Friday, 3 July 2020

ಜೀವನ ಮೈತ್ರಿ ಭಾಗ ೯೮(98)



ಜೀವನ ಮೈತ್ರಿ ಭಾಗ ೯೮


      ‌ಮೈತ್ರಿ ಮತ್ತು ಆಕೆಯ ಅತ್ತೆಯ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು.ತನಗೆ ಇನ್ನೊಬ್ಬ ಅಮ್ಮ ದೊರೆತಿದ್ದಾರೆ ಅಂದುಕೊಳ್ಳುವಂತೆ ಇದ್ದಿತು ಸೊಸೆಯ ಜೊತೆಗೆ ಮಮತಮ್ಮನ ಬೆಸುಗೆ.ಮಮತಮ್ಮ ಒಂದು ವಾರ ಮಗನ ಮನೆಯಲ್ಲಿದ್ದು ನಂತರ ಮನೆಗೆ ಹೊರಟು ನಿಂತರು..  ಕಿಶನ್'ಗೆ ಅಮ್ಮನನ್ನು ಕಳಿಸಿ ಕೊಡುವಾಗ ಮುಖ ಬಾಡಿಹೋಗಿತ್ತು. "ಮಗನೇ.. ಆದಷ್ಟು ಬೇಗ ಸಿಹಿಸುದ್ದಿಯನ್ನು ತನ್ನಿ" ಎಂದರು ಅಮ್ಮ ಮಗನ ಬೆನ್ನು ನೇವರಿಸುತ್ತಾ..

" ಸರಿ ಅಮ್ಮ" ಎಂದು ಒಪ್ಪಿಗೆ ಸೂಚಿಸಿದ ಕಿಶನ್.

"ಆಗಾಗ ಹೀಗೆ ಬರುತ್ತಿರಿ ಅತ್ತೆ..."ಎಂದಳು ಮೈತ್ರಿ.
ಕಿಶನ್ ತಮ್ಮೂರಿನ ಕಡೆಗೆ ಹೋಗುವ ಬಂಧುಗಳ ಕಾರಿನಲ್ಲಿ ಅಮ್ಮನನ್ನು ಕಳುಹಿಸಿಕೊಟ್ಟ.

               ******

        ಬೆಳಗ್ಗೆ ಏಳುತ್ತಿದ್ದಂತೆ ಸೌಜನ್ಯಳಿಗೆ ಸುಸ್ತು ಕಾಡುತ್ತಿತ್ತು. ಗಂಡನಿಗೆ ಬೆಳಗಿನ ತಿಂಡಿ ಬೇಗ ಮಾಡಿಕೊಡಲೇ ಬೇಕಿತ್ತು. ಅಡುಗೆಮನೆಗೆ ಕಾಲಿಟ್ಟಾಗ ಅಲ್ಲಿನ ವಾಸನೆಗೆ ವಾಂತಿ ಬಂದಂತಾಗಿತ್ತು. ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಅಡುಗೆ ಕೆಲಸಕ್ಕೆ ತೊಡಗಿದಳು. ತಲೆ ಸುತ್ತಿದಂತೆ ಆಗುತ್ತಿತ್ತು. ಇದನ್ನೆಲ್ಲ ಗಮನಿಸಿದ ಕೇಶವ ತಾನು  ಸಹಾಯಕ್ಕೆ ನಿಂತ. ತಿಂಡಿ ಮಾಡಿ ಆಫೀಸಿಗೆ ಹೋಗುವ ಬದಲು ಸಮೀಪವಿದ್ದ ನರ್ಸಿಂಗ್ ಹೋಂಗೆ ಮಡದಿಯನ್ನು ಕರೆದುಕೊಂಡು ಹೋದ..


       ಡಾಕ್ಟರ್ ಮೇಡಂ ಬರುವವರೆಗೂ ಕಾದು ಕುಳಿತರು. ಆಯಾಸಗೊಂಡಿದ್ದ ಸೌಜನ್ಯ ಪತಿಯ ಭುಜಕ್ಕೆ ಒರಗಿಕೊಂಡಳು.ಡಾಕ್ಟರ್ ಶಾಂತ ಬಂದು ಸೌಜನ್ಯಳನ್ನು ಪರೀಕ್ಷಿಸಿದರು. ಕೇಶವನ ಮುಖ ನೋಡಿ ನಗು ನಗುತ್ತಾ "ನೀವು ತಂದೆ ಆಗುತ್ತಿದ್ದೀರಿ "ಎಂದರು. ಹರುಷಗೊಂಡ ಕೇಶವನ ಮುಖದಲ್ಲಿ ಮಡದಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂಬ ಜವಾಬ್ದಾರಿ ಮೂಡಿತು. ಇಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ.ವೈದ್ಯರು ತೆಗೆದುಕೊಳ್ಳಬೇಕಾದ ಮಾತ್ರೆಗಳನ್ನು ಹಾಗೂ ಆಹಾರದಲ್ಲಿ ಸೇವಿಸಬೇಕಾದ ಪೌಷ್ಟಿಕಾಂಶಗಳನ್ನು ವಿವರವಾಗಿ ತಿಳಿಸಿದರು. ಪ್ರತಿ ತಿಂಗಳು ಬಂದು ಚೆಕಪ್ ಮಾಡಿಕೊಂಡು ಹೋಗಲು ಹೇಳಿದರು.

      ಕೇಶವ ಮನೆಗೆ ಹೋಗುತ್ತಲೇ ಪ್ರೀತಿಯಿಂದ ಮೈಸೂರು ಪಾಕ್  ,ಝರತಾರಿ ಸೀರೆ ಖರೀದೀಸಿದ.ಮನೆಯ ಒಳಗೆ ಅಡಿಯಿಡುತ್ತಲೇ ಮಡದಿಯನ್ನು  ಅನಾಮತ್ತಾಗಿ ಎತ್ತಿ ಸಂಭ್ರಮಿಸಿದ.ಮೈಸೂರ್ ಪಾಕ್ ತಿನಿಸಿದ."ಇನ್ನು ಮನೆಯ ಕೆಲಸಗಳಲ್ಲಿ ನಾನೂ ನಿನ್ನ ಜೊತೆ ಇರುವೆ" ಎನ್ನುತ್ತಾ ಮೆದುವಾಗಿ ಕೈಗಳನ್ನು ಅದುಮಿದ.


      ಸೌಜನ್ಯಳಿಗೆ ಅಂದು ಬಹಳ ಸಂಭ್ರಮದ ದಿನ. ಅವಳ ಪ್ರತಿ ಸಂಭ್ರಮವನ್ನು ಆಕೆ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದಳು .ಇದನ್ನು ಹಂಚಿಕೊಳ್ಳುವ ಬಯಕೆ.ಆದರೆ ಈ ಸಂದರ್ಭದಲ್ಲಿ ಎಲ್ಲಿಯಾದರೂ ಕೇಶವ  ಸಿಟ್ಟಿಗೆದ್ದರೆ ...ಅದನ್ನು ಸಹಿಸಿಕೊಳ್ಳುವ ತಾಳ್ಮೆ ನನ್ನಲ್ಲಿಲ್ಲ ಎಂದು ತಾನೇ ಸುಮ್ಮನಾದಳು.
ಭರತನಾಟ್ಯ ಸಂಗೀತದ ಪ್ರೋಗ್ರಾಂಗಳನ್ನು  ಒಪ್ಪಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದಳು.ಒಳ್ಳೊಳ್ಳೆಯ ಪುಸ್ತಕಗಳನ್ನು ಪತಿಯಲ್ಲಿ ಲೈಬ್ರೆರಿಯಿಂದ ತರಿಸಿಕೊಂಡು ಓದತೊಡಗಿದಳು.ಮನೆಯಲ್ಲಿಯೇ ಸಂಗೀತಾಭ್ಯಾಸದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಳು.



             ******

       ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮನಲ್ಲಿ "ನಾನು ತಮ್ಮನಲ್ಲಿ ಒಂದು ದಿನ, ಮಗಳ ಮನೆಯಲ್ಲಿ ಒಂದು ದಿನ ಇದ್ದು ಬರುತ್ತೇನೆ .ಅವರೆಲ್ಲ ಬೇಕಾದಷ್ಟು ದಿನ ಕುಳಿತುಕೊಂಡು ಬರಲಿ. ಹೇಗೂ ಮಹೇಶನಿಗೆ ರಜೆ ಇದೆ "ಎಂದರು. ಪತಿಯ ಮಾತುಗಳನ್ನು ಕೇಳಿದ ಮಂಗಳಮ್ಮ ನಿಟ್ಟುಸಿರುಬಿಟ್ಟರು.ಮಹೇಶ ಹೊರಡುವ ದಿನ ಅಮ್ಮನಲ್ಲಿ "ಅಮ್ಮ ನಾನು ನಾಲ್ಕೈದು ದಿನ ಮಾತ್ರ ಬೆಂಗಳೂರಿನಲ್ಲಿ ಉಳಿದುಕೊಳ್ಳುವುದು. ನನಗೆ ಸಿಟಿಯ ಮನೆಯಲ್ಲಿ ಕುಳಿತು ಉದಾಸೀನವಾಗುತ್ತದೆ "ಎಂದು..ಹೇಳಿದ. "ಅಜ್ಜ-ಅಜ್ಜಿಯನ್ನು ವಾಪಸ್ ಕರೆದುಕೊಂಡು ಬರಬೇಕು ಮಗ .ಜವಾಬ್ದಾರಿ ಇದೆ " ಯಾವುದಕ್ಕೂ ಫೋನಿನಲ್ಲಿ ಮಾತಾಡಿಕೊಳ್ಳೋಣ ಎಂದರು ಅಮ್ಮ.


     ಕಾರಂತರ ಕಾರಿನಲ್ಲಿ ನಾಲ್ಕು ಜನ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಬೆಳಗ್ಗೆ ಶಂಕರ ಶಾಸ್ತ್ರಿಗಳ ಮನೆಗೆ ತಲುಪಿದರು.ಶ್ಯಾಮ ಶಾಸ್ತ್ರಿಗಳಿಗೆ ಮೊದಲಿನ ಪರಿಸರ ಎಲ್ಲವೂ ಬದಲಾದಂತೆ ಕಂಡಿತು. ಅವರು ಐದು ವರ್ಷಗಳ ಹಿಂದೆ ಬಂದಿದ್ದರು. ಶಂಕರ ಶಾಸ್ತ್ರಿಗಳು ಪ್ರೀತಿಯಿಂದ ಎಲ್ಲರನ್ನೂ ಬರಮಾಡಿಕೊಂಡರು.ಗಾಯತ್ರಿ ಮನೆಯವರನ್ನು ಪ್ರೀತಿಯಿಂದ ಸತ್ಕರಿಸಿದಳು.ಸಂಜನಾ ವಂದನಾ ಎಲ್ಲರೊಂದಿಗೆ ಬೆರೆತರು.

      ಭಾಸ್ಕರ ಶಾಸ್ತ್ರಿಗಳು ಅಲ್ಲಿ ಒಂದು ದಿನ ಇದ್ದು ನಾನು ಮಗಳ ಮನೆಗೆ ಹೋಗುತ್ತೇನೆ ಎಂದಾಗ ಗಾಯತ್ರಿ "ಭಾವ ನಿಮಗೆ ಈಗ ಶಾಲೆಗೆ ರಜೆ.. ಇನ್ನೆರಡು ದಿನ ಕುಳಿತು ಆರಾಮಾಗಿದ್ದು ಹೋಗಬಾರದೆ "ಎಂದು ಒತ್ತಾಯಿಸಿದರು. ತಮ್ಮ ಶಂಕರ'ನ ಅದನ್ನೇ ಪುನರಾವರ್ತಿಸಿದ. "ಇಲ್ಲ ಮನೆಯಲ್ಲಿ ಮಂಗಳ ಒಬ್ಬಳೇ ಇದ್ದಾಳೆ. ತೋಟದ ಕೆಲಸಗಳು ಮಾಡಿಸುವುದಕ್ಕೆ ಬಾಕಿ ಇದೆ .ಮಹೇಶ ಇದ್ದಾನಲ್ಲ ಅಜ್ಜಿಯ ಜೊತೆಗೆ." ಎಂದು ಹೇಳಿ ತಾವು ಹೊರಟರು.


    ಮಹೇಶ ಮೊದಲೇ ಭಾವನಿಗೆ ಕರೆಮಾಡಿ ಅಪ್ಪ ಬರುವ ಮುನ್ಸೂಚನೆ ನೀಡಿದ್ದ.ಮಾವ ಬರುತ್ತಾರೆ ಎಂದು ತಿಳಿದ ಕೂಡಲೇ ಕಿಶನ್, ಶಂಕರ ಶಾಸ್ತ್ರಿಗಳ ಮನೆಗೆ ಹೋದ. ಅಳಿಯ ನನ್ನ ಕಂಡ ಭಾಸ್ಕರ್ ಶಾಸ್ತ್ರಿಗಳು "ನಾನೇ ಬರುತ್ತಿದ್ದೆ ..ಸುಮ್ಮನೆ ಯಾಕೆ ತೊಂದರೆ ತೆಗೆದುಕೊಂಡೆ " ಎಂದರು. "ಹಾಗೇನಿಲ್ಲ ಇವತ್ತು ನಾನು ಆಫೀಸಿಗೆ ಹೋಗಿಲ್ಲ.. ವರ್ಕ್ ಫ್ರಮ್ ಹೋಮ್... " ಎನ್ನುತ್ತಾ ಮನೆಯವರೊಂದಿಗೆ ಹರಟಿದ .ಅಜ್ಜ-ಅಜ್ಜಿಯನ್ನು "ಒಂದು ವಾರ ಕುಳಿತುಕೊಳ್ಳುವಂತೆ ನಮ್ಮ ಮನೆಗೆ ಬನ್ನಿ" ಎಂದು ಆಹ್ವಾನಿಸಿ ಮಾವನನ್ನ ಮನೆಗೆ ಕರೆದುಕೊಂಡು ಹೊರಟ.


       ಅಪ್ಪ ಬರುತ್ತಾರೆಂದು ಮೈತ್ರಿ ಗಡಿಬಿಡಿಯಲ್ಲಿ ಅಡುಗೆಮನೆಯಲ್ಲಿ ಕೆಲಸದಲ್ಲಿ ನಿರತರಾದಳು. ಹಿಂದಿನ ದಿನವೇ ಚಕ್ಕುಲಿ ಮಾಡಿಟ್ಟಿದ್ದಳು. ಸೇಮಿಗೆ ಪಾಯಸ, ಗುಲಾಬ್ ಜಾಮೂನ್, ಮಂಗಳೂರು ಸೌತೆಕಾಯಿ ಹುಳಿ, ಸ್ಪೆಷಲ್ಲಾಗಿ ಅಪ್ಪನಿಗೆ ಎಲ್ಲ ತಯಾರಿಸಿದ್ದರು.ಭಾಸ್ಕರ ಶಾಸ್ತ್ರಿಗಳು ಮಗಳ ಫ್ಲಾಟನ್ನು ,ಅದರ ಹಿಂದೆ ಮುಂದೆ ಅಕ್ಕಪಕ್ಕದಲ್ಲಿ ಸಾಲುಗಟ್ಟಿ ಗಗಗನಚುಂಬಿಯಾಗಿದ್ದ ನಿವೇಶನದ ಕಟ್ಟಡಗಳನ್ನು ನೋಡಿ ಒಮ್ಮೆ ಬೆರಗಾದರು.ಹಳ್ಳಿಯಲ್ಲಿ ವಿಶಾಲವಾದ ಭೂಮಿ,ತೋಟ, ಮನೆಗಳು... ಪಟ್ಟಣದಲ್ಲಿ ಮನೆಗಳು ಎತ್ತರೆತ್ತರಕ್ಕೆ ಬೆಳೆಯುತ್ತಿವೆ.. ಹೊಸ ತಲೆಮಾರಿನವರ ಹೊಸ ತೆರನಾದ ಬದುಕು...!!!   ಎಂದು ತಮ್ಮಲ್ಲೇ ಹೇಳಿಕೊಂಡರು. ಅಪ್ಪ ಮನೆಯ ಒಳಗೆ ಬರುತ್ತಿದ್ದಂತೆಯೇ ಮೈತ್ರಿಯು ಮುಖವರಳಿಸಿದಳು. ಅಮ್ಮ ಮಗಳಿಗೆಂದೆ ಕೊಟ್ಟಿದ್ದ ಕೈ ಚೀಲವನ್ನು ಮಗಳ ಕೈಗಿರಿಸಿದರು ಶಾಸ್ತ್ರಿಗಳು.ಅದನ್ನು ನೋಡುತ್ತಾ ಮರೆತವಳಲ್ಲಿ ಕಿಶನ್  "ಕುಡಿಯಲು ನೀರು ತಾ" ಎಂದ .   ಮೈತ್ರಿ ಅಪ್ಪನಿಗೆ ಬಾಯಾರಿಕೆ ತಂದುಕೊಟ್ಟಳು.
ಮಗಳ ಮನೆಯಲ್ಲಿ ಎಲ್ಲವನ್ನು ಗಮನಿಸುತ್ತಾ ಮಗಳು-ಅಳಿಯನಲ್ಲಿ ಮಾತನಾಡುತ್ತಿದ್ದ ಭಾಸ್ಕರ ಶಾಸ್ತ್ರಿಗಳಲ್ಲಿ ಮೊದಲಿನ ಗಂಭೀರತೆ ಇರಲಿಲ್ಲ. ಮೈತ್ರಿಗೆ ಅಪ್ಪನನ್ನು ಮೊದಲಿನಿಂದ ಹೆಚ್ಚು ಇಂದು ಹಿತವಾಯಿತು. ನೆರೆಮನೆಯಲ್ಲಿದ್ದ ಚಿದಂಬರ ರಾಯರು ಬಂದು ಭಾಸ್ಕರ ಶಾಸ್ತ್ರಿಗಳನ್ನು ಮಾತನಾಡಿಸಿ ಮನೆಗೆ ಕರೆದೊಯ್ದರು. ಸಂಜೆಯಾಗುತ್ತಿದ್ದಂತೆ ಅಪ್ಪನನ್ನು ಹೊರಗೆ ಕರೆದೊಯ್ದು ಸುತ್ತಾಡಿಸಿ ಬಂದರು. ಮರುದಿನ ಬೆಳಿಗ್ಗೆ ಶಾಸ್ತ್ರಿಗಳು ಹೊರಟು ನಿಂತಾಗ" ಅಪ್ಪ ಇನ್ನೆರಡು ದಿನ ಉಳಿದುಕೊಂಡರೆ ಆಗದೆ" ಎಂದಳು ಮೈತ್ರಿ. "ಇಲ್ಲ ಮಗಳೇ ಹೋಗಲೇಬೇಕು" ಎನ್ನುತ್ತಾ ಹೊರಟ ಭಾಸ್ಕರ ಶಾಸ್ತ್ರಿಗಳನ್ನು ಅಳಿಯ ಕಿಶನ್ ಬಸ್ ಹತ್ತಿಸಿ ಬಂದ.


       ಮಹೇಶ ಎರಡು ದಿನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ನಂತರ ಅಕ್ಕನ ಮನೆಗೆ ಬಂದ. ಅಲ್ಲಿ ಇದ್ದದ್ದು ಎರೆಡೆ ದಿನ. ಹೋಗುವ ಮುನ್ನ ಅಕ್ಕನಲ್ಲಿ ಗೋಗರೆದು 4000 ರೂಪಾಯಿಗಳನ್ನು  ಪಡೆದುಕೊಂಡಿದ್ದ.."ತಮ್ಮ.. ಸುಮ್ಮನೆ ಹಾಳು ಮಾಡಬೇಡ. ಬಹಳ ಕಷ್ಟಪಟ್ಟು ದುಡಿದು ಗಳಿಸಿದ ಬೆವರಿನ ಹಣ ನೆನಪಿರಲಿ " ಎನ್ನುತ್ತಾ ಎಚ್ಚರಿಸಿದಳು ಮೈತ್ರಿ."ಆಗಲಿ ಅಕ್ಕ ..ಸುಮ್ಮನೆ ಹಾಳುಮಾಡುವುದಿಲ್ಲ. ಜಾಗರೂಕತೆಯಲ್ಲಿ ಬೇಕಾದಾಗ ಖರ್ಚು  ಮಾಡುತ್ತೇನೆ "ಎಂದ ಮಹೇಶ.ಮುಂದುವರಿಸುತ್ತಾ..."ಅಜ್ಜ-ಅಜ್ಜಿಯನ್ನು ಬಸ್ ಹತ್ತಿಸಿ ಬಿಡಿ. ಇಳಿಯುವಲ್ಲಿಗೆ ನಾವು ಬಂದು ಕರೆದೊಯ್ಯುತ್ತೇವೆ "ಎಂದು ಹೇಳಿ  ಮನೆಗೆ ಹೊರಟ.


       ಶ್ಯಾಮಶಾಸ್ತ್ರಿಗಳು ಮತ್ತು ಮಹಾಲಕ್ಷ್ಮಿ ಅಮ್ಮ ಹತ್ತು ದಿನ ಮಗ ಶಂಕರನ ಮನೆಯಲ್ಲಿ ಉಳಿದುಕೊಂಡರು. ಸಮಯವಿದ್ದಾಗ ಶಂಕರ ಶಾಸ್ತ್ರಿಗಳು ನೆರೆಹೊರೆಯ ದೇವಸ್ಥಾನಗಳಿಗೆ ಪ್ರವಾಸಿ ತಾಣಗಳಿಗೆ ತಂದೆ-ತಾಯಿಯನ್ನು ಕರೆದೊಯ್ದರು. ಸಂಜನ ವಂದನ ಕೂಡ ಅಜ್ಜ-ಅಜ್ಜಿಯೊಂದಿಗೆ ಸಂಭ್ರಮಿಸಿದರು. ಅಜ್ಜ-ಅಜ್ಜಿ ಇದ್ದಷ್ಟು ದಿನ ಅವರ ದಿನನಿತ್ಯದ ರೂಢಿಯಲ್ಲಿಯೂ ಬಹಳಷ್ಟು ಮಾರ್ಪಾಡುಗಳಾದವು.ನಂತರ ಶಂಕರ ಶಾಸ್ತ್ರಿಗಳು ತಾನೇ ಅಪ್ಪ-ಅಮ್ಮನನ್ನು ಮಗಳ ಮನೆಯಲ್ಲಿ ಬಿಟ್ಟು ಬಂದರು.ಮೈತ್ರಿಯ ಫ್ಲಾಟಿನ ಎದುರು ಕಾರು ಚಲಿಸುತ್ತಿದ್ದಾಗ "ನೋಡಿ ..ಅದೇ ಫ್ಲ್ಯಾಟ್ "ಎಂದರು ಶಂಕರ ಶಾಸ್ತ್ರಿಗಳು. "ಅಬ್ಬಬ್ಬಾ ಎಷ್ಟು ಎತ್ತರದ ಮನೆಯಲ್ಲಿ ಇರುವುದು ಪುಳ್ಳಿಯ ಮನೆ" ಉದ್ಗಾರವೆತ್ತಿದರು ಶ್ಯಾಮಶಾಸ್ತ್ರಿ.. ಅಷ್ಟು ಎತ್ತರದ ಫ್ಲಾಟ್ ಗಳನ್ನು ಮಂಗಳೂರಿನಲ್ಲಿ ಕಂಡಿದ್ದರೂ ಸಹ ತನ್ನ ಪುಳ್ಳಿ ಅದರಲ್ಲಿ ವಾಸವಾಗಿರುವುದು ಎಂದರೆ ಅವರ ಪಾಲಿಗೆ ವಿಶೇಷವಾಗಿತ್ತು.ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಬಂದರೆ ಎಲ್ಲದನ್ನು ಕೂಲಂಕುಷವಾಗಿ ಗಮನಿಸುತ್ತಿದ್ದರು ಶ್ಯಾಮಶಾಸ್ತ್ರಿಗಳು ಮತ್ತು ಮಹಾಲಕ್ಷ್ಮಿ ಅಮ್ಮ. ಮನೆಗೆ ಕಾಲಿಡುತ್ತಿದ್ದಂತೆಯೇ ಅಜ್ಜ-ಅಜ್ಜಿ ಬಾಗಿ   ನಮಿಸಿದಳು ಮೈತ್ರಿ. ಅವಳನ್ನು ಹಿಡಿದೆತ್ತಿ ತಬ್ಬಿಕೊಂಡರು ಅಜ್ಜಿ.


       ಮೈತ್ರಿ ಅಜ್ಜ-ಅಜ್ಜಿಯ ಜೊತೆಗೆ ಕಾಲ ಕಳೆಯಲೆಂದೇ ವರ್ಕ್ ಫ್ರಮ್ ಹೋಮ್ ತೆಗೆದುಕೊಂಡಿದ್ದಳು.ಅಜ್ಜ ಅಜ್ಜಿಗೆ ಅಲ್ಲಿನ ಪ್ರತಿಯೊಂದು ವಸ್ತುಗಳು, ನಿಯಮಗಳು  ಎಲ್ಲವೂ ವಿಶೇಷವಾಗಿತ್ತು, ಎಲ್ಲವನ್ನೂ ಕುತೂಹಲದಿಂದ  ತಿಳಿದುಕೊಂಡರು. ಅಜ್ಜನ ಪೂಜೆ, ಅಜ್ಜಿಯ ಸಹಸ್ರನಾಮಾರ್ಚನೆಗಳು ಇಲ್ಲಿಯೂ ಮುಂದುವರಿದವು. ಒಂದುವಾರ ಅಜ್ಜ ಅಜ್ಜಿ ಗೆ ಮೊಮ್ಮಕ್ಕಳ ಜೊತೆ ಕಳೆದದ್ದು ಉದಾಸೀನ ಆಗಲಿಲ್ಲ.ಮೈತ್ರಿಯಲ್ಲಿ "ಪುಳ್ಳಿ.. ಶಂಕರ ಚಿಕ್ಕಪ್ಪನಿಗೆ ಫೋನ್ ಮಾಡಿ ನಮ್ಮನ್ನು ಕರೆದೊಯ್ಯಲು ಹೇಳು"ಎಂದರು ಅಜ್ಜ ಶ್ಯಾಮಶಾಸ್ತ್ರಿಗಳು. "ಇನ್ನೂ ಕೆಲವು ದಿನ ಕುಳಿತುಕೊಳ್ಳಿ "ಅಂತ ಎಂದು ಒತ್ತಾಯಿಸಿದರು ಮೈತ್ರಿ.ಅವಳ ಒತ್ತಾಯಕ್ಕೆ ಮತ್ತೆರಡು ದಿನ ಕುಳಿತುಕೊಂಡು ನಂತರ  ಶಂಕರ ಶಾಸ್ತ್ರಿಗಳು ತಂದೆ ತಾಯಿಯನ್ನು ಶಾಸ್ತ್ರಿ ನಿವಾಸಕ್ಕೆ ಕರೆದುಕೊಂಡು ಬಂದು ಬಿಟ್ಟರು.


     ಇಪ್ಪತ್ತು ದಿನದ ಬೆಂಗಳೂರಿನ ಭೇಟಿಯಲ್ಲಿ ಮುರಲಿಯ ನಿಶ್ಚಿತಾರ್ಥಕ್ಕೆ ಹೋಗಲಾಗದ ಮಹಾಲಕ್ಷ್ಮಿ ಅಮ್ಮ ನ ನೋವೆಲ್ಲ ಮಾಯವಾಗುವಂತೆ ನಡೆದುಕೊಂಡಿದ್ದರು ಮಕ್ಕಳು ಮೊಮ್ಮಕ್ಕಳು.ಮಕ್ಕಳು ಮೊಮ್ಮಕ್ಕಳು ದೂರದೂರಿನಲ್ಲಿದ್ದರೂ ಸುಖ ನೆಮ್ಮದಿಯಿಂದ ಬದುಕುತ್ತಿರುವುದನ್ನು ಕಂಡು ಹಿರಿ ಜೀವ ಧನ್ಯವಾಯಿತು.

       
                 *****

     ಕಿಶನ್ ಮೈತ್ರಿಯ ಹೆಗಲ ಮೇಲೆ ಕೈಯಿಟ್ಟು "ಮುದ್ಗೊಂಬೆ ...ಊರಿನಿಂದ ಬರುವ ಹಿರಿಯರೆಲ್ಲ ಜೊತೆಗಿದ್ದು ವಾಪಸಾದರು.  ನಾವಿಬ್ಬರೇ ನಮಗಾಗಿ ಕೆಲವು ದಿನ ಖುಷಿ-ಖುಷಿಯಾಗಿ ಸುತ್ತಾಡಿ ಬರೋಣವಾ..?"
ಎಂದು ಕೇಳಿದ.

" ಏನ್ ಹೇಳ್ತಾ ಇದ್ದೀರಾ..?"

"ಹೌದು ಮೈತ್ರಿ... ನಾವು ಹನಿಮೂನ್ ಅಂತ ಹೋಗಲೇ ಇಲ್ವಲ್ಲ.. ಸ್ವಲ್ಪ ದಿನ ಆಫೀಸಿನಿಂದ ರಜ ತೆಗೆದುಕೊಂಡು ಹೋಗಿ ಬರೋಣ. ಏನಂತೀಯಾ.. ?"ಎಂದಾಗ ಆಕೆಯ ಮುಖದಲ್ಲೊಂದು ಅಚ್ಚರಿಯ ,ರೋಮಾಂಚನದ ಭಾವ ಮೂಡಿತು..ಅವನ ಹೆಗಲಿಗೆ ಮುಖವಿಟ್ಟು ಸಮ್ಮತಿಸಿದಳು..

ಮುಂದುವರಿಯುವುದು..

✍️... ಅನಿತಾ ಜಿ.ಕೆ .ಭಟ್.
03-07-2020.

2 comments: