"ನೋಡು... ನನ್ನ ಕತ್ತಿನಲ್ಲಿರುವ ಆಭರಣ ಎಷ್ಟು ಫಳಫಳ ಹೊಳೆಯುತ್ತಿದೆ. ನಿನ್ನದು ಸಂತೆಯದ್ದರಂತೆ ಕಾಣುತ್ತಿದೆ. ಹೊಳಪೂ ಇಲ್ಲ..ಏನೂ ಇಲ್ಲ.."
"ನನ್ನದು ಸಂತೆಯದ್ದಲ್ಲ. ಚಿನ್ನದ್ದೇ.. ನನಗೆ ಹೊಳಪೂ ಕಾಣುತ್ತದೆ. ಅಷ್ಟು ಸಾಕು ನನಗೆ" ಹೇಳಿದಳಾಗ ನಿರ್ಲಿಪ್ತಳಾಗಿ ನಿವೇದಿತಾ.
ರತ್ನಮ್ಮ ಮತ್ತಷ್ಟು ಸೊಸೆಯ ಹತ್ತಿರ ಬಗ್ಗಿ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎತ್ತಿ ಹಿಡಿದು ಸೊಸೆಯ ಕತ್ತಿನಲ್ಲಿದ್ದ ಆಭರಣದ ಹತ್ತಿರ ಹಿಡಿದು "ನೋಡು.. ಈಗ ಸರೀ ನೋಡು.. ನನ್ನದು ಹೇಗೆ ಝಗಮಗಿಸುತ್ತಿದೆ.. ಇದು ನಿನ್ನದು ಸ್ವಲ್ಪವೂ ಹೊಳೆಯುವುದಿಲ್ಲ. ಹಾಗೇ ಕಾಲ್ಗೆಜ್ಜೆ, ಕಾಲುಂಗುರಗಳೂ ಸಹ ಬೆಳ್ಳಿಯದ್ದೆಂದು ಹೇಳುವಂತೆಯೇ ಇಲ್ಲ.." ಎನ್ನುತ್ತಾ ವಾದಿಸಿದರು. ತನ್ನ ಶರೀರ ಕಪ್ಪು ಬಣ್ಣವಾದರೂ; ಚಿನ್ನದ, ಬೆಳ್ಳಿಯ ಆಭರಣಗಳು ಹೊಳೆಯುವುದು ನನ್ನ ಮೈಮೇಲೆಯೇ ಎಂದು ಹೇಳಿ ತೋರಿಸಿ, ತಾತ್ಸಾರ ಮಾಡುವ ಹುಚ್ಚುಹಠದಲ್ಲಿದ್ದರು ರತ್ನಮ್ಮ.
ನಿವೇದಿತಾಳಿಗೂ ಹೇಳಬೇಕೆನಿಸಿತು " ನೀವು ವಾರಕ್ಕೊಮ್ಮೆ ಕರಿಮಣಿ ಸರವನ್ನು, ಎಲ್ಲಿಯಾದರೂ ಹೋಗಿ ಬಂದರೆ ಚಿನ್ನದ ಆಭರಣಗಳನ್ನು ಅಂಟುವಾಳ ಕಾಯಿ ಹಾಕಿ ತೊಳೆಯುವ ಕಾರಣ ಅದು ಹೊಳಪು ಕಾಣುವುದು. ನನಗೆ ಸರಿಯಾಗಿ ಮೈ ತಿಕ್ಕಿ ಸ್ನಾನಮಾಡಿ ಬರಲೂ ಮಕ್ಕಳು ಬಿಡುತ್ತಿಲ್ಲ. ಮಕ್ಕಳಿಬ್ಬರೂ ಚಿಕ್ಕವರು. ಮಗಳಿಗೆ ನಾಲ್ಕು ವರ್ಷ, ಮಗನಿಗೆ ಒಂದು ವರ್ಷ. ಮಗನನ್ನು ಸ್ನಾನಮಾಡಿಸಿ ಮಲಗಿಸಿ, ಅರ್ಧಂಬರ್ಧ ಆದ ಕೆಲಸಗಳನ್ನು ಬೇಗಬೇಗನೆ ಮಾಡಿ ಮುಗಿಸಿ ಸ್ನಾನಕ್ಕೆ ಹೊರಟರೆ ಸ್ನಾನ ಮುಗಿಸುವ ಮುನ್ನವೇ ಅಮ್ಮಾ.. ಎನ್ನುವ ರಾಗ ಕೇಳುತ್ತದೆ. ನಿದ್ದೆಯಿಂದೆದ್ದಾಗ ಯಾರೂ ಆಗದು. ಅಮ್ಮನೇ ಆಗಬೇಕು. ಆದಷ್ಟು ಬೇಗ ಸ್ನಾನ ಮುಗಿಸಿ ಓಡಿ ಬಂದು ಮಗನನ್ನು ಎತ್ತಿಕೊಂಡು ಹಾಲೂಡಿಸಿದರೆಮತ್ತೆ ಮಗುವಿನ ಹಠ ಕಡಿಮೆಯಾಗುವುದು. ನನಗೀಗ ಚಿನ್ನವನ್ನು ತಿಕ್ಕಿ ಫಳಫಳ ಹೊಳೆಯುವಂತೆ ಮಾಡುವುದಕ್ಕಿಂತ ಮಕ್ಕಳನ್ನು ಚೆನ್ನಾಗಿ ಸಾಕಿ ಬೆಳೆಸುವುದೇ ಮುಖ್ಯ." ಅಂತ.. ಆದರೆ ಹೇಳಲಿಲ್ಲ. ನಾಲಿಗೆಯವರೆಗೆ ಬಂದ ಮಾತುಗಳನ್ನು ಅವಡುಗಚ್ಚಿ ತಡೆಹಿಡಿದಳು. ಸುಮ್ಮನೆ ಎದುರು ಮಾತನಾಡಿ ಮಾತಿಗೆ ಮಾತು ಬೆಳೆಸುವುದು ಯಾಕೆ ಎಂದು. ರತ್ನಮ್ಮ ಸುಮ್ಮನಿರದೆ ಮಗನ ಬಳಿ ತೋರಿಸಿ " ನಿವೇದಿತಾ ಕೊರಳಿಗೆ ಚಿನ್ನ ಹಾಕಿಕೊಳ್ಳುವುದು, ಕಾಲ್ಗೆಜ್ಜೆ, ಕಾಲುಂಗುರ ತೊಡುವುದು ಬರೀ ದಂಡ.. ಹೊಳೆಯುವುದೇಯಿಲ್ಲ" ಅಮ್ಮ ಹೇಳಿದಾಗ ನಕ್ಕು ತಲೆತಗ್ಗಿಸಿ ಅಲ್ಲಿಂದ ಹೊರನಡೆದ ಆಕಾಶ.
ನಾನು ಹೀಗೆ ಸೊಸೆಯ ಶಾರೀರಿಕ ದೌರ್ಬಲ್ಯ, ಕೆಲಸದಲ್ಲಿರುವ ಕುಂದುಕೊರತೆಗಳ ಮಗನ ಬಳಿ ಹೇಳದಿದ್ದರೆ ಮಗ ಪತ್ನಿಯನ್ನೇ ತಲೆಯಲ್ಲಿ ಹೊತ್ತು ಮೆರೆಸಿಯಾನು. ಮೊದಲೆಲ್ಲ ದಿನಕ್ಕೆ ನಾಲ್ಕು ಬಾರಿ ಅಮ್ಮಾ.. ಅಮ್ಮಾ.. ಹೇಳುತ್ತಿದ್ದವನು ಈಗ ನಿವೀ..ನಿವೀ.. ಹೇಳಿಕೊಂಡು ಈ ಚೆಂದುಳ್ಳಿ ಚೆಲುವೆಯ ಹಿಂದೆಯೇ ತಿರುಗುವುದೇನು..! ಕಿಲಕಿಲ ನಗುವುದೇನು..! ನನಗೆ ಒಂದು ಉಪಕಾರವನ್ನೂ ಮಾಡದವ ಅವಳಿಗೆ ಸಹಕರಿಸುವುದೇನು..! ಅಡುಗೆಮನೆಯಲ್ಲಿ ಮೈಗೆ ಮೈ ತಾಟಿಸಿಕೊಂಡೇ ಇರುವುದು. ಅವಳಾಡಿಸಿದಂತೆ ಆಡುತ್ತಾನೆ. ನಾನು ಸುಮ್ಮನೆ ಇದ್ದು ಹೀಗೆ ಮುಂದುವರಿಯಲು ಬಿಟ್ಟರೆ ಮತ್ತೆ ಈ ಮನೆಯಲ್ಲಿ ನನಗೆ ಬೆಲೆಯೇ ಇರದು. ಇವರಿಗೆ ನನ್ನ ಮಾತೆಂದರೆ ಕಾಲ ಕಸದಿಂದ ಕಡೆ. ಎಂದು ಯೋಚಿಸುತ್ತಾ ಕಸಿಗುಲಾಬಿಯನ್ನು ಕೊಯ್ಯಲು ಹೋದರು ರತ್ನಮ್ಮ.
ರೂಮಿನೊಳಗೆ ಗಂಡ-ಹೆಂಡತಿ ಇಬ್ಬರೂ ಮದುವೆಗೆ ಹೊರಟುಕೊಂಡಿರುವಾಗ ಒಳಗೆ ಬಂದು ನನ್ನೆದುರೇ ನನ್ನನ್ನು ಇಷ್ಟು ತಾತ್ಸಾರ ಮಾಡುತ್ತಾರಲ್ಲ ಅತ್ತೆ.. ಹಾಗೆಲ್ಲ ಅನ್ನಬಾರದು ಎಂದು ಮಾತಾದರೂ ಹೇಳಬಾರದಾ ಗಂಡನೆನಿಸಿಕೊಂಡವರಿಗೆ.. ಅಮ್ಮ ಕಣ್ಣಿಂದ ದೂರಾದ ಕೂಡಲೇ ನಿವೀ..ಬಂಗಾರಿ..ಸಿಂಗಾರಿ... ಹೇಳಿಕೊಂಡು ಸೆರಗು ಹಿಡಿದು ಬರುತ್ತಾರೆ. ಎಂಥಾ ಹೊಗಳಿಕೆ!! ಬೆಣ್ಣೆ ಮಾತುಗಳು..!! ತನ್ನ ಬಯಕೆ ತೀರುವವರೆಗೆ ತೋರಿಸುವುದು ನಾಟಕೀಯ ಪ್ರೀತಿಯಾ ಹಾಗಾದರೆ.. ಅದರಲ್ಲೂ ಸ್ವಾರ್ಥವಾ..
ನಿಜವಾದ ಪ್ರೀತಿ ಇದ್ದರೆ ಹೀಗಿರುವ ಮಾತು ಕೇಳಿದಾಗಲೂ ಬಾಯಿ ಮುಚ್ಚಿ ನಡೆಯುವುದೇಕೆ..? ಅದೇ ನಾನೆಲ್ಲಿಯಾದರೂ ಅತ್ತೆಯ ರೂಪದ ವಿಷಯದಲ್ಲಿ, ಶಾರೀರಿಕ ವಿಷಯದಲ್ಲಿ ಕೊಂಕು ಆಡಿದ್ದೇನಾ.. ಆದರೂ ನನಗೆ ಮಾತ್ರ ಕೊಂಕು ಮಾತುಗಳನ್ನು ಕೇಳುವ ದೌರ್ಭಾಗ್ಯ... ಎಂದುಕೊಂಡು ಬೇಸರದಿಂದಲೇ ಮದುವೆಗೆ ಹೊರಟಳು ನಿವೇದಿತಾ..
"ಇಕೋ.. ನಿವೇದಿತಾ..ಕಸಿಗುಲಾಬಿ.." ಹೇಳಿಕೊಂಡು ರೂಮಿನೊಳಗೆ ಪುನಃ ನುಗ್ಗಿದರು ರತ್ನಮ್ಮ.
"ಇಕೋ.. ನಿವೇದಿತಾ.. ಈ ಹೂವು ಮುಡಿದು ನನ್ನ ಸೀರೆ ನೆರಿಗೆ ಹಿಡಿದು ಪಿನ್ ಹಾಕು, ಸೆರಗು ಸಣ್ಣ ಮಾಡು ನೀನು ಉಡುವಂತೆ.."
ಅಬ್ಬಾ..ಇವರೇ..!! ಇದಕ್ಕೆಲ್ಲಾ ನಾನು ಬೇಕು.. ಮತ್ತೆ ಕೊಂಕು.. ಅಂದುಕೊಳ್ಳುತ್ತಾ ಸೆರಗು ಹಾಕಿದಳು. ನೆರಿಗೆ ಹಿಡಿದಳು. ನಿವೇದಿತಾಳಿಗೆ ಈಗ ಅತ್ತೆಯ ಕಡುಗಪ್ಪು ಬಣ್ಣ ಕಂಡು ನಿಮ್ಮ ಮೈ ಎಷ್ಟು ಕಪ್ಪಿದೆ. ನನ್ನ ಮೈ ಬೆಳ್ಳಗಿದೆ... ಅಂತ ಹೇಳುವಂತಾಯಿತು... ಆದರೂ ಹೇಳದೆ ಉಳಿದಳು. ಏಕೆಂದರೆ ಮೈ ಬಣ್ಣ ಪ್ರಕೃತಿದತ್ತವಾಗಿರುವುದು. ಆದರೆ ಸದ್ಗುಣ ನಾವೇ ರೂಢಿಸಿಕೊಳ್ಳುವುದು. ಚುಚ್ಚಿ ಮಾತಾಡಿ ನನ್ನ ನಾಲಿಗೆಯೇಕೆ ಕೆಡಿಸಿಕೊಳ್ಳಲಿ...? ಎಂದು ತನಗೆ ತಾನೇ ಬುದ್ಧಿಹೇಳಿಕೊಂಡಳು.
ರತ್ನಮ್ಮ ಮುಖಕ್ಕೆ ಧಾರಾಳವಾಗಿ ಪಾಂಡ್ಸ್ ಪೌಡರ್ ಮೆತ್ತಿಕೊಂಡು ನನಗೆ ಹೊರಟಾಯಿತು ಎಂದು ಎರಡೆರಡು ಸಲ ಚಾವಡಿಯಲ್ಲಿ ನೇತು ಹಾಕಿರುವ ಕನ್ನಡಿಯಲ್ಲಿ ಮುಖ ನೋಡಿಕೊಂಡರು. ಪಟ್ಟೆ ಸೀರೆಯುಟ್ಟು ಹೊರಟಾಗ ನನ್ನನ್ನು ಚಂದ ಕಾಣುತ್ತದೆ ಎಂದು ರಾಗವೆಳೆದರು. ಯಕ್ಷಗಾನದ ವೇಷದಂತೆ ಕಾಣುತ್ತದೆ ಎಂದು ಹೇಳಲು ಬಾಯಿ ತೆಗೆದ ನಿವೇದಿತಾ.. ಯಾವತ್ತೂ ಕಂಡದ್ದನ್ನು ಕಂಡಂತೆ ಹೇಳಬಾರದು ಎಂದು ಅಮ್ಮ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೊಂಡು ಸುಮ್ಮನಾದಳು.
ಮನೆಯಂಗಳದಿಂದಲೇ ಜೀಪು ಹತ್ತಿ ಹೊರಟರು. ಹತ್ತಿರದ ಮನೆಯ ಸವಿತಕ್ಕನೂ ಬರುತ್ತೇನೆ ಎಂದ ಕಾರಣ ಅವರ ಮನೆಯ ಸಮೀಪ ಜೀಪು ನಿಲ್ಲಿಸಿ ಅವರನ್ನೂ ಹತ್ತಿಸಿಕೊಂಡರು. ಜೀಪಿನ ಎದುರಿನ ಸೀಟಿನಲ್ಲಿ ಆಕಾಶನೂ ಅವರಪ್ಪನೂ ಕುಳಿತಿದ್ದರು. ಹಿಂದೆ ಎದುರು ಬದುರು ಸೀಟಿನಲ್ಲಿ ಒಂದರಲ್ಲಿ ನಿವೇದಿತಾ, ಮಗಳು, ಸವಿತಕ್ಕ ಕುಳಿತರೆ; ಇನ್ನೊಂದರಲ್ಲಿ ರತ್ನಮ್ಮ ಕುಳಿತು ಸೊಸೆಯ ಕೈಯಲ್ಲಿದ್ದ ಒಂದು ವರುಷದ ಮಗುವನ್ನು ಎಳೆದು ತನ್ನ ತೊಡೆಯ ಮೇಲೆ ಕೂರಿಸಿಕೊಂಡರು. ಮಗು ಅಮ್ಮನ ಹತ್ತಿರ ಬರುವೆನೆಂದು ಕೊಸರಿಕೊಂಡರೂ ಬಿಡದೆ, ಮತ್ತೆ ಅವನನ್ನು ಹೊಟ್ಟೆಗೆ ಅವುಚಿ ಹಿಡಿದುಕೊಂಡರು. ಹಿಡಿದುಕೊಂಡು ಒಮ್ಮೆ ಸವಿತಕ್ಕನ ಮುಖ ಇನ್ನೊಮ್ಮೆ ನಿವೇದಿತಾಳ ಮುಖ ನೋಡಿದರು. ಸವಿತಕ್ಕನೆದುರು ನಾನು ಕಪ್ಪಿದ್ದರೂ ನನ್ನ ಮೊಮ್ಮಗ ಬೆಳ್ಳಗೇ ಇದ್ದಾನೆ ನೋಡು ಹೇಳುವ ಅರ್ಥದ ನೋಟ ಬೀರಿಕೊಂಡಿದ್ದುದು ಗೊತ್ತಾಗದೆ ಇರಲಿಲ್ಲ ನಿವೇದಿತಾಗೆ.. ಅವಳಿಗೊಮ್ಮೆ ಕರುಳು ಚುರುಕ್ ಎಂದಿತು. ಮನಸು ಯೋಚನೆಗೆ ಜಾರಿತು.
ಇವರಿಗೆ ನಾನು ಹೆತ್ತ ಮಗು ಬೇಕು.. ಬಿಳೀ ಎನ್ನುತ್ತಾ ಜಂಭಕೊಚ್ಚಿಕೊಳ್ಳಲು. ಆದರೆ ನಾನು.. ನನ್ನನ್ನು ನಿನ್ನ ಚಿನ್ನ, ಬೆಳ್ಳಿ ಆಭರಣಗಳು ಕಪ್ಪಾಗುತ್ತದೆ, ಕೆನ್ನೆ ಎತ್ತರ, ಹೆತ್ತ ಮೇಲೆ ಆನೆಯಂತಾಗಿದ್ದೀಯಾ.. ನನ್ನಣ್ಣನ ಮಗಳು ಧೃತಿ ಹೆತ್ತ ಮೇಲೆ ದಪ್ಪವೇ ಆಗಲಿಲ್ಲ.. ಮದುವೆಯಾಗದ ಯುವತಿಯಂತೆಯೇ ಇದ್ದಾಳೆ. ಹೇಳಿಕೊಂಡು ಯಾವಾಗಲೂ ಕೊಂಕು ಆಡುವುದೇ ಆಯಿತು. ನೆರೆಹೊರೆಯ ಹೆಣ್ಣುಮಕ್ಕಳು ಕೆಲವು ಜನ ಹೇಳಿಕೊಂಡಿದ್ದರು ನಿನ್ನ ಅತ್ತೆ ಹೇಗಿರುವ ಆಯ್ಕೆಯ ಜನ ಗೊತ್ತಾ.. "ಕೂಸಿನ ಜಾತಕ ಬಂದಾಗ ಮೊದಲು ಅದರಲ್ಲಿದ್ದ ಪಟ ನೋಡಿ, ಹುಡುಗಿ ಬಿಳಿಯೋ ಕಪ್ಪೋ.. ಎಂದು ಮೊದಲು ನೋಡಿಯಾರು. ಸ್ವಲ್ಪ ಕಪ್ಪು ಕಂಡರೂ ಜಾತಕ ಪಟ ವಾಪಾಸ್...!! ಬಿಳಿಬಣ್ಣದ ಹುಡುಗಿಯನ್ನೇ ಹುಡುಕಿ, ಜಾತಕ ತೋರಿಸಿ, ಹೊಂದಾಣಿಕೆ ಆದದ್ದರಲ್ಲೂ , ಹುಡುಗಿ ನೋಡಿ ಚಂದವಿಲ್ಲವೆಂದು ಮೂರು ಹುಡುಗಿಯರನ್ನು ಬಿಟ್ಟು ನಿನ್ನನ್ನು ಒಪ್ಪಿಗೆ ಆದದ್ದು. ಅಮ್ಮ ಒಪ್ಪಿದರೆ ಮಾತ್ರ ಮಗ ಹೂಂ..ಎನ್ನುತ್ತಿದ್ದುದು" ಎಂದು. ಹಾಗಾದರೆ ಇಷ್ಟೆಲ್ಲಾ ಆಯ್ದು ಮದುವೆ ಮಾಡಿ ಕರೆದುಕೊಂಡು ಬಂದ ಮೇಲೂ ಹೀಗೆ ಕೊರತೆಗಳನ್ನು ಹುಡುಕಿ ಆಡುವುದಾ.. ದೇವಾ ಇಂತಹವರಿಗೆ ಯಾವಾಗಪ್ಪಾ ಮನುಷ್ಯತ್ವ ಬರುವುದು.. ಸೊಸೆಯೂ ನನ್ನಂತೆಯೇ ಒಂದು ಜೀವ ಎಂದು ಭಾವಿಸುವುದು..
ಚಿಕ್ಕವಳಿದ್ದಾಗ ಅಮ್ಮ ಹೇಳಿಕೊಂಡಿದ್ದ ನೆನಪು. ಕೆಲವು ಶರೀರದಲ್ಲಿ ಬೆಳ್ಳಿ ಕಪ್ಪಗಾಗುತ್ತದೆ ಕಪ್ಪಾದರೆ ಒಳ್ಳೆಯದಂತೆ ಎಂದು. ಹಾಗೆಯೇ ಚಿನ್ನ ಸಹ ಕಪ್ಪು ಕಾಣುತ್ತೋ ಏನೋ.. ಆದರೆ ಅದನ್ನೇ ಎತ್ತಿ ಹಿಡಿದು ಯಾರು ಇದುವರೆಗೆ ಆಡಿಲ್ಲ. ಆದರೆ ಮದುವೆ ಆದಮೇಲೆ ಸೊಸೆಯ ಸಣ್ಣಪುಟ್ಟ ವಿಷಯಗಳು ದೊಡ್ಡ ಕೊರತೆಯೇ. ತಮಗೂ ಕುಂದು ಕೊರತೆಗಳು ಇದ್ದು ತಾವೂ ಪರಿಪೂರ್ಣರಲ್ಲ ಎನ್ನುವುದನ್ನೇ ಮರೆತು ಆಡುವಾಗ ಆಗುವ ನೋವಿನೊಂದಿಗೆ ಬದುಕುವುದು ಅನಿವಾರ್ಯ ಎಂದು ಸಮಾಧಾನ ಹೇಳಿತ್ತು ನಿವೇದಿತಾಳ ಬುದ್ಧಿ.
ನಿವೇದಿತಾ ಎಂಜಿನಿಯರಿಂಗ್ ಪದವೀಧರೆ. ಕೆಲವು ಸಮಯ ಕಂಪೆನಿಯಲ್ಲಿ ಕೆಲಸ ಮಾಡಿದ ಅನುಭವವಿತ್ತು. ಮಕ್ಕಳಾದ ಮೇಲೆ ತಾಯ್ತನದ ಜವಾಬ್ದಾರಿ ಹೊತ್ತು ಮಕ್ಕಳನ್ನು ಪ್ರೀತಿಯಲ್ಲಿ ಕಾಳಜಿಯಲ್ಲಿ ನೋಡಿಕೊಳ್ಳಬೇಕು ಎಂದು ಉದ್ಯೋಗವನ್ನು ತೊರೆದು ಮನೆಯಲ್ಲಿ ಕೂತಿದ್ದಳು. ದಿನವಿಡೀ ಬಿಡುವಿಲ್ಲದಂತೆ ದುಡಿಯುತ್ತಿದ್ದಳು. ಅತ್ತೆಯ ಕೊಂಕು ಮಾತು, ತಾತ್ಸಾರದ ನೋಟ ತಡೆದುಕೊಳ್ಳಲು ಕಷ್ಟವಾದಾಗ ನಿವೇದಿತಾಳ ಒಳಗಿದ್ದ ಆತ್ಮವಿಶ್ವಾಸವೇ ಅವಳಲ್ಲಿ ಧೈರ್ಯ ತುಂಬಿತ್ತು. ಯಾರು ಏನೇ ಹೇಳಲಿ ನಾನು ಇರುವುದು ಹೀಗೆ. ನನ್ನ ಶರೀರವೇ ಹೀಗೆ. ಶರೀರದ ಲಕ್ಷಣ ಸೃಷ್ಟಿಸಿದ ದೇವರ ಕೈಯಲ್ಲಿದೆ. ನನ್ನ ದೇಹವನ್ನು ನಾನು ಪ್ರೀತಿಸುತ್ತಾ, ನನ್ನ ಪತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು, ನನಗೆ ತೃಪ್ತಿ ಆಗುವ ರೀತಿಯಲ್ಲಿ ಬದುಕುತ್ತೇನೆಯೇ ವಿನಃ ಇನ್ನೊಬ್ಬರನ್ನು ಮೆಚ್ಚಿಸಲೆಂದೇ ಬದುಕುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿಕೊಂಡಳು. ಯೋಚನೆಯ ಸುಳಿಯಲ್ಲಿ ಕಣ್ಣಂಚು ಒದ್ದೆ ಆಗುವಾಗ ಮಗ "ಅಮ್ಮಾ.." ಎಂದಾಗ ವಾಸ್ತವಕ್ಕೆ ಬಂದಳು ನಿವೇದಿತಾ. ಮಗ ಹರ್ಷ ಅಜ್ಜಿಯ ಬಿಗಿ ಹಿಡಿತದಿಂದ ಬಿಡಿಸಿಕೊಂಡು ಬಂದು ಅಮ್ಮನ ತೊಡೆಯ ಮೇಲೆ ಕುಳಿತು ಆಡಲು ಶುರುಮಾಡಿದ.
ಜೀಪು ಮದುವೆ ಹಾಲಿನ ಎದುರು ಬಂದು ನಿಂತಿತ್ತು. ಜೀಪಿನಿಂದ ಇಳಿದು ಒಳ ಹೋಗುವಾಗ ನಿವೇದಿತಾ ಮಗಳನ್ನು ಕೈಯಲ್ಲಿ ಹಿಡಿದುಕೊಂಡು ಮಗನನ್ನು ಎತ್ತಿಕೊಂಡಳು. ಸವಿತಕ್ಕನೂ ಒಟ್ಟಿಗೆ ಬಂದರು. ರತ್ನಮ್ಮ ಮಾತ್ರ ನಾನು ನಿಮ್ಮ ಹಿಂದೆ ಬರುತ್ತೇನೆ ಎಂದು ಹೇಳಿ ಚಪ್ಪಲಿ ಇಡುವ ನೆಪದಲ್ಲಿ ಹಾಲಿನ ಇನ್ನೊಂದು ಬದಿಗೆ ಹೋದರು. ನಿವೇದಿತಾ ಹಾಲಿನೊಳಗೆ ಹೋಗಿ ಬಾಯಾರಿಕೆ ಕುಡಿದು ಹಿಂದಿರುಗಿ ನೋಡಿದಾಗ ಅತ್ತೆ ಕಾಣುವುದಿಲ್ಲ. ಆಕಾಶನೂ "ಅಮ್ಮ ಎಲ್ಲಿದ್ದಾರೆ? ಕಾಣಿಸುತ್ತಿಲ್ಲ" ಎಂದು ಹುಡುಕಿದನು. ಒಂದು ಗಳಿಗೆಯಲ್ಲಿ ಎಲ್ಲಿ ಮಾಯವಾದರೋ ಎಂದುಕೊಂಡು ಒಳಗೆ ಹೋಗುವಾಗ ಅಲ್ಲಿ ಮೂಲೆಯ ಕುರ್ಚಿಯಲ್ಲಿ ಕುಳಿತ್ತಿದ್ದರು. "ಅಮ್ಮಾ.. ನೀನು ಎಲ್ಲಿಂದ ಒಳಬಂದೆ? ನಾವು ಹುಡುಕಿದೆವು ನಿನ್ನನ್ನು" ಎಂದು ಮಗ ಕೇಳಿದಾಗ
"ಅಲ್ಲಿ ತುಂಬಾ ಜನ ಇದ್ದರು ಮಗ.. ಹಾಗಾಗಿ ನನಗೆ ಸರಿಯಾಗಲಿಲ್ಲ. ನಾನು ಹಾಲಿನ ಬದಿಯ ಬಾಗಿಲಿನಿಂದ ಒಳಗೆ ಬಂದೆ" ಎಂದು ಹೇಳುವುದು ಕೇಳಿತು ನಿವೇದಿತಾಳಿಗೆ. ಹೊರಡುವಾಗ ಚೆನ್ನಾಗಿ ಕಾಣುತ್ತೇನೆ, ಚಿನ್ನ ಹೊಳೆಯುತ್ತದೆ ಎಂದದ್ದು ಎಲ್ಲವೂ ತೋರ್ಪಡಿಕೆಗೆ ಮಾತ್ರವಾ.. ಜನರೆದುರು ಮುಖ ತೋರುವ ಧೈರ್ಯವಿಲ್ಲವಾ? ಪ್ರಶ್ನೆ ಮಾಡಿಕೊಂಡಳು ನಿವೇದಿತಾ.
ಒಳಗಡೆ ಹೋಗಿ ಪರಿಚಯದವರಲ್ಲಿ ಮಾತನಾಡಿದಳು ನಿವೇದಿತಾ. ಅಪರೂಪದ ನೆಂಟರು ಬಾಯಿ ತುಂಬಾ ಮಾತನಾಡಿಸಿದರು. "ನಿನ್ನ ಅತ್ತೆ ಬಂದಿದ್ದಾರಾ? ನಿವೇದಿತಾ" ಎಂದು ಕೇಳಿದರು ಶಾರತ್ತೆ.
" ಬಂದಿದ್ದಾರೆ ಪರಿಚಯ ಮಾಡಿಸುತ್ತೇನೆ" ಎಂದು ಹುಡುಕಿದರೆ ಅತ್ತೆಯ ಪತ್ತೆಯೇ ಇಲ್ಲ. ಮಗಳು ವರ್ಷಳಲ್ಲಿ ಅಜ್ಜಿಯನ್ನು ಹುಡುಕಲು ಹೇಳಿದಾಗ, ಅವಳು " ಅಜ್ಜಿ ರೂಮಿನೊಳಗೆ ಇದ್ದಾರೆ" ಎಂದಳು. "ಕರೆದುಕೊಂಡು ಬಾ" ಎಂದಾಗ "ಅಲ್ಲಿ ತುಂಬಾ ಜನ ಇದ್ದಾರೆ. ನನಗೆ ಸಂಕೋಚವಾಗುತ್ತದೆ" ಎಂದವರ ಮಾತಿಗೂ ಕೃತಿಗೂ ಎಷ್ಟು ವ್ಯತ್ಯಾಸ.! ತನ್ನ ದೇಹವನ್ನು ಪರರೊಡನೆ ಹೋಲಿಕೆ ಮಾಡಿ ತಾನೇ ಮೇಲು ಎಂದು ತೋರಿಸಿಕೊಂಡು ಜಂಭ ಕೊಚ್ಚಿಕೊಂಡದ್ದು ಬಂತು. ಎಂದುಕೊಂಡು ನಿವೇದಿತಾ ಮಗುವನ್ನೆತ್ತಿಕೊಂಡು ಕುರ್ಚಿಯಲ್ಲಿ ಕುಳಿತಳು.
ಉಡುಗೊರೆಯ ಸಮಯ ಬಂದಾಗ ಮಕ್ಕಳನ್ನು ಕರೆದುಕೊಂಡು ಮಂಟಪದ ಹತ್ತಿರ ಹೋದ ನಿವೇದಿತಾಳನ್ನು ಒಂದು ಮೂಲೆಯಲ್ಲಿ ನಿಂತುಕೊಂಡಿದ್ದ ಅತ್ತೆ "ಬಾ ಇಲ್ಲಿ" ಎಂದು ಕೈ ಸನ್ನೆ ಮಾಡಿದರು. ನಿವೇದಿತ ಹೋದಾಗ ದೂರದಲ್ಲಿದ್ದವನ್ನು ತೋರಿಸಿ.. "ನೋಡು ನಿವೇದಿತಾ.. ಅವರು ಪರಮೇಶ್ವರ್ ಅಂತ. ಸ್ವೀಟ್ ಅಂಗಡಿಯವರು.. ಕಪ್ಪು ಮೈಬಣ್ಣದವರು, ನಾನು ಅವರಷ್ಟೆಲ್ಲ ಕಪ್ಪಿಲ್ಲ ನೋಡು. ಅವಳು ಗಿರಿಯೂರಿನ ಲಾಯರಿನ ಹೆಂಡತಿ. ಮೂರು ಹೆತ್ತರೂ ನಿನ್ನಂತೆ ದಪ್ಪ ಆಗಲೇ ಇಲ್ಲ. ಹೆತ್ತ ನಂತರ ರೂಪ ಬದಲಾಗಿಲ್ಲ. ಮದುವೆ ಆಗುವಾಗ ಹೇಗಿದ್ದಳು ಹಾಗೆ ಇದ್ದಾಳೆ.." ಇದನ್ನು ಕೇಳಿದಾಗ ನಿವೇದಿತಾಳಿಗೆ ಕೋಪ ಉಕ್ಕಿತು. ಇವರಿಗೆ ಶಾರೀರಿಕ ರೂಪದ ಸಂಗತಿ ಒಂದೇ ತಲೆಯ ಒಳಗೆ ಇಳಿಯುವುದು. ಎಂದು ಯೋಚಿಸಿಕೊಂಡು ಅತ್ತೆ ಮುಖವನ್ನು ನೋಡದೆ ಸೀದಾ ಮಕ್ಕಳನ್ನು ಮಂಟಪಕ್ಕೆ ಕರೆದುಕೊಂಡು ಹೋಗಿ ವಧೂವರರಿಗೆ ಮಂತ್ರಾಕ್ಷತೆ ಹಾಕಿ ಬಂದು ಕುರ್ಚಿಯಲ್ಲಿ ಮಕ್ಕಳನ್ನು ಕೂರಿಸಿ ಪಕ್ಕದಲ್ಲಿ ಕುಳಿತಳು.
ಮನಸ್ಸು ಮಾತ್ರ ಅದೇ ವಿಷಯದ ಸುತ್ತ ತಿರುಗಿಕೊಂಡಿತ್ತು. ಅತ್ತೆಗೆ ತನ್ನ ಮೈಬಣ್ಣ ರೂಪದ ಬಗ್ಗೆ ಎಷ್ಟೆಲ್ಲಾ ಕೀಳರಿಮೆ ಇದ್ದು, ಯಾರೊಡನೆಯೂ ಮಾತನಾಡುವ ಧೈರ್ಯವಿಲ್ಲ. ತಾನು ಕಪ್ಪು ಎನ್ನುವ ಸಂಕೋಚ. ಆದರೂ ಇನ್ನೊಂದು ಜೀವವೂ ತನ್ನ ಹಾಗೆ ಎಂದು ತಿಳಿಯುವುದಿಲ್ಲವೇಕೆ. ತನ್ನ ರೂಪದ ಬಗ್ಗೆ ಇರುವ ಕೀಳರಿಮೆ ತನಗಿಂತ ಚಂದ ಕಾಣುವವರನ್ನು ಕೊರತೆ ಹುಡುಕಿ ಆಡುವ ಬುದ್ಧಿಗೆ ಕಾರಣವಾಗಿರಬಹುದಾ. ಎಂದು ಯೋಚಿಸತೊಡಗಿದಳು. ಏನೇ ಆಗಲಿ ನಾನು ಇಂಥವರ ಮಾತಿಗೆ ಬೇಸರ ಮಾಡಿಕೊಂಡರೆ ನನಗೇ ನಷ್ಟ. ಹಲವಾರು ಬಾರಿ ತಿಳಿ ಹೇಳಿದ್ದು, ತಿದ್ದುವ ಪ್ರಯತ್ನದಲ್ಲಿ ನಾನು ಸೋತಿದ್ದೇನೆ. ನನಗಾಗಲಿ ಬೇರೆ ಯಾರಿಗೇ ಆಗಲಿ ಅವರ ಮಾತಿನಿಂದ ನೋವಾಗುತ್ತದೆ ಎಂದು ತಿಳಿದರೆ ಮತ್ತಷ್ಟು ನೋಯಿಸಿ ಖುಷಿಪಡುವ ಜಾಯಮಾನ. ಚುಚ್ಚು ಮಾತಿಗೆ ದಿವ್ಯ ನಿರ್ಲಕ್ಷವೇ ಮದ್ದು ಎನ್ನುವ ನಿರ್ಧಾರಕ್ಕೆ ಬಂದಳು.
******
ಆ ದಿನ ಮನೆಗೆ ರತ್ನಮ್ಮನ ತವರುಮನೆಯಿಂದ ಅಣ್ಣನ ಮಗಳು ಧೃತಿ, ಅವಳ ಮಗಳು ಅಹನಾ ಸಂಜೆ ಬರುತ್ತೇವೆ ಎಂದು ಮಧ್ಯಾಹ್ನದ ಊಟವಾದಾಗಲೇ ಫೋನ್ ಬಂದಿತ್ತು. "ನಿವೇದಿತಾ ಮೈಸೂರುಪಾಕ್ ಮಾಡ್ತೀಯಾ.." ಎಂದು ಕೇಳಿಕೊಂಡು ಬಂದರು ಅವಳತ್ತೆ. ಸ್ವೀಟ್ ಮಾಡುವುದರಲ್ಲಿ ಅತ್ತೆಯ ಕೈ ಪಳಗಿಲ್ಲ ಎಂದರಿತಿರುವ ನಿವೇದಿತಾ.. "ಮೈಸೂರು ಪಾಕ್ ಬದಲು ಸೆವೆನ್ ಕಪ್ ಮಾಡ್ತೀನಿ. ನನ್ನ ಮಗಳಿಗೂ ಇಷ್ಟ." ಎಂದಳು. ಅತ್ತೆ ಒಪ್ಪಿದರು. ಅಳತೆಗೆ ಬೇಕಾದಷ್ಟು ಸಾಮಾನುಗಳನ್ನು ತೆಗೆದಿಟ್ಟಳು. ಅತ್ತೆ ಬಂದವರೇ ದುರುಗುಟ್ಟಿ ನೋಡಿದರು. "ಅಷ್ಟು ಸಕ್ಕರೆ ಹಾಕಿದರೆ ಹೆಚ್ಚಾದೀತು. ಸುಮ್ಮನೆ ಸಕ್ಕರೆ ಮುಗಿಸುತ್ತೀಯಾ..?"
"ಪಾಕಕ್ಕೆ ಇರುವ ಲೆಕ್ಕದ್ದು ತೆಗೆದು ಇಟ್ಟಿದ್ದೇನೆ.." ಎಂದು ಹೇಳಿ 'ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ' ಅನ್ನುವ ಗಾದೆ ಇಂತಹವರನ್ನು ಕಂಡೇ ಹುಟ್ಟಿಕೊಂಡಿರಬೇಕು ಮನದೊಳಗೆ ಅಂದುಕೊಂಡು ಸ್ವೀಟ್ ಕಾಯಿಸಲು ಆರಂಭಿಸಿದಳು ನಿವೇದಿತಾ. ಪಾಕವಾದಾಗ ಒಲೆಯಿಂದ ಕೆಳಗಿಳಿಸಿ, ಬಟ್ಟಲಲ್ಲಿ ಹಾಕಿದಾಗ ಸರಿಯಾದ ಆಕಾರಕ್ಕೆ ಕತ್ತರಿಸಿ ಬಂತು. ನಿವೇದಿತಾ "ಅಬ್ಬಾ..! ಸರಿ ಬಂತು" ಎಂದು ಬಹಳ ಖುಷಿ ಪಟ್ಟುಕೊಂಡಳು. ಅತ್ತೆಯ ಮುಖದಲ್ಲಿ ಮಾತ್ರ ಆ ಖುಷಿ ಕಾಣಲಿಲ್ಲ. ಪಾಕ ಸರಿಯಾಯ್ತು ಎಂಬ ಮಾತು ಬರಲಿಲ್ಲ. "ಆಕಾಶ... ನಿನ್ನ ಹೆಂಡತಿ ಮಾಡಿದ ಸ್ವೀಟಿನ ತುಂಡುಗಳು ಸಿಕ್ಕಾಪಟ್ಟೆ ದೊಡ್ಡದಾಗಿವೆ."
" ಹೌದು ಅಮ್ಮ" ಎಂದು ಹೇಳಿ ದನಿಗೂಡಿಸಿದ ಆಕಾಶ. ತಾಯಿಯ ಮಾತೇ ವೇದವಾಕ್ಯ ಎಂದು ತಿಳಿದವನು ಆಕಾಶ.
ನಿವೇದಿತಾಳಿಗೆ ಬೇಸರವಾಗಿ ಕಣ್ಣಂಚಿನಿಂದ ನೀರು ಕಳೆ ಜಾರಿತ್ತು. ಅತ್ತೆ ಸೊಸೆಯಲ್ಲಿ ತಪ್ಪು ಹುಡುಕುವುದು ನಿಜ. ಆದರೆ ಗಂಡ ಆಕಾಶನಿಗೆ ಗೊತ್ತಾಗುವುದಿಲ್ಲವೇ..? ಪತ್ನಿಗೆ ಬೇಜಾರಾದೀತು ಎಂದು... ಛೇ..ಸೆವೆನ್ ಕಪ್ ತುಂಡು ಇದೇ ರೀತಿ ಇರುವುದು. ಬರಿ ಒಂದು ರೂಪಾಯಿ ಮಿಠಾಯಿಯ ಹಾಗಲ್ಲ ಅಂತ. ಸತ್ಯ ಹೇಳಬೇಕಾದರೆ ಸೆವೆನ್ ಕಪ್ ತುಂಡುಗಳು ಎಷ್ಟು ದೊಡ್ಡ ಇರುತ್ತವೆಂದು ಆಕಾಶನಿಗೆ ಗೊತ್ತಿದೆಯೋ ಇಲ್ಲವೋ. ಹಾಗಿರುವುದೆಲ್ಲ ನೆನಪು ಉಳಿಯುವ ಕ್ರಮವೂ ಇಲ್ಲ. ಗಮನಿಸಿಕೊಳ್ಳುವಂತಹ ಸೂಕ್ಷ್ಮವೂ ಇಲ್ಲ. ಒಟ್ಟಾರೆ ಏನೋ ಮಾಡಿದ್ದಾರೆ ಅಂತಲೂ ಆಗಬೇಕು, ಹೆಚ್ಚು ಖರ್ಚೂ ಆಗಬಾರದು. ಕಾಮಾಲೆ ಕಣ್ಣಿಗೆ ಊರೆಲ್ಲ ಹಳದಿ ಹೇಳುವ ಹಾಗೆ ಸೊಸೆ ಏನು ಮಾಡಿದರೂ ತಪ್ಪೇ ಕಾಣುವುದು. ಅತ್ತೆಯ ತವರುಮನೆಯವರು ಬರುವಾಗ ಪಾಕ ಸರಿಯಾಗಿ ಬರಬೇಕು ಎಂದು ಶ್ರದ್ಧೆಯಲ್ಲಿ ಸೆವೆನ್ ಕಪ್ ಮಾಡಿದ ನಿವೇದಿತಾಳ ಮನಸ್ಸು ಮೌನಕ್ಕೆ ಶರಣಾಗಿತ್ತು. ಅದು ಅವಳ ಅಸಹಾಯಕತೆಯ ಮೌನ.
ನೆಂಟರು ಬಂದರು. ಕಾಫಿಯೊಟ್ಟಿಗೆ ಸೆವೆನ್ ಕಪ್ ನೀಡಿದರು. ಧೃತಿಯ ಮಗಳು ಅಮ್ಮನ ಹತ್ತಿರ.. "ಅಮ್ಮಾ.. ಈ ಸ್ವೀಟ್ ಭಾರೀ ಚೆನ್ನಾಗಿದೆ. ನೀನೇಕೆ ಹೀಗಿರುವುದು ಮಾಡುವುದಿಲ್ಲ..?"
ಧೃತಿ.. "ಮಗಳೇ... ನನಗೆ ಪುರುಸೊತ್ತಿಲ್ಲ ಮಾಡಲು.." ಎಂದು ಹೇಳಿ ವಿಷಯ ಹಾರಿಸಿದಳು. ನಿವೇದಿತಾಳಿಗೆ ಇವರ ಕೈ ಅತ್ತೆಯ ಕೈಯಂತೆ ಸೂಕ್ಷ್ಮ ಕೆಲಸಗಳಿಗೆ ಕೂಡಲಾರದೋ ಏನು ಎಂಬ ಸಂಶಯ ಮನಸ್ಸಿನಲ್ಲಿ ಮೂಡುತ್ತಿರುವಾಗಲೇ ಅತ್ತೆ.. "ಧೃತಿಗೆ ಸ್ವೀಟ್ ಬಹಳ ಚೆನ್ನಾಗಿ ಮಾಡಲು ಬರುತ್ತದೆ.." ಎಂದು ಶಿಫಾರಸು ಮಾಡಿದರು. ತನ್ನ ಕಡೆಯವರು ಸೊಸೆಯ ಎದುರು ಸಣ್ಣ ಆಗಬಾರದು ಎಂಬ ಯೋಚನೆ.
"ನನ್ನಮ್ಮ ಇಷ್ಟು ರುಚಿಯಾಗಿ ಯಾವತ್ತೂ ಸ್ವೀಟ್ ಮಾಡಲಿಲ್ಲ" ಧೃತಿಯ ಮಗಳು ಅಹನಾ ಹೇಳಿದಳು.
"ನಿನಗೆ ಬೇಕಾದರೆ ಬಡಿಸುತ್ತೇನೆ" ಎಂದಳು ನಿವೇದಿತಾ.
"ಎರಡು ಪೀಸ್ ಬೇಕು ನನಗೆ" ಎಂದಳು.
ಹತ್ತಿರವೇ ಇದ್ದ ರತ್ನಮ್ಮ ಬಡಿಸಲು ಹೊರಟರು.
"ಊಹೂಂ.." ಎಂದು ಪ್ಲೇಟಿಗೆ ಎರಡು ಕೈ ಅಡ್ಡ ಹಿಡಿದುಕೊಂಡಳು. ಯಾಕೆಂದು ತಿಳಿಯಲಿಲ್ಲ ರತ್ನಮ್ಮನಿಗೆ. ರತ್ನಮ್ಮ ಬಡಿಸದೇ ಆಚೆ ಹೋಗಿ ನಿಂತಾಗ ಅಮ್ಮನೊಡನೆ ಪಿಸಿಪಿಸಿ ಅಂದಳು.. "ಅಜ್ಜಿಯ ಕೈ ಕಪ್ಪಿದೆ. ಅವರು ಬಡಿಸಿದರೆ ನನಗೆ ಹೇಸಿಗೆಯಾಗುತ್ತದೆ. ನಾನು ತಿನ್ನೋದಿಲ್ಲ ಅವರು ಬಡಿಸಿದರೆ"
ಸಣ್ಣದನಿಯಲ್ಲಿ ಪಿಸುಗುಟ್ಟಿದರೂ ಕೇಳಿಸಿಕೊಂಡ ರತ್ನಮ್ಮಳ ಮುಖ ಸಣ್ಣದಾಯಿತು. ನಿವೇದಿತಾ ಅಹನಾಳಿಗೆ ಎರಡು ತುಂಡು ಬಡಿಸಿದಳು ಮತ್ತೂ ಎರಡು ತುಂಡು ಬೇಕು ಅಂತ ಬಡಿಸಿಕೊಂಡಳು. ನಂತರ ಕೈತೊಳೆದು ಬಂದ ಅಹನಾಳಲ್ಲಿ ನಿನ್ನ ಮುದ್ದಾದ ಕೈಗಳನ್ನು ತೋರಿಸು ನನಗೆ ಎಂದು ನಿವೇದಿತ ನಗು ನಗುತ್ತಾ ಕೇಳಿದಳು. "ಇಕೊಳ್ಳಿ ನೋಡಿ" ಎನ್ನುತ್ತಾ ಖುಷಿಯಿಂದಲೇ ತನ್ನ ಎರಡೂ ಹಸ್ತಗಳನ್ನು ಬಿಡಿಸಿ ಹಿಡಿದಳು.
"ನಿನ್ನ ಬೆರಳುಗಳು ಎಲ್ಲವೂ ಒಂದೇ ರೀತಿ ಇಲ್ಲ ಅಲ್ಲವಾ..?"
"ಹೌದು.. ಒಂದು ಸಣ್ಣಗಿದೆ. ಮತ್ತೆ ಮಿಡಲ್ ಫಿಂಗರ್ ಉದ್ದವಿದೆ.." ಎನ್ನುತ್ತಾ ತನ್ನದೇ ರೀತಿಯಲ್ಲಿ ವಿವರಿಸಿದಳು.
"ಪುಟ್ಟಿ.. ಹಾಗೆಯೇ ನಮ್ಮ ಶರೀರವೂ ಕೂಡಾ. ಒಬ್ಬರು ಬೆಳ್ಳಗೆ ಇರಬಹುದು, ಇನ್ನೊಬ್ಬರು ಎಣ್ಣೆಕಪ್ಪು ಇರಬಹುದು, ಮತ್ತೊಬ್ಬರು ಕಡುಗಪ್ಪು ಇರಬಹುದು. ಕಡುಗಪ್ಪಿನವರನ್ನು ತಾತ್ಸಾರ ಮಾಡಬಾರದು ಅಲ್ವಾ..?"
"ಅದು.. ನಿವಿ ಅತ್ತೆ.. ಆ ಅಜ್ಜಿಯ ಕೈಯೆಲ್ಲ ಕೊಳಕು ಕಾಣುತ್ತಿದೆ. ಉಗುರೆಲ್ಲ ಏನೋ ಆಗಿದೆ.."
ಎಂದು ಹೇಳುತ್ತಿರುವುದನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡ ರತ್ನಮ್ಮ ದಿನವೂ ಮಸಿಯ ಪಾತ್ರೆಗಳನ್ನು ಉಜ್ಜಿ, ಮನೆಯನ್ನು ಸ್ವಚ್ಛಗೊಳಿಸುವ ಕರಗಳ ಉಗುರುಗಳನ್ನು ನೋಡಿ ಕಣ್ತುಂಬಿಕೊಂಡರು.
"ನಿತ್ಯವೂ ಮನೆಯ ಸ್ವಚ್ಛತೆ ಮಾಡುವಾಗ ಕೆಲವರ ಕೈ ಹಾಗಾಗುವುದು ಸಹಜ. ಅದಕ್ಕೆ ನಾವು ಅದನ್ನೆತ್ತಿ ಆಡಿ ಮನಸ್ಸು ನೋಯಿಸಬಾರದು." ಎಂದು ಸಮಾಧಾನದಿಂದಲೇ ಅವಳಿಗೆ ಮನದಟ್ಟು ಮಾಡಿದಳು.
"ಆಯ್ತು..ನಿವಿ ಅತ್ತೆ.. ಸಾರಿ.." ಎಂದು ಹೇಳಿ ವರ್ಷಾಳ ಜೊತೆ ಆಡಲು ಹೊರಟಳು ಅಹನಾ. ಇದನ್ನು ಆಲಿಸಿದ ರತ್ನಮ್ಮಳಿಗೆ ಕಣ್ತುಂಬಿ ಹನಿಯೆರಡು ಕೆಳ ಜಾರಲು ಅನುಮತಿಯ ಕೇಳಿತ್ತು. ಸೊಸೆಯ ಬಗ್ಗೆ ಗೌರವ ಮೂಡಿತು. ತಾನು ನಿವೇದಿತಾಳನ್ನು ಎಷ್ಟು ಚುಚ್ಚಿ ಮಾತನಾಡಿದರೂ, ಅವಳು ಮಾತ್ರ ನನ್ನ ಬಣ್ಣದ ಬಗ್ಗೆ ಮಾತನಾಡಿದಾಗ ಅದು ತಪ್ಪು ಎಂದು ತಿಳಿ ಹೇಳಿದಳು. ನಾನು ಇಷ್ಟು ವಯಸ್ಸಾದರೂ ನನ್ನಿಂದ ಸುಮಾರಾಗಿರುವವರನ್ನು ಅಪಹಾಸ್ಯ ಮಾಡುವುದು, ಚಂದ ಕಾಣುವವರನ್ನು ಕೊರತೆ ಹುಡುಕಿ ನುಡಿಯುವುದು ಮಾಡುತ್ತಲೇ ಇದ್ದೇನೆ... ಎಂದುಕೊಳ್ಳುತ್ತಾ ಸೊಸೆಯ ಗುಣದ ಎದುರು ಕುಬ್ಜೆಯಾದರು.
ಆ ದಿನ ರಾತ್ರಿ ಮಲಗಿದ ರತ್ನಮ್ಮಳಿಗೆ ನಿದ್ರೆ ಕಣ್ಣಿಗೆ ಸುಳಿಯದು. ಅಷ್ಟು ಪುಟ್ಟ ಬಾಲಕಿ ನನ್ನ ಬಣ್ಣವನ್ನು ಕಂಡು ಅಸಹ್ಯಪಟ್ಟುಕೊಂಡಳು. ಅವಳ ಮಾತಿನಿಂದ ನನಗೆಷ್ಟು ನೋವಾಯಿತು. ಆದರೆ ನಾನು ಎಷ್ಟು ಬಾರಿ ನಿವೇದಿತಾಳನ್ನು ಬೇಕೆಂದಲೇ ಅಪಹಾಸ್ಯ ಮಾಡಿದರೂ ಸ್ವಲ್ಪವೂ ಬೇಸರವನ್ನು ತೋರ್ಪಡಿಸದೇ ಹೇಗೆ ಬದುಕುತ್ತಿದ್ದಾಳೆ...!! ಅವಳಿಗೆ ಧೈರ್ಯವಿದೆ, ನನ್ನಂತಲ್ಲ.. ಆದರೆ ಆ ಧೈರ್ಯವನ್ನೇ ನಾನು ಜಂಭ ಅಂತ ಹಲವು ಮಂದಿಯಲ್ಲಿ ಆಡಿದ್ದೇನೆ. ಯೋಚನೆಗಳ ಮೆರವಣಿಗೆಯಲ್ಲಿ ನಿದ್ರೆ ಮಾಯವಾಗಿತ್ತು.
ಮರುದಿನ ಮಗಳು ಭುವನ ಕರೆ ಮಾಡಿದ್ದಳು. "ನನ್ನ ಮಗಳು ಆಶ್ರಿತಾ ತುಂಬಾ ಅಳುತ್ತಿದ್ದಾಳೆ. ಅವಳು ಕಪ್ಪಗಿದ್ದಾಳೆ ಎಂದು ಅವಳನ್ನು ಸಂಗೀತ ಶಾಲೆಯ ವಾರ್ಷಿಕೋತ್ಸವದ ಹಾಡಿನ ಟೀಮಿನಿಂದ ತೆಗೆದಿದ್ದಾರಂತೆ. ಗೆಳತಿಯರು ಆಗಾಗ ತಮಾಷೆ ಮಾಡುತ್ತಾರಂತೆ. ನನಗೂ ಸಮಾಧಾನ ಮಾಡಿ ಮಾಡಿ ಸಾಕಾಗಿ ಹೋಯಿತು."
"ರೂಪವನ್ನು ಅಪಹಾಸ್ಯ ಮಾಡಬಾರದು. ರೂಪವನ್ನು ದೇವರು ನೀಡುವುದು. ನಾವು ಕೇಳಿ ಪಡೆಯುವುದಲ್ಲ. ಯಾರಂತೆ.. ತಮಾಷೆ ಮಾಡುವುದು..?" ಸ್ವಲ್ಪ ಜೋರಾಗಿ ಅಬ್ಬರಿಸಿದರು.
"ಎಲ್ಲರೂ ಆಡುತ್ತಾರಮ್ಮ.. ನಿನ್ನ ಬಣ್ಣ ನನಗೆ ಬಂದಿದೆ. ನನ್ನ ಬಣ್ಣ ಮಗಳಿಗೆ ಬಂದಿದೆ. ಸಹಜ ಅದು. ನಾನು ನನ್ನ ಅತ್ತೆ, ಮಾವ, ಗಂಡ, ನೆರೆಹೊರೆಯವರ ಬಾಯಲ್ಲಿ ಕಪ್ಪೆಂದು ಹೀಯಾಳಿಸಿಕೊಂಡಿದ್ದೇನೆ. ಈಗ ನನ್ನ ಮಗಳ ಸರದಿ."
"ಅಯ್ಯೋ ಭುವನ.. ನಿನ್ನನ್ನು ಅಪಹಾಸ್ಯ ಮಾಡುತ್ತಾರಾ...? ಅವರಿಗೇನು ಕಡಿಮೆ ಮಾಡಿದ್ದೇವೆ..? ಎರಡು ಲಕ್ಷ ವರದಕ್ಷಿಣೆ ಕೊಟ್ಟು ನಿನ್ನನ್ನು ಮದುವೆ ಮಾಡಿಕೊಟ್ಟಿದ್ದು. ಮತ್ತೂ ಹಾಗೆ ಹೇಳುವವರ ನಾಲಿಗೆಯೇ ಬಿದ್ದು ಹೋಗಲಿ. ಹೇಗೂ ನಾಳೆ ಅಜ್ಜನಮನೆಗೆ ಶ್ರಾದ್ಧಕ್ಕೆ ಬರುವುದಿದೆ. ಅಲ್ಲಿಂದ ನಿಮ್ಮಲ್ಲಿಗೆ ಒಂದೇ ಬಸ್ಸಿದೆ.
ನಾಳೆ ಸಂಜೆ ನಿಮ್ಮಲ್ಲಿಗೆ ಬರುವೆ." ಎನ್ನುತ್ತಾ ಫೋನ್ ಇಟ್ಟರು.
ಒಂದು ವಾರ ಮಗಳ ಮನೆಯಲ್ಲಿ ಕುಳಿತು ಅವಳ ಅತ್ತೆ-ಮಾವನಿಗೆ, ಮೊಮ್ಮಗಳ ಸಂಗೀತ ಶಿಕ್ಷಕಿಗೆ, ಸ್ನೇಹಿತೆಯರಿಗೆ ಬುದ್ಧಿ ಹೇಳಬೇಕೆಂದು ಲೆಕ್ಕ ಹಾಕಿಕೊಂಡು ಮರುದಿನ ಬೆಳಗ್ಗೆ ಹೊರಟರು ತವರಿಗೆ, ಅಲ್ಲಿಂದ ಮಗಳ ಮನೆಗೆ. ಅಲ್ಲಿ ಭುವನಳನ್ನು ಆಶ್ರಿತಳನ್ನು ಯಾರೆಲ್ಲಾ ಅಪಹಾಸ್ಯ ಮಾಡುತ್ತಾರೆ ಎಂದು ಮೊದಲು ಪಟ್ಟಿ ಮಾಡಿಕೊಂಡರು. ಅವರಿಗೆಲ್ಲಾ ಬೈದು ಬುದ್ದಿ ಹೇಳಬೇಕೆಂದುಕೊಂಡರು. ಅತ್ತೆ, ಮಾವ, ಭುವನಳ ಗಂಡ, ಕೊನೆಗೆ ಭುವನಳ ಸಣ್ಣ ಮಗನೇ "ಕಪ್ಪು..." ಅನ್ನುತ್ತಾ ಅಮ್ಮ ಮತ್ತು ಅಕ್ಕನನ್ನು ತಮಾಷೆ ಮಾಡಿ ಕೆಣಕಿ ನಗುವಾಗ ರತ್ನಮ್ಮ ತನ್ನನ್ನೇ ಪ್ರಶ್ನೆ ಮಾಡಿಕೊಂಡಳು. ಮೂರು ವರ್ಷದ ಭುವನಳ ಮಗನೇ ಕೆಣಕುತ್ತಾನೆ ಎಂದಾದರೆ ಅದು ಹಿರಿಯರು ಹೇಳುವುದನ್ನು ಅನುಕರಿಸಿ. ಮೊದಲು ಹಿರಿಯರೇ ತಿದ್ದಿ ನಡೆಯಬೇಕು. ಇಲ್ಲಿನ ಹಿರಿಯರನ್ನು ತಿದ್ದುವ ಮೊದಲು ನಾನು ನಿವೇದಿತಾಳನ್ನೂ, ಬೇರೆಯವರನ್ನೂ ಅಪಹಾಸ್ಯ ಮಾಡುವ ಅಭ್ಯಾಸವನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ನಾನು ಕೂಡ ನನ್ನ ಮೊಮ್ಮಕ್ಕಳ ಬಾಯಿಯಿಂದ ಅಜ್ಜಿ ಕಪ್ಪು, ಕಪ್ಪಜ್ಜಿ, ಕೊಳಕಜ್ಜಿ... ಹೀಗೆಲ್ಲಾ ಮಾತುಗಳನ್ನು ಕೇಳಬೇಕಾದೀತು. ಭುವನಳಿಗೆ, ಆಶ್ರಿತಾಳಿಗೆ ಬಂದ ಸ್ಥಿತಿ ನನಗೂ ಮುಂದೊಂದು ದಿನ ಬಂದೀತು.
ಆಶ್ರಿತಳನ್ನು ಸಮಾಧಾನ ಮಾಡಿ, ಭುವನಳ ಮಗನಿಗೆ ಜೀವನದಲ್ಲಿ ಅಮ್ಮನ ಪ್ರೀತಿ ಕಾಳಜಿ, ಅಕ್ಕನ ಅಕ್ಕರೆಯ ಒಡನಾಟವು ಅವರ ಬಣ್ಣಕ್ಕಿಂತ ಮಹತ್ವದ್ದು ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಒಂದು ವಾರ ಕುಳಿತು ಮನೆಗೆ ಹಿಂದಿರುಗಿದರು. ಬರುವಾಗ ಮಗ, ಸೊಸೆ ಮತ್ತು ಮೊಮ್ಮಕ್ಕಳು ಎತ್ತಲೋ ಹೊರಟು ನಿಂತಿದ್ದರು. ಸೊಸೆಯ ಮುಖ ನೋಡಿ ಮುಗುಳ್ನಗುತ್ತಾ "ಲಕ್ಷಣವಾಗಿ ಕಾಣುತ್ತೀಯಾ ನೀನು" ಎಂದರು. ಇದೇನಪ್ಪಾ ಹೊಸ ವರಸೆ..!! ಮದುವೆಯಾಗಿ ಇಷ್ಟು ವರ್ಷವಾದರೂ ಒಮ್ಮೆಯೂ ಕೇಳದ ಹೊಗಳಿಕೆ.. ಎಂದು ಆಶ್ಚರ್ಯದಿಂದ ಕಣ್ಣರಳಿಸಿ ಗಂಡ ಆಕಾಶನ ಮುಖ ನೋಡಿದಳು ನಿವೇದಿತಾ. ಆಕಾಶ ತಾಯಿಯ ಹತ್ತಿರ ಬಂದು "ಏನಮ್ಮಾ.. ಇವತ್ತು ಪಶ್ಚಿಮದಲ್ಲಿ ದೇವರು ಉದಯಿಸಿದ್ದಾ?" ಎಂದು ಅಮ್ಮನನ್ನು ಛೇಡಿಸಿದಾಗ, ಹಾಗಾದರೆ ನನ್ನ ನಡತೆಯನ್ನು ಆಕಾಶ ಗಮನಿಸುತ್ತಿದ್ದನಾ..? ಗೊತ್ತಾದರೂ ಸುಮ್ಮನಿದ್ದುದಾ..? ಎಂದು ತನ್ನ ಸಣ್ಣ ಬುದ್ಧಿಗೆ ತಾನೇ ಪಶ್ಚಾತಾಪ ಪಟ್ಟುಕೊಂಡರು.
💐💐
ಧರಿಸಿದ ಆಭರಣಗಳು ಹೊಳಪು ಕಳೆದುಕೊಳ್ಳಲು ಕಾರಣ:-
ಆಭರಣಗಳನ್ನು ತಯಾರಿಸುವಾಗ ಶುದ್ಧ ಚಿನ್ನ, ಬೆಳ್ಳಿಯೊಂದಿಗೆ ತಾಮ್ರವನ್ನು ಬಳಸಲಾಗುತ್ತದೆ. ನೈಸರ್ಗಿಕವಾದ ಲೋಹವಾದ ತಾಮ್ರವು ಚರ್ಮದೊಂದಿಗೆ ರಾಸಾಯನಿಕ ಪ್ರಕ್ರಿಯೆಗೊಳಗಾಗುತ್ತದೆ. ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ನಾವು ಧರಿಸಿಕೊಂಡಾಗ ಲೋಹದ ಆಕ್ಸಿಡೀಕರಣವೆಂಬ ರಾಸಾಯನಿಕ ಕ್ರಿಯೆ ಜರುಗುತ್ತದೆ.
ಕೆಲವು ವ್ಯಕ್ತಿಗಳ ದೇಹದ ರಾಸಾಯನಿಕ ಸಂಯೋಜನೆಯು ಹೆಚ್ಚು ಆಮ್ಲೀಯವಾಗಿರುತ್ತದೆ. ಅಂತಹ ದೇಹ ತಾಮ್ರದ ಜೊತೆ ವೇಗವಾಗಿ ಪ್ರತಿಕ್ರಿಯಿಸಿ ಆಭರಣದ ಹೊಳಪನ್ನು ಕುಗ್ಗಿಸಬಹುದು. ಕೆಲವರಲ್ಲಿ ಧರಿಸಿದ ಭಾಗದ ಚರ್ಮದ ಮೇಲೆ ಕಜ್ಜಿ, ಉರಿ ಉಂಟಾಗಬಹುದು. ಚರ್ಮದ ಬಣ್ಣ ಹಸಿರು/ಕಪ್ಪು ಬಣ್ಣಕ್ಕೆ ತಿರುಗಬಹುದು.
ದೇಹವು ಹೆಚ್ಚು ಆಮ್ಲೀಯವಾಗಿದ್ದಷ್ಟೂ ಆಭರಣಗಳು ಮಸುಕಾಗುವುದು ಅಧಿಕ. ದೇಹದ ಆಮ್ಲತೆಯ ಮಟ್ಟವು ಅನಾರೋಗ್ಯದ ಸೂಚಕವಲ್ಲ. ಅದಕ್ಕಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕೆಲವೊಂದು ಔಷಧಗಳ ಸೇವನೆಯೂ ಕೂಡಾ ದೇಹದ ಆಮ್ಲತೆಯ ಮಟ್ಟವನ್ನು ಹೆಚ್ಚಿಸಬಹುದು.
ದೇಹದಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳು ಹೊಳಪು ಕುಂದುವುದು ವ್ಯಕ್ತಿಯ ತಪ್ಪಲ್ಲ. ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯೂ ಅಲ್ಲ. ಅದು ಸಹಜ ದೈಹಿಕ ರಾಸಾಯನಿಕ ಪ್ರಕ್ರಿಯೆ.
ಮನುಷ್ಯನ ಚರ್ಮದ ಬಣ್ಣ:-
ಮನುಷ್ಯನ ಚರ್ಮದ ಬಣ್ಣಕ್ಕೆ ಕಾರಣವಾಗುವ ಅಂಶವೆಂದರೆ ಬಣ್ಣದ ಮೆಲನಿನ್. ಹೊರಚರ್ಮದ ತಳಭಾಗದಲ್ಲಿ ಮೆಲನಿನ್ ಎಂಬ ರಾಸಾಯನಿಕವನ್ನು ಚರ್ಮದಲ್ಲಿರುವ ಮೆಲನೋಸೈಟ್ ಎಂಬ ಜೀವಕೋಶಗಳು ಉತ್ಪಾದಿಸುತ್ತವೆ. ಗಾಢವರ್ಣದ ಚರ್ಮವುಳ್ಳವರ ಚರ್ಮದ ಬಣ್ಣದಲ್ಲಿ ಮೆಲನೋಸೈಟುಗಳ ಕೊಡುಗೆ ಅಪಾರ.
ಬೆಳ್ಳಗಿರುವವರಲ್ಲಿ ಚರ್ಮದ ಬಣ್ಣವನ್ನು ಒಳಚರ್ಮದ ಅಡಿಯಲ್ಲಿ ನೀಲಿ-ಬಿಳುಪು ಸಂಯೋಜಕ ಅಂಗಾಂಶ ಮತ್ತು ಒಳಚರ್ಮದ ರಕ್ತನಾಳಗಳಲ್ಲಿ ಪರಿಚಲನೆಯಲ್ಲಿರುವ ಹಿಮೋಗ್ಲೋಬಿನ್ ನಿರ್ಧರಿಸುತ್ತದೆ. ಚರ್ಮದ ಕೆಳಗಿರುವ ಕೆಂಪು ಬಣ್ಣ ವಿಶೇಷವಾಗಿ ಎದ್ದು ಕಾಣುತ್ತದೆ.
ಚರ್ಮದ ಬಣ್ಣ, ರೂಪಕ್ಕೆ ಆದ್ಯತೆ ಕೊಡುವ ಬದಲು ವ್ಯಕ್ತಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಬಣ್ಣ, ರೂಪವು ನಮ್ಮ ದೇಹದೊಂದಿಗೆ ಅಳಿಯುತ್ತದೆ. ಆದರೆ ಉತ್ತಮ ನಡತೆ, ಸಂಸ್ಕಾರ, ಸಮಾಜಕ್ಕೆ ನಾವು ನೀಡಿರುವ ಕೊಡುಗೆಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತವೆ.
✍️... ಅನಿತಾ ಜಿ.ಕೆ.ಭಟ್.
20-02-2021.
ನನಗೆ ಟಾಪ್ ಬ್ಲಾಗರ್ ಸ್ಥಾನವನ್ನು ತಂದುಕೊಟ್ಟ ಈ ಬರಹದ ಬಗ್ಗೆ ಮಾಮ್ಸ್'ಪ್ರೆಸೊ ಸಂಪಾದಕರ ಮೆಚ್ಚುಗೆಯ ನುಡಿ ಕೆಳಗಿದೆ...
ಧನ್ಯವಾದಗಳು ಮಾಮ್ಸ್'ಪ್ರೆಸೊ...💐🙏