ ಒಪ್ಪಿದವಳು.ಅತ್ತೆಯಂತೂ ತೀರಾ ಜೋರಿನವರಲ್ಲ.ಮತ್ತೇನು ಹಳ್ಳಿಯಾದರೆ..?
ಎಂದು ಯೋಚಿಸಿ "ನನಗೆ ಹಳ್ಳಿ ಓಕೆ "ಎಂದಳು.


ನಾಲ್ಕೈದು ದಿನವಿದ್ದು ಹೊರಡುವ ಮುನ್ನ ಅಪ್ಪನೂ  "ಕೃಷಿ ಮಾಡುವುದು ಇಷ್ಟವಿದ್ದರೆ ಇಲ್ಲಿಯೇ ಇರುವುದಕ್ಕೆ ನನ್ನದೇನೂ ಆಕ್ಷೇಪವಿಲ್ಲ" ಎಂದರು.. ಅಂದರೆ ಅಪ್ಪನಿಗೆ ನನ್ನ ಮತ್ತು ಸೌಜನ್ಯ ಮೇಲಿನ ಕೋಪ ಆರಿದೆ ಅಂದ ಹಾಗಾಯ್ತು.. ಎಂದುಕೊಳ್ಳುತ್ತಾ "ಸರಿ ಅಪ್ಪಾ.. ಆದಷ್ಟು ಬೇಗ ತಿಳಿಸುತ್ತೇನೆ "ಎಂದನು ಕೇಶವ.


    ಹಳ್ಳಿಗೆ ವಾಪಾಸಾಗುವುದೆಂದು ನಿರ್ಧರಿಸಿದರು ಕೇಶವ ಸೌಜನ್ಯ ... ಸೌಜನ್ಯಳ ಅಪ್ಪ ಅಮ್ಮನ ಒಪ್ಪಿಗೆಯನ್ನು ಪಡೆದರು.ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಕೆಲವೇ ಸಮಯದಲ್ಲಿ ಬಾರಂತಡ್ಕಕ್ಕೆ ಆಗಮಿಸಿದರು.



        *******


ಅಂದು ಬೆಳ್ಳಂಬೆಳಗ್ಗೆ ಮೈತ್ರಿ,ಮಂಗಳಮ್ಮ, ಪುಟಾಣಿ ಮಗು, ಮಹಾಲಕ್ಷ್ಮಿ ಅಮ್ಮ ಎಲ್ಲರೂ ಹೊರಟು ನಿಂತಿದ್ದರು.ಒಂಭತ್ತು ಗಂಟೆಗೆ ಕಿಶನ್ ತಂದೆಯೊಡನೆ ಆಗಮಿಸಿದ.ಬಾಣಂತನ ಮಾಡಿದ ಅಮ್ಮ, ಅಜ್ಜಿಗೆ  ಸೀರೆ ಹಾಗೂ ಶ್ಯಾಮ, ಭಾಸ್ಕರ ಶಾಸ್ತ್ರಿಗಳಿಗೆ ವೇಸ್ಟಿ ಕೊಟ್ಟು ನಮಸ್ಕರಿಸಿದರು.ಸೋದರ ಮಾವ ಮಹೇಶನಿಗೆ ಒಂದು ಟೀ ಶರ್ಟ್ ಕೊಟ್ಟರು ಭಾವ.ಸರಸುಗೆ ಸೀರೆ , ದುಡ್ಡು ಕೊಟ್ಟರು.ಎಲ್ಲರಿಗೂ ಬಾಣಂತನದ ಮರ್ಯಾದೆಯನ್ನು ಕೊಟ್ಟಾದಾಗ...ಹಳದಿ ಬಣ್ಣದಿಂದ ಕಂಗೊಳಿಸುವ ಹಲಸಿನ ಮರದ ತೊಟ್ಟಿಲನ್ನು ವಾಹನದಲ್ಲಿಟ್ಟರು ಭಾಸ್ಕರ ಶಾಸ್ತ್ರಿಗಳು.ತೊಟ್ಟಿಲ ಮಗುವನ್ನು , ಚೊಚ್ಚಲ ಬಾಣಂತಿಯನ್ನು ಕಳುಹಿಸಿಕೊಟ್ಟರು ಶ್ಯಾಮ ಶಾಸ್ತ್ರಿಗಳು. ಅವರೊಬ್ಬರನ್ನು ಬಿಟ್ಟು ಉಳಿದವರೆಲ್ಲ ಮೈತ್ರಿ ಕಿಶನ್ ನ ಮನೆಗೆ ತೆರಳಿದರು.


      ಅಂಗಳದಲ್ಲಿ ಎರಡು ಕಾರುಗಳು ಬಂದು ನಿಲ್ಲುತ್ತಿದ್ದಂತೆ ಮೇದಿನಿ ,ಚಾಂದಿನಿ ಇಬ್ಬರೂ ಜೊತೆಯಾಗಿ ಬಂದು ಅತ್ತಿಗೆ ಹಾಗೂ ಮಗುವನ್ನು ಸ್ವಾಗತಿಸಿದರು.ಮಮತಮ್ಮ ಹಾನ ತಂದು ಸೊಸೆಯ ಕಾಲು ತೊಳೆದು ದೃಷ್ಟಿ ತೆಗೆದು ಮನೆಯೊಳಗೆ ಕರೆದೊಯ್ದರು.

     ಮಧ್ಯಾಹ್ನ ವಿಶೇಷ ಅಡುಗೆ ತಯಾರಾಗಿತ್ತು.ಎಲ್ಲರೂ ಸವಿದರು.ಮಂಗಳಮ್ಮ ಮಗಳೊಂದಿಗೆ ಉಳಿದುಕೊಂಡು ಭಾಸ್ಕರ ಶಾಸ್ತ್ರಿಗಳು,ಮಹಾಲಕ್ಷ್ಮಿ ಅಮ್ಮ,ಮಹೇಶ ಮನೆಗೆ ತೆರಳಿದರು.

     ಆ ದಿನ ರಾತ್ರಿ ಹೊಸ ತೊಟ್ಟಿಲನ್ನು ಅಲಂಕರಿಸಿ ಸಿಹಿ ತಿನಿಸುಗಳನ್ನು ಮಾಡಿ ಪುಟಾಣಿ ಮಗುವನ್ನು ಮಲಗಿಸಿ ಸೋದರತ್ತೆಯರು ಸಾಂಪ್ರದಾಯಿಕವಾಗಿ ತೊಟ್ಟಿಲು ತೂಗಿದರು.ಬಣ್ಣಬಣ್ಣದ ಬೆಲೂನ್, ಹೂಗಳನ್ನು ನೋಡುತ್ತಿದ್ದ ಪುಟಾಣಿ ಹಾ..ಹೂ..ಆ.. ಎಂದು ತಾನೂ ಅವರೊಡನೆ ದನಿಗೂಡಿಸುತ್ತಿದ್ದ, ಖುಷಿಯಿಂದ ಕೈ ಕಾಲು ಬಡಿಯುತ್ತ ಜೊಲ್ಲು ಸುರಿಸುತ್ತಿದ್ದ.

ಮಗುವಿಗೆ ಏನೆಂದು ಹೆಸರಿಡೋಣ ಎಂದು ಚರ್ಚೆಯಾಗುತ್ತಿತ್ತು.ಒಬ್ಬೊಬ್ಬರು ಒಂದೊಂದು ಹೆಸರನ್ನು ಹೇಳಿದರು.. ಕಿಶನ್ ಎಲ್ಲರ ಮಾತಿಗೆ ನಗುತ್ತಾ.."ಸಪ್ತಗಿರಿಯೊಡೆಯ ಶ್ರೀ ವೆಂಕಟೇಶನನ್ನು ಧ್ಯಾನಿಸುತ್ತಾ ಅವನನ್ನು ಭುವಿಗೆ ತಂದವಳು ಅವನಮ್ಮ.ಆದ್ದರಿಂದ ಆ ವೆಂಕಟೇಶನ ಹೆಸರನ್ನೇ ಇಡಬೇಕೆಂದಿದ್ದೇವೆ...ಮಗುವಿಗೆ ಈಶನ್ ಎಂಬುದಾಗಿ ಹೆಸರಿಡುವುದೆಂದು ನಾವಿಬ್ಬರೂ ನಿರ್ಧರಿಸಿದ್ದೇವೆ " ಎಂದಾಗ ಎಲ್ಲರೂ ಸಮ್ಮತಿಸಿದರು.


ಮೈತ್ರಿ ಮತ್ತು ಮಗನನ್ನು ಮನೆಗೆ ಕರೆದುಕೊಂಡು ಬಂದು ಕಿಶನ್ ಬೆಂಗಳೂರಿಗೆ ತೆರಳಿದ. ಕೆಲವೇ ದಿನಗಳಲ್ಲಿ ಅವನ ನಾಮಕರಣ, ಮರುದಿನದಿಂದಲೇ ನಾಗನಕಟ್ಟೆ,ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ,ದೈವದ ಕೋಲ ಜರುಗಲಿತ್ತು.ಕೆಲಸಗಳು ಭರದಿಂದ ಸಾಗಿತ್ತು.


         *****


       ಮಗುವಿನ ನಾಮಕರಣಕ್ಕೆ ನೆಂಟರಿಷ್ಟರೆಲ್ಲ ಆಗಮಿಸಿದ್ದರು.ಬೆಂಗಳೂರಿನಿಂದ ಶಂಕರ ಶಾಸ್ತ್ರಿಗಳು ಕುಟುಂಬ, ಸಾವಿತ್ರಿ ಅತ್ತೆ,ಶಶಿ ಅತ್ತೆ,ಮಂಗಳಮ್ಮನ ತಂಗಿ ಗಂಗಾ ಮತ್ತವಳ ಕುಟುಂಬ,ಮಂಗಳಮ್ಮನ ಅಣ್ಣನ ಕುಟುಂಬ,ಕಿಶನ್'ಕಡೆಯವರು ಎಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ನಾಮಕರಣ ನಡೆಯಿತು.ಮಗುವಿಗೆ ಈಶನ್ ಎಂದು ನಾಮಕರಣ ಮಾಡಿ ಸಿಹಿ ಉಣಿಸಿದರು ಅಪ್ಪ, ಅಮ್ಮ ,ಹಿರಿಯರೆಲ್ಲರೂ.

     ಮರುದಿನ ನಾಗನ ಕಟ್ಟೆಯ ಪುನರ್ ಪ್ರತಿಷ್ಠಾ ಮಹೋತ್ಸವ ಇದ್ದುದರಿಂದ ಕೆಲವು ನೆಂಟರೂ ಉಳಿದುಕೊಂಡಿದ್ದರು.ಶಂಕರ ಶಾಸ್ತ್ರಿಗಳ ಕುಟುಂಬ ಶಾಸ್ತ್ರೀ ನಿವಾಸಕ್ಕೆ ತೆರಳಿ ಉಳಿದುಕೊಂಡು ಪುನಃ ಮರುದಿನ ಆಗಮಿಸಿತು..

ಶಶಿ ಮತ್ತು ಶಂಕರ ರಾಯರು ಆಗಮಿಸಿದರು.ಮಹತಿ ಮತ್ತು ಮುರಲಿ ಬಹಳ ಸಮಯದ ನಂತರ ಊರಿಗೆ ಬಂದಿದ್ದರು.ಅವರನ್ನೂ " ದೈವದ ಕೋಲ ನೋಡಲು ಚೆನ್ನಾಗಿರುತ್ತದೆ.ನೀನಿನ್ನೂ ನೋಡಿಲ್ಲವಲ್ಲ ಮಹತಿ " ಎಂದು ಶಂಕರ ರಾಯರು ಒತ್ತಾಯಿಸಿ.. ಮಗ ಸೊಸೆಯನ್ನು ಕರೆದುಕೊಂಡು ಬಂದರು.ಊರಿಗೆ ವಾಪಾಸಾಗಿದ್ದ ಕೇಶವ ಕೂಡಾ " ನಮ್ಮ ಹಿರಿಯರು ಹೋಗುತ್ತಿದ್ದ ದೈವಸ್ಥಾನದ ಪುನರ್ ಪ್ರತಿಷ್ಠೆ..ಎಲ್ಲರೂ ಹೋಗಿ ಪ್ರಸಾದ ಸ್ವೀಕರಿಸಲೇ ಬೇಕು "ಎಂದು ಅಪ್ಪ ಹೇಳಿದಾಗ ಒಪ್ಪಿ.. ಮನೆಯವರೊಂದಿಗೆ ಆಗಮಿಸಿದರು.ಶೇಷಣ್ಣ ಎರಡು ಮೂರು ದಿನದ ಹಿಂದಿನಿಂದಲೇ ಸ್ವಯಂಸೇವಕನಾಗಿ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಿದ್ದರು.


        ಪುನರ್ ಪ್ರತಿಷ್ಠಾ ಕಾರ್ಯಕ್ರಮವಾಗಿ ದೈವದ ಕೋಲ ಆರಂಭವಾಯಿತು.ದೈವ ತನ್ನ ಕಟ್ಟೆಗೆ ಸುತ್ತು ಬರುತ್ತಿತ್ತು.ಜೊತೆಯಲ್ಲಿ ಹಿಮ್ಮೇಳದ ವೃಂದ, ಗಣೇಶ ಶರ್ಮ ಇದ್ದರು.ಸುತ್ತು ಬಂದು ಕಟ್ಟೆಯ ಮುಂದಿನ ಭಾಗದಲ್ಲಿ ಎಲ್ಲರನ್ನೂ ದಿಟ್ಟಿಸುತ್ತಾ ನಿಂತಿತು.ಎಲ್ಲರೂ ಬೇಗಬೇಗನೆ ಎದ್ದು ನಿಂತು ನಿಂತಲ್ಲೇ ನಮಸ್ಕರಿಸಿದರು.ಮೈತ್ರಿಯ ಮಡಿಲಲ್ಲಿ ಪುಟ್ಟ ಕಂದ ಈಶನ್ ಮಲಗಿದ್ದ.ಆದ್ದರಿಂದ ಅವಳು ಏಳುವ ನಿರ್ಧಾರ ಮಾಡಲಿಲ್ಲ.ದೈವಪಾತ್ರಿ ಅವಳೆಡೆಗೆ ಬೊಟ್ಟು ಮಾಡುವುದನ್ನು ನೋಡಿದ ಮಮತಮ್ಮ ದೂರದಿಂದಲೇ ಅವಳಿಗೆ "ಏಳು.. ಏಳು "..ಎಂದು ಕೈ ಸನ್ನೆ ಮಾಡಿದರು. ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದಳು ಮೈತ್ರಿ.ದೈವಪಾತ್ರಿಯ ಪಕ್ಕದಲ್ಲಿ ನಿಂತಿದ್ದ ಗಣೇಶ ಶರ್ಮ "ನಮ್ಮ ಸೊಸೆ ಹಾಗೂ ಮೊಮ್ಮಗು" ಎಂದರು..

"ಓಹೋ..ನಿಮ್ಮ ಹೊಸ ತಲೆಮಾರು.."ಎಂದಿತು.

"ಹೂಂ.."

"ಎಡ್ಡೆ ಆವಾಡ್ ಎಡ್ಡೆ ಆವಾಡ್..ಪೊಸ ಪೀಳಿಗೆ ಸುಖ ಸಂತೋಷ ನೆಮ್ಮದಿಡ್ ಬದ್ಕಾಡ್.. (ಒಳ್ಳೆಯದಾಗಲಿ..ಮುಂದಿನ ಪೀಳಿಗೆ ಸುಖ ಸಂತೋಷ ನೆಮ್ಮದಿಯಿಂದ ಬದುಕಲಿ)ಎನ್ನುತ್ತಾ ಒಂದು ತುಂಡು ಮಲ್ಲಿಗೆ ಹೂವನ್ನು ಅವಳತ್ತ ಎಸೆಯಿತು.ಮೈತ್ರಿ ಕೈ ಮುಂದೊಡ್ಡಿದಾಗ ಅಂಗೈಗೇ ಬಂದು ಬಿದ್ದುದು ಅವಳಿಗೂ ಮನಸ್ತೃಪ್ತಿಯಾಯಿತು.


    ದೈವದ ಕೋಲಕ್ಕೆ ಬಂದಿದ್ದ ಬಾರಂತಡ್ಕದವರು ದೈವಸ್ಥಾನದ ಮುಂಭಾಗದಲ್ಲಿ ಕುಳಿತುಕೊಂಡಿದ್ದರು.... ಮೊದಲ ಬಾರಿಗೆ ದೈವದ ಕೋಲ ವೀಕ್ಷಿಸಿದಳು ಸೌಜನ್ಯ.ಮೈತ್ರಿಯನ್ನು ಕಂಡ ಕೇಶವ ಕೈ ಮುಗಿದು ನಮಸ್ಕರಿಸಿದ.ಮನಸಲ್ಲಿ ಆ ದೈವದಲ್ಲಿ "ನಾನು ಇವಳ ವಿಚಾರದಲ್ಲಿ ಮಾಡಹೊರಟಿದ್ದ ನೀಚ ಕೆಲಸಗಳಿಗೆಲ್ಲ ಕ್ಷಮೆ ಕೋರುತ್ತೇನೆ "ಎಂದು ದೈವವನ್ನು ಬೇಡಿಕೊಂಡಿದ್ದ.. ಮೆಲ್ಲನೆ ತನ್ನ ಮಗಳನ್ನೊಮ್ಮೆ ದಿಟ್ಟಿಸಿದ.."ತನಗೂ ಇಂತಹ ಮುದ್ದಾದ ಮಗಳಿದ್ದಾಳೆ..ನನ್ನ ಮಗಳಿಗೂ ಏನೂ ತೊಂದರೆಯಾಗದಂತೆ ನಡೆಸು ದೈವವೇ "ಎಂದು ಬೇಡಿಕೊಂಡ.ಅದ್ಯಾವುದೂ ತಿಳಿದಿರದ ಮೈತ್ರಿ ತನ್ನ ಗಂಡನನ್ನು ಅವನಿಗೆ ಪರಿಚಯಿಸಿದಳು.ಪತಿಗೂ ಅವನನ್ನು ವೆಂಕಟ್ ಭಾವನ ಗೆಳೆಯ ಎಂದು ಪರಿಚಯ ಮಾಡಿಕೊಟ್ಟಳು. ಶಶಿಯತ್ತೆಯ ಮಗ ಸೊಸೆ ಕೂಡಾ ಬಂದಿದ್ದರು.ವೆಂಕಟ್ ಕೂಡಾ ಬಂದಿದ್ದ..ಎಲ್ಲರೂ ಪ್ರಸಾದ ಭೋಜನವನ್ನು ಸ್ವೀಕರಿಸಿ ಖುಷಿಯಿಂದ ಮರಳಿದರು.


    ಮೈತ್ರಿ,ಈಶಾನ್ ನನ್ನು ಕರೆದುಕೊಂಡು ಇನ್ನೆರಡು ದಿನದಲ್ಲಿ ಕಿಶನ್ ಬೆಂಗಳೂರಿಗೆ ಪಯಣ ಬೆಳೆಸುವ ಯೋಚನೆಯಲ್ಲಿದ್ದನು.. ದೈವದ ಅಭಯವೂ ದೊರೆಯಿತು.ಕಿಶನ್ ಮೈತ್ರಿಯ ಜೀವನ ಸುಖಕರವಾಗಿರಲೆಂದು ನಾವೂ ನೀವೂ ಹಾರೈಸೋಣವೇ....


            ‌       🙏 ಶುಭಂ 🙏



ನಮಸ್ಕಾರ ಓದುಗರೇ...

     ಧಾರಾವಾಹಿಯ ಪ್ರತೀ ಕಂತನ್ನು ಓದಿ ನೀವು ಪ್ರತಿಕ್ರಿಯಿಸುತ್ತಿದ್ದ ರೀತಿ ನನ್ನನ್ನು ಆದಷ್ಟು ಬೇಗನೆ ಮುಂದಿನ ಕಂತನ್ನು ಬರೆಯುವಂತೆ ಪ್ರೇರೇಪಿಸುತ್ತಿತ್ತು. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.ಇದು ನನ್ನ ಮೊದಲ ಸುದೀರ್ಘ ಧಾರಾವಾಹಿ.. ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳು ಅನೇಕ.ಎಲ್ಲವನ್ನೂ ಮನ್ನಿಸಿ ,ಸಹಿಸಿ ,ಬೆಂಬಲಿಸಿದ ನಿಮ್ಮ ರೀತಿ ನನ್ನ ಬರವಣಿಗೆಗೆ ಶಕ್ತಿಯನ್ನು
ನೀಡಿತು. ಸಾಂಪ್ರದಾಯಿಕ ತುಂಬು ಕುಟುಂಬದ ಒಳಿತು ಕೆಡುಕುಗಳನ್ನು ಬಿಂಬಿಸುವ   ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿದ್ದೇನೆ.ಸಾಂಪ್ರದಾಯಿಕ ತುಂಬು ಕುಟುಂಬದಲ್ಲಿ ಎಲ್ಲವೂ ಒಳಿತೇ ಅಲ್ಲ..ಹಾಗೆಂದು ಹುಳುಕುಗಳೇ ವಿಜ್ರಂಭಿಸುವುದೂ ಅಲ್ಲ.ಒಳಿತು-ಕೆಡುಕು, ಸಿಹಿ-ಕಹಿ ,ನೋವು-ನಲಿವುಗಳ ಹೂರಣ ... ಕುಟುಂಬ ಒಡೆಯುವುದು ಸುಲಭ.ಆದರೆ ಅದೇ ಪ್ರೀತಿ, ಕಾಳಜಿ ,ಮನೆ ಯಜಮಾನನ ನಾಯಕತ್ವದ ಗುಣ ವಿಭಕ್ತ ಕುಟುಂಬದಲ್ಲಿ ಉಳಿಸಿಕೊಳ್ಳಲು ಕಷ್ಟವಿದೆ.

    ಭಾಸ್ಕರ ಶಾಸ್ತ್ರಿಗಳ ಪಾತ್ರ ಬಹಳಷ್ಟು ಮಂದಿಗೆ ವಿಚಿತ್ರ ಅನಿಸಬಹುದು. ಆದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ.ಮಡದಿ ಮಕ್ಕಳಿಗಿಂತ ತಂದೆ ತಾಯಿ ಒಡಹುಟ್ಟಿದವರೇ ತುಸು ಹೆಚ್ಚೆಂದು ಭಾವಿಸುವ ,ತನ್ನದೇ ಆದ ಒಂದು ಆದರ್ಶವನ್ನಿಟ್ಟುಕೊಂಡು ಬಾಳುವ ಹಲವು ಮಂದಿ ಇರುತ್ತಾರೆ.

     ಮಂಗಳಮ್ಮನಂತೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವ ಅಮ್ಮಂದಿರು,ಶಶಿಯಂತೆ ಎರಡು ಬುದ್ಧಿಯವರು,ಕೇಶವನಂತಹ ಹಠವಾದಿಗಳು,ಮುರಲಿಯಂತೆ ಮಡದಿ ಆಡಿಸಿದಂತೆ ಕುಣಿಯಲೇಬೇಕಾದ ಅನಿವಾರ್ಯತೆ ಇರುವವರು ,ಮಹತಿ, ಸೌಜನ್ಯ ಳಂತಹ ಪಾತ್ರ,ಮಹೇಶನಂತಹ ಕಿಲಾಡಿಗಳು ಸಮಾಜದಲ್ಲಿ ನಿತ್ಯವೂ ನಾವು ವ್ಯವಹರಿಸುವವರಲ್ಲೇ ಕಾಣಸಿಗುತ್ತಾರೆ.

       ಬರೆಯುತ್ತಾ ಸಾಗಿದಂತೆ ಮೈತ್ರಿ ಕೇವಲ ಪಾತ್ರವಾಗಿರಲಿಲ್ಲ .ನಮ್ಮ ಮನೆ ಮಗಳೇನೋ ಎಂಬಷ್ಟು ಆಪ್ತವಾಗಿತ್ತು ನಮಗೆ. ಕೆಲವೊಮ್ಮೆ ಧಾರಾವಾಹಿ ಬರೆಯುತ್ತಿದ್ದಾಗ ಇಣುಕುತ್ತಿದ್ದ ಪತಿ. .. "ಅದೆಷ್ಟು ಗೋಳು ಹೊಯಿಸುತ್ತಿ ಆ ಮೈತ್ರಿಯನ್ನ ಅವಳಪ್ಪನ ಕೈಲಿ..ಬೇಗ ಒಮ್ಮೆ ಮದುವೆ ಮಾಡಿ ಕಿಶನ್ ಜೊತೆ ಗಂಡನಮನೆಗೆ ಕಳುಹಿಸಿ ಬಿಡು..ಸುಖವಾಗಿರಲಿ ಪಾಪ.."ಎಂದದ್ದೂ ಇದೆ..


    ಈ ಧಾರಾವಾಹಿಯನ್ನು ಕನ್ನಡ ಪ್ರತಿಲಿಪಿಯಲ್ಲಿ ಮೊದಲು ಪ್ರಕಟಿಸುತ್ತಿದ್ದೆ.ನನ್ನ ಬ್ಲಾಗ್ ನಲ್ಲಿ ಪ್ರಕಟಿಸಲು ಏನೋ ಸಣ್ಣ ಅಳುಕು,ಸಂಕೋಚ ನನ್ನನ್ನು ಕಾಡುತ್ತಲಿತ್ತು.ಪ್ರೇಮಿಗಳ ನಡುವಿನ ಸಂಭಾಷಣೆ, ಕೌಟುಂಬಿಕ ಚಿತ್ರಣವನ್ನು ಫೇಸ್ಬುಕ್ ನಲ್ಲಿರುವ ಬಂಧುಮಿತ್ರರು ಹೇಗೆ ಸ್ವೀಕರಿಸುತ್ತಾರೋ ಏನೋ.. ಎಂಬುದಾಗಿ..ಆಗ ಧೈರ್ಯ ತುಂಬಿ ಪ್ರಕಟಿಸುವಂತೆ ಹುರಿದುಂಬಿಸಿ, ಬ್ಲಾಗ್ ನ ತಾಂತ್ರಿಕ ನಿರ್ವಹಣೆಯಲ್ಲಿ ಸದಾ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದವರು ನನ್ನ ಆಪ್ತ ಗೆಳತಿ ಶ್ರೀಮತಿ ಅಶ್ವಿನಿ ಜೋಯಿಸ್.. ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು 🙏

     ಪ್ರತಿ ಗೃಹಿಣಿಗೂ ಕೌಟುಂಬಿಕ ಜವಾಬ್ದಾರಿಗಳಿರುತ್ತವೆ. ಅಂತೆಯೇ ನನಗೂ ಕೂಡ.ಅವುಗಳನ್ನು ನಿಭಾಯಿಸುತ್ತಾ ಧಾರಾವಾಹಿಯನ್ನು ಬರೆಯಲು ಕುಟುಂಬದ ಬೆಂಬಲ ಅತೀ ಅವಶ್ಯಕ.ಪತಿ ಡಾ||ಜಿ.ಕೆ.ಭಟ್. ಹಾಗೂ ಮಕ್ಕಳಿಬ್ಬರ ತಾಳ್ಮೆ, ಸಹಕಾರದಿಂದ ಇಷ್ಟು ಕಂತುಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು.ಬೆನ್ನೆಲುಬಾಗಿ ನಿಂತ ಕುಟುಂಬಕ್ಕೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.🙏

     ಮತ್ತೊಮ್ಮೆ ಮಗದೊಮ್ಮೆ ... ಪ್ರೋತ್ಸಾಹಿಸಿದ ಎಲ್ಲ ಓದುಗರಿಗೂ , ಪ್ರಕಟಿಸಲು ಅನುಮತಿ , ಅವಕಾಶ ನೀಡಿದ ಕನ್ನಡ ಪ್ರತಿಲಿಪಿ ವೇದಿಕೆಗೂ,ಎಲ್ಲ ಫೇಸ್ಬುಕ್ ಬಳಗಗಳಿಗೂ ನನ್ನ ಅನಂತಾನಂತ ಧನ್ಯವಾದಗಳು 💐🙏



✍️... ಅನಿತಾ ಜಿ.ಕೆ.ಭಟ್.
22-07-2020.

10 comments:

  1. ಧಾರಾವಾಹಿ ಯ ಪ್ರತಿ ಕಂತೂ ತುಂಬಾ ಚೆನ್ನಾಗಿ ಮೂಡಿ ಬಂತು... ಮೈತ್ರಿ ನನ್ನ ಇಷ್ಟದ ಪಾತ್ರವಾಗಿತ್ತು.. ಧಾರಾವಾಹಿಯಲ್ಲಿ ಬರುವ ಪ್ರತಿ ಪಾತ್ರಗಳು ಮನಸ್ಸನ್ನು ಮುಟ್ಟಿತು.. ಮೈತ್ರಿಯ ತಮ್ಮ.. ಅಜ್ಜ ಅಜ್ಜಿ... ಮಂಗಳಮ್ಮ... ಎಲ್ಲವೂ ಇಷ್ಟದ ಪಾತ್ರಗಳೇ ಆಯ್ತು... ಮದುವೆಯ ತಯಾರಿ.. ಮದುವೆ ಸಂಬ್ರಮಗಳ ವಿವರಣೆ ಓದಿ ಮದುವೆಗೆ ಹೋಗಿ ಬಂದಷ್ಟು ಖುಷಿ ಆಯ್ತು... ಕೇಶವ, ಸೌಜನ್ಯ ಚೆನ್ನಾಗಿ ಬಾಳ್ವೆ ನಡೆಸುವುದು ನೋಡಿ ಧಾರಾವಾಹಿ ಸುಖಾಂತ್ಯಗೊಂಡಿದ್ದು ಓದಿ ತೃಪ್ತಿ ಆಯ್ತು...
    ನಾನು ಇಷ್ಟ ಪಟ್ಟು ಓದಿದ ಕೌಟುಂಬಿಕ ಧಾರಾವಾಹಿ ❤️❤️.

    ಸಮಯ ಒದಗಿ ಬಂದಾಗ... ಬಿಡುವು ಮಾಡಿಕೊಂಡು... ಇನ್ನೊಂದು ಉತ್ತಮ ಬರವಣಿಗೆಯನ್ನು ನಿರೀಕ್ಷಿಸಲೆ??

    Best wishes to you Anitha....❤️❤️

    ReplyDelete
    Replies
    1. ಖಂಡಿತವಾಗಿಯೂ..ಸಮಯ ಸಿಕ್ಕಾಗ ಇನ್ನೊಂದು ಧಾರಾವಾಹಿಯೊಂದಿಗೆ ಬರುತ್ತೇನೆ... ನಿಮ್ಮ ಬೆಂಬಲಕ್ಕೆ ಚಿರ ಋಣಿ 💐🙏

      Delete
  2. Waiting for new series... Ur writing is so good

    ReplyDelete
  3. Nice writing.. Chennagi bareethiri.. Innu mundina kadambarige kaythaa iddene.. Thank you..

    ReplyDelete
    Replies
    1. Thank you..after a small break I will come with a new story..💐🙏

      Delete
  4. ಕಥೆ ತುಂಬಾ ಚೆನ್ನಾಗಿತ್ತು.ಪ್ರತೀ ಪಾತ್ರವೂ ನೈಜವಾಗಿ ಮೂಡಿ ಬಂತು.ಸಣ್ಣ ಸಣ್ಣ ವಿಷಯವನ್ನೂ ಬರೆದಿದ್ದು ಮುದ ನೀಡಿತು.4ತಿಂಗಳುಗಳಿಂದ ಓದಿ ಇನ್ನು ಇಲ್ಲ ಎನ್ನುವಾಗ ಏನೋ ಕಳಕೊಂಡ ನೋವು.ಉತ್ತಮ ಕಥೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
    Replies
    1. ಪ್ರೋತ್ಸಾಹದ ನುಡಿಗಳಿಗೆ..ನಿರಂತರ ಓದಿದ್ದಕ್ಕೆ ಧನ್ಯವಾದಗಳು💐🙏

      Delete
  5. Very nice writing, thumba chennagi kathe mudi banthu, keep writing, by the way my son name is also ishaan ��

    ReplyDelete