ಹಲಸಿನ ಹಣ್ಣು ಪೌಷ್ಟಿಕಾಂಶಗಳ ಆಗರ.ಎಳೆಯ ಹಲಸಿನ ಕಾಯಿಯಿಂದ ಆರಂಭವಾಗಿ ಬಲಿತ ಹಣ್ಣಿನವರೆಗಿನ ಪಾಕವೈವಿಧ್ಯಗಳು ಲೆಕ್ಕವಿಲ್ಲದಷ್ಟು.ಇತ್ತೀಚೆಗೆ ಹಲಸಿನಹಣ್ಣಿನ ಕೇಕ್,ಐಸ್ಕ್ರೀಂ ಕೂಡಾ ಪ್ರಸಿದ್ಧವಾಗುತ್ತಿದೆ.ಜುಲೈ 4 ರಂದು ಹಲಸಿನ ದಿನವೆಂದು ಆಚರಿಸುತ್ತಾರೆ.ಬಂಗಾರದ ಬಣ್ಣದ ಹಲಸಿನ ಸೊಳೆಯ ರುಚಿಗೆ ಮಾರುಹೋಗದವರಿಲ್ಲ.ಮರದಲ್ಲಿ ಒಂದು ಹಣ್ಣಾದರೆ ಸಾಕು ಸುತ್ತಲೂ ಘಮಘಮ ಪರಿಮಳ ಹಬ್ಬುವಂತಹ ಹಲಸಿನ ಕೆಲವು ಪಾರಂಪರಿಕ ಅಡುಗೆಗಳನ್ನು ನೋಡೋಣ.
ಹಲಸಿನ ಹಣ್ಣಿನ ಕಡುಬು/ಕೊಟ್ಟಿಗೆ :-
ಹಲಸಿನ ಹಣ್ಣು ದೊರೆಯುವ ಸಮಯದಲ್ಲಿ ಹಲಸಿನ ಹಣ್ಣಿನ ಕಡುಬು ಬಹಳ ಸಾಮಾನ್ಯವಾಗಿ ಮಾಡುವ ತಿಂಡಿ.ಸಿಹಿಪ್ರಿಯರಿಗೆ ಹಲಸಿನ ಹಣ್ಣಿನ ಕಡುಬು, ಸಿಹಿ ಇಷ್ಟವಿಲ್ಲದವರಿಗೆ ಸೌತೆಕಾಯಿ ಕಡುಬು ಮಾಡುವ ರೂಢಿಯೂ ಕೆಲವು ಮನೆಗಳಲ್ಲಿದೆ.ಬಿಸಿ ಬಿಸಿ ಕಡುಬು ಎಣ್ಣೆ ಅಥವಾ ತುಪ್ಪದ ಜೊತೆ ತಿನ್ನಲು ಬಲು ರುಚಿ.
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ದೋಸೆ ಅಕ್ಕಿ, ನಾಲ್ಕು ಕಪ್ ಹಲಸಿನ ಹಣ್ಣಿನ ಸೊಳೆ/ತೊಳೆ, ಉಪ್ಪು, ತೆಂಗಿನ ತುರಿ ಅರ್ಧ ಕಪ್,ಬೆಲ್ಲ ಅರ್ಧ ಕಪ್ ಅಥವಾ ರುಚಿಗೆ ತಕ್ಕಷ್ಟು.
( ಶುಂಠಿ ತುಂಡು,ಕಾಳುಮೆಣಸು .. ಇವನ್ನೆಲ್ಲ ಕೆಲವರು ಬಳಸುತ್ತಾರೆ.ಬೇಕಾದಲ್ಲಿ ಬಳಸಬಹುದು.. ನಾನು ಬಳಸುವುದಿಲ್ಲ)
ಮಾಡುವ ವಿಧಾನ:-
ಬಾಳೆ ಎಲೆಗಳನ್ನು ಅಡಿ ಮೇಲೆ ಎರಡೂ ಬದಿಗಳಲ್ಲಿ ತೊಳೆದು ನೀರು ಬಸಿಯುವಂತೆ ಇಡಿ.ಒಲೆ /ಸ್ಟವ್ ಮೇಲೆ ಚೆನ್ನಾಗಿ ಬಾಡಿಸಿಕೊಳ್ಳಿ.ನಂತರ ನೀರು ಮುಟ್ಟಿಸಿ ಬಟ್ಟೆಯಲ್ಲಿ ಅಡಿ ಮೇಲೆ ಎರಡು ಬದಿ ಒರೆಸಿಕೊಳ್ಳಿ.
ಅಕ್ಕಿಯನ್ನು ಎರಡರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತೊಳೆದಿಡಿ.ಹಲಸಿನ ಹಣ್ಣನ್ನು ತುಂಡುಮಾಡಿ ಸೊಳೆ ಬಿಡಿಸಿ ಇಟ್ಟುಕೊಳ್ಳಿ.ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸೊಳೆಯನ್ನು ಹಾಕಿ ಗರ್ ಮಾಡಿ.ಸೊಳೆ ತುಂಡಾದರೆ ಸಾಕು.ನಣ್ಣಗಾಗುವುದು ಬೇಡ.ಹೀಗೆ ಸೊಳೆಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಪಾತ್ರೆಗೆ ಹಾಕಿಕೊಳ್ಳಿ.
ಅಕ್ಕಿ, ತೆಂಗಿನತುರಿ,ಬೆಲ್ಲದ ಪುಡಿ, ಉಪ್ಪು ಎಲ್ಲವನ್ನು ಜೊತೆಗೆ ರುಬ್ಬಿ ಪಾತ್ರೆಯಲ್ಲಿದ್ದ ಹಲಸಿನ ಹಣ್ಣಿನ ತುಂಡುಗಳ ಜೊತೆ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ತಿರುವಿ.ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಬಿಡಿ.
ಈ ಮಿಶ್ರಣವನ್ನು ತಯಾರು ಮಾಡಿಟ್ಟ ಬಾಳೆ ಎಲೆಯ ಮೇಲೆ ಒಂದೆರಡು ಸೌಟಿನಷ್ಟು ಹಾಕಿ ಬಾಳೆಲೆಯ ಮೇಲಿನ ಬದಿ ಮಡಚಿ.ಅದರ ಮೇಲೆ ಕೆಳಗಿನ ಬದಿ ಮಡಚಿ.ನಂತರ ಎರಡೂ ಬದಿಯನ್ನು ಮಡಚಿ,ಕವಚಿ ಇಡಿ.ಇದನ್ನು ಬಿಸಿಯಾಗುತ್ತಿರುವ ಇಡ್ಲಿ ಪಾತ್ರೆಯಲ್ಲಿ ಒಂದರ ಮೇಲೊಂದರಂತೆ ಇಡುತ್ತಾ ಬನ್ನಿ.ಪೂರ್ತಿ ಇಟ್ಟಾದ ಮೇಲೆ ಮುಚ್ಚಳ ಹಾಕಿ ದೊಡ್ಡ ಉರಿಯಲ್ಲಿ ಬೇಯಿಸಿ.ಅರ್ಧ ಗಂಟೆಯಲ್ಲಿ ಉರಿ ಸಣ್ಣ ಮಾಡಿ.ಒಂದು ಗಂಟೆ ಹಬೆಯಲ್ಲಿ ಬೆಂದರೆ ಬಿಸಿ ಬಿಸಿ ಕಡುಬು ತಿನ್ನಲು ತಯಾರಾಗುತ್ತದೆ..
ಬಾಳೆ ಎಲೆ ಸಿಗದಿದ್ದವರು ಅಥವಾ ಅದನ್ನು ಸ್ವಚ್ಛಗೊಳಿಸುವಷ್ಟು ಸಮಯವಿಲ್ಲದಿದ್ದರೆ ಮೇಲಿನ ಹಿಟ್ಟನ್ನು ಇಡ್ಲಿ ತಟ್ಟೆಗೆ ಎಣ್ಣೆ ಅಥವಾ ತುಪ್ಪ ಸವರಿ ಬೇಯಿಸಬಹುದು.ಅಥವಾ ಬಟ್ಟಲಿನಲ್ಲಿ ಹಾಕಿ ಬೇಯಿಸಬಹುದು.
ಬಿಸಿ ಕಡುಬಿಗೆ ಎಣ್ಣೆ ಅಥವಾ ತುಪ್ಪ ಸವರಿ ತಿನ್ನಲು ಬಲು ರುಚಿ.ಅಲ್ಲದೇ
ಇದನ್ನು ತೆಂಗಿನಕಾಯಿ ಚಟ್ನಿ, ಶುಂಠಿ ಚಟ್ನಿಯೊಂದಿಗೆ ಕೂಡ ತಿನ್ನಲು ಕೊಡಬಹುದು.

ಹಲಸಿನ ಕಾಯಿ ದೋಸೆ:-
ಹಲಸಿನಕಾಯಿ ದೊರೆಯುವ ಈ ಸಮಯದಲ್ಲಿ ಗರಿಗರಿಯಾಗಿ ಎದ್ದು ಬರುವ ಹಲಸಿನ ಕಾಯಿ ದೋಸೆ ಎಲ್ಲರ ಫೇವರಿಟ್ ದೋಸೆ.ತನ್ನ ಬಣ್ಣ ಹಾಗೂ ರುಚಿಯಿಂದ ಎಲ್ಲರ ಬಾಯಲ್ಲೂ ನೀರೂರಿಸುವ ತಾಕತ್ತು ಹಲಸಿನಕಾಯಿ ದೋಸೆಗಿದೆ.
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ಅಕ್ಕಿ, ನಾಲ್ಕು ಕಪ್ ಹಲಸಿನ ಸೊಳೆ, ಉಪ್ಪು (ಕೆಲವು ಹಲಸಿನಸೊಳೆಗೆ ಅಕ್ಕಿ ಬಹಳ ಕಡಿಮೆ ಸಾಕು.. ದೋಸೆ ಹುಯ್ಯುವಾಗ ಹದ ನೋಡಿಕೊಳ್ಳಬೇಕು)
ಮಾಡುವ ವಿಧಾನ:-
ಹಲಸಿನ ಕಾಯಿಯನ್ನು ತುಂಡು ಮಾಡಿ ಸೊಳೆ ತೆಗೆದಿಡಿ.ಅಕ್ಕಿಯೊಂದಿಗೆ ಸೇರಿಸಿ ರುಬ್ಬಿ.ಉಪ್ಪು ರುಚಿಗೆ ತಕ್ಕಷ್ಟು ಹಾಕಿ.ಹಿಟ್ಟು ಸಾಮಾನ್ಯ ಉದ್ದಿನ ದೋಸೆ ಹಿಟ್ಟಿನ ಹದಕ್ಕಿರಲಿ.ಕಾವಲಿಗೆ ಬಿಸಿಮಾಡಿ ದೋಸೆ ತೆಳ್ಳಗೆ ಹರವಿ.ಎಲ್ಲಾ ಸರಿಯಾದರೆ ರೋಸ್ಟ್ ಆಗಿ ಬರುವುದು.(ದೋಸೆ ಸರಿಯಾಗಿ ಏಳದಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಕಲಸಿ ಹಾಕಬಹುದು..)ಪ್ರತಿ ಬಾರಿ ದೋಸೆ ಮಾಡುವಾಗಲೂ ಕಾವಲಿಗೆ ಎಣ್ಣೆ ಹಾಕಿಕೊಳ್ಳುವುದು ಬೇಡ..ದೋಸೆಯ ಮೇಲೆ ಎಣ್ಣೆ ಹಾಕಿಕೊಳ್ಳಬಹುದು.
ಇದನ್ನು ಜೇನು ,ಕೊಬ್ಬರಿ ಚಟ್ನಿಯೊಂದಿಗೆ ಸೇವಿಸಿದರೆ ರುಚಿಕರ.

ಹಲಸಿನ ಕಾಯಿ ಚಿಪ್ಸ್:-
ಬೇಕಾಗುವ ಸಾಮಗ್ರಿಗಳು :-
ಹಲಸಿನಕಾಯಿ ಸೊಳೆ/ತೊಳೆ, ಉಪ್ಪು,ಕರಿಯಲು ಎಣ್ಣೆ.
ಮಾಡುವ ವಿಧಾನ:-
ಹಲಸಿನ ಸೊಳೆಗಳನ್ನು ತೆಳ್ಳಗೆ ತುಂಡುಮಾಡಿಕೊಳ್ಳಬೇಕು.ಉಪ್ಪುನೀರು ಮಾಡಿಟ್ಟುಕೊಳ್ಳಿ..ಕಾದ ಎಣ್ಣೆಗೆ ಸೊಳೆಯ ತುಂಡುಗಳನ್ನು ಹಾಕಿ ಹುರಿಯಿರಿ.ರುಚಿಗೆ ತಕ್ಕಷ್ಟು ಉಪ್ಪುನೀರು ಸೇರಿಸಿ.ಒಮ್ಮೆಲೆ ಶಬ್ದ ಬರುವುದು.ನಂತರ ತೆಗೆಯಿರಿ.. ಬೇಕಾದರೆ ಮೇಲೆ ಮೆಣಸಿನ ಪುಡಿ ಉದುರಿಸಿಕೊಳ್ಳಿ..ಜೋರು ಮಳೆ ಸುರಿಯುತ್ತಿದ್ದಾಗ ತಿನ್ನಲು ಸಖತ್ ಟೇಸ್ಟಿ ಆಗಿರುತ್ತದೆ..👌👌

ಹಲಸಿನ ಹಣ್ಣಿನ ಗೆಣಸಲೆ :-
ಹಲಸಿನ ಹಣ್ಣು ದೊರಕುವ ಸಮಯದಲ್ಲಿ ಒಮ್ಮೆಯಾದರೂ ಸವಿಯಬೇಕಾದ ರುಚಿಗಳಲ್ಲಿ ಗೆಣಸಲೆಯೂ ಒಂದು.ಇದು ಕರಾವಳಿಯ ವಿಶೇಷ ತಿನಿಸು..
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ದೋಸೆ ಅಕ್ಕಿ, ನಾಲ್ಕೈದು ಕಪ್ ಹಲಸಿನ ಹಣ್ಣಿನ ತೊಳೆ /ಸೊಳೆ, ತೆಂಗಿನತುರಿ ಒಂದು ಕಪ್,ಬೆಲ್ಲ ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:-
ಬಾಳೆ ಎಲೆಗಳನ್ನು ಅಡಿ ಮೇಲೆ ಎರಡೂ ಬದಿಗಳಲ್ಲಿ ತೊಳೆದು ನೀರು ಬಸಿಯುವಂತೆ ಇಡಿ.ಒಲೆ /ಸ್ಟವ್ ಮೇಲೆ ಚೆನ್ನಾಗಿ ಬಾಡಿಸಿಕೊಳ್ಳಿ.ನಂತರ ನೀರು ಮುಟ್ಟಿಸಿದ ಬಟ್ಟೆಯಲ್ಲಿ ಅಡಿ ಮೇಲೆ ಎರಡು ಬದಿ ಒರೆಸಿಕೊಳ್ಳಿ.
ಅಕ್ಕಿಯನ್ನು ಎರಡರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತೊಳೆದಿಡಿ.ಹಲಸಿನ ಹಣ್ಣನ್ನು ತುಂಡುಮಾಡಿ ಸೊಳೆ ಬಿಡಿಸಿ ಇಟ್ಟುಕೊಳ್ಳಿ.ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸೊಳೆಯನ್ನು ಹಾಕಿ ಗರ್ ಮಾಡಿ.ಸೊಳೆ ತುಂಡಾದರೆ ಸಾಕು.ನಣ್ಣಗಾಗುವುದು ಬೇಡ.ಹೀಗೆ ಸೊಳೆಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಬಾಣಲೆಗೆ ಹಾಕಿಕೊಳ್ಳಿ.ಬೆಲ್ಲ, ತೆಂಗಿನಕಾಯಿ ತುರಿಯೊಂದಿಗೆ ಕಾಯಿಸಿ.ಸ್ವಲ್ಪ ಗಟ್ಟಿಯಾದರೆ ಸಾಕು..
ಅಕ್ಕಿಯನ್ನು ಉಪ್ಪಿನೊಂದಿಗೆ ಗಟ್ಟಿಯಾಗಿ ರುಬ್ಬಿ.
ವಿಧಾನ ಒಂದು:-
ರುಬ್ಬಿದ ಅಕ್ಕಿಯ ಹಿಟ್ಟನ್ನು ಪಾತ್ರೆಗೆ ಹಾಕಿಟ್ಟುಕೊಳ್ಳಿ.ಅದಕ್ಕೆ ಕಾಯಿಸಿ ಪಾಕ ಮಾಡಿದ ಮಿಶ್ರಣವನ್ನು ಸೇರಿಸಿ.ಚೆನ್ನಾಗಿ ತಿರುವಿ.
ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಇಡಿ.
ಬಾಳೆಲೆಯ ಮೇಲೆ ಒಂದೆರಡು ಸೌಟು ಮಿಶ್ರಣವನ್ನು ಹಾಕಿ ಮಡಚಿ ಇಡ್ಲಿ ಪಾತ್ರೆಯೊಳಗಿಟ್ಟು ಹಬೆಯಲ್ಲಿ ಬೇಯಿಸಿ.
ವಿಧಾನ ಎರಡು:-
ಗಟ್ಟಿಯಾಗಿ ರುಬ್ಬಿದ ಒಂದು ಸೌಟು ಅಕ್ಕಿ ಹಿಟ್ಟನ್ನು ಬಾಳೆಲೆಯ ಮೇಲೆ ವೃತ್ತಾಕಾರವಾಗಿ ಸಾಮಾನ್ಯ ಗಾತ್ರದ ಚಪಾತಿಯಷ್ಟು ಹರಡಿ.ಅದರೊಳಗೆ ಮಧ್ಯದಲ್ಲಿ ಕಾಯಿಸಿದ ಹಲಸಿನ ಹಣ್ಣಿನ ಮಿಶ್ರಣವನ್ನು ಇಟ್ಟು ಮಡಚಿ ಹಬೆಯಲ್ಲಿ ಬೇಯಿಸಿ.
ಸುಮಾರು ಅರ್ಧ ಗಂಟೆಯವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿ ,ನಂತರ ಉರಿ ಮಧ್ಯಮ ಮಾಡಿಕೊಳ್ಳಬಹುದು.ಸುಮಾರು ಒಂದು ಗಂಟೆ ಬೇಯಿಸಬೇಕು.ಆಗ ಗೆಣಸಲೆ ಸಿದ್ಧ.
ತುಪ್ಪ ಎಣ್ಣೆ ಜೇನು ಚಟ್ನಿಯೊಂದಿಗೆ ಗೆಣಸಲೆಯನ್ನು ಸವಿಯಿರಿ.
ಈ ಗೆಣಸಲೆ ತಯಾರಿಕೆಯಲ್ಲಿ ಹಲವಾರು ವಿಧಾನಗಳಿವೆ.ಕೆಲವು ಕಡೆ ಹಲಸಿನ ಹಣ್ಣು ,ಬೆಲ್ಲ ,ತೆಂಗಿನಕಾಯಿತುರಿಯನ್ನು ಪಾಕ ಮಾಡದೆ ಬಳಸುತ್ತಾರೆ(ನೀರು ಬಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚು).ಅಳತೆಗಳೂ ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿರುತ್ತದೆ.ಕೆಲವರು ಅರಶಿನ ಎಲೆಯಲ್ಲೂ ,ಸಾಗುವಾನಿ ಎಲೆಯಲ್ಲೂ ಇದನ್ನು ಮಾಡುತ್ತಾರೆ.
ಹಲಸಿನ ಹಣ್ಣು ದೊರೆಯದೆ ಇರುವಂತಹ ಸಮಯದಲ್ಲೂ ಅಕ್ಕಿ, ತೆಂಗಿನಕಾಯಿ ತುರಿ ,ಬೆಲ್ಲ, ಉಪ್ಪು.. ಇವಿಷ್ಟು ಬಳಸಿ ಗೆಣಸಲೆಯನ್ನು ತಯಾರಿಸಬಹುದು.

ಹಲಸಿನ ಹಣ್ಣಿನ ಗುಳಿಯಪ್ಪ :-
ಬೇಕಾಗುವ ಸಾಮಗ್ರಿಗಳು:-
ಅಕ್ಕಿ_1 ಕಪ್, ಹಲಸಿನಹಣ್ಣಿನ ತುಂಡುಗಳು 2 ಕಪ್,ಬೆಲ್ಲ_1ಕಪ್,ತುಪ್ಪ ,ಏಲಕ್ಕಿ,ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:-
ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿಡಿ.ಚೆನ್ನಾಗಿ ತೊಳೆದು ನೀರು ಬಸಿಯಿರಿ.ಹಲಸಿನ ಹಣ್ಣಿನ ಸೊಳೆಗಳನ್ನು ಮಿಕ್ಸಿ ಯಲ್ಲಿ ಸಣ್ಣದಾಗಿ ತುಂಡು ಮಾಡಿಕೊಳ್ಳಿ.ಅಕ್ಕಿ ,ಬೆಲ್ಲ, ಏಲಕ್ಕಿ ಮಿಕ್ಸಿ ಯಲ್ಲಿ ಗಟ್ಟಿಯಾಗಿ ರುಬ್ಬಿಕೊಳ್ಳಿ.ಇದಕ್ಕೆ ಹಲಸಿನ ಹಣ್ಣಿನ ತುಂಡುಗಳನ್ನು ಬೆರೆಸಿ.ಗುಳಿಕಾವಲಿಯನ್ನು ಸ್ಟವ್ ಹಚ್ಚಿ ಇಡಿ.ಗುಳಿಕಾವಲಿಗೆಗೆ ತುಪ್ಪ ಚೆನ್ನಾಗಿ ಹಾಕಿ ಹಿಟ್ಟು ಹಾಕಿ.ಮುಚ್ಚಿಡಿ.ಬೆಂದಾಗ ಇನ್ನೊಂದು ಬದಿ ತಿರುವಿ ಬೇಯಿಸಿ.ಬಿಸಿಬಿಸಿಯಾದ ಹಲಸಿನ ಹಣ್ಣಿನ ಗುಳಿಯಪ್ಪ ಮನೆಮಂದಿಗೆಲ್ಲ ತಿನ್ನಲು ಕೊಡಿ.ಈ ಪಾಕಕ್ಕೆ ಕೆಲವರು ಏಲಕ್ಕಿ ಬದಲು ಎಳ್ಳು ಹಾಕುವ ಪದ್ಧತಿಯೂ ಇದೆ.

ಹಲಸಿನ ಹಣ್ಣಿನ ಬೆರಟಿ :-
ಹಲಸಿನ ಹಣ್ಣು ಸಿಗುವ ಸಮಯದಲ್ಲಿ ಅದನ್ನು ಸಂಗ್ರಹಿಸಿ ಹಾಳಾಗದಂತೆ ಇರಿಸುವ ವಿಧಾನವೇ ಬೆರಟಿ.ಹಲಸಿನ ಸೊಳೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.. ನುಣ್ಣಗಾಗಬೇಕೆಂದೇನೂ ಇಲ್ಲ.ನಂತರ ಬೆಲ್ಲ ಹಾಕಿ ಬಾಣಲೆಯಲ್ಲಿ ತೆಂಗಿನೆಣ್ಣೆ ಹಾಕುತ್ತಾ ಕಾಯಿಸಬೇಕು. ತೆಂಗಿನೆಣ್ಣೆಯ ಬದಲು ತುಪ್ಪವನ್ನೂ ಸಹ ಬಳಸಬಹುದು.ಹೀಗೇ ಕಾಯಿಸುತ್ತಾ ಪಾಕ ಗಟ್ಟಿಯಾಗಬೇಕು.ಒಂದೇ ದಿನ ಕಾಯಿಸಲು ಕಷ್ಟವಾದರೆ ದಿನವೂ ಸಣ್ಣ ಉರಿಯಲ್ಲಿ ಕಾಯಿಸಿ ಮೂರ್ನಾಲ್ಕು ದಿನದಲ್ಲಿ ಹದವಾಗಿ ಪಾಕ ಮಾಡಿಕೊಳ್ಳಬಹುದು.
ಇದನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟು (ತುಂಬಾ ಏರು ಪಾಕ ಮಾಡಿದರೆ ಹೊರಗಡೆಯೇ ಇಟ್ಟರೂ ಆರು ತಿಂಗಳ ತನಕ ಕೆಡುವುದಿಲ್ಲವಂತೆ
.ನಾನಷ್ಟು ಏರು ಪಾಕ ಮಾಡಿಲ್ಲ..) ಬೇಕಾದಾಗ ಗುಳಿಯಪ್ಪ,ಕಡುಬು ತಯಾರಿಸಬಹುದು..ಚಿಕ್ಕ ಉಂಡೆಗಳಾಗಿ ಮಾಡಿ ಹಾಗೆಯೇ ತಿನ್ನಬಹುದು.

ಹಲಸಿನಿಂದ ತಯಾರಿಸುವ ಪದಾರ್ಥಗಳು ಹಲವಾರು.ಹಲಸಿನ ಹಣ್ಣನ್ನು ಬಡವರ ಬಂಧು ಎಂದು ಕರೆಯುತ್ತಾರೆ.ಹಲಸಿನ ಹಣ್ಣು ಸೇವಿಸಿದರೆ ಸ್ವಲ್ಪ ಅನ್ನ ಕಡಿಮೆ ಸಾಕು ಎನ್ನುತ್ತಾರೆ ಹಿರಿಯರು.ಮಳೆಗಾಲದಲ್ಲಿ ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಹಲಸಿನ ಕಾಯಿ, ಹಣ್ಣು ಕೊರೆಯುವುದು, ಸ್ವಚ್ಛಗೊಳಿಸುವುದು ಜೊತೆ ಜೊತೆಗೆ ಹಾಡಿನ ಬಂಡಿ,ಶಬ್ದ ಬಂಡಿ ಆಡುವುದು ನಮ್ಮ ಬಾಲ್ಯದ ನೆನಪುಗಳ ತಿಜೋರಿಯಲ್ಲಿ ಇನ್ನೂ ಹಸಿರಾಗಿಯೇ ಇದೆ.
✍️... ಅನಿತಾ ಜಿ.ಕೆ.ಭಟ್.
04-07-2020.
Ruchi Ruchi adige 👌🏻👌🏻
ReplyDeleteಸೀಸನ್ ನಲ್ಲಿ ಸವಿಯಬೇಕಾದ ಆಡುಗೆಗಳು.. ಧನ್ಯವಾದಗಳು 💐🙏
Delete