#ನಮ್ಮವ್ವ
ಕಟ್ಟಿಗೆ ಒಲೆಯುರಿಸಿ ರೊಟ್ಟಿಯ ತಟ್ಟಿ
ತಟ್ಟೆಯನಿರಿಸಿ ಬಡಿಸ್ತಾಳ| ನಮ್ಮವ್ವ
ಹೊಟ್ಟೆ ತುಂಬಲು ತೃಪ್ತಿ ಪಡುತಾಳ||೧||
ಮಣ್ಣಿನ ಮಡಿಕೆಯಲಿ ತಣ್ಣನೆ ನೀರಿರಿಸಿ
ಉಣ್ಣಲು ಅನ್ನವ ಮಾಡುತಾಳ| ನಮ್ಮವ್ವ
ಬಣ್ಣಿಸಿ ಕಥೆಯ ಹೇಳುತಾಳ||೨||
ಹೊಗೆ ಹಬ್ಬಿ ನಿಂದರೂ ಬೇಗೆಲಿ ಮಿಂದರೂ
ನಗುನಗುತಾ ಮಾತನಾಡುತಾಳ| ನಮ್ಮವ್ವ
ಲಗುಬಗೆಯಿಂದಲೆ ದುಡೀತಾಳ||೩||
ನೆಲವು ಸೆಗಣಿಯದಿರಲಿ ಗೋಡೆ ಇಟ್ಟಿಗೆಯಿರಲಿ
ಒಲವಿಂದ ಬದುಕಿ ಬಾಳತಾಳ| ನಮ್ಮವ್ವ
ಛಲದಿಂದ ಮುಪ್ಪನ್ನೂ ಎದುರಿಸ್ಯಾಳ||೪||
ದುಡಿಯುವ ಮನಸಿರಲು ವಯಸಿನ ಹಂಗ್ಯಾಕ
ಕಾಡದು ಕಾಯಿಲೆ ನೂರೆಂಟು| ನಮ್ಮವ್ವ
ಹುಡುಗ ಹುಡುಗೀರನೆಲ್ಲ ಮೀರಿಸ್ತಾಳ||೫||
ಕಪ್ಪಾದ ಪಾತ್ರೆಯ ಸಿಪ್ಪೆಲಿ ಉಜ್ಜುಜ್ಜಿ ನೀರೆರೆದು
ಒಪ್ಪಾನೆ ಫಳಫಳ ಮಾಡುತಾಳ| ನಮ್ಮವ್ವ
ಉಪ್ಹುಳಿಖಾರ ಜೀವ್ನಕ್ಹದವಾಗಿ ಬೆರೆಸ್ಯಾಳ||೬||
ಶಿವನಿಂದ ಈ ಜನುಮ ಅವನದೆ ಆಟವು
ಬವಣೆಯು ಸುಖವೂ ಶಿವಲೀಲೆ| ನಮ್ಮವ್ವ
ದೇವಗೆ ಧನ್ಯತೆ ಹೇಳ್ತಾಳ||೭||
✍️... ಅನಿತಾ ಜಿ.ಕೆ.ಭಟ್.
07-03-2022.
#ಮಾಮ್ಸ್‌ಪ್ರೆಸೊ ದಿನದ ಚಿತ್ರಕ್ಕೆ ಬರೆದ ಸಾಲುಗಳು...
#momspressokannadashortstories
👌👌👌👏👏
ReplyDeleteಧನ್ಯವಾದಗಳು 💐🙏
Delete