#ಬಾಗುತಿರು ಹಿರಿಯರಿಗೆ
ಹಿತವ ಬಯಸುವರಾರು ಹೊಸಕಿಹಾಕುವರಾರು
ಅರಿಯದೆ ಹೋದೆಯಾ ಮೂಢನಾಗಿ
ಒಳಿತು ಬಯಸುವ ಹೃದಯ ಸನಿಹವಿರುತಿರಲು
ಬಾಗುತಿರು ಹಿರಿಯರಿಗೆ ವಿಧೇಯನಾಗಿ||೧||
ಅಹಮಿಕೆಯ ಕೋಟೆಯೊಳು ತಾನೆಂದು
ಬೀಗದಿರು ಹಸನಾಗೆ ಬೆವರಿಳಿಸಿದವರ ಮರೆತು
ನಿನ್ನ ಪದವಿಯಲವರ ವರುಷಗಳ ಕನಸಿಹುದು
ತ್ಯಾಗವದು ಎಳೆಯರಿಗೆ ಬಾಳಿದರ ಅರಿತು||೨||
ಮುಂದಿರುವ ಗುರಿಗಿಂದು ಗುರುವಾಗಿ ನಿಂದಿಹರು
ಬಾರದೆಲೆ ಕಷ್ಟಗಳು ಸರಮಾಲೆಯಂತೆ
ಬಾಳಮುಸ್ಸಂಜೆಯಲಿ ತುಸುಪ್ರೀತಿಯನು ತೋರು
ಹರಸುವರು ಮನದುಂಬಿ ಮಗುವಿನಂತೆ||೩||
ಬಿಂಕಬಿಗುಮಾನಬಿಡು ಬಿಗಿಗೊಳಿಸು ಬಂಧವನು
ಜನನಿಜನಕರ ಸೇವೆ ಪುಣ್ಯತಮವು
ಶಂಕರನು ಮೆಚ್ಚುವನು ಶರಣೆಂಬ ಚರಣವನು
ಮನೆಯೆ ಮಂದಿರವಾಗಿ ಸಕಲಗೆಲುವು||೪||
✍️... ಅನಿತಾ ಜಿ.ಕೆ.ಭಟ್.
19-07-2021.
👏👏
ReplyDeleteಧನ್ಯವಾದಗಳು 💐🙏
Delete