Sunday, 5 July 2020

ಜೀವನ ಮೈತ್ರಿ ಭಾಗ ೯೯(99)


ಜೀವನ ಮೈತ್ರಿ ಭಾಗ ೯೯

       ಕಿಶನ್ ಮೈತ್ರಿ ಹನಿಮೂನ್ ಸ್ಪಾಟ್, ಹನಿಮೂನ್ ಪ್ಯಾಕೇಜ್ ಬಗ್ಗೆ ಚರ್ಚಿಸಿಕೊಂಡರು. ಇಬ್ಬರು ಹಿಮಾಚಲ ಪ್ರದೇಶದ ಗಿರಿಶೃಂಗಗಳ ನಡುವೆ ಪ್ರವಾಸ ಹೋಗಲು ನಿರ್ಧರಿಸಿದರು. ಗಿರಿಧಾಮಗಳ ತಾಣವಾದ ಕುಲು ಮನಾಲಿ ಪ್ರದೇಶಗಳ ಹೆಸರುಗಳನ್ನು ಕೇಳುತ್ತಿದ್ದಂತೆ   ಮೈತ್ರಿ ಕಲ್ಪನಾಲೋಕದಲ್ಲಿ ಮುಳುಗಿದಳು. ಮನಸ್ಸಿನ ತುಂಬಾ ಕನಸುಗಳು ಅರಳಿದವು. ಹಚ್ಚ ಹಸಿರಿನ ವನಸಿರಿಯ  ಕಡಿದಾದ ಬೆಟ್ಟಗಳ ಮಧ್ಯೆ ನನ್ನವನ ಪ್ರೇಮ ನನ್ನ ಮನದಲ್ಲಿ ಸದಾ ಹಸಿರಾಗಿರುವಂತೆ ನೆಲೆಸಲಿ ಎಂದುಕೊಳ್ಳುತ್ತಾ ಹನಿಮೂನ್ ಗೆ ಸಜ್ಜಾದಳು.ಇಬ್ಬರೂ ತಮಗೆ ಅಗತ್ಯವಾದ, ದೇಹವನ್ನು ಬೆಚ್ಚಗಿರಿಸುವ ಬಟ್ಟೆಗಳನ್ನು ಖರೀದಿಸಿದರು.

      

     ಟ್ರಾವೆಲ್ ಏಜೆನ್ಸಿಯ ಮೂಲಕ ಹೆಸರು ನೊಂದಾಯಿಸಿ 12 ನವಜೋಡಿಗಳು ಪ್ರವಾಸ ಆರಂಭಿಸಿದರು. ಪ್ರಯಾಣದುದ್ದಕ್ಕೂ ವಿವಿಧ ಮನೋರಂಜನಾ ಆಟಗಳನ್ನು ಆಡಿಸಿದ್ದರು.ಎಲ್ಲರೂ ಹನಿಮೂನ್ ಗೆ ಆಗಮಿಸಿದ ದಂಪತಿಗಳಾಗಿದ್ದರಿಂದ ಜೋಶ್ ಸ್ವಲ್ಪ ಹೆಚ್ಚೇ ಇತ್ತು.

    ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಮನಸೆಳೆಯುವ ಗಿರಿಧಾಮ.1990 ಮೀಟರ್ ಎತ್ತರದಲ್ಲಿರುವ ಮನಾಲಿಯು ಕುಲು ಜಿಲ್ಲೆಯಲ್ಲಿದೆ.ಸದಾ ಮಂಜಿನಿಂದ ಆವೃತವಾಗಿರುವ ಪರ್ವತಗಳಿಂದಾಗಿ ಈ ಕಣಿವೆಗಳನ್ನು ಬೆಳ್ಳಿಯ ಕಣಿವೆಗಳು ಎಂದು ಕರೆಯುತ್ತಾರೆ.

     ಹಿಮಗಿರಿಯ ಕುಲು ಮನಾಲಿಯ ಪ್ರವಾಸ ಧರ್ಮಶಾಲಾ ದೇವಾಲಯದಿಂದ ಆರಂಭಗೊಂಡಿತು .ಪಕ್ಕದಲ್ಲಿರುವ ಮನಮೋಹಕ ಜಲಪಾತದ ಸೌಂದರ್ಯವನ್ನು ಸವಿದು ಸೆಲ್ಫಿ ಹೊಡೆದು,ಧುಮ್ಮಿಕ್ಕುವ ಜಲಪಾತದ ನೀರ ಹನಿಗಳು ಸಿಂಚನಗೈದಾಗ

ಒಬ್ಬರನ್ನೊಬ್ಬರು ತಬ್ಬಿ ಹಿಡಿದು ನಲಿದರು.ಸಾಹಸಮಯ ದಾರಿಯಲ್ಲಿ ಸಾಗುತ್ತಾ ನಿಸರ್ಗ ರಮಣೀಯ ಬೆಟ್ಟಗಳ ಸೌಂದರ್ಯವನ್ನು ಮನಸಾರೆ ಹಿಡಿದಿಟ್ಟುಕೊಂಡು ಮುನ್ನಡೆದರು.

      ಐತಿಹಾಸಿಕವಾದ ಹಿಡಿಂಬಿ ದೇವಸ್ಥಾನದ ಮನೋಹರ ದೃಶ್ಯಗಳನ್ನು ಕಣ್ತುಂಬಿಸಿಕೊಂಡರು.ಮೈತ್ರಿ ಮುಖ್ಯ ವಿಷಯಗಳನ್ನು ನೋಟ್ ಮಾಡುತ್ತಿದಳು.ಫೊಟೋ ತೆಗೆದುಕೊಳ್ಳುತ್ತಿದರು.

      ರೋಹ್ಟಾಂಗ್ ಪಾಸ್'ನಲ್ಲಿ ಬೀಸುತ್ತಿದ್ದ ತಂಗಾಳಿಯಲ್ಲಿ ಕಿಶನ್ ಮೈತ್ರಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಪ್ರೇಮ ನಿವೇದಿಸಿದ.ಮೊಟ್ಟ ಮೊದಲ ಪ್ರೇಮ ನಿವೇದನೆಯನ್ನು ಮತ್ತೆ ನೆನಪಿಸಿಕೊಂಡ ಮೈತ್ರಿ ಕೆನ್ನೆಗಳು ರಂಗಾದವು. ಒಂದೆಡೆ ಬಿಸಿಲು ಇನ್ನೊಂದೆಡೆ ಬೀಸುವ ತಂಗಾಳಿ. ಆಗಾಗ ಕವಿದ ಮೋಡ ಎದುರಿಗಿದ್ದವರನ್ನು ಕಾಣದಂತೆ ಮಾಡುತ್ತಿದ್ದು.ಒಂಥರಾ ಜೀವನವು ಹೀಗೆ ಎಂದುಕೊಂಡು ಮೈತ್ರಿಯ ಮುಖವನ್ನೆ ದಿಟ್ಟಿಸಿದ ಕಿಶನ್. ಮತ್ತೆ ಅರೆಗಳಿಗೆಯಲ್ಲಿ ಇಬ್ಬನಿ ತುಂಬಿದಾಗ ಬಾಯಿಂದ ಹೊರ ಸೂಸುವ ಹೊಗೆ. ಎಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ ಮೈತ್ರಿಯ ಅಧರಕಧರವ ಬೆಸೆದು ಹುರಿದುಂಬಿಸಿದ ಕಿಶನ್.

     ಗಿಡಮೂಲಿಕೆಗಳ ಮಧ್ಯದಿಂದ ಹರಿದುಬರುತ್ತಿರುವ ಪರಿಶುದ್ಧ ಹಾಗೂ ಆರೋಗ್ಯಕರವಾದ ನೀರನ್ನು ನೆಹರು ಕುಂಡದಲ್ಲಿ ಕುಡಿದರು.ಅದರ ಹಿಂದಿನ ಕಥೆಯನ್ನು ಅಲ್ಲಿನ ಗೈಡ್ ನಲ್ಲಿ ಕೇಳಿ ಕಿಶನ್ ಮೈತ್ರಿಗೆ ವಿವರಿಸಿದ.

      ನಂತರ ಮೈತ್ರಿ ಕಿಶನ್ ನ ಬಹು ಹಿಂದಿನ ಕನಸಾಗಿದ್ದ ಸೋಲಾಂಗ್ ವ್ಯಾಲಿಗೆ ಪ್ರಯಾಣ ಮುಂದುವರೆಯಿತು. ಇದು ಸಾಹಸಮಯ ಕ್ರೀಡೆಗಳಿಗೆ ಹೆಸರುವಾಸಿಯಾದ ತಾಣ. ರೋಪ್ ವೇ, ಪ್ಯಾರಾಗ್ಲೈಡಿಂಗ್ ಕ್ರೀಡೆಯಲ್ಲಿ ತೊಡಗಿಕೊಂಡರು.ಬಾನಂಗಳದಲ್ಲಿ ಪ್ರೇಮಪಕ್ಷಿಗಳ ವಿಹಾರ ಬಲು ರೋಚಕವಾಗಿತ್ತು.ಇದನ್ನೆಲ್ಲ ವೀಡಿಯೋ ಮಾಡಿಕೊಂಡಿದ್ದರು.ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ ಬಾನಿನಂಗಳದಲ್ಲಿ ಸಾಹಸಕ್ರೀಡೆಯಲ್ಲಿ ಭಾಗವಹಿಸಿದರು.ಮೈತ್ರಿಗಿದ್ದ ಅಳುಕನ್ನು ಕಿಶನ್ ದೂರಮಾಡಿಸುವಲ್ಲಿ ಯಶಸ್ವಿಯಾಗಿದ್ದ.ಬೆಂಬಲ ನೀಡುವ ಮೃದುಹೃದಯಿ ಪತಿಯಿದ್ದಾಗ ಅವಳೂ ಧೈರ್ಯದಿಂದ ಮುನ್ನುಗ್ಗಿದಳು.

     ಬಿಸಿಲು ಆವರಿಸಿದ್ದರೂ ಕೂಡ ಮಂಜಿನಿಂದ ಆವೃತವಾಗಿರುವ ಗಗನಚುಂಬಿ ಶಿಖರಗಳು ಕಣ್ಣುಗಳನ್ನು ಸೆಳೆಯುತ್ತಿದ್ದವು.ಎಷ್ಟು ಬಿಸಿಲಿದ್ದರೂ ಮಂಜು ಹೇಗೆ ಶಿಖರವನ್ನು ತಬ್ಬಿಕೊಂಡೇ ಮುಂದುವರಿಯುವುದೋ..ಹಾಗೇ ನಾನೂ ನಿನ್ನ ಜೊತೆಗಿರುವ ಚಿರಪ್ರೇಮಿ..ಎಂದ ಕಿಶನ್ ನ ಮಾತು ಆಗಾಗ ಮೈತ್ರಿಯ ಕಿವಿಗಳಲ್ಲಿ ಅನುರಣಿಸುತ್ತಿತ್ತು.

ಆಹ್ಲಾದಕರವಾದ ವಾತಾವರಣದಲ್ಲಿ ಇಬ್ಬರ ಮನವೂ  ಒಂದಾಯಿತು... ಪ್ರತಿಕ್ಷಣವೂ ಬಿಡದೆ ಕೈಗೆ ಕೈ ಬೆಸೆದೇ ಸಾಗುತ್ತಿದ್ದ ಕಿಶನ್ ಮೈತ್ರಿಗೆ ಇದು ಸದಾ ಸ್ಮರಣೀಯ ಅನುಭವ.

       ದಂಪತಿಗೆ ಉಳಕೊಳ್ಳುವುದಕ್ಕೆ ವ್ಯವಸ್ಥೆಯನ್ನು ಟ್ರಾವೆಲಿಂಗ್ ಏಜೆನ್ಸಿಯವರು ನೋಡಿಕೊಂಡದ್ದರಿಂದ ಏನೂ ತೊಂದರೆಯಾಗಲಿಲ್ಲ. ಹಗಲು ಹಸಿರ ಸಿರಿಯ ಮಡಿಲಿನಲಿ ಪಯಣ ...ರಾತ್ರಿಯಾದರೆ ನಡುಗುವ ಚಳಿಯಲ್ಲಿ ಉಸಿರಿಗೆ ಉಸಿರು ಬೆರೆಸಿ ಸುಖಿಸಲು ಪ್ರೀತಿ ಒಂದೇ ಕಾರಣ... ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುತ್ತ ನಡೆಯಲು ಮಧುಚಂದ್ರವು ಪ್ರೇರೇಪಿಸಿತು. ಪ್ರಣಯದ ಏರಿಳಿತಗಳ ಮೆಲುಕಿನೊಂದಿಗೆ ಭವಿಷ್ಯದ ರೂಪುರೇಷೆಯನ್ನು ಹಾಕಿಕೊಂಡರು.ನೀ ನನಗೆ ನಾ ನಿನಗೆ ಎನ್ನುತ್ತಾ ,ಒಬ್ಬರನ್ನೊಬ್ಬರು ಛೇಡಿಸುತ್ತಾ, ತುಂಟಾಟದಲ್ಲಿ ಮುಳುಗಿದರು.

    ಹೋದ ಕಡೆಯೆಲ್ಲ ಅಲ್ಲಿನ ವಿಭಿನ್ನವಾದ ಆಹಾರವನ್ನು ಸವಿದರು. ರೋಮ್ಯಾಂಟಿಕ್ ಅನುಭವವನ್ನು ದೇಹದ ಕಣಕಣದಲ್ಲೂ ತುಂಬಿಸಿಕೊಂಡು ಮತ್ತೆ ಬೆಂಗಳೂರಿಗೆ ಮರಳಿದರು.

               ******

            ಶಂಕರ ರಾಯರು ಮತ್ತು ಶಶಿ ಶಾಸ್ತ್ರಿ ನಿವಾಸಕ್ಕೆ ಬಂದು ಮಗನ ವಿವಾಹಕ್ಕೆ  ಆಮಂತ್ರಿಸಿದರು.ಪಂಚೆ,ಸೀರೆಯನ್ನು ನೀಡಿ ತಂದೆ ತಾಯಿಯ /ಮಾವ ಅತ್ತೆಯ ಆಶೀರ್ವಾದವನ್ನು ಪಡೆದುಕೊಂಡರು.ಶಂಕರ ರಾಯರು ಮದುವೆಗೆ ತೆರಳುವ ವ್ಯವಸ್ಥೆ ಯನ್ನು ಭಾಸ್ಕರ ಶಾಸ್ತ್ರಿಗಳಲ್ಲಿ ಹೇಳಿ ಮನದಟ್ಟು ಮಾಡಿದರು.ಶಂಕರ ಭಾವನಲ್ಲಿ ಮಾತನಾಡುತ್ತಾ ನಿಶ್ಚಿತಾರ್ಥ ಕ್ಕೆ ಅಮ್ಮನಿಗೆ ವಾಹನದಲ್ಲಿ ಜಾಗವಿಲ್ಲ ಎಂದದ್ದು ಶಶಿಯಕ್ಕನ ಕುತಂತ್ರ ಎಂಬುದು ಭಾಸ್ಕರ ಶಾಸ್ತ್ರಿಗಳ ಅರಿವಿಗೆ ಬಂತು.ಮಂಗಳಮ್ಮನಲ್ಲಿ ಮಾತನಾಡಿದ ಶಶಿ ಸೊಸೆಗೆ ಹತ್ತು ಪವನಿನ ಕರಿಮಣಿ ಸರ  , ಆರು ಪವನಿನ  ನಾಲ್ಕು ಬಳೆ,ಏಳು ಪವನಿನ ಲಾಂಗ್ ಚೈನ್, ಬೆಂಡೋಲೆ...ಮಾಡಿಸಿದ್ದೇವೆ ಎಂದು ಹೇಳಿದರು.

        ಮದುವೆ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಶಾಸ್ತ್ರೀ ನಿವಾಸದಿಂದ ಮಂಗಳಮ್ಮನನ್ನು ಬಿಟ್ಟು ಮತ್ತೆ ಎಲ್ಲರೂ ಮದುವೆಗೆ ಆಗಮಿಸಿದ್ದರು. ಶ್ರೀಮಂತ ಕುಳ ಅಂದಮೇಲೆ ಕೇಳುವುದೇ ಬೇಡ.. ಅದ್ದೂರಿಯಾಗಿ ಸೆಟ್ ಹಾಕಲಾಗಿತ್ತು. ವಾದ್ಯವೃಂದದವರಿಂದ ಮನರಂಜನೆ ನಡೆದಿತ್ತು. ಮದುಮಗಳು ಮಹತಿಯನ್ನು ಅಲಂಕಾರ ಪರಿಣತರು ಬಂದು ಅಲಂಕಾರ ಮಾಡಿದ್ದರು. ಊಟಕ್ಕೆ  ಹಲವು ಬಗೆಯ ಸವಿಪಾಕಗಳನ್ನು  ನಾನಾ ಪ್ರದೇಶದ ಬಾಣಸಿಗರು ಬಂದು ತಯಾರಿಸಿದ್ದರು.

    ಮಂಟಪದಲ್ಲಿ ನಿಂತಿದ್ದ ವಧು ಮಹತಿಯ ಮುಖದಲ್ಲಿ ನಗು ಇರಲಿಲ್ಲ.ಗಂಟಿಕ್ಕಿದ ಮುಖದೊಂದಿಗೆ ಹೂಮಾಲೆಯನ್ನು ವರನಿಗೆ ಹಾಕಿದಳು.ಮುರಲಿ ಎಂದಿನಂತೆ ಸೌಮ್ಯ ಮುಖಭಾವದಿಂದ ವಧುವಿಗೆ ಹೂಮಾಲೆ ಹಾಕಿದ.ಮಾಂಗಲ್ಯಂ ತಂತುನಾನೇನ ಎನ್ನುತ್ತಾ ಪುರೋಹಿತರು ಗಟ್ಟಿಸ್ವರದಲ್ಲಿ ಹೇಳುತ್ತಿದ್ದಾಗ ಹತ್ತು ಪವನಿನ ಕರಿಮಣಿ ಸರ ಮಹತಿಯ ಕೊರಳಿಗೆ ಕಟ್ಟಿದ ಮುರಲಿ.ಇಬ್ಬರೂ ಸಪ್ತಪದಿ ತುಳಿದು ಸತಿಪತಿಗಳಾದರು.

     ಶಶಿಗೆ ಇವರ ಅಂತಸ್ತಿಗೆ ನಮ್ಮದು ಏನೂ ಸಾಲದು ಎಂದು ಅನಿಸಿತು. ಆದರೂ ಮನದೊಳಗೆ ಸಂತೃಪ್ತಿ ಒಳ್ಳೆ ಸಂಬಂಧವೆಂದು. ಮುರಳಿಯ ಹಾಗೂ ವೆಂಕಟನ ಸ್ನೇಹಿತರೆಲ್ಲ ಆಗಮಿಸಿದ್ದರು. ಮದುಮಗಳ ಸ್ನೇಹಿತ ಸ್ನೇಹಿತೆಯರ ದಂಡೇ ಆಗಮಿಸಿತ್ತು. ಮದುಮಗಳ ಕಡೆಯವರು ಕೊಟ್ಟಿದ್ದ ರಾಮರಾಜ್ ಪಂಚೆಯನ್ನು ತೊಟ್ಟು ಶೇಷಣ್ಣ ಅತ್ತಿಂದಿತ್ತ ಓಡಾಡುತ್ತಿದ್ದ.ಇನ್ನೂ ತನ್ನ ಕಮಿಷನ್ ಬಂದಿಲ್ಲ ಎಂಬುದೇ ಅವನ ಮನದೊಳಗಿನ ಚಿಂತೆಯಾಗಿತ್ತು.

      ಮುರಲಿಯ ಮದುವೆಗೆ ವೆಂಕಟ್ ನ ಗೆಳೆಯನೆಂಬ ಕಾರಣಕ್ಕೆ ಕೇಶವನಿಗೂ ಕರೆ ಹೋಗಿತ್ತು.ವೆಂಕಟನೊಂದಿಗಿದ್ದ ವೈಮನಸ್ಸು ಮರೆತು ಒಂದು ಗಳಿಗೆ ಮದುವೆಗೆ ಹಾಜರಾಗಿದ್ದ ಕೇಶವ.ಶೇಷಣ್ಣ ಕೇಶವನನ್ನು ಕಂಡರೂ ಕಾಣದವನಂತೆ ವರ್ತಿಸಿದ.ಮದುವೆ ಮಾಡುವುದಷ್ಟೇ ನನ್ನ ಕೆಲಸ.ಮುಂದಿನದ್ದು ನನಗೇಕೆ..ಎಲ್ಲಿ, ಹೇಗೆ ಬೇಕಾದರೂ ಬದುಕಿಕೊಳ್ಳಲಿ..ಅದೆಲ್ಲ ನನಗೆ ಬೇಕಾಗಿಲ್ಲ.. ಎಂಬುದು ಅವನ ಮನಸ್ಥಿತಿ.

      ಶಶಿಯ ನಾದಿನಿಯರು ,ಓರಗಿತ್ತಿ ತಮ್ಮೊಳಗೇ ಗುಸುಗುಸು ಮಾತನಾಡುತ್ತಿದ್ದರು.ಇಷ್ಟು ಶ್ರೀಮಂತೆ ಸೊಸೆ ಶಶಿಯತ್ತಿಗೆಯೊಂದಿಗೆ ಹೊಂದಿಕೊಂಡಾಳೇ ..ಶಶಿಯ ಒರಟು ಬುದ್ಧಿ ಸಹಿಸಿಕೊಳ್ಳುವ ಗುಣವಿದ್ದೀತೇ.. ಎಂದು ಚರ್ಚೆ ನಡೆಯುತ್ತಿತ್ತು.

       ಮಂತ್ರಾಕ್ಷತೆ ಕಾರ್ಯಕ್ರಮ ಜರುಗಿ, ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಯಿತು.ಊಟದ ಬಳಿಕ ಮುರಲಿಯನ್ನು ಬಿಟ್ಟು ಉಳಿದವರೆಲ್ಲ ವಾಹನವೇರಿ ಊರಿನತ್ತ ಪಯಣಬೆಳೆಸಿದರು.

       ವಧುವಿನ ಮನೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಉಳಿದಿದ್ದರು.ಸುಂದರವಾಗಿ ಅಲಂಕರಿಸಿದ ಕೋಣೆಯೊಳಗೆ  ಮಹತಿಯ ತಾಯಿ ಸ್ವರ್ಣ ಅಳಿಯನನ್ನು ಕರೆದೊಯ್ದರು.ರೂಮಿನ ಸೌಂದರ್ಯವನ್ನು ವೀಕ್ಷಿಸುತ್ತಿದ್ದ ಮುರಲಿ ಒಮ್ಮೆಲೆ ಗೆಜ್ಜೆಯ ದನಿ ಕೇಳಿ ಅತ್ತ ನೋಡಿದ.ಒಂದು ಕ್ಷಣ ಸಾವರಿಸಿಕೊಂಡ.ಹಸಿರು ಬಣ್ಣದ ಝರಿಸೀರೆಯುಟ್ಟು ಕೈಯಲ್ಲಿ ಬೆಳ್ಳಿಯ ಲೋಟ ಹಿಡಿದು ಕ್ಷೀರಕನ್ನಿಕೆ ಆಗಮಿಸುತ್ತಿದ್ದಂತೆ ಅವನ ಹೃದಯ ಬಡಿತವೂ ಜೋರಾಯಿತು.ಬಾನಲ್ಲಿದ್ದ ಬೆಳ್ಳಿ ಚಂದಿರ ಇನ್ನು ನನಗೇನು ಕೆಲಸ ಎಂದು ಮೋಡದೆಡೆಯಲ್ಲಿ ಮರೆಯಾದ.ಮಹತಿಯ  ಮೋಹದ ಬಲೆಯಲ್ಲಿ ಬಂಧಿಯಾದ ಮುರಲಿ.

     ಎರಡು ದಿನದ ಬಳಿಕ ಶಂಕರರಾಯರು, ಶಶಿಯ ಮನೆಯಲ್ಲಿ ವಧೂಗೃಹ ಪ್ರವೇಶ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆಯಿತು.ಹಳ್ಳಿಯ ಮಟ್ಟಿಗೆ ವಿಜೃಂಭಣೆಯಿಂದ ಎನ್ನಬಹುದಾದರೂ ಹೆಣ್ಣಿನ ಕಡೆಯವರಿಗೆ ಬಹಳ ಸರಳವೆನಿಸಿತು.ಆ ದಿನ ಮಹೇಶ್ ಮನೆಯಲ್ಲುಳಿದು ಮಂಗಳಮ್ಮ ತೆರಳಿದರು.ಮಂಗಳಮ್ಮನನ್ನು ಕಂಡೊಡನೆ ಮುಖ ತಿರುಗಿಸಿದಳು ಶಶಿಯತ್ತಿಗೆ.ಶಂಕರ ರಾಯರು ಮಾತನಾಡಿಸಿದ್ದರಿಂದ ಏನೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ ಮಂಗಳಮ್ಮ.

      ಊಟವಾದ ಬಳಿಕ ಶಶಿ ತಾವಾಗಿಯೇ ಮಂಗಳಮ್ಮನನ್ನು ಕರೆದು ಮದುವೆಯ ಸುದ್ದಿಯನ್ನು ಹೇಳತೊಡಗಿದರು.ಒಟ್ಟಾರೆಯಾಗಿ ನಿಮ್ಮ ಮಗಳಿಗಿಂತ ಉತ್ತಮವಾದ ಸೊಸೆ ದೊರಕಿದ್ದಾಳೆ ಎನ್ನುವ ತಾತ್ಪರ್ಯದ ಮಾತುಗಳನ್ನಾಡಿದಳು."ಆಗಲಿ..ಒಳ್ಳೆಯ ಹುಡುಗಿ ನಿಮಗೆ ಸೊಸೆಯಾಗಿ ದೊರಕಿದ್ದು ನಮಗೂ ಸಂತಹದ ವಿಚಾರ.ಮಗ ಸೊಸೆ ಬೆಂಗಳೂರಿಗೆ ತೆರಳುವ ಮುನ್ನ ನಮ್ಮ ಮನೆಗೊಮ್ಮೆ ಈ ಭೇಟಿ ನೀಡಿ ಆತಿಥ್ಯ ಸ್ವೀಕರಿಸಲಿ ..."ಎಂದರು ಮಂಗಳಮ್ಮ.

"ಮೈತ್ರಿ ಕಿಶನ್ ಗೆ ಮದುವೆಗೆ ಬರಬಹುದಿತ್ತು.".ಎಂದಾಗ "ಅವರು ಹನಿಮೂನ್ ಗೆ ತೆರಳಿದ್ದಾರೆ" ಎಂದರು ಮಂಗಳಮ್ಮ.

ಶೇಷಣ್ಣ ಎರಡೂ ಕಡೆಯವರಿಂದ ಕಮಿಷನ್ ಪಡೆದುಕೊಂಡು ತನ್ನ ಮಡದಿಯಲ್ಲಿ "ನೋಡೇ..ಸುಬ್ಬೀ... ಎಷ್ಟು ಸಂಪಾದಿಸಿದ್ದೀನಿ ಅಂತ.ಬಡವರ ನಾಲ್ಕು ಮದುವೆ ಸಂಬಂಧ ಕುದುರಿಸುವುದು ..ಶ್ರೀಮಂತರ ಒಂದು ಮದುವೆ ಸಂಬಂಧ ಕುದುರಿಸುವುದಕ್ಕೆ ಸಮ...ಹ್ಹ ಹ್ಹ ಹ್ಹ ಹ್ಹಾ..."

"ವರುಷಕ್ಕೆ ಎರಡು ಇಂತಹ ಮದುವೆ ಮಾಡಿಸಿದ್ರೂ ಸಾಕು ರೀ.."

"ಅದೇ.. ಮತ್ತೆ... ಪೆನ್ಷನ್ ಹಣವೂ ಬರುತ್ತೆ.. ಕಮಿಷನ್ ದುಡ್ಡೂ ಸಿಗುತ್ತೆ... ಇಷ್ಟು ಸಾಕಲ್ಲ ನಮಗೆ"

ಎನ್ನುತ್ತಾ ಮಡದಿಯ ಮುಖ ನೋಡಿದ..ಅವಳಲ್ಲೂ ಸಂತೃಪ್ತಿಯ ಭಾವವನ್ನು ಕಂಡನು.

     ಒಂದು ದಿನ ಮನೆಯಲ್ಲಿ ಉಳಿದ ವಧೂವರರು ನಂತರ ಬೆಂಗಳೂರಿಗೆ ಹೊರಟರು.ಮುರಲಿಯನ್ನು ಮಹತಿಯ ಹೆತ್ತವರು ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ಹೇಳಿದರು.ಅದರಂತೆಯೇ ಕೆಲವು ದಿನ ಇದ್ದು ನಂತರ ಮುರಲಿ ಮಾಡಿಕೊಂಡಿದ್ದ ಬಾಡಿಗೆ ಮನೆಗೆ ಆಗಮಿಸಿದರು.ಇಬ್ಬರೂ ಸಾಫ್ಟ್ ವೇರ್ ಉದ್ಯೋಗಿಗಳು.ಬೆಳಗ್ಗೆ ಮನೆ ಬಿಟ್ಟರೆ ವಾಪಾಸಾಗುವುದು ರಾತ್ರಿ.ನಂತರ ಅಡುಗೆ, ಊಟ..ಇಬ್ಬರೂ ಮನೆಯಲ್ಲೂ ಸರಿಸಮವಾಗಿ ದುಡಿಯಬೇಕಾಗಿತ್ತು.ಒಮ್ಮೊಮ್ಮೆ ಮುರಲಿಯೇ ನಿಭಾಯಿಸಬೇಕಾದ ಪರಿಸ್ಥಿತಿಯೂ ಬಂದಿತು.. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುರಲಿ ಹೊಂದಾಣಿಕೆಯ ಮೂಲಮಂತ್ರವನ್ನು ಬಿಟ್ಟುಕೊಡಲಿಲ್ಲ.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.

05-07-2020.


2 comments:

  1. ಶಶಿಯಿಂದ ಮಹತಿಗೆ ಯಾವುದೇ ನೋವು ಆಗದಿರಲಿ...

    ReplyDelete
    Replies
    1. ಹಾಗೆಯೇ ಆದರೆ ಬದುಕು ಸುಂದರ.. ಧನ್ಯವಾದಗಳು 💐🙏

      Delete