ಬದನೆಕಾಯಿಯ ಹುಳಬಾಧೆಗೆ ಮದ್ದು
ಹಣ್ಣುತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಸುವುದು ಬಹಳ ಒಳ್ಳೆಯ ಅಭ್ಯಾಸ. ರಾಸಾಯನಿಕ ಗೊಬ್ಬರ ಬಳಸಿ ಬೆಳೆಯುವ ತರಕಾರಿಗಳಿಗಿಂತ ಸಾವಯವ ತರಕಾರಿಗಳು ಬಳಕೆಗೆ ಯೋಗ್ಯ, ಆರೋಗ್ಯಕರವೂ ಹೌದು.
ಫೇಸ್ಬುಕ್ ಮಿತ್ರರೊಬ್ಬರು ತಮ್ಮ ಕೈತೋಟದಲ್ಲಿ ಬದನೆ ಬೆಳೆದಿದ್ದಾರಂತೆ. ನಳನಳಿಸುತ್ತಾ ಬೆಳೆದ ಬದನೆಗಿಡದಲ್ಲಿ ಹತ್ತಾರು ಬದನೆಕಾಯಿಗಳು ನೇತಾಡತೊಡಗಿದವು. ಆರಂಭದಲ್ಲಿ ಚೆನ್ನಾಗಿದ್ದ ಕಾಯಿಗಳು ನಂತರ ಹುಳವನ್ನು ಉದರದೊಳಗೆ ಪೋಷಿಸುತ್ತಾ ಬೆಳೆದವು. ಪರಿಹಾರ ತಿಳಿಸಿ ಎಂದು 'ಕೈತೋಟ ಬಳಗ'ದಲ್ಲಿ ಕೇಳಿಕೊಂಡಿದ್ದರು.
ನಾನೇನೋ ಹೇಳಬೇಕೆಂದಿದ್ದೆ. ಆದರೂ ಮೌನವಹಿಸಿದೆ. ಫೇಸ್ಬುಕ್ಕಿಗೆ ಆಗ ತಾನೇ ಲಗ್ಗೆಯಿಟ್ಟಿದ್ದೆ. ಫೇಸ್ಬುಕ್ ಎಂದರೆ ಹಾಗೆ ಹೀಗೆ.. ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು.. ಎಂದು ಬಹಳಷ್ಟು ಮಂದಿಯ ಎಚ್ಚರಿಕೆಯ ನುಡಿ ಕೇಳಿದ್ದೆ.
ಸುಮ್ಮನೆ ನನಗೇಕೆ ಉಸಾಬರಿ ಅಂತ ನೋಡಿದರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆದರೂ ಪಟ್ಟುಬಿಡದ ಮಿತ್ರರು "ಅನುಭವಸ್ಥರು ಯಾರೂ ಇಲ್ವಾ ಕೈತೋಟ ಬಳಗದಲ್ಲಿ?" ಎನ್ನುತ್ತಾ ಗರಂ ಆದಾಗ.. ನಿಧಾನವಾಗಿ ಕವನ ರೂಪದಲ್ಲಿ ನಾನು ಬಳಸುವ ಸಾವಯವ ಕೀಟನಾಶಕವನ್ನು ವಿವರಿಸಿದೆ.. ಅವರಷ್ಟು ಅನುಭವಸ್ಥೆ ನಾನಲ್ಲ.. ಆದರೂ ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ನನ್ನದು..
ಪ್ರಶ್ನೆಗೆ ಉತ್ತರ ನೀಡಿದ್ದಾಯ್ತು. ಫಲ ಸಿಕ್ಕಿತೇ.. ನನಗೂ ತಿಳಿಯದು.. ಅಂದ ಹಾಗೆ ಆ ಪರಿಹಾರ ಏನು ಎಂಬುದನ್ನು ತಿಳಿಯಲು ನಿಮಗೂ ಕುತೂಹಲವೇ..ಹಾಗಾದರೆ ಕೇಳಿ...
ಹಿತ್ತಲ ಬದನೆ ಗಿಡ
ಫಲ ತುಂಬಿ ನಿಂತಾಗ
ದುಂಡು ಬದನೆಯ ಒಳಗೆ
ಹುಳಗಳ ಲಾಗ...||೧||
ಕೊರೆವ ಹುಳಗಳಿಗೆ
ಎರೆಯುತಲಿ ಮದ್ದು
ಸಾವಯವ ಕುಟನಾಶಕ
ಬಳಸಿ ಬೀಗೋಣ ಗೆದ್ದು..||೨||
ಗಿಡದ ಬುಡಕೆ ಕೊಡಿ
ಕೊಳೆಯಿಸಿ ಬೇವಿನಹಿಂಡಿ
ಆಗ ಓಡುವುದು ನೋಡಿ
ಹುಳಗಳಾ ಬಂಡಿ..||೩||
ಬೇವಿನೆಣ್ಣೆ ಶ್ಯಾಂಪು ನೀರ
ಮಿಶ್ರಣವ ಮಾಡಿ
ವಾರಕ್ಕೊಮ್ಮೆ ಸಂಜೆಯಲಿ
ಸಿಂಪಡಿಸಿ ನೋಡಿ...||೪||
ಬೆಳಗೆ ಬೇಗನೆ ಎದ್ದು
ಎಲೆಹನಿಯ ತೊಳೆದುಬಿಡಿ
ಮರೆತಿರೋ ಮತ್ತೆ
ಎಲೆಗಳು ಮುದುಡುವವು ಬಾಡಿ...||೫||
ಇಷ್ಟೆಲ್ಲಾ ಮಾಡಿನೋಡಿ
ಹೋಗದಿರೆ ಹುಳಗಳು ಓಡೋಡಿ
ಮತ್ತೆ ನನ್ನನು ಮಾತ್ರ ಬೈಯ್ಯಬೇಡಿ
ನಿಮ್ಮಷ್ಟು ಅನುಭವಿಯು ನಾನಲ್ಲ ನೋಡಿ...||೬||
💐💐💐💐
ಔಷಧ ತಯಾರಿಕೆ:-
#ಅರ್ಧ ಕೆಜಿ ಬೇವಿನಹಿಂಡಿಗೆ ನಾಲ್ಕರಿಂದ ಐದು ಲೀಟರ್ ನೀರು ಸೇರಿಸಿ ಕೊಳೆಯಲು ಬಿಡಬೇಕು.ದಿನವೂ ಮೂರು ಬಾರಿ ಆ ಮಿಶ್ರಣ ವನ್ನು ತಿರುಗಿಸುತ್ತಿರಬೇಕು. ತಿರುಗಿಸುವಾಗ ಒಂದೇ ಬದಿಗೆ ತಿರುಗಿಸಿ.ವಿರುದ್ಧ ದಿಕ್ಕಿನಲ್ಲಿ ತಿರುಗಿಸಬಾರದು. ಮೂರು ದಿನದ ನಂತರ ಒಂದು ಲೀಟರ್ ಆ ಮಿಶ್ರಣಕ್ಕೆ ಎರಡರಿಂದ ಮೂರು ಲೀಟರ್ ನೀರು ಬೆರೆಸಿ (ಸರಿಯಾಗಿ ತೆಳ್ಳಗಾಗುವಷ್ಟು, ಬೇಕಾದರೆ ಹೆಚ್ಚು ನೀರೂ ಬೆರೆಸಬಹುದು) ಗಿಡಗಳ ಬುಡ ಸಾಮಾನ್ಯ ಮೂರು ಇಂಚಿನಷ್ಟು ಬಿಟ್ಟು ಹಾಕಿ.. ನಂತರ ಗಿಡದ ಬುಡಕ್ಕೆ ನೀರುಣಿಸಿ..
ಉಳಿದಿರುವ ಮಿಶ್ರಣವನ್ನು ಎರಡು-ಮೂರು ದಿನಗಳ ಅಂತರದಲ್ಲಿ ಮತ್ತೆ ಇದೇ ರೀತಿ ಬಳಸಬಹುದು.
#ಒಂದು ಲೀಟರ್ ನೀರು- ಒಂದು ಚಮಚ ಬೇವಿನೆಣ್ಣೆ- ಎರಡು ಬಿಂದು ಶ್ಯಾಂಪೂ .... ಇಷ್ಟನ್ನು ಮಿಶ್ರ ಮಾಡಿ ಸಂಜೆಯ ಹೊತ್ತಿಗೆ ಗಿಡಗಳ ಮೇಲೆ ಸಿಂಪಡಿಸಿ. ಬೆಳಗ್ಗೆ ಗಿಡದ ಎಲೆಗಳ ಮೇಲೆ ನೀರು ಹಾಯಿಸಿ.
✍️... ಅನಿತಾ ಜಿ.ಕೆ.ಭಟ್.
09-04-2021.
ಇದನ್ನು ಯೂಟ್ಯೂಬ್ ನಲ್ಲಿ ನೋಡಲು ಕೆಳಗಿನ ಲಿಂಕ್ ಬಳಸಿ..👇
No comments:
Post a Comment