Saturday, 10 April 2021

ಬಣ್ಣದ ಕೊಡೆ

 


ಬಣ್ಣದ ಕೊಡೆ

ಅಪ್ಪನು ತಂದಿಹ ಬಣ್ಣದ ಕೊಡೆಯನು
ಹಿಡಿಯುತ ಶಾಲೆಗೆ ಹೊರಟಿಹೆನು
ಎಂಟುಕಡ್ಡಿಯ ನಂಟಿನ ಅಂಚಲಿ
ಕಂಡೆನು ದುಂಡನೆ ಮುತ್ತುಗಳ||೧||

ಬಟ್ಟೆಯ ತುಂಬಾ ನಗುತಿದೆ ಗೊಂಬೆ
ನೋಡುತ ನನ್ನನೆ ಪ್ರತಿಕ್ಷಣವು
ಉದ್ದನೆ ಟೋಪಿಯು ಒದ್ದೆಯಾದರೂ
ಬೀಗಿದೆ ನಾನೇ ಎತ್ತರವು||೨||

ಅಕ್ಷರದಂತಹ ಚಂದದ ಹಿಡಿಕೆ
ಆಟಿಕೆಯದಕೆಲ್ಲಿದೆ ಸಾಟಿ
ಉಂಗುರ ರಚನೆಲಿ ನೇಲುತಲಿಹುದು
ನನ್ನಯ ಪ್ರೀತಿಯ ಸೀಟಿ||೩||

ಗುಂಡಿಯ ಅದುಮಲು ಅರಳುವುದು
ಸುಂದರ ಹೂವಿನ ಹಾಗೆ
ಬಿಡಿಸಿ ಮಡಚಿ ಮಾಡುವುದೆಂದರೆ
ಬಲು ಆನಂದವು ನನಗೆ||೪||

ಮಳೆಯದು ಬರಲು ಜೋರಾಗಿ
ಕೊಡೆಹಿಡಿಯುತ ಸಾಗುವೆ ಮುಂದೆ
ರಭಸದಿ ಗಾಳಿಯು ಬೀಸುತಿದೆ
ಕಡ್ಡಿಗಳೆಲ್ಲವು ಬಾಗಿವೆ ಹಿಂದೆ||೫||

ಕಾಲಲಿ ಗುಳ್ಳೆಯ ಒಡೆಯುತ ಆಡುವೆ
ಕೊಡೆಯೊಳು ಆಗದು ತಲೆ ಒದ್ದೆ
ಪಾಠಿಯ ಚೀಲಕೆ ನೀರದು ಬಿದ್ದರೆ
ಪುಸ್ತಕ ಚಂಡಿಯ ಮುದ್ದೆ||೬||

ಒದ್ದೆಯ ಕೊಡೆಯನು ಒಣಗಲು
ಇಡುವೆ ಜಗಲಿಯ ಆ ಬದಿಗೆ
ಗಾಳಿಗೆ ಪುರ್ರನೆ ಹಾರಲು ಬಿಡದೆ
ಮಡಚಿಡುವೆನು ನಾನೇ ಒಳಗೆ||೭||

✍️... ಅನಿತಾ ಜಿ.ಕೆ.ಭಟ್.
11-04-2021.




No comments:

Post a Comment